ಇನ್ನೂ ಕನಸಾಗಿಯೇ ಉಳಿದ ‘ಸುಲ್ತಾನಾಳ ಕನಸು’

 ‘ಸುಲ್ತಾನಾಳ ಕನಸ್ಸಿನ’  ಸಶಕ್ತ ಮಹಿಳಾ ಲೋಕ

ಡಾ ಜ್ಯೋತಿ

ಮಾರ್ಚ್ 8 ಪುನಃ ಬಂದಿದೆ. ಈ ದಿನ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷದ ಮಹಿಳಾದಿನದ ಧ್ಯೇಯ ವಾಕ್ಯ ‘ಸುಸ್ಥಿರ ನಾಳೆಗಾಗಿ, ಇಂದು ಲಿಂಗ ಸಮಾನತೆ.’ ಈ ಸಂದರ್ಭದಲ್ಲಿ, ಮಹಿಳಾ ಸಮಾನತೆಗಾಗಿ ‘ತಾರತಮ್ಯ ಮತ್ತು ಪೂರ್ವಗ್ರಹ ಮುಕ್ತ’ ಜಗತ್ತನ್ನು ಸೃಷ್ಟಿಸುವ ಸಂಕಲ್ಪ ಕೈಗೊಳ್ಳುವ ಕರೆ ನೀಡಲಾಗಿದೆ. ಈ ಪ್ರಸ್ತುತತೆಯಲ್ಲಿ ನೆನಪಾಗುವ ಸಾಹಿತ್ಯ ಕೃತಿಯೆಂದರೆ, ಭಾರತೀಯ ಮಹಿಳಾ ಸಾಹಿತ್ಯಕ್ಕೆ ವಿಶೇಷ ಆರಂಭಿಕ ಕೊಡುಗೆಯೆನ್ನಬಹುದಾದ, 1905 ರಲ್ಲಿ ಪ್ರಕಟವಾದ ‘ಸುಲ್ತಾನಾಳ ಕನಸು (ಸುಲ್ತಾನಾಸ್ ಡ್ರೀಮ್)’. ಇದನ್ನು ಬರೆದಿರುವವರು, ಮುಸ್ಲಿಂ ಸ್ತ್ರಿವಾದಿ ಸಾಹಿತಿ ರೋಕಿಯಾ ಸಹಕಾವತ್ ಹೊಸೈನ್ (ಬೇಗಂ ರೋಕಿಯಾ). ಈ ಕಥೆಯನ್ನು ಚೆನ್ನೈ ಮೂಲದ ಇಂಗ್ಲಿಷ್ ನಿಯತಕಾಲಿಕ ‘ದಿ ಇಂಡಿಯನ್ ಲೇಡೀಸ್’ ಪ್ರಕಟಿಸಿತು.

ಹಾಗಿದ್ದಲ್ಲಿ, ಸುಲ್ತಾನಾಳ ಕನಸಿನ ವಿನೂತನ ಹಾಗು ವಿಭಿನ್ನ ಪ್ರಪಂಚವನ್ನು, ನೂರು ವರುಷಗಳ ಹಿಂದೆ ಓದುಗರ ಮುಂದಿಟ್ಟ ಬೇಗಂ ರೊಕೆಯಾ ಯಾರು? ಈಕೆ, 1880ರಲ್ಲಿ ವಸಾಹತುಶಾಹಿ ಭಾರತದ ಭಾಗವಾಗಿದ್ದ ಈಗಿನ ಬಾಂಗ್ಲಾದೇಶದಲ್ಲಿ, ಒಂದು ಸಂಪ್ರದಾಯಸ್ಥ ಶ್ರೀಮಂತ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಅವರ ಸಹೋದರರು ಹೊರಗೆ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣ ಪಡೆದರೆ, ಈಕೆ ಮನೆಯೊಳಗೆ ಶಿಕ್ಷಣ ಪಡೆಯಬೇಕಾಯಿತು. ತನ್ನ 16ನೇ ವಯಸ್ಸಿನಲ್ಲಿ ಒಬ್ಬ ಉದಾರವಾದಿ ಮ್ಯಾಜಿಸ್ಟ್ರೇಟನ್ನು ಮದುವೆಯಾದ   ಬೇಗಂ ರೊಕೆಯಾ, ಗಂಡನ ಸಹಾಯದೊಂದಿಗೆ ಇಂಗ್ಲಿಷ್ ಮತ್ತು ಬಂಗಾಳಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿ, ತನ್ನ ಬಿಡುವಿನ ವೇಳೆಯನ್ನು ಕಳೆಯಲು ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ಈಕೆ, ತನ್ನ ಸ್ವಂತ ಹಣದಿಂದ ಕೋಲ್ಕತ್ತಾದಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ತೆರೆದರು. ಅನಂತರ, ಮುಸ್ಲಿಂ ಮಹಿಳೆಯರ ಅಭಿವೃದ್ದಿಗಾಗಿ ಸಂಘಟನೆಯನ್ನು ಸ್ಥಾಪಿಸಿದರು. ಅದರೊಂದಿಗೆ, ಮುಸ್ಲಿಂ ಮಹಿಳೆಯರಲ್ಲಿ ಸ್ವಜಾಗ್ರತಿಯನ್ನು ಎಚ್ಚರಿಸುವ ದೆಸೆಯಲ್ಲಿ, ಹಲವಾರು ಪ್ರಬಂಧಗಳನ್ನು ಬರೆದು ಪ್ರಕಟಿಸಿದ್ದಾರೆ.

‘ಸುಲ್ತಾನಳ ಕನಸು’, ಜಾಗತಿಕ ಮಹಿಳಾ ಸಬಲೀಕರಣದ ದಾರಿಯಲ್ಲಿ ಬಹಳ ವಿಶಿಷ್ಟವಾಗಿ ಗುರುತಿಸಬಹುದಾದ ಕೃತಿ. ಇಲ್ಲಿ ನಮಗೆ ದರ್ಶನವಾಗುವುದು ಒಂದು ಸಂಪೂರ್ಣ ಕಾಲ್ಪನಿಕ, ಆದರೆ, ಅತ್ಯಂತ ಸಶಕ್ತ ಮಹಿಳಾ ಪ್ರಪಂಚ. ಲೇಖಕಿ ಬೇಗಂ ರೊಕೆಯಾ, ಆ ಕಾಲದಲ್ಲಿ ಇನ್ನೂ ಸಂಶೋಧನೆಯಾಗದ ಅತ್ಯದ್ಭುತ ವಿನೂತನ ವೈಜ್ಞಾನಿಕ ಆವಿಷ್ಕಾರಗಳನ್ನು ಸಹ ಪರಿಚಯಿಸಿದ್ದಾರೆ. ಆದ್ದರಿಂದ, ಇದನ್ನು ವಿಜ್ಞಾನ ಸಾಹಿತ್ಯವೆಂದು ಕೂಡ ಗುರುತಿಸುತ್ತಾರೆ. ಇದು ಲೇಖಕಿಯ ಯೋಚನಾಲಹರಿಯ ಅಗಾಧ ಶಕ್ತಿಯನ್ನು ಪರಿಚಯಿಸುತ್ತದೆ. ಈ ಕಥೆ ಆರಂಭವಾಗುವುದು, ಕಥಾನಾಯಕಿ ಹಾಗು ನಿರೂಪಕಿ ಸುಲ್ತಾನಾಳ ನಿದ್ರೆಯೊಂದಿಗೆ. ಅವಳು, ಭಾರತೀಯ ಮಹಿಳೆಯರ ವರ್ತಮಾನದ ದುಸ್ಥಿತಿಯ ಕುರಿತು ಯೋಚಿಸುತ್ತಾ ನಿದ್ರಿಸುತ್ತಾಳೆ. ಆಗ ಮೂಡುವ ಕನಸೇ ಈ ಕಥೆ. 

ಆಗ ಬೆಳಗಿನ ಹೊತ್ತು. ಸುಲ್ತಾನಾಳ ಕೊಠಡಿಯೊಳಗೆ, ಸ್ನೇಹಿತೆ ಸಿಸ್ಟರ್ ಸಾರಾಳ ಪ್ರವೇಶವಾಗುತ್ತದೆ. ಅವಳು ಸುಲ್ತಾನಾಳನ್ನು ಹೊರಗೆ ಉದ್ಯಾನದಲ್ಲಿ ಸುತ್ತಾಡಲು ಕರೆಯುತ್ತಾಳೆ. ಅದಕ್ಕೆ ಸುಲ್ತಾನಾ, ‘ಈ ಹೊತ್ತಿನಲ್ಲಿ ಹೊರಗೆ ಗಂಡಸರು  ಓಡಾಡುತ್ತಿರುತ್ತಾರೆ, ತಾನು ಹೇಗೆ ಬರಲಿ?’ ಎಂದು ಹಿಂಜರಿಯುತ್ತಾಳೆ. ಗೆಳತಿಯ ಒತ್ತಾಯಕ್ಕೆ ಹೊರಗಡೆ ಕಾಲಿಟ್ಟ ಸುಲ್ತಾನಾಳಿಗೆ, ಬೀದಿಯಲ್ಲಿ ಯಾವ ಗಂಡಸೂ ಕಾಣಿಸುವುದಿಲ್ಲ. ಅವಳು ಅಳುಕುತ್ತಲೇ ನಡೆಯುತ್ತಿರುವಾಗ, ಬೀದಿಯಲ್ಲಿ ಎದುರಾದ ಕೆಲವು ಹೆಣ್ಣುಮಕ್ಕಳು ಸುಲ್ತಾನಾಳನ್ನು ನೋಡಿ ಅಪಹಾಸ್ಯ ಮಾಡುತ್ತಾರೆ. ಸಾರಾಳಲ್ಲಿ ಕೇಳಿದಾಗ,’ ನೀನು ಗಂಡಸರಂತೆ ಅಂಜುಬುರುಕಿ, ಧೈರ್ಯವಿಲ್ಲವೆಂದು ಅವರು ಹೇಳುತ್ತಿದ್ದಾರೆ.’ ಎಂದು ಸಾರಾ ಅಣಕಿಸುತ್ತಾಳೆ. ತಕ್ಷಣ, ಸುಲ್ತಾನಾಳಿಗೆ ತಾನೊಂದು ಬೇರೆ ಪ್ರಪಂಚದಲ್ಲಿದ್ದೇನೆ ಮತ್ತು ಈ ಸಾರಾ ನನ್ನ ಸ್ನೇಹಿತೆಯಲ್ಲ, ಇನ್ನೊಂದು ಪ್ರಪಂಚದವಳು ಎನ್ನುವ ಅರಿವಾಗುತ್ತದೆ. ಆದರೂ ಸುಲ್ತಾನಾ ಕುತೂಹಲದಿಂದ ಮುಂದುವರಿಯುತ್ತಾಳೆ.   

ನಡೆಯುತ್ತಾ ಒಂದು ಕ್ಷಣ ಆಭಾಸವೆನಿಸಿ, ಸುಲ್ತಾನಾ ಸಾರಾಳಲ್ಲಿ ಹೇಳುತ್ತಾಳೆ, ‘ನಾನು ಹಿಜಾಬ್ ಧರಿಸಿ ಬಂದಿಲ್ಲ. ನನಗೆ ಅದಿಲ್ಲದೆ ಹೊರಗೆ ಸುತ್ತಾಡಿ ಅಭ್ಯಾಸವಿಲ್ಲ.’  ಅದಕ್ಕೆ, ಸಾರಾ ಸಮಜಾಯಿಸುತ್ತಾಳೆ, ‘ನೀನೇನೂ ಚಿಂತಿಸುವ ಅಗತ್ಯವಿಲ್ಲ. ಇದು ಲೇಡಿ ಲ್ಯಾಂಡ್ (ಸ್ತ್ರಿ ಲೋಕ). ಇಲ್ಲಿ ಪುರುಷರು ಹೊರಗೆ ಅನಗತ್ಯವಾಗಿ ಸುತ್ತಾಡುವುದಿಲ್ಲ.’

ಸುಲ್ತಾನಾ ಅಚ್ಚರಿಯಿಂದ ಸುತ್ತಲೂ ನೋಡುತ್ತಾಳೆ. ನಿಜ. ಲೇಡಿ ಲ್ಯಾಂಡ್ ಒಂದು ಸುಂದರ ಉದ್ಯಾನದಂತಿದೆ. ಎಲ್ಲೆಡೆ ಹೂವಿನ ಗಿಡಗಳು, ಕೈಬೀಸಿ ಕರೆಯುತ್ತಿವೆ. ಸಾರಾ ಹೇಳುತ್ತಾಳೆ, ‘ನಾವು ಇಡೀ ಪ್ರಪಂಚವನ್ನು ಹೀಗೆಯೇ ಸುಂದರವಾಗಿಸಬಹುದು, ನಿನ್ನ ಕೋಲ್ಕತ್ತವನ್ನೂ ಕೂಡ. ಅಲ್ಲೆಲ್ಲಾ ಇಲ್ಲಿನಂತೆಯೇ ಮಹಿಳೆಯರು ಅಧಿಕಾರದಲ್ಲಿದ್ದರೆ…’

ಈ ವಿಭಿನ್ನ ಲೋಕವನ್ನು ಮನದಣಿಯೇ ನೋಡುತ್ತಾ, ಸುಲ್ತಾನಾ ಕೇಳುತ್ತಾಳೆ, ‘ಇಲ್ಲಿನ ಪುರುಷರೆಲ್ಲಾ ಎಲ್ಲಿದ್ದಾರೆ?’  ಅದಕ್ಕೆ, ಸಾರಾ ನಗುತ್ತಾ ಹೇಳುತ್ತಾಳೆ, ‘ನಿನ್ನ ಭಾರತದಲ್ಲಿ ಮಹಿಳೆಯರು ಹೇಗೆ ಮನೆಯೊಳಗೇ ಇರುತ್ತಾರೋ, ಹಾಗೆಯೇ, ಇಲ್ಲಿ ಪುರುಷರೆಲ್ಲಾ ಮನೆಯಲ್ಲಿದ್ದಾರೆ.’ ಸುಲ್ತಾನಾಳಿಗೆ ನಂಬಲಿಕ್ಕಾಗುವುದಿಲ್ಲ.  ಸಾಮಾನ್ಯ ಗ್ರಹಿಕೆಯಂತೆ, ಅವಳೂ ಹೇಳುತ್ತಾಳೆ, ‘ಮಹಿಳೆಯರಿಗೆ ಹೊರಜಗತ್ತು ಅಷ್ಟು ಕ್ಷೇಮವಲ್ಲ. ಯಾಕೆಂದರೆ, ಅವರು ದೈಹಿಕವಾಗಿ ದುರ್ಬಲರು.’ ಆದರೆ, ಸಾರಾ ಅದಕ್ಕೆ ಸಮ್ಮತಿಸುವುದಿಲ್ಲ.  ಸ್ವಲ್ಪ ಸಿಡಿಮಿಡಿಗೊಂಡು ಅವಳೆನ್ನುತ್ತಾಳೆ, ‘ಕ್ರೂರ ಪ್ರಾಣಿಗಳು ಹಾಗು ಪುರುಷರು ಹೊರಗೆ ಸ್ವೇಚ್ಚಚಾರವಾಗಿ ಓಡಾಡುವಾಗ, ಮಹಿಳೆಯರು ದುರ್ಬಲರಂತೆ ಕಾಣಿಸುತ್ತಾರೆ. ಹೀಗೆ, ಮಹಿಳೆಯರನ್ನು ಮನೆಯ ಒಳಗೆ, ಪುರುಷರನ್ನು ಹೊರಗೆ ಅಡ್ಡಾಡಲು ಬಿಡುವುದೆಂದರೆ, ಸಭ್ಯರನ್ನು ಗೃಹಬಂಧನದಲ್ಲಿಟ್ಟು, ತೊಂದರೆ ಕೊಡುವವರನ್ನು ಹೊರಗೆ ಮೇಯಲು ಬಿಟ್ಟಂತೆ. ಲೇಡಿ ಲ್ಯಾಂಡಿನಲ್ಲಿ ಅದೆಲ್ಲಾ ನಡೆಯೋದಿಲ್ಲ.’

ಅದಕ್ಕೆ, ಸುಲ್ತಾನಾ ಉತ್ತರವಾಗಿ ‘ನಮ್ಮ ನಾಡಿನಲ್ಲಿ ಮಹಿಳೆಯರಿಗೆ ಅವರಿಷ್ಟದಂತೆ ಬದುಕುವ ಹಕ್ಕಿಲ್ಲ. ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಪುರುಷನಿಗೆ ಮಾತ್ರ. ಅವರು ದೈಹಿಕವಾಗಿ ಪ್ರಭಲರು ಕೂಡ. ‘ ಅನ್ನುತ್ತಾಳೆ.  ಸಾರಾ ಈ ಮಾತನ್ನು ಅಲ್ಲಗಳೆಯುತ್ತಾಳೆ, ‘ಸಿಂಹಗಳೂ ಕೂಡ ಪುರುಷರಿಗಿಂತ ಪ್ರಭಲವಾಗಿವೆ. ಆದರೆ, ಅವುಗಳು ಪ್ರಪಂಚವನ್ನು ಆಳುತ್ತಿಲ್ಲವಲ್ಲ? ನಿಮ್ಮ ನಾಡಿನಲ್ಲಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸದೆ ಮೂಲೆಗುಂಪಾಗಿದ್ದಾರೆ, ಅಷ್ಟೇ.’ 

ಹೀಗೆ, ಸುಲ್ತಾನಾ ಮತ್ತು ಸಾರಾ ಒಂದು ಕಡೆ ಕುಳಿತುಕೊಂಡು, ಕೈಯಲ್ಲಿ ಸೂಜಿ ಹಿಡಿದು ಬಟ್ಟೆಯ ಮೇಲೆ ಎಂಬ್ರಾಯಿಡರಿ ಕೆಲಸ ಮಾಡುತ್ತಾ ಹರಟುತ್ತಾರೆ. ಆಗ ಸಾರಾ ಹೇಳುತ್ತಾಳೆ, ‘ನಮ್ಮ ಲೇಡಿ ಲ್ಯಾಂಡಿನಲ್ಲಿ, ಮಹಿಳೆಯರು ಹೊರಗಿನ ಕೆಲಸದ ಜೊತೆ ಜೊತೆಗೆ, ಈ ಕಸೂತಿ ಕೆಲಸವನ್ನು ಅವರೇ ಮಾಡುತ್ತಾರೆ. ಯಾಕೆಂದರೆ, ಗಂಡಸರು ಇನ್ನೂ ಕೂಡ ತಾಳ್ಮೆಯಿಂದ ಸೂಜಿಗೆ ದಾರ ಹಾಕುವುದನ್ನು ಕಲಿತುಕೊಂಡಿಲ್ಲ. ಹೆಂಗಸರು ಎಲ್ಲಾ ಕಡೆ ಸಲ್ಲುತ್ತಾರೆ. ಗಂಡಸರು ಎರಡು ಗಂಟೆ ಮಾಡುವ ಕೆಲಸವನ್ನು 7 ಗಂಟೆಗೆ ತಳ್ಳುತ್ತಾರೆ. ಅವರಿಗೆ ವಿರಾಮಗಳು ಹೆಚ್ಚು ಬೇಕು. ಸಿಗರೇಟು ಸೇದುವುದು, ಹರಟೆ ಹೊಡೆಯುವುದು ಇತ್ಯಾದಿಗಳಲ್ಲೇ ಆಸಕ್ತಿ ಜಾಸ್ತಿ.’ 

ಸಾರಾ ಮುಂದುವರಿಸುತ್ತಾಳೆ, ‘ನಮ್ಮ ರಾಜ್ಯದಲ್ಲಿಈಗ ಸೊಳ್ಳೆಗಳಿಲ್ಲ, ಯಾವುದೇ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವುದಿಲ್ಲ. ಮಕ್ಕಳು ಕಾಯಿಲೆಯಿಂದ ಸಾಯುವುದಿಲ್ಲ. ಇಲ್ಲಿ ವಿಜ್ಞಾನ ಬಹಳ ಮುಂದುವರಿದಿದೆ. ಅಡುಗೆಗೂ ಕೂಡ ಸೌರ ವಿದ್ಯುತ್ ಬಳಸುತ್ತೇವೆ. ಈ ಆವಿಷ್ಕಾರಗಳು ಇತ್ತೀಚಿಗೆ ಆಗಿರುವಂತಹದ್ದು. ನಮ್ಮ ರಾಜ್ಯದ ಮಹಾರಾಣಿ ಆದೇಶ ಹೊರಡಿಸಿದ್ದಾಳೆ- ‘ಹೆಣ್ಣು ಮಕ್ಕಳೆಲ್ಲಾ ಅಕ್ಷರಸ್ಥರಾಗಲೇ ಬೇಕು. 21 ವರುಷದವರೆಗೆ ಯಾರು ಮದುವೆಯಾಗುವ ಹಾಗಿಲ್ಲ. ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮೋಡದಿಂದ ಮಳೆನೀರು ಸಂಗ್ರಹ ಮಾಡುವ ತಂತ್ರಜ್ಞಾನ ಕಂಡುಹಿಡಿಯಲಾಗಿದೆ.’

ಸುಲ್ತಾನಾ ಆಸಕ್ತಿಯಿಂದ ಕೇಳಿಸಿಕೊಂಡಂತೆ, ಸಾರಾ ಮುಂದುವರಿಸುತ್ತಾಳೆ- ‘ಹೀಗೆ, ನಮ್ಮ ಮಹಿಳೆಯರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ವಹಿಸಿಕೊಂಡಂತೆ, ಅದನ್ನು ಅಪಹಾಸ್ಯ ಮತ್ತು ಅಪನಂಬಿಕೆಯಿಂದ ನೋಡಿದ ನಮ್ಮ ರಾಜ್ಯದ ಪುರುಷರು, ದೇಶರಕ್ಷಣೆಗಾಗಿ ಸೈನ್ಯವನ್ನು ಸಜ್ಜುಗೊಳಿಸುವುದರಲ್ಲಿ ನಿರತರಾದರು. ಆಗ, ನಮ್ಮ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳು ಬಹಳ ಸಂಯಮದಿಂದ ಎಲ್ಲಾ ಮಹಿಳೆಯರಿಗೆ ಹೀಗೆ ಹೇಳಿದರು, ‘ನೀವು ನಿಮ್ಮ ಕೆಲಸದಲ್ಲಿ ಗಮನಹರಿಸಿ. ಗಂಡಸರ ಕುಹಕಕ್ಕೆ ಪ್ರತಿಕ್ರಿಯೆ ಕೊಡಬೇಡಿ. ಉತ್ತರಿಸುವುದಕ್ಕೆ ಕಾಲ ಕೂಡಿ ಬರುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದಿರಿ.’    

ಲೇಡಿ ಲ್ಯಾಂಡಿನಲ್ಲಿ, ಈ ತರಹದ ಸ್ತ್ರೀ -ಪುರುಷ ವರ್ಗಗಳ ನಡುವಿನ ಭಿನ್ನಾಭಿಪ್ರಾಯಗಳ ನಡುವೆ, ಇವರ ಶಕ್ತಿ ಪ್ರದರ್ಶನದ ಅವಕಾಶವೊಂದು ಒದಗಿಬಂತು. ಇವರ ರಾಜ್ಯಕ್ಕೆ, ಸಂಕಷ್ಟದಲ್ಲಿದ್ದ ಪಕ್ಕದ ರಾಜ್ಯದ ವಲಸಿಗರು, ರಾಜಾಶ್ರಯ ಪಡೆಯಲು  ಬಂದರು. ಆಗಲೇ ಯುದ್ಧ ಸನ್ನದ್ಧರಾಗಿದ್ದ ಪುರುಷರೆಲ್ಲಾ ಆತುರದಿಂದ ಯುದ್ಧ ಮಾಡಲು ಹೋಗಿ ಸೋತು ವಾಪಸ್ಸಾದರು. ಆಗ, ವಿಶ್ವವಿದ್ಯಾನಿಲಯದ ಮಹಿಳಾ ಕುಲಪತಿ ಒಂದು ಯುದ್ಧ ಯೋಜನೆ ಸಿದ್ಧಪಡಿಸಿದರು. ಅವರು ಪುರುಷರನ್ನೆಲ್ಲಾ ಮನೆಯೊಳಗೇ ಸೇರಲು ಆದೇಶಿಸಿದರು. ಮಾರನೆಯ ದಿನ ಮಹಿಳೆಯರೆಲ್ಲಾ ಮಹಿಳಾ ಕುಲಪತಿಯ ನೇತೃತ್ವದಲ್ಲಿ ಯುದ್ಧಭೂಮಿಗೆ ನಡೆದರು. ತಾವು ಕಂಡುಹಿಡಿದ ತಂತ್ರಜ್ಞಾನದಿಂದ, ವಿರೋಧಿ ಸೈನ್ಯದ ಮೇಲೆ ಸೂರ್ಯ ಕಿರಣಗಳನ್ನು ಹರಿಸಿ, ಅವರನ್ನು ಹಿಮ್ಮೆಟ್ಟಿಸಿದರು. 

ಈ ಘಟನೆಯ ನಂತರ, ಯಾರು ಕೂಡ ಲೇಡಿ ಲ್ಯಾಂಡಿಗೆ ದಾಳಿ ಮಾಡುವ ಧೈರ್ಯ ಮಾಡಲಿಲ್ಲ. ಆಮೇಲೆ, ಮಹಿಳೆಯರು ಹೊರಜಗತ್ತಿನ ಎಲ್ಲಾ ವ್ಯವಹಾರಗಳನ್ನು ಬಹಳ ಯಶಸ್ವಿಯಾಗಿ ನಿರ್ವಹಿಸತೊಡಗಿದರು ಮತ್ತು ಪುರುಷರು ತಂತಮ್ಮ ಮನೆಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಯಿತು. ಪುರುಷರ ಅವಶ್ಯಕತೆ ಬಿದ್ದರೆ, ಅವರನ್ನು ಹೊರಗೆ ಕರೆದುಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಲಾಯಿತು. 

ಈ ಘಟನೆ ನಡೆದು ಹತ್ತು ವರುಷಗಳಾಗಿದೆ. ಆದರೆ, ಅಂತಹ ಅವಕಾಶ ಬರಲೇ ಇಲ್ಲ. ಯಾಕೆಂದರೆ, ಪುರುಷರು ಮನೆ ಸೇರಿದ ನಂತರ, ಹೊರಜಗತ್ತಿನಲ್ಲಿ, ಯಾವುದೇ ಅಹಿತಕರ ಘಟನೆ ನಡೆಯಲೇ ಇಲ್ಲ. ಈ ನಡುವೆ, ಮಹಿಳೆಯರು ಹೊರಗೆ ಕೃಷಿ ಮಾಡಿದರು. ವಿನೂತನ ಯಂತ್ರಗಳನ್ನು ಕಂಡು ಹಿಡಿದು, ಜನೋಪಯೋಗಿ ಕೆಲಸ ಮಾಡಿದರು. ಅವರು ಪಾಲಿಸಿದ ಧರ್ಮ, ಪ್ರೀತಿ ಮತ್ತು ಶಾಂತಿಯನ್ನು ಉಪದೇಶಿಸಿತು, ಅಲ್ಲಿ ದ್ವೇಷ ಮತ್ತು ಯುದ್ಧಕ್ಕೆ ಅವಕಾಶವಿರಲಿಲ್ಲ. ಅಲ್ಲಿ ಯಾರಿಗೂ ಗಲ್ಲುಶಿಕ್ಷೆ ಇರಲಿಲ್ಲ, ಬದಲಾಗಿ ಅಪರಾಧಿಗಳ ಮನಃಪರಿವರ್ತನೆಯತ್ತ ಗಮನಹರಿಸಲಾಯಿತು. 

ಇದನ್ನೆಲ್ಲಾ ಕೇಳಿದ ಮೇಲೆ, ಸುಲ್ತಾನಾಳಿಗೆ ಅಲ್ಲಿನ ರಾಣಿಯನ್ನು ಭೇಟಿಮಾಡುವ ಇಚ್ಛೆಯಾಗಿ, ಸಾರಾಳಲ್ಲಿ ವಿನಂತಿ ಮಾಡಿಕೊಳ್ಳುತ್ತಾಳೆ. ಅವರಿಬ್ಬರೂ, ಮಹಿಳೆಯರೇ ನಿರ್ಮಿಸಿದ ಹೈಡ್ರೋಜನ್ ಕಾರಿನಲ್ಲಿ ರಾಣಿಯ ಅರಮನೆ ತಲುಪುತ್ತಾರೆ. ರಾಣಿ, ಸುಲ್ತಾನಾಳನ್ನು ಪ್ರೀತಿಯಿಂದ ಸ್ವಾಗತಿಸಿ ಹೇಳುತ್ತಾಳೆ, ‘ನಾವು ಕೇವಲ ಮಹಿಳೆಯರೊಂದಿಗೆ ಮಾತ್ರ ವ್ಯವಹಾರ ಮಾಡುತ್ತೇವೆ, ಅದೂ ಕೂಡ ಜ್ಞಾನವನ್ನು ಪಡೆಯುವುದರಲ್ಲಿ ಮಾತ್ರ ನಮ್ಮ ಆಸಕ್ತಿ, ಸಂಪತ್ತಿನಲ್ಲಲ್ಲ. ಪ್ರಕೃತಿ ನಮಗೆ ಎಲ್ಲಾ ಕೊಟ್ಟಿದೆ.’

ಇಷ್ಟಾಗುವಾಗ, ಸುಲ್ತಾನಾಳಿಗೆ ತಕ್ಷಣ ಎಚ್ಚರವಾಗಿ ಸುತ್ತಲೂ ನೋಡುತ್ತಾಳೆ. ಅಲ್ಲಿ ಸಾರಾ ಇರಲಿಲ್ಲ, ಲೇಡಿ ಲ್ಯಾಂಡ್ ಕೂಡ ಇರಲಿಲ್ಲ. ಅವಳಿಗೆ, ತಾನು ಭಾರತದ ವಾಸ್ತವ ಜಗತ್ತಿನಲ್ಲಿ ಇರುವುದು ಅರಿವಾಗುತ್ತದೆ.      

ಈ ರೀತಿ, ಬೇಗಂ ರೊಕೆಯಾ, ವಾಸ್ತವ ಜಗತ್ತಿನಲ್ಲಿ ಕಾಣಸಿಗದ ಸಶಕ್ತ ಮಹಿಳಾ ಪ್ರಪಂಚವನ್ನು, ಕನಸಿನ ಮೂಲಕ ಒಂದು ಸಾಧ್ಯತೆಯಾಗಿ ಪರಿಚಯಿಸುತ್ತಾರೆ. ಮಹಿಳೆಯರ ಮೇಲಾಗುವ ನಾನಾ ರೀತಿಯ ದೌರ್ಜನ್ಯಕ್ಕೆ ಕಾರಣವಾಗಿರುವ ಪುರುಷ ಮನಸ್ಸುಗಳಿಗೆ ನಿಯಂತ್ರಣ ಹೇರುವ ಮೂಲಕ ಒಂದು ಸಹನೀಯ ಪ್ರಪಂಚ ನಿರ್ಮಾಣ ಸಾಧ್ಯವೆನ್ನುವುದನ್ನು ಕೂಡ ಇಲ್ಲಿ ಹೇಳುತ್ತಿದ್ದಾರೆ. ಮಹಿಳೆಯರಿಗೆ ಪರಿಪೂರ್ಣ ಸ್ವಾತಂತ್ರ್ಯ ಸಿಕ್ಕಲ್ಲಿ, ಅವರು ಆಡಳಿತ ಹಾಗು ವಿಜ್ಞಾನದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಬಲ್ಲರು ಎನ್ನುವುದನ್ನು ತೋರಿಸಿದ್ದಾರೆ. 

ಒಟ್ಟಿನಲ್ಲಿ, ಮಹಿಳಾ ಲೋಕಕ್ಕೆ ಇನ್ನೂ ಮರೀಚಿಕೆಯಾಗಿ ಉಳಿದಿರುವ ಸಮಾನತೆ, ಮತ್ತು ಸ್ವಾತಂತ್ರ್ಯದ ಪ್ರಸ್ತುತತೆಯನ್ನು ಈ ಕತೆಯಲ್ಲಿ ಚರ್ಚಿಸಲಾಗಿದೆ. ಹೀಗೆ, ‘ಸುಲ್ತಾನಾಳ ಕನಸು’, ಮಹಿಳಾ ಓದುಗರಿಗೆ ತಮ್ಮ ಬದುಕಿನ ಪರ್ಯಾಯ ಸಾಧ್ಯತೆಗಳನ್ನು ಪರಿಚಯಿಸುತ್ತದೆ.

‍ಲೇಖಕರು Admin

March 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: