ನೀರು.. ನೀರು.. ನೀರು..

ಹೊಸದಾಗಿ ಕಟ್ಟುವ ಮನೆಗಳು ಎಷ್ಟೇ ದೊಡ್ಡದಾಗಿರಲೀ, ಒಂದಿಷ್ಟು ಜಾಗವನ್ನು ಹೂವು, ತರಕಾರಿಗಳು ಬೆಳೆಯಲೆಂದೇ ಖಾಲಿ ಬಿಡೋದು ನಮ್ಮ ಸಂಪ್ರದಾಯ. ತಮ್ಮ ಮನೆಯಲ್ಲಿ ಬೆಳೆದ ಪದಾರ್ಥಗಳು ಎಂದು ಹೇಳಿಕೊಳ್ಳುವ ಅಭಿಮಾನವೇ ಬೇರೆ. ಸ್ಥಳದ ಕೊರತೆ ಇರೋರು, ಬಾಡಿಗೆ ಮನೆಯೋರಿಗೆ ಇಂತಹ ವಿಚಾರದಲ್ಲಿ ಮನೆಯ ಟೆರೇಸ್ ಒಂದೇ ಗತಿ. ಇದಕ್ಕೆ ಸಂಬಂದಿಸಿದಂತೆ ನಾನು ಕೂಡ ಒಂದು ವರದಿ ಮಾಡಿದ್ದೆ. ಟೆರೇಸ್ ಗಾರ್ಡನ್ ಎಲ್ಲಿ ತನಕ ಬೆಳೆದಿತ್ತು ಅಂದರೆ ಭತ್ತದ ಸಸಿಗಳನ್ನು ನೆಟ್ಟಿದ್ದ ಓರ್ವರು, ಊರಿನಲ್ಲಿ ಕಾಣಸಿಗುವಂತೆ ಮಹಡಿ ತುಂಬಾ ಗದ್ಡೆಯನ್ನೇ ಸೃಷ್ಟಿಸಿದ್ದರು.

ಆದರೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯನ್ನು ಏಕಕಾಲದಲ್ಲಿ ಕಾಣುವ ಯೋಗ ನಮ್ಮಲ್ಲಿದೆ. ಪ್ರವಾಹಗಳು ತಲೆದೋರುತ್ತವೆ. ಕೊಂಚ ದಿನಗಳಲ್ಲೇ ನದಿಗಳೂ ಬತ್ತಿ ಹೋಗುತ್ತವೆ. ಹೀಗಾಗಿ ಈ ತೋಟ ಗದ್ದೆಗಳ ಯೋಜನೆಗಳು ಏನಿದ್ರೂ ಹವಾಮಾನದ ಮೇಲೆ ಅವಲಂಬಿತ.

ಸಿಂಗಾಪುರದಲ್ಲೂ”ಡ್ರೈ ವೆದರ್” ಅನ್ನುವ ಪದ ಸಾಮಾನ್ಯ.  ವರ್ಷಪೂರ್ತಿ ಧಾರಾಕಾರ ಮಳೆ ಬೀಳುವ ಈ ದೇಶದಲ್ಲಿ, ಚಳಿಗಾಲಕ್ಕೆ ಎಂಟ್ರಿನೇ ಇಲ್ಲ. ವಿಪರೀತ ಬಿಸಿಲು, ವಿಪರೀತ ಮಳೆ ಈ ಎರಡು ಸನ್ನಿವೇಶಗಳು ಒಂದೇ ದಿನ ನಡೆದು ಹೋಗೋದಿದೆ. ಕಣ್ಣಾಮುಚ್ಚಾಲೆ ಆಡೋ ಇವೆರಡರಿಂದಾಗಿ, ಯಾರು ಎಲ್ಲೇ ಪ್ರಯಾಣಿಸಲಿ ಛತ್ರಿ ಮಾತ್ರ ಕಡ್ಡಾಯ.

ಹವಾಮಾನ ಅನುಕೂಲವಾಗಿದ್ದರೂ ಇಲ್ಲಿ ಕೃಷಿ ಚಟುವಟಿಕೆಗಳಾಗಲೇ, ಉತ್ಪಾದನೆಗಳಾಗಲೀ ಯಾವುದು ನಡೆಯೋದಿಲ್ಲ. ಕಾರಣ. ಎಲ್ಲರ ಮನೆಯ ಹಿತ್ತಲಿನ ಜಾಗವೂ ಸರ್ಕಾರಕ್ಕೆ ಸೇರಿದ್ದು. ಹಾಸಿಗೆ ಇದ್ದಷ್ಟೇ ಕಾಲು ಚಾಚು ಹೇಳುವ ಹಾಗೆ, ತಮ್ಮ ತಮ್ಮ ಮನೆಯ ಗೋಡೆಗೆ ಸರಿಯಾಗಿ ಸಣ್ಣ ಪುಟ್ಟ ಮಡಕೆಗಳಲ್ಲಿ ಸಸಿಗಳನ್ನು ಇಟ್ಟುಕೊಳ್ಳುವ ಅವಕಾಶಗಳನ್ನು ಮಾತ್ರ ನೀಡಲಾಗಿದೆ. ಅದು ಪಕ್ಕದ ಮನೆಗೆ ತೊಂದರೆಯಾಗಿ ಕಂಪ್ಲೇಂಟ್ ಹೋದರಂತೂ ಅದನ್ನು ಕಳೆದುಕೊಳ್ಳಬೇಕಾಗುತ್ತದೆ.

ಇನ್ನು ಸರ್ಕಾರಕ್ಕೆ ಸೇರಿದ ಭೂಮಿಯಲ್ಲಿ ತರಕಾರಿಗಳನ್ನು ಬೆಳೆಸುವ ಕ್ರಮ ಇದೆ. ನಮ್ಮ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಕಾಣುವ ಬಿಬಿಎಂಪಿ ಪಾರ್ಕ್ ನಷ್ಟು ದೊಡ್ಡ ಜಾಗದಲ್ಲಿ. ಅದಕ್ಕೆಂದೇ ನಿಯೋಜಿಸಲ್ಪಟ್ಟ ವ್ಯಕ್ತಿಗಳು ಬಂದು ಕೆಲಸ ಮಾಡಿ ಹೋಗೋದು ರೂಢಿ. ಉಳಿದ ಸಮಯದಲ್ಲಿ ಬೀಗ ಹಾಕಲಾಗುತ್ತದೆ. ಇಲ್ಲಿ ಕಳ್ಳರ ಕಾಟ ಇಲ್ಲದಿರುವ ಕಾರಣ  ಕೊನೆವರೆಗೆ ಸೊಪ್ಪು-ತರಕಾರಿಗಳು ಸೇಫ್ ಆಗಿರುತ್ತವೆ.

ಇವಿಷ್ಟು ಬಿಟ್ರೆ, ಸಿಂಗಾಪುರಕ್ಕೆ ಬರುವ ಇತರೆ ಎಲ್ಲಾ ವಸ್ತುಗಳು ವಿದೇಶಗಳಿಂದ ಆಮದು ಆಗೋದು. ತರಕಾರಿಗಳು, ಹಾಲು, ಎಲೆಕ್ಟ್ರಾನಿಕ್ ಐಟಮ್ಸ್, ಬಟ್ಟೆ – ಬರೆ , ತಿನಿಸುಗಳು ಇತ್ಯಾದಿ. ಕುಡಿಯುವ ನೀರು ಕೂಡ. ಸಿಂಗಾಪುರಕ್ಕೆ ಕುಡಿಯುವ ನೀರಿನ ವ್ಯವಸ್ಥೆಯ ಒಪ್ಪಂದ ಆಗಿದ್ದು ಮಲೇಷ್ಯಾದ ಜೊತೆ. ಅದು 2061 ವರೆಗೆ. ಸಾಮಾನ್ಯವಾಗಿ ಪ್ರಮುಖ ವಿಚಾರಗಳಿಗೆ ಅದರಲ್ಲೂ ಬೇರೆ ದಾರೀನೇ ಇಲ್ಲ ಅನ್ನುವ ಹಾಗೆ ನಾವು ಯಾರಿಗಾದ್ರೂ ಅವಲಂಬಿತಗೊಂಡರಂತೂ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಅಂತವರ ವರ್ತನೆಗಳು, ಕೆಲಸಗಳು ನಿಧಾನವಾಗಿ ಬದಲಾವಣೆಗೊಳ್ಳುತ್ತಾ ಸಾಗೋದು ಜೀವನದ ಅನುಭವ. ಇದೇ ರೀತಿಯ ಕೆಲಸವನ್ನು ಮಲೇಷ್ಯಾ ಕೂಡ ಸಿಂಗಾಪುರದ ಜೊತೆ ಆರಂಭಿಸಿತು. ಒಂದಾ ನೀರು ಪೂರೈಕೆ ಸ್ಥಗಿತಗೊಳಿಸುವ ಬೆದರಿಕೆ, ಇಲ್ಲಾ ಕುಡಿಯುವ ನೀರಿನ ಹಣವನ್ನು ದುಪ್ಪಟ್ಟು ಮಾಡುವ ಮಾತುಕತೆ.  ಹೀಗೆ ಆಂತರಿಕ ಜಗಳಗಳು, ಭಿನ್ನಾಭಿಪ್ರಾಯಗಳು ಎರಡು ದೇಶಗಳ ನಡುವೆ ತಲೆದೋರುತ್ತಲೇ ಇತ್ತು. ಇನ್ನೂ ಮಲೇಷ್ಯಾದಲ್ಲಿ ಬರಗಾಲ ಬಂದ್ರಂತೂ ಸಿಂಗಾಪುರಕ್ಕೆ ನೀರಿನ ಕೊರತೆ. ನೀರು ಕಡಿಮೆ ಬಳಸಿ ಅನ್ನುವ ಸರ್ಕಾರದ ಸಂದೇಶಗಳು ನ್ಯೂಸ್‌ಪೇಪರ್ ಗಳಿಗೆ ಹೆಡ್‌ಲೈನ್ ಆಗ್ತಿದ್ದವು.

ಒಪ್ಪಂದ ನಡೆದ್ರೂ ಆಗಾಗ ಕಿತಾಪತಿ ಮಾಡುತ್ತಿದ್ದ ಮಲೇಷ್ಯಾದ ನಿರ್ಧಾರದಿಂದ ಬೇಸತ್ತ ಸಿಂಗಾಪುರ ದೇಶ ಕೊನೆಗೂ ತನ್ನ ಸ್ವಾಭಿಮಾನವನ್ನು ಎತ್ತಿ ತೋರಿಸಿತು. ಇದರ ಫಲವಾಗಿಯೇ ರೂಪುಗೊಂಡಿದ್ದು ನ್ಯೂ ವಾಟರ್ ಯೋಜನೆ.

ತ್ಯಾಜ್ಯ ನೀರಿನ ಮರುಬಳಕೆ ಈ ಯೋಜನೆ ಪ್ರಮುಖ ಉದ್ದೇಶ. ಬಳಸಿದ ನೀ ರಿನ ಶುದ್ಧೀಕರಣ ಪ್ರಮುಖವಾಗಿ 3 ಹಂತಗಳಲ್ಲಿ ನಡೆಯುತ್ತವೆ.

ನ್ಯೂ ವಾಟರ್ ಉತ್ಪಾದನಾ ಪ್ರಕ್ರಿಯೆಯ ಮೊದಲ ಹಂತದಲ್ಲಿ ಘನವಸ್ತುಗಳು, ಕಣಗಳು, ರೋಗ-ಉಂಟುಮಾಡುವ ಬ್ಯಾಕ್ಟೀರಿಯಾ, ವೈರಾಣುಗಳು ಮತ್ತು ಪ್ರೋಟೊಸೋವನ್ ಚೀಲಗಳನ್ನು ತೆಗೆದುಹಾಕಲು ಮೈಕ್ರೊಫಿಲ್ಟ್ರೇಶನ್ / ಅಲ್ಟ್ರಾಫೈಲ್ಟೇಶನ್ ಅನ್ನು ಬಳಸಲಾಗುತ್ತದೆ.  ಈ ಮೂಲಕ ಫಿಲ್ಟರ್ ಮಾಡಿದ ನೀರು ಕೇವಲ ಕರಗಿದ ಲವಣಗಳು ಮತ್ತು ಸಾವಯವ ಕಣಗಳನ್ನು ಹೊಂದಿರುತ್ತದೆ.

ಎರಡನೇ ಹಂತದಲ್ಲಿ ರಿವರ್ಸ್ ಆಸ್ಮೋಸಿಸ್ (RO) ಅನ್ನು ಬಳಸಲಾಗುತ್ತದೆ. ಲೋಹದ ಅಂಶಗಳು, ನೈಟ್ರೇಟ್, ಕ್ಲೋರೈಡ್ಸ್, ಸಲ್ಫೇಟ್ ಗಳು, ಸೋಂಕು ಉತ್ಪನ್ನಗಳು, ಆರೊಮ್ಯಾಟಿಕ್ ಹೈಡ್ರೋ ಕಾರ್ಬನ್ ಮತ್ತು ಕ್ರಿಮಿನಾಶಕಗಳಂತಹ ಮಾಲಿನ್ಯಕಾರಕಗಳನ್ನು ಶೋಧಿಸಲಾಗುತ್ತದೆ. ಈ ಹಂತದಲ್ಲಿ, ನೀರು ಕುಡಿಯುವ ಗುಣಮಟ್ಟಕ್ಕೆ ತಲುಪುತ್ತದೆ.

ಮೂರನೆಯ ಹಂತವು ಸುರಕ್ಷತಾ ಮುನ್ನೆಚ್ಚರಿಕೆಯಾಗಿದೆ. ಸೋಂಕು ನಿವಾರಕಗಳು ನಿಷ್ಕ್ರಿಯಗೊಳಿಸುವಿಕೆ ಮತ್ತು ನೀರಿನ ಶುದ್ಧತೆ ಬಗ್ಗೆ ಪರಿಶೀಲಿಸಲಾಗುತ್ತದೆ. ಪಿಹೆಚ್ ಸಮತೋಲನವನ್ನು ಪುನಃಸ್ಥಾಪಿಸಲು ಕೆಲವು ಕ್ಷಾರೀಯ ರಾಸಾಯನಿಕಗಳನ್ನು ಸೇರಿಸಿದ ನಂತರ ನೀರು ಬಳಕೆಗೆ ಸಿದ್ಧವಾಗುತ್ತದೆ.

2060 ರ ಹೊತ್ತಿಗೆ ದೇಶದ ನೀರಿನ ಅವಶ್ಯಕತೆಗಳ 85% ನಷ್ಟು ಭಾಗವು ಈ ಯೋಜನೆಯಿಂದ ಪೂರೈಕೆಯಾಗಲಿದೆ ಅನ್ನೋದು ತಜ್ಞರ ಅಭಿಮತ. ಅಂದ ಹಾಗೆ ಇಲ್ಲಿ ಒಟ್ಟು ೫ ನೀರಿನ ಸ್ಥಾವರಗಳು ಇಲ್ಲಿ ನಿರ್ಮಾಣಗೊಂಡಿದೆ. ಒಂದೊಂದು ಸ್ಥಾವರವೂ ಕೂಡ 49,000 ಚದರ ಮೀ  ಅಂದರೆ 7.5 ಫುಟ್‌ಬಾಲ್ ಫೀಲ್ಡ್ ಗಳಷ್ಟು ಬೃಹತ್ತಾಗಿದೆ.  92 ಒಲಂಪಿಕ್-ಗಾತ್ರದ ಈಜುಕೊಳಗಳನ್ನು ತುಂಬುವಷ್ಟು ನೀರನ್ನು ಇದರಲ್ಲಿ ಶೇಖರಿಸಿಡಬಹುದಾಗಿದೆ.

ಕುಡಿಯುವ ನೀರಿಗೆ ಯೋಗ್ಯವಾಗುವಷ್ಟು ಶುದ್ಧವಾಗುವ ಈ ಯೋಜನೆ, ದೇಶ ದ ನೀರಿನ ಸಮಸ್ಯೆಗೆ ದೊಡ್ಡ ಪರಿಹಾರವನ್ನೇ ನೀಡಿದೆ.  ಹೆಚ್ಚಾಗಿ ಈ ನೀರು, ಕೈಗಾರಿಕಾ ಉದ್ದೇಶಕ್ಕೆ ಬಿಡಲಾಗುತ್ತದೆ. ಕಳೆದ ಬಾರಿ ಮಲೇಷ್ಯದಿಂದ ಆಮದುಗೊಂಡ ನೀರು, ಸೋಂಕಿನಿಂದ ಕೂಡಿದ್ದ ಕಾರಣ, ನ್ಯೂ ವಾಟರ್ ಯೋಜನೆಯಲ್ಲಿ ಶುದ್ಧೀಕರಿಸಿದ ನೀರನ್ನೇ ಇಡೀ ದೇಶಕ್ಕೆ ಸರಬರಾಜು ಮಾಡಲಾಗಿತ್ತು.

ನೈಸರ್ಗಿಕ ಸಂಪತ್ತನ್ನು ಹೊಂದಿರುವ ನಮ್ಮಲ್ಲಿ ಇಷ್ಟೆಲ್ಲಾ ಕಷ್ಟನೇ ಪಡಬೇಕಾಗಿಲ್ಲ. ಚುನಾವಣೆ, ರಾಜಕೀಯ ಕಿತ್ತಾಟದಲ್ಲೇ ಕಾಲ ಕಳೆಯುವ ನಮ್ಮ ನಾಯಕರಿಗೆ ಜನರ ಕ್ಷೇಮಾಭಿವೃದ್ಢಿಗೆ ಎಲ್ಲಿದೆ ಸಮಯ. ಮಹದಾಯಿ ಹಾಗೂ ಕಾವೇರಿ ನದಿ ನೀರು ಹಂಚಿಕೆ ವಿವಾದವಂತೂ ಶತಮಾನಗಳಿಂದ ನಡೆಯುತ್ತಲೇ ಇದೆ. ಉತ್ತಮ ಮಳೆಯಾದಾಗ ಶಾಂತವಾಗುವ ಈ ವಿಚಾರ, ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದಂತೆ ಎರಡು ರಾಜ್ಯಗಳ ನಡುವೆ ಕೆಂಡಾಮಂಡಲದ ವಾತಾವರಣ ನಿರ್ಮಾಣಗೊಳ್ಳುತ್ತದೆ.  ಇನ್ನೂ ಕೇಂದ್ರ ಸರ್ಕಾರದ ನಿರ್ಮಲ್ ಗಂಗಾ ಯೋಜನೆ ಕಾರ್ಯ ನಡೀತಾನೇ ಇದೆ.

ಇಂದಿನ ಹಲವಾರು ಸಮಸ್ಯೆಗಳಿಗೆ ಪ್ರಕೃತಿದತ್ತವಾಗಿ ಪರಿಹಾರವಿದ್ದರೂ ಸಮರ್ಪಕವಾಗಿ ಬಳಸಿಕೊಳ್ಳುವ ಚಾಕಚಕ್ಯತೆ ಮಾತ್ರ ನಮ್ಮಲ್ಲಿ ಇಲ್ಲ. ಒಟ್ಟಾರೆ  ಸರ್ಕಾರ ಆರಂಭಿಸುವ ಯೋಜನೆಗಳಿಂದ ನೀರಿನ ಸಮಸ್ಯೆ ಪರಿಹಾರವಾಗುತ್ತೋ , ಇಲ್ಲಾ ವ್ಯಯಿಸಿದ ಹಣ ನೀರಿನಲ್ಲಿ ಹೋಮ ಆಗುತ್ತಾ ಸಮಯವೇ ಉತ್ತರಿಸಬೇಕಿದೆ.

‍ಲೇಖಕರು avadhi

October 24, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: