ಮಂಡಲಗಿರಿ ಪ್ರಸನ್ನ ಓದಿದ `ಮಕ್ಕಳೇನು ಸಣ್ಣವರಲ್ಲ’ ಕಥೆಗಳು

ಮಂಡಲಗಿರಿ ಪ್ರಸನ್ನ

ರಾಯಚೂರು ನೆಲದಲ್ಲಿ ಲಲಿತ ಪ್ರಬಂಧ ಹಾಗೂ ಮಕ್ಕಳ ಸಾಹಿತ್ಯದ ಬರವಣಿಗೆಯ ಲವಲವಿಕೆಯ ಹೆಸರು ಗುಂಡೂರಾವ ದೇಸಾಯಿ ಮಸ್ಕಿ. ಮೂರು ಲಲಿತ ಪ್ರಬಂಧ ಸಂಕಲನ, ಒಂದು ಹಾಸ್ಯ ಬರಹಗಳ ಸಂಕಲನ ಮತ್ತು ಒಂದು ಮಕ್ಕಳ ಕಾವ್ಯ ಸಂಕಲನ ಪ್ರಕಟಿಸಿರುವ ದೇಸಾಯಿಯವರು ಇದೀಗ ಮಕ್ಕಳ ಕಥಾ ಸಂಕಲನ `ಮಕ್ಕಳೇನು ಸಣ್ಣವರಲ್ಲ’ಪ್ರಕಟಿಸಿದ್ದಾರೆ.

ಪ್ರಸ್ತುತ ಸಂಕಲನದಲ್ಲಿ ಒಟ್ಟು ೧೨ ಕಥೆಗಳಿದ್ದು ಎಲ್ಲ ಕಥೆಗಳು ವಿಭಿನ್ನ ನೆಲೆಯಲ್ಲಿವೆ. ಪಂಚತಂತ್ರ ಮಾದರಿಯ ಪೊರೆಯಿಂದ ಮೆಲ್ಲಗೆ ಕಳಚಿಕೊಳ್ಳುತ್ತಿರುವ ಮಕ್ಕಳ ಸಾಹಿತ್ಯವೂ ಪ್ರೌಢ ಕಥಾ ಸಾಹಿತ್ಯದ ಮಾದರಿಯಲ್ಲಿ ಹೊಸ ದಿಕ್ಕಿನೆಡೆಗೆ ಹೊರಳುತ್ತಿರುವುದರ ಸಾಂಕೇತಿಕತೆಯಂತೆ ಗುಂಡುರಾವ್ ದೇಸಾಯಿಯವರ ಈ ಸಂಕಲನದ ಮಕ್ಕಳ ಕಥೆಗಳ ವಸ್ತು, ವಿಚಾರ, ನಿರೂಪಣೆ ವಿಭಿನ್ನವಾಗಿದ್ದು, ಅವುಗಳಲ್ಲಿ ಕೆಲ ಕಥೆಗಳು ವರ್ತಮಾನದ ಸಂಗತಿಗಳಿಗೆ ಸ್ಪಂದಿಸುವ ತೀವ್ರತೆಯನ್ನು ಕಾಪಿಟ್ಟುಕೊಂಡಿವೆ.

ಭಾರತೀಯ ಇಂಗ್ಲೀಷ್ ಮಕ್ಕಳ ಸಾಹಿತ್ಯದ ಬರಹಗಾರ ರಸ್ಕಿನ್ ಬಾಂಡ್ ಮತ್ತು ಕನ್ನಡದವರೆ ಆದ ನಾ.ಡಿಸೋಜ, ಆನಂದ ಪಾಟೀಲ, ತಮ್ಮಣ್ಣ ಬೀಗಾರ ಸೇರಿದಂತೆ ಮಕ್ಕಳ ಕಥಾ ಲೋಕದ ಈಗಿನ ಕೆಲ ಇತರ ಬರಹಗಾರರಂತೆ ತಮ್ಮ ಬಾಲ್ಯದ ಅನುಭವಗಳನ್ನು ಹಾಗೂ ಸುತ್ತಲಿನ ಪರಿಸರದ ಘಟನೆಗಳನ್ನೆ ಹೆಕ್ಕಿ ಆಧರಿಸಿದ ವಿಶಿಷ್ಟ ಅನುಭವಗಳ ಕಥನಗಳೆ ಗುಂಡುರಾವ ದೇಸಾಯಿ ಕಥಾ ಹಂದರಗಳಾಗಿ ಇಲ್ಲಿನ ಬಹುತೇಕ ಕಥೆಗಳಲ್ಲಿ ಮೈದಳೆದಿದ್ದು ವಸ್ತು-ವಿಷಯಕ್ಕೆ ಅವರು ಅನಗತ್ಯವಾಗಿ ತಡಕಾಡಿದ ಹಾಗಿಲ್ಲ.

ಮನೆಯ ಪರಿಸರ, ಮಕ್ಕಳು, ಅವರ ಶಿಕ್ಷಕ ವೃತ್ತಿಯ ವಲಯದಲ್ಲಿ ನೋಡುವ ವಿದ್ಯಾರ್ಥಿಗಳ ಚಟುವಟಿಕೆಗಳು ಮತ್ತು ಹಲವು ಘಟನೆಗಳು, ಸಂಧಿಸುವ ಪಾತ್ರಗಳು, ಮಕ್ಕಳನ್ನು ಆಪ್ತವಾಗಿ, ಕುತೂಹಲದಿಂದ ಗಮನಿಸಿದ ಅಂಶಗಳೆ ಇಲ್ಲಿನ ಕಥೆಗಳು. ಕಥೆಗಾರರೆ ಇಲ್ಲಿ ನಿರೂಪಕರಾಗಿ, ಹಿರಿಯ ವಯಸ್ಸಿನ ತಾಯಿ, ಮಡದಿ ಹಾಗೂ ಮಕ್ಕಳು ಮತ್ತು ಶಾಲಾ ಮಕ್ಕಳ ನಡುವೆ ಬಂದು ಹೋಗುವ ಹಲವು ಸಾಂದರ್ಭಿಕ ವಿಷಯಾಧಾರಿತ ಅನುಭವಗಳಿಗೆ ಕಥೆಗಾರ ರೂಪ ನೀಡಿದ್ದಾರೆ.

ಎಲ್ಲೂ ಗಂಭೀರ ಎನಿಸದ ಈ ಸಂಕಲನದ ಕಥೆಗಳು ಲಲಿತ ಪ್ರಬಂಧಗಳ ಮಾದರಿಯ ಸುಲಲಿತ ನಿರೂಪಣೆ ಮತ್ತು ತಿಳಿಹಾಸ್ಯದ ಮಿಶ್ರದಿಂದಾಗಿ ಮುದನೀಡುತ್ತವೆ. ಪ್ರಾಣಿಗಳ ಕುರಿತು ಮಕ್ಕಳಲ್ಲಿನ ಅಪ್ರಕಟಿತ ಒಲವು, ನಾಯಿಯೊಂದಿಗಿನ ಮಕ್ಕಳ ಚೆಲ್ಲಾಟ ಅಜ್ಜಿಯ ಪ್ರಾಣ ಸಂಕಟದಂತಿರುವು `ನಾಯಿಯೊಂದಿಗಿನ ಸಖ್ಯ’, ಮಕ್ಕಳ ಕುತೂಹಲದ ಸಂಕೇತವಾಗಿ `ಮಗ ಮತ್ತು ಗಾಳಿಪಟ’ ಕಥೆಗಳು, ನವೀನತೆಯ ನಿರೂಪಣೆಯಿಂದ ಕೂಡಿವೆ.

`ದೆವ್ವ ಬಂತು ದೆವ್ವ’ ಹಾಗೂ `ಚಿರತೆ ಮತ್ತು ಸ್ನಾಕ್ಸ್’ ಕಥೆ ಮಕ್ಕಳ ರಮ್ಯತೆಯ ಲೋಕಕ್ಕೆ ಲಗ್ಗೆ ಹಾಕಿದರೆ,  `ಎಗ್ ರೈಸ್ ಮಂತ್ರಿ’ ವರ್ತಮಾನದ ಚುನಾವಣೆಗಳ ಪ್ರಹಸನವನ್ನು ಮಕ್ಕಳ ಮೂಲಕ ವಿಡಂಬಿಸುತ್ತದೆ. ಮಕ್ಕಳ ಜಗಳಾಟದೊಂದಿಗೆ ತೆರೆದುಕೊಳ್ಳುವ `ಮಕ್ಕಳೇನು ಸಣ್ಣವರಲ್ಲ’ ಕಥೆ ಪಾರಿವಾಳದ ವಿಸ್ಮಯ ಲೋಕದೊಂದಿಗೆ ಮುಗಿಯುತ್ತದೆ. ಕೊನೆಯಲ್ಲಿ ಝೇಂಡಾ ಜೊತೆ ಪಾರಿವಾಳ ಹಾರುವುದು ಎಲ್ಲ ಜೀವಿಗಳಿಗೂ ತಮ್ಮದೆ ರೀತಿಯ ಸ್ವಾತಂತ್ರö್ಯವಿದೆ ಎಂಬರ್ಥದಲ್ಲಿ ಬಿಂಬಿತವಾಗಿವೆ.

`ಹೊಟ್ಟೆಯಲ್ಲಿ ಮರ’ ಮತ್ತು `ಪವಾಡ’ ಕಥೆಗಳು ತಿಳಿಹಾಸ್ಯದಿಂದಲೂ ಹಾಗೂ `ನಾನೇ ಫಸ್ಟ್’ ಕಥೆ ಅಹಂಕಾರವನ್ನು ಇಳಿಸುವಲ್ಲಿ ಯಶಸ್ವಿಯಾಗುವ ಕಥೆಗಳು. ಕಾನೂನು ರೂಪಿಸುವ ಸರ್ಕಾರಗಳೆ, ಕಾನೂನನ್ನು ಮುರಿಯುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಹೇಳುವ `ಪ್ಲಾಸ್ಟಿಕಾಯಣ’ ಕಥಾ ವಸ್ತು ಮಕ್ಕಳಿಗೆ ಕಠಿಣ ಎನಿಸಿದರು, ಪ್ಲಾಸ್ಟಿಕ್ ಮುಕ್ತಿಯ ಅಭಿಯಾನ ಒಂದು ಪ್ರಹಸನದ ಹಿನ್ನೆಲೆಯಲ್ಲಿ ವಾಸ್ತವ ಸಂಗತಿಯನ್ನು ಮಕ್ಕಳ ಮೂಲಕ ಹೇಳಲಾಗಿದೆ.

ನಾಯಿಯ ಗೆಳೆತನದಿಂದ ಬಾಲಕನೊಬ್ಬ ತನ್ನ ಆರೋಗ್ಯ ಸುಧಾರಿಸಿಕೊಂಡ, ಅದಕ್ಕೆ ಅಪರೋಕ್ಷವಾಗಿ ಸಹಾಯ ಮಾಡಿದ ಮೂಕಪ್ರಾಣಿಯ ಆಪ್ತತೆಯನ್ನು ಹೇಳುವ `ರಾಮುವಿನ ನಾಯಿ’ ಕಥೆಯಾದರೆ, ಎಳೆ ಮಕ್ಕಳಲ್ಲಿನ ವಿಚಿತ್ರ ಕೌತುಕದ ಕಥೆಯಾಗಿ `ನಾನು ನೀರಿನ ಮೇಲೆ ನಡೆಯುವೆ’ ಮೂಡಿಬಂದಿದೆ.

ಗುಂಡುರಾವ ದೇಸಾಯಿಯವರಿಗೆ ತಮ್ಮ ನೆಲದ ಭಾಷಾ ಸೊಗಡಿನ ಗಟ್ಟಿತನ ಒಲಿದಿದೆ. ಇಲ್ಲಿನ ಬಹುತೇಕ ಕಥೆಗಳು ರಾಯಚೂರು ಸೀಮೆಯ ಭಾಷೆಯಲ್ಲೆ ಮಿಂದೆದ್ದಿವೆ. ಉದಾಹರಣೆಗೆ: `ನಾವು ಬ್ರಾಂಬರು…ನಮ್ಮ ಮನೆಯಲ್ಲಿ ನಾಯಿ…..ನಿನಗ ಎಲ್ಲೇರ ತಲಿ ಕೆಟ್ಟದೆನು?’ ಎನ್ನುವ ಅಜ್ಜಿಯ ಬುದ್ಧಿಮಾತಿನ ಜೊತೆಗೆ `ಕಮರಾಮ, ಅಪದ್ ಅಪದ್, ಚಾಡಿ, ಕೊಡಾಕ, ಎಕ್ಕರಲಾಡು, ಭಾಡಕೊ….’ ಮುಂತಾದ ಪದಸಂಪತ್ತು ಸಹಜ ಸೌಂದರ್ಯ ನೀಡಿದ್ದು, ಅತ್ಯಂತ ಹಿಡಿತದಲ್ಲಿ ಗುಂಡುರಾವ ದೇಸಾಯಿ ಈ ಭಾಷಾ ಬಳಕೆ ಮಾಡಿದ್ದಾರೆ. ಭಾಷಾ ಸಮೃದ್ಧಿಯನ್ನು ದೇಸಾಯಿಯವರ ಕಥೆಗಳಲ್ಲಿ ಮತ್ತಷ್ಟು ಹೆಚ್ಚಿಸಿಕೊಂಡಲ್ಲಿ ಅವರ ಕಥೆಗಳು ಸಂಪೂರ್ಣ ಗೆಲ್ಲುತ್ತವೆ.  

`ನಾಯಿಯೊಂದಿಗಿನ ಸಖ್ಯ’ ಕಥೆಯಲ್ಲಿ `ಅಪ್ಪ ಅಕ್ಕನವರು ಹೆಣ್ಣುಮಕ್ಕಳಲ್ಲವೆ? ಹೆಣ್ಣು ನಾಯಿ ಸಾಕುವುದು ತಪ್ಪಾ?’ ಎಂದು ಮಗ ಅಪ್ಪನಿಗೆ ಸವಾಲೆಸೆಯುವ `ಮಕ್ಕಳೇನು ಸಣ್ಣವರಲ್ಲ’ ಕಥೆಗಳ ಲೇಖಕ ಗುಂಡುರಾವ ದೇಸಾಯಿ ತಮ್ಮ ಬಾಲ್ಯಕ್ಕೆ ತಿರುಗಿ, ಸಣ್ಣವರಾಗಿ ಇಲ್ಲಿನ ಕಥೆಗಳಿಗೆ ಹಿರಿತನ ನೀಡಿದ್ದಾರೆ.

‍ಲೇಖಕರು Admin

September 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Yallappa m

    ಪ್ರಸನ್ನ ಸರ್ ಅವರ ವಿವರಣೆ ಅದ್ಭುತ , ಪುಸ್ತಕ ಓದಬೇಕು ಅನಿಸುತ್ತಿದೆ ಸರ್, ಗುಂಡೂರಾವ್ ದೇಸಾಯಿ ಸರ್ ಅವರಿಗೂ ಅಭಿನಂದನೆಗಳು ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: