ಮಕ್ಕಳು ಬರೆದದ್ದನ್ನು ಅಲಕ್ಷಿಸಬೇಡಿ

ಸಿದ್ಧರಾಮ ಕೂಡ್ಲಿಗಿ

ಇದೇನೋ ಗೀಚಿದ್ದು ಅಂದುಕೋಬೇಡಿ. ಇದು ಮೊಮ್ಮಗನ ಚಿತ್ರ. ಒಂದೂವರೆ ವರ್ಷದ ಮೊಮ್ಮಗ ಅಭಿನವ ಮನೆಯ ಗೋಡೆಯ ಮೇಲೆ ಹೀಗೆ ಚಿತ್ರಿಸಿದ್ದಾನೆ. ಇಲ್ಲಿ ಪ್ರತಿ ರೇಖೆಯೂ ಮಗುವಿನ ಮನಸನ್ನು ಪ್ರತಿನಿಧಿಸುತ್ತದೆ. ಇದನ್ನು ನಾವು ‘ಏನೋ ಗೀಚಿದ್ದು’ ಎನ್ನುವುದಕ್ಕಿಂತ ಅಲ್ಲಿರುವ ಭಾವ, ಮನಸನ್ನು ವಿಶ್ಲೇಷಿಸುವುದು ಎಷ್ಟು ಚಂದ ಗೊತ್ತಾ?

ಮಕ್ಕಳ ಭಾವನೆಗಳು ಹೇಗೆ ಅಂತ ಅರ್ಥ ಆಗೋದಿಲ್ಲ. ಒಮ್ಮೆ ಹೀಗೆ ಒಮ್ಮೆ ಹಾಗೆ. ಅದಕ್ಕಾಗಿ ನಮಗೆ ತುಂಬಾ ತಾಳ್ಮೆ ಬೇಕಾಗುತ್ತೆ. ಕೆಲವೊಮ್ಮೆ ಏನು ಮಕ್ಕಳಪ್ಪಾ ಅನಿಸುವುದೂ ಉಂಟಾದರೂ ನಾವು ಮಕ್ಕಳ ಮನಸಿನ ಮಟ್ಟಕ್ಕೇ ಇಳಿದು ನೋಡಬೇಕಾಗುತ್ತದೆ. ಇದು ಎಲ್ಲರಲ್ಲೂ ಸಾಧ್ಯವಿಲ್ಲ. ಕೇವಲ ತಾಯಿಗೆ ಮಾತ್ರ ಆ ತಾಳ್ಮೆ ಇರುತ್ತದೆ. ಮಗು ಏನು ಮಾಡಿದರೂ ಚಂದವೇ ಆ ತಾಯಿಗೆ.

ಆಕೆ ಅಕ್ಷರಶಃ ಮಗುವಿನ ಮನಸಿನ ಸಮಕ್ಕೆ ಇಳಿದುಬಿಟ್ಟಿರುತ್ತಾಳೆ. ‘ಬುದ್ಧಿವಂತರೆನಿಸಿಕೊಂಡ’ ನಾವು ಮಕ್ಕಳ ಮಟ್ಟಕ್ಕೆ ಇಳಿಯೋದಾ? ನೋಡುವವರು ಏನೆಂದುಕೊಂಡಾರು? ಎಂಬ ಗಂಭೀರ ಭಾವ ನಮ್ಮದು. ಇಂಥ ಒಣ ಪ್ರತಿಷ್ಠೆ, ಅಹಂಗಳಿಂದಲೇ ನಾವು ಪುಟ್ಟ ಸಂಗತಿಗಳಿಂದ, ಮಕ್ಕಳ ಕುತೂಹಲ, ಆಸಕ್ತಿಯ ಚಂದದ ಭಾವಗಳಿಂದ ವಂಚಿತರಾಗುತ್ತೇವೆ ಹಾಗೂ ಮನಸನ್ನು ಚಿಂತೆ, ಅಸೂಯೆ, ದ್ವೇಷ, ಕೋಪ, ಪ್ರತಿಷ್ಠೆ, ಅಹಂಗಳಂತಹ ಗುಣಗಳಿಂದ ಕೊಚ್ಚೆಗುಂಡಿ ಮಾಡಿಕೊಂಡುಬಿಡುತ್ತೇವೆ.

ನಮ್ಮಲ್ಲಿ ಸ್ವಲ್ಪವಾದರೂ ಮಗುವಿನ ಮನಸಿದ್ದರೆ ಖಂಡಿತ ಎಲ್ಲ ರೀತಿಯಿಂದಲೂ ನಾವು ಖುಷಿಯಾಗಿರಬಹುದು. ಮಕ್ಕಳೊಂದಿಗೆ ಮಕ್ಕಳಾಗುವ ಪರಿ ನಿಜಕ್ಕೂ ಅನಿರ್ವಚನೀಯ ಆನಂದ. ಅದನ್ನು ಅನುಭವಿಸಿಯೇ ಅರಿಯಬೇಕೇ ಹೊರತು ಹೇಳಿದರೆ ಬರುವುದಲ್ಲ. ಯಾರಲ್ಲಿ ಮಗುವಿನ ಮನಸಿರುತ್ತದೆಯೋ ಅವರಲ್ಲಿ ಖಂಡಿತ ಪರಿಶುದ್ಧ ಮನಸಿರುತ್ತದೆ.

ಪುಟ್ಟ ಮಕ್ಕಳು ಗೋಡೆಯ ಮೇಲೆ ಅಲ್ಲಲ್ಲಿ ಈ ರೀತಿ ಬರೆದರೆ ಬೇಸರ ಮಾಡಿಕೊಳ್ಳುವುದು, ಕೋಪಗೊಳ್ಳುವುದು ಮಾಡಬೇಡಿ. ಏನೂ ತಿಳಿಯದ ವಯಸ್ಸದು. ಅವರ ಈ ಆಟದೊಂದಿಗೆ ಪಾಲ್ಗೊಳ್ಳಿ ಖಂಡಿತ ಬೇಸರ, ಕೋಪ ಹೊರಟೇ ಹೋಗುತ್ತದೆ.

ಅಂದ ಹಾಗೆ ಇದು ಎಲ್ಲರ ಮನೆಯಲ್ಲೂ ಎಲ್ಲ ಮಕ್ಕಳೂ ಗೋಡೆಯ ಮೇಲೆ ಬರೆಯುವ ಚಂದದ ಹವ್ಯಾಸ. ಹೀಗಾಗಿ ಇಲ್ಲಿ ಮೊಮ್ಮಗನ ಬರೆಯುವಿಕೆಯ ಒಂದು ಚಿತ್ರವನ್ನು ಸಾಂಕೇತಿಕವಾಗಿ ಬಳಸಿರುವೆ ಅಷ್ಟೆ. ಮಕ್ಕಳ ಇಂಥ ತುಂಟತನ, ಬರೆಯುವಿಕೆ, ಆಟ ಆಡುವಿಕೆಗೆ ಪ್ರೋತ್ಸಾಹ ನೀಡಿ, ಕೋಪಗೊಂಡು ಹೊಡೆಯಬೇಡಿ. ತಿಳುವಳಿಕೆ ಇರುವ ನಾವುಗಳು ಮಾಡುವ ‘ಘನಂದಾರಿ’ ಕಾರ್ಯಗಳಿಗಿಂತ ಈ ಮಕ್ಕಳು ಮಾಡುವ ಇಂಥ ಕಾರ್ಯಗಳು ಎಷ್ಟೋ ಪಾಲು ಉತ್ತಮವಾದವುಗಳು.

ಮಗುವಿನೊಂದಿಗೆ ಮಗುವಾಗಿರಿ, ಮನಸನ್ನು ಪರಿಶುದ್ಧಗೊಳಿಸಿಕೊಳ್ಳಿ.

‍ಲೇಖಕರು Avadhi

April 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: