ಭೂಪಾಲ್ ದುರಂತದ ಕಹಿ ನೆನಪಿನಲ್ಲಿ..

ನಾ ದಿವಾಕರ


ಯಾವುದೇ ಸಮಾಜವು ತನ್ನ ಜನಸಮುದಾಯಗಳಿಗೆ ನ್ಯಾಯ ಒದಗಿಸದಿದ್ದರೆ ಜನರ ಅಪೇಕ್ಷೆಗಳು ಖಿನ್ನತೆಯಾಗಿ ಪರಿವರ್ತಿತವಾಗುತ್ತವೆ. ಖಿನ್ನತೆ ಭೀತಿಗೆ ಎಡೆಮಾಡಿಕೊಡುತ್ತದೆ. ಭೀತಿ ಕ್ರಮೇಣವಾಗಿ ಹತಾಶೆಯಾಗಿ ಮಾರ್ಪಾಟಾಗುತ್ತದೆ. ಹತಾಶೆ ಅಂತಿಮವಾಗಿ ಭಯೋತ್ಪಾದಕತೆಯಲ್ಲಿ ಕೊನೆಗೊಳ್ಳುತ್ತದೆ. ಈ ವಿದ್ಯಮಾನ ಭಾರತವನ್ನೂ ಒಳಗೊಂಡಂತೆ ಎಲ್ಲ ವ್ಯವಸ್ಥೆಗಳಲ್ಲೂ ಕಂಡುಬರುತ್ತದೆ.” (ವಿ.ಆರ್. ಕೃಷ್ಣ ಐಯ್ಯರ್, ನಿವೃತ್ತ ನ್ಯಾಯಾಧೀಶರು. ದಿ ಹಿಂದೂ 2-12-09)

ಜನಸಮುದಾಯಗಳು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯ, ಆಕ್ರಮಣ, ಹಲ್ಲೆ, ದಬ್ಬಾಳಿಕೆ ಎಲ್ಲವನ್ನೂ ಸಹಿಸಿಕೊಂಡು, ಪ್ರಜಾಸತ್ತತ್ತೆಯ ಒಳಿತಿಗಾಗಿ ಶ್ರಮಿಸಬೇಕು ಎಂದು ಆಶಿಸುವ ಆಧುನಿಕ ಭಾರತೀಯ ಸಮಾಜದಲ್ಲಿ ಮಾನ್ಯ ನ್ಯಾಯಾಧೀಶರ ಈ ಮಾತುಗಳು ಎಂಥವರನ್ನೂ ಬೆಚ್ಚಿಬೀಳಿಸಬಹುದು. ಶ್ರೀಯುತರ ಈ ಉಲ್ಲೇಖದ ಹಿನ್ನೆಲೆ ದೇಶದ ನ್ಯಾಯಾಂಗ ವ್ಯವಸ್ಥೆಯೇ ಆದರೂ, ಕಳೆದ 34 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಭಾರತದ ಒಂದು ರಾಜ್ಯದ ಸಂತ್ರಸ್ತ ಪ್ರಜೆಗಳ ದೃಷ್ಟಿಯಲ್ಲಿ ಈ ಮಾತುಗಳು ಅಪ್ಯಾಯಮಾನವಾಗುತ್ತವೆ. ಸ್ವೀಕಾರಾರ್ಹವಾಗುತ್ತವೆ. ಸ್ವಾಗತಾರ್ಹವಾಗುತ್ತವೆ. ಬೆಳ್ಳಿ ಪರದೆಯ ಮೇಲೆ ಈ ದೇಶದ ಜನತೆ ಮುನ್ನಾಭಾಯಿಯ ಗಾಂಧಿಗಿರಿ ಕಂಡದ್ದು 2007ರಲ್ಲಿ. ಆದರೆ ಈ ಅಮಾಯಕ, ಅಸಹಾಯಕ ಜನ 1984ರಿಂದಲೇ ಮುನ್ನಾಭಾಯಿಗಳಂತೆ ವರ್ತಿಸುತ್ತಿದ್ದಾರೆ. ಗಾಂಧಿ ಮಾರ್ಗದಲ್ಲಿ ಅಂತಿಮ ಜಯ ಶತಃಸಿದ್ಧ ಎಂದು ವಾದಿಸುವವರಿಗೆ ಈ ಜನತೆಯ ಶಾಂತಿಯುತ ಹೋರಾಟ ನಿರಾಸೆ ಮೂಡಿಸುತ್ತದೆ. ಈ ಮುನ್ನಾಭಾಯಿಗಳು ಮತ್ತಾರೂ ಅಲ್ಲ, ಭೂಪಾಲ ಅನಿಲ ದುರಂತದಲ್ಲಿ ನೊಂದು ಸಾಂತ್ವನ ಹೇಳುವರಿಲ್ಲದೆ, ನಿರಂತರ ಹೋರಾಟ ನಡೆಸುತ್ತಿರುವ ಭೂಪಾಲದ ಜನತೆ.

1984ರ ಆ ದಿನ ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಕರಾಳ ದಿನಗಳಿಗೇನೂ ಕೊರತೆಯಿಲ್ಲ. ಮಾನವ ನಿರ್ಮಿತ, ಪ್ರಕೃತಿ ಪ್ರೇರಿತ ಮತ್ತು ಪ್ರಭುತ್ವ ಯೋಜಿತ ಕರಾಳ ದಿನಗಳು ಕರಾಳ ಶಾಸನಗಳಿಗಿಂತಲೂ ಹೆಚ್ಚಾಗಿವೆ. 1984 ಭಾರತದ ರಾಜಕಾರಣದಲ್ಲಿ ಮರೆಯಲಾಗದ ವರ್ಷ. ಇಂದಿರಾಗಾಂಧಿಯ ಹತ್ಯೆ, ಸಿಖ್ ವಿರೋಧಿ ಹತ್ಯಾಕಾಂಡ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಪ್ರತೀಕಾರದ ಸೇಡಿನಿಂದ ಸಹಬಾಂಧವರನ್ನು ಮರದಕೊಂಬೆಗಳಂತೆ ಕಡಿದುಹಾಕುತ್ತಿದ್ದ ಸಮಯದಲ್ಲೇ ಮಧ್ಯಪ್ರದೇಶದ ಭೂಪಾಲ್ ನಗರದಲ್ಲಿ ರಾತ್ರೋರಾತ್ರಿ ವಿಧ್ವಂಸಕ ಕೃತ್ಯ ನಡೆದುಹೋಗಿತ್ತು. ಯಾವುದೇ ಆಯುಧಗಳಿಲ್ಲದೆ, ದ್ವೇಷದ ಕಿಚ್ಚಿಲ್ಲದೆ, ಶಸ್ತ್ರಾಸ್ತ್ರಗಳಿಲ್ಲದೆ, ಸಾವಿರಾರು ಜನರನ್ನು ಚಿರನಿದ್ರೆಗೆ ದೂಡಲಾಗಿತ್ತು. ಈ ಕೃತ್ಯವನ್ನು ಎಸಗಿದ್ದು ವಿಷಾನಿಲವೇ ಆದರೂ, ವಿಷಾನಿಲ ಸೋರಿಕೆಗೆ ಕಾರಣಕರ್ತರಾದ್ದು ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ ಎಂಬ ಬಹುರಾಷ್ಟ್ರೀಯ ಕಂಪನಿ ಮತ್ತು ಕಂಪನಿಯ ಬೇಜವಾಬ್ದಾರಿ ಆಡಳಿತವರ್ಗ.


ಡಿಸೆಂಬರ್ 2-3 1984ರ ರಾತ್ರಿ, ಕಾರ್ಬೈಡ್ ಕಾರ್ಖಾನೆಯ ಕ್ರಿಮಿನಾಶಕ ಘಟಕದಿಂದ ಮಿಥೈಲ್ ಐಸೋಸೈನೇಟ್ ಎಂಬ ವಿಷಾನಿಲ ಸೋರಲಾರಂಭಿಸಿತು. ಕಾರ್ಖಾನೆಯಲ್ಲಿದ್ದ ಕಾರ್ಮಿಕರು ಕಂಗಾಲಾದರು. ಉಸಿರು ಕಟ್ಟತೊಡಗಿತ್ತು. ಕಾರ್ಖಾನೆಯ ಸೈರನ್ ಹೊಡೆದುಕೊಳ್ಳುತ್ತಿದ್ದಂತೆಯೇ ಸುತ್ತಲೂ ದಟ್ಟವಾದ ಗಲ್ಲಿಗಳಲ್ಲಿ ನೆಲೆಸಿದ್ದ ಬಡಕಾರ್ಮಿಕ ಕುಟುಂಬಗಳು ಹೈರಾನಾದವು. ರಾತ್ರಿಯ ಕಗ್ಗತ್ತಲಲ್ಲಿ ಮಲಗಿದ್ದ ಜನ ಎದ್ದು ಓಡತೊಡಗಿದರು. ಇಡೀ ಆಕಾಶವನ್ನು ದಟ್ಟ ಹೊಗೆ ಆವರಿಸಿತ್ತು. ಕೆಲವೇ ಕ್ಷಣಗಳಲ್ಲಿ ಸುತ್ತಮುತ್ತಲ ಅನೇಕ ಪ್ರದೇಶಗಳಿಗೆ ಹೊಗೆ ಹರಡಿತ್ತು. ಈ ದಟ್ಟ ಹೊಗೆ ಏನೆಂದು ಅರಿಯದ ಅಮಾಯಕ ಜನ ದಿಕ್ಕುಗಾಣದೆ ಓಡತೊಡಗಿದರು. ಹೆಂಗಸರು, ಮಕ್ಕಳು, ಮುದುಕರು ಭಯಭೀತರಾಗಿ ಪರದಾಡಿದರು. ಆಕಾಶದಲ್ಲಿ ಕವಿದಿದ್ದ ಹೊಗೆ ಒಂದು ಮಾರಕ ವಿಷಾನಿಲ ಎಂಬ ಊಹೆಯೂ ಇರಲಿಲ್ಲ. ಎಲ್ಲರ ಕಣ್ಣುಗಳು ಉರಿಯಲಾರಂಭಿಸಿದವು, ಉಸಿರಾಡುವುದು ಕಷ್ಟವಾಯಿತು, ಅನೇಕರು ವಾಂತಿ ಮಾಡಲಾರಂಭಿಸಿದರು. ಮಕ್ಕಳು ಮುದುಕರು ಮೂರ್ಛೆ ಹೋದರು. ವೇಗವಾಗಿ ಓಡಲು ಶಕ್ತಿಯಿದ್ದವರು ತಪ್ಪಿಸಿಕೊಂಡರು. ಉಳಿದವರು ಜೀವಂತ ಶವಗಳಾದರು.

ಡಿಸೆಂಬರ್ 4ರ ಮುಂಜಾನೆ ಭೂಪಾಲದ ಜನತೆಗೆ ಸೂರ್ಯೋದಯವಾಗಲೇ ಇಲ್ಲ. ಇಡೀ ನಗರವೇ ಸ್ಮಶಾನವಾಗಿತ್ತು. ನಾಲ್ಕು ಸಾವಿರ ಜನ ಜವರಾಯನ ಪಾದ ಸೇರಿದ್ದರು. ಅನಧಿಕೃತ ವರದಿಯ ಪ್ರಕಾರ ಎಂಟು ಸಾವಿರ ಎಂದು ಹೇಳಲಾಗುತ್ತದೆ. ಎಣಿಸಿದವರಾರು ? ಸಾವಿನಲ್ಲಿ ಸಂಖ್ಯೆ ಎಣಿಸುವ ಅಗತ್ಯವೂ ಇಲ್ಲ. ಪ್ರತಿಯೊಂದು ಮಾನವ ಜೀವವೂ ಅಮೂಲ್ಯವೇ. ಈ ವೇಳೆಗೆ ವಿಷಾನಿಲ ಸೋರಿಕೆಯಾದದ್ದು ಖಾತರಿಯಾಗಿತ್ತು. 42 ಟನ್ ರಾಸಾಯನಿಕವನ್ನು ಹೊಂದಿದ್ದ ಟ್ಯಾಂಕಿನಿಂದ ವಿಷಾನಿಲ ಹೊರಸೂಸಲಾರಂಭಿಸಿದ್ದು ಕಾರ್ಖಾನೆಯ ಆಡಳಿತ ವರ್ಗದವರಿಗೇ ತಿಳಿಯಲಿಲ್ಲ. ಜವರಾಯನ ಮುಷ್ಟಿಯಿಂದ ಬಿಡಿಸಿಕೊಂಡ ಅಸಹಾಯಕರಿಗೆ ಯಾವ ರೀತಿ ಚಿಕಿತ್ಸೆ ನೀಡುವುದೆಂದೂ ಸ್ಥಳೀಯ ಆಸ್ಪತ್ರೆಗಳಲ್ಲಿನ ವೈದ್ಯರಿಗೆ ತಿಳಿದಿರಲಿಲ್ಲ. ಸಾವಿರಾರು ಜನ ಆಸ್ಪತ್ರೆಗಳಲ್ಲಿ ಜಮಾಯಿಸುತ್ತಿದ್ದರೂ ವೈದ್ಯರು ನಿಸ್ಸಹಾಯಕರಾಗಿದ್ದರು. ಯಾವ ಔಷದಿ ನೀಡಿದರೆ ಜನರನ್ನು ರಕ್ಷಿಸಬಹುದು ಎಂಬ ಕುರುಹು ಕಂಪನಿಯವರಿಗೂ ಇರಲಿಲ್ಲ. ತಕ್ಷಣ ಮಡಿದವರ ಸಂಖ್ಯೆ 8 ಸಾವಿರ ಆದರೆ ನಂತರದ ದಿನಗಳಲ್ಲಿ ಈ ವಿಷಾನಿಲದ ಪ್ರಭಾವದಿಂದ ಉಂಟಾಗುವ ಸಂಕೀರ್ಣ ಸಮಸ್ಯೆಗಳಿಗೆ ಬಲಿಯಾದವರ ಸಂಖ್ಯೆ 20 ಸಾವಿರಕ್ಕೂ ಹೆಚ್ಚು.

ಯಾವುದೇ ರೀತಿಯಲ್ಲಿ ನೋಡಿದರೂ ಈ ಘಟನೆ ಉದ್ಯಮಿಗಳ ಹೊಣೆಗೇಡಿತನ ಮತ್ತು ಬೇಜವಾಬ್ದಾರಿತನದ ಪರಾಕಾಷ್ಟೆ ಎಂದು ಹೇಳಬಹುದು. ಜಗತ್ತಿನ ಕೈಗಾರಿಕಾ ಅಪಘಾತಗಳ ಇತಿಹಾಸದಲ್ಲಿ ಭೂಪಾಲ್ ಅನಿಲ ದುರಂತ ಅತ್ಯಂತ ಭೀಕರ ಮತ್ತು ಭೀಬತ್ಸ ಎಂಬುದು ನಿಸ್ಸಂಶಯ. ಈ ದುರಂತ ಸಂಭವಿಸಿ 34 ವರ್ಷಗಳು ಗತಿಸಿವೆ. ವಿಷಾನಿಲದಿಂದ ಬಾಧಿತರಾದವರ ಸಂಖ್ಯೆ 5 ಲಕ್ಷಕ್ಕೂ ಹೆಚ್ಚಾಗಿರಬಹುದೆಂದು ಸರ್ಕಾರವೇ ಒಪ್ಪಿಕೊಂಡಿದೆ. ಇವರಲ್ಲಿ ಬಹುಪಾಲು ಯುವಜನತೆಯೇ ಇದ್ದುದೂ ಸತ್ಯ. ಸಾವಿರಾರು ಗರ್ಭಿಣಿ ಸ್ತ್ರೀಯರು ಸಾವನ್ನಪ್ಪಿದ್ದಾರೆ. ವಿಷಾನಿಲದಿಂದ ಬಾಧಿತರಾಗಿ ನೌಕರಿ ಕಳೆದುಕೊಂಡು ನಿರ್ಗತಿಕರಾದವರು ಎಷ್ಟೋ ಬಲ್ಲವರಾರು ? ಇನ್ನು ಇಷ್ಟು ವರ್ಷಗಳ ಬಳಿಕ ಎಷ್ಟು ಜನ ಸಂತ್ರಸ್ತರು ಜವರಾಯನ ಪಾದ ಸೇರಿದ್ದಾರೋ ? ಕೇಂದ್ರ ಹಾಗು ರಾಜ್ಯ ಸರ್ಕಾರಗಳು ತಾವು ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಪುಂಖಾನುಪುಂಖವಾಗಿ ಘೋಷಿಸುತ್ತವೆ. ಆದರೆ ಪರಿಹಾರ ಪಡೆಯಲು ಇಂದಿಗೂ ಹೆಣಗಾಡುತ್ತಿರುವ ಅಮಾಯಕರ ಪಾಡು ಗ್ರಹಿಕೆಗೆ ನಿಲುಕದ್ದು. ಕಾರ್ಖಾನೆಯಲ್ಲಿ ಜೀವ ಹಾನಿ ಮಾಡುವ ರಾಸಾಯನಿಕವನ್ನು ಸಂಗ್ರಹಿಸಿಡುವಲ್ಲಿ ನಿರ್ಲಕ್ಷ್ಯ ತೋರಿದ ಆಡಳಿತ ಮಂಡಲಿ ದುರ್ಘಟನೆಯ ನಂತರವೂ ಅದೇ ಮನೋಭಾವವನ್ನು ಪ್ರದರ್ಶಿಸಿದ್ದು ಸರ್ಕಾರದ ಕಣ್ಣಿಗೆ ಗೋಚರಿಸಲೇ ಇಲ್ಲ. ತತ್ಪರಿಣಾಮವಾಗಿ ವರ್ಷಗಳು ಕಳೆದಂತೆ ಅಳಿದುಳಿದ ರಾಸಾಯನಿಕವೂ ಬಾವಿ, ಕೆರೆಗಳಲ್ಲಿನ ನೀರನ್ನು ಕಲುಷಿತಗೊಳಿಸಿತ್ತು. ಇಡೀ ಒಂದು ಪೀಳಿಗೆ ಜನ ಅನಾರೋಗ್ಯದೊಂದಿಗೇ ಬದುಕಬೇಕಾಯಿತು. ಈ ಕರಾಳ ದುರ್ಘಟನೆಗೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿ ತಯಾರಿಸುವ ಎವರೆಡಿ ಬ್ಯಾಟರಿಗಳು ಇಂದಿಗೂ ಭಾರತದ ಅನೇಕ ಮನೆಗಳನ್ನು ಬೆಳಗುತ್ತಲೇ ಇವೆ !

ಸಂಘರ್ಷದ ಹಾದಿ ಭೂಪಾಲ್ ಅನಿಲ ದುರಂತದ ವಿರುದ್ಧ ನಡೆದಿರುವ ಹೋರಾಟದ ವೈಶಿಷ್ಟ್ಯವೆಂದರೆ ಈ ಸಂಘರ್ಷದಲ್ಲಿ ಮುಂಚೂಣಿಯಲ್ಲಿರುವವರು ಮಹಿಳೆಯರು. ಎಂದಿಗೂ ತಮ್ಮ ಮನೆಗಳ ನಾಲ್ಕು ಗೋಡೆಗಳನ್ನು ದಾಟದ ಈ ಮಹಿಳೆಯರು ತಮ್ಮ ಕುಟುಂಬಗಳ ಆಧಾರ ಸ್ತಂಭಗಳನ್ನು ಕಳೆದುಕೊಂಡ ನೋವಿನಲ್ಲೇ ಮೂರು ದಶಕಗಳ ಸುದೀರ್ಘ ಹೋರಾಟ ನಡೆಸಿದ್ದಾರೆ, ಇಂದಿಗೂ ನಡೆಸುತ್ತಿದ್ದಾರೆ. ಈ ಅರೆ ಅಕ್ಷರಸ್ತ-ಅನಕ್ಷರಸ್ತ ಮಹಿಳೆಯರು ಹೋರಾಟದ ಕಾವನ್ನು ಇಂದಿಗೂ ಜೀವಂತವಾಗಿರಿಸಿರುವುದು ಚಾರಿತ್ರಿಕ ಅಂಶ. ಆದರೆ ಈ ಶಾಂತಿಯುತ ಹೋರಾಟಕ್ಕೆ ಸಿಕ್ಕ ಪ್ರತಿಫಲ ? 1989ರಲ್ಲಿ ಯೂನಿಯನ್ ಕಾರ್ಬೈಡ್ ಮತ್ತು ಭಾರತ ಸರ್ಕಾರದ ನಡುವೆ ಒಂದು ಒಪ್ಪಂದ ಏರ್ಪಟ್ಟಿತು. ಭಾರತ ಸರ್ಕಾರ ಕಂಪನಿಯ ಮೇಲೆ ಮೂರು ಬಿಲಿಯನ್ ಡಾಲರ್ ನಷ್ಟ ಪರಿಹಾರ ಕೇಳಿ ಮೊಕದ್ದಮೆ ಹೂಡಿತ್ತು. ಆದರೆ ಕೊನೆಗೆ ಒಪ್ಪಿದ್ದು ಶೇ. 15ರಷ್ಟಕ್ಕೆ ಮಾತ್ರ. ದುರಂತದಲ್ಲಿ ಉಳಿದ ಎಲ್ಲರಿಗೂ ತಲಾ 25 ಸಾವಿರ ರೂಗಳ ಪರಿಹಾರ ನೀಡಲು ನಿರ್ಧರಿಸಲಾಯಿತು. ಈ ಬೃಹತ್(!) ಮೊತ್ತವನ್ನು ಪಡೆಯಲು ವರ್ಷಾನುಗಟ್ಟಲೆ ಕಾಯಬೇಕಾಯಿತು. ಅನೇಕರು ಪರಿಹಾರ ಪಡೆಯದೆಯೇ ಇಹಲೋಕ ತ್ಯಜಿಸಿದ್ದೂ ಉಂಟು. ವಿಷಾನಿಲದ ಪ್ರಭಾವದಿಂದ ವಿಕಲಾಂಗರಾಗಿ ಹುಟ್ಟಿದ ಮಕ್ಕಳಿಗೆ ಇಂದಿಗೂ ಯಾವುದೇ ಪರಿಹಾರ ನೀಡಲಾಗಿಲ್ಲ.

ಕಳೆದ 34 ವರ್ಷಗಳಲ್ಲಿ ಭೂಪಾಲ್ ಅನಿಲ ದುರಂತ ಪೀಡಿತ ಜನರ ಸಂಘಟನೆ ಅನುಸರಿಸದ ಹೋರಾಟದ ಮಾರ್ಗಗಳೇ ಇಲ್ಲ. ಬಂದ್, ಧರಣಿ, ರ್ಯಾಲಿ, ಪ್ರತಿಭಟನೆ, ಮನವಿ ಪತ್ರ, ರಸ್ತೆ ರೋಕೋ, ಮಾನವ ಸರಪಳಿ ಇತ್ಯಾದಿ. ಆದರೆ ಅವರು ಎದುರಿಸಿದ್ದು ಸಾಂತ್ವನ ಹೇಳುವ ಆಳ್ವಿಕರನ್ನಲ್ಲ, ಪೊಲೀಸ್ ಲಾಠಿ, ಅಶ್ರುವಾಯು, ಜೈಲುವಾಸ, ಭ್ರಷ್ಟಾಚಾರ ಮತ್ತು ನಿರಂತರ ಕೋರ್ಟು ಕಟ್ಟಳೆ ಇತ್ಯಾದಿ. ಇಂದಿಗೂ ನೊಂದಿತ ಜನ ನೌಕರಿಗಾಗಿ, ಆರೋಗ್ಯ ಸೌಕರ್ಯಕ್ಕಾಗಿ, ಮನೆಗಳಿಗಾಗಿ, ಔಷದಿಗಾಗಿ ಆಗ್ರಹಿಸುತ್ತಲೇ ಇದ್ದಾರೆ. ಇಂದಿಗೂ ರಾಸಾಯನಿಕ ಪ್ರಕ್ರಿಯೆಯಿಂದ ಅಸಹಾಯಕ ಶ್ರಮಿಕರು ಸಾಯುತ್ತಲೇ ಇದ್ದಾರೆ. ಆದರೆ ನೈಸರ್ಗಿಕ, ಮಾನವ ಪ್ರೇರಿತ, ಧರ್ಮಾಧಾರಿತ ಹಿಂಸೆಗೆ ಬಲಿಯಾದ ಅನೇಕರಲ್ಲಿ ಇವರೂ ಸೇರಿಹೋಗಿದ್ದಾರೆ. ಹಾಗಾಗಿ ಶವಗಳನ್ನು ಎಣಿಸುವ ಗೋಜಿಗೆ ಯಾರೂ ಹೋಗಿಲ್ಲ.
1999ರಲ್ಲಿ ಭೂಪಾಲ್ ಅನಿಲ ದುರಂತ ಪೀಡಿತರ ಸಂಘರ್ಷ ಸಮಿತಿ ಯೂನಿಯನ್ ಕಾರ್ಬೈಡ್‍ನ ಅಧ್ಯಕ್ಷ ಆಂಡರ್‍ಸನ್ ಅವರ ವಿರುದ್ಧ, ಅಂತರರಾಷ್ಟ್ರೀಯ ಅಪರಾಧ ಕಾನೂನು, ಪರಿಸರ ಮಾಲಿನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳನ್ನು ಹೊರಿಸಿ ನ್ಯೂಯಾರ್ಕಿನ ದಕ್ಷಿಣ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ 2001ರಲ್ಲಿ ಅಮೆರಿಕದ ಮತ್ತೊಂದು ಬಹುರಾಷ್ಟ್ರೀಯ ಕಂಪನಿಯಾದ ಡೌ ಕೆಮಿಕಲ್ಸ್ ಯೂನಿಯನ್ ಕಾರ್ಬೈಡ್ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡ ನಂತರ ಇಡೀ ಮೊಕದ್ದಮೆಯೇ ಹೊಸ ತಿರುವು ಪಡೆದುಕೊಂಡಿತು. ಡೌ ಕೆಮಿಕಲ್ಸ್‍ನ ಆಡಳಿತ ಮಂಡಳಿ ಯೂನಿಯನ್ ಕಾರ್ಬೈಡ್‍ನ ಬಾಧ್ಯತೆಗಳನ್ನು ತೀರಿಸಲು ಒಪ್ಪಿಕೊಳ್ಳಲಿಲ್ಲ. ಕಾರ್ಬೈಡ್ ಕಂಪನಿಯನ್ನು ನ್ಯಾಯಾಂಗ ಪ್ರಕ್ರಿಯೆಗೆ ಒಪ್ಪಿಸಲು ನಿರಾಕರಿಸಿತು. ಬದಲಾಗಿ ಕಂಪನಿಯ ವಿರುದ್ಧ ಜನ ನಡೆಸಿದ ಪ್ರತಿಭಟನೆಯಿಂದ ನಷ್ಟವಾಗಿದೆ ಎಂದು 10 ಸಾವಿರ ಡಾಲರ್ ಪರಿಹಾರ ಕೇಳಿ ಮೊಕದ್ದಮೆ ಹೂಡಿತ್ತು.

ಏತನ್ಮಧ್ಯೆ ಅಂಡರ್‍ಸನ್ ವಿರುದ್ಧ ಮೊಕದ್ದಮೆ ಗಂಭೀರ ಸ್ವರೂಪ ಪಡೆಯುತ್ತಿತ್ತು. ಕಾರ್ಬೈಡ್ ಕಂಪನಿಯ ತಂತ್ರಜ್ಞಾನ ಮತ್ತು ವಿನ್ಯಾಸಗಳ ನಿರ್ವಹಣೆ ಹೊತ್ತಿದ್ದ ಅಂಡರ್‍ಸನ್‍ಗೆ, ಭೂಪಾಲ್ ಘಟಕದಲ್ಲಿ ಅನಿಲ ಸೋರಿಕೆಯಾಗುತ್ತಿದ್ದ ಬಗ್ಗೆ ತಜ್ಞರ ತಂಡವೊಂದು ಮುನ್ಸೂಚನೆ ನೀಡಿದ್ದರೂ ಅವರು ದಿವ್ಯ ನಿರ್ಲಕ್ಷ್ಯ ತೋರಿದ್ದರು. ಈ ಕ್ರೂರಿಯನ್ನು ಬಂಧಿಸಲು ಇದೊಂದೇ ಕಾರಣ ಸಾಕಾಗಿತ್ತು. ಆದರೆ 2001ರಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ ಭಿನ್ನವಾಗಿ ಯೋಚಿಸಿತ್ತು. ಅಂದಿನ ಅಟೋರ್ನಿ ಜನರಲ್ ಸೊರಾಬ್ಜಿಯವರು ಅಂಡರ್‍ಸನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಶಿಫಾರಸ್ಸು ಮಾಡಿದ್ದರು. “ ಮಾನವೀಯತೆಯ ದೃಷ್ಟಿಯಿಂದ ಅಂಡರ್‍ಸನ್ ಅವರನ್ನು ಭಾರತಕ್ಕೆ ಒಪ್ಪಿಸಲು ಆಗ್ರಹಿಸಲಾಗುವುದಿಲ್ಲ. ಆತನಿಗೆ 81 ವರ್ಷ ವಯಸ್ಸಾಗಿದೆ, ಘಟನೆ ನಡೆದು 17 ವರ್ಷಗಳೇ ಸಂದಿವೆ, ಹಾಗಾಗಿ ಅಮೆರಿಕ ಸರ್ಕಾರ ಆತನನ್ನು ಭಾರತಕ್ಕೆ ಒಪ್ಪಿಸಲು ಸಮ್ಮತಿಸಲಾರದು ” ಎಂಬ ಸೊರಾಬ್ಜಿ ಅವರ ಅಭಿಪ್ರಾಯವನ್ನು ಪ್ರಕಾಶಿಸುವ ಭಾರತದ ಪ್ರತಿನಿಧಿಯಾಗಿದ್ದ ವಾಜಪೇಯಿ ಮೌನವಾಗಿ ಸ್ವೀಕರಿಸಿದ್ದರು.
ಡಿಸೆಂಬರ್ 6 ನಮಗೆ ನೆನಪಾಗುತ್ತದೆ, ನವಂಬರ್ 26 ನೆನಪಾಗುತ್ತದೆ, ಅಕ್ಟೋಬರ್ 31-ಸಿಖ್ ಹತ್ಯಾಕಾಂಡ ನೆನಪಾಗುತ್ತದೆ, ಗುಜರಾತ್ ನೆನಪಾಗುತ್ತದೆ ಆದರೆ ಈ ಎಲ್ಲ ಗಾಯಗಳು ಮಾಸಿದರೂ ಮಾಸದ ಒಂದು ಗಾಯ ಡಿಸೆಂಬರ್ 2-3ರಂದು ಸಂಭವಿಸಿದ್ದು ಭೂಪಾಲ್‍ನಲ್ಲಿ. ಅನಿಲ ದುರಂತದ ಮೂಲಕ. ಪೀಳಿಗೆಯಿಂದ ಪೀಳಿಗೆಗೆ ಹರಡುವ ಈ ದುರಂತದ ದುಷ್ಪರಿಣಾಮಗಳು ಈಗಾಗಲೇ ಒಂದು ಪೀಳಿಗೆ ಬಲಿಯಾಗಿದೆ. ಮತ್ತೊಂದು ಪೀಳಿಗೆ ಬಲಿಪೀಠಕ್ಕೆ ಸಿದ್ಧವಾಗುತ್ತಿದೆ. 6-12 ಮತ್ತು 26-11ರ ಘಟನೆಗಳ ಅಪರಾಧಿಗಳಿಗೆ ಶಿಕ್ಷೆ ನೀಡಲು ಇಡೀ ದೇಶವೇ ಉತ್ಸುಕವಾಗಿದೆ. ಸಂಸತ್ತಿನಲ್ಲಿ ದೇಶಭಕ್ತರು ಹುತಾತ್ಮರಿಗೆ ಕಣ್ಣೀರು ಸುರಿಸುತ್ತಾರೆ. ಆದರೆ 5 ಲಕ್ಷ ಅಮಾಯಕ ಜನತೆಯ ಬಲಿ ತೆಗೆದುಕೊಂಡಿರುವ, ಎರಡು ಪೀಳಿಗೆಯ ಜನಾಂಗವನ್ನು ಬಾಧಿಸುತ್ತಿರುವ, ಮುಂದಿನ ಪೀಳಿಗೆಯಲ್ಲೂ ವಿಕಲಾಂಗ ಮಕ್ಕಳ ಜನನಕ್ಕೆ ಕಾರಣಕರ್ತರಾಗಿರುವ, ಕಾರ್ಬೈಡ್ ಕಂಪನಿಯ ಆಡಳಿತ ಮಂಡಲಿಯನ್ನು ಶಿಕ್ಷಿಸುವಂತೆ ಯಾವುದೇ ಕೂಗು ಕೇಳಿಬರುವುದಿಲ್ಲ. ಮಧ್ಯಪ್ರದೇಶದ ಚುನಾವಣೆಗಳಲ್ಲಿ ಇದು ಉಲ್ಲೇಖಕ್ಕೂ ಅರ್ಹವಾಗದ ವಿಚಾರವಾಗಿರುವುದು ಈ ದೇಶದಲ್ಲಿ ಸಂವೇದನೆ ಸತ್ತುಹೋಗಿರುವುದರ ಸಂಕೇತ ಎನ್ನಬಹುದೇ ?

‍ಲೇಖಕರು Avadhi

December 3, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: