ಭುವನೇಶ್ವರಿ ಹೆಗಡೆ ಅಂಕಣ- ಮತ್ತದೇ ಹಿರಿಯಕ್ಕನ ನಗೆಯನ್ನು ನಕ್ಕ ನನ್ನ ಪ್ರಿಯ ವಿದ್ಯಾರ್ಥಿನಿ…

24

ಕಾಲೇಜು ಚುನಾವಣೆಯ ನೆನಪು ತಂದ ಪ್ರಿಯ ವಿದ್ಯಾರ್ಥಿನಿ ರಜನಿ…

ನಾನು ಮಂಗಳೂರು ಸರಕಾರಿ ಕಾಲೇಜನ್ನು ಸೇರಿದ ಸಮಯದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಗಳೆಂದರೆ ಹೆಚ್ಚು ಕಡಿಮೆ ವಿಧಾನಸಭೆ ಲೋಕಸಭೆ ಗಳಿಗೆ ನಡೆಯುವ ಚುನಾವಣೆಗಳಂತೆ ಭಾಸವಾಗುವ ತುರುಸಿನ ಸ್ಪರ್ಧೆ ಏರ್ಪಡುತ್ತಿತ್ತು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಧನಬಲ ಇದ್ದವನು ನಿಲ್ಲಲಾಗುತ್ತಿರಲಿಲ್ಲ. ತಂದೆಯಾದವನು ಉದ್ಯಮಪತಿಯೋ ವ್ಯಾಪಾರಿಯೋ ಇನ್ನೇನೋ ಆಗಿದ್ದು ಚೆನ್ನಾಗಿ ಹಣವನ್ನು ನೀರಿನಂತೆ ಖರ್ಚು ಮಾಡಬಲ್ಲ ಅಭ್ಯರ್ಥಿ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಿಲ್ಲಬಹುದಾಗಿತ್ತು. ಉಪಾದ್ಯಕ್ಷ, ಕಾರ್ಯದರ್ಶಿ ಹಾಗೂ ವಿದ್ಯಾರ್ಥಿನಿಯರ ಪ್ರತಿನಿಧಿಯಾಗಿ ಜತೆಕಾರ್ಯದರ್ಶಿನಿಯೋರ್ವಳ ಆಯ್ಕೆ ನಡೆಯಬೇಕಿತ್ತು. ಕಾಲೇಜು ಚುನಾವಣೆಯೆಂದರೆ ಕನಿಷ್ಠ ಏಳೆಂಟು ದಿನಗಳ ಕಾರ್ಯಕ್ರಮವೇ ಆಗಿ ಪಾಠ ಪ್ರವಚನಗಳಿಗೆ ವಿದ್ಯಾರ್ಥಿಗಳು ಕನಿಷ್ಠ ಹಾಜರಾತಿ ಇರುತ್ತಿತ್ತು.

ಅಭ್ಯರ್ಥಿಗಳ ಆಯ್ಕೆ ನಡೆದು ಕ್ಲಾಸಿನಲ್ಲಿ ತರಗತಿ ಪ್ರತಿನಿಧಿಗಳ ಆಯ್ಕೆ ಆಗಬೇಕಿತ್ತು. ಬಳಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಕಣದಲ್ಲಿ ಇರುವ ಪ್ರತಿಯೊಬ್ಬರೂ ತರಗತಿಗಳಿಗೆ ಹೋಗಿ ಮತಯಾಚನೆ ಮಾಡಲಿಕ್ಕಿರುತ್ತಿತ್ತು. ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವಿಕೆ ಪ್ರಚಾರ, ಮತದಾನ, ಮತ ಎಣಿಕೆ, ಫಲಿತಾಂಶ ಘೋಷಣೆ ಹೀಗೆ ಕ್ರಮಬದ್ಧವಾಗಿ ಕಾಲೇಜು ಚುನಾವಣೆ ನಡೆದು ಅಭ್ಯರ್ಥಿಯ ಜಯ ಘೋಷಣೆ ಆಗುತ್ತಿದ್ದಂತೆ ಬೆಂಬಲಿಗರಿಂದ ಮುಗಿಲು ಮುಟ್ಟುವಂತೆ ಹರ್ಷೋದ್ಗಾರ ಪಟಾಕಿ ಸಿಡಿತ ಹುಲಿಕುಣಿತ ಹಾರ ತುರಾಯಿಗಳ ತೂರುವಿಕೆ ಹೀಗೆ ಚುನಾವಣಾ ಸಂಬಂಧಿ ಕಾರ್ಯಕ್ರಮಗಳ ಪಟ್ಟಿ ಸಾಕಷ್ಟು ದೊಡ್ಡದಿರುತ್ತಿತ್ತು. 

ನನ್ನ ಸರ್ವೀಸಿನ ಕೊನೆಯ ವರ್ಷದ ತನಕವೂ ಚುನಾವಣೆಯ ಮುಂಚಿನ ದಿನ ನಡೆಯುವ ಮತಗಟ್ಟೆ ತಯಾರಿಯ ಉಸ್ತುವಾರಿಯಲ್ಲಿ ನಾನೂ ಇರುತ್ತಿದ್ದೆ. ಪ್ರತಿ ಮತಗಟ್ಟೆಗೂ ಮತಪೆಟ್ಟಿಗೆ, ಬ್ಯಾಲೆಟ್ ಪೇಪರ್, ಕೈಗೆ ಹಚ್ಚುವ ಸಹಿ ಶಾಯಿ, ಮತ ಒತ್ತಲು ಮುದ್ರೆಗಳು, ಗುಪ್ತ ಮತದಾನಕ್ಕೆ ಜಾಗ ಮಾಡಲು ರಟ್ಟಿನ ಪೆಟ್ಟಿಗೆ ಸಿಬ್ಬಂದಿಗಳಿಗೆ ಕೂತುಕೊಳ್ಳಲು ಆಸನ ವ್ಯವಸ್ಥೆ, ವಿದ್ಯಾರ್ಥಿಗಳು ಪ್ರವೇಶಿಸಿ ಮತ ನೀಡಿ ನಿರ್ಗಮಿಸಲು ಬೇಕಾದ ಸ್ಥಳ ಹೀಗೆ ಮತಗಟ್ಟೆ ಅಧಿಕಾರಿಗಳಿಗೆ ದೊಡ್ಡದೊಂದು ಜವಾಬ್ದಾರಿಯೇ ಇರುತ್ತಿತ್ತು ಮುಂಚಿನ ದಿನ ಎಲ್ಲವನ್ನೂ ಸಿದ್ಧಪಡಿಸಿ ನಮ್ಮ ನಮ್ಮ ಮನೆಗಳಿಗೆ ಅಧ್ಯಾಪಕರ ನಾವು ತೆರಳುವಾಗ ಸರಿ ರಾತ್ರಿ ಕಳೆದಿರುತ್ತಿತ್ತು.

ವಿದ್ಯಾರ್ಥಿ ಸಂಘದ ಚುನಾವಣೆಯ ಬೆಳಿಗ್ಗೆ ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ಗುರುತಿನ ಚೀಟಿಯೊಂದಿಗೆ ಕಾಲೇಜಿನಲ್ಲಿ ಸುತ್ತಾಡ ತೊಡಗುತ್ತಿದ್ದರು. ಒಂದೊಂದು ಊರಿನಲ್ಲಿ ಒಂದೊಂದು ತರಗತಿಯ ವಿದ್ಯಾರ್ಥಿಗಳಿಗೆ ಮತದಾನ ಕ್ಲಾಸ್ ರಜಿಸ್ಟರ್ ಪಟ್ಟಿಯೊಂದಿಗೆ ಬಾಗಿಲಿನಲ್ಲಿಯೇ ಓರ್ವ ಪ್ರಾಧ್ಯಾಪಕರು. ಅವರ ಹೆಸರು, ಗುರುತಿನ ಚೀಟಿ ಪರಿಶೀಲಿಸಿ ಒಳಗೆ ಬಿಡುವುದು ಅವರು ತಮ್ಮ ತಮ್ಮ ಇಷ್ಟದ ಅಭ್ಯರ್ಥಿಗೆ ಮತ ಚಲಾಯಿಸಿ ಹೊರ ಬರುವುದು, ನಡುವೆ ಹೆಬ್ಬೆರಳು ಮೇಲೆತ್ತಿ ವಿಜಯದ ಸಂಕೇತ ತೋರಿಸುತ್ತಾ ತಮ್ಮ ಅಭ್ಯರ್ಥಿಗೆ ಹುರುಪು ನೀಡುವುದು ಮೊದಲಾದವು ನಡೆದೇ ಇರುತ್ತಿದ್ದವು .       

ಬೆಳಿಗ್ಗೆ ಇಡೀ ಮತದಾನ ನಡೆದರೆ ಮಧ್ಯಾಹ್ನ ಊಟದ ನಂತರ ಮತ ಎಣಿಕೆ ಕಾರ್ಯಕ್ರಮ ಪ್ರಾರಂಭ. ಅದಕ್ಕಾಗಿ ಪ್ರತ್ಯೇಕವಾಗಿ ಸೈನ್ಸ್ ಬ್ಲಾಕಿನಲ್ಲಿ  ಪ್ರತ್ಯೇಕ ವಾಗಿ ಭದ್ರತಾ ಸಿಬ್ಬಂದಿಗಳ ಕಾವಲಿನಲ್ಲಿ ಮತಎಣಿಕೆ ಶುರುವಾಗುತ್ತಿತ್ತು ಕೆಳಗೆ ವಿದ್ಯಾರ್ಥಿ ಸಮೂಹ ತಮ್ಮ ತಮ್ಮ ಮುಂದಾಳುವಿನ ಪರವಾಗಿ ಘೋಷಣೆ ಕೂಗುತ್ತಾ ಜಯಕಾರ ಹಾಕುತ್ತಾ ತಮ್ಮ ಕುತೂಹಲವನ್ನು ತಣಿಸಲು ಆಗದೆ ಒದ್ದಾಡುತ್ತಿರುವ ಅತ್ಯಂತ ಕೊನೆಗೂ ತರಗತಿ ಪ್ರತಿನಿಧಿಗಳ ಮತಗಳ ಎಣಿಕೆ ನಡೆದು ಯುದ್ಧ ತರಗತಿ ಪ್ರತಿನಿಧಿಗಳನ್ನು ಮಾತ್ರ ಅಲ್ಲಿ ಕೂಡಿಸಿಕೊಂಡು ಸೋತವರನ್ನು ಕೆಳಗೆ ಕಳಿಸಲಾಗುತ್ತಿತ್ತು ಆಗಲೇ ಸಾಮಾನ್ಯ ಚುನಾವಣಾ ಫಲಿತಾಂಶ ನಿರ್ಧಾರವಾಗಿ ಬಿಡುತ್ತಿತ್ತು ಕೆಳಗಿದ್ದ ವಿದ್ಯಾರ್ಥಿಗಳ ಜಯಘೋಷ ಮುಗಿಲು ಮುಟ್ಟಿದ ತೊಡಗುತ್ತಿತ್ತು ಹಾಗೆ ಆರಿಸಿಬಂದ ತರಗತಿ ಪ್ರತಿನಿಧಿಗಳು ಅಧ್ಯಕ್ಷ ಉಪಾಧ್ಯಕ್ಷ ಸಹಕಾರ್ಯದರ್ಶಿನಿ ಹಾಗೂ ಲಲಿತಕಲಾ ಸಂಘದ ಕಾರ್ಯದರ್ಶಿಗಳನ್ನು ಆರಿಸಬೇಕು ಅದಕ್ಕೆ ಪುನಃ ಅಲ್ಲಿಯೇ ಮಿನಿ ಚುನಾವಣೆ.

ಇಷ್ಟೆಲ್ಲಾ ಮುಗಿದು ಕೊನೆಗೂ ಆ ವರ್ಷದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಘೋಷಣೆಯಾಗುತ್ತಿದ್ದಂತೆ ವಿಜಯ ಘೋಷ ಮುಗಿಲು ಮುಟ್ಟಿ ಸೈನ್ಸ್ ಬ್ಲಾಕ್ ನಿಂದ ಕೆಳಗಿಳಿದು ಬರುವ ತಮ್ಮ ಹೀರೋನನ್ನು ಹಾರಗಳಿಂದ ಮುಚ್ಚಿಬಿಡುತ್ತಿದ್ದರು ಅವನನ್ನು ಎತ್ತಿ ಹಿಡಿದು ಇಡೀ ಕಾಲೇಜಿನ ಸುತ್ತ ಮೆರವಣಿಗೆ ಮಾಡುವುದು ಪಟಾಕಿ ಸಿಡಿಸುವುದು ವಿದ್ಯಾರ್ಥಿಗಳು ತಮ್ಮ ಹಕ್ಕಿನಂತೆ ಆಚರಿಸುತ್ತಿದ್ದರು ಮರುದಿನ ತೆರೆದ ಜೀಪಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕೂಡಿಸಿಕೊಂಡು ಇಡೀ ಮಂಗಳೂರು ಸುತ್ತಿ ಮಹಿಳಾ ಕಾಲೇಜುಗಳನ್ನು ಒಂದನ್ನೂ ಬಿಡದೆ ಸುತ್ತು ಹಾಕಿ ಬರುವ ಸಂಪ್ರದಾಯವಿತ್ತು.

ಇತ್ತೀಚೆಗೆ ಈ ಊರ ಮೆರವಣಿಗೆಯನ್ನು ನಿರ್ಬಂಧಿಸಿ ಕಾಲೇಜಿನ ಒಳಗೆ ಮಾತ್ರ ವಿಜಯೋತ್ಸವಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ ಕಾಲೇಜಿನ ವಿದ್ಯಾರ್ಥಿ ಸಂಘದ ಜೊತೆಯಲ್ಲಿಯೇ ಲಲಿತ ಕಲಾ ಸಂಘವು ಆಯ್ಕೆಯಾಗಿ ಇಡೀ ವರ್ಷ ಕಾಲೇಜಿನ ಪಠ್ಯೇತರ ಚಟುವಟಿಕೆಗಳನ್ನು ನಡೆಸುವ ಹೊಣೆಯನ್ನು ಹೊರಬೇಕಾಗುತ್ತದೆ. ವರ್ಷವರ್ಷವೂ ಬೇರೆಬೇರೆ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕಿಯರಿಗೆ ಈ ಲಲಿತಕಲಾ ಸಂಘದ ನಿರ್ದೇಶಕರ ಜವಾಬ್ದಾರಿ ವಹಿಸಲಾಗುತ್ತದೆ ವಿದ್ಯಾರ್ಥಿಗಳ ಜತೆ ಸೌಹಾರ್ದ ಸಂಬಂಧ ಹೊಂದಿದ ಅಧ್ಯಾಪಕರಾದರೆ ಇಡೀ ವರ್ಷದ ಚಟುವಟಿಕೆಗಳು ಸುಲಲಿತವಾಗಿ ಹೋಗುತ್ತಿರುತ್ತವೆ. ಅದಿಲ್ಲದೆ ತಮ್ಮದೇ ದರ್ಪ ಶಿಸ್ತಿನ ಹೆಸರಿನಲ್ಲಿ ಹೇರತೊಡಗಿದರೆ ವಿದ್ಯಾರ್ಥಿ ಸಂಕುಲ ಬಂಡೇಳುವುದು ವಾದ ವಿವಾದ ನಡೆಸುವುದು ಕೊನೆಯಲ್ಲಿ ಸ್ಟ್ರೈಕ್ ತನಕವೂ ಮುಂದುವರಿಯಬಹುದಾದ ಸಂಘರ್ಷ ಏರ್ಪಡುವುದೂ ಇತ್ತು .

ಸಾಮಾನ್ಯ ವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ನಮ್ಮ ಸಂಸತ್ತಿನ ಮತ್ತು ಜನಪ್ರತಿನಿಧಿಗಳ ಆಯ್ಕೆಯ ಕುರಿತು ತಿಳುವಳಿಕೆ ನೀಡಲು ಕಾಲೇಜು ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಏರ್ಪಡಿಸಲಾಗುತ್ತದೆ ಆದರೆ ಇದರಿಂದ ಅಧ್ಯಾಪಕವರ್ಗವೂ ಸಾಕಷ್ಟು ಕಲಿಯುವುದಿರುತ್ತದೆ. ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆಗಳು ಬಂತೆಂದರೆ ಅಧ್ಯಾಪಕವರ್ಗ ಗದಗುಟ್ಟಿ ನಡಗುತ್ತ ನೀರಿಲ್ಲದ ಟಾಯ್ಲೆಟ್ ವ್ಯವಸ್ಥೆ ಇಲ್ಲದ ಯಾವುದೋ ಹಳ್ಳಿಯ ಶಾಲೆಯಲ್ಲಿ ಒಂದೆರಡು ರಾತ್ರಿಹಗಲು ಗಳನ್ನು ಕಳೆದು ಬರಬೇಕಾದ ಚುನಾವಣಾ ಕಾರ್ಯದ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳಲು ನಾನಂತೂ ಅಕ್ಷರಶಃ ಕತ್ತೆಯ ಕಾಲನ್ನು ಅದೆಷ್ಟು ಸಲ ಹಿಡಿದಿದ್ದೆನೋ! ಕೆಲವರಂತೂ ಚುನಾವಣಾ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಪಟ್ಟಿಯಲ್ಲಿ ನಮ್ಮ ಕಾಲೇಜಿನ ಅಧ್ಯಾಪಕರ ಲಿಸ್ಟನ್ನು ನೋಡುತ್ತಲೇ ಜ್ವರ ಬಂದು ಆಸ್ಪತ್ರೆಗೆ ಸೇರುವುದು ಇತ್ತು. 

ಇರಲಿ ನಮ್ಮ ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪ್ರಕ್ರಿಯೆ ಮುಗಿದ ನಂತರ ಬರುವುದೇ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯ ಕ್ರಮ. ಯಥಾಪ್ರಕಾರ ಅದಕ್ಕೆ ದಿನಾಂಕ, ಅತಿಥಿಗಳನ್ನು ಆಹ್ವಾನಿಸುವ ಕುರಿತಾಗಿ ಮೀಟಿಂಗ್ ನಡೆದು ಅದರಲ್ಲಿ ಅಧ್ಯಾಪಕ ವರ್ಗದವರು ಶಿಕ್ಷಣ ತಜ್ಞರು ಸಾಹಿತಿಗಳ ಹೆಸರನ್ನು ಸೂಚಿಸಿದರೆ ವಿದ್ಯಾರ್ಥಿ ಸಮೂಹ ಸಿನಿಮಾ ನಟ ನಟಿಯರು, ಆಟಗಾರರು ತಮಗೆ ಚುನಾವಣೆ ಗೆಲ್ಲಲು ಧನಸಹಾಯ ನೀಡಿದ ರಾಜಕೀಯ ಮುಂದಾಳುಗಳು ಹೀಗೆ ತಮ್ಮಿಷ್ಟದ ಹೆಸರುಗಳನ್ನು ಸೂಚಿಸಿ ಕೊನೆಗೂ ಅವರಿಷ್ಟದ ಅತಿಥಿಯೇ ಆಗಮಿಸುವುದು ಪದ್ಧತಿ. 

2002ಲ್ಲಿರಬೇಕು, ಲಲಿತಕಲಾ ಸಂಘದ ನಿರ್ದೇಶಕ ಸ್ಥಾನದ ಹೊಣೆಗಾರಿಕೆಯನ್ನು ನನಗೆ ವಹಿಸಲಾಗಿತ್ತು. ಆರಿಸಿ ಬಂದ ವಿದ್ಯಾರ್ಥಿಗಳು ಉತ್ತಮ ನಡತೆಯುಳ್ಳವರೂ ಆಗಿದ್ದು ನನ್ನ ಜೊತೆ ಸೌಹಾರ್ದ ಸಂಬಂಧ ಹೊಂದಿದವರೂ ಆಗಿದ್ದರು. ಹಾಗಾಗಿ ಇಡೀ ವರ್ಷದ ಕಾರ್ಯಕ್ರಮವನ್ನು ಅವರ ಸಮಕ್ಷಮದಲ್ಲಿಯೇ ಸಿದ್ಧಪಡಿಸಿ ಸಂಗೀತ ಸಾಹಿತ್ಯ ಕಲೆ ಎಲ್ಲ ವಿಭಾಗಗಳಿಂದಲೂ ಉತ್ತಮ ಕಾರ್ಯಕ್ರಮಗಳನ್ನು ನಿಗದಿಪಡಿಸಿಕೊಂಡೇ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದವು.               

ಸಾಮಾನ್ಯವಾಗಿ ವಿದ್ಯಾರ್ಥಿಸಂಘದ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತರಾಗಿ ಪಾಠ ಪರೀಕ್ಷೆ   ಗಳಲ್ಲಿ ಹೆಚ್ಚು ಅಂಕ ಪಡೆದವರಾಗಿರುವುದಿಲ್ಲ. ಆದರೆ ಆ ವರ್ಷ ನಾವು ಕೆಲವು ಅಧ್ಯಾಪಿಕೆಯರು ವಿದ್ಯಾರ್ಥಿಗಳ ಜತೆ ಸೂಕ್ತ ಸಮಾಲೋಚನೆ ನಡೆಸಿ ಸೈನ್ಸ್ ವಿಭಾಗದಿಂದ ಉತ್ತಮ ಅಂಕಗಳಿಸಿದ ವಿದ್ಯಾರ್ಥಿನಿ ರಜನಿ ಎಂಬವಳನ್ನು ವಿದ್ಯಾರ್ಥಿನಿ ಕಾರ್ಯದರ್ಶಿನಿಯ ಸ್ಥಾನಕ್ಕೆ ನಿಲ್ಲುವಂತೆ ಪುಸಲಾಯಿಸಿದ್ದೆವು. ಆಕೆ ಸೈನ್ಸ್ ವಿಷಯಗಳಲ್ಲಿ  ಉತ್ತಮ ಅಂಕ ಪಡೆಯುತ್ತಿದ್ದುದಲ್ಲದೇ ಸಾಹಿತ್ಯದಲ್ಲಿಯೂ ಆಸಕ್ತಿವಹಿಸಿ ಕಾಲೇಜಿನ ಗೋಡೆ       ಪತ್ರಿಕೆ ‘ಕಾಲೇಜ್ ಟೈಮ್ಸ್ ‘ನಲ್ಲಿ ಅದಾಗಲೇ ಕಥೆ ಕವಿತೆಗಳನ್ನು ಪ್ರಕಟಿಸುತ್ತಿದ್ದಳು. ಅಧ್ಯಕ್ಷಸ್ಥಾನಕ್ಕೆ ನಿಂತವನು ನನ್ನ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದ. ಸರಿ ಉದ್ಘಾಟನಾ ಸಮಾರಂಭ ಪ್ರತಿವರ್ಷದಂತೆ ತಳಿರು ತೋರಣಗಳಿಂದ ಸಿದ್ಧಪಡಿಸಲ್ಪಟ್ಟ ವೇದಿಕೆಯಲ್ಲಿ ವಿದ್ಯಾರ್ಥಿಗಳ ಇಷ್ಟದ ಅತಿಥಿಯೊಬ್ಬರು ಆಗಮಿಸುವುದರ ಮೂಲಕ ಪ್ರಾರಂಭವಾಯಿತು. ವೇದಿಕೆಯಲ್ಲಿ ಪ್ರಾಂಶುಪಾಲರು ಅತಿಥಿಗಳು ವಿದ್ಯಾರ್ಥಿ ನಾಯಕರು ಹಾಗೂ ಲಲಿತಕಲಾ ಸಂಘದ ನಿರ್ದೇಶಕಿಯಾಗಿ ನಾನು ಇಷ್ಟು ಜನ ಕೂತಿದ್ದೆವು.

ಸಾಮಾನ್ಯವಾಗಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರಿಗೆ ಈ ಉದ್ಘಾಟನಾ ಸಮಾರಂಭದ ಸಂಭ್ರಮವನ್ನು ಅರಗಿಸಿಕೊಳ್ಳುವುದು ಕಷ್ಟವಾಗಿ ಅವರು ಆ ದಿನ ಕಾಲೇಜಿನತ್ತ ತಲೆ ಹಾಕುವುದೇ ಇಲ್ಲ ಆದರೆ ಅದೇನು ಗ್ರಹಚಾರವೋ ಆ ವರ್ಷ ಸೋತ ಅಭ್ಯರ್ಥಿ ಮತ್ತವನ ಅವಮಾನಿತ ಗುಂಪು ಕಾಲೇಜಿನಲ್ಲಿ ಠಳಾಯಿಸುತ್ತಲೇ ಇತ್ತು. ಯಾರಿಗೂ ಆಗಬಹುದಾದ ಅವಘಡದ ಮುನ್ಸೂಚನೆಯೂ ಇಲ್ಲ. ಸ್ವಾಗತಗೀತೆ ಮುಗಿದು ದೀಪ ಹಚ್ಚಲು ನಾವೆಲ್ಲರೂ ದೀಪದ ಸುತ್ತ ನಿಂತಿದ್ದೇವೆ ವಿದ್ಯಾರ್ಥಿ ಸಮೂಹದಿಂದ ಕೀರಲು ಸ್ವರದಲ್ಲಿ ‘ನಾರಾಯಣಾ ಗೋವಿಂದಾ ಗೋವಿಂದಾ ಗೋವಿಂದ’ ಎಂಬ ಸ್ವರ ಮೊಳಗಿ ಇಡೀ ಸಭಾಂಗಣ ನಗೆಗಡಲಿನಲ್ಲಿ ತೇಲತೊಡಗಿತು ಇದೇ ಹೆಸರಿನ ಪ್ರಾಂಶುಪಾಲರು ಉಪಪ್ರಾಂಶುಪಾಲರು ಅಲ್ಲಿದ್ದರು.

ವಿದ್ಯಾರ್ಥಿಗಳ ಸಾಮೂಹಿಕ ನಗೆಗೆ ಅದು ಕಾರಣವಾಗಿತ್ತು  ಪ್ರಾಂಶುಪಾಲರು ಕೆರಳಿ ‘ನಾನು ದೀಪ ಹಚ್ಚುವುದಿಲ್ಲ ಹಾಗೆ ಒದರಿ ದವರು ಬಂದು ಕ್ಷಮೆ ಕೇಳಬೇಕು’ ಎಂದು ಘೋಷಿಸಿ ತಮ್ಮ ಚೇಂಬರಿಗೆ ಹೋಗಿ ಕುಳಿತು ಬಿಟ್ಟರು. ಮುಖ್ಯ ಅತಿಥಿ ಕಾರ್ ಹತ್ತಿ ಹೋಗಿಯಾಯ್ತು. ನಾನು ಫೈಲ್ ಹಿಡಿದುಕೊಂಡು ಪ್ರಿನ್ಸಿಪಾಲ್  ಛೇಂಬರಿನತ್ತ ಓಡಿದೆ. ನನ್ನ ಹಿಂದೆ ರಜನಿ. ಪ್ರಿನ್ಸಿಪಾಲರ ಬಳಿ ನಡೆದ ಘಟನೆಗೆ ನಾವು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಕ್ಷಮೆ ಕೇಳುತ್ತೇವೆ. ದಯವಿಟ್ಟು ಮನ್ನಿಸಿ ಬಂದು ದೀಪ ಹಚ್ಚಿ ನಮ್ಮ ಮಾನ ಉಳಿಸಿ ಎಂದು ಬೇಡಿಕೊಂಡರು.

ಪ್ರಾಂಶುಪಾಲರು ಕರಗಲಿಲ್ಲ. ದೀಪ ಹಚ್ಚಿ ಉದ್ಘಾಟನೆಯಾದ ಬಳಿಕ ನಡೆಯುವ ಮನರಂಜನಾ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ನಡೆದಿದ್ದು ಭರತನಾಟ್ಯದ ಹುಡುಗಿಯರು ಯಕ್ಷಗಾನದ ಹುಡುಗರು ಹುಲಿವೇಷದ ಪಿಲಿಗಳು ಎಲ್ಲರೂ ದಿಗ್ಮೂಢರಾಗಿ ಸ್ತಂಭಿತರಾಗಿ ಗ್ರೀನ್ ರೂಮಿನಲ್ಲಿ ತಲೆತಗ್ಗಿಸಿ ಕುಳಿತರು. ಅಧ್ಯಕ್ಷನಾದ. ಬಿಸಿರಕ್ತದ ಹುಡುಗನಿಗೆ ಪ್ರತಿಷ್ಠೆಯ ವಿಷಯವಾಗಿ ಹೋಯಿತು. ಹಾಗೆ ಹೆಸರು ಕರೆದವನು ಯಾರೆಂದು ಹುಡುಕಿ ತರಬೇಕೆಂದು ತನ್ನ ಸ್ನೇಹಿತರಿಂದ ಹುಡುಕಿಸ ತೊಡಗಿದಾಗ ತಿಳಿದುಬಂದಿದ್ದು ಹೊರಗಿನಿಂದ ಬಂದ ಯಾವುದೋ ಹಳೆಯ ವಿದ್ಯಾರ್ಥಿ ಹಾಗೆ ಹೆಸರು ಕೂಗಿ ಕರೆದು ಓಡಿ ಬಿಟ್ಟಿದ್ದಾನೆ ಎಂಬುದು.

ಕಾರ್ಯಕ್ರಮ ಕೆಡಿಸುವುದೇ ಅವನ ಉದ್ದೇಶವಾಗಿತ್ತು ಎಂಬುದು ತಿಳಿದುಬಂತಾದರೂ ಇದೀಗ ಪ್ರಾಂಶುಪಾಲರಿಗೂ ಅಧ್ಯಕ್ಷನಿಗೂ ಪ್ರತಿಷ್ಠೆಯ ವಿಷಯವಾಗಿ ರಾಜಿ ಏರ್ಪಡಲೇ ಇಲ್ಲ. ಹಾಲಿನಲ್ಲಿ ಕಿಕ್ಕಿರಿದು ಕುಳಿತ ಯುವಸಾಗರ. ಬುಸುಗುಡುತ್ತಿರುವ ಅಧ್ಯಕ್ಷ, ಕಾರ್ಯಕ್ರಮ ಏರ್ಪಾಡಾದ ಹಾಲಿಗೂ ಪ್ರಾಂಶುಪಾಲರ ಚೇಂಬರ್ ಗೂ ಓಡಿ ಓಡಿ ದಣಿದ ನಾನು! ಪ್ರಾಧ್ಯಾಪಕ ವರ್ಗ ಮೆಲ್ಲಮೆಲ್ಲನೆ ತಮ್ಮ ಡಿಪಾರ್ಟ್ಮೆಂಟು ಬರೆಸಿ ತೆರಳ ತೊಡಗಿತು ಅಷ್ಟರಲ್ಲಿ ವೇದಿಕೆ ಏರಿದ ವಿದ್ಯಾರ್ಥಿ ತುಳುವಿನಲ್ಲಿ ‘ಎಂಚಿನ ಸಾವು? ಒಬ್ಬರೂ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ತಾನು ಕುಳಿತಿದ್ದ ಕುರ್ಚಿಯನ್ನು ಎತ್ತಿ ಬಿಸಾಡಿದ.

ಕೆಳಗೆ ಕುಳಿತ ಬಿಸಿರಕ್ತಕ್ಕೆ ವಿದ್ಯುತ್ ಸಂಚಾರವಾದಂತೆ ತಾವು ಕುಳಿತ ಕುರ್ಚಿಯನ್ನು ಮೇಲಕ್ಕೆತ್ತಿ ಬೀಸಿ ಬೀಸಿ ಎಸೆಯ ತೊಡತೊಡಗಿದವು. ಎಷ್ಟೋ ಕುರ್ಚಿಗಳು ಕಟಕಟ ಮುರಿದು ಕೆಳಗೆ ಬಿದ್ದವು ಆದರೆ ಆ ಮುರಿದ ತುಂಡುಗಳಿಂದ ಹಾಲಿನ ಕಿಟಿಕಿ ಗಾಜುಗಳನ್ನು ಪುಡಿಗೈಯ ತೊಡಗಿದಾಗ ಪರಿಸ್ಥಿತಿ ಕೈ ಮೀರಿತು ಎಂಬುದನ್ನು ಪ್ರಾಂಶುಪಾಲರು ಮನಗಂಡರು. ಪೊಲೀಸರ ಆಗಮನವಾಯಿತು. ಅಷ್ಟರಲ್ಲೇ  ಹಾಗೆ ಕೂಗಿ ಓಡಿದ ಹಳೇ ವಿದ್ಯಾರ್ಥಿಯನ್ನು ಹಿಡಿದು ತರಲಾಗಿತ್ತು. ಈ ಎಲ್ಲ ವಿದ್ಯಮಾನಗಳಿಂದ ಜರ್ಜರಿತಳಾಗಿ ಹೋದ ನಾನು ನನ್ನ ಚೇಂಬರಿನ ಎದುರು ನಿಂತು ಲಲಿತ ಕಲಾ ಭವನದ ದೃಶ್ಯಾವಳಿಗಳನ್ನು ನೋಡಿ ಭಯಭೀತಳಾಗಿ ಹೋಗಿದ್ದೆ.       

ದಳದಳ ಕಣ್ಣೀರು ಸುರಿಯ ತೊಡಗಿತ್ತು. ಆಗ ವಯಸ್ಸಿನಲ್ಲಿ ನನ್ನ ಮಗಳಿದ್ದಂತೆ ಇದ್ದ ಈ ರಜನಿ ಎಂಬ ಹುಡುಗಿ ಬಂದು ನನ್ನ ಕೈ ಹಿಡಿದು ಮೇಡಂ ನೀವು ದುಃಖಿಸಬಾರದು. ವಿದ್ಯಾರ್ಥಿಗಳಲ್ಲಿ ಅವರಿಗೂ ನಿಮ್ಮ ಮೇಲೆ ಬೇಸರವಿಲ್ಲ ಆಗಿದ್ದು ಆಗಿ ಹೋಯಿತು. ಎಲ್ಲ ಮರೆತು ಮುಂದೆ ಹೋಗೋಣ ಎಂದು ಸಮಾಧಾನ ಮಾಡತೊಡಗಿದಳು. ಅರೆ ಹೌದಲ್ಲವೇ ವಯಸ್ಸಿನಲ್ಲಿ ದೊಡ್ಡವಳಾದ ನಾನು ಮಕ್ಕಳನ್ನು ಸಮಾಧಾನಪಡಿಸಬೇಕಿತ್ತು. ಆದರೆ ನನ್ನ ಕಣ್ಣಿನಲ್ಲಿ ನೀರು ಅವರ ಬಾಯಲ್ಲಿ ಸಮಾಧಾನದ ಮಾತು ನನಗೆ ನಗು ಬಂತು.                   

ನಂತರ ಪೊಲೀಸರ ಸಮಕ್ಷಮದಲ್ಲಿ ದೀಪ ಹಚ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಗಾಜಿನ ಚೂರಿನ ಭಯದಲ್ಲಿ ವೇದಿಕೆಯನ್ನು    ಸ್ವಚ್ಚಗೊಳಿಸಿ ಭರತನಾಟ್ಯ ಹುಲಿಕುಣಿತಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಇಡೀ ವರ್ಷ ವಿದ್ಯಾರ್ಥಿಗಳ ಮನಸ್ಸಿಗೆ ಸಮಾಧಾನವಾಗುವಂತಹ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಟ್ಟೆವು. ಕಥಕ್ ಭರತನಾಟ್ಯಗಳಂಥ ನಾಟ್ಯ ಪದ್ದತಿಯ ಮೇಲಿನ ಶಿಬಿರ, ಯಕ್ಷಗಾನದ ಕುರಿತಾದ ಶಿಬಿರ, ಹೀಗೆ ಎಲ್ಲದರಲ್ಲಿಯೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು ದಶಕಗಳೇ ಕಳೆದು ಹೋದ ಮೇಲೆ ಈ ಘಟನೆ ಪೂರ್ತಿ ಮರೆತೇ ಹೋದಂತಾಗಿತ್ತು ಮೊನ್ನೆ ಇದೇ ರಜನಿ ಫೋನ್ ಮಾಡಿ ಮೇಡಂ ಮನೆಯಲ್ಲಿದ್ದೀರಾ ನಾನು ಬರಬಹುದೇ ಎಂದು ಕೇಳಿದಾಗ ಸಂತೋಷದಿಂದ ಬಾಯಿ ಕಟ್ಟಿಹೋದಂತೆ ಆದರೂ ಎಸ್ಎಸ್ ಈಗಲೇ ಬಂದು ಬಿಡು ಎಂದು ಕರೆದೆ .           

ತನ್ನ ಡಿಗ್ರಿ ಮುಗಿಸಿ ದುಬೈ ಸೇರಿದ ರಜನಿ ಇದೀಗ ತನ್ನ ಮಕ್ಕಳ ಇಬ್ಬರ ಶಿಕ್ಷಣಕ್ಕಾಗಿ ಮಂಗಳೂರಿನಲ್ಲಿ ಮನೆ ಮಾಡಿದ್ದಾಳೆ ನನ್ನ ಮನೆಗೆ ಹತ್ತಿರವೇ ಇದ್ದಾಳೆ. ಆಕೆ ಬಂದಿಳಿದಾಗ ಎರಡು ದಶಕಗಳ ಹಿಂದಿನ ನೆನಪನ್ನು ಮಾಡಿಕೊಳ್ಳುತ್ತಾ ಎಷ್ಟು ನಕ್ಕೆವೆಂದರೆ ಅವಳು ನನಗೆ ಸಮಾಧಾನ ಮಾಡಿದ ದೃಶ್ಯ ಇನ್ನೊಮ್ಮೆ ಕಣ್ಮುಂದೆ ಬಂತು. ಅವಮಾನ ಮಾಡಿದ ಸಿಟ್ಟಿಗೆದ್ದ ಪುಡಿಗೈದ ಎಲ್ಲ ವಿದ್ಯಾರ್ಥಿಗಳು ಈಗ ತಮ್ಮ ತಮ್ಮ ಮಕ್ಕಳು ಮನೆಯನ್ನು ಪುಡಿ ಗೈಯುವುದನ್ನು ನೋಡುತ್ತಿರಬಹುದಲ್ಲವೇ ಎಂದು ಊಹಿಸಿ ಊಹಿಸಿ ನಕ್ಕೆವು.

ತನ್ನ ವಿದ್ಯಾರ್ಥಿ ದೆಸೆಯ ಈ ಮರೆಯಲಾರದ ಘಟನೆಯನ್ನು ತಾನೆಲ್ಲೂ ಬರೆಯುವ ಧೈರ್ಯ ಮಾಡಿಲ್ಲ ಎಂದಳು ರಜನಿ. ‘ಸರಿ ನಾನು ನೆನಪು ಮಾಡಿಕೊಂಡರೆ ತೊಂದರೆಯಿಲ್ಲವಷ್ಟೇ’ ಎಂದು ನುಡಿದಾಗ ಮತ್ತದೇ ಹಿರಿಯಕ್ಕನ ನಗೆಯನ್ನು ನಕ್ಕ ನನ್ನಿ ಪ್ರಿಯ ವಿದ್ಯಾರ್ಥಿನಿ ರಜನಿ ಈಗದು ಸಿಹಿ ನೆನಪಾಗಿ ಕಾಡುತ್ತದೆ ಅಲ್ಲವೇ ಮೇಡಂ ಎಂದಳು. ಇಂಥ ವಿಶಿಷ್ಟ ವಿದ್ಯಾರ್ಥಿ ವಿದ್ಯಾರ್ಥಿನಿಯರು ನನ್ನ ಸುತ್ತ ಸುಳಿದಾಡಿಕೊಂಡಿರುವ  ವರೆಗೂ ನನಗೆ ವಯಸ್ಸಾಗುವುದೇ ಇಲ್ಲವೆಂಬುದು ನನಗೆ ಖಾತ್ರಿಯಾಗಿ ಹೋಗಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: