ಗಾಂಧಿಗೊಂದು ಪತ್ರ

ರವಿಕುಮಾರ್ ಟೆಲೆಕ್ಸ್

ತೀರ್ಥರೂಪ ಸಮಾನರಾದ ಬಾಪು…
ನೀವು ಕ್ಷೇಮವೇ? ಕ್ಷೇಮವಾಗಿದ್ದೀರ ಎಂಬ ವಿಶ್ವಾಸ ನನಗಿದೆ. ನಾನಿಲ್ಲಿ ಕ್ಷೇಮ. ನಾವೆಲ್ಲರೂ ಕ್ಷೇಮವಾಗಿದ್ದೇವೆ.
ಬಹಳದಿನಗಳಿಂದ ಪತ್ರ ಬರೆಯಲಾಗಲಿಲ್ಲ. ಕ್ಷಮಿಸಿ.

ಬದುಕಿದಷ್ಟು ದಿನ ನೀವು ಆದರ್ಶರಾಗಿದ್ದು ನಮಗೊಂದು ಮಾದರಿಯೇ ಸರಿ. ನೀವು ಬದುಕಿದ್ದಾಗ ಸತ್ಯವನ್ನು ಜತನದಿಂದ ಕಾಯ್ದುಕೊಂಡಿದ್ದೀರಿ.ಆದರೆ ಈಗ ಸುಳ್ಳುಗಳನ್ನು ಬಿತ್ತಿ ಹಿಂಸೆಯನ್ನು ಬೆಳೆಯಲಾಗುತ್ತಿದೆ. ನೀವು ಮನದ ಕಸ ಗುಡಿಸಬೇಕು ಎಂದು ಹೇಳಿದ್ದಷ್ಟೇ ಅಲ್ಲ .ಕೃತಿ ಮತ್ತು ಕ್ರಿಯೆಯಲ್ಲಿ ಪರಿಪಾಲಿಸಿದ್ದೀರ ಕೂಡ. ಈಗ ನೋಡಿ ನಿಮ್ಮದೇ ಪೋಟೊ ಹೊತ್ತುಕೊಂಡು ಊರ ತುಂಬಾ ಕಸಗುಡಿಸುವ ಕೆಲಸ ಸಮರೋಪಾದಿಯಲ್ಲಿ ನಡೆದಿದೆ. ದೇಶದ ತುಂಬಾ ಪೊರಕೆ ಜೊತೆ ನಿಮ್ಮ ಪೋಟೊ ರಾರಾಜಿಸುತ್ತಿದೆ. ಊರ ಕಸ ಗುಡಿಸುವುದೇನೋ ಸರಿ ,ಆದರೆ ಹೃದಯಗಳಲ್ಲಿ ಕಸವೋ ಕಸ ಗುಡ್ಡೆ ಬಿದ್ದು ನಾರುತ್ತಿದೆ.

ಬಾಪೂ…,
ನೀವು ಪ್ರತಿಪಾದಿಸಿದ ಹಿಂದೂ ಧರ್ಮ ಮುಖವಾಡಗಳ ಧರಿಸಿ ನರಮನುಷ್ಯನ ರಕ್ತ-ಮಾಂಸದ ರುಚಿಕಂಡ ವ್ಯಾಘ್ರದಂತಾಗಿದೆ. ನಿಮ್ಮ ಆತ್ಮಶುದ್ಧಿ , ಆತ್ಮಶೋಧನೆ, ಪಶ್ಚಾತಾಪ, ಶಾಂತಿ, ಅಹಿಂಸೆ,ಸತ್ಯಾಗ್ರಹದ ಸಾತ್ವಿಕ ಹಾದಿಗಳಿಗೆ ರಣವಿಷದ ಮುಳ್ಳುಗಳ ಬೇಲಿ ಬಿಗಿಯಲಾಗಿದೆ.
‘ಹಿಂದೂ ಧರ್ಮ’ ನೀವೆ ಸಾಕಿದ ಮುದ್ದಿನ ಬೆಕ್ಕು . ಕೊನೆಗೇ.. ನಿಮ್ಮ ಗುಂಡಿಗೆ ಸೀಳಿ ರಕ್ತ ನೆಕ್ಕಿಬಿಟ್ಟಿತು. ಅದೂ ಇಂದಿಗೂ ನಿಂತಿಲ್ಲ. ನೀವು ಹುಟ್ಟಿದ ನೆಲದಲ್ಲೆ ನಡೆದ ರಕ್ತದೊಕುಳಿಯ ಘಮಟು ಘಾಟು ಮೂಗು ಬಡಿಯುತ್ತಲೆ ಇದೆ.

ಬಾಪೂ….
ದೇಶದಲ್ಲಿ ಸತ್ಯವನ್ನು ನಿಷೇಧಿಸಲಾಗಿದೆ‌ ಈಗ.! ಸತ್ಯ ಹೇಳಿದರೆ ದೇಶದ್ರೋಹಿಯ ಹಣೆಪಟ್ಟಿಕಟ್ಟಿ ಜೈಲಿಗೆ ಕೂಡಲಾಗುತ್ತಿದೆ. ಸತ್ಯ ಹೇಳುವವರ ಹತ್ಯೆಯನ್ನು ಅದಕ್ಕಿಂತ ನಿರ್ದಯಿಯಾಗಿ ಸಂಭ್ರಮಿಸುವ ಸಂತತಿಯೇ ಅಧಿಕಾರದ ದಂಡ ಹಿಡಿದು‌ ಕುಳಿತಿದೆ.

ಇನ್ನೊಂದು ಪ್ರಮುಖ ಸಂಗತಿಯೆಂದರೆ ನಿಮ್ಮನ್ನು ಕೊಂದವರೆ ಈಗ ನಿಮ್ಮನ್ನು ಕೊಂಡಾಡತೊಡಗಿದ್ದಾರೆ. !! , ನಿಮ್ಮನ್ನು ಕೊಂದು‌ ದೇಹವನ್ನು ಇಲ್ಲವಾಗಿಸಿದರು ನಿಜ, ಆದರೆ ಅವರು ನಿಮ್ಮಲ್ಲಿನ ನಿತ್ಯ ಸತ್ಯದ ಪ್ರಭೆಯನ್ನು ಕೊನೆಗೂ ಒಪ್ಪಿಕೊಳ್ಳಲೇ ಬೇಕಾಯಿತು. ಬಹುಶಃ ನೀವೀಗ ಓಟು ಬ್ಯಾಂಕಿನ ಸರಕೇ ಆಗಿದ್ದೀರ.

ಬಾಪೂ…
ಶ್ರೀರಾಮನಿಗೆ ಗುಡಿಯ ಕಟ್ಟುವ ಎಲ್ಲಾ ತಕರಾರುಗಳನ್ನು ಅಂತ್ಯಗೊಳಿಸಲಾಗಿದೆ. ಅಯೋಧ್ಯೆಯಲ್ಲೀಗ ವೈಭವದ ಮಂದಿರ ಎದ್ದು ನಿಲ್ಲಲಿದೆ. ಅವನು ನಿಮ್ಮ ರಾಮನಲ್ಲ.
ನಿಮ್ಮ ರಾಮ ಈಗ ಯಾರಿಗೂ ಬೇಡ.
ದನ,ಧರ್ಮ..ದ ಹೆಸರಿನಲ್ಲಿ ಬಡಿದು ಕೊಲ್ಲುವುದು ಸಾಮಾನ್ಯ.

ಹೆಣ್ಣೊಬ್ಬಳು ನಡುರಾತ್ರಿಯಲ್ಲಿ ನಡೆಯುವ ಸ್ವಾತಂತ್ರ್ಯ ಮಾತಿರಲಿ , ಹಾಡುಹಗಲೆ ಆಕೆಯನ್ನು ಹೊತ್ತೊಯ್ದು ಅತ್ಯಾಚಾರಗೈದು ಕೊಂದು‌ಹಾಕಲಾಗುತ್ತಿದೆ. ಹೆತ್ತವರಿಗೂ ಮುಖ ತೋರಿಸದೆ ಅಪರಾತ್ರಿಯಲ್ಲಿ ಸುಟ್ಟು ಬೂದಿ ಮಾಡಲಾಗುತ್ತಿದೆ. ಸಾಕ್ಷಿಗಳ ಸಮೇತ. ಸತ್ಯವನ್ನೂ….
ನೀವಿದ್ದಿದ್ದರೆ ನಿಮ್ಮ ” ಉಪವಾಸ, ಪಾದಯಾತ್ರೆಗಳ ಅಸ್ತ್ರದಿಂದ ಇದನ್ನೆಲ್ಲಾ ತಡೆಯುತ್ತಿದ್ದಿರಿ ಖಂಡಿತ. ಆದರೆ ನಿಮ್ಮನ್ನೂ ಎದೆಗೆ ಕೈಯಿಕ್ಕಿ ನೂಕಿ‌ ಕೆಡವಿ ಬಿಡುತ್ತಿದ್ದರು.

ನಿಮ್ಮನ್ನೆ ಕೊಂದ ಅವರ ಮುಖದಲ್ಲಿ ಯಾವ ಪಾಪದ ಪಶ್ಚಾತಾಪ ಲವಲೇಶವೂ ಕಾಣುತ್ತಿಲ್ಲ. ನಂಜಿನ ನಾಲಿಗೆಯಲ್ಲಿ ನಿಮ್ಮ ಸ್ಮರಣೆ, ರಕ್ತ ಮೆತ್ತಿದ ಕೈಗಳಲ್ಲಿ ನಿಮ್ಮ ಚಿತ್ರ ರಾರಾಜಿಸುತ್ತಿದೆ.

ಬಾಪೂ..
ದೇಶ ಹೊಸ ಭಕ್ತರಿಂದ ತುಂಬಿ ತುಳುಕುತ್ತಿದೆ.
ಸಾಕ್ಷಾತ್ ಭಾರತಾಂಬೆಯೇ ಹೈರಾಣಾಗುವಷ್ಟು.
ನಿಮ್ಮಷ್ಟು ಕಾರುಣ್ಯಭರಿತ ಮೆದು ಮಾತುಗಳು ಯಾರಿಗೂ ಬೇಕಿಲ್ಲ. ಉನ್ಮಾದವಿಕ್ಕಿ ಗಡಚಿಕ್ಕುವ ಅಬ್ಬರವೇ ದೇಶವನ್ನು ಆಳುತ್ತಿದೆ. ನೀವಿಲ್ಲದ ನಿರ್ವಾತದಲ್ಲಿ ನಿಮ್ಮನ್ನು ಮಾಡಲಾಗುತ್ತಿದೆ.

ಬಾಪೂ..ಇವತ್ತು ನಿಮ್ಮ ಜನ್ಮ ದಿನ. ಕ್ಲಿಷೆ ತುಂಬಿದ ಆಚರಣೆಗಳು ನಡೆಯುತ್ತಿವೆ. ಈ ಹೊತ್ತಿನಲ್ಲಿ ಬಾಪೂ ಮತ್ತೆ ಹುಟ್ಟು ಬಾ… ಎಂದು ಕರೆಯಲು ಮನಸ್ಸಿಲ್ಲ. ಮತ್ತೆ ಮತ್ತೆ ನಿಮ್ಮನ್ನು ಕೊಲ್ಲುವುದನ್ನು ನಾನು ನೋಡಲಾರೆ.
ಮನಸ್ಸಿಗೆ ಬೇಸರ ಮಾಡಿಕೊಳ್ಳಬೇಡಿ.

ನಿಮ್ಮ ಸತ್ಯ ,ಶಾಂತಿ,ಅಹಿಂಸೆ ಗಳಲ್ಲದೆ ಈ ದೇಶಕ್ಕೆ ಬೇರೆ ಸೂತ್ರಗಳಿಲ್ಲ ಎಂಬ ನಂಬಿಕೆಯ ಬೇರು ಕಳಚಿಲ್ಲ.

ಉಳಿದಂತೆ ದೇಶದಲ್ಲಿ ಎಲ್ಲವೂ ಕ್ಷೇಮ.! ಪತ್ರ ತಲುಪಿದ ಕೂಡಲೆ ಪತ್ರ ಬರೆಯಿರಿ…ನಿಮ್ಮ ಪತ್ರವನ್ನೆ ಎದುರು ನೋಡುತ್ತಿದ್ದೇನೆ.
ಸಬ್ ಕೊ ಸನ್ಮತಿ ದೇ ಭಗವಾನ್

ಇಂತಿ ನಿಮ್ಮ

  • ಎನ್.ರವಿಕುಮಾರ್ ಟೆಲೆಕ್ಸ್

‍ಲೇಖಕರು avadhi

October 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: