ಮದುವೆ ಎಂಬುದು ಹೀಗಿರಲಿ..

ಮಂತ್ರ ಮಾಂಗಲ್ಯ ಮತ್ತು ಬೀಜ ತಾಂಬೂಲ

ತುಮಕೂರಿನ ಡಾ.ಅತಿಶ ಮತ್ತು ಡಾ. ರಂಜಿತಾರ ಮಂತ್ರ ಮಾಂಗಲ್ಯ ಮದುವೆಯ ತಾಂಬೂಲವಾಗಿ ದೇಸಿ ಬೀಜದ ಪ್ಯಾಕೆಟನ್ನು ನೀಡಲಾಯಿತು.

Sahaja Seeds ಈ ಸಂದರ್ಭಕ್ಕೆಂದೇ ವಿಶೇಷ ಬೀಜ ಪ್ಯಾಕೆಟ್ ಸಿದ್ದಗೊಳಿಸಿತ್ತು.

‘ನಮ್ಮ ಮದುವೆಯ ನೆನಪು ಈ ಬೀಜಗಳೊಂದಿಗೆ ಸದಾ ಹಸಿರಾಗಿರಲಿ’ ಎಂಬ ಆಶಯದ ಈ ಪ್ರಯತ್ನ ಹೆಚ್ಚು ಹೆಚ್ಚು ಜನಪ್ರಿಯವಾಗಬೇಕಿದೆ. ಮದುವೆ, ನಾಮಕರಣ, ಗೃಹ ಪ್ರವೇಶ ಮೊದಲಾದ ಶುಭ ಸಂದರ್ಭಕ್ಕೆ ಬೀಜದ ಕೊಡುಗೆ ನೀಡುವ ಸಂಪ್ರದಾಯ ಶುರುವಾಗಬೇಕು.

ಬೀಜ ಉಳಿಸಿದ ಪುಣ್ಯ, ಬೀಜ ಸಂರಕ್ಷಕರ ಬೆಂಬಲಿಸಿದ ಹೆಮ್ಮೆ ನಮ್ಮದಾಗುತ್ತದೆ.

ಬೀಜದ ಪ್ಯಾಕೆಟ್ ಗಳಿಗಾಗಿ www.sahajaseeds.in ಸಂಪರ್ಕಿಸಿ

-ಜಿ ಕೃಷ್ಣಪ್ರಸಾದ್ 

ಒಂದು ಬೆರಗಿನ ಖುಷಿ ನನಗೆ..

ಆದರ್ಶಗಳನ್ನು ಮಾತಾಡುವುದಕ್ಕೂ ಆಚರಿಸುವುದಕ್ಕೂ ಬಹಳಾನೇ ವ್ಯತ್ಯಾಸವಿದೆ. ಮಾತಾಡೋರು ನಮಗೆ ಲಕ್ಷೋಪಲಕ್ಷ ಜನ ಸಿಗ್ತಾರೆ. ಆದ್ರೆ ಪಾಲಿಸೋರು ಆಗಾಗ ಅಲ್ಲಲ್ಲಿ ಕಾಣಿಸಿಕೊಳ್ತಾರೆ. ಅಂಥವರ ಆಚರಣೆಗಳನ್ನ ಕಂಡಾಗ ಮನಸು ತುಂಬಿ ಬರುತ್ತೆ. ಇದ್ದರೆ ಹೀಗಿರಬೇಕು ಅನಿಸುತ್ತೆ. ಎಲ್ಲದರ ಬಗ್ಗೆಯೂ ಎಷ್ಟು ಸೂಕ್ಷ್ಮವಾಗಿ ಯೋಚಿಸಿ ಹೆಜ್ಜೆ ಇಡ್ತಾರ್ಲ್ವಾ ಅನಿಸಿ ಖುಷಿ ಆಗುತ್ತೆ, ಬೆರಗು ಮೂಡುತ್ತೆ. ನಿನ್ನೆ ಮನೆಗೆ ಆಮಂತ್ರಣ ಪತ್ರಿಕೆಯೊಂದು ಬಂದಾಗ, ಅಂಥ ಒಂದು ಬೆರಗಿನ ಖುಷಿ ನನಗೆ.

ಹೊರಗಿನ ಕವರ್ ನೋಡಿದ್ರೆ ಸಿಂಪಲ್ ಆಗಿತ್ತು. ಅದನ್ನ ನೋಡಿ, ‘ಅಡ್ಡಿಯಿಲ್ಲ ಒಣ ಪ್ರತಿಷ್ಠೆಗಾಗಿ ದುಂದು ಮಾಡಿಲ್ಲ’ ಅಂದುಕೊಳ್ತಾ ಕವರ್ ತೆರೆದೆ. ನಮ್ಮದಿರುತ್ತಲ್ಲ ಎರಡೋ ಮೂರೋ ಪೇಜಿನದು ಹಾಗಿರ್ಲಿಲ್ಲ ಅದು. ಚೆಂದದೊಂದು ಕುಸೂರಿ ಇರುವ ಮೇಲ್ಹೊದಿಕೆಯನ್ನು ಹೊದ್ದ ಒಂದೇ ಪುಟದ ಕಾರ್ಡ್. ಓದುತ್ತಾ ಹೋದೆ. ಆರತಕ್ಷತೆಗೆ ಆಮಂತ್ರಣ. ಸ್ಥಳ ಒಂದು ಅನಾಥಾಶ್ರಮ. ಇದು ತುಂಬಾ ಅಪರೂಪವಾದರೂ ಮುಂಚೆಯೆ ಗೊತ್ತಾಗಿತ್ತಾದ್ರಿಂದ ಮುಂದೆ ಓದುತ್ತಾ ಹೋದೆ. ಚೆಂದದ ವಿನ್ಯಾಸ. ಯಾವುದೇ ಆಡಂಬರಗಳಿಲ್ಲದ, ಕೆಲವು ಬಗೆಯ ಕಲಾವಿದರ ಕಲೆಗಳನ್ನು ಆಸ್ವಾದಿಸಲು ಅವಕಾಶ ಅಂದು. ಉಡುಗೊರೆಯಾಗಲಿ ಹೂಗುಚ್ಛಗಳಾಗಲಿ ಬೇಡ ಎಂಬ ನಮ್ರ ವಿನಂತಿ.

ಇತ್ತೀಚೆಗೆ ಹೀಗೆ ಕೆಲವರು ಮಾಡ್ತಾರೆ ಅನ್ನೋದನ್ನ ಕಂಡಿದ್ದ ನನಗೆ ಅಚ್ಚರಿಯಾಗಲಿಲ್ಲ. ಅಚ್ಚರಿಗೆ ಕಾರಣವಾಗಿದ್ದು ಈ ಆಮಂತ್ರಣ ಪತ್ರಿಕೆಯನ್ನ ನೆಲದಲ್ಲಿ ಬಿತ್ತಿ, ಹಸಿರನ್ನು ಬೆಳೆಸಬಹುದು ಅನ್ನುವುದನ್ನು ಓದಿ! ಆಹ್ವಾನ ಪತ್ರಿಕೆ ಬೀಜವನ್ನ ತನ್ನೊಳಗೆ ಹುದುಗಿಸಿಕೊಂಡಿದೆ!! ಸಿಕ್ಕಾಪಟ್ಟೆ ರೋಮಾಂಚನ ಆಗೋಯ್ತು ನನಗದನ್ನ ಓದಿ. ಮತ್ತು ‘ಆದರ್ಶ ಕೇವಲ ಮಾತಲ್ಲಲ್ಲ, ವೈಯಕ್ತಿಕ ಬದುಕಿನ ಆಚರಣೆಯಲ್ಲೂ ಸಹ ಅಳವಡಿಸಿಕೊಂಡವನು ನಾನು’ ಅನ್ನೋದನ್ನ ನಿರೂಪಿಸಿದ್ದನ್ನು ಕಂಡು ಹೆಮ್ಮೆ ಆಯಿತು.

ನಮ್ಮ ಅದಿತಿಯ ಮದುವೆ ಮಾಡುವಾಗ, ಈ ಡಿಜಿಟಲ್ ಯುಗದಲ್ಲಿ ಸುಮ್ಮನೆ ಕಾರ್ಡುಗಳು (ಆ ಮೂಲಕ ಕಾಡು) ವ್ಯರ್ಥವಾಗುವುದು ಬೇಡ ಎಂದುಕೊಂಡು ಕಡಿಮೆ ಕಾರ್ಡುಗಳನ್ನು ಛಾಪಿಸಿದ್ದೆವು ನಾವು. ಆದರೂ ಅನಿವಾರ್ಯ ಕಾರಣದಿಂದಾಗಿ ಒಂದಿಷ್ಟು ಕಾರ್ಡುಗಳು ಉಳಿದವು ಮನೆಯಲ್ಲಿ. ಯಾರ ಮನೆಗಳಿಗೆ ತಲುಪಿದವೊ, ಮದುವೆಯ ನಂತರ ಅವರಿಗೇನು ಉಪಯೋಗವಿಲ್ಲ ಅದರಿಂದ ಅನ್ನುವ ವಾಸ್ತವ ಗೊತ್ತಿದ್ದೂ ಅನಿವಾರ್ಯ ಅನ್ಕೊಳ್ತಾ ಕಾರ್ಡ್ ಹಂಚಿದ್ದೆವು. ಇಂಥದ್ದೊಂದು ಕಾರ್ಡ್ ಮಾಡಿಸಬಹುದೆಂಬ ಯೋಚನೆಯೂ ಸುಳಿದಿರಲಿಲ್ಲ ನಮ್ಮ ತಲೆಯಲ್ಲಿ. ಯೋಚನೆ ಬಿಡಿ ಇದರ ಬಗ್ಗೆ ಯಾವುದೇ ಐಡಿಯಾ ಕೂಡಾ ಇರ್ಲಿಲ್ಲ ನಮಗೆ.

ವಿದೇಶದಲ್ಲಿ ಹುಟ್ಟಿ ಬೆಳೆದ, ಬುದ್ದಿವಂತ ಸುರಸುಂದರಾಂಗ ಹುಡುಗನೊಬ್ಬ, ಮೂಲ ಬೇರಿನ ನೆಲೆಗೆ ಮರಳಿ, ಕನ್ನಡವನ್ನು ಇನ್ನಷ್ಟು ಚೆಂದ ಮಾಡಿಕೊಳ್ಳುತ್ತಲೇ ಇಲ್ಲಿನ ಅನೇಕರ ನೋವಿಗೆ ದನಿಯಾಗಿ, ಅವರ ಪರ ಹೋರಾಟ ಮಾಡುತ್ತಾ, ತನ್ನಂತೆಯೇ ಅನೇಕ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಂಥ ಹುಡುಗಿಗೆ ಮನಸೋತು, ಬೇರೆ ರಾಜ್ಯದವರಾದ ಆಕೆಗೆ ಕನ್ನಡ ಕಲಿಸುವ ಮೂಲಕ ಆಕೆಯನ್ನೂ ಕನ್ನಡತಿಯಾಗಿಸಿ, ಮದುವೆಯಾಗುತ್ತಿರುವವರು ಕನ್ನಡ ಸಿನಿಮಾಗಳ ನಾಯಕ ನಟ ಚೇತನ್.
ಇಂಥ ಅನುಕರಣೀಯ ಅಪರೂಪದ ಜೋಡಿ ಸದಾ ಸುಖವಾಗಿರಲಿ. ಇವರಿಬ್ಬರ ದಾಂಪತ್ಯ ಮಧುರವಾಗಿರಲಿ.

-ಜಯಲಕ್ಷ್ಮಿ ಪಾಟೀಲ್ 

 

‍ಲೇಖಕರು avadhi

January 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: