ಮಂಜುಳ ಸಿ ಎಸ್ ಲಹರಿ – ಅವಳು ನೀರಿನಂತವಳು !!

ಮಹಿಳಾ ದಿನಾಚರಣೆ ವಿಶೇಷ – ಗುಪ್ತಗಾಮಿನಿ

ಮಂಜುಳ ಸಿ ಎಸ್

ಅವಳು ನೀರಿನಂತವಳು !! ಅದೇ ಪ್ರಕೃತಿಯಂತೆ, ಸಹಜತೆ ಅವಳ ರೂಪ. ಸುಲಲಿತ ಲಾಲಿತ್ಯ ಅವಳ ಚಲನೆ. ಕೊನೆಯಿಲ್ಲದ ನಿರಂತರ ದಣಿವರಿಯದ ಏಕಮುಖವಾಗಿ ಪ್ರವಹಿಸುವಾಕೆ. ನಿಂತು ಸಾವರಿಸಿಕೊಂಡಿದ್ದೆ ಇಲ್ಲ. ಹಿಡಿದ ದಾರಿ ತೊರೆದು ಹಿಮ್ಮುಖವಾಗಿ ಹಿಂದಿರುಗುವ ಮಾತಿಲ್ಲ. ಗುಪ್ತ ಗಾಮಿನಿ. ತನ್ನೊಡಲ ಚಂಚಲತೆ, ತಲ್ಲಣ, ಸುಳಿವು ನೀಡದ ಅನಂತ ಸುಳಿಗಳ ತೋರದೆ ಬಾಹ್ಯರೂಪದಲ್ಲಿ ಶಾಂತ, ನಿರ್ಮಲ, ಕೋಮಲ, ಅಗಾಧತೆ, ಸೌಮ್ಯತೆ, ಮೋಹನ ರಾಗಕೆ ತಲೆದೂಗುವವಳಂತೆ ಸದಾ ಜುಳು ಜುಳು ನಾದ, ಇವಳು ಅಂತರಗಂಗೆ. ಮನವೆಂಬ ಅಂತರಾಳದ ಕೊಳಕೆ ಕಲ್ಲೆಸುವವರ ಗಳಿಗಳಿಗೆಗೂ ತಲ್ಲಣಗೊಳಿಸುವ ಕಂಪನಗಳಿಗೂ ಮೇಲ್ನೋಟಕ್ಕೆ ಕದಡಿದಂತೆ ಕಂಡರು ಮರಘಳಿಗೆ ತಂತಾನೆ ಕದಡಿದ ರಾಡಿಯ ತಿಳಿಗೊಳಿಸಿ ಕೊಳ್ಳುತಾ ಮತ್ತೆ ಮತ್ತೆ ಶುದ್ದವಾಗಿ ಕಂಗೊಳಿಸುವ ಅಂತರಗಂಗೆಯೇ.

ತನಗೆ ಬೇಕಾದ ನೆಲ ಗುಣದ ರಸವ ಹೀರಿ ಫಲವತ್ತಾಗಲು ಬಯಸುವುದು ಅವಳ ಹಂಬಲ. ತಾನು ಹರಿವ ದಾರಿಯಲ್ಲೆಲ್ಲಾ ಲೆಕ್ಕವಿರದ ಅಡೆತಡೆಗಳ ವೀರಿ ದಾಟಿ ತಾನು ಸೇರ ಬಯಸುವ ಕಡಲ ಗಮ್ಯಕ್ಕೆ ಅವಳ ಗಮನ.

ತನ್ನ ಹರಿವಿನ ಅರಿವಿನ ವಿಸ್ತರವ ತಾನೇ ಕಂಡು ಕೊಳ್ಳುವ ಇಚ್ಚೆಯಿಂದ ಕಾನನವಿರಲಿ ದುರ್ಗಮ ತಾಣವಿರಲಿ ಸಾಗುವ ಹಾದಿಯಲಿ ದೊರಕುವುದು ಸತ್ವವೋ ಜೊಳ್ಳೊ ಪಾಲಿಗೆ ಬಂದುದು ಸ್ವೀಕರಿಸುತ ರಸವ ಒಳಗಿಳಿಸುತ್ತಾ ಕಸವ ಬದಿಗೆ ಸರಿಸುತ್ತಾ ನಿರಂತರ ಪಯಣವ ಕೆಲವೊಮ್ಮೆ ಸರಳ ಶಾಂತ ಪ್ರಶಾಂತ ತೊರೆಯಂತೆ ನಡು ನಡುವೆ ವೇಗ ಪಡೆಯುತ ಜಲಧಾರೆಯಾಗಿ ಉಕ್ಕುತ್ತಾ ಮೊರೆಯುತ್ತಾ ಅಮೋಘ ಜಲಪಾತವಾಗಿ ಧುಮ್ಮಿಕ್ಕುವ ತಲ್ಲೊಡಲ ಪ್ರಚಂಡ ಶಕ್ತಿಯ ಆಗಾಗ್ಗೆ ತೋರಿ ಅಚ್ಚರಿ ಮೂಡಿಸುವ ಮಗದೊಮ್ಮೆ ಇದ್ದಕ್ಕಿದ್ದಂತೆ ಹಿಂದಿನ ಅಗಾಧತೆಯ ಉಗಮವನ್ನೇ ಮರೆತವಳಂತೆ ಸಾಗಿಬಿಡುತ್ತಾಳೆ.

ಇವಳು ಪಾಪನಾಶಿನಿ. ಕಂಡ ಕಂಡವರು ಹಾಗೇ ಪರಮ ಪವಿತ್ರಳೆಂದು ಬಿರುದು ಕೊಟ್ಟವರೋ ಅಥವಾ ಪೂಜಿಸಿ ಆರಾಧಿಸುವ ತನ್ನವರೇ ತಿಳಿದು ತಿಳಿಯದೆಯೋ ಮಾಡಿದ ಪಾಪಗಳಿಗೆಲ್ಲ ಇವಳೇ ಮೋಕ್ಷದಾಯಿನಿ. ಅವರ ಪಾಪಗಳ ಜೊತೆಎ ತನ್ನನ್ನೂ ಮಲಿನಗೊಳಿಸಿದವರ ತಪ್ಪು ಒಪ್ಪುಗಳ ತಿದ್ದಿ ಮನ್ನಿಸಿ ತನ್ನೊಡಲಲಿ ನೂರು ತಲ್ಲಣ ಸೃಷ್ಟಿಸಿ ಕೊಳ್ಳುವ ಇವಳು ಅವಳು…ಮತ್ತೊಬ್ಬಳು ನೀರಿನಂತವಳೆ.. ಎಲ್ಲರೂ ಪಾಪ ನಾಶಿನಿಯರೇ. ಪಾಪ ಪುಣ್ಯಗಳ ಲೆಕ್ಕವಿಡದೆ ಬಾಳು ಹಸನಾಗಿಸುವ ಇವಳು ಮುನಿದರೆ ತಾನಷ್ಟೇ ಅಲ್ಲ ತನ್ನಾಶ್ರಯಿಸಿದವರ ಒಡಲು ಬರಿದಾಗುವುದ ಕಂಡವಳು. ಅದಕೆಂದೇ ತನ್ನ ಗಮ್ಯದ ಕಡಲ ಸೇರುವ ಕಾಲಕೆ ಹಂಬಲಿಸುತ ಹರಿವ ನೀರಿನಂತೆಯೇ ಅವರಿವರ ಮೆಚ್ಚಿಸುವ ಗೋಜಿಲ್ಲದೆ ತನ್ನಿಷ್ಟದ ದಾರಿಯಲಿ ಒಂಟಿಯಾಗಿಯೇ ಸಾಗುವ ಕೊನೆಯಿರು ಚಲನೆ ತೋರುವ ಚಾಲಕ ಶಕ್ತಿ.

ಮೇಲ್ನೋಟಕ್ಕೆ ಒಳಗಿನ ಸೆಳವು ಸುಳಿಗಳ ಕಂಡವರಾರು ? ಮನಸ್ಸ್ಸಿನ ಭಾವ ಸುಳಿಯಲಿ ಆಲಕ್ಕಿಳಿದಂತೆಲ್ಲ ಒಳಗೆಳೆಯುವ ಬಾಳ ಪಲ್ಲಟ ಗೊಳಿಸುವ ಸಂಗತಿಗಳ ಕೊನೆಯಿಲ್ಲದ ತಾಳ್ಮೆಯಿಂದ ನಿಭಾಯಿಸುವ ಛಾತಿ. ಏನಾದರಾಗಲಿ ಯಾನ ನಿಲ್ಲವಾರದೆಂಬ ಕಾರ್ಯ ಕಾರಣಗಳ ಹುಡುಕಿ ಹೇರಿ ಕೊಂಡು ಹಲವು ಬಾರಿ ಕದಲುವ ಸ್ವಯಂ ಭೂತ ಶಕ್ತಿಯ ಮರೆತಂತೆ ತನಗೆ ಬೇಕೆನಿಸುವ ಹಾಗೆಯೆ ಬೇಡವಾದ ಕ್ಲೀಷೆಯೆನಿಸುವ ಪಾತ್ರಗಳನೆಲ್ಲ ತಟ್ಟುಕೊಂಡು ತನ್ನದೆಂದು ಒಪ್ಪಿ ಅಪ್ಪಿ ಅದಕ್ಕೆ ತಕ್ಕ ಹಾಗೆ ತನ್ನ ತಾನು ರೂಪಿಸುಕೊಂಡವಳು. ಅಪಾರ ಸಾಧ್ಯತೆಗಳಿಗೆ ಕನಸುಗಳಿಗೆ ಅಡ್ಡಿ ಬರುವವರಿಗೆ ಸೆಡ್ಡು ಹೊಡೆದು ಪಾತ್ರ ಮೀರಿ ಮೇರೆ ಮೀರಿ ಹರಿದು ಎಲ್ಲೆ ಮೀರಿ ಪ್ರಳಯದ ಕೋಲಾಹಲ ಸೃಷ್ಟಿಸಿ ಬದುಕ ಅಲ್ಲೋಲ ಕಲ್ಲೋಲ.

ಮಾಡುವ ಪ್ರಳಯಕಾರಿಣಿಯೂ ಇವಳೆ. ನೀರಿನಂತವಳು. ಮಲೀನಗೊಳಿಸಲು ಹಾತೊರೆದು ಬರುವವರ ಬಿಂಬವೂ ಸೋಕದಂತೆ ತನ್ನೊಡಲ ಕಾಪಿಡುವ ಗುಪ್ತಗಾಮಿ ಪರಮ ಪಾವನಿ, ಪಾಪನಾಶಿನಿ….

ಅವಳ ಇವಳ ಅಂದರೆ ನೀರಿನಂತವಳ ಸಂಭ್ರಮವಾದರೂ ಎಂತದು ಎಂದು ಕೊಂಡಿರಿ ? ತನ್ನಡೊಲ ಸತುವಿಂದ ಅಲ್ಲೆಲ್ಲೋ ಬೀಜವೊಂದು ಮೊಳಕೆಯೊಡೆದರೆ, ಸಸಿಯೊಂದು ಚಿಗುತರೆ, ಅಲ್ಲೆಲ್ಲೋ ಮೊಗ್ಗೊಂದ ಅರಳಲು ಸಿದ್ದವಾದರೆ, ಅಗೋ ನಗುವ ಹೂವೊಂದು ದುಂಬಿಯ ಬೆರೆತರೂ ಇವಳಿಗೆ ಇವಳಂತವಳಿಗೆ ಸಂಭ್ರಮವೇ.. ಇಂತವಳ ಸಡಗರ ಹೇಳ ತೀರದು. ಮುಂದೊಮ್ಮೆ ತನ್ನೊಡಲು ಕಡಲ ಸೇರಿ ಸಾರ್ಥಕ್ಯಗೊಳ್ಲ ಬಹುದೆಂಬ ನಿರೀಕ್ಷೆಯೊಂದೆ ಇವಳಂತವಳ ಅವಳಂತವಳ ಅಲ್ಲ ನೀರಿಸಂತವಳ ಚಿಕ್ಕ ಆಸೆ.

ಈ ದೆಸೆಯಲ್ಲೆ ಕೆಲವೊಮ್ಮೆ ಆತುರಕೋ ಧಾವಂತಕ್ಕೊ ಸಿಲುಕಿ ಅವಸರಿಸಿ ಪಾತ್ರ ಬದಲಿಸುವ ಆವೇಗ. ತಪ್ಪಿಲ್ಲ ಅವಳ ದಾರಿ ಅವಳಿಗೆ ಬಿಟ್ಟು ಬಿಡಿ ಎಂದು ಕನಿಕರಿಸಿ ಒತ್ತಾಸೆ ನೀಡುವವರಿಲ್ಲದೆ ತಾವರೆಯಂತ ಕಂಗಳು ಹನಿಗೂಡುತ್ತವೆ. ದಿಕ್ಕು ಬದಲಾಗುವುಂಟೇ ಎಂದು ತನ್ನ ಸಂತೈಸುತ ವೇಗ ಆವೇಗವ ಕಡಿಮೆಗೊಳಿಸಿ ಮತ್ತೆ ದಾರಿ ತಾನುಟ್ಟಿದ ಮೂಲಸೆಲೆಯಿಂದ ಹೊರಟು ದಾರಿಗುಂಟ ಪಡೆದುದ ತನ್ನೊಡನೆ ತಲೆ ತಲೆಮಾರಿಗು ಸಾಗಿಸುವ ಚಿಹ್ನೆಯಂತೆ ಕಾಣ ಸಿಗುವಳು.. ಇವಳ ಅರ್ಥ ಕಳೆದು ಹೊಸತನವ ಕೂಡಿ ತನ್ನಸ್ತಿತ್ವದ ಗುರುತೇ ಸಿಗದಂತೆ ಉಪ್ಪುಗಡಲ ಬೆರೆತರೆ ಬದುಕು ಸರಾಗ. ಇಲ್ಲೇ ನೀರಿನಂತವಳ ಒಳತುಡಿತ ಮಿಡಿತಗಳ ತಾಕಲಾಟ.

ತನ್ನತನವ ಕಳೆದು ತನ್ನದಲ್ಲದ ಮತೇನನ್ನೋ ಪಡೆದುದ ಸಾರ್ಥಕ್ಯವೆಂದು ಕೊಳ್ಳುವ ಮೂಢತನವಲ್ಲ. ಅದೇ ನೀರೀನಂತವಳು ಇವಳು ಅವಳೆಂಬ ಬೇಧ ಕಾಣಲಾರಿರಿ… ನೀವು ಕಂಡದ್ದೇ ಸತ್ಯವೆಂದು ಇವರೆಲ್ಲರು ಲೆಕ್ಕವಿಟ್ಟು ನಿರೂಪಿಸ ಬಲ್ಲಷ್ಟು ಚತುರೆಯರು. ನೀವು ಕಂಡ ಆಕಾರವೇ ಪರಮ ಸತ್ಯವೆನಿಸುವಷ್ಟು ಹೊಂದಿ ಕೊಂಡಂತೆ ಕಂಡಾರು. ಮರು ಕ್ಷಣ ಮತ್ತೊಂದು ರೂಪ ಆಕಾರ ಬಣ್ಣ ಇದೇ ದಿಟವೆಂದು ಮೋಸ ಹೋದವರೆಷ್ಟೋ ? ಯಾಕದರೂ ಇವಳ ಅಸ್ತಿತ್ವ ಹುಡುಕ ಹೊರಟರೋ ..ನದಿ ಮೂಲ ಹುಡುಕುವ ಪ್ರಯಾಸವಿದು.

ಹೆಣ್ಣ ಮನಸ್ಸ ಅರಿತವರುಂಟೇ ಅರಿತು ಮಾಡುವುದಾದರು ಏನನ್ನು ? ನೀರಿನಂತವಳೆಂದು ತಿಳಿದೇ ಅವಳೊಡಲ ಕುದಿಯ ಕಂಡು ಕಾಣದಂತೆ ಕಲ್ಲೆಸೆದು ಪಟ್ಟ ಆನಂದವೆ ತದು ? ಅವರು ಕದಡಿದಷ್ಟು ಅವಳು ಇವಳು ಪದೇ ಪದೇಏನು ಆಗಿಲ್ಲವೆಂಬಬಂತೆ ತನ್ನ ಮನದ ಕೊಳವ ತಂತಾನೆ ಶಾಂತಗೊಳಿಸಿ ಕೊಳ್ಳುವ ಮತ್ತದೇಚಲನೆಗೆ ಹೊಂದಿ ಕೊಳ್ಳುವ ಇವಳು ತನ್ನದೇ ಕಂಗಳ ನೀರ ಆವಿಯಾಗಿಸಿ ಎದುರಿರುವವರದೃಷ್ಟಿಗೆ ಅರಿವಾಗದಂತೆ ದುಗುಡದ ಮೋಡಗಳಿಗೆ ಹನಿಯುಣಿಸುತ ಮತ್ತೆ ಮತೆ ಅದೇ ಮಳೆಗೆ ಒಡ್ಡಿ ಒಡಲ ತುಂಬಿಸುತ ಅದೇ ಸಂಭ್ರಮವೆಂದು ಹಿಗ್ಗುವಳು ಅಲ್ಲ ಹಿಗ್ಗಿದಂತೆ ನಟಿಸುವಳು ತನ್ನಆಕಾರ ಇದೇ ಎಂಬಂತೆ ತೋರಿಕೊಳ್ಳಿತ್ತಾ ಕಾರಣ ಅವಳಿಗದು ಅಭ್ಯಾಸ ಹೋಗಿದೆ.

ಅವಳು ಇವಳು……… ನೀರಿನಂತವಳೆ !!!!ಬದುಕಿನ ದಾರಿಯಲಿ ಅದೇ ಚಲನೆ…ನಿರಂತರ ಚಲನೆ.

‍ಲೇಖಕರು Admin

March 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: