ಮಂಜುಳಾ ಹಿರೇಮಠ್ ಕವಿತೆಗಳು ಕಾಲದ ಕನ್ನಡಿ

ಮಂಜುಳಾ ಹಿರೇಮಠ್ ಅವರ ಕವನ ಸಂಕಲನ ನಾಡಿನ ಓದುಗರ ಗಮನ ಸೆಳೆದಿದೆ.

ಈ ಕೃತಿಗೆ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರು ಬರೆದ ಮುನ್ನುಡಿ ಇಲ್ಲಿದೆ-

ಸುಬ್ರಾಯ ಚೊಕ್ಕಾಡಿ

ಮಂಜುಳಾ ಹಿರೇಮಠ ಅವರನ್ನು ನಾನು ಭೇಟಿಯಾದದ್ದು ಈಗ್ಗೆ ಸುಮಾರು ಎರಡು ವರ್ಷಗಳ ಹಿಂದೆ, ಶಿರಸಿಯಲ್ಲಿ ನಡೆದ ‘ಕಾವ್ಯ – ಕೇಳಿ’ ಗುಂಪಿನ ಸಮಾವೇಶದಲ್ಲಿ. ಆಗ ನನಗವರು ಕಾಣಿಸಿದ್ದು ಒಬ್ಬ ಸಾಮಾನ್ಯ ಶಾಲಾ ಶಿಕ್ಷಕಿಯ ಹಾಗೂ ಸಭ್ಯ ಗೃಹಿಣಿಯ ರೂಪದಲ್ಲಿ. ಆದರೆ ಆಮೇಲೆ ಅಲ್ಲಿಲ್ಲಿ ಅವರ ಕವಿತೆಗಳು ಕಾಣಿಸಿಕೊಂಡು, ನನ್ನ ಗಮನ ಸೆಳೆಯುತ್ತಾ ಹೋದಂತೆ, ಅವರ ಕವಿತ್ವದ ಶಕ್ತಿಯ ಪರಿಚಯವಾಗತೊಡಗಿತು.

ಈಚೆಗೆ ಅವರು ತಮ್ಮ ಚೊಚ್ಚಲ ಕವನ ಸಂಕಲನದ ಹಸ್ತಪ್ರತಿಯನ್ನು ನನಗೆ ಕಳಿಸಿಕೊಟ್ಟು ಅದಕ್ಕೆ ಮುನ್ನುಡಿಯ ನಾಲ್ಕು ಮಾತು ಬರೆದುಕೊಡಬೇಕೆಂದು ಕೇಳಿಕೊಂಡಾಗ, ಇಲ್ಲವೆನ್ನಲಾಗಲಿಲ್ಲ. ಯಾಕೆಂದರೆ ಅದಾಗಲೇ ಅವರ ಕವಿತೆಗಳು ನನ್ನ ಗಮನವನ್ನು ಸೆಳೆದಿದ್ದವು.

ಕವಿತೆಯೆನ್ನುವುದು ಅನಿರ್ವಚನೀಯವಾದದ್ದು ಅಂದರೆ ಮಾತಿನಲ್ಲಿ ಹೇಳಲಾಗದ್ದು. ಹೇಳಿಯೂ ಹೇಳದೇ ಉಳಿದು ಆ ಕಡೆಗೆ ಕೈತೋರಿಸುವಂಥಾದ್ದು. ಸಾಲುಗಳ ನಡುವಿನ ಮೌನದಲ್ಲಿ ಹೊಳೆಯುವಂಥಾದ್ದು. ಕವಿತೆ ಉಪದೇಶಿಸುವುದಿಲ್ಲ. ಅದು ವಿಚಾರಗಳ ಮಂಡನೆಯಲ್ಲ. ಅದು ಕೇವಲ ಛಂದಸ್ಸಿನ ಜಿಡುಕು ರಚನೆಯಲ್ಲ. ಅದು ಸಮಾಜ ಪರಿವರ್ತನೆಗಾಗಿ ಇರುವುದೂ ಅಲ್ಲ. ಅದಕ್ಕಾಗಿ ಬೇರೆಯೇ ಜನರಿದ್ದಾರೆ. ಕವಿತೆಯೆನ್ನುವುದು ಒಂದು ವಿಶಿಷ್ಟ ಅನುಭವದ ಅಭಿವ್ಯಕ್ತಿ; ಒಂದು ದರ್ಶನ. ಕವಿಯ ವೈಯಕ್ತಿಕ ಅನುಭವ ಹಾಗೂ ಅವನ ಲೋಕಾನುಭವದ ಮುಖಾಮುಖಿಯಲ್ಲಿ ಹುಟ್ಟಿಕೊಳ್ಳುವ ವಿಶಿಷ್ಟ ಅನುಭವ. ಆ ಅನುಭವವು ಕವಿಗೆ ದಕ್ಕುವುದು ರೂಪಕ, ಪ್ರತಿಮೆ, ಸಂಕೇತ…ಇತ್ಯಾದಿಗಳ ರೂಪದಲ್ಲಿ.

ಆತ್ಮಸ್ವರೂಪಿಯಾದ ಈ ಆಕೃತಿಗೆ ಸೂಕ್ತ ಕಾವ್ಯ ಶರೀರವನ್ನು ಒದಗಿಸುವುದು ಕವಿಗೆ ಸವಾಲೇ ಆಗಿದೆ. ಆ ಸವಾಲನ್ನೆದುರಿಸಲು ಅವಶ್ಯವಾದ ಸಂಯಮ, ಅಧ್ಯಯನದ ಅನುಭವ, ಕಾವ್ಯ ಶರೀರ ರೂಪುಗೊಳ್ಳಲು ಅಗತ್ಯವಾದ ಭಾಷೆಯ ಶುದ್ಧ ಹಾಗೂ ಸೂಕ್ಷ್ಮ ರೂಪದ ಅರಿವು ಕವಿಗೆ ಇರಬೇಕಾಗುತ್ತದೆ.

ಮಂಜುಳಾ ಅವರು ಈ ನಿಟ್ಟಿನಲ್ಲಿ ತಕ್ಕ ಮಟ್ಟಿಗೆ ಸರಿಯಾದ ಹಾದಿಯನ್ನೇ ಹಿಡಿದು ತಮ್ಮ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ ಎಂಬುದು ಅವರ ಈ ‘ಗಾಯಗೊಂಡವರಿಗೆ’ ಎನ್ನುವ ಮೊದಲ ಸಂಕಲನದಲ್ಲಿನ ಕವಿತೆಗಳನ್ನು ನೋಡುವಾಗ ಅರಿವಾಗುತ್ತದೆ. ಇದು ನಿಜಕ್ಕೂ ಸಂತೋಷದ ಸಂಗತಿಯಾಗಿದೆ.

ಈ ಸಂಕಲನದಲ್ಲಿ 40 ಕವಿತೆಗಳಿವೆ. ಅವುಗಳಲ್ಲಿ ಬಹುತೇಕ ಕವಿತೆಗಳಲ್ಲಿ, ಅವರು ಸರಿಯಾದ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಎನ್ನುವುದಕ್ಕೆ ಸೂಚನೆಗಳಿವೆ. ಇಂದು ಬರೆಯುತ್ತಿರುವ ಅನೇಕ ಹೊಸ ಕವಿಗಳ ಕವಿತೆಗಳಲ್ಲಿ ರೂಪಕಗಳ ದಟ್ಟಣೆ, ಲಯ ವೈವಿಧ್ಯವಿಲ್ಲದೆ ಕಾಣಿಸಿಕೊಳ್ಳುವ ಏಕತಾನತೆ, ಪದಗಳ ಅರ್ಥಪೂರ್ಣ ಬಳಕೆಯ ಕೊರತೆ ಮೊದಲಾದವುಗಳೊಂದಿಗೆ ವೈಚಾರಿಕತೆಯ ಭಾರದಿಂದ ಮರೆಗೆ ಸರಿದಂತೆ ಕಾಣಿಸುವ ಭಾವದ ನಡುವೆ ಮಂಜುಳಾ ಅವರು ಭಿನ್ನರಾಗಿ ಕಾಣಿಸುತ್ತಾರೆ.

ಅವರ ‘ಹಕ್ಕಿ ಆಕಾಶದ್ದು’ ಕವಿತೆಯನ್ನೇ ಗಮನಿಸಿ:

‘ಹಕ್ಕಿ’ ಎನ್ನುವ ಕೇಂದ್ರ ರೂಪಕದ ಸುತ್ತ ಹಬ್ಬಿಕೊಳ್ಳುವ ಕವಿತೆಯ ಬಳ್ಳಿಯು, ಆ ರೂಪಕದ ವ್ಯಾಪಕತೆಯನ್ನು ಹಂತ ಹಂತವಾಗಿ ಒಂದು ಚರಣದಿಂದ ಇನ್ನೊಂದು ಚರಣಕ್ಕೆ ವಿಸ್ತರಿಸಿಕೊಳ್ಳುತ್ತಲೇ, ಗಗನಗಾಮಿಯಾಗಿ, ಅವಕಾಶವನ್ನು ಆವರಿಸಿಕೊಳ್ಳುವ ಈ ಪರಿಯನ್ನು ನೋಡಿ:

ಅದರ ರೆಕ್ಕೆಯಲ್ಲಿ ನೇಸರ ಹೊಳೆಯುವನು

ಅದರ ಕೊಕ್ಕಿನಲ್ಲಿಚಂದಿರ ತೂಗಾಡುವನು

ಅದರ ಪುಕ್ಕದಲ್ಲಿ ನಕ್ಷತ್ರಗಳು ಮಿನುಗುವುವು

ಬೇಂದ್ರೆಯ ‘ಹಕ್ಕಿ ಹಾರುತಿದೆ ನೋಡಿದಿರಾ?’ ನೆನಪಿಸುವ ಹಾಗೆ, ವಿಸ್ತರಿಸಿಕೊಳ್ಳುವ ಈ ಕವಿತೆಯು ಆಕಾಶಗಾಮಿಯಾಗಿಯೂ ಕೊನೆಗೂ ವಿರಮಿಸುವುದು ಈ ಅರಿವಿನಲ್ಲಿ:

ಹಾಗೆ ಯೋಚಿಸಿದರೆ

ಆಕಾಶ ಹೊರಗಲ್ಲ, ಹಕ್ಕಿಯ ಒಳಗಿದೆ.

ಮಂಜುಳಾ ಅವರ ಕವಿತೆಗಳು ಮುಖ್ಯವಾಗಿ ಭಾವಗಮ್ಯವಾದವುಗಳು. ಅವು ಬಿಂದುವಿನಿಂದ ಸಿಂಧುವಿನ ಕಡೆಗೆ ಕೈ ಚಾಚುವ ಹಂಬಲದವು.

ಈ ಕೆಲವು ಉದಾಹರಣೆಗಳನ್ನು ಗಮನಿಸಬಹುದು:

‘ಉರಿವ ಸೂರ್ಯ ಎಷ್ಟು ಸುಟ್ಟರೂ

ಭೂಮಿ ತನ್ನ ಗರ್ಭದೊಳಗೆ ವಸಂತದ

ಬೀಜಗಳನ್ನು ಬಚ್ಚಿಟ್ಟುಕೊಂಡಿರುತ್ತದೆ

ಬೇರುಗಳೊಡನೆ ಮಳೆಗಾಗಿ ಕಾಯುತ್ತಿರುತ್ತದೆ.                          
(ಗಾಯಗೊಂಡವರಿಗೆ)

ಉದ್ಯೋಗಸ್ಥೆಯೂ

ತಾಯಿಯೂ ಆದ ಮೇಲೆ

ಈಗ

ನನ್ನ ಕಣ್ಣುಗಳು

ಯಾರದ್ದು ಎಂದು

ನನಗೆ ಸ್ಪಷ್ಟವಾಗಿ ಗೊತ್ತು

(ನಿದ್ದೆಗಣ್ಣುಗಳು)

ರೂಪಕಗಳಿರದ ಭೂಮಿಯಲಿ

ಏಳು ಬಣ್ಣಸೇರಿ

ಕೆಂಪನೆಯದೊಂದೇ

ಬಣ್ಣವಾಗುವ

ಅಲ್ಲಿ ಕವಿತೆ ಹುಟ್ಟುವುದಿಲ್ಲ

(ಅಲ್ಲಿ ಕವಿತೆ ಹುಟ್ಟುವುದಿಲ್ಲ)

ಅಥವಾ, ಹೆಣ್ಣಿನ ಸ್ವಾತಂತ್ರ್ಯದ ಕುರಿತು ಏರು ಸ್ವರದ ಬದಲಾಗಿ, ತಣ್ಣನೆಯ ಆದರೆ ನಾಜೂಕಾಗಿ ಇರಿಯುವಂತಹ ಸ್ವರದಲ್ಲಿ ಪ್ರತಿಕ್ರಿಯಿಸುವ ಕವಿತೆಗಳ ಈ ಸಾಲುಗಳನ್ನು ನೋಡಿ:

‘ಒಮ್ಮೆ ನೀವು ಇವಳಿಗೆ

ನಕ್ಷತ್ರಗಳನ್ನು

ಬಿದಿಗೆ ಚಂದ್ರನನ್ನು

ಬೆಳದಿಂಗಳನ್ನು

ತೋರಿಸುತ್ತಾ

ಬೆಳಕಿನ ಆಸೆ ಹುಟ್ಟಿಸಿದಿರಿ

ಆಮೇಲೆ

ಅವುಗಳನ್ನೇ ಮುಳ್ಳುಗಳನ್ನಾಗಿ- ಮಾಡಿ

ಅವಳ ಹೃದಯವನ್ನು ಚುಚ್ಚಿದಿರಿ.

(ಕತ್ತಲು ಕೋಣೆ)

ಹೃದಯ

ಸುಮಾರಾಗಿ ವಿಶಾಲವಾದ- ಒಂದು

ಹೊಗೆಯಾಡುವ ವರೆಗೂ ಅದನ್ನು

ಸಣ್ಣಗಿನ ಉರಿಯಲ್ಲಿ ಬಿಸಿ ಮಾಡಿರಿ

ಒಮ್ಮೆ ಮುಟ್ಟಿದರೆ ಸುಡುವಂತಾದಾಗ

ಅದರೊಳಗೆ

ಸ್ವಲ್ಪ ಕಣ್ಣೀರನ್ನು ಸುರಿಯಿರಿ

ಕೊಂಚ ಸಿಡಿಯುವುದು ಚಟಪಟಿಸುವುದು

ಕಾಣಬಹುದು

ಉಪ್ಪು ಬೆರೆತ ನೀರಲ್ಲವೇ?

   * * * * *

ಸಂತೃಪ್ತ ಕುಟುಂಬದ

ಊಟದ ಮೇಜಿನ ಮೇಲೆ

ರಾತ್ರಿ ಈ ಹೊಸ ಅಡುಗೆಯನ್ನು

ಸ್ಪಟಿಕದ ಪಾತ್ರೆಗಳಲ್ಲಿ ಇಟ್ಟು ಅಲಂಕರಿಸಿರಿ

ತದನಂತರ ಬಿಸಿಬಿಸಿಯಾಗಿ

ಬಡಿಸಿಕೊಂಡು ತಿನ್ನಿರಿ.. (ಹೊಸರುಚಿಯ ಅಡುಗೆಗೊಂದು ಟಿಪ್ಪಣಿ)

ಇಂತಹ ಅನೇಕ ವ್ಯಂಗ್ಯಭರಿತ, ಮಾರ್ಮಿಕ ಸಾಲುಗಳನ್ನು ಇಲ್ಲಿನ ಬಹುತೇಕ ಕವಿತೆಗಳಲ್ಲಿ ನಾವು ಕಾಣಬಹುದು.

ರೂಪಕವೊಂದರ ಸುತ್ತ  ಪುನರಾವರ್ತನೆಗೊಳ್ಳುವ ಸಾಲುಗಳ ಮೂಲಕ ಕವಿತೆಯೊಂದು ಹೇಗೆ ಬೆಳೆಯುತ್ತಾ, ಅರ್ಥವನ್ನು ವಿಸ್ತರಿಸುತ್ತಾ ಹೋಗುವುದಕ್ಕೆ ಉದಾಹರಣೆಯಾಗಿ, ‘ಅನುಬಂಧಗಳೇ ಹಾಗೆ’, ‘ಒಂದು ಮಳೆಯನ್ನು ಏನೆಲ್ಲಾ ಮಾಡಬಹುದು?’ ಮೊದಲಾದ ಕವಿತೆಗಳನ್ನು ನೋಡಬಹುದು. ಅನುಬಂಧಗಳು ವಿವಿಧ ರೂಪಗಳಲ್ಲಿ ಹಬ್ಬಿಕೊಳ್ಳುವ ಬಗೆಯನ್ನು ಮೊದಲ ಕವಿತೆ ದಾಖಲಿಸಿದರೆ, ಎರಡನೇ ಕವಿತೆಯಲ್ಲಿ ಮಳೆಯೆನ್ನುವ ರೂಪಕದ ಬಳಕೆಯ ಅನೇಕ ಸಾಧ್ಯತೆಗಳನ್ನು ಅನ್ವೇಷಿಸುವ ಪ್ರಯತ್ನವಿದೆ. ‘ಮುತ್ತುಗದ ಎಲೆ’ ಕವಿತೆಯಲ್ಲಿ ಮುತ್ತುಗದ ಎಲೆಯ ರೂಪಕದ ಮೂಲಕ ಬದುಕಿನ ಬಂಧವು ನಿರೂಪಿತವಾದ ರೀತಿ ಗಮನಾರ್ಹವಾಗಿದೆ.

ಇದೇ ರೀತಿ, ‘ರತಿಯ ಸ್ವಗತ’, ‘ರೊಟೀನ್’, ‘ಅಹಲ್ಯೆ’, ‘ಅಡುಗೆಆಟವೆಂದರೆ’,

‘ಪ್ರತಿಮೆಯಾಗೋಣ ಬಾ’….

ಮೊದಲಾದ ಕವಿತೆಗಳು ಬೇರೆಬೇರೆ ದೃಷ್ಟಿಯಿಂದ ಗಮನಿಸಬಹುದಾದ ಕವಿತೆಗಳಾಗಿವೆ.

ತಮ್ಮ ಮೊದಲ ಸಂಕಲನದಲ್ಲೇ ಇಷ್ಟೊಂದು ಸಂಖ್ಯೆಯ ಉತ್ತಮ ಕವಿತೆಗಳನ್ನು ಕೊಟ್ಟಿರುವ ಮಂಜುಳಾ, ಇಂದು ಹೊಸದಾಗಿ ಬರೆಯುತ್ತಿರುವ ಕವಿಗಳ ಪೈಕಿ ನಿಸ್ಸಂದೇಹವಾಗಿ ಉತ್ತಮ ಭವಿಷ್ಯವಿರುವವರೆಂದು ನಾನು ಭಾವಿಸುತ್ತೇನೆ. ಎಲ್ಲೂ ಭಾವೋದ್ವೇಗಕ್ಕೆ ಒಳಗಾಗದೆ, ಕ್ಷಣದ ಮಿಂಚಿಗೆ ಮನ ಮಾಡದೆ, ಇಳಿದನಿಯಲ್ಲಿ- ತಕ್ಕ ವೈವಿಧ್ಯದೊಂದಿಗೆ- ತನ್ನ ವಿಶಿಷ್ಟ ಅನುಭವಗಳಿಗೆ ಕಾವ್ಯಶರೀರ ತೊಡಿಸುವ ಕಾಯಕದಲ್ಲಿ ಮಂಜುಳಾ ಪಳಗುತ್ತಿದ್ದಾರೆ ಎಂಬುದಕ್ಕೆ ಇಲ್ಲಿನ ಕವಿತೆಗಳೇ ಸಾಕ್ಷಿಗಳಾಗಿವೆ. ಇರುವುದರಿಂದ ಇರದುದರ ಕಡೆಗೆ ಜಿಗಿಯಬಲ್ಲ, ಹೊರಗಿನ ಆಕಾಶಕ್ಕೆ ಮಾತ್ರವಲ್ಲ, ತನ್ನ ಒಳಗಿನ ಆಕಾಶಕ್ಕೂ ಕನ್ನಡಿ ಹಿಡಿಯಬಲ್ಲ ಹಾಗೂ ಅವನ್ನು ದೀಪವಾಗಿಸುವ ಅವರ ಶಕ್ತಿಯು ಇನ್ನಷ್ಟು ವರ್ಧಿಸಲಿ; ಕವಿತಾಸಕ್ತರು ಮಂಜುಳಾರ ಈ ಕವಿತೆಗಳನ್ನೆತ್ತಿಕೊಂಡು, ತಮ್ಮದಾಗಿಸಿಕೊಳ್ಳಲಿ ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.

‍ಲೇಖಕರು Avadhi

March 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: