ಮಕ್ಕಳು ಕಟ್ಟಿದ ರೆಕ್ಕೆ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

। ಮಕ್ಕಳೊಂದಿಗಿನ ದೆಹಲಿ ಪಯಣದ ಎರಡನೇ ಕತೆ ।

ಮಕ್ಕಳು ಕಟ್ಟಿದ ರೆಕ್ಕೆ ಈ ಲೋಕದಲ್ಲಿ ಅತ್ಯಂತ ಹೆಚ್ಚು ಶೋಷಿತರು ಯಾರು ಅನ್ನೋದನ್ನ ಗುರುತಿಸೊದಿದ್ರೆ ಅದು ಮಕ್ಕಳನ್ನೇ ಅನ್ನೋದು ನನ್ನ ಬಲವಾದ ನಂಬಿಕೆ. ಯಾವುದೇ ವರ್ಣ ವರ್ಗ ಭೇದವಿಲ್ಲದೇ ಸಮಾನವಾಗಿ ಅವರನ್ನು ದಮನಿಸಲಾಗುತ್ತದೆ; ಅದೂ ಪ್ರೀತಿಯ, ರಕ್ಷಣೆಯ ಹೆಸರಿನಲ್ಲಿಯೇ. ಅವರಿಗೊಂದು ವ್ಯಕ್ತಿತ್ವವಿದೆ ಎಂಬುದೇ ದೊಡ್ಡವವರಾದ ನಮಗೆ ಅರಿವಿರುವದಿಲ್ಲ.

ಹಸಿಗೋಡೆ – ಕಲ್ಲು, ಮೆತ್ತೆಯ ಮಣ್ಣು – ಆಕೃತಿ ಇತ್ಯಾದಿ ಉಪಮೆಗಳಲ್ಲಿ ಅವರನ್ನು ತುರುಕಿ ಅದು ಕವಿಸಮಯವೋ ನಿಜವೋ ಅಂತ ಅದನ್ನು ಬಳಸುವ ನಮಗೇ ತಿಳಿಯದ ಹಾಗಾಗಿದೆ. ಹಾಗೆ ನೋಡಿದರೆ ನಿರ್ದಿಷ್ಟ ತರ್ಕದಡಿಯಲ್ಲಿ, ಬದುಕನ್ನು ಕಂಪಾರ್ಟಮೆಂಟುಗಳಲ್ಲಿ/ಚೌಕಗಳಲ್ಲಿ ತುಂಬಿಟ್ಟು ಅದನ್ನು ನಿರ್ವಹಿಸುವದೇ ಜಾಣತನ ಅಂತ ನಂಬಿರುವ ದೊಡ್ಡವರಿಗೆ ಮಕ್ಕಳನ್ನು ಅರ್ಥಮಾಡಿಕೊಳ್ಳುವದೂ ಕಷ್ಟವೇ, ಏಕೆಂದರೆ ಅವರು ನಮ್ಮ ತರ್ಕದ ಪೆಟ್ಟಿಗೆಯಲ್ಲಿ ಹಿಡಿಯುವದಿಲ್ಲ.

ಆದರೆ ಮುಂದೆ ಅವರು ಬೆಳೆಯುತ್ತ ಹೋಗುತ್ತಿದ್ದಂತೆ ಸಮಾಜ ಅವರನ್ನು ಪಳಗಿಸಿ, ‘ಶೇಪ್’ ಮಾಡಿ, ತಮ್ಮ ಬೋನಿನ ಕಂಪಾರ್ಟಮೆಂಟಿನಲ್ಲಿರಿಸಿಕೊಳ್ಳುತ್ತದೆ. ಮತ್ತು ಇವೆಲ್ಲ ಎಷ್ಟು ನಾಜೂಕಾಗಿ ನಡೆಯುತ್ತದೆಂದರೆ ಬಂಧನದಲ್ಲಿರುವವರಿಗೆ ಅದರ ಭೀತಿಯೂ ತಿಳಿಯದ ಹಾಗೆ, ಮತ್ತು ಹೀಗೆ ದೊಡ್ಡವರಾದ ಆ ಮಕ್ಕಳು ಮುಂದೆ ಅವರ ಮಕ್ಕಳನ್ನು ಸಿದ್ಧಚೌಕಗಳಲ್ಲಿ ತುಂಬಿಸಿಡಲು ಸಿದ್ಧವಾಗುವ ಹಾಗೆ. ಹೀಗಾಗಿಯೇ ಮಕ್ಕಳಿಗೆಂದು ನಾವು ಸೃಷ್ಟಿಸುವ ಸಾಹಿತ್ಯ, ರಂಗಭೂಮಿ, ಕಲಾಚಟುವಟಿಕೆಗಳೆಲ್ಲವೂ ಪೂರ್ವಾಗ್ರಹಗಳಿಂದ ತುಂಬಿಹೋಗಿರುತ್ತವೆ.

ಏನೋ ಒಂದು ಚಟುವಟಿಕೆ ಸಿಕ್ಕರೆ ಸಾಕು ಅಂತಾಗಿರುವ ಮಕ್ಕಳು ಅದರಲ್ಲೇ ತೊಡಗಿಕೊಂಡು ಕುಣಿಯುತ್ತಿರುವಾಗ ನಾವು ಓಹ್ ಅವರಿಗೆ ಅಗತ್ಯವಾದುದನ್ನೇ ನೀಡಿದ್ದೇವೆ ಎಂದು  ತೃಪ್ತಿಯಿಂದ ತೇಗುತ್ತಿರುತ್ತೇವೆ. ಆದರೆ ಮಕ್ಕಳ ಮನೋವೃತ್ತಿ ಅದು ಕೌಟುಂಬಿಕ ರಕ್ಷಣಾವಲಯದ ಹೊರಗಿನ, ಪಂಜರಶಾಲೆಯ ಆಚೆಗಿನ ವಿದ್ಯಮಾನ.   ಪ್ರಚಂಡ ಶಕ್ತಿ, ಅಸೀಮ ಒಲವು, ಅಪಾರಕುತೂಹಲ, ಸಂಕೀರ್ಣವನ್ನು ಹಿಡಿದಿಡಬಲ್ಲ ಕಲ್ಪನಾಶೀಲತೆ ಎಲ್ಲವೂ ಮೇಳೈಸಿದ ‘ಎನರ್ಜಿ’ ಅದು.

ಅವರಿಗೆ ಇರೋದು ಅನುಭವದ ಕೊರತೆಯೊಂದೇ. ಆದರೆ ಅವರ ಗ್ರಹಿಕೆಯ ಸಾಮರ್ಥ್ಯ ನಮ್ಮ ಹಲವು ಪಟ್ಟು ಹೆಚ್ಚಿಗೆ ಇರುತ್ತದೆ.  ನಾವು ದೊಡ್ಡವರು, ದೂರದರ್ಶನದಲ್ಲಿ ಬರುವ ದೀರ್ಘ ಧಾರಾವಾಹಿಗಳಂತೆ ಬೇಸರ ಮೂಡುವಂತಿದ್ದರೆ, ಅವರು ಆ ನಡುವೆ ಬಂದು ಹೋಗುವ ಸೃಜನಾತ್ಮಕ ಜಾಹೀರಾತಿನಂತಿರುತ್ತಾರೆ.

ನನ್ನ ಮೂವತ್ತು ವರ್ಷದ ಶಿಕ್ಷಕ ಅನುಭವದಲ್ಲಿ ಹೇಳುತ್ತಿದ್ದೇನೆ, ನಿಜವಾಗಿಯೂ ನಾವು ದೊಡ್ಡವರು/ಶಿಕ್ಷಕರು ಬಹಳಬೇಗ ಮಕ್ಕಳಿಗೆ ಬೋರಾಗರ‍್ತೇವೆ. ಮಕ್ಕಳ ರಂಗಭೂಮಿಯಲ್ಲಿಯೂ ಅಷ್ಟೆ. ‘ಕಂದನನ್ನು ಕಾದುಕೋ’ ಮಾದರಿಯೇ ಇಲ್ಲಿ ಹೆಚ್ಚು ಚಲಾವಣೆಯಲ್ಲಿರೋದು.  ರಕ್ಷಣಾತ್ಮಕವಾದಿಂದ ಒಂದಿಷ್ಟು ಆಚೆಗೇ ಚಿಗಿಯುವ,  ರಮ್ಯತೆಯಜಗತ್ತಿನಾಚೆಗಿನ ಸಾಹಸಕ್ಕೆ, ಬಂಡಾಯಕ್ಕೆ ಜಾಗ ನೀಡಿದ್ದು ತುಂಬ ಕಡಿಮೆ ಎಂದರೆ ಕಡಿಮೆಯೇ.

ತನ್ನ ಅಪ್ಪ ಅಂಗೈಯಲ್ಲಿ ಅವುಚಿಕೊಂಡ ಚೀಲಹಿಡಿದು, ಬೆವರೊರೆಸಿಕೊಳ್ಳುತ್ತ ಅಕ್ಕಿಪಡೆಯಲು ಸೊಸೈಟಿಯ ಮುಂದೆ ಕ್ಯೂನಲ್ಲಿ ನಿಂತಿರೋದನ್ನೂ ಮಗು ಅದರದೇ ರೀತಿಯಲ್ಲಿ ಅರ್ಥೈಸುತ್ತಿರುತ್ತದೆ ಎಂಬ ಸತ್ಯವನ್ನು ನಾವಿನ್ನೂ ಸರಿಯಾಗಿ ಗುರುತಿಸಿಯೇ ಇಲ್ಲ. ಮಕ್ಕಳ ಈ ಸ್ವಯಂಲೋಕದೊಡನೆ ಜಾಗತಿಕ ಸಂಗತಿಗಳ ಢಿಕ್ಕಿಹೊಡೆಯಿಸುವ ಆಟಕ್ಕೆ ಆಸ್ಪದ ಸಿಕ್ಕೋದೂ ಹಲವುಸಾರಿ ಅಪರೂಪ. ಅಂತದೊಂದು ಅಪರೂಪದ ಅವಕಾಶ ನನಗೆ ಸಿಕ್ಕಿದ್ದು ಮಣಿಪಾಲದ ಎಂ.ಜೆ.ಸಿ.ಆವರಣದಲ್ಲಿ. ಮಣಿಪಾಲ ಜ್ಯೂನಿಯರ್ ಕಾಲೇಜಿನಪರಿಸರದ ಪ್ರೌಢಶಾಲಾ ಆವರಣವದು. ಮಣ್ಣಪಳ್ಳದ ಶಾಲೆಯದು.

ನಮಗೆ ಈಗ ಪರಿಚಯ ಇರುವ  ಮಣಿಪಾಲದ ಮೊದಲ ಹೆಸರು ಮಣ್ಣಪಳ್ಳ. ಬಡವರ ಮಣ್ಣಪಳ್ಳ ಮತ್ತು ಉಳ್ಳವರ ಮಣಿಪಾಲ ಎರಡೂ ಒಂದೇ ಕಡೆ ಜೀವಂತವಾಗಿ ಉರಿಯುವ ಸ್ಥಳವದು. ಅಲ್ಲಿ ಉಳ್ಳವರಿಗಾಗಿ ಶೈಕ್ಷಣಿಕ ಸಂಸ್ಥೆಗಳಿರುವಂತೆ ಇಲ್ಲದವರ ಪರವಾಗಿಯೂ ಎಂ.ಜೆ.ಸಿ.ಯಂತಹ ಸ್ಥಳವಿದೆ. ಈ ಶಾಲೆಯಲ್ಲಿ ನಾಗೇಂದ್ರ ಪೈ ಅನ್ನುವ ವಿಜ್ಞಾನ ಶಿಕ್ಷಕರು ಮತ್ತು ರಾಜು ಮಣಿಪಾಲ ಎಂಬ ರಂಗಕರ್ಮಿ ಇಬ್ಬರೂ ಸೇರಿ ಚಿನ್ನಾರಿ ಎಂಬ ಶಾಲಾ ಮಕ್ಕಳ ನಾಟಕ ತಂಡವನ್ನು ಕಟ್ಟಿದ್ದಾರೆ. 

ಸೃಜನಶೀಲ ವ್ಯಕ್ತಿತ್ವ ನಾಗೇಂದ್ರ ಅವರ ಸಂಸ್ಕೃತಿಶೀಲ ಗುಣದಿಂದಾಗಿ, ಆ  ಆವರಣದಲ್ಲಿ ರಂಗಭೂಮಿಯ ಹಲವು ಕ್ರಿಯಾಶೀಲ ಯುವಕರು, ಸಂಗಮಕಲಾವಿದರು ಎನ್ನುವ ರಂಗತಂಡದವರು ನಿರಂತರವಾಗಿ ರಂಗಚಟುವಟಿಕೆ ನಡೆಸುತ್ತಾರೆ. ಸಹಜವಾಗಿ ಅಲ್ಲಿಯ ಪರಿಸರದಲ್ಲಿ ಬೆಳೆದ ಮಕ್ಕಳಿಗೂ ರಂಗಭೂಮಿ ಅನ್ನೋದು ಸರ್ವಾಂಗ ಸುಂದರ ವ್ಯಾಯಾಮವಾಗಿ ದಕ್ಕಿಬಿಟ್ಟಿದೆ.

ಆ ಆವರಣದಲ್ಲಿ ಸಂಗಮಕಲಾವಿದರಿಗಾಗಿ ತುಳು ಭಾಷೆಯಲ್ಲಿ ಕರ್ಣಭಾರ ನಾಟಕವನ್ನು ನಿರ್ದೇಶಿಸುವ ಸಂದರ್ಭದ ಕಾರಣದಿಂದಾಗಿ ನನಗೆ ಅಲ್ಲಿಯ ಮಕ್ಕಳೊಂದಿಗೆ ರೆಕ್ಕೆ ಕಟ್ಟುವ ಅವಕಾಶವೂ ಒದಗಿತು. ನಾಟಕಗಳನ್ನು ಆಡಿ, ನೋಡಿ ಒಂದು ಹಂತದ ಅನುಭವವನ್ನೂಗಳಿಸಿದ ಮಕ್ಕಳು ಅವರು. ಹೀಗಾಗಿ ಇದುವರೆಗಿನ ಸಿದ್ಧಮಾದರಿಯ, ರಮ್ಯವನ್ನು ನಿರಾಕರಿಸಿದ, ವಾಸ್ತವ ಜಗತ್ತಿನ ಕುರಿತ ನಾಟಕವನ್ನು ಅವರೊಂದಿಗೆ ಕಟ್ಟಬೇಕು ಮತ್ತು ಅದು ರಾಜಕೀಯವಾಗಿ ಮುಗ್ಧವಾಗಿರಕೂಡದು ಎಂದುಕೊಂಡೆ. ಈ ಚಿಂತನೆಗೆ ಒದಗುವ ನಾಟಕವೊಂದು ಸಿಕ್ಕಿಬಿಟ್ಟಿತು.

ಅದು  ಬಿ.ಸುರೇಶ ಮತ್ತು ದು.ಸರಸ್ವತಿಯವರು ಕಟ್ಟಿದ ‘ರೆಕ್ಕೆ ಕಟ್ಟುವಿರಾ?’. ಹಿರೋಶಿಮಾ ನಾಗಾಸಾಕಿಯ ಬಾಂಬ್ ಘಟನೆಯ ದುರಂತವನ್ನು ಕಟ್ಟಿಕೊಡುವ ಈ ನಾಟಕದ ವಸ್ತು ವಾಸ್ತವಚರಿತೆಯದಾದರೂ ಇದು ವಾಸ್ತವವಾದಿ ನಾಟಕವಾಗಿರಲಿಲ್ಲ. ವಾಸ್ತವದ ಸಂಗತಿಯನ್ನು ಮನದುಂಬಿಸಲು ವಾಸ್ತವೋತ್ತರವಿಧಾನವನ್ನು ಬಳಸಲು ಸಾಕಷ್ಟು ಅವಕಾಶ ನೀಡುವ ನಾಟಕವಿದು. ನನಗೆ ತುಂಬ ಇಷ್ಟವಾಗಿತ್ತದು. ಸರಿ.

ಲೋಕಧರ್ಮಿವಿವರಗಳನ್ನು ನಾಟ್ಯಧರ್ಮಿಯಾಗಿಸುವ, ವಾಸ್ತವದ ವಸ್ತುವಿವರಗಳನ್ನು ವಾಸ್ತವೋತ್ತರಶೈಲಿಯಲ್ಲಿ ಕಟ್ಟುವ, ಚಿತ್ರ, ಸಂಗೀತ,ಬಣ್ಣ ಮತ್ತು ಚಲನೆಗಳ ಮೂಲಕ ಸಾಕಷ್ಟು ಕಲ್ಪನೆಗೆ ನಾಟಕದಲ್ಲಿ ಅವಕಾಶ ಇರುವ ಹಾಗೆ, ವಾಸ್ತವಜಗತ್ತಿನ ರೋಧನವನ್ನು ರೂಪಿಸುವ ಕಾರ್ಯ ಆರಂಭವಾಯಿತು.

ಗ್ರಹಣೇಂದ್ರಿಯಬದ್ಧವಾದ ವಾಸ್ತವಕ್ಕೆ ಸೇರಿದ (Factual Realisam)ಹಲವು ಸಂಗತಿಗಳನ್ನು ನಾಗೇಂದ್ರ ಪೈ ಸಂಗ್ರಹಿಸಿ ಒದಗಿಸುತ್ತ ಹೋದಂತೆ, ಮಂಜುಳಾ ಸುಬ್ರಹ್ಮಣ್ಣ, ಜೀವನ್ ಹೆಗ್ಗೋಡು, ರಾಜು ಮಣಿಪಾಲ, ದಾಮೋದರ ನಾಯ್ಕ ಮುಂತಾದ ಕಲಾ ಬಳಗದ ಜತೆ ನಾನು ವಿಶ್ವಾತ್ಮಕತಾವಾದ ವಾಸ್ತವತಾವಾದವನ್ನು (Conceptual Realisam)  ಕಲೆಯಲ್ಲಿ ನಿರೂಪಿಸುವದಕ್ಕೆ ತೊಡಗಿದೆ.

ಮಕ್ಕಳು ಲ್ಯಾಬಿನಲ್ಲಿ ಎರಡನೇ ಮಹಾಯುದ್ಧದ ವಿವರಗಳನ್ನೂ, ಬಾಂಬಿನ ದುಷ್ಕೃತ್ಯವನ್ನೂ, ವೀಡಿಯೋ, ಫೋಟೋಗಳ ಮೂಲಕ ನೋಡುತ್ತ, ರಂಗತಾಲೀಮಿನಲ್ಲಿ ಆ ವಿವರಗಳನ್ನು ಪ್ರತಿಮಿಸತೊಡಗಿದರು. ಕಾರಣ ಮೀಮಾಂಸೆಯ ವಸ್ತುರೂಪಿ ವಿವರಗಳು ಪರಿಣಾಮದ ನೆಲೆಗಳ ಬಿಂಬರೂಪಿಯಾಗಿ ರೂಪಾಂತರಗೊಳ್ಳತೊಡಗಿದವು. ನಾಟಕದ ತಾಲೀಮನ್ನು ಆರಂಭಿಸುವ ಮೊದಲೇ ನನ್ನಲ್ಲಿ ಅದರ ಒಂದು ಸ್ಥೂಲ ವಿನ್ಯಾಸ ರೂಪುಗೊಂಡಿತ್ತು.

ವಿನ್ಯಾಸವೆಂದರೆ ಅದರ ರಂಗಸಜ್ಜಿಕೆಯ ಸ್ಥೂಲ ರೂಪ, ಬಳಸುವ ಸಂಗೀತದ ಮಾದರಿ, ಪಾತ್ರಗಳ ಲಯ, ಗತಿಯ ಬಗೆ ಇವೆಲ್ಲವೂ ಒಳಗೊಂಡಿರುವ ಒಂದು ಸ್ಥೂಲ ನಕಾಶೆ. ಹಾಗೆ ಸ್ಥೂಲ ಯೋಜನೆ ರೂಪುಗೊಂಡಮೇಲೆಯೇ ನಟರ ಜತೆಗೆ ಆ ಜಗತ್ತಿನಲ್ಲಿ ಪಯಣ ಆರಂಭಿಸೋದು, ಅದರ ಲಯದಲ್ಲಿ ನಟರನ್ನು ಕರಗಿಸುತ್ತ, ಅವರ ಚಲನೆಯಲ್ಲಿ ಸಿಕ್ಕ ಹೊಸ ವಿನ್ಯಾಸವನ್ನು ಹೊಂದಿಸುತ್ತ ರಂಗನಡೆ ರೂಪುಗೊಳ್ಳುವಂತೆ ಮಾಡೋದು ನನ್ನ ಅಭ್ಯಾಸ.

ಆದರೆ ನಿರ್ದೇಶಕ ಪೂರ್ಣ ಅಂಗಿಯನ್ನು ಸಿದ್ಧಪಡಿಸಿಕೊಂಡು ಅದನ್ನು ನಟನಿಗೆ ಹಠದಿಂದ ತೊಡಿಸುವ,  ಅದು ಅವನ ದೇಹಕ್ಕೆ ಸರಿಹೊಂದದಿದ್ದರೆ ದೇಹವನ್ನೇ ಖಂಡಿಸುವ ಮಾದರಿಯನ್ನು ಎಂದಿಗೂ ಒಪ್ಪಿಲ್ಲ ನಾನು. ನಟಿಸುವ ಮಕ್ಕಳಿಗೆ ಇಷ್ಟವಾಗದಿದ್ದರೆ ನನ್ನ ವಿನ್ಯಾಸವನ್ನೇ ಹೊಸದಾಗಿ ರೂಪಿಸಿದ್ದೂ ಇದೆ. ಅವರು ಖುಷಿಗೊಂಡಮೇಲೆಯೇ, ಪರಸ್ಪರ ಒಪ್ಪಿಗೆಯ ಮೇಲೆಯೇ ಮುಂದುವರಿಯುವ ಆಟವದು.

 ಈ  ಆಟವೂ ಹಾಗೆ. ಈ ಇಂತೆಲ್ಲ ನಿಯಮಗಳನ್ನು ಆಧರಿಸಿಯೇ ರೂಪುಗೊಂಡಿತು. ೧೯೪೫ರ ಅಗಸ್ಟ್ ೬. ಮುಂಜಾನೆ ೮:೧೫ರ ಹೊತ್ತು. ಆಗತಾನೆ ಮುಖತೊಳೆಯುತ್ತಿದ್ದ, ಹಬೆಯಾಡುವ ಚಹ ಕುಡಿಯುತ್ತಿದ್ದ, ಕುಣಿಯುತ್ತ ಶಾಲೆಗೆ ಓಡುತ್ತಿದ್ದ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಮಚೆಯಲ್ಲಿ ಹಣ್ಣಿನ ರಸವನ್ನು ನೀಡುತ್ತಿದ್ದ, ಫ್ಯಾಕ್ಟರಿಗಳಿಗೆ ಧಾವಿಸುತ್ತಿದ್ದ ಪುಟ್ಟ ಹಿರೋಶಿಮಾದ ಸಾವು ಆ ಹೊತ್ತಿಗೆ ಸಂಭವಿಸಿತ್ತು;

ತುಸು ನಂತರದ ದಿನ ನಾಗಾಸಾಕಿಯದು. ಅಮೇರಿಕಾ ಎಸೆದ ‘ಲಿಟಲ್‌ಬಾಯ್’ ಮತ್ತು ‘ಫ್ಯಾಟ್‌ಮ್ಯಾನ್’ ಎಂಬ ಹೆಸರಿನ ಬಾಂಬುಗಳು ಒಂದುವರೆ ಲಕ್ಷಕ್ಕಿಂತ ಹೆಚ್ಚುಜನರನ್ನು ಸಾಮೂಹಿಕವಾಗಿ ಕೊಲೆಮಾಡಿತು. ಇಂದು ಆ ಬಾಂಬ್‌ಗಳಿಗಿಂತ ಹಲವು ಪಟ್ಟು ಹೆಚ್ಚಿನ ಶಕ್ತಿಶಾಲಿಯಾದ ಬಾಂಬುಗಳು ಈ ನೆಲದಲ್ಲಿವೆ.

ಜಾತಿ ಮತ್ತು ಕೋಮು ವೈಷಮ್ಯದ ನೆಲೆಗಳು ವಿಶ್ವ ವ್ಯಾಪಾರದ ಆರ್ಥಿಕತೆಯೊಂದಿಗೆ ತಳಕುಹಾಕಿಕೊಂಡು ಬಾಂಬುಗಳ ಭೀತಿಯನ್ನು ನೂರ್ಮಡಿಸಿವೆ. ನರಹತ್ಯೆಯ ನರಕ ಮತ್ತು ಮನುಕುಲದ ವಿವೇಕಗಳ ನಡುವೆ ಒಂದನ್ನು ಆಯ್ದುಕೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೇವೆ ನಾವು. ಈ ನಾಟಕ ಅಂತಹ ಆಯ್ಕೆಯ ಕುರಿತು ನಮ್ಮನ್ನು ಚಿಂತಿಸುವಂತೆ ಮಾಡುವ ಪ್ರಯತ್ನವೂ ಆಗಿತ್ತು.

ಕನಿಷ್ಟ ಪಕ್ಷ ನಾಟಕದಲ್ಲಿ ತೊಡಗಿದ ಕಲಾವಿದರಂತೂ ಈ ಚಿಂತನೆಯಲ್ಲಿ ಒಂದಾಗಿದ್ದರು. ಸಾದತ್ ಮಂಟೋನ ‘ಮಿಸ್ಟೇಕ’ ಎಂಬ ನಾಟಕವನ್ನು ನಾನು ರಥಬೀದಿಗಾಗಿ ಕೈಗೆತ್ತಿಕೊಂಡಾಗ ಯಾರೋ ಕೇಳಿದ್ದರು ‘ಈ ನಾಟಕ ಮಾಡಿ ಬಿಟ್ಟರೆ ಹಿಂದು ಮುಸ್ಲಿಂ ದ್ವೇಷ ಕೊನೆಯಾಗಿಬಿಡುತ್ತದಾ?’ ಅಂತ. ನನಗೆ ಸ್ಪಷ್ಟವಿತ್ತು ‘ಈ ನಾಟಕದಲ್ಲಿ ಪಾಲ್ಗೊಂಡ ಕಲಾವಿದರಂತೂ ಕತ್ತಿ ಎತ್ತುವದಿಲ್ಲ’ ಎಂದು.

ರೆಕ್ಕೆ ಕಟ್ಟುವಿರಾ ನಾಟಕದಲ್ಲಿ ಬರುವ ಮುಖ್ಯ ಸನ್ನಿವೇಶಗಳು ಇವು. ಜಪಾನಿನ ಒಂದು ಪುಟ್ಟ ಮನೆ. ಚಂದದಲ್ಲಿ ಬದುಕುತ್ತಿರುವ ಅಮ್ಮ ಮಗಳು. ಮಗ ಸೈನ್ಯದಲಿದಾನೆ. ಯುದ್ಧದ ಸಂದರ್ಭ. ಬಾಂಬು ಬಿದ್ದು ಊರು ಧ್ವಂಸವಾಗಿ ಮಗಳು ಇಲ್ಲವಾಗುತ್ತಾಳೆ, ಯುದ್ಧಭೂಮಿಯಿಂದ ಮರಳಿದ ,ತಂಗಿಯನ್ನು ಅಪಾರವಾಗಿ ಪ್ರೀತಿಸುವ ಅಣ್ಣ ದಿಗ್ಭ್ರಮೆಗೊಂಡು ಚಲಿಸುವ ರೈಲಿನಿಂದ ಧುಮುಕುತ್ತಾನೆ.

ಮನೆಯನ್ನೂ,  ಮೈಯನ್ನೂ, ಮನಸ್ಸನ್ನೂ ಸುಟ್ಟುಕೊಂಡ ಅಮ್ಮ, ನಿರಾಶ್ರಿತರ ಶಿಬಿರದಲ್ಲಿ ಅಲ್ಲಿಯ ಉಳಿದ ಅನಾಥ ಮಕ್ಕಳ ಶುಶ್ರೂಷೆ ಮಾಡುತ್ತ ಬದುಕುತ್ತಾಳೆ. ಸದಾ ಚಿಟ್ಟೆಯನ್ನು ಕನಸುವ ಮಗಳೊಂದಿಗೆ ಆರಂಭವಾಗುವ ನಾಟಕ, ಕೈಕಾಲು ಕಳೆದುಕೊಂಡ ಹುಡುಗನೊಬ್ಬನಿಗೆ ಚಿಟ್ಟೆಯನ್ನು ಕಾಣಿಸುವ ಪ್ರಯತ್ನದೊಂದಿಗೆ ಮುಗಿಯುತ್ತದೆ.

ಕನಸು – ಯುದ್ಧ – ಸಾವು – ಕನಸು ಈ ಚಕ್ರದಲ್ಲಿ ಸುತ್ತುವ ಕಥಾವಿನ್ಯಾಸವಿದೆ ಇಲ್ಲಿ. ಭಾವಕ್ಕೆ ತಕ್ಕಭಾಷೆ ಒದಗೋದು ಒಂದು ‘ಸುಕೃತ’. ಸುಕೃತ ಅಂದರೆ ನಮ್ಮ ಓದು, ನೋಟ, ತಿರುಗಾಟ, ಮಾತುಕತೆ ಇಂತೆಲ್ಲ ಕತ್ಯಗಳಿಂದ ಒದಗುವ ಸತ್ವವದು. ಕಾವ್ಯವನ್ನು ಪ್ರೀತಿಸೋದು ಇಂತಹ ಒಂದು ಸು – ಕೃತಿ. ರಂಗಭಾಷೆಗೆ ಅಗತ್ಯ ಪ್ರತಿಮೆಗಳನ್ನು  ಹುಡುಕಿಕೊಳ್ಳಲು ನಾನು ಮೊರೆಹೋಗೋದು ಕಾವ್ಯಗಳಿಗೇ. ಅದು ನಮ್ಮ ದೈನಂದಿನ ಭಾಷೆಯಲ್ಲಿಯೇ ದಿನಪನನ್ನು ತಲುಪುವವರೆಗಿನ ವಿಸ್ತಾರವನ್ನು ಕಾಣಿಸುತ್ತದೆ.

ಆ ಅಂತದೊಂದು ಸಮಯದಲ್ಲಿ  ‘ಹುಟ್ಟಿನಂಗಡಿಯಲ್ಲಿ ಬೊಂಬು ತುಂಬ ಅಗ್ಗ’ ಎಂಬ ಅಡಿಗರ ಭೂಮಿಗೀತದ ಸಾಲು, ನಾಟಕದ ದೃಶ್ಯಪ್ರತಿಮೆಗೆ ಅಗತ್ಯವಾದ ಹೊಳಹನ್ನು ನೀಡಿದ್ದು. ಜೀವನ – ಯುದ್ಧ ಎಲ್ಲವೂ ವ್ಯಾಪಾರವೇ. ಈ ಹುಟ್ಟಿನಂಗಡಿಯಲ್ಲಿ ಹುಟ್ಟು ಮತ್ತು ಸಾವಿನ ಕೊಡುಕೊಳೆ ಇದೆ. ಎರಡೂ ಸಂದರ್ಭದಲ್ಲಿ ಒದಗುವ ಬೊಂಬು ತೊಟ್ಟಿಲಾಗಿ, ಚಟ್ಟವಾಗಿ ಹೀಗೆ ತನ್ನಿರವನ್ನು ತೋರುತ್ತದೆ.  ಇಂತದೊಂದು ಸೂಚನೆ ದೊರಕಿದ್ದೇ ತಡ, ರಂಗದ ಹಲವು ಕ್ರಿಯೆಗಳಿಗೆ ಅಗತ್ಯ ಚಿತ್ರಗಳು ಸಂಯೋಜನೆ ಹೊಂದಲು ತಡವಾಗಲಿಲ್ಲ.

ಬೊಂಬಿನ ತೊಟ್ಟಿಲೊಂದನ್ನು ಹುಡುಕಿತಂದೆವು. ಅಮ್ಮನಿಗೆ ಆ ತೊಟ್ಟಿಲು ಆರಂಭದಲ್ಲಿ ಮಗನ ಬಟ್ಟೆಬರೆಗಳನ್ನು,ವಸ್ತುಗಳನ್ನು ಅಕ್ಕರೆಯಿಂದ ಇಡುವದಕ್ಕೆ ತಾಣವಾದರೆ ಮುಂದೆ ಮಗಳ ಶವ ಎಳೆಯುವ ಗಾಡಿಯೂ ಆಗಿ ಬಳಕೆಯಾಯಿತು. ತಳ್ಳುವ ಗಾಡಿ ಬಾಂಬರ್ ಗಳ ಅಂಗಡಿಯಾಯಿತು, ಬೊಂಬಿನ ಬೀಸಣಿಕೆಗಳು ಬಣ್ಣ ಹೊತ್ತು ಜಪಾನಿ ನೃತ್ಯಗಳಲ್ಲಿ ಬಳಸುವ ಪರಿಕರಗಳಾಗಿಯೂ,  ಕನಸುಗಳ ದೃಶ್ಯದ ಪತಂಗಗಳಾಗಿಯೂ ರೂಪುಗೊಳ್ಳುತ್ತ ನಡೆಯಿತು.

ರಂಗದ ಮೇಲೆ ಭಿತ್ತಿಯಲ್ಲಿ ಪೇಂಟಿಂಗ್ ಗಳನ್ನು ಬಳಸಿದ್ದೆ. ನಾಲ್ಕು ಬೋರ್ಡ್ಗಳಲ್ಲಿರುವ ಈ ಪೇಂಟಿಂಗ್ ಗಳಲ್ಲಿ ಒಂದೆಡೆ ಜಪಾನೀ ಮನೆಯ ದೃಶ್ಯ ಇದ್ದರೆ ಇನ್ನೊಂದೆಡೆ ಬಾಂಬಿನ ದಳ್ಳುರಿಯಲ್ಲಿ ಬೆಂದ ಚಿಣ್ಣರ ಮುಖಗಳು ಇದ್ದವು.  ಪೂರ್ವರಂಗದಲ್ಲಿ ಒಂದು ನೃತ್ಯವನ್ನು  ಸಂಯೋಜಿಸಿದ್ದೆ. ಆ ನೃತ್ಯದಲ್ಲಿ ಇಡೀ ನಾಟಕದ ಮುಖ್ಯಘಟನೆಗಳು ಒಮ್ಮೆ ಸಾಂಕೇತಿಕವಾಗಿ ಚಲಿಸುವಂತೆ ಮಾಡಿದೆ. ನಂತರ ನಾಟಕದಲ್ಲಿ ಅವು ವಿವರವಾಗಿ ಮೈಪಡೆಯುತ್ತ ಹೋಗುತ್ತದೆ.

ಹೀಗೆ ಆರಂಭದಲ್ಲಿ ಸಂಯೋಜಿಸಿದ ನಾಟಕದಲ್ಲಿ ಇದ್ದುದು ಮುಖ್ಯವಾಗಿ ಎರಡು ಹಂತ. ಒಂದು ಪೂರ್ವರಂಗ ಇನ್ನೊಂದು ನಾಟಕದ ವಿವರಾಂಗ. ಆದರೆ ಇನ್ನೆರಡು ದೃಶ್ಯಗಳು ಅಲ್ಲಿ ಮೈಪಡೆದಿದ್ದು ಮಾತ್ರ ಅದು ಚಂದದ ಸೋಜಿಗ.! ತಾಲೀಮಿನ ಸಂದರ್ಭದ  ಆಶುವಿಸ್ತರಣೆಯ ಚಟುವಟಿಕೆಗಾಗಿ, ನಟರಿಗೆ ಬಾಂಬಿನಿಂದ ಬದುಕುಳಿದ ಆದರೆ ರೋಗಿಗಳಾದ ಹಲವು ಸಂತ್ರಸ್ತರ ಕತೆಗಳನ್ನು ನೀಡಲಾಯಿತು.

ಮಕ್ಕಳು ಆ ಕತೆಯ ಪಾತ್ರಗಳನ್ನು ತುಂಬ ಪ್ರೀತಿಯಿಂದ ಅವುಚಿಕೊಂಡರು. ಆ ನೋವಿನ ಕತೆಯ ತುಣುಕುಗಳನ್ನು ತುಂಬ ಸಾತ್ವಿಕವಾಗಿ ನಮ್ಮೆದುರು ಮಂಡಿಸತೊಡಗಿದರು. ಇಷ್ಟಕ್ಕೇ ಆ ಚಟುವಟಿಕೆ ನಿಲ್ಲಲಿಲ್ಲ. ನಾಟಕದಲ್ಲಿ ಇದನ್ನು ಒಂದು ದೃಶ್ಯವಾಗಿ ಸೇರಿಸಿಕೊಳ್ಳಲು ಒತ್ತಾಯಿಸತೊಡಗಿದರು. ಚಟುವಟಿಕೆಯೆಂದು ಆರಂಭವಾಗಿದ್ದು ಕೊನೆಗೆ  ಒಂದು ದೃಶ್ಯವನ್ನೇ ಆಯಿತು. ನಿಜ.

ಕಲ್ಪನೆಯ ಜಗತ್ತಿನಲ್ಲಿ ಅವರು ಆ ಕತೆಯ ಪಾತ್ರಗಳೊಂದಿಗೆ ತಾದಾತ್ಮನಯ ಹೊಂದಿರಬಹುದು. ಆದರೆ ಅವರಿಗೆ ಅದು ‘ಸತ್ಯ’ವಾಗಿತ್ತು. ಸತ್ಯದೊಡನೆ ಬದುಕೋದು ಅಂದರೇನು ಅಂತ ನನಗೂ ತಿಳಿಯತೊಡಗಿದ್ದು ಅಲ್ಲಿಯೇ. ಸನ್ನಿವೇಶವನ್ನು ಸೇರಿಸೋದಕ್ಕೂ  ನಮಗೆ ಭಯ ಇತ್ತು. ಏಕೆಂದರೆ, ಹೆಚ್ಚು ಕ್ರಿಯೆಯೇ ಇಲ್ಲದ, ಕೇವಲ ನಿರೂಪಣೆಗಳ ಈ ದೃಶ್ಯವು ನಾಟಕದಲ್ಲಿ ಪ್ರೇಕ್ಷಕರಿಗೆ ಬೇಸರ ತರಿಸಬಹುದು ಅರ್ಥಾತ್ ನಾಟಕ ಪ್ರದರ್ಶನದಲ್ಲಿ ತುಸು ಸೋಲಬಹುದು ಎಂದು.

ನಮ್ಮ ನಮ್ಮಲ್ಲಿ ಸಮಾಲೋಚನೆ ನಡೆಸಿ ಇದನ್ನು ಅವರಿಗೆ ತಿಳಿಸಲಾಯಿತು. ಮಕ್ಕಳೆಲ್ಲರ ಕೋರಿಕೆ ಒಂದೇ ಇತ್ತು. “ಸರ್ ಆ ದೃಶ್ಯ ತೆಗೆಯಬೇಡಿ ಪ್ಲೀಸ್”. ವಿಶೇಷವೆಂದರೆ ವಿಜ್ಞಾನ ಶಿಕ್ಷಕರಾದ ನಾಗೇಂದ್ರ ಮಾಸ್ತರರೂ ಮಕ್ಕಳ ಪಕ್ಷ!!. ಅಂತೂ ಆ ದೃಶ್ಯ ನಾಟಕದಲ್ಲುಳಿಯಿತು; ನಮ್ಮೆಲ್ಲರ ಇಷ್ಟದ ದೃಶ್ಯವಾಗಿ.! ಯುದ್ಧದ ಕ್ರೌರ್ಯ, ಮಕ್ಕಳ ಸಹಜ ಮನಸನ್ನು ಅದು ಕಲಕಿದ ರೀತಿ, ಅವರ ಸತ್ಯದ ಪ್ರತಿಕ್ರಿಯೆ, ‘ಸಕ್ಸಸ್’ ಅಂದರೇನು ಎಂಬುದನ್ನರಿಯದ ನಮ್ಮ ಭ್ರಮೆ ಎಲ್ಲಕ್ಕೂ ಈ ಘಟನೆ ಸಾಕ್ಷಿಯಾಯಿತು. ಅಲ್ಲೊಬ್ಬ ಹುಡುಗನಿದ್ದ. ಕೌಶಿಕ್ ಅಂತ ಅವನ ಹೆಸರು.

ಅಸಾಧ್ಯ ದೈಹಿಕ ಚಲನೆಯ ಸಾಮರ್ಥ್ಯ ಇರುವ, ರಂಗದಲ್ಲಿ ‘ಟೈಮಿಂಗ್’ ಅಂತಾರಲ್ಲ ಆ ಅದು ಇರುವ, ಚಂದದ ನೃತ್ಯಮಾಡಬಲ್ಲ ಹುಡುಗ ಆತ. ಆದರೆ ಒಂದೇ ಕೊರಗು ಅವನ ದನಿಪೆಟ್ಟಿಗೆಯಲ್ಲೊಂದು ಸಮಸ್ಯೆ ಇತ್ತು.  ಆತ ಮಾತನಾಡಿದರೆ ದನಿಗಿಂತ ಗಾಳಿಯೇ ಹೆಚ್ಚು ಹೊರಗೆ ಕೇಳಿಸೋದು.  ಅವನನ್ನು ನಮ್ಮ ತಂಡದಲ್ಲಿ ಸೇರಿಸಿಕೊಳ್ಳಬೇಕು ಅಂತ ಶಿಕ್ಷಕರಾದ ನಾಗೇಂದ್ರ ಪೈ ಅವರಿಗೆ ಆಸೆ. ತನ್ನ ನಡವಳಿಕೆಯಿಂದ ತುಂಬು ಸಂತಸವನ್ನು ತಾನಿದ್ದಲ್ಲೆಲ್ಲ ಚೆಲ್ಲಾಡುವ ಅವನ ಕಂಡರೆ ಎಲ್ಲರಿಗೂ ಇಷ್ಟ. ಹೀಗಾಗಿ ನಾಟಕದಲ್ಲಿ ಅವನಿಗಾಗಿ ದೃಶ್ಯವೊಂದು ಸೇರ್ಪಡೆ ಆಯಿತು.

ಇದಕ್ಕೂ ಮೊದಲು ನಮ್ಮ ನಾಟಕ ಕೊನೆಗೊಳ್ಳುತ್ತಿದ್ದುದು ಬಾಂಬಿನ ದಾಳಿಯಿಂದ ಅಂಗವಿಕಲನಾದ ಹುಡುಗನ ಚಿಟ್ಟೆಯಾಗುವ ಕನಸಿನಿಂದ ಆಗಿತ್ತು. ಈಗ ಆ ಕನಸಿನ ಕೊನೆಯಲ್ಲಿ ಈ ಕೌಶಿಕ್‌  ‘ಕೌಬಾಯ್’ ಇಮೇಜಿನಲ್ಲಿ, ಕಾರ್ಟೂನ್ ಮಾದರಿಯಲ್ಲಿ, ಅಮೇರಿಕದ ಪ್ರತಿನಿಧಿಯಾಗಿ ವಿಶಿಷ್ಟ ನೃತ್ಯದೊಂದಿಗೆ ರಂಗ ಪ್ರವೇಶಿಸುವಂತೆ ಮಾಡಿ ಭವಿಷ್ಯದ ಕುರಿತ ಆತಂಕದ ಸನ್ನಿವೇಶ ಕಟ್ಟಲ ಪ್ರಯತ್ನಿಸಲಾಯಿತು. ಆದರೂ ಅದು ಅಪೂರ್ಣ ಅನಿಸುತ್ತಿತ್ತು.

ಒಂದು ಅರ್ಥಪೂರ್ಣ ಮುಕ್ತಾಯ ಬೇಕಿತ್ತು ಅನಿಸುತ್ತಿದ್ದಂತ  ಒಂದು ದಿನ, ತಾಲೀಮಿನ ಸಂದರ್ಭದಲ್ಲಿ ಆತನ ಕೀಟಲೆಯನ್ನು ಸಹಿಸಲಾಗದೇ ನಟಿಯೊಬ್ಬಳು ತನ್ನ ಕೈಯಲ್ಲಿರುವ ಚಿಟ್ಟೆಯ ರೆಕ್ಕೆಯಾಗಿರುವ  ಬೀಸಣಿಕೆಯ ಪರಿಕರ ತೋರಿಸಿ “ಇದರಲ್ಲೇ ಹೊಡೀತೀನಿ ನೋಡು” ಅಂದಳು!.  ಹಾ! ದೃಶ್ಯ ಸಿಕ್ಕಿತ್ತು. 

ಕನಸಾಗಿ ರಂಗದ ತುಂಬೆಲ್ಲ ತುಂಬಿಕೊಂಡ ತಂಡದ ಎಲ್ಲ ನಟರೂ ಯುದ್ಧದಾಹಿ ಪುರುಷನ ಆ ಆಕೃತಿಯೆಡೆಗೆ ತಮ್ಮ ಕೈಯಲ್ಲಿರುವ ರೆಕ್ಕೆಗಳನ್ನು ಪ್ರತಿಭಟನೆಯ ಅಂಗವಾಗಿ ತೂರುತ್ತಿರುವ ದೃಶ್ಯ ಸಂಯೋಜನೆಗೊಂಡಿತು. ವಸ್ತುಗಳು, ಸಂದರ್ಭಗಳು ಪ್ರತಿಮೆಯಾಗಿ ಪ್ರಚೋದನೆಗೊಳ್ಳುವ ಅಂತ ಬಗೆಗೆಳೇ ಕೆಲವೊಮ್ಮೆ ವಿಸ್ಮಯ ಉಂಟುಮಾಡುತ್ತದೆ.

ನಾಟಕದ ಮೊದಲ ಪ್ರಯೋಗ ಮುಗಿದ ನಂತರದ ದಿನಗಳಲ್ಲಿ ಮೊದಮೊದಲು ಈ  ನಾಟಕದ ಕುರಿತು ಚರ್ಚೆಯೇ ನಡೆದಿರಲಿಲ್ಲ. ಹಲವು ರಂಗಕರ್ಮಿಗಳು ಇದು ಮಕ್ಕಳ ನಾಟಕ ಹೌದೋ ಅಲ್ಲವೋ ಅನ್ನುವ ಗೊಂದಲದಲ್ಲಿದ್ದರು. ಇನ್ನು ಹಲವರು ಈ ತರಹದ ನಾಟಕಕ್ಕೆ ಹೇಗೆ ಪ್ರತಿಕ್ರಿಯೆ ನೀಡುವದೆಂದು ತಿಳಿಯದೇ ಸುಮ್ಮನಿದ್ದರು. ಮಕ್ಕಳು ಮಾತ್ರ ನಿರುಮ್ಮಳವಾಗಿದ್ದರು. ನಾನು ತುಸು ಕಸಿವಿಸಿಗೊಂಡಿದ್ದೆ.

ಕೆಲಕಾಲ ಅಷ್ಟೆ. ನಾಟಕ ದೆಹಲಿಯ ರಾಷ್ಟ್ರೀಯ ಉತ್ಸವಕ್ಕೆ ಆಯ್ಕೆಯಾಗಿತ್ತು. ನಾಟಕ ನೋಡಿದ ಅಲ್ಲಿಯ ರಂಗವಿದ್ಯಾರ್ಥಿಗಳು ಎನ್.ಎಸ್.ಡಿ.ಯ ಥಿಯೇಟರ್ ಇನ್ ಎಜುಕೇಷನ್ (TIE)ಕಂಪನಿಯ ಪ್ರಸಿದ್ಧವಾದ ‘ಫರ್‌ಹಮೇ ಖೇಲನಾಹೈ’ ನಾಟಕವು ಉಂಟುಮಾಡಿದ ಪರಿಣಾಮದ ಜತೆ ಈ ನಾಟಕವನ್ನು ಹೋಲಿಸಿ ಬಹಳ ಉಪಯುಕ್ತ ಚರ್ಚೆ ಮಾಡಿದರು.

ತಮಾಶೆಯೆಂದರೆ ದೆಹಲಿಯ ರಂಗಮಂದಿರದಲ್ಲಿ ನಾಟಕದ ಆರಂಭಕ್ಕೆ ನಾಟಕದ ಹೆಸರನ್ನು ಸಾರಲು ನೇಮಕವಾದ ಹಿಂದೀ ಉದ್ಘೋಷಕಿಗೆ  ‘ರೆಕ್ಕೆಕಟ್ಟುವಿರಾ?’ ಎಂಬುದನ್ನು ಸರಿಯಾಗಿ ಉಚ್ಛರಿಸಲು ಆಗುತ್ತಲೇ ಇರಲಿಲ್ಲ. ಅವಳು ‘ರೆಕ್ಕೆಕಟ್ಟು – ‘ವೀರಾ’ ಅಂತಲೇ ಅನ್ನುತ್ತಿದ್ದಳು.  ಕೊನೆಯಲ್ಲಿಯ ಪ್ರಶ್ನಾರ್ಥಕವು ಅವಳಿಂದ ಉಚ್ಚಾರವಾಗುವಂತೆ ಮಾಡಲು ನಾವು ಸೋತರೂ, ಅವಳಿಂದ ‘ವೀರಾ’ ಎನ್ನುವ ಬಿರುದು ಪಡೆದೇ ಬಂದೆವು. ಕ್ಷಮಿಸಿ ಸುರೇಶಣ್ಣ, ನಿಮ್ಮ ನಾಟಕದ ಹೆಸರು ಬದಲಾಗಿದೆ (ಹ ಹಾ).

। ಮುಂದಿನ ವಾರಕ್ಕೆ ।

‍ಲೇಖಕರು ಶ್ರೀಪಾದ್ ಭಟ್

October 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sudha Hegde

    ಚಿಟ್ಟೆಯ ರೆಕ್ಕೆಯೂ ಪ್ರತಿರೋಧದ ನೆಲೆಯಾಗುವುದು ರಂಗಭೂಮಿಯ ವಿಸ್ಮಯ. ಕ್ರೌರ್ಯಕ್ಕೆ ಮಾಧುರ್ಯವೇ ಉತ್ತರವಾಗುವುದು ಕಲೆಯ ವಾಸ್ತವ. ತುಂಬಾ ಚಂದದ ಕಥನ.
    ಹೌದು, ನಾವೆಲ್ಲಾ ಬೋರ್ ಹೊಡೆಸುವ ರಬ್ಬರ್ ಬ್ಯಾಂಡ್ ಧಾರಾವಾಹಿಗಳು, ಮಕ್ಕಳು ಚಕಾಚಕ್ ಮಿನುಗಿ ಪರಿಣಾಮವನ್ನುಂಟುಮಾಡುವ ಜಾಹೀರಾತುಗಳು!
    ಚಂದದ ಉಪಮೆ…..

    ಪ್ರತಿಕ್ರಿಯೆ
  2. Kavya Kadame

    ನಿರ್ದೇಶಕ ಹೊಲಿದ ಬಟ್ಟೆಯನ್ನು ಹಾಗೆ ಹಾಗೇ ನಟರಿಗೆ ತೊಡಿಸದೇ, ಅವರ ದೇಹಭಾಷೆಗೆ ಅನುಗುಣವಾಗಿ ಬಟ್ಟೆಯ ವಿನ್ಯಾಸವನ್ನೂ ಬದಲಿಸುವ ಉಪಮೆ ತುಂಬಾ ಹಿಡಿಸಿತು.  ಎಷ್ಟೊಂದು ವರ್ಷಗಳ ನಿಮ್ಮ ಶ್ರೀಮಂತ ರಂಗಾನುಭವ ಬೆರಗು ಮೂಡಿಸುವುದು.  

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: