ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭುವನಾ ಹಿರೇಮಠ ಹೊಸ ಕವಿತೆ- ರಾತ್ರಿ ಮತ್ತು ಕನ್ನಡಿ

ಭುವನಾ ಹಿರೇಮಠ

ರಾತ್ರಿ ಕನ್ನಡಿ ನೋಡಬಾರದು
‘ರಾತ್ರಿ’ಯೂ ಒಂದು ಹೆಣ್ಣು
ಕನ್ನಡಿಯೂ

ಕನ್ನಡಿ ಯಾವಾಗಲೂ ನನ್ನನ್ನೇ ತೋರಿಸದು
ಎಷ್ಟೋ ಬಾರಿ ನನಗೆ ನಾನೇ ಪರಕೀಯ
ಮುಖ ಮನಸ್ಸು ಲಹರಿ
ಹೊಂದುವುದೇಯಿಲ್ಲ
ಕನ್ನಡಿ ಮತ್ತು ನಿನ್ನನ್ನು
ಕಣ್ಣಲ್ಲಿ ಕಣ್ಣಿಟ್ಟು ನೋಡುವ
ಧೈರ್ಯ ಮಾಡಿದರೆ
ಸೋಲು ಕಟ್ಟಿಟ್ಟ ಬುತ್ತಿ

ರಾತ್ರಿ ಎಲ್ಲವನ್ನೂ ಮುಚ್ಚಿಡುವುದು
ಪರಿಧಿಯೊಳಗೆ
ಅಲ್ಲಲ್ಲ ಪರಿಧಿಯಿಲ್ಲದ
ವರ್ತುಲದೊಳಗೆ
ನಮ್ಮಿಬ್ಬರನ್ನು ಬಿಟ್ಟು

ಮುಖ ಕಣ್ಣು ದೃಷ್ಟಿ
ಯಾವುದೂ ಕಾಣಿಸದು
ಹೊಡೆದುಕೊಳ್ಳುವ ಎದೆ
ಚೂರಾದ ಮನಸ್ಸು
ರಾತ್ರಿಗೂ ಕನ್ನಡಿಗೂ

ಯಾರು ಕಟ್ಟಿದರು ಈ ರಾತ್ರಿಯ ಇತಿಹಾಸವನ್ನು
ನಮ್ಮ ಪಾಲಿನ ಒಂದು ಇಟ್ಟಿಗೆಯೂ ಇಲ್ಲ

ರಾತ್ರಿಯನ್ನು ದೇವಿಯೆಂದರು
ದೇವಿಯನ್ನು ಕತ್ತಲೆಂದರು
ಕತ್ತಲನ್ನು ಅಜ್ಞಾನ ದಾರಿದ್ರ್ಯ
ವಿಪರ್ಯಾಸವೆಂದರೆ,
ಈಗ ಇಡೀ ಲೋಕಕ್ಕೆ
ಕತ್ತಲಾವರಿಸಿದೆ ಹಗಲಲ್ಲೂ,

ಆ ಗೌರಿಕೊಳ ದಾಟಿದರೆ
ಹೆಣ್ಣು ಗಂಡಾಗುವನು
ಗಂಡು ಹೆಣ್ಣಾಗುವಳು
ಈ ಕತ್ತಲು ಬೆಳಕಾಗುವುದೇ?
ನಾನು ನೀನು ಅದಲು ಬದಲು
ಕಂಚಿ ಬದಲು

ಸೋಲಬೇಕು ನನ್ನ ನಡಿಗೆ

ಈ ರಸ್ತೆ ಮುಗಿಯುತ್ತಲೇ ಇಲ್ಲ
ಸುರುಳಿ ಸುತ್ತಿ ಸುತ್ತಿ
ಸುರುಳಿಯೊಳಗೆ ನಾನೂ ಸುತ್ತಿ
ಅದರಂತ್ಯದೊಳಗೆ ಅಂತ್ಯ ಹುಡುಕಿ
ಸಂತೆಯೊಳಗೂ ಚಾಚಿಕೊಂಡಿದೆ
ಇದರ ನಾಲಗೆ ಹಲ್ಲು

ಕಣ್ಣು ತೆರೆಯದು ಹೀಗೆ
ಹೊರಳಾಡಿಸಿ ಎಚ್ಚರಿಸಿದರೂ ತೀರದ ನಿದ್ರೆ
ನಿದ್ರೆಯೊಳಗೊಂದು ನಿದ್ರೆ
ಒಂದೊಂದೇ ಬಾಗಿಲು ತೆರೆದು
ಹೊಸ್ತಿಲು ದಾಟಿ
ಬಲಗಾಲಿಟ್ಟು ಎಷ್ಟು ಒಳಹೊಕ್ಕರೂ
ಪ್ರವೇಶವಿಲ್ಲ ಎಲ್ಲವೂ ಹೊರಗೆ ಹೊರಗೆ
ಬಾಗಿಲೊಳಗೆ ಬಾಗಿಲು
ಹೊಸ್ತಿಲ ಮೇಲೊಂದು ಹೊಸ್ತಿಲು
ಎತ್ತರೆತ್ತರ ಬೆಳೆದು ನಿಂತಿದೆ
ಬೆಟ್ಟದ ಹಾಗೆ

ಮತ್ತೆ ಬೆಟ್ಟ ಹತ್ತುವ ರಸ್ತೆ
ಕಣ್ಣು ತಿರುಗುವ ಇಳಿಜಾರು
ತಲೆ ತಿರುಗುವ ಕಣಿವೆ
ರಸ್ತೆ ಮುಗಿಯದು ಹೀಗೆಲ್ಲ ಸರಳವಾಗಿ
ನೀನು ಮುಗಿಸಬೇಕು ಪಯಣ
ಇಲ್ಲಾ ಸೋಲಬೇಕು ನನ್ನ ನಡಿಗೆ

ಬಿಚ್ಚುತ್ತಾ ನಡೆ ಈಗ
ದೀಡ ನಮಸ್ಕಾರಕ್ಕೆ ಸುರುಳಿ ಸುರುಳಿ
ಸುಲಿಯುತ್ತಾ ಒಂದೊಂದೇ ಸಿಪ್ಪೆ
ಕಳಚುತ್ತಾ ಒಂದೊಂದೇ ಮುಖವಾಡ
ಹೊರಬೀಳುವ ತನಕ ಅಸಲಿ ಹೊದಿಕೆ
ಹೊದಿಕೆಯೊಳಗಿನ ನೀನು
ನಿನ್ನೊಳಗಿನ ಅಸ್ಥಿ
ಅದರೊಳಗಿನ ಜೀವ

‍ಲೇಖಕರು Avadhi

2 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading