ಭುವನೇಶ್ವರಿ ಹೆಗಡೆ ಅಂಕಣ- ಆ ಮಾಸ್ಟ್ರ ಹೆಸರು…

12

ಪಾಠ ಒಂದು ಹಂತಕ್ಕೆ ಬಂತು ಎನ್ನುವಾಗ ಅದುವರೆಗೆ ಬೇರಾವುದೋ ಲೋಕದಲ್ಲಿ ಇದ್ದ ಹಾಗೆ ಕಾಣುತ್ತಿದ್ದ ಮಾಸ್ಟರ್ ಇಡೀ ಕ್ಲಾಸನ್ನೇ ಒಮ್ಮೆ ವೀಕ್ಷಿಸಿದ ಹಾಗನ್ನಿಸಿತು. ಕಣ್ಣಲ್ಲಿ ಒಂದು ಬಗೆಯ ತುಂಟತನದ ಹೊಳಪು ಹಾಗೂ ಅದನ್ನು ತೋರಿಸದ ಗಾಂಭೀರ್ಯ.

‘ಇಡೀ ಹರಿಶ್ಚಂದ್ರ ಕಾವ್ಯ ನಿಂತಿರುವುದು ಸತ್ಯದ ಘನತೆಯ ಮೇಲೆ’ ಎಂದು ಪ್ರಾರಂಭಿಸಿ ಸತ್ಯ ಸುಳ್ಳುಗಳ ವಿಶ್ಲೇಷಣೆಗೆ ಗಂಭೀರವಾಗಿ ತೊಡಗಿದರು.…’ಉದಾಹರಣೆಗೆ ಈಗ ಈ ಕ್ಲಾಸಿನಲ್ಲಿರುವ ವಿದ್ಯಾರ್ಥಿಗಳಲ್ಲಿ ಅರ್ಧಕ್ಕರ್ಧ ಜನ ಈ ಕ್ಲಾಸಿನವರಲ್ಲ ಎಂಬುದು ಸತ್ಯ. ನನಗದು ತಿಳಿಯದು ಎಂದು ಅವರು ಭಾವಿಸಿದ್ದರೆ ಅದು ಸುಳ್ಳು’ ಎಂದರು.

ಧಾಟಿಯಲ್ಲಿ ಯಾವುದೇ ಕಹಿ ಇಲ್ಲದೆ ಚೇಷ್ಟೆಯ ಮಾತೆನಿಸಿದರು ಫೈನಲ್ ಇಯರ್ ಹುಡುಗರ ಮುಖ ನೋಡುವಂತಿತ್ತು. ಬೆಲ್ಲಾದ ಬಳಿಕ ಹೊರಗೆ ‘ಸಾರ್ ನಿಮ್ಮ ಕ್ಲಾಸಿನಲ್ಲಿ ತಮಾಷೆ ಸವಿಯುವುದಕ್ಕೆ ನಮ್ಮದಲ್ಲದ ಕ್ಲಾಸಿಗೆ ಹಾಗೆ ಬಂದು ಕೂತಿರ್ತೀವಿ ಸರ್ ಕ್ಷಮಿಸಿ ಸರ್’ ಎಂದು ಹೇಳುತ್ತಿದ್ದುದು ಕಂಡಿತು. ‘ಬನ್ನಿ ಬನ್ನಿ ಪರವಾಗಿಲ್ಲ ಆದರೆ ಅದೇ ಕ್ಲಾಸಿನ ಮಕ್ಕಳಿಗೆ ದಯವಿಟ್ಟು ಸ್ವಲ್ಪ ಜಾಗ ಬಿಟ್ಟು ಕೊಡಿ’ ಎಂದು ಹೇಳಿ ಸ್ಟಾಫ್ ರೂಮ್  ಹೊಕ್ಕರು.

ಎಲ್ಲರದ್ದೂ ಸುಪ್ರಸನ್ನ ವದನಗಳೇ. ‘ಆನಂದತುಂದಿಲ’ ಅನ್ನುತ್ತಾರಲ್ಲ ಹಾಗೆ. ಆ ಮಾಷ್ಟ್ರ ಮೊದಲ ಕ್ಲಾಸ್ ಏ ‘ಕ್ಲಾಸ್’ ಆಗಿತ್ತು. ನಗೆಯದೊಂದು ಲೋಕವನ್ನು ಕ್ಲಾಸಿನೊಳಗೆ ಕಟೆದಿರಿಸಬಲ್ಲ ಆ ಮಾಸ್ಟ್ರ ಹೆಸರು ಎಂ. ರಮೇಶ್. ಬನವಾಸಿಯವರು. ಅವರ ಶ್ರೀಮತಿಯವರು ವಿಜಯನಳಿನಿ ರಮೇಶ್. ಹೆಗ್ಗೋಡಿನ ಪ್ರಸಿದ್ಧ ರಂಗತಜ್ನ ನೀನಾಸಂ ಜನಕ ಕೆ.ವಿ.ಸುಬ್ಬಣ್ಣ ನವರ ಅಕ್ಕನ ಮಗಳು. ನಮ್ಮ ಕನ್ನಡ ಮೇಡಂ ಶಾಲಿನಿ ರಘುನಾಥ್ ಕೂಡ ಅವರ ತಂಗಿ. ಅವರ ಮನೆಯಲ್ಲಿಯೇ ಇರುವುದು… ಇವೆಲ್ಲಾ ನಮಗಾಗ ಬೆರಗಿನ ನಂತರ ಅದೃಷ್ಟದ ವಿಷಯವೆಂಬಂತೆ ಅರಿವಿಗೆ ಬರುವಂತಾಗಿತ್ತು.

ರಮೇಶ್ ಸರ್ ಅದೆಲ್ಲಿಂದ ನಗೆ ಮಾತುಗಳನ್ನು ಉದುರಿಸಿ ಪಾಠ ಮಾಡುತ್ತಿದ್ದರೊ ತಾವು ಮಾತ್ರ ನಗುತ್ತಿರಲಿಲ್ಲ. ಆಗೆಲ್ಲ ಪಾಠ ಪ್ರಾರಂಭವಾಗಿ ಬಿಟ್ಟ ಮೇಲೆ ಬಂದ ವಿದ್ಯಾರ್ಥಿಗಳು ಬಾಗಿಲಲ್ಲಿ ನಿಂತು may I come in sir? ಎಂದು ಕೈ ಮುಂದೆ ಮಾಡಿ ಕೇಳುವ ರೂಢಿ ಇತ್ತು. ಇದು ರಮೇಶರಿಗೆ ಇಷ್ಟವಾಗುತ್ತಿರಲಿಲ್ಲ. ತನ್ಮಯರಾಗಿ ಏನೊ ವಿವರಿಸುತ್ತಿರುವಾಗ ಮನುಷ್ಯಾಕೃತಿಯೊಂದು ಬಾಗಿಲಲ್ಲಿ ನಿಂತು ಕೈಯನ್ನು ತಲವಾರಿನಂತೆ ಚಾಚಿ ಹಿಡಿದು ಒಳಗೆ ಬರಲಪ್ಪಣೆಯೆ ಗುರುವೇ ? (ಅದು ಕನ್ನಡ ಕ್ಲಾಸು. ವಿದ್ಯಾರ್ಥಿಗಳು ಒಳಗೆ ಬರಲೇ ಎಂದು ಕೇಳುವುದು ಇಂಗ್ಲಿಷಿನಲ್ಲಿ.) ಎಂದು ಕಿರುಚಿದಾಗ ಕಿರಿಕಿರಿಯಾಗುತ್ತಿತ್ತು ಎನಿಸುತ್ತದೆ.

ಒಂದು ದಿನ ಹೀಗೆ ಒಬ್ಬ ವಿದ್ಯಾರ್ಥಿ ಕೈ ಮುಂದೆ ಮಾಡಿ ಬರಲಾ ಸಾರ್ ಎಂದು ಕೇಳಿದಾಗ ಕನಲಿದ ರಮೇಶರು ತಣ್ಣಗೆ ‘ಬಾರಪ್ಪ ಬಾ ದೊರೆಯೇ ನನ್ನನ್ನೇಕೆ ಕೇಳ್ತೀ? ಇದು ನಿನ್ನ ಕ್ಲಾಸು ನಾನೇ ನಿನ್ನನ್ನು ಕೇಳಬೇಕು ಎಂದರು. ಮತ್ತು ತಾನೇಕೆ ಹಾಗೆ ತಡವಾಗಿ ಬಂದವರಿಂದ ಕಿರಿಕಿರಿಗೊಳ್ಳುವುದು ಎಂಬುದಕ್ಕೆ ಉದಾಹರಣೆಯೊಂದನ್ನು ಕೊಟ್ಟರು. 

ಒಂದು ಹಳ್ಳಿಯಲ್ಲಿ ಒಮ್ಮೆ ರಾಮಾಯಣ ವಾಚನ ನಡೆದಿತ್ತು. ಭಾಗವತರು ರಾಮಾಯಣವನ್ನು ವಾಚಿಸಿ ವಾಚಿಸಿ ರಾವಣನು ಸೀತೆಯನ್ನು ಕರೆದೊಯ್ಯುತ್ತಾನೆ ಎಂಬಲ್ಲಿಗೆ ಬಂದು ಮುಟ್ಟಿದ್ದರು.ಅಷ್ಟರಲ್ಲಿ ಆ ಊರಿನ ಛೇರ್ಮನ್ನರ ಆಗಮನವಾಯಿತು. ಸಂಘಟಕರು ‘ಭಾಗವತರೇ ಛೇರ್ಮನ್ನರು ಬಂದರು ಒಂದು ಸ್ವಲ್ಪ ಮೊದಲಿನಿಂದ ವಾಚಿಸಿ ಬಿಡಿ’ ಎಂದು ಬಿನ್ನಹ ಮಾಡಿದರು. ಸರಿ ಪುನಃ ಪ್ರಾರಂಭದಿಂದ ರಾಮಾಯಣ ಪ್ರಾರಂಭಿಸಿ ಅಂತೂ ಸೀತೆಯನ್ನು ರಾವಣ ಹೊತ್ತೊಯ್ಯುವ ಹಂತಕ್ಕೆ ಬಂದರು.

ಅಷ್ಟರಲ್ಲಿ ಪಕ್ಕದೂರಿಗೆ ಬಂದಿದ್ದ ಆ ಭಾಗದ ಎಮ್ಮೆಲ್ಲೆ ಸಾಹೇಬರ ಆಗಮನವಾಗ ಬೇಕೇ? ಪುನಃ ಸಂಘಟಕರಿಂದ ಮನವಿ, ಪುನಃ ಮೊದಲಿಂದ ವಾಚನ. ಪುನಃ ರಾವಣ ಸೀತೆಯನ್ನು ಕೊಂಡೊಯ್ಯಬೇಕು ಅಷ್ಟರಲ್ಲಿ ಧಾರ್ಮಿಕ ದತ್ತಿ ಸಚಿವರೇ ಬಂದುಬಿಟ್ಟರು. ‘ಭಾಗವತರೇ ಭಾರಿ ಚೆನ್ನಾಗಿ ವಾಚಿಸುತ್ತಿರೆಂದು ಕೆಳಿರುವೆ. ಎಲ್ಲಿ  ಪುನಃ ಮೊದಲಿಂದ ಒಮ್ಮೆ ವಾಚಿಸಿ ಬಿಡಿ’ ಎಂದು ಅಪ್ಪಣೆ ಕೊಡಿಸಿದರು. ಅಂತೂ ರಾವಣ ಪುನಃ ಸೀತೆಯನ್ನು ಕದ್ದೊಯ್ಯುವ ತನಕ ಮಾತ್ರ ವಾಚಿಸಲು ಸಾಧ್ಯವಾಯಿತು. ರಾತ್ರಿಯಾಗಿ ಹೋಗಿ ಜನ ಮೇಲೆದ್ದರು. (ಬೆಲ್ಲಾಗಿ  ಹೋಯಿತು?) ಸೀತೆಯನ್ನು ವಾಪಸ್ ತರಲಾಗಲೆ ಇಲ್ಲ. ಪ್ರೊ. ರಮೇಶರು ಈ ಪ್ರಕರಣವನ್ನು ನಿರ್ಲಿಪ್ತ ಧಾಟಿಯಲ್ಲಿ ಹೇಳಿ ಮುಗಿಸಿದಾಗ ಇಡೀ ಕ್ಲಾಸು ನಕ್ಕಿತ್ತಾದರೂ ಮರುದಿನದಿಂದ ಎಲ್ಲರೂ (ಬೇರೆ ಕ್ಲಾಸಿನವರು ಸಹ) ಬೆಲ್ಲ್ ಆಗುವ ಮೊದಲೇ ಕ್ಲಾಸಿನ ಒಳಗಿರುತ್ತಿದ್ದರು.

ಸಾಂದರ್ಭಿಕವಾಗಿ ರಮೇಶರು ಉದಾಹರಿಸುತ್ತಿದ್ದ ಕೆಲವು ಮನರಂಜನೆಯ ಅತಿರೇಕದ ದೃಶ್ಯ ಚಿತ್ರಣ ಇಂದಿಗೂ ಅವರ ಶಿಷ್ಯರ ಸ್ಮೃತಿ ಪಟಲದಲ್ಲಿ ಅಚ್ಚೊತ್ತಿದೆ. ಮದುವೆ ಮನೆಯಲ್ಲಿ ಎರಡು ಬಾಳೆ ಎಲೆ ಪಂಕ್ತಿಯ ನಡುವೆ ಒಬ್ಬ ಸ್ಪೀಡಾಗಿ ಓಡಿದ ಅಂದರೆ ಅವನು ತುಪ್ಪ ಬಡಿಸುವವ ಎಂದು ತಿಳಿಯಬಹುದು. ಹೆಚ್ಚು ಮಾತೇ ಆಡದ ನಿಮ್ಮ ಬಂಧು ಒಬ್ಬರು ನಿಮ್ಮ ಬಳೆಯ ಕುರಿತು ವಿಚಾರಿಸಿದರೆ ಅವರ ಹೆಂಡತಿಗೆ ಹೊಸ ಬಳೆ ಬಂದಿದೆ ಎಂದರ್ಥ.

ಶಿರಸಿ ಕಡೆಯ ಕೆಲ ಹಳ್ಳಿಗಳಲ್ಲಿ ಹೆಂಡತಿಯನ್ನು ಗಂಡಂದಿರು ‘ಪ್ರಾಣಿ’ ಎಂದು ಕರೆಯುವ ರೂಢಿ ಇತ್ತು ಅದನ್ನು ಒಪ್ಪಿಕೊಳ್ಳುವ ಪ್ರಾಣಿಯು ತನ್ನ ಪತಿರಾಯನನ್ನು ‘ಯಮ್ಮನೆ ಪ್ರಾರಬ್ಧ’ ಎಂದು ಕರೆದರೆ? ಇಂಥ ಕಚಗುಳಿಯ ಮಾತುಗಳು ನಾ ಕಸ್ತೂರಿ, ಬೀಚಿ, ಕೈಲಾಸಂ ಅಂತಹವರ ಪ್ರತ್ಯುತ್ಪನ್ನ ಮತಿತ್ವವನ್ನು  ನೆನಪಿಗೆ ತರುತ್ತಿದ್ದವು. ಇವತ್ತಿಗೂ ನನ್ನ ಪ್ರಾಧ್ಯಾಪಕ ವೃತ್ತಿಗೆ ನೆರವಾದದ್ದು ರಮೇಶರು ನೀರೆರೆದ ಈ ಹಾಸ್ಯ ಪ್ರಜ್ಞೆಯೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: