ಸಾಯುವುದು ಸುಲಭವಲ್ಲ… ಸತ್ತ ನೆನಪುಗಳಿಗೂ ಸಾವಿಲ್ಲ….

ಮಂಜುಳಾ ಸುಬ್ರಹ್ಮಣ್ಯ

(ಅಮ್ಮ ಇಲ್ಲದ ಒಂದು ವರ್ಷ…)

ಎಷ್ಟು ತಡವಾದರೂ ನಾ ಬರುವೆನೆಂದು ಬಾಗಿಲಲ್ಲೇ ಕಾಯುವ ಅಮ್ಮ ಈಗ ಕಾಣುತ್ತಿಲ್ಲ… ಬಾಗಿಲು ತೆಗೆದು ಒಳ ಬಂದರೆ ಹಿಂದಿನ ಬಾಗಿಲು ಹಾಕದೇ ಇರುವುದು ಗಮನಕ್ಕೆ ಬಂದಾಗ ತಕ್ಷಣ ನೆನಪಾಗುವುದು ಅಮ್ಮ. ಎಲ್ಲಿ ಹೊರಟಾಗಲೂ ‘ಬಾಗಿಲು ಎಲ್ಲಾ ಸರಿ ಹಾಕೊಂಡಿದಿಯಾ? ನೋಡಿದ್ಯಾ’ ಎಂಬ ಮಾತಿಲ್ಲ.. ಹಾಗಾಗಿ ಬಾಗಿಲು ಹಾಕಿಲ್ಲ..

ರಾತ್ರಿ‌ ಮಲಗಿ ಬೆಳಗ್ಗೆದ್ದು ನೋಡುವಾಗ ಗ್ಯಾಸ್ ಒಲೆ ಮೇಲೆ ನೀರು ಕಾಯಿಸಲಿಟ್ಟ ಪಾತ್ರೆ ಬಿಸಿ ಆಗಿ ಕೆಂಪಾಗಿ ಸುಡುತ್ತಿರಬೇಕಾದ್ರೆ ಮತ್ತೆ ಅಮ್ಮನೇ ಕಾಣುವುದು. ಮಲಗುವಾಗ ಸ್ಟೌ ಆಫ್ ಮಾಡಿದ್ಯಾ..ನೋಡೂ… ಕೇಳುವವರೇ ಇಲ್ಲದೆ ‘ಆಫ್ ಮಾಡಿಲ್ಲ’ ಎಂದು…

ದಾಖಲಿಸಲು ಹೊರಟರೆ ಹತ್ತಾರು ವಿಷಯಗಳು ಕಾಡುತ್ತವ… ಆದರೆ ಎಲ್ಲ ಭಾವಗಳನ್ನು, ಎಲ್ಲ ಸಂಧಿಗ್ಧಗಳನ್ನು, ಎಲ್ಲ ಅಸಹಾಯಕತೆಗಳನ್ನು ಕಟ್ಟಿಕೊಡುವ ತ್ರಾಣ ಅಕ್ಷರಗಳಿಗೂ ಇರುವುದಿಲ್ಲ. ಇದ್ದಿದ್ದರೆ ಎಲ್ಲವನ್ನೂ ಬರೆದೇ ಹೊರಗೆಡಹಿ ನಿರಾಳವಾಗಬಹುದಿತ್ತು… ಅಮ್ಮನೆಂಬ ಅಗಾಧ ಭಾವದ ಹಾಗೆ ಕೆಲವೊಂದು ಕಾಡುವ ನೆನಪುಗಳಿಗೂ ತುದಿ ಮೊದಲುಗಳಿಲ್ಲ…

ಹೌದು.. ಮತ್ತೆ ಮತ್ತೆ ಅಮ್ಮನ ಬಗ್ಗೆ ಬರೆಯಬೇಕೆನಿಸಿದೆ. ಹೇಳಿದಷ್ಟು ಮುಗಿಯಲಾರದ ಕತೆಗಳಿವೆ. ನೋವಿದೆ, ನಲಿವಿದೆ…

ಹಾಗಂತ ಅಮ್ಮನ ಬಗ್ಗೆ ಬರೆಯೋದೇನು?, ಎಲ್ಲಾ ಅಮ್ಮಂದಿರೂ ಹಾಗೇ ಅಲ್ವೇ ಅಂದ್ರೆ… ಹೌದು. ಅಮ್ಮ ಅಮ್ಮನೇ. ಆ ಬಗ್ಗೆ ಏನು ಬರೆದರೂ ಅದು ಅತಿಶಯೋಕ್ತಿ ಅನಿಸಲೂಬಹುದು ಅಥವಾ ಅಕ್ಷರಗಳು ದುರ್ಬಲವಾಗಿ ಸೋಲಬಹುದು. ಆದರೆ ಹೋಗುವ ಕೊನೆಯ ದಿನಗಳಲ್ಲಿ ಮಗುವಿನಂತೆ ಮುಗ್ಧವಾಗಿ ಬದಲಾಗಿದ್ದ ಅಮ್ಮ ಹೆಚ್ಚು ಹೆಚ್ಚು ಕಾಡತೊಡಗುತ್ತಾಳೆ. ಇನ್ನಷ್ಟು ಸಮಯ ಇರಬಾರದೇ ಎನ್ನುವಷ್ಟರಲ್ಲಿ ನನ್ನ ಬಿಟ್ಟು ಬಾರದ ಲೋಕಕ್ಕೆ ಹೊರಟೇಬಿಟ್ಟಳು… ತಡೆಯುವ ಶಕ್ತಿಯಾಗಲಿ, ಆ ಆಯ್ಕೆಯಾಗಲಿ ಇಲ್ಲವೆಂಬುದು ಬದುಕಿನ ಕರಾಳ ಸತ್ಯ ಮಾತ್ರವಲ್ಲ ನಮ್ಮ ಎಲ್ಲ ಅಹಂಗಳಿಗೂ ಪಾಠ ಕಲಿಸುವ ನಿರಾಕರಿಸಲಾಗದ ಕಟು ವಾಸ್ತವವೂ ಹೌದು. ಇಂದು ಅವಳು, ನಾಳೆ ನಾವು….

ಪ್ರತೀ ಬಾರಿ ನಾನೆಲ್ಲೂ ಹೊರಟಾಗ್ಲೂ ‘ನನ್ನ ಬಿಟ್ಟು ಹೋಗ್ತೀಯಾ..ನಾ ಒಬ್ಳೇ ಇರ್ಬೇಕಾ?’ ಅಂತ ಅನ್ನುತ್ತಿದ್ದಾಕೆ ತಾನು ಮಾತ್ರ ಹೇಳದೆ ಕೇಳದೆ‌ ನನ್ನ ಬಿಟ್ಟು ಹೊರಟೇ ಹೋಗೋದಾ.. ಅಮ್ಮ ಅಂದ್ರೆ ಹಾಗೆ ಜಾಸ್ತಿ ಪ್ರೀತಿ.. ಅಷ್ಟೇ ಕೋಪ.. ಮತ್ತಷ್ಟು ವಾತ್ಸಲ್ಯ..‌ಇವೆಲ್ಲವನ್ನೂ ತುಂಬಿಕೊಂಡಾಕೆ.

ಅಮ್ಮನ ಬಾಲ್ಯವನ್ನು ಆಕೆಯೇ ನಮಗೆ ಹೇಳಿದಂತೆ: ಹುಟ್ಟುವಾಗಲೇ ತಂದೆಯನ್ನು ಕಳಕೊಂಡಾಕೆ. ತಂದೆಯ ಪ್ರೀತಿ ಏನೆಂದೇ ಗೊತ್ತಿಲ್ಲ . ಆದ್ರೆ ಅದನ್ನು ಎಲ್ಲೂ ಆಕೆ ಹೇಳಿಕೊಂಡು ಕೊರಗಿದ್ದು ನಾವು ಕಂಡಿಲ್ಲ.. ಆಗಿನ ಕಾಲದ ಶಿಕ್ಷಣವೆಷ್ಟಿತ್ತು ಅಷ್ಟನ್ನು ಅಚ್ಚುಕಟ್ಟಾಗಿ ಬಡತನವಿದ್ದೂ ಪೂರೈಸಿ, ನಮಗೂ ಚಿಕ್ಕವರಿರುವಾಗ ಓದು, ಬರಹವನ್ನು ಕಲಿಸುತ್ತಿದ್ದಳು. ‌ಮಕ್ಕಳು ವಿದ್ಯಾವಂತರಾಗಬೇಕು ಎನ್ನುವುದು ಆಕೆಯ ಕನಸುಗಳಲ್ಲಿ ಒಂದಾಗಿತ್ತೇನೋ.

ಮಕ್ಕಳಾದ ನಾವು ಕಲಿಯುವಿಕೆಯಲ್ಲಿ ಮುಂದು ಎನ್ನುವುದನ್ನು ಎಲ್ಲರ ಮುಂದೆಯೂ ಹೇಳಿ ಹೇಳಿ ನಮಗೇ ಮುಜುಗರ ತರಿಸುತ್ತಿದ್ದಳು. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವುದಕ್ಕೆ ನನ್ನಮ್ಮ‌ಸರಿಯಾದ ಉದಾಹರಣೆ ಅಂತ ಯಾವಾಗ್ಲೂ ಕೀಚಾಯಿಸ್ತಿದೆ. ಅದರಲ್ಲೂ ಗಂಡುಮಕ್ಕಳ‌ಬಗ್ಗೆ ಒಂದು ಹಿಡಿ ಪ್ರೀತಿ ಹೆಣ್ಣುಮಕ್ಕಳಿಗಿಂತ ಜಾಸ್ತಿಯೇ.

ನಾವು ನಾಲ್ಕು ಜನ ‌ಮಕ್ಕಳು, ನಾನು ಕೊನೆಯವಳಾಗಿರೋದಿಕ್ಕೇನೋ ಅಮ್ಮನ‌ ಜೊತೆ ಹೆಚ್ಚು ಸಮಯವನ್ನು ನಾನೇ ಕಳೆದಿರುವುದು. ಆಕೆಯ ಕೊನೆಯ ಕ್ಷಣದವರೆಗೂ ಆಕೆಯೊಂದಿಗೆ ಇದ್ದೆ ಎಂಬ ಸಮಾಧಾನ ನನ್ನ ಜೊತೆಗಿದೆ. ಆಕೆಯ ಕಾಲದ ಬಳಿಕ‌ ಎಲ್ಲಾ ಶಾಸ್ತ್ರಗಳು ಯಥಾವತ್ತಾಗಿ ಆಗುತ್ತಲಿದ್ದರೂ ಕೂಡಾ ಯಾಕೋ ಆ ಬಗ್ಗೆ ನನಗೆ ಆಸಕ್ತಿಯೇ ಇಲ್ಲ. ಏನಿದ್ದರೂ ಜೀವಿತಾವಧಿಯಲ್ಲಿ ಅಕೆಯ ಜೊತೆಗೆ ಕಳೆದ ಕ್ಷಣಗಳೇ ಶ್ರೇಷ್ಠ.

ಕೊನೆ ಕೊನೆಗಂತು ಎಲ್ಲೂ ಹೋಗದೇ ಮನೇಲೆ ಇವತ್ತು ಇದ್ದೇನೆ ಅನ್ನುವಾಗ ಆಕೆಗೆ ಆಗುತ್ತಿದ್ದ ಖುಷಿ, ಆ ಬೆಚ್ಚನೆಯ ಆಪ್ತ ಭಾವ, ಮಗಳೇ ಅಮ್ಮನಂತಾದಾಗಿನ ಅನುಭೂತಿಯನ್ನು ಯಾವ ಮರಣೋತ್ತರ ಸಂಸ್ಕಾರ ಶಾಸ್ತ್ರಗಳು ನೀಡಲಾರದೇನೋ… ಇವತ್ತಿನ್ನು ಏನು ಆಚರಿಸಿದರೂ ಪಿಳಿಪಿಳಿ ಕಣ್ಣು ಬಿಡುವ ಆ ಜೀವ ಜೊತೆಗಿಲ್ಲದ ಮೇಲೆ….

ಹೋದ ಮೇಲೆ ಗೊತ್ತಾಗ್ತದೆ ಅಂತ ಹೆದರಿಸ್ತಾ ಇದ್ಳು!:

ನಾನು ಕಲಾವಿದೆಯಾಗುವುದಕ್ಕೆ ಮುಖ್ಯ ಕಾರಣವೇ ನನ್ನಮ್ಮ. ನನ್ನ ಆರಾಧಿಸುವ ಕಲೆಯನ್ನು ಹೆಚ್ಚು ಪ್ರೀತಿಸಿದವಳೆ ನನ್ನಮ್ಮ. ‌ ನನ್ನ ಶಿಷ್ಯೆಯಂದಿರಿಗೆಲ್ಲಾ ಪ್ರೀತಿಯ ಅಮ್ಮ, ಅಜ್ಜಿ. ನಾನಿನ್ನು ಸಣ್ಣ ಮಗುವೇ ಅನ್ನೋ ಹಾಗೇ ನನ್ನ ಮುದ್ದಿಸುತ್ತಿದ್ದ ಅಮ್ಮ ಇಲ್ಲದೇ ಒಂದು ವರುಷ, ದಿನಾ ಕಾರ್ಯ ನಿಮಿತ್ತ ನಾ ತೆರಳ್ಬೇಕಾದ್ರೆ.. ಆಕೆಯ ಕೂಗು… ‌’ನನ್ನ ಬಿಟ್ಟು ಹೋಗ್ಬೇಡಾ…’ ಅಂತ ಅವಳು. ನಂತ್ರ‌ ನಮ್ಮಿಬ್ಬರ ಜಗಳ ಶುರು. ಆಗ ಪ್ರತೀ ಸಲ ಆಕೆ ಹೇಳುತ್ತಿದ್ದುದು ‘ನಾ ಸತ್ತ ಮೇಲೆ ಗೊತ್ತಾಗ್ತದೆ ನೋಡು ನಿಂಗೆ…’ ನಾನಾಗ ತಕ್ಷಣ ಮಾತು ಬದಲಾಯಿಸಿ ಸಮಾಧಾನ ಮಾಡ್ತಾ ಇದ್ದೆ, ‘ಅದೊಂದು ಬೇಗ ಹೇಳ್ತೀರಿ, ಸಾಯುವುದು ‌ಅಷ್ಟು ಸುಲಭ ಅಲ್ಲಾ’ ಅಂತ.. ಹೌದು ಈಗನಿಸಿದೆ ಸಾಯುವುದು ಸುಲಭ ಅಲ್ಲ.. ಸತ್ತ ನಂತರ ಅವರು ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭ ಅಲ್ಲ.. ಆಕೆ ಇಲ್ಲದ ಖಾಲಿ ತನ ನನ್ನ‌ ಎಡಬಿಡದೆ ಕಾಡುತ್ತಿದೆ. ಆಕೆಯ ಮಾತು ಆಗಾಗ ಪ್ರತಿಧ್ವನಿಸ್ತಾ ಇದೆ.

ಅಮ್ಮನ ಜೊತೆಗೆ ತುಂಬ ಮಾತನಾಡಬೇಕು. ಗೊಂದಲ, ತೊಡಕು, ಸಾಂಕೇತಿಕ ಆಚರಣೆ ಮತ್ತದರ ವಿಮರ್ಶೆ, ಜೊತೆಗೆ ಒಂದಷ್ಟು ಲೌಕಿಕದ ಕಟ್ಟುಪಾಡುಗಳು… ಇವೆಲ್ಲದರಾಚೆಗೆ ಇಲ್ಲವಾದ ಜೀವದ ಅನುಪಸ್ಥಿತಿಯಲ್ಲಿ ಕೊಡುವ ಗೌರವದ ರಿವಾಜುಗಳು….

ಹೌದು ಕಣ್ಣ ಮೇಲೆ ಕನ್ನಡಕ ಹಾಕೊಂಡು ನನ್ನ ಕನ್ನಡಕ ಎಲ್ಲೀ ಅಂತ ಹುಡುಕ್ತಾ ಇದ್ದ ಅಮ್ಮನ ನಾ ಹುಡುಕ್ತಾ ಇದ್ದೇನೆ, ನಾನೂ ಕನ್ನಡಕ ಧರಿಸುತ್ತಿದ್ದೇನೆ… ಸೆಲ್ಫೀ ತೆಗೆದರೆ ಪಕ್ಕದಲ್ಲಿ ಬಂದು ಕೂರಲಾರದ ಅಮ್ಮ ಕನ್ನಡಕದ ಗಾಜಿನ ಎದುರು ಆಚೆಗೆಲ್ಲೋ ಕೂತ ಹಾಗೆ ಪ್ರತಿಬಿಂಬ ಅಸ್ಪಷ್ಟವಾಗಿ ಕಾಣುತ್ತಿದೆ… ಕಾಡುತ್ತಿದೆ….

‍ಲೇಖಕರು Avadhi

April 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: