ಡಾ.ವಡ್ಡಗೆರೆ ನಾಗರಾಜಯ್ಯ

ಬಸುರಿ ಬಯಕೆ ಬಗ್ಗೆ ನಿಮಗೆ ಗೊತ್ತು.
ನನ್ನ ಬಾಲ್ಯದ ಕಾಲದಲ್ಲಿ ಬಸುರಿಯಾಗುತ್ತಿದ್ದ ಹೆಣ್ಣುಮಕ್ಕಳು, ಕೆಮ್ಮಣ್ಣು ಮಾವಿನಕಾಯಿ ಹುಣುಸೆಕಾಯಿ ಉಪ್ಪಿನಕಾಯಿ ಕೊರಬಾಡು ಮುಂತಾದ ಪದಾರ್ಥಗಳನ್ನು ತಿನ್ನಲು ಬಯಸುವುದು ಮಾಮೂಲಿಯಾಗಿತ್ತು.
ಪ್ರತಿ ಸೋಮವಾರ, ಶುಕ್ರವಾರ, ಶನಿವಾರ ಮುಂತಾದ ವಾರದ ದಿನಗಳಂದು ಮನೆ ಹಟ್ಟಿ ಬಾಗಿಲು ಅಂಗಳವನ್ನು ಗೋವಿನ ಸೆಗಣಿ ಕದರಿನಿಂದ ಸಾರಿಸಿ ರಂಗೋಲಿ ಬಿಡಿಸುವುದನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದರು. ಕೆಮ್ಮಣ್ಣಿನ ಕೆಂಪುತಿಳಿ ಮತ್ತು ಸಿದ್ದೆಮಣ್ಣಿನ ಬಿಳಿತಿಳಿಯಿಂದ ಹೊಸ್ತಿಲಿಗೆ ಕಾರಣೆ ಬಳಿಯುವುದನ್ನು ಕೂಡ ಧಾರ್ಮಿಕ ಶ್ರದ್ಧೆಯೆಂಬಂತೆ ನಮ್ಮ ಹೆಣ್ಣಮಕ್ಕಳು ರೂಢಿಯಲ್ಲಿರಿಸಿದ್ದರು. ಉರಿಮಂಜು, ಕೆಮ್ಮಣ್ಣು, ಸಿದ್ದೆಮಣ್ಣು (ಸುದ್ದ ಮಣ್ಣು), ಅಳಲೆಕಾಯಿ, ಹವಳದ ಮಣಿ, ಅತ್ತರ್, ಗೋರೋಜಿನ ಮುಂತಾದ ವಸ್ತುಗಳನ್ನು ಮಾರಾಟ ಮಾಡಿಕೊಂಡು ಯಾರಾದರೂ ವ್ಯಾಪಾರಿಗಳು ಬಂದರೆಂದರೆ ಅವರಿಂದ ಕೆಮ್ಮಣ್ಣು, ಸಿದ್ದೆಮಣ್ಣನ್ನು ಕಡ್ಡಾಯವಾಗಿ ಖರೀದಿಸುತ್ತಿದ್ದರು.
ಹೀಗೆ ಖರೀದಿಸಿದ ಹೆಂಗಸರು ಕೆಮ್ಮಣ್ಣನ್ನು ಸ್ವಲ್ಪ ತಿಂದು ರುಚಿ ನೋಡಿ ಬಸುರಿಯರಿಗೆ ತಿನ್ನಲು ಕೊಡುತ್ತಿದ್ದರು. ಸಂತೆ ಅಂಗಡಿಯಿಂದಾದರೂ ಕೆಮ್ಮಣ್ಣು ತರಿಸಿಕೊಂಡು ತಿನ್ನಬೇಕೆಂಬುದು ಅಂದಿನ ಕಾಲದ ಬಸುರಿಯರ ಅತ್ಯಂತ ದೊಡ್ಡ ಬಯಕೆಯಾಗಿತ್ತು. ಬಸುರಿ ಬಯಕೆ ತೀರಿಸದಿದ್ದರೆ ಸುಖಪ್ರಸವ ಸಾಧ್ಯವಿಲ್ಲವೆಂದು ನಂಬಲಾಗಿತ್ತು.
ಈಗಲೂ ನಾವು ಕಾಣುತ್ತಿರುವಂತೆ ಬಸುರಿಯಾದ ಹೆಣ್ಣುಮಗಳಿಗೆ ಬಯಸಿದ್ದನ್ನೆಲ್ಲಾ ತಂದುಕೊಟ್ಟು ಉಣುಸಿ ಉಡುಸಿ ಪೋಷಕರು ಬಂಧು ಬಳಗದವರೆಲ್ಲರೂ ಆರೈಕೆ ಮಾಡುತ್ತಾರೆ. ಅವಳು ಇಷ್ಟಪಟ್ಟದ್ದನ್ನೆಲ್ಲಾ ನೆರವೇರಿಸಲು ನೆರೆಹೊರೆಯವರೂ ಕಾಳಜಿ ತೋರಿಸುತ್ತಾರೆ. ಉಣ್ಣುವ ತಿನ್ನುವ ನೋಡುವ ನಲಿಯುವ ಕೇಳುವ ಯಾವುದೇ ಸಂಗತಿಯಾಗಿರಬಹುದು ಬಸುರಿಯಾದವಳು ಬಯಸಿದಳೆಂದರೆ ಈಡೇರಿಸುವುದು ತಮ್ಮ ಪವಿತ್ರ ಮತ್ತು ಮಹತ್ವದ ಕರ್ತವ್ಯವೆಂದು ಎಲ್ಲರೂ ಅಘೋಷಿತ ನಿಯಮಾವಳಿಗೆ ಒಳಗಾಗುತ್ತಾರೆ.
ಬಸುರಿ ಹೆಣ್ಣುಮಗಳನ್ನು ಕಣ್ಣೀರು ಹಾಕದಂತೆ ಸಲಹಲು, ಮನ ಮೋಯಿಸದಂತೆ ನೋಡಿಕೊಳ್ಳಲು ಎಲ್ಲರೂ ಮುತುವರ್ಜಿ ವಹಿಸುತ್ತಾರೆ. ಯಾವುದೇ ತಿಂದುಂಡು ಸವಿಯಲು ಬಳಸುವ ಪದಾರ್ಥಗಳನ್ನು ತಮಗಿಲ್ಲದಿದ್ದರೂ ಬಸುರಿಯ ಕೈಗೊಪ್ಪಿಸಿ ಸಾರ್ಥಕ ಭಾವನೆ ಅನುಭವಿಸುವ ಜನರನ್ನು ನಾವು ನೋಡುತ್ತಿರುತ್ತೇವೆ. ಅಂತಹ ಕೃತಾರ್ಥತೆಯ ಕ್ಷಣಗಳನ್ನು ನಾನು ಹಲವಾರು ಸಲ ಅನುಭವಿಸಿದ್ದೇನೆ. ಪ್ರೈಮರಿ ಸ್ಕೂಲ್ ಹುಡುಗನಾಗಿದ್ದಾಗ ನಮ್ಮೂರಿಗೆ ದೂರದಲ್ಲಿರುವ ಮುದ್ದರಾಮಪ್ಪನ ಹಳ್ಳಕ್ಕೆ ಹೋಗಿ, ಕೇದಿಗೆ ಗರಿಗಳ ಹೂಕೊಯ್ದು ತಂದುಕೊಡುವ ಸಾಹಸದ ಕೆಲಸ ಮಾಡಿ ಬಸುರಿ ಬಯಕೆ ಈಡೇರಿಸುವ ಮೂಲಕ ನಮ್ಮೂರಿನ ರಂಗಮ್ಮನ ನಗುವನ್ನು ಹೃದಯ ತುಂಬಿಕೊಂಡು ಕೃತಾರ್ಥನಾದವನು ನಾನು. ಹೀಗೆ ನಾವು ಕಾಳಜಿಯಿಂದ ಮಾಡುವ ಕರ್ತವ್ಯಗಳೆಲ್ಲವೂ ಬಸುರಿಯಾದವಳು ಮಾನವನ ಪೀಳಿಗೆಯನ್ನು ಮುಂದುವರೆಸುವ ಕುಡಿಯನ್ನು ಹಡೆದುಕೊಡುವಳೆಂಬ ಕಾರಣದಿಂದಲೇ ಹೊರತು ಬೇರಾವುದೂ ಅಲ್ಲವೆನ್ನಿಸುತ್ತದೆ. ನಾಳೆ ಭೂಮಿ ಹುಣ್ಣಿಮೆ ಅಥವಾ ಸೀಗೆ ಹುಣ್ಣಿಮೆ. ಭೂಮಿ ಹುಣ್ಣಿಮೆ ಕಾಲಕ್ಕೆ ಭೂಮಿಯು ಬಸುರಿಯಾಗಿರುತ್ತಾಳೆಂದು ನಮ್ಮ ಜನಪದರು ನಂಬುತ್ತಾರೆ.

ಭೂಮಿ ಹುಣ್ಣಿಮೆ ಹಬ್ಬವು ರೈತಾಪಿಗಳು ಭೂಮಿಯನ್ನು ಗರ್ಭವತಿ ಎಂದು ತಿಳಿದು ಆಚರಿಸುವ ಸೀಮಂತ ಶಾಸ್ತ್ರದ ಹಬ್ಬ. ಗರ್ಭಿಣಿಯಾದ ಭೂತಾಯಿಯ “ಬಸುರಿ ಬಯಕೆ” ತೀರಿಸುವ ಕಲ್ಪನೆ ಅತ್ಯಂತ ಆದಿಮವಾದದ್ದು. ಬುದ್ಧಗುರು ತನ್ನ ಬಿಕ್ಖುಸಂಘದ ಅನುಯಾಯಿಗಳಿಗೆ, ಮಳೆಗಾಲದಲ್ಲಿ ಭೂಮಿಯ ಮೇಲೆ ಬಿಕ್ಷಾಟನೆಗಾಗಿ ಹೆಚ್ಚು ನಡೆದಾಡಿ ಪಾದಾಕ್ರಾಂತ ಮಾಡಬಾರದೆಂದು ನಿಷೇಧಿಸಿದ್ದನು. “ಓ ನನ್ನ ಅನುಯಾಯಿಗಳೇ ಮುಂಗಾರು ಮಳೆಗಾಲದ ಆರಂಭದಲ್ಲಿ ಪುಷ್ಪವತಿಯಾಗುವ ಭೂಮಿಯು ಕ್ರಮೇಣ ಫಲವತಿಯಾಗಿ ಹೊಸ ಜೀವಿಗಳಿಗೆ ಸಸ್ಯಗಳಿಗೆ ಜನ್ಮ ನೀಡುತ್ತಾಳೆ. ನಿಮ್ಮ ಪಾದಾಕ್ರಾಂತದಿಂದ ಅಂತಹ ಹೊಸ ಜೀವಿಗಳು ಹತವಾಗದಿರಲಿ. ಬಿಕ್ಷಾಟನೆಗಾಗಿ ಹೆಚ್ಚು ತಿರುಗಾಡಲು ಹೋದಷ್ಟೂ ಈ ಫಲದಾಯಿನಿಯಾದ ನೆಲದವ್ವನ ಮೇಲೆ ನಿಮ್ಮ ಹಿಂಸೆ ತೀವ್ರವಾಗುತ್ತದೆ” ಎಂದು ಎಚ್ಚರಿಸಿದ್ದ ಬಗ್ಗೆ ನಮಗೆ ಬೌದ್ಧ ಸಾಹಿತ್ಯ ಕೃತಿಗಳಿಂದ ತಿಳಿದುಬರುತ್ತದೆ.
ಮಹಾವೀರನೂ ಸಹ ಭೂಮಿಯ ಮೇಲೆ ಮನುಷ್ಯನ ಪಾದಾಕ್ರಾಂತದಿಂದ ಜೀವಿಗಳ ಹತ್ಯೆಯಾಗುವ ಹಿಂಸೆಯನ್ನು ತಡೆಗಟ್ಟಲು ಪಾದಗಳಿಗೆ ಅಳಲೆ (ಹತ್ತಿ) ಕಟ್ಟಿಕೊಂಡು ನಡೆದಾಡುವಂತೆ ತನ್ನ ಅನುಯಾಯಿಗಳಿಗೆ ಜೀವಸ್ನೇಹಿಯಾದ ನಿಯಮವನ್ನು ಜಾರಿಗೊಳಿಸಿದ್ದನು.
“ಸಮುದ್ರೆ ವಸನೇ ದೇವಿ ಪರ್ವತಸ್ತನ ಮಂಡಲೇ… ವಿಷ್ಣುಪತ್ನೀ ನಮಃಸ್ತುಭ್ಯಮ್ ಪಾದಸ್ಪರ್ಶಮ್ ಕ್ಷಮಸ್ವಮೇ” ಎಂದು ಈ ಭೂಮಿಯ ಮೇಲೆ ನಮ್ಮ ಪಾದ ಸ್ಪರ್ಶವಾಗುವುದನ್ನು ಕ್ಷಮಿಸಬೇಕೆಂದು ಭೂಮಿತಾಯಿಯ ಬಳಿ ಕ್ಷಮೆ ಕೇಳುವ ಸಂಸ್ಕೃತ ಶ್ಲೋಕವೊಂದು ನಿತ್ಯ ಪ್ರಾರ್ಥನೆಯಾಗಿ ಯೋಗಾವಾಸಿಷ್ಟಂ ಹೇಳಿಕೊಟ್ಟಿದೆ.
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳೆಯೋಳ/ ಭೂಮಿತಾಯ್ನಾ
ಎದ್ದೊಂದು ಗಳಿಗೆ ನೆನೆದೇನು….
ಎಂಬ ಜಾನಪದ ತ್ರಿಪದಿಯು ನಮ್ಮ ಜನಪದರು ಭೂಮಿಯೊಂದಿಗೆ ಇರಿಸಿಕೊಂಡಿದ್ದ ನಿತ್ಯಸತ್ಯದ ಅವಿನಾಭಾವ ಪ್ರಾರ್ಥನೆಯ ಸಾಕ್ಷಾತ್ಕಾರ ಸಾರ ವಾಕ್ಯವೇ ಆಗಿದೆ. ಸಕಲ ಚರಾಚರ ಜೀವಿಗಳಿಗೆಲ್ಲಾ ನೀರು ನೆರಳು ಗಾಳಿ ಬೆಂಕಿ ಬೆಳಕು ಅನ್ನಾಶ್ರಯಗಳನ್ನು ಕೊಟ್ಟು ಸಲಹುತ್ತಿರುವ ಮಹಾತಾಯಿ ಭೂಮಿತಾಯಿಯೇ ಆಗಿದ್ದಾಳೆ. ಅಂತಹ ತಾಯಿಯನ್ನು ಬಸುರಿ ಎಂದು ಕಲ್ಪಿಸಿ “ಬಸುರಿ ಬಯಕೆ” ಈಡೇರಿಸುವ ಸೀಮಂತಶಾಸ್ತ್ರದ ಆಚರಣೆಯೇ “ಭೂಮಿ ಹುಣ್ಣಿಮೆ ಹಬ್ಬ”. ಭೂಮಿ ತಾಯಿ ಕೊಡುವ ಫಸಲಿನ ಪೂಜೆಯ ಅರ್ಥಾತ್ ಪ್ರಕೃತಿ ಪೂಜೆಯ ಈ ಹಬ್ಬವನ್ನು ಮಲೆನಾಡಿನ ಜನ “ಭೂಮಿ ಹುಣ್ಣಿಮೆ” ಹೆಸರಿನಲ್ಲಿ ಆಚರಿಸಿದರೆ, ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಜನ “ಸೀಗಿ ಹುಣ್ಣಿಮೆ” ಹೆಸರಿನಲ್ಲಿ ಆಚರಿಸುತ್ತಾರೆ.
ಚಂದ್ರಗಾವಿಯ ಸೀರೆ ಚಂದಾಕ ತಂದೀನಿ
ಭೂಮಿ ತಾಯವ್ವ ಉಡುಬಾರ-ನಮ್ಮವ್ವ
ರಾಶಿಗೆ ಹುಲುಸ ಕೊಡುಬಾರ
ಹಸಿರು ಸೀರೆ ಉಟ್ಟು ಬಸುರಾದಳು ಭೂತಾಯಿ
ಬಸುರಾದರವಳ ನಡು ಚಂದ-ಮಲೆನಾಡ
ಸೂಸುವ ಭತ್ತದಂಗೆ ಬಳುಕ್ಯಾಳೊ
ಎಂದು ಜಾನಪದ ಗೀತೆಯನ್ನು ಹಾಡುತ್ತಾ, ದವಸ ಧಾನ್ಯಗಳನ್ನು ಬೆಳೆದು ಕಣಜ ಗೋಧಾಮು ತುಂಬಿಕೊಳ್ಳಲು ಹೊಲಗದ್ದೆ ತೋಟತುಡಿಕೆ ಭೂಮಿಯನ್ನು ಹೊಂದಿದ ಭೂಮಾಲೀಕರು ಮಾತ್ರ ಈ ಹಬ್ಬವನ್ನು ಆಚರಿಸುತ್ತಾ ನಿಸರ್ಗಕ್ಕೆ ಕೃತಜ್ಞತೆಯನ್ನು, ಸಲ್ಲಿಸುತ್ತಿದ್ದೇವೆಂದು ಭಾವಿಸುತ್ತಿದ್ದಾರೆ. ಭೂಮಿಯ ಒಂದಿಂಚೂ ಒಡೆತನವಿಲ್ಲದ ಅಪಾರ ಜನ ಇದೇ ಭೂಮಿಯೊಳಗೆ ಸದ್ದಿಲ್ಲದೆ ಸೇರಿ ಗೊಬ್ಬರವಾಗಿ ಕೊಳೆಯುವ ಸ್ಥಿತಿ ನಮ್ಮಲ್ಲಿದೆ. ಭೂಮಿಯನ್ನು ತನ್ನಂತೆಯೇ ಮನುಷ್ಯ ಜೀವಿಯೆಂದು ಬಸುರಿ ಎಂದು ಪವಿತ್ರವಾಗಿ ಭಾವಿಸುವ ಜನರೆದುರು ಧಣಿಗಳ ಹೊಲಗದ್ದೆಗಳಲ್ಲಿಯೇ ರೈತಕೂಲಿಗಳಾಗಿ ದುಡಿಯುತ್ತಿರುವ ಅಪಾರ ಬಡ ಜನರು ಉಳುವ ಭೂಮಿಯ ಮಾತಿರಲಿ, ಸತ್ತಾಗ ಹೂಳಲು ಸ್ಮಶಾನವೂ ಗತಿಯಿರದ ವಿಕೃತಿ ನಮ್ಮಲ್ಲಿದೆ. ಭೂಮಿಯನ್ನು ಬಸುರಿ ಜೀವವೆಂಬಂತೆ ಮತ್ತು ತನ್ನಂತೆಯೇ ಮನುಷ್ಯ ಜೀವವೆಂಬಂತೆ ಭಾವಿಸುವ ಭೂಮಾಲೀಕರ ಕಣ್ಣುಗಳಿಗೆ ಬಸುರಿಯರಾದ ಕೂಲಿಹೆಣ್ಣುಗಳು ಪವಿತ್ರವಾಗಿ ಕಂಡಾಗ ಮಾತ್ರ, ಅವರೂ ಸಾಮಾಜಿಕವಾಗಿ ಆರ್ಥಿಕವಾಗಿಯೂ ಸಮತಲಕ್ಕೆ ಬಂದಾಗ ಮಾತ್ರ “ಭೂಮಿ ಹುಣ್ಣಿಮೆ ಹಬ್ಬ” ಭೂಪ್ರಜಾಪ್ರಭುತ್ವದ ಭೂನ್ಯಾಯಕ್ಕೆ ಹತ್ತಿರವಾಗಬಹುದು.

ಕುವೆಂಪು ಅವರ ‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಭೂಮಿಹುಣ್ಣಿಮೆ ಹಬ್ಬದ ಪ್ರಸ್ತಾಪ ಬರುತ್ತದೆ. ಮಲೆನಾಡಿನ ಗಿರಿಜನ ಕಾಡುಜೀವಿಗಳು ತಮ್ಮ ನೆಲದ ಬದುಕಿಗೆ ಫಲಗಳನ್ನು ಕರುಣಿಸುವ ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸುವ ಭಾಗವಾಗಿ ಈ ಹಬ್ಬ ಆಚರಿಸುತ್ತಾರೆ. ಈ ಕಾದಂಬರಿಯು ವ್ಯಂಜಿಸುವ ಅರ್ಥದ ಪ್ರಕಾರ ಈ ಹಬ್ಬವು ಮೂಲದಲ್ಲಿ ಪ್ರಕೃತಿ ಪೂಜಕರಾಗಿದ್ದ ಬುಡಕಟ್ಟು ದೈವಾರಾಧನೆಯಾಗಿದೆ. ಇತಹ ಪ್ರಕೃತಿಸ್ನೇಹಿ ಆಚರಣೆಯನ್ನು ಭೂಮಿ ಇರುವ ಸಿರಿವಂತರು ಅಥವಾ ತುಂಡು ಭೂಮಿಯಷ್ಟಾದರೂ ಹಿಡುವಳಿಯುಳ್ಳವರು ಮಾತ್ರ ಆಚರಿಸುವಂತಾಗಿರುವ ವಿಪರ್ಯಾಸಕ್ಕೆ ಏನು ಹೇಳೋಣ?
ಭೂಮಿ ಹುಣ್ಣಿಮೆ ಹಬ್ಬದ ದಿನದಂದು ತೆಂಗಿನ ಮರಕ್ಕೋ ಅಡಕೆ ಮರಕ್ಕೋ ಬಾಳೆಮರಕ್ಕೋ ಸೀರೆ ಕುಪ್ಪಸ ಬಳೆಬಿಚ್ಚೋಲೆ ಏರಿಸಿ, ಹೊಸ ಚೆಂಬಿಗೆ ಹೂಮುಡಿಸಿ ಒಡವೆ ತೊಡಿಸಿ ನಗನಾಣ್ಯ ಹಣ್ಣುಗಳನ್ನಿರಿಸಿ “ಭೂಲಕ್ಷ್ಮೀ” ಎಂದು ಕೈಮುಗಿದು ಹುಲುಸು ಬೇಡುವ ಸಿರಿವಂತ ಭೂಮಾಲೀಕರು, ಭೂತಾಯಿಯಂತೆಯೇ ಬಸುರಿಯರಾಗಿರುವ ಫಲದಾಯಿನಿ ಕೂಲಿಹೆಣ್ಣುಗಳಿಗೆ ಇವೆಲ್ಲವನ್ನೂ ಕೊಟ್ಟು ತಮ್ಮಂತೆಯೇ ಮನುಷ್ಯರೆಂದು ಭಾವಿಸುವಂತಾಗಲಿ. ಹೊಲದ ಫಸಲು ತೆನೆಯೊಡೆದು ಕಾಳೊರೆಯುವ ಈ ಸಂದರ್ಭವನ್ನು ಭೂಮಿತಾಯಿ ಗರ್ಭಿಣಿ ಆದಳೆಂದು ಭಾವಿಸಿ, ಆಕೆಯ ಬಯಕೆ ತೀರಿಸುವ ‘ಸೀಮಂತ’ ಶಾಸ್ತ್ರವೆಂದು ಭಕ್ತಿಯಿಂದ ಪೂಜಿಸುವ ಭೂಮಿದಿನ ಇದು.
ಭೂಮಿದಿನದ ಇಂದು, ಗಿಳಿ ಗೊರವಂಕ ನಾಯಿ ಕಾಗೆ ಅಳಿಲು ಇಲಿಗಳಿಗೂ ಎಡೆ ಹಾಕುವ ಸಂಪ್ರದಾಯವಿರುವ ನಮ್ಮ ಗ್ರಾಮಭಾರತದಲ್ಲಿ ಭೂಮಾಲೀಕರು, ಭೂತಾಯಿಯ ಎಡೆಯ ಹೆಸರಿನಲ್ಲಿ ಬಗೆ ಬಗೆಯ ಅಡುಗೆಗಳನ್ನು ತಯಾರಿಸಿ ತಾವಷ್ಟೇ ಸವಿಯುವ ಬದಲು ಅಥವಾ ಆಹಾರವನ್ನು ಪಾತ್ರೆಗೆ ತುಂಬಿಸಿಕೊಂಡು ಹೊಲಗದ್ದೆ ತೋಟ ಬೆಳೆದುನಿಂತ ಫಸಲಿಗೆ ‘ಉಲಿಗ್ಯಾ’ ಎಂದು ಕೂಗಿಕೊಂಡು ಚರಗ ಚೆಲ್ಲಿ ವ್ಯರ್ಥ ಮಾಡುವ ಬದಲು ಹೊಟ್ಟೆಗಿಲ್ಲದವರಿಗೆ ಕೊಟ್ಟು ಹಂಚುಣ್ಣುವ ಬಗ್ಗೆ ಯೋಚಿಸಲಿ. ತಮ್ಮ ಹೊಲಗಳಿಗೆ ಕೂಲಿಯಾಳುಗಳಾಗಿ ಬಂದು ದುಡಿದುಹೋದ ಕೂಲಿಕಾರರನ್ನು ಕರೆದು ಎಲ್ಲರೂ ಒಟ್ಟಿಗೆ ಕುಳಿತು ಹುಗ್ಗಿ ಪಾಯಸ, ಪಾನಕ ಪನಿವಾರ, ಕೋಸಂಬರಿ, ಹಾಲು ಮೊಸರು ಮಜ್ಜಿಗೆ ಬೆಣ್ಣೆ ತುಪ್ಪ ಕರ್ಜಿಕಾಯಿ ಹೋಳಿಗೆ ವಡೆ ಇತ್ಯಾದಿ ಪದಾರ್ಥಗಳನ್ನು ಹಂಚಿಕೊಂಡು ತಿಂದರೆ ಹಬ್ಬದೂಟ ಎಷ್ಟೊಂದು ರುಚಿಯಲ್ಲವೇ? ಭೂಮಾಲೀಕರು ಕೂಲಿಕಾರ ಬಸುರಿ ಹೆಣ್ಣುಮಕ್ಕಳೊಂದಿಗೆ ಇಂತಹ ಪೌಷ್ಟಿಕ ಆಹಾರದ ಪಾಲನ್ನು ಹಂಚಿ ತಿನ್ನುವಂತಾಗಲಿ. ಹೀಗೆ ಭೂಮಿ ಹುಣ್ಣಿಮೆಯಂದು ಭೂನ್ಯಾಯ ನಿಷ್ಠರಾದ ಬುದ್ಧಗುರು ಮತ್ತು ಮಹಾವೀರರ ಪರಿಸರ ಪಾಠಗಳು ನೆನಪಾಗಲಿ.






ಬಹಳ ಸೊಗಸಾಗಿ ಮೂಡಿಬಂದಿದೆ ಲೇಖನ, ವಡ್ಡಳ್ಳಿ ಯವರೇ ಅಭಿನಂದನೆಗಳು
ನಾನು ನಿಮಗೆ ಶರೀರತಃ ತಿಳಿದವನಾಗಿದ್ದೇನೆ.
(ನಂಗ್ಲಿಯವರ ಜೊತೆ ಬಂದಿದ್ದ ಕೃಷ್ಣಮೂರ್ತಿ ಬಾಗೇಪಲ್ಲಿ)
9481476302.
,