ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಗಳೂರು ಸಿಟಿ ಬಸ್ಸಿನಲ್ಲಿ ಮತ್ತೆ ಒಂದು ಸುತ್ತು

ಬಿ ಎ ವಿವೇಕ ರೈ ಮಂಗಳೂರು ನಗರದಲ್ಲಿ ವಾಸ್ತವ್ಯಕ್ಕಾಗಿ ನಾನು ಮೊದಲು ಬಂದದ್ದು ೧೯೬೮ರಲ್ಲಿ.ಇಲ್ಲಿನ ಸಿಟಿ ಬಸ್ಸುಗಳು ಆ ಕಾಲದಿಂದ ಈ ಕಾಲದವರೆಗೂ ಖಾಸಗಿ ಒಡೆತನದಲ್ಲಿವೆ.ಇವರಲ್ಲಿ ಬಹಳ ಮಂದಿ ಒಂದೆರಡು ಬಸ್ಸು ಇಟ್ಟುಕೊಂಡು ಜೀವನ ಸಾಗಿಸುವವರು.ಜನಸಾಮಾನ್ಯರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಾ ಬಂದವರು.ಮಂಗಳೂರು ಸಿಟಿ ಬಸ್ಸುಗಳ ಬಗ್ಗೆ ಸಾಕಷ್ಟು ಜೋಕುಗಳಿವೆ,ಟೀಕೆಗಳೂ ಇವೆ.ಆದರೆ ಇಷ್ಟು ಕಡಮೆ ದರದಲ್ಲಿ ಈ ರೀತಿ ಸೇವೆ ಒದಗಿಸುವ ವ್ಯವಸ್ಥೆ ವಿಶೇಷವಾದುದು ನಾನು ೧೯೬೮ರಿನ್ದ ೨೦೦೦ದಲ್ಲಿ ನನ್ನ ಕಾರು ಕೊಳ್ಳುವವರೆಗೆ ಮಂಗಳೂರು ಸಿಟಿ ಬಸ್ಸುಗಳನ್ನೇ ನೆಚ್ಚಿಕೊಂಡವನು ಮತ್ತು ಮೆಚ್ಚಿಕೊಂಡವನು.ಈ ಬಾರಿ ಜರ್ಮನಿಯಿಂದ ಮಂಗಳೂರಿಗೆ ಬಂದವನು ನನ್ನ ಕಾರನ್ನು ಬದಿಗೆ ಬಿಟ್ಟು ,ಸಿಟಿ ಬಸ್ಸುಗಳಲ್ಲೇ ಓಡಾಡಿದೆ.ಅದು ನೋಸ್ತಾಲ್ಜಿಯಾ ಅಷ್ಟೇ ಅಲ್ಲ,ರೋಮಾಂಚಕ ಕೂಡಾ.ನಿನ್ನೆ ದಿನ ,ನನಗೆ ತುಂಬಾ ಪರಿಚಿತ ಹಾಗೂ ಇಷ್ಟವಾದ ೫ ಮತ್ತು ೨೭ ರೂಟಿನ ಸಿಟಿ ಬಸ್ಸುಗಳಲ್ಲಿ ಸಂಚಾರ ಮಾಡಿದೆ.ನನ್ನ ಮೊದಲ ವಸತಿಯ ಕೋಣೆ ಇದ್ದದ್ದು ಅತ್ತಾವರದಲ್ಲಿ,ಮತ್ತೆ ಕಂಕನಾಡಿ ಬೈಪಾಸ್ ರಸ್ತೆಯಲ್ಲಿ.ಆಮೇಲೆ ೧೯೮೭ರಿನ್ದ ಮಾರ್ನಮಿಕಟ್ಟೆಯ ಬಳಿ.ಹಾಗಾಗಿ ಐದು ಮತ್ತು ಇಪ್ಪತೇಳು ರೂಟಿನ ಸಿಟಿಬಸ್ಸುಗಳು ನನ್ನ ಆತ್ಮಸಂಗಾತಿಗಳು.ಕೊಣಜೆಗೆ ವಿಶ್ವವಿದ್ಯಾಲಯಕ್ಕೆ ಹೋಗುವಾಗ ಐವತ್ತೊಂದು ನಂಬರಿನ ಸಿಟಿ ಬಸ್ಸು. ನಾನು ಮಂಗಳೂರಿಗೆ ಮೊದಲ ಬಾರಿ ೧೯೬೮ರಲ್ಲಿ ಬಂದಾಗ ಮಿಸ್ಕಿತ್ ಎಂಬ ಸಿಟಿ ಬಸ್ ಇತ್ತು.ಮುಂದಕ್ಕೆ ಚಾಚಿದ ಮೂಗು ಇದ್ದ ,ಆ ಚಿಕ್ಕ ಬಸ್ಸಿನಲ್ಲಿ ಡ್ರೈವರ್ ಪಕ್ಕದಲ್ಲಿ ಮೂರು ಸೀಟುಗಳು ಇದ್ದುವು.ಈ ಭಾಗವು ಬಸ್ಸಿನ ಉಳಿದ ಭಾಗದಿಂದ ಸರಿಗೆಯ ಗೋಡೆಯಿಂದ ಬೇರೆಯಾಗಿತ್ತು.ಡ್ರೈವರ್ ಪಕ್ಕದ ಈ ಸೀಟಿನಲ್ಲಿ ಕುಳಿತುಕೊಳ್ಳುವುದು ನಮಗೆ ಸಂಭ್ರಮದ ಸಂಗತಿ ಆಗಿತ್ತು.ಈ ಮಿಸ್ಕಿತ್ ಬಸ್ ಬಾವಟೆ ಗುಡ್ಡೆ ಏರುವಾಗ ಅನೇಕ ಬಾರಿ ಮೇಲೆ ಹೋಗಲಾಗದೆ ನಿಲ್ಲುತ್ತಿತ್ತು.ಆಗ ಡ್ರೈವರ್ ಹೊರಗೆ ಬಂದು ,ಅದರ ಮೂತಿಯೊಳಗೆ ಸರಳು ತೋರಿ ತಿರುಗಿಸಿ, ಹೊಗೆ ಎಬ್ಬಿಸಿದ ಬಳಿಕವೇ ಬಸ್ಸು ಜೀವ ತಾಳಿ ಮುಂದೆ ಹೋಗಲು ಸಂಮತಿಸುತಿತ್ತು.ಆಗ ಸಿಟಿ ಬಸ್ಸಿನ ಕನಿಷ್ಠ ದರ ಏಳು ಪೈಸೆ. ನಿನ್ನೆ ನಾನು ಕೇಳಿದಾಗ ನಾಲ್ಕು ರೂಪಾಯಿ ಎಂದರು.ಅದೇನು ಹೆಚ್ಚು ಅನ್ನಿಸಲಿಲ್ಲ. ಮಂಗಲೋರಿನ ಸಿಟಿ ಬಸ್ಸುಗಳಲ್ಲಿ ಏರುವ ಮತ್ತು ಇಳಿಯುವ ಅವಸರ, ಕಾತರ ಮತ್ತು ಜಾಣ್ಮೆ ನನಗೆ ಕರಗತ ಆದದ್ದು ಮುಂದೆ ಬದುಕಿನಲ್ಲಿ ತುಂಬಾ ಪ್ರಯೋಜನಕ್ಕೆ ಬಂತು.ಯಾವಾಗಲೂ ಏರುವ ,ಬೇಕೆಂದಾಗ ಇಳಿಯುವ ಮನಸ್ಸು ಮತ್ತು ಹಕ್ಕು -ಬದುಕನ್ನು ಕ್ರಿಯಾಶೀಲ ಮಾಡುತ್ತದೆ.ಎಲ್ಲರೊಡನೆ ಒಂದಾಗಿ ಸಕಲರನ್ನು ಅರಿಯಲು ಅವಕಾಶವನ್ನು ಕಲ್ಪಿಸುತ್ತದೆ.ಆರ್ಥಿಕವಾಗಿ ತುಂಬಾ ಅಗ್ಗದ ಪ್ರಯಾಣದ ಸೌಲಭ್ಯ ದೊರೆಯುತ್ತದೆ. ನಮ್ಮ ಅಹಂಕಾರ ಮತ್ತು ಅಂತಸ್ತುಗಳನ್ನು ಕರಗಿಸುತ್ತದೆ.]]>

‍ಲೇಖಕರು G

8 January, 2011

4 Comments

  1. raghavendra b rao (anu belle)

    ಸಾರ್, ಲೇಖನ ಓದಿ ಸಂತೋಷವಾಯಿತು. ಬಸ್ಸಿನ ಪ್ರಯಾಣದ ಅನುಭವ, ಸಂತೋಷ ಬೈಕ್ ಆಗಲಿ ಕಾರಿನ ಪ್ರಯಾಣದಲ್ಲಿ ಸಿಗಲಾರದು. ತಾವು ತಿಳಿಸಿರುವಂತೆ ಬಸ್ಸ್ ಪ್ರಯಾಣದಲ್ಲಿ ಜನರನ್ನು ಅರ್ಥ ಮಾಡಿಕೊಳ್ಳುವ ಅವಕಾಶವಿದೆ. ಈಗಲೂ ತಾವು ಬಸ್ಸ್ ಪ್ರಯಾಣ ಮಾಡಿದ್ದೀರೆಂದರೆ, ರಿಯಲೀ ಯು ಆರ್ ಗ್ರೇಟ್ ಸಾರ್.

  2. B T Jahnavi

    Yes sir. Absolutely. Nice article

  3. siddalingamurthy

    ಬಸ್ ಪ್ರಯಾಣ ಸಮಗದ ಜೊತೆ ನಮ್ಮನ್ನು ಗುರುತಿಸಿಕೊಳ್ಳುವ ಅವಕಾಶ. ನಿಮ್ಮ ಲೇಖನ ಮತ್ತು ಅನುಭವ ಚೆನ್ನಾಗಿದೆ.

  4. ಬಿ. ಕೆ. ಗಣೇಶ್ ರೈ

    ತಮ್ಮ ಲೇಖನದ ಕೊನೆಯ ವಾಕ್ಯ ’ನಮ್ಮ ಅಹಂಕಾರ ಮತ್ತು ಅಂತಸ್ತುಗಳನ್ನು ಕರಗಿಸುತ್ತದೆ’ ಸಮಾನತೆಯ ಪಾಠವನ್ನು ಹೇಳಿಕೊಟ್ಟಿದ್ದೀರಿ. ಬಸ್ಸಿನ ಒಳಗೆ ಜಾತಿ ಮತ ಪಂತ, ಶ್ರೀಮಂತ, ಬಡವ, ಬಲ್ಲಿದ, ಹಿರಿಯ, ಕಿರಿಯ, ಗಂಡು ಹೆಣ್ಣು ಎಂಬ ತಾರತಮ್ಯವಿಲ್ಲದೆ ತನ್ನ ಒಡಲೊಲಗೆ ತುಂಬಿಕೊಂಡು ಹೋಗುವ ಬಸ್ ನನಗೂ ತುಂಬಾ ಅಚ್ಚು ಮೆಚ್ಚು. ವಿದೇಶದಿಂದ ಸ್ವದೇಶಕ್ಕೆ ವಿಮಾನದಲ್ಲಿ ಹಾರಿ ಬಂದು ನನ್ನ ಊರು ಸೇರಿಕೊಳ್ಳಲು ನನ್ನ ಆಯ್ಕೆ ಬಸ್ ಆಗಿರುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading