ಭಂಡಾರ ನನ್ನ ಹಣೆಗೆ ಸವರಿದಳು…

ರಾಜಕುಮಾರ್‌ ಮಡಿವಾಳರ

ಜೋಗತಿ ಅಥವ ಜೋಗಮ್ಮ ರತ್ನಕ್ಕ. ನಮ್ಮಂಗಡಿಗೆ ಮಂಗಳವಾರ ಮತ್ತು ಶುಕ್ರವಾರ ಬರುವ ಜೋಗಮ್ಮಂದಿರಲ್ಲಿ ಒಬ್ರು ರತ್ನಕ್ಕ. ತಲೆಯ ಮೇಲೆ ತುಂಬಿದ ತಾಮ್ರದ ಕೊಡದ ತುದಿಯ ಕಲಶಕ್ಕೆ ಕಟ್ಟಿದ ದೇವಿ ಮುಖ ಹೊತ್ತು ಸಾಗುವ ಜೋಗಮ್ಮಂದಿರು ಒಂದಿಷ್ಟು ಜನ ಆದರೆ, ಈ ರತ್ನಕ್ಕ ಪುಟ್ಟ ಬಿದರಿನ ಪಡಲಿಗೆಯಲ್ಲಿ, ಅಕ್ಷತೆಯ ನಡುವೆ, ಪುಟ್ಟ ದೇವತೆ ಕೂಡಿಸಿಕೊಂಡು ಜೋಗಾಟಕ್ಕೆ (ಭಿಕ್ಷೆಗೆ ಅಲ್ಲ) ಬರುತ್ತಾರೆ.
ಇವತ್ತು…

ಚಾ ಕುಡಿದು ತಕ್ಷಣ, ತುಂಬ ದಿನಗಳ ನಂತರ ಅದ್ಯಾಕೋ ಇದ್ದಕ್ಕಿದ್ದ ಹಾಗೆ ಬೀಡಾ (ಪಾನ್) ತಿನ್ನಬೇಕು ಅನಸ್ತು, ಸೋ ನಮ್ಮ ಪರ್ಮನೆಂಟ್ ಅಂಗಡಿಗೆ ಹೋದೆ, ನಾನು ಬೀಡಾ ಕಟ್ಟಿಸುತ್ತ, ವ್ಯಾಪಾರ, ಗಿರಾಕಿ, ಸುಖದುಃಖ ಅಂತ ಅಂಗಡಿಯವನ ಜೊತೆ ಮಾತಿಗಿಳಿದಾಗ, ಐದು ಬಾಳೆ ಹಣ್ಣು, ಒಂದಿಪ್ಪತ್ತುದು ಚೋಲೊ ಎಲಿ ಕೊಡಪಾ ಪ್ರಶಾಂತಾ, ಅನ್ನುತ್ತ ಬಂದರು ರತ್ನಕ್ಕ.

ಯಾಕ ರತ್ನಕ್ಕ?
ಮನ್ಯಾಗ ವರಲಕ್ಷ್ಮೀ ದೇವಿ ಹಬ್ಬ ಜೋರೇನು? ಇವತ್ತು ಶುಕ್ರಾರ, ಅಂಗಡಿ ಕಡೆ ಬಂದೇ ಇಲ್ಲ ಅಂದೆ, ರಾಜಪ್ಪ ಎಲ್ಲಿ ಹಬ್ಬನಪಾ, ಎಲ್ಲ ಅಡತಾರ ತಂದಿಟ್ಟೇತಿ ಈ ಸಲ, ಈಗ ಅಲೇ ಹಬ್ಬ, ನಿಮ್ಮಾವ (ರತ್ನಕ್ಕನ ಗಂಡ) ಪಂಜಾ (ಹಸ್ತ) ಹೊರತಾನ, ಮಗ ಮೂರು ದಿನದ ಫಕ್ಕೀರಸ್ವಾಮಿ, ನಿನ್ನೆ ದೇವರು ಸತ್ತಾವು, ಹಂಗಾಗಿ ಅಂಥಾ ಸತ್ಯುಳ್ಳ ಸತ್ಯವ್ವ ಆದರೂ ಇಂದಾಕಿಗೆ ಮನ್ಯಾಗ ಪೂಜಿಲ್ಲಪಾ, ಮೈಲಿಗೈತಿ ಮನಿ, ಇಳಿಹೊತ್ತಿಗೆ ದೇವರು ಹೊಳಿ ಹೋಗಿ, ಮೈ ತೊಳದು ಬಂದ್ವು ಅಂದ್ರ, ಮನ್ಯಾಗ ಎಲ್ಲಾರದು ಜಳಕಾಗಿ, ಆಮ್ಯಾಲ ಲಕ್ಷ್ಮವ್ವನ ಕುಂಡ್ರುಸೂದಪಾ..

ರತ್ನಕ್ಕನ….
ಮಾತು ಕೇಳುತ್ತ ನಾನು ಒಂದು ಕ್ಷಣ ದಂಗಾದೆ, ಎಲ್ಲಿ ಧರ್ಮಾಧರ್ಮಗಳ ದೊಡ್ಡಮಟ್ಟದ ಜಗಳ, ಪಂಥಾನುಪಂಥಗಳ ವೈಚಾರಿಕತೆ, ಅ ಅನ್ನುವ ಅಕ್ಷರ ಕಲಿಯದ, ಅಂಗಡಿ, ಮನೆ ಮನೆ ಸುತ್ತಿ ಜೋಗ್ಯಾಡಿ ಹೊಟ್ಟೆನೆತ್ತಿ ನೋಡಿಕೊಳ್ಳುವ, ಹೆಸರಿಗೆ ಅನ್ಯಧರ್ಮದ ಹಬ್ಬವಾದರೂ ಸಹ, ತನ್ನ, ತಾನೇ ಹೊತ್ತ, ತಾನೇ ಹೊತ್ತು ತಿರುಗುವ, ದೇವಿಯ ಹಬ್ಬ ಮುಂದೂಡಿರುವ.

ಇವರ ಈ ಆಚರಣೆ ಕೇಳಿ ಇದಕ್ಕೆ ಭಾವೈಕ್ಯತೆ ಅನ್ನಬೇಕಾ? ನನ್ನ ನಾಗರಿಕ, ಅತಿಜಾಣ, ಅಕ್ಷರಸ್ಥ ಮೆದುಳಿನ ತಲೆಗೆ ಇದು ಹೋಗದ ವಿಚಾರ.
ಹಂಗಾರ…

ಹೋಳಗಿ ಸಂಜೀಕನ್ರಿ ರತ್ನಕ್ಕ? ಹೂಂ ಬಂದೋಗು ಮನಿಕಡಿಗೆ, ಉಂಡೋಗ್ವಂತಿ ರಾಜಪ್ಪ, ಹೋಳಗಿ ಹೆಸರಬ್ಯಾಳಿ ಹುಗ್ಗಿನೂ ಐತಿ, ಆದರ ನಮ್ಮಾಂತವ್ರ ಮನಿಗೆ ನೀವ್ಯಾಕ ಬರ್ತಿರಪಾ?
ಹಹಹಾ….
ಜೋರು ನಕ್ಕೆ, ಪರಶ್ಯಾ ರತ್ನಕ್ಕ ತೊಗೊಂಡಿರು ಹಣ್ಣು ಎಲಿ ರೊಕ್ಕಾ ತಗೋಬ್ಯಾಡ, ನಾ ಕೊಡತೇನಿ. ರತ್ನಕ್ಕ ಮಾವನ್ನ ಅಂಗಡಿ ಕಡೆ ಕಳಸು, ಒಂಭತ್ಗಂಟೇಕ, ಊಟಕ್ಕ ಬರತೇನಿ, ನಾ ನಿಮ್ಮನಿ ನೋಡಿಲ್ಲ ಅಂದೆ, ರತ್ನಕ್ಕ ಸೊಂಟದ ಪುಟ್ಟ ಚೀಲದೊಳಗಿಂದ ಭಂಡಾರ ತಗದು ನನ್ನ ಹಣೆಗೆ ಸವರಿದಳು.
ಯಾ ಅಲಿ ಧ್ಹೂಲಾ…
ಕೂಗುತ್ತ ರಿಜ್ವಾನ್ ಬಂದು, ಆತೇಂ ಕ್ಯಾ ಕುಮಾರ್ ಸರ್, ಪೀರಾಂಕೂ…. ಚಾರ್ ಬಜೆ ಉಠ್ತೆಂ (ದೇವರಿಗೆ ಬರ್ತಿರಾ? ನಾಲ್ಕು ಗಂಟೆಗೆ ಏಳಸ್ತಾರೆ) ಆಹ್ವಾನ..
ಯಕ್ಕಲಿಗೋ ಜೋಗ್ ರತ್ನಕ್ಕನ ರಾಜಪ್ಪ
ಯಾ ಅಲಿ ಧ್ಹೂಲಾ ರಿಜ್ವಾನ್ ನ ಕುಮಾರ್ ಸರ್
ಎರಡು ದೇವರ ನಡುವೆ ಮನುಷ್ಯನಾಗುವ ಸತತ ಪರದಾಟದಲ್ಲಿ ಈ ನಿಮ್ಮ ರಾಜಕುಮಾರ..
ಐ ಲವ್ ಯು ಇಂಡಿಯಾ..

‍ಲೇಖಕರು Admin

September 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: