ಸಾಲ ಮಾಡಲು ಅದೆಲ್ಲಿಂದ ಹುಚ್ಚು ಧೈರ್ಯ ಬಂದಿತ್ತೋ ನನಗೆ..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು.

। ಕಳೆದ ವಾರದಿಂದ ।

ನಾನು ‘ನಾತಿಚರಾಮಿ’ ಸಿನೆಮಾ ಪ್ರಾರಂಭಿಸುವ ಮೊದಲು ಜೀವನ ನಿರ್ವಹಣೆಗೆ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಬಗ್ಗೆ ಈ ಹಿಂದೆ ಪ್ರಸ್ತಾಪಿಸಿದ್ದೆ, ಆ ಸಾಕ್ಷ್ಯ ಚಿತ್ರಗಳನ್ನು ಮಾಡುವ ವೇಳೆ ನಮ್ಮ ಸಂಕಲನಕಾರ ನಾಗೇಂದ್ರ ಅವರ ಜೊತೆ ನಾನು ಕೆಲಸ ಮಾಡುತ್ತಿದ್ದ ಪ್ರತಿಯೊಂದು ಕತೆಯ ಬಗ್ಗೆಯೂ ಚರ್ಚೆ ಮಾಡುತ್ತಿದ್ದೆ.

ನಾಗೇಂದ್ರ ಅವರು ಪರಿಚಯ ಆಗಿದ್ದು ಹರಿವು ಸಿನೆಮಾಗೆ ರಾಷ್ಟ್ರ ಪ್ರಶಸ್ತಿ ಬಂದ ಸಂದರ್ಭದಲ್ಲಿ. ಅವರು ಈ ಹಿಂದೆ ‘ನಾನು ಅವನಲ್ಲ, ಅವಳು’ ಸಿನೆಮಾಗೆ ಕೆಲಸ ಮಾಡಿದ್ದರು.

ಆ ಸಿನೆಮಾಗು ನಮ್ಮ ‘ಹರಿವು’ ಸಿನೆಮಾಗು ಇದ್ದ ಸಂಪರ್ಕ ಸೇತುವೆ ಸಂಚಾರಿ ವಿಜಯ್ ರವರು. ಆಗಾಗ ಭೇಟಿ ಆಗುತ್ತಿದ್ದ ನಾಗೇಂದ್ರರವರಿಗೆ ಸಿನೆಮಾಗಳ ಬಗ್ಗೆ ಇದ್ದ ಆಸಕ್ತಿ, ಅವರ ಕೇಳುತ್ತಿದ್ದ ಪ್ರಶ್ನೆಗಳು ಅವರೊಂದಿಗೆ ಕೆಲಸ ಮಾಡಲು ಪ್ರೇರೇಪಿಸಿತು. ನಾವು ಸಾಕ್ಷ್ಯಚಿತ್ರಗಳಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚಾಗಿ ಜೊತೆಯಲ್ಲಿ ಇರುತ್ತಿದ್ದೆವು.

ಇದು ಕ್ರಮೇಣ ಕೆಲಸ ಇಲ್ಲದ ಸಂದರ್ಭದಲ್ಲೂ ಆಗಾಗ ಭೇಟಿಯಾಗಿ ಹನುಮಂತನಗರದ ಬಳಿಯ ಒಂದು ಟೀ ಅಂಗಡಿ ನಮ್ಮ ಸಿನೆಮಾ, ಕತೆ, ಚಿತ್ರಕತೆಗಳನ್ನು ಚರ್ಚಿಸುವ ‘ಓಪನ್ ಆಫೀಸ್’ ಆಗಿ ಖಾಯಂ ಆಯ್ತು. ಮುಂದೆ ಇದೇ ಓಪನ್ ಆಫೀಸಲ್ಲೇ ನನ್ನ ಎರಡೂ ಸಿನೆಮಾಗಳ ಬಹುತೇಕ ಚರ್ಚೆಗಳು ಸಿದ್ಧತೆಗಳು ನಡೆದದ್ದು.

ನನಗೆ ಯಾವುದೇ ಹೊಸ ಕತೆಯ ಎಳೆ ತಲೆಯೊಳಗೆ ಮೂಡಿತೆಂದರೆ ಅದನ್ನು ನನ್ನ ಕೆಲವು ಆಪ್ತರ ಬಳಿ ಕಡ್ಡಾಯವಾಗಿ ಹೇಳಿಕೊಳ್ಳುವುದು ವಾಡಿಕೆ. ಆ ಆಪ್ತರಲ್ಲಿ ನಾಗೇಂದ್ರ ಕೂಡ ಒಬ್ಬರು. ಇವರೊಂದಿಗೆ ಕತೆಯ ಜೊತೆ ನಿರ್ಮಾಣ, ನಿರ್ಮಾಪಕರ ಹುಡುಕಾಟ ಎಲ್ಲವೂ ಮುಕ್ತವಾಗಿ ಚರ್ಚೆಯಾಗುತ್ತಿತ್ತು. ನಾಗೇಂದ್ರ ಅವರು ಕತೆಗಳ ವಿಷಯದಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳುತ್ತಿದ್ದರು.

ಅವರಿಗೆ ಕತೆ ಇಷ್ಟವಾದರೆ, ಇಷ್ಟವಾಗಿಲ್ಲ ಎಂದಾದರೆ, ಅದಕ್ಕೆ ಸೂಕ್ತ ಕಾರಣಗಳನ್ನು ನೇರವಾಗಿ ಹೇಳುತ್ತಿದ್ದುದು ನನಗೆ ತಿದ್ದಿಕೊಳ್ಳಲು, ಕತೆಗಳನ್ನು ಬದಲಾಯಿಸಲು ಸಾಕಷ್ಟು ಉಪಯೋಗವಾಗುತ್ತಿತ್ತು. ಜೊತೆಗೆ ಅವರಿಗೆ ಯಾರಾದರು ನಿರ್ಮಾಪಕರು ದೊರೆತರೆ ಅವರನ್ನು ನನಗೆ ಪರಿಚಯ ಮಾಡಿಸಿ ಕತೆ ಹೇಳಿಸುತ್ತಿದ್ದರು.

ನಾತಿಚರಾಮಿಯ ಎಳೆಯನ್ನು ಅವರಿಗೆ ಹೇಳಿದ ಕೂಡಲೇ ಅವರಿಗೂ ತುಂಬಾ ಇಷ್ಟ ಆಗಿದ್ದು ನನಗೆ ಖುಷಿ ಮತ್ತು ಆಶ್ಚರ್ಯ ಎರಡೂ ಒಟ್ಟಿಗೆ ಆಯ್ತು. ಕಾರಣ ಕೆಲವೊಂದು ವಿಷಯಗಳಲ್ಲಿ ನಮ್ಮಿಬ್ಬರ ಸೈದ್ದಾಂತಿಕ ನಿಲುವುಗಳು ವಿರುದ್ಧ ಧೃವಗಳು. ಅವರಿಗೆ ಇದು ಇಷ್ಟವಾಗುವುದು ನನಗೆ ಸ್ವಲ್ಪ ಅನುಮಾನವಿತ್ತು. ಆದರೆ ಅವರಿಗೂ ಎಳೆ ಇಷ್ಟವಾಗಿ, ಬಡ್ಜೆಟ್ ಎಷ್ಟು ಎಂದು ಕೇಳಿದರು.

ಅತಿ ಕಡಿಮೆ ಬಡ್ಜೆಟ್ಟಲ್ಲಿ ಮುಗಿಸಬೇಕೆಂದು ನಾನು ಅದಾಗಲೇ ನಿಶ್ಚಯಿಸಿದ್ದೆ, ಆದರೆ ನಿರ್ಧಿಷ್ಟವಾಗಿ ಇದಿಷ್ಟೇ ಬಡ್ಜೆಟ್ಟು ಅಂತ ಏನೂ ನಿರ್ಧರಿಸಿರಲಿಲ್ಲ. ಅಂದಾಜು ಹದಿನೈದರಲ್ಲಿ ಮುಗಿಸೋ ಪ್ಲಾನ್ ಇದೆ ಸರ್ ಅಂತಂದೆ. ಅದಕ್ಕೆ ನಾಗೇಂದ್ರ ಅವರು ಕೂಡಲೇ ಕತೆ ಪೂರ್ತಿ ರೆಡಿ ಮಾಡಿ ಸರ್, ನಿರ್ಮಾಪಕರನ್ನ ಹುಡುಕೋಣ, ಯಾರೋ ಒಬ್ರು ಸಿಕ್ತಾರೆ ತಲೆ ಕೆಡಿಸ್ಕೋಬೇಡಿ, ಜೈ ಅಂದ್ಬಿಡಿ, ಅಕಸ್ಮಾತ್ ಯಾರೂ ಸಿಗ್ಲಿಲ್ಲಾ ಅಂದ್ರೆ ನಾವೇ ಎಲ್ಲಾ ಶೇರ್ ಮಾಡ್ಕೊಂಡಾದ್ರು ಸಿನೆಮಾ ಮಾಡೋಣ, ಸಬ್ಸಿಡಿಯಲ್ಲಿ ಮಿನಿಮಮ್ ಬಡ್ಜೆಟ್ ಆದ್ರು ರಿಕವರಿ ಆಗುತ್ತೆ ಅಂತ ಹುರಿದುಂಬಿಸಿದರು. 

ನಾಗೇಂದ್ರ ಹಾಗೇ ಹೇಳೋದಿಕ್ಕೆ ಕಾರಣ ಇತ್ತು, ಯಾವುದಾದರು ಒಂದು ಸಿನೆಮಾ ಮಾಡಲೇಬೇಕೆಂಬ ನನ್ನ ಒದ್ದಾಟದ ಜೊತೆಗೆ ನಾನೊಂದು ಸಮಯದ ಗುರಿ ಇರಿಸಿಕೊಂಡು, ಅಷ್ಟರ ಒಳಗೆ ಯಾವ ಸಿನೆಮಾನು ಆರಂಭವಾಗಲಿಲ್ಲಾ ಎಂದಾದರೆ, ಜೀವನ ನಿರ್ವಹಣೆ ದುಸ್ಥರವಾಗಿದ್ದ ನನ್ನ ಅಂದಿನ ಪರಿಸ್ಥಿತಿ ಹಾಗೂ ಸಾಲದ ಹೊರೆಯು ಹೆಚ್ಚಿದ್ದರಿಂದ, ಚಿತ್ರರಂಗ ಬಿಟ್ಟು ಬೇರೆ ಏನಾದರು ಕೆಲಸ ಹುಡುಕಿಕೊಳ್ಳುವೆ ಎಂದು ಒಮ್ಮೆ ಅವರ ಬಳಿ ಹೇಳಿಕೊಂಡಿದ್ದೆ. ನಾನು ಚಿತ್ರರಂಗದಲ್ಲೆ ಮುಂದುವರಿಯಬೇಕೆಂದು ಅವರ ಇಚ್ಚೆ. ಹಾಗಾಗಿ ನನಗೆ ಧೈರ್ಯ ತುಂಬಲು ಹಾಗೇ ಹೇಳಿದ್ದರು.

ಸಂಧ್ಯಾರಾಣಿ ಮೇಡಂನ ಭೇಟಿ ಮಾಡಲು ಅವರ ಮನೆಗೆ ನನ್ನ ಕೈನೆಟಿಕ್ ಗಾಡಿ ಹತ್ತಿ ಹೊರಟಿದ್ದೆ, ಆ ಹೊರಡುವ ತಯಾರಿ ಸ್ವಲ್ಪ ಹೆಚ್ಚೇ ಆತ್ಮವಿಶ್ವಾಸದಿಂದ ತುಂಬಿತ್ತು. ಕಾರಣ, ನಿರ್ಮಾಪಕರು ಸಿಗದೇ ಹೋದರೂ ನಾವೇ ಎಲ್ಲಾ ಸೇರಿ ಸಿನೆಮಾ ಮಾಡೋಣ ಅಂತ ನಾಗೇಂದ್ರ ಅವರು ಹೇಳಿದ್ದು, ಒಂಚೂರು ಜಾಸ್ತೀನೇ ಧೈರ್ಯ ಕೊಟ್ಟಿತು.

ನನ್ನ ಕಡೆಯಿಂದ ಎಲ್ಲೆಲ್ಲಿ, ಹೇಗೆ ಹಣ ಹೊಂದಿಸಬಹುದು, ಯಾರ ಬಳಿ ಎಲ್ಲಾ ಹಣ ಕೇಳಬಹುದು ಎಂದು ಗಾಡಿಯಲ್ಲಿ ಸಾಗುತ್ತಲೇ ಮನದೊಳಗೆ ಪಟ್ಟಿ ಮಾಡಿಕೊಂಡೆ. ಹಾಗೇ  ಪಟ್ಟಿ ರೆಡಿ ಆದಾಗ ಹಾಗೇ ಮುಖದಲ್ಲಿ ಒಂದು ಸಣ್ಣ ನಗುವೊಂದು ಮೂಡಿ ಮಾಯವಾಯ್ತು. ಆ ನಗು ನನ್ನ ಹುಚ್ಚಿಗೆ, ನನ್ನ ಬಗ್ಗೆ ಮೂಡಿದ ಹೆಮ್ಮೆಯ ಜೊತೆಗಿನ ಕನಿಕರದ ಮಿಶ್ರ ಭಾವ. ಅದಕ್ಕೆ ಕಾರಣ ಲಕ್ಷದಲ್ಲಿ ಎರಡಂಕಿ ದಾಟಿರುವ ನನ್ನ ಸಾಲ ಹೆಗಲೇರಿದ್ದರೂ ಸಿನೆಮಾದ ಕನಸಿಗೆ ಮತ್ತಷ್ಟು ಸಾಲ ಮಾಡಲು ಅದೆಲ್ಲಿಂದ ಹುಚ್ಚು ಧೈರ್ಯ ಬಂದಿತ್ತೋ ನನಗೆ. ಅದೇನೋ ಗೊತ್ತಿಲ್ಲಾ ಇಂದಿಗೂ ಅವೆರೆಡು ಹೆಚ್ಚುತ್ತಲೇ ಇದೆ.

ಸಂಜೆ ಸಂಧ್ಯಾರಾಣಿ ಮೇಡಂ ಮನೆಗೆ ಹೋದವನು ಒಂದೆರೆಡು ಮಾತು ಕುಶಲೋಪರಿಯ ನಂತರ ನೇರವಾಗಿ ವಿಷಯಕ್ಕೆ ಬಂದೆ. ಆರಂಭದಲ್ಲಿ ಮೇಡಂ ಕತೆ ಬರೆಯಲು ಹಿಂಜರಿದರೂ ಎರಡು ದಿನಗಳ ಕಾಲ ಯೋಚಿಸಿ, ಒಂದು ನಿರ್ಧಾರಕ್ಕೆ ಬಂದಿದ್ದರೇನೊ, ಒಪ್ಪಿಕೊಂಡರು. ನನ್ನ ಮನಸ್ಸು ಹಗುರಾಯಿತು. ಆದರೂ ನನ್ನೊಳಗೊಬ್ಬ ನಿರ್ಮಾಣ ವಿನ್ಯಾಸಕಾರ ಸದಾ ಜಾಗೃತವಾಗಿಯೇ ಇರುತ್ತಾನೆ.

ನನ್ನ ಮುಂದಿನ ವಿಷಯ ಅವರಿಗೆ ಹೇಳಿದೆ. ಮೇಡಂ ಸಧ್ಯಕ್ಕೆ ನಿಮಗೆ ಕೊಡಲು ನನ್ನ ಬಳಿ ಹಣವಿಲ್ಲ. ಈ ಸಿನೆಮಾನ ಅತೀ ಕಡಿಮೆ ಬಡ್ಜೆಟ್ಟಲ್ಲಿ ಮಾಡುವ ಯೋಜನೆ ಇದೆ. ಫಾರ್ಮೆಟ್ ‘ಎ ಸೆಪರೇಷನ್, ಸಿನೆಮಾ ಮಾದರಿಯಲ್ಲಿ ಅರ್ಬನೈಸ್ಡ್ ಸಿನೆಮಾ ಮಾಡೋ ಪ್ಲಾನ್, ಅತೀ ಕಡಿಮೆ, ಎಂದರೆ ಎರಡು ಮೂರು ಲೊಕೇಶನಲ್ಲಿ ಮುಗಿಯೋ ಅಂತ ಕತೆ ಆದರೆ ಚೆನ್ನ. ಉಚಿತವಾಗಿ ಕೆಲಸ ಮಾಡಿಸಿಕೊಳ್ಳೋದು ನನಗೆ ಇಷ್ಟವಿಲ್ಲಾ. 

ಇದಕ್ಕೆ ನಿರ್ಮಾಪಕರು ಸಿಕ್ಕರೆ ನನ್ನ ಮಿತಿಯಲ್ಲಿ ಒಂದು ಗೌರವ ಸಂಭಾವನೆ ಕೊಡುತ್ತೇನೆ. ಆದರೆ ನೀವು ದಯವಿಟ್ಟು ಈ ಕತೇನಾ ಬರೆದು ಕೊಡಿ ಎಂದು ಕೇಳಿಕೊಂಡೆ. ಮಂಜು ಸಂಭಾವನೆಗೋಸ್ಕರ ನಾನು ಈ ಕೆಲಸ ಒಪ್ಕೊಳ್ತಿಲ್ಲಾ, ನಿಮಗಿರೋ ಸಿನೆಮಾ ಹುಚ್ಚು ಪ್ರೀತಿಗೋಸ್ಕರ ಒಪ್ಕೊಳ್ತಿದ್ದೀನಿ. ಇದು ನನಗೆ ಹೊಸದು, ರಿಸ್ಕ್ ಇದೆ, ಆದ್ರು ನೀವು ಗೈಡ್ ಮಾಡಿ ನಾನು ಬರೀತಿನಿ, ಸಂಭಾವನೆ ಎಲ್ಲಾ ಆಮೇಲೆ.

ಇದು ಸಿನೆಮಾ ಆದ್ರೆ ಅಷ್ಟೇ ಸಾಕು. ಅದಕ್ಕೂ ಮೊದಲು ನನ್ನ ಒಂದು ಪ್ರಶ್ನೆಗೆ ನೀವು ಉತ್ತರ ಕೊಡಬೇಕು. ಅದೂ ನನಗೆ ಸ್ಪಷ್ಟವಾಗಿ ಉತ್ತರ ಸಿಕ್ಕರೆ ಮಾತ್ರ ನಾನು ಬರೀತೀನಿ, ನಾನು ಏನು ಪ್ರಶ್ನೆ ಕೇಳ್ತಾರೋ ಎಂಬ ಆತಂಕದಲ್ಲೇ ಕೇಳಿದೆ, ಕೇಳಿ ಮೇಡಂ. 

ಸಂಧ್ಯಾ ಮೇಡಂ ಕೇಳಿದ್ರು, ‘ಈ ಕತೆ ಬರೆಯೋದಿಕ್ಕೆ ನಾನೇ ಯಾಕೇ?  ನಿರ್ಧಿಷ್ಟ ಕಾರಣ ಏನು?’

ನನ್ನನ್ನೇ ನೇರವಾಗಿ ನೋಡುತ್ತಾ ತುಂಬಾ ದೃಢವಾದ ಧ್ವನಿಯಲ್ಲಿ ಕೇಳಿದರು.

ಮೇಡಂ ಯಾವ ಉದ್ದೇಶದಿಂದ ಕೇಳಿದರೋ ಏನೋ, ಆದರೆ ಬೇರೇನೋ ಪ್ರಶ್ನೆಗಳನ್ನ ನಿರೀಕ್ಷಿಸಿದ್ದ ನನಗೆ ಇದು ಅನಿರೀಕ್ಷಿತವಾಗಿತ್ತು, ಸಡನ್ನಾಗಿ ತಲೆಯೊಳಗೆ ಏನೇನೋ ಯೋಚನೆಗಳು ಹಾದು, ಒಂದೆರೆಡು ಕ್ಷಣ ಅಕ್ಷರಶಃ ಬ್ಲಾಂಕ್ ಆಗೋಯ್ತು.

। ಮುಂದಿನ ವಾರಕ್ಕೆ ।

‍ಲೇಖಕರು ಮಂಸೋರೆ

October 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: