ಬೆಳಗಾಗ ನಾನೆದ್ದು ಇಂದೇನ ಅಟ್ಟಲಿ..?

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.

ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಶಿವಮ್ಮನನ್ನು ಸೇಮ,ಹೊನ್ನಮ್ಮನನ್ನು ಹಮ್ಮಕ್ಕ, ನಾಗೇಂದ್ರಿಯನ್ನು ನಾಗಿ, ದೇವಮ್ಮನನ್ನು ದ್ಯಾಮ ಅಂತ ಕರೆಯುವುದು ಮಾಮೂಲು ನಮ್ಮ ಕಡೆ. ಚುಟುಕು ಹೆಸರು ಮತ್ತು ಏಕವಚನದ ಪ್ರೀತಿಗೆ ಹೊಂದಿಕೊಂಡವರು ನಾವು..

ಬಹುವಚನವೆಂದರೆ ಏನೋ ದೂರ ದೂರದ ಭಾವ. ಒಂದು ರೀತಿಯ ಒಜ್ಜೆ.. ಹೆಸರಿನ ಜೊತೆ ಅಣ್ಣ ತಮ್ಮ ಉಪಯೋಗಿಸಿ ಹೋಗೋ ಬಾರೋ ಅನ್ನೋದು ಅಂಕೋಲೆಯ ಬಹುಪಾಲು ರೂಢಿ.. ಗಂಡುಗಳಾದರೆ ಅಕ್ಕೋ.. ತಂಗೀ.. ಎಲ್ಲೋಗಿದ್ಯೇ..? ಮಾಮೂಲಿ….

ಮೇಲ್‌ಸ್ತರದ ಜನರಿದ್ದಲ್ಲಿ ಹೀಗಾದರೆ ಕೊಂಚ ಕೆಳಸ್ತರದ, ಬಡವರ ಕೇರಿಗಳಲ್ಲಿ ಹೆಣ್ಣನ್ನು ಗಂಡನ ಹೆಸರಿನ ಜೋಡಿ ಕರೆಯಲ್ಪಡಲಾಗುತ್ತದೆ.. ಮಂಗೇಶನ ಹೆಂಡ್ತಿ ಬೊಮ್ಮಯ್ಯನ ಹೆಂಡ್ತಿ ರಾಕು ಹೆಂಡ್ತಿ ಬೀರನ ಹೆಂಡ್ತಿ ಇತ್ಯಾದಿಯಾಗಿ…

ಹೀಗೆ ಕರೆದರೆ ಓ ಎನ್ನುವ ಈ ಹೆಂಡ್ತಿಯರಿಗೆಲ್ಲ ಬಹುಶಃ ಅವರಿಗೆ ಅವರದ್ದೇ ಆದ ಹೆಸರು ಈಸೊಂದು ಕಾಲದಾಗ ಮರೆತುಹೋಗಿರಲೂ ಸಾಕು ಅನ್ನಿಸುತ್ತದೆ ನನಗೆ ಹಲವು ಬಾರಿ.. ಸ್ತ್ರೀವಾದ, ಸಮಾನತೆ , ನೀನು ಕಡಿಮೆ ನಾನು ಹೆಚ್ಚು ಎಂಬ ಯಾವುದರ ಕುರಿತಾಗಿಯೂ ಅವರಿಗೆ ಬಿಸಾದಿ ಇಲ್ಲ. ಅಕ್ಕಿ ಕಾಯಿ ಮೆಣಸು ಸಂಬಾರ ಮೀನಿನ ಹೊರತು ಇನ್ನಿತರ ಅತೀ ಅಗತ್ಯಗಳು, ಯೋಚನೆಗಳು ಮನುಷ್ಯನಿಗೆ ಇದೆಯಾ ಎಂಬುದು ಅವರ ಪ್ರಶ್ನೆ ಮತ್ತು ತಿಳಿವಳಿಕೆ..

ಹೆಣ್ಣು ಎಲ್ಲಿಗಾದರೂ ಹೋಗಬೇಕು ಎಂದರೆ ಮನೆಯಲ್ಲಿ ಅನುಮತಿ ಪಡೆಯಲು ದಿನ, ಸಮಯ, ಸಂದರ್ಭ ಹೊಂಚಬೇಕು .. ಅಥವಾ ಗಂಡನಬೆನ್ನಿಗೇ ಹೋಗಿ ಅವನೊಟ್ಟಿಗೇ ಬರಬೇಕು.. ಅಡುಗೆ ಮನೆ ಮಕ್ಕಳು ನೌಕರಿ ಅಂತಷ್ಟೇ ಇರಬೇಕು.. ಎಂಬ ಮಧ್ಯಮವರ್ಗದ ಎರಡೇ ಮೂರೇ ಆಯ್ಕೆಗಳು, ಹಿಡಿತ, ಕಡಿವಾಣ ಇರಸುಮುರಸು ಅವರಿಗಿಲ್ಲ.. ಖಿನ್ನತೆ, ದಾಸ್ಯದ ಕೊರಗು ಅವರನ್ನು ಹೆಚ್ಚು ಕಾಡುವುದಿಲ್ಲ.

ಏನಿದ್ದರೂ ಹೊಟ್ಟೆಪಾಡಿನ, ಕುಟುಂಬ ನಿರ್ವಹಣೆಯ ಸರ್ವತ್ರ ಜಬಾಬ್ದಾರಿಯನ್ನು ಹೆಗಲಿಗೆರಿಸಿಕೊಂಡು ‘ಬೆಳಗಾಗ ನಾನೆದ್ದು’ ಇಂದೇನ ಅಟ್ಟಲಿ.?(ಬೇಯಿಸಲಿ) ಎಂಬುದನ್ನಷ್ಟೇ ತಲೆ ಕಣ್ಣು ಕಿವಿ ಬಾಯಿ ಹೊಟ್ಟೆಯಲ್ಲಿ ಹೊತ್ತು ದಿನವೂ ಗಮ್ಯವನ್ನು ಅರಸುತ್ತ ತಿರುಗುತ್ತಾರೆ ಅವರು..

ದಲಿತ ಕೇರಿಯ ಆಗೇರ ಹೆಣ್ಣುಗಳು ಸದಾ ಅಶಕ್ತರು.. ಮನೆಯಾಚೆಯ ಗುಡ್ಡದ ಸಣ್ಣ ಜಿಗ್ಗು ಹೆಕ್ಕುತ್ತಾರೆ ಗಂಜಿಗಾಗಿ… ಕೇಂದ್ರ ಸರ್ಕಾರದ ಉಜ್ವಲ ಗ್ಯಾಸ್ ಉಚಿತ ಯೋಜನೆಯಡಿ ಪಡೆದ ಎಲ್ ಪಿ ಜಿ ಸಿಲಿಂಡರ್ ಒಮ್ಮೆ ಖಾಲಿಯಾದ ಮೇಲೆ ಮತ್ತೆ ಹೊಟ್ಟೆ ತುಂಬಿಸಿಕೊಳ್ಳಲಾಗದೇ ಮೂಲೆ ಸೇರುತ್ತದೆ, ಇಲ್ಲಾ ಹೊಟ್ಟೆಗೆ ಹಿಟ್ಟಿಲ್ಲದ ದುರಿತ ಕಾಲದ ಒಂದು ದಿನ ಅಡ್ಡಾದುಡ್ಡಿಗೆ ಯಾರಿಗೋ ಮಾರಲ್ಪಡುತ್ತದೆ.. ಮತ್ತದೇ ಜಿಗ್ಗು ಮತ್ತದೇ ಹೊಗೆ…..

ಇಲ್ಲಿಯದೇ ಹಾಲಕ್ಕಿ ಹೆಣ್ಣುಗಳು ಆರೇಳು ಕಿಮೀ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಹೋಗಿ ತಂದು ಅಂಕೋಲೆ ಹೊಟೇಲಿಗೆ ಮಾರುವ ಬಲಾಢ್ಯ ಸೌದೆಹೊರೆಯನ್ನು ಇವರಿಗೆ ಹೊರುವುದು ಸಾಯಲಿ ಜೋರಾಗಿ ಅಲುಗಿಸಲೂ ಆಗದು.. ಚೀರೆಕಲ್ಲು ಗಣಿಯಲ್ಲಿ ಅವರಂತೆ ಬಿಸಿಲಲ್ಲಿ ಹೊತ್ತಿಗೆ ಮುನ್ನೂರು ನಾಲ್ಕುನೂರು ಲೆಕ್ಕದಲ್ಲಿ ಕಲ್ಲು ಮಣ್ಣು ಹೊರುತ್ತ ದುಡಿಯಲಾಗದು..

ಗದ್ದೆಭೂಮಿ ಇಲ್ಲದ ಕಾರಣಕ್ಕೆ ದನ ಸಾಕೋದು ಹಾಲು ಹೈನ ಮಾರೋದು ಹುಲ್ಲು ಸೊಪ್ಪು ತರೋದು ಮುಂತಾದ ಶ್ರಮದ ಕೆಲಸ ಕೂಡ ಅನಾದಿಕಾಲದಿಂದ ಇವರಿಗೆ ರೂಢಿ ಇಲ್ಲ.. ಹಾಗಾಗಿ ಮಾಮೂಲಿಯಾಗಿ ಇಡೀ ಊರಿಗೂರಿನ ಹೆಣ್ಣುಗಳು ಹೋಗುವುದು ಕೊಂಚ ಉಳ್ಳವರ ಮನೆಯ ಮನೆಗೆಲಸಕ್ಕೆ.. ತಿಂಗಳಿಗೆ ಸಿಗುವುದು ಸಾವಿರದಿಂದ ಎರಡು ಸಾವಿರದ ಒಳಗೆ ಸಂಬಳ.. ಎಲ್ಲವೂ ಆಗಬೇಕು ಇಷ್ಟರೊಳಗೆ..

ಇತ್ತೀಚೆಗೆ ಊರು ಕೇರಿಗೇ ಬಂದಿಳಿದು ಹೆಂಗಸರಿಗಷ್ಟೇ ಸಾಲ ಕೊಡುವ ಹತ್ತಾರು ನಮೂನೆಯ ಸಂಘ ಸಂಸ್ಥೆಗಳಲ್ಲಿ ‘ಹಾಲೋಗರವನುಂಡಂತೆ’ ಮೂವತ್ತೋ ನಲವತ್ತೋ ಸಾವಿರ ಸಾಲ ಕೊಂಡು, ಪಡೆದ ಉದ್ದೇಶಕ್ಕೆ ಖರ್ಚು ಮಾಡದೇ ಎಂಟೂ ದಿಕ್ಕಿಗೂ ಬಾಯಿ ತೆರೆದು ಕೂತ ಇನ್ನ್ಯಾವುದೋ ಕೊರತೆಯ ಬಾಯಿ ಮುಚ್ಚಿಸಲು ಬಳಸಿಕೊಂಡು ನಂತರ ಅದನ್ನು ವಾರವಾರವೂ ತುಂಬಲು ಇವರೆಲ್ಲ ಪಡುವ ಕಷ್ಟ ಕಣ್ಣಾರೆ ಕಂಡವರಿಗೆ ಮಾತ್ರ “ಕಿಬ್ಬದಿಯ ಕೀಲು ಮುರಿವ” ಅರ್ಥ ಪ್ರಾತ್ಯಕ್ಷಿಕವಾಗೋದು…

ಪಡೆದ ಸಾಲ ಕೈಯಲ್ಲಿ ಓಡಾಡುವಾಗ ಕೈ ಖರ್ಚು, ಒಳ್ಳೆಯ ಮೀನೂಟ,ಅಪರೂಪಕ್ಕೊಂದಿನ ಕೋಳಿ, ರೊಟ್ಟಿ ಹಿಟ್ಟು ಅಂತ ಹೊಟ್ಟೆ ತುಂಬ ತಿಂದ ಮನೆಮಂದಿ ಅಷ್ಟೇ ಯಾಕೆ ಗಂಡ ಕೂಡ ಸಾಲ ತೀರಿಸುವ ಸಂದರ್ಭದಲ್ಲಿ ಐದು ಪೈಸೆ ಹಣಕ್ಕೆ ಹೆಂಗಸರಿಗೆ ಒದಗಲ್ಲ..”ರಂಡೆ ಯಾವ್ ಬೋಳಿಮಗ ಹೇಳಿದ್ದ ನಿಂಕೂಡೆ ಸಾಲ ಮಾಡು ಅಂತ..? ಸಾಯು ಈಗ” ಎಂಬುದು ಅವನ ಸದಾಸಿದ್ಧದ ಮಾತು..

ಒಂದು ಹೊತ್ತು ದುಡಿದು ತನ್ನ ಬೀಡಿ ಬೆಂಕಿಪಟ್ನ, ಕವಳ, ಪಾಕೀಟು, ಕುಟಕುಟಿ, ಗುಟಕಾ ಅಂತಷ್ಟೇ ಇರುವ, ವೈಯಕ್ತಿಕ ಖರ್ಚಿನ ಹೊರತು ಇನ್ನೇನನ್ನೂ ವಿಚಾರಮಾಡದ ಅವನಿಂದ ಹೆಂಗಸರು ಏನನ್ನೂ ನಿರೀಕ್ಷೆ ಕೂಡ ಮಾಡುವುದಿಲ್ಲ ಅದು ಬೇರೆ ಮಾತು..

ಹೊರಗಿನವರು ಸಾಮೂಹಿಕ, ಸಾಮುದಾಯಿಕ ಕೆಲಸಕ್ಕೆ ಬಂದರೆ ಇಡೀ ಊರಿನಲ್ಲಿ ಕುಳಿತುಕೊಳ್ಳಲು ಪಾಡಾಗಿರುವ ಜಾಗವೆಂದರೆ ಶಾಲೆಯ ವಠಾರವೊಂದೇ.. ಮನೆಗಳೆಲ್ಲ ಸಣ್ಣ ಎರಡು ಪಕ್ಕೆಯ ಮಣ್ಣ ಗೂಡುಗಳು.. ಹಾಗಾಗಿ ಸಾಲಕೊಟ್ಟ ಹಲವು ವಿಧದ ಸಂಘದ “ಮಾಸ್ತರ್ರು”ವಾರದಲ್ಲಿ  ದಿನಕ್ಕೊಬ್ಬೊಬ್ಬರು ಬಂದು ಶಾಲೆಯ ರಂಗಮಂದಿರದಲ್ಲಿ ಮುಂಜಾನೆ ಟು ಸಂಜಿಮಟ ಕುಳಿತಿರುತ್ತಾರೆ.

ಸಹಿ ಹಾಕಿ ತಲಾ ಜವಾಬ್ದಾರಿ ಹೊತ್ತು ಸಾಲಪಡೆದ, ಕೊಡಿಸಿದ ಇಪ್ಪತ್ತು ಹೆಂಗಸರಲ್ಲಿ ಹತ್ತೊಂಬತ್ತು ಜನ ಕಂತು ಕೊಡಲು ಬಂದರೂ ಅವರು ಸ್ವೀಕರಿಸಲ್ಲ..ಇಪ್ಪತ್ತನೆಯವಳನ್ನು ಕರೆದು ತರುವ ಜವಾಬ್ದಾರಿ ಈ ಹತ್ತೊಂಬತ್ತಕ್ಕೆ ವಹಿಸಿ ಅವರು ಸುಮ್ಮನೆ ಕುಳಿತುಬಿಡುತ್ತಾರೆ.. ಆದಿನ ಕೂಲಿ ಪಾಲಿ ಏನೂ ಇಲ್ಲ ಹೆಂಗಸರಿಗೆಲ್ಲ. ಹಣ ಹಂಚಲಾಗದೇ ಅಡಗಿ ಕುಳಿತ ಇಪ್ಪತ್ತನೆಯವಳನ್ನು ಶಾಪಹಾಕುತ್ತ ಹುಡುಕುತ್ತಾರೆ ಉಳಿದವರು ಇಡೀದಿನ..

ಕೊಡಲಾಗದ ಅವಳ ಪಾಲಿನ ಹಣವನ್ನು ತಲಾ ಹತ್ತೋ ಇಪ್ಪತ್ತೋ ಸೇರಿಸಿ ಇವರೇ ಕೊಡಬೇಕು.. ಹಾಗೆ ಕೂಡಿಸಿ ತಾವೇ ಕೊಟ್ಟರಂತೂ ಮುಗಿಯಿತು ಇಡೀ ವಾರ ಮತ್ತವಳಿಗೆ ಶಾಪ ಊರಲ್ಲಿ ಜಾರಿಯಲ್ಲಿರುತ್ತದೆ.. ಕೈಗೆ ಸಿಕ್ಕರಂತೂ ಮುಗಿಯಿತು ಅವಳ ಕಥೆ.. ವಿದ್ಯೆಯ ಬಗ್ಗೆ ಕಾಳಜಿ ಇಲ್ಲದ, ಓದು ಬರಹಕ್ಕೆ ಚೂರೂ ಪ್ರೋತ್ಸಾಹ ಸಿಗದ ಇಂಥಹ ಮನೆಗಳಲ್ಲಿ ಬೆಳೆಯುತ್ತಿರುತ್ತಾರೆ ಊರ ಶಾಲೆಯ ವಿದ್ಯಾರ್ಥಿಗಳು.. ನಾಳೆಯ ಭಾವಿ ಪ್ರಜೆಗಳು..

ವಿದ್ಯೆಯ ಜೊತೆ ಅವರ ಹರಿದ ಪುಸ್ತಕ ಹೊಲಿಯೋದು, ಬೈಂಡ್ ಹಾಕೋದು, ದಾನಿಗಳ ನೆರವು ಪಡೆದು ಅವರಿಗೆ ಬ್ಯಾಗು, ನೋಟ್‌ಬುಕ್, ಶೈಕ್ಷಣಿಕ ಸಾಮಗ್ರಿ ಒದಗಿಸಿಕೊಡೋದು ಮುಂತಾದ ನೂರಾರು ಹೆಚ್ಚುವರಿ ಕೆಲಸಗಳ ಜೊತೆ ಏಗುತ್ತಿದ್ದಾನೆ ಪ್ರಾಥಮಿಕ ಶಾಲಾ ಶಿಕ್ಷಕ..

ಸಂಘದ ಮಾಸ್ತರ ಬಂದಾಗ ಹಣ ಹೊಂದಿಸಲು ಹತ್ತಾರು ಕಡೆ ಓಡಾಡುತ್ತ ನನ್ನಲ್ಲಿಗೂ ಬರುವ ಅವರ ಸ್ಥಿತಿಗೆ ಮೊದಮೊದಲು ಮರುಗಿ ಒಂದಿಷ್ಟು ಕೊಡುತ್ತಿದ್ದೆನಾದರೂ ಇದು ಎಂದೂ ಮುಗಿಯದ , ಹಣ ಕೂಡ ಮರಳಿ ಬರದ ಪ್ರಕ್ರಿಯೆ ಎಂದು ಗೊತ್ತಾದ ಮೇಲೆ ನಿಲ್ಲಿಸಿಬಿಟ್ಟೆ.. ಶಾಲೆ ಮಕ್ಕಳ ಕಣ್ಣು ಕಿವಿಗೆ ಬೀಳುವ ಈ ಜಗಳ, ಶಾಪ, ಕೈ ಮಿಲಾಯಿಸಾಟವನ್ನು ವಠಾರದಿಂದ ಗಡಿಪಾರು ಮಾಡಲು ಚಂದ ರೀತಿಯಿಂದ ಹೇಳಿ ಪ್ರಯತ್ನಿಸಿದರೂ ಲಾಗೂ ಬೀಳದ ಕಾರಣ ಸಿಟ್ಟಾಗಿ ಅವರನ್ನೆಲ್ಲ ಕೋಲು ಹಿಡಿದು ದನ ಅಟ್ಟಿದ ಹಾಗೆ ಓಡಿಸಬೇಕಾಯ್ತು ಒಂದು ದಿನ ಶಾಲೆಯ ಕಂಪೌಂಡಿನಿಂದ ….

ಪಾಪ ಅವರು.. ಆದರೇನು ಮಾಡೋದು ಕೊಂಚ ಕಾಲದ ಮಟ್ಟಿಗಾದರೂ ಮಕ್ಕಳನ್ನು ಅವರ ಗೋಜಲಿನಿಂದ ಬಿಡಿಸಿ ಶಾಂತ ಉಸಿರಾಟಕ್ಕೆ, ಆಟ ಓಟ ಪಾಠ ಹಾಡು ಕುಣಿತಕ್ಕೆ ಪಾಡುಮಾಡಿ ಜೋಡಿಸಲು ಏನಾದರೊಂದು ಇಂತಹುಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ ಶಿಕ್ಷಕ.

ಈಗ

ಕೊರೋನಾ ಕಾಲದಲ್ಲಿ ಮನೆಗೆಲಸವೂ ಕೈ ತಪ್ಪಿ ಹೋಗಿ ಬಿ ಪಿ ಎಲ್ ಕಾರ್ಡುದಾರರಿಗೆ ಕೊಡುವ ತಲಾ ಏಳರಂತೆ ಮೂವತ್ತು ಮೂವತ್ತೈದು ಕಿಲೋ ಪುಕ್ಕಟೆ ಅಕ್ಕಿ ತಂದು ಗಂಜಿ ಕುದಿಸಿ ನೆಂಚಿಕೊಳ್ಳಲು ಏನೂ ಇಲ್ಲದೆ ಎರಡೂ ಹೊತ್ತು ಉಂಡಿತು ಇಡೀ ಊರಿಗೆ ಊರು.. ಇಂತಹುದೇ ಊರುಗಳು ತುಂಬಿವೆ ನಮ್ಮ ಭಾರತದ ಉದ್ದಗಲಕ್ಕೆ..

“ಅಕ್ಕಿಯೊಂದು ತಂದುಕೊಂಡೆ ಸೊಸೈಟಿಯಿಂದ.. ಇನ್ನು ಒಂದು ತಿಂಗಳು ಚಿಂತಿಲ್ಲ” ಎಂದು ಬರೀ ಅಕ್ಕಿಗೆ ನೆಮ್ಮದಿ ಹೊಂದುವ ಊರಿನಲ್ಲಿ ಶಾಲೆಯ ಮಕ್ಕಳಿಗೆ  ವಿಟಮಿನ್, ಪ್ರೋಟೀನ್, ಮಿನರಲ್ಸ್, ಲಿಪಿಡ್, ಕಾರ್ಬೋಹೈಡ್ರೇಟುಗಳ ಕುರಿತ ಯಾವ ಚಟುವಟಿಕಾಧಾರಿತ ಪಾಠವೂ ನಿರೀಕ್ಷಿತ ಪ್ರಮಾಣದಲ್ಲಿ ತಲೆಗೆ ಹೊಕ್ಕುವುದಿಲ್ಲ..

‘ಹಸಿವು ಅಪೌಷ್ಟಿಕತೆ ನಿವಾರಣೆ’ ಜಗದ ಮುಂದಿರುವ ಎರಡು ಜ್ವಲಂತ ಸಮಸ್ಯೆಗಳು.

ಈಗಿನ ಸಮೀಕ್ಷೆಯ ಪ್ರಕಾರ ಐದು ವರ್ಷದೊಳಗಿನ ಮೂವತ್ತು ಲಕ್ಷ ಮಕ್ಕಳು ಇದರಿಂದಲೇ ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ.ಅದೇ ರೀತಿ ರಕ್ತಹೀನತೆಯಿಂದಾಗಿ ಬಸುರಿ ಬಾಣಂತಿಯರು…

ವಿಶ್ವಸಂಸ್ಥೆ, ಸ್ಥಳೀಯ ಸರ್ಕಾರ, ಸಂಘಸಂಸ್ಥೆಗಳು ಪ್ರತಿವರ್ಷ ಸಪ್ಟೆಂಬರ್ ತಿಂಗಳಲ್ಲಿ ‘ರಾಷ್ಟ್ರೀಯ ಪೌಷ್ಟಿಕ ಅಭಿಯಾನ’ ನಡೆಸುತ್ತಿವೆ. ಶಾಲೆಯ ಬಿಸಿಯೂಟ, ಅಂಗನವಾಡಿಯ ಪೌಷ್ಟಿಕ ಆಹಾರಗಳು ಶತಮಾನದ ಈ ರಕ್ತಹೀನತೆಯ ಕೊರತೆ ನೀಗಿಸಲು’ ಅರೆಕಾಸಿನ ಮಜ್ಜಿಗೆ’ಯಾಗಿವೆ.

ಪೋಷಣಾ ಅಭಿಯಾನದ ಅಂಗವಾಗಿ ಸುತ್ತೋಲೆಯ ಪ್ರಕಾರ ಜಾತಾ, ಪೋಷಕರಿಗೆ ತಿಳಿವಳಿಕೆ, ಕಿಶೋರಿಯರಿಗೆ ಬಸುರಿ ಬಾಣಂತಿಯರಿಗೆ ಮಾತ್ರೆ, ಬಾಲ್ಯವಿವಾಹದ ಬಗ್ಗೆ ಅರಿವು, ತಪಾಸಣೆ, ಇತ್ಯಾದಿಗಳನ್ನೆಲ್ಲ ಶೈಕ್ಷಣಿಕ ಕಾರ್ಯಕ್ರಮಗಳ ಜೊತೆಜೊತೆಗೆ ನಡೆಸುತ್ತ ಅಂಗನವಾಡಿ ಅಕ್ಕೋರು, ಶಾಲೆಯ ಶಿಕ್ಷಕರು ಸುಸ್ತಾಗುತ್ತಿದ್ದಾರೆ.. ಯಾವ ಅಭಿಯಾನವೂ ಹಣ್ಣು ಹಾಲು ತರಕಾರಿ ಕಾಳುಬೇಳೆ ಕೊಂಡು ಅಟ್ಟು ತಿನ್ನುವಷ್ಟು ಅವರನ್ನು ಬಲವಂತರನ್ನಾಗಿ ಮಾಡುತ್ತಿಲ್ಲ.. 

“ನೀವೇನು ಪೋಷಣಾ ಅಭಿಯಾನ ನಡೆಸಿದಿರಿ ಫೋಟೋ ಕಳಿಸಿ, ಆ್ಯಪ್‌ನಲ್ಲಿ ತಕ್ಷಣ ತುಂಬಿ” ಎಂಬ ಆದೇಶಕ್ಕನುಗುಣವಾಗಿ ಅಕ್ಕಿ, ನುಗ್ಗೇಸೊಪ್ಪು ಬಿಟ್ಟರೆ ಇನ್ನೇನೂ ಹುಟ್ಟದ ಊರಲ್ಲಿ ಎಲ್ಲ ಹಣ್ಣು ತರಕಾರಿ ತಿಂಡಿಗಳನ್ನು ಸ್ವಂತ ಖರ್ಚಿನಲಿ ಕೊಂಡು ತಂದು ಪೋಷಣೆ ಮತ್ತು ಆಹಾರದ ಮಹತ್ವದ ಬಗ್ಗೆ ಶಾಲೆ, ಅಂಗನವಾಡಿಯಲ್ಲಿ ವಿವರಿಸಿ, ಪ್ರದರ್ಶಿಸಿ ಆಸೆಗಂಗಳಲ್ಲಿ ನೋಡುವ ಊರ ಹೆಂಗೂಸುಗಳ ಕಣ್ಣಮುಂದೆ ತಾನು ತಂದ ಯಾವ ಸಾಮಗ್ರಿಯನ್ನೂ ಅಕ್ಕೋರಿಗೆ ಮತ್ತೆ ಮನೆ ಬದಿಗೆ ಕೊಂಡೊಯ್ಯಲು ಮನಸ್ಸೊಪ್ಪದೇ ಎಲ್ಲವನ್ನೂ ತದನಂತರದಲ್ಲಿ ಅವರಿಗೆ ಹಂಚಿ ಅಂದಿನ ಪೋಷಣಾ ಅಭಿಯಾನ  ಮುಗಿಯತ್ತದೆ…… 

ಅದರ ಮರುದಿನ ಮತ್ತದೇ ಅಕ್ಕಿನುಚ್ಚಿನ ಗಂಜಿ.. ಮತ್ತದೇ ‘ಸಂಘದ ಮಾಸ್ತರನ ಸಾಲ ತುಂಬಲು ಎಲ್ಲಿ ದುಡ್ಡು ಹೊಂಚಲಿ’ ಓಡಾಟ….

October 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Vasudeva Sharma

    ವಾಸ್ತವದ ಕತೆಯನ್ನ ಬಹಳ ಸ್ಪಷ್ಟವಾಗಿ ಕಣ್ಣ ಮುಂದೆ ತಂದಿದ್ದೀರಿ.

    ಪ್ರತಿಕ್ರಿಯೆ
    • ರೇಣುಕಾ ರಮಾನಂದ

      ವಾಸುದೇವ ಸರ್ ಧನ್ಯವಾದ ತಮ್ಮ ಓದಿಗೆ

      ಪ್ರತಿಕ್ರಿಯೆ
  2. Kala Bhagwat

    ಆಪ್ತ ಬರಹ. ಚಿಂತನೀಯ ವಿಷಯದ ಶೈಲಿ ಓದಲು ಖುಶಿ.

    ಪ್ರತಿಕ್ರಿಯೆ
    • ರೇಣುಕಾ ರಮಾನಂದ

      ಥ್ಯಾಂಕ್ಯೂ ಕಲಾ..ನಿಮಗೆ ಪ್ರೀತಿ

      ಪ್ರತಿಕ್ರಿಯೆ
  3. ರೇಣುಕಾ ರಮಾನಂದ

    ಶ್ರವಣಕುಮಾರಿ ಮೇಡಂ..ಥ್ಯಾಂಕ್ಯೂ

    ಪ್ರತಿಕ್ರಿಯೆ
  4. Rajeev Venkataraman

    ನಮ್ಮ ಮಣ್ಣು.. ನಮ್ಮ ದೈನಂದಿನ ಬದುಕು.. ಮತ್ತು ಅದರೊಳಗಿನ ನಿತ್ಯದ ಹೋರಾಟವನ್ನ ಎಳೆ ಎಳೆಯಾಗಿ ತೋರಿಸಿದ್ದಿರಿ..ನಿಮ್ಮ ಪ್ರಯತ್ವಕ್ಕೆ ಒಂದು ಸಲಾಂ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: