ಭುವನೇಶ್ವರಿ ಹೆಗಡೆ ಅಂಕಣ- ಹಣಕುವೀರ ನೋಟಕರ ನಡುವೆ…

27

ಕಳೆದೆರಡು ವರುಷಗಳ  ಹಿಂದಿನ  ಲಾಕ್ ಡೌನ್ ಎಂಬ ಪದದ ಪರಿಚಯವಿಲ್ಲದ ಕೊರೋನಾವತಾರದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಿ. ಎಂಥ ನಿರಾಳತೆ ಯಿತ್ತು! ಎಂಥ ದಿವಿನಾದ ಭಯವಿಲ್ಲದ ‘ವಾಕ್ ವಿಲಾಸದ ಸ್ವಾತಂತ್ರ್ಯ’ ಲಭ್ಯವಿತ್ತು.? (ಮಾಸ್ಕ್ ನಿಂದ ಬಾಯಿ ಮುಚ್ಚಿಕೊಳ್ಳಬೇಕಿಲ್ಲದ ಯಾರ ಬಳಿಯೇ ಆದರೂ ನಿರ್ಭಯವಾಗಿ ಮುಖಕ್ಕೆ ಮುಖಕೊಟ್ಟು ಬೇಕಾದಷ್ಟು ಮಾತನಾಡಬಹುದಾದ ‘ವಾಕ್ ವಿಲಾಸ ‘ಎಂದಾದರೂ ಅಂದುಕೊಳ್ಳಿ, ಎಲ್ಲೆಂದರಲ್ಲಿ ದಿವಿನಾಗಿ ಅಡ್ಡಾಡುತ್ತಾ ಸ್ನೇಹಿತರ ಜೊತೆ ಬೆಳ ಬೆಳಿಗ್ಗೆ ವಾಕ್ ನೆವದಲ್ಲಿ  ಇಷ್ಟದ ಹೊಟೇಲ್ಲಿಗೆ ನುಗ್ಗಿ ಕಾಫಿ ಕುಡಿಯೋ ‘ವಾಕ್ವಿಲಾಸ’ ಎಂತಾದರೂ  ಅಂದುಕೊಳ್ಳಿ) ಅಂತೂ ನಮ್ಮ ಸ್ವಾತಂತ್ರ್ಯಕ್ಕೆ ಕೊಳ್ಳಿ ಇಡದ ಆ ಸುಂದರ ದಿನಗಳ ಬೆಳಗು ಬೈಗುಗಳ ಹಿಂದಿನ ದಿನವೊಂದನ್ನು ಒಮ್ಮೆ ನೆನಪಿಸಿಕೊಳ್ಳಿ. 

ಸಂಜೆ ಬಿಡಿಬೀಸಾಗಿ ಹೆಜ್ಜೆ ಹಾಕುತ್ತಾ ರಸ್ತೆಬದಿಯಲ್ಲಿ ವಾಕ್ ಹೋಗಿದ್ದೀರಿ. ನಿಮ್ಮ ತಲೆಮಾರಿಗೆ ಅನುಗುಣವಾಗಿ ಒಬ್ಬರೇ ಇದ್ದೀರಾ ಕಟ್ಟಿಕೊಂಡವರನ್ನು ಕರೆದುಕೊಂಡೇ ವಾಕ್ ಹೊರಟಿದ್ದೀರಾ, ಜತೆಯಲ್ಲಿ ನಾಯಿ ಇದೆಯಾ? ಮಂಕಿ ಕ್ಯಾಪ್ ಹಾಕಿದ್ದೀರಾ ಕಿವಿಯಿಂದ ಕೇಳುವ ವಯರ್ ಜೋಡಿಸಿಕೊಂಡಿದ್ದೀರಾ…? ಹೀಗೆ ಯಾವ ಪ್ರಶ್ನೆಗಳನ್ನು ನಾನು ಕೇಳುವುದಿಲ್ಲ. ಆದರೆ ಸಂಜೆಯ ಹೊತ್ತು ಹೀಗೆ ಬಿಡಿ ಬಿಸಾಡಿ ಹೆಜ್ಜೆ ಹಾಕುತ್ತಿರುವ ನಿಮ್ಮ ಅದೃಷ್ಟವನ್ನು ಮಾತ್ರ ಅಭಿನಂದಿಸ ಬಯಸುತ್ತೇನೆ.

ವಾಕ್ ಇಲ್ಲದಿದ್ದರೆ ಮಾನಸಿಕವಾಗಿ ಅಸ್ವಸ್ಥತೆಯನ್ನು ಅನುಭವಿಸುವ ಅನುಭವ ನನಗಿದೆ. ಸರಿ. ರಸ್ತೆ ನಿರ್ಜನವಾಗಿದೆ. ಇದ್ದಕ್ಕಿದ್ದಂತೆ ಎದುರಿನಿಂದ ಬಂದ ಸ್ಕೂಟರ್ ಒಂದು ನಿಮ್ಮ ಹಿಂದೆ ಬರುತ್ತಿರುವ ರಿಕ್ಷಾವೊಂದಕ್ಕೆ ಕುಟ್ಟಿ ದ್ವಿಚಕ್ರ ವಾಹನ ಸವಾರ ಕೆಳಗೆ ಬೀಳುತ್ತಾನೆ. ರಿಕ್ಷಾದವನು ಕೆಳಗಿಳಿದು ಬಂದು ತಪ್ಪು ತನ್ನದಲ್ಲ ಎಂಬುದನ್ನು ನಿರೂಪಿಸಲು ಸುತ್ತ ಮುತ್ತ ನೋಡುತ್ತಾನೆ. ಒಂದೋ ಎರಡೋ ತಲೆಗಳು ಕಾಣಿಸಿಕೊಳ್ಳುತ್ತವೆ. ಓಡೋಡಿ ಬಂದು ದ್ವಿಚಕ್ರ ಸವಾರನನ್ನು ಎತ್ತಿ ನಿಲ್ಲಿಸುತ್ತಾರೆ.ಆಗ ನೋಡಿ ಒಬ್ಬೊಬ್ಬರಾಗಿ ಆ ಮೂಲೆಯಿಂದ, ಈ ಸಿಗ್ನಲ್ ನಿಂದ, ಹಿಂದಿನಿಂದ ಮುಂದಿನಿಂದ ಎಲ್ಲೆಲ್ಲಿಂದ ಬರುತ್ತಾರೋ ತಿಳಿಯದು. ರಿಕ್ಷಾ ಮತ್ತು ಸ್ಕೂಟರಿನ ಸುತ್ತಮುತ್ತ ಒಂದು ಜನರ ಚಕ್ರವ್ಯೂಹವೇ ನಿಂತುಬಿಡುತ್ತದೆ.

ದ್ವಿಚಕ್ರ ಸವಾರನನ್ನು ಎಬ್ಬಿಸಿ ನಿಲ್ಲಿಸಿ ಹೆಚ್ಚೇನೂ ಪೆಟ್ಟಾಗಲಿಲ್ಲ ಅಲ್ಲವೇ ಎಂದು ಕೇಳುವವರು, ಕುಡಿಯಲು ನೀರು ಕೊಡುವವರು ಅವರ ವಸ್ತುಗಳನ್ನು ಎತ್ತಿಕೊಡುವ, ಪೊಲೀಸರಿಗೆ ಫೋನ್ ಮಾಡುವ, ರಿಕ್ಷಾವನ್ನು ಗದರಿಸುವ ಹೀಗೆ ಅನೇಕ ಬಗೆಯ ಮನುಜರು ಅಲ್ಲಿ ಅದೆಲ್ಲಿಂದಲೋ ಬಂದು ಸೇರಿದ್ದಾರೆ. ಅವರೆಲ್ಲ ಈ ಮೊದಲು ಅಲ್ಲಿ ಇದ್ದವರಲ್ಲ. ಎರಡೇ ಎರಡು ನಿಮಿಷದಲ್ಲಿ ಅಲ್ಲೊಂದು ಜನಸಂಖ್ಯಾ ಸ್ಫೋಟವೇ ನಡೆದುಬಿಟ್ಟಿದೆ. ಮಹಿಳೆಯರು ಇಲ್ಲವೆಂದೇನಿಲ್ಲ .ಅಷ್ಟೆಲ್ಲಾ ಜನ ನೆರೆದಾಗ ಒಬ್ಬಂಟಿಯಾಗಿ ವಾಕ್ ಹೋಗುತ್ತಿದ್ದ ನೀವು ಒಂದರೆಗಳಿಗೆ ನಿಂತು ನೋಡಲಾರಿರಾ? ಅಲ್ಲೇ ನಿಲ್ಲುತ್ತೀರಿ. 

ಆಗ ಬಂದ ಯುವಕನೋರ್ವನಿಗೆ ನಿಜವಾಗಿ ನಡೆದಿದ್ದು ಏನೆಂಬುದು ಕಾಣುತ್ತಲೇ ಇಲ್ಲ. ಪಾಪ ಆತ ಹೆಣಗಾಡುತ್ತಾ ಅಲ್ಲಿ ನಿಂತವರನ್ನು ತುಳಿಯುತ್ತಾ ಬದಿಗೆ ಸರಿಸುತ್ತಾ ಮುಂದಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದಾನೆ. ಆತನ ಗಡಿಬಿಡಿ ಅಲ್ಲಿ ನೆರೆದವರಿಗೆ ಅರ್ಥವಾಗಬೇಕಲ್ಲ ನಿರಾತಂಕವಾಗಿ ಆ ದೃಶ್ಯವನ್ನು ನೋಡುತ್ತ ನಿಂತವರು ಆತನನ್ನು ತಡೆಯುತ್ತಾರೆ ತಳ್ಳುತ್ತಾರೆ. ಅಲ್ಲೊಂದು ನೂಕಾಟದ ಸ್ಪರ್ಧೆಯೇ ನಡೆದು ಕೊನೆಗೂ ಆ ಯುವಕ ಮುಂದಿನ ಸಾಲನ್ನು ಗಿಟ್ಟಿಸಿಕೊಂಡು ದೃಶ್ಯವನ್ನು ವೀಕ್ಷಿಸ ತೊಡಗುತ್ತಾನೆ. ಇಂಥದ್ದೊಂದು ರೋಚಕ ದೃಶ್ಯ ಕಣ್ಣೆದುರು ಸಿಕ್ಕರೆ ಅದನ್ನು ಕಣ್ತುಂಬಿಸಿಕೊಂಡು ಹೋಗಬೇಕೆಂಬ ಭಾವುಕ ಹುಡುಗ ಆತ.ಕುತೂಹಲ ದಿಂದ ನಿಂತುಬಿಡುತ್ತಾನೆ.

ಛೇ ಯಾವ ನಮೂನೆ ಸ್ಪೀಡಲ್ಲಿ ಬರುತ್ತಾರೆ ಮಾರಾಯ್ರೇ? ಈ ರಿಕ್ಷಾದವರಿಗೆ ರೂಲ್ಸೇ ಇಲ್ಲ ಆ ಹುಡುಗನೂ ಅಷ್ಟಿಷ್ಟು ನೋಡಿಕೊಂಡು ಗಾಡಿ ಬಿಡಬಾರದಾ ? ಏನೋ ಬೇರೆ ವೆಹಿಕಲ್ಲುಗಳು ಬರುತ್ತಿರಲಿಲ್ಲ. ಹುಡುಗನ ತಂದೆ ತಾಯಿಗಳ ಅದೃಷ್ಟ ಚೆನ್ನಾಗಿತ್ತು .ಇಲ್ಲವಾದರೆ ಯಾವುದೋ ಲಾರಿಯ ಚಕ್ರ ತಲೆಯ ಮೇಲೆ ಹೋದರೆ ಆಯ್ತಲ್ಲ ಈಗಿನ ಹುಡುಗರಿಗೆ ದ್ವಿಚಕ್ರ ವಾಹನ ಏರಿದರೆ ತಲೆಯೇ ನೆಟ್ಟಗಿರುವುದಿಲ್ಲ… ನಿಷ್ಠುರ ವಿಮರ್ಶೆ ಪ್ರಾರಂಭವಾಗುತ್ತದೆ.

ಜನ ಬಂದು ಸೇರುತ್ತಲೇ ಇದ್ದಾರೆ. ಹುಡುಗನಿಗೆ ಕೈಕಾಲು ಮುರಿದಿರಬೇಕು ಎತ್ತಿ ಕೂಡಿಸಿದ ಹಾಗೆ ಮತ್ತೆ ಬೀಳುತ್ತಿದ್ದಾನೆ. ಅಷ್ಟರಲ್ಲಿ ಪೋಲಿಸರ ಆಗಮನವಾಗುತ್ತದೆ ಗುಂಪು ಸೇರಿದ ಜನರಲ್ಲಿ ವಿದ್ಯುತ್ ಸಂಚಾರ. ಪಂಚನಾಮೆ ನಡೆದು ಅಲ್ಲಿೇ ಯಾರೋ ಒಂದೆರಡು ಸಹಿ ಹಾಕಿ ಆತನನ್ನು ಅದೇ ರಿಕ್ಷಾದಲ್ಲಿ ಹಾಕಿ ಆಸ್ಪತ್ರೆಗೆ ಒಯ್ಯಲಾಗುತ್ತಿದೆ. ಮುಖ್ಯ ದೃಶ್ಯ ಮುಗಿದ ಮೇಲೂ ಜನ ದಟ್ಟಣೆ ಕಳಚಿಕೊಳ್ಳುವ ಲಕ್ಷಣವಿಲ್ಲ ಪುರುಸೊತ್ತಿದ್ದವರು ಅಲ್ಲೇ ನಿಂತು ಆ ಘಟನೆಯ ಬಗ್ಗೆ ವಿಮರ್ಶೆ ನಡೆಸುತ್ತಲೇ ಇದ್ದಾರೆ.

ಕೊನೆಗೂ ಪೊಲೀಸನೊಬ್ಬ ನೀವೇನು ಮಾಡ್ತೀರಿ ಇಲ್ಲಿ ನಿಂತು? ಸುಮ್ಮನೆ ನಿಮ್ಮ ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ವಿಶಲ್ ಊದಿದ ಮೇಲೆ ಒಬ್ಬೊಬ್ಬರೇ ನಿಧಾನವಾಗಿ ಅಲ್ಲಿಂದ  ಹೆಜ್ಜೆ ಕಿಳ ತೊಡಗುತ್ತಾರೆ. ಅಲ್ಲಿಗೆ ನಿಮ್ಮಅಂದಿನ ವಾಕಿಂಗ್ ಮುಗಿಯಿತು ಎಂದೇ ಲೆಕ್ಕ. ಆ ಪರಿ ಕುತೂಹಲದಿಂದ ಘಟನೆಗಳನ್ನು ವೀಕ್ಷಿಸುತ್ತಿದ್ದ ವ್ಯಕ್ತಿಗಳೆಲ್ಲ ಆ ಬಳಿಕ ಅದೆಲ್ಲಿ ಮಾಯವಾಗುತ್ತಾರೊ ಕುತೂಹಲ ಕಳೆದುಕೊಂಡ ದ್ರಶ್ಯಕ್ರಮೇಣ ಮಸುಕಾಗುತ್ತಾ ಹೋಗಿ ಸ್ವಲ್ಪ ಹೊತ್ತಿನಲ್ಲೇ ಅಲ್ಲೊಂದು ಅಪಘಾತ ನಡೆದದ್ದೇ ಸುಳ್ಳೆಂಬಷ್ಟು ವಾತಾವರಣ ಸಹಜವಾಗಿ ಬಿಡುತ್ತದೆ.

 ಇಂಥ ‘ಹೆದ್ದಾರಿ ನೋಟಕ’ ರಿಗೆ ಹಳ್ಳಿಗಳಲ್ಲಿ ಹೆಚ್ಚು ರೋಚಕ ದೃಶ್ಯಗಳು ಲಭ್ಯವಿರುವುದಿಲ್ಲ. ಅದೇನಿದ್ದರೂ ನಗರದ ವಾಹನಗಳ ಭರಾಟೆಯ ಹೆದ್ದಾರಿ ನಗರದ ದಾರಿಗಳಲ್ಲಿಯೇ ಹೆಚ್ಚು. ಈಗೀಗ ರಸ್ತೆಗಳನ್ನು ಡಾಂಬರಿನಿಂದ ಮೇಲ್ದರ್ಜೆಗೇರಿಸಿ ಕಾಂಕ್ರಿಟೀಕರಣ ಮಾಡುವ ಖಯಾಲಿಯೂ ಆಳುವವರಿಗೆ ತಗಲಿ ಕೊಂಡಿ ರುವುದರಿಂದ ಅಮಾಯಕರ ಅಪಘಾತಗಳ ಸಂಖ್ಯೆ ಹೆಚ್ಚತೊಡಗಿದೆ. ಹೆದ್ದಾರಿ ಬದಿಯ ನೋಟಕರಿಗೆ ಧಾವಿಸಿ ನೋಡಲು ಪುರುಸೊತ್ತಿಲ್ಲದಷ್ಟು ದೃಶ್ಯಗಳು.

ಈ ಕುತೂಹಲದ ನೋಟಕರಿಗೆ ಅಪಘಾತಗಳೇ ಆಗಬೇಕೆಂದಿಲ್ಲ. ದಾರಿಯಲ್ಲಿ ಸಾಗುತ್ತಿರುವ ಮದುವೆ ದಿಬ್ಬಣ, ಶವಯಾತ್ರೆ, ಸ್ಕೂಲ್ ಮಕ್ಕಳ ಪರೇಡು, ನೂರು ರೂಪಾಯಿಗೆ 3 ಬೆಡ್ ಶೀಟ್ ಗಳು ಫ್ಯಾಕ್ಟರಿ ಸೇಲ್ ಎಂದು ಲೌಡ್ ಸ್ಪೀಕರಿನಲ್ಲಿ ಬಿತ್ತರಿಸುತ್ತಾ ನಿಂತ ಲಾರಿಯೂ ಆಗಬಹುದು.  ಯಾವುದೂ  ಆಗುತ್ತದೆ. ಈ ಜನಕ್ಕೆ ದಾರಿಯ ಮೇಲೆ ಸಪ್ಪಳ ಕೇಳಿದರಾಯಿತು ತಾವು ಅಲ್ಲಿಗೆ ಧಾವಿಸಿಬಿಡಬೇಕು, ಅಲ್ಲೇನು ಸಪ್ಪಳ ಅಲ್ಯಾರ ಹೆಜ್ಜೆ? ಅದೇನು ನಡೆಯುತ್ತಿದೆ ಎಂಬುದನ್ನು ನೋಡಿಬಿಡಬೇಕು. ಇದಷ್ಟೇ ಈ ಮುಗ್ಧ ನೋಟಕರ ಉದ್ದೇಶ. ಅದರಿಂದ ವ್ಯಯವಾಗುವ ಸಮಯವೆಷ್ಟು?         

ತಮಗಿಂತ ಮೊದಲೇ ಅಲ್ಲಿಗೆ ಧಾವಿಸಿ ನುಗ್ಗಿ ಬಗ್ಗಿ ಕಣ್ ಮುಂದಿನ ದೃಶ್ಯವನ್ನು ನೋಡಿದವರಿಗೆ ಆದ ಲಾಭವಾದರೂ ಏನು ಹಾಗೆ ಹಣಕಿ ನೋಡುವುದರಿಂದ ತಮಗೇನು ಸಿಕ್ಕಿತು ಎಂಬೆಲ್ಲಾ ಲೆಕ್ಕಾಚಾರ ತಿಳಿಯದ ಮುಗ್ಧ ನಾಗರಿಕರು ಇವರು. ಆದರೆ ಇವರ ಸಂಖ್ಯೆ ಜಾಸ್ತಿ ಆಗುವುದು ಮಾತ್ರ ಉದ್ಭವಿಸುವ ಸಮಸ್ಯೆ ಅಷ್ಟೆ. ಕೆಲ ಬಾರಿ ಇಂಥ ನೋಟಕರ ಜನದಟ್ಟಣೆಯನ್ನು ನಿಯಂತ್ರಿಸಲು ಲಾಠಿ ಚಾರ್ಜು ಮಾಡಬೇಕಾಗಿಯೂ ಬರುವುದುಂಟು. ಒಟ್ಟಾರೆ ಅವರ ಕುತೂಹಲ ಪೋಲೀಸರಿಗೆ ತಲೆಬೇನೆ. ಇದೊಂದು ದೃಷ್ಟಿಯಿಂದ ಲಾಕ್ ಡೌನ್ ಎಂದರೆ ತಣ್ಣನೆಯ ಹೆದ್ದಾರಿಯಲ್ಲಿ ಜನಸಂಖ್ಯೆ ಇಲ್ಲದ ತಲೆಬೇನೆ ಇಲ್ಲದ ದಿನಚರಿ. ನಿರ್ಜನ ನಿಶ್ಯಬ್ಧ ನಿಶ್ಚಲ ನಿಶ್ಚಿಂತ ಹೀಗೆ ಎಷ್ಟೋ ನಿಕಾರಗಳನ್ನು ಉದ್ಗರಿಸಬಹುದಾದ ನೀರವ ದ್ರಶ್ಯ.

‍ಲೇಖಕರು Admin

January 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: