‘ದಿಲ್ಲಿಹಾಟ್’ ಎಂಬ ಸಾಂಸ್ಕೃತಿಕ ರಾಯಭಾರಿ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಅಲ್ಲೊಂದು ಚಿಕ್ಕ ಮೂಲೆ.

ಕೊಳಲು ವಾದಕನೊಬ್ಬ ತನ್ಮಯನಾಗಿ ಬಣ್ಣದ ಗೆರೆಗಳುಳ್ಳ ಕೊಳಲನ್ನು ನುಡಿಸುತ್ತಾ ಇದ್ದಾನೆ. ಆತನ ಮುರಳೀಗಾನಕ್ಕೆ ಮೈಮರೆತು, ಕುತೂಹಲದಿಂದ ಆತನ ಉಸಿರ ಏರಿಳಿತಗಳನ್ನೇ ಗಮನಿಸುತ್ತಿರುವ ಜನಸಮೂಹ ಸುತ್ತಲೂ ನಿಂತಿದೆ. ಮತ್ಯಾವುದೋ ಮೂಲೆಯೊಂದರಲ್ಲಿ ಕಲಾವಿದನೊಬ್ಬ ಕಾಗದದ ಮೇಲೆ, ತನ್ನೆದುರು ಕೂತ ರೂಪದರ್ಶಿಯನ್ನೇ ರೇಖೆಗಳಲ್ಲಿ ಮೂಡಿಸುತ್ತಿದ್ದಾನೆ. ಆತನ ಸುತ್ತಲೂ ನಿಂತುಕೊಂಡು ಕಲಾವಿದನ ಕೈಚಳಕವನ್ನು ನೋಡಿ ವಾಹ್ ಎನ್ನುತ್ತಿರುವ ಮಂದಿಯ ಕಣ್ಣುಗಳಲ್ಲಿ ಕೋಲ್ಮಿಂಚು. ಇತ್ತ ಕಲಾವಿದನೆದುರು ಕುಳಿತ ವ್ಯಕ್ತಿಗೂ ಕೂಡ ತನ್ನದೇ ರೂಪವನ್ನು ರೇಖೆಯಲ್ಲಿ ನೋಡಲೊಂದು ಕಾತರ.

ಇವರನ್ನೆಲ್ಲಾ ದಾಟಿ ಕೊಂಚ ಮುಂದಕ್ಕೆ ಹೋದರೆ ಅಲ್ಲೊಂದು ಚಿಕ್ಕ ರಾಜಸ್ಥಾನಿ ಕಲಾವಿದರ ಗುಂಪು. ಮುಂಡಾಸು ತೊಟ್ಟ ಗಂಡಸರು ಹಾಡುತ್ತಿದ್ದರೆ, ಗಾಜಿನ ಚುಕ್ಕೆಯ ದಿರಿಸನ್ನು ಧರಿಸಿ ಬುಗುರಿಯಂತೆ ತಿರುಗುತ್ತಿದ್ದಾರೆ ಲಂಬಾಣಿ ಮಹಿಳೆಯರು. ಜೊತೆಗೇ ರಾಜಸ್ಥಾನಿ ಜನಪದ ಹಾಡುಗಳಿಗೆ ತಂಬೂರಿ, ಡಫ್ಲೀಗಳ ಲಯ ಬದ್ಧ ಸಾಥ್. ಇನ್ನು ‘ಲಾಲ್ ಮೆರೀ ಪತ್, ರಖಿಯೋ ಭಲಾ ಝೂಲೇ ಲಾಲಣ್… ದಮಾ ದಮ್ ಮಸ್ತ್ ಕಲಂದರ್…’, ಎಂಬಿತ್ಯಾದಿ ಜನಪ್ರಿಯ ಬಾಲಿವುಡ್ ಗೀತೆಗಳು ಬಂದರಂತೂ ನೆರೆದಿದ್ದ ಜನಸಮೂಹಕ್ಕೂ ಮೈಚಳಿ ಬಿಟ್ಟು ಒಂದೆರಡು ಹೆಜ್ಜೆ ಹಾಕಿಯೇ ಬಿಡುವ ಹುಮ್ಮಸ್ಸು.  

ಇದು ದಿಲ್ಲಿಯ ‘ದಿಲ್ಲಿ ಹಾಟ್’ ಅಂಗಳದಲ್ಲಿ ಬಹುತೇಕ ವರ್ಷವಿಡೀ ಕಾಣಸಿಗುವ ದೃಶ್ಯ. ದಿಲ್ಲಿ ಹಾಟ್ ಒಂದು ರೀತಿಯಲ್ಲಿ ಮಹಾನಗರಿಯ ಒಡಲಿನಲ್ಲಿರುವ ಪುಟ್ಟ ಕಲಾಗ್ರಾಮವಿದ್ದಂತೆ. ಬಿಡುವಿಲ್ಲದ ಮೆಟ್ರೋಪಾಲಿಟನ್ ಜೀವನಶೈಲಿಯಿಂದ, ಮುಗಿಯದ ಜಂಜಾಟಗಳ ಏಕತಾನತೆಯಿಂದ ಬೇಸತ್ತು ಹೋಗುವ ಮಹಾನಗರಿಗೆ ಸಂಸ್ಕೃತಿಯ ಹೆಸರಿನಲ್ಲಿ ಆಹ್ಲಾದವನ್ನು ತರುವ ವಿಶಿಷ್ಟ ಸ್ಥಳವಿದು.

ಹಲವರಿಗೆ ತಿಳಿದಿರುವಂತೆ ಅಂಡಮಾನ್ ದ್ವೀಪವು ಮಿನಿ ಇಂಡಿಯಾ’ ಎಂದೇ ಹೆಸರುವಾಸಿ. ಚಿಕ್ಕದೊಂದು ದ್ವೀಪಪ್ರದೇಶದ ಸೀಮಿತ ಜನಸಂಖ್ಯೆಯಲ್ಲೇ ಇಡೀ ಭಾರತದ ಪ್ರಾದೇಶಿಕ ವೈವಿಧ್ಯವು ಕಾಣಸಿಗುವುದು ಅಂಡಮಾನಿನ ವೈಶಿಷ್ಟ್ಯ. ದಿಲ್ಲಿಯೂ ಕೂಡ ತನ್ನೊಡಲಿನಲ್ಲಿಮಿನಿ ಇಂಡಿಯಾ’ ಒಂದನ್ನಿಟ್ಟುಕೊಂಡಿದೆ. ನಕಾಶೆಯ ಮೇಲ್ಮೈ ಮೇಲೆ ಬೆರಳ ತುದಿಯನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೇಗೆ ಅನಾಯಾಸವಾಗಿ ಕೊಂಡೊಯ್ಯುತ್ತೇವೆಯೋ, ಅಷ್ಟೇ ಸುಲಭವಾಗಿ ಭಾರತದ ಸಂಸ್ಕೃತಿ ವೈವಿಧ್ಯವನ್ನು ಸಂಕ್ಷಿಪ್ತವಾಗಿ ನೋಡಬೇಕೆಂದರೆ ಕೊಂಚ ಬಿಡುವು ಮಾಡಿಕೊಂಡು ದಿಲ್ಲಿಯ ಈ ಮಿನಿ ಇಂಡಿಯಾಗೆ ಬರಬೇಕು. ದಿಲ್ಲಿಯು ಹೀಗೆ ಹೆಮ್ಮೆಯಿಂದ ಪ್ರಸ್ತುತಪಡಿಸುವ ಪುಟ್ಟ ಭಾರತ ದರ್ಶನವೇ ಈ ‘ದಿಲ್ಲಿ ಹಾಟ್’.

ದಿಲ್ಲಿಯು ಮೊದಲೇ ಶಾಪಿಂಗಿಗೆ ಹೆಸರಾದ ನಗರಿ. ಹಲವು ನಿರ್ದಿಷ್ಟ ಉತ್ಪನ್ನಗಳಿಗಷ್ಟೇ ಮೀಸಲಾಗಿರುವ ದಿಲ್ಲಿಯ ವಿಶೇಷ ಮಾರುಕಟ್ಟೆಗಳು ವಿವಿಧ ಕಾರಣಗಳಿಂದ ಜನಪ್ರಿಯವೂ, ಜಗತ್ಪ್ರಸಿದ್ಧವೂ ಆಗಿರುವಂಥವುಗಳು. ಇಂತಿಪ್ಪ ದಿಲ್ಲಿಯ ಐ.ನ್.ಎ ಮಾರ್ಕೆಟ್ಟಿಗೆ ಸಮೀಪವಿರುವ ದಿಲ್ಲಿ ಹಾಟ್, ದಿಲ್ಲಿಯ ಮತ್ತೊಂದು ಖ್ಯಾತ ಮಾರುಕಟ್ಟೆಯಾಗಿರುವ ಸರೋಜಿನಿ ಮಾರ್ಕೆಟ್ಟಿಗೂ ಹತ್ತಿರ. ಇನ್ನು ಭಾರತದ ಹಲವು ಸಂಸ್ಕೃತಿಗಳ ರಾಯಭಾರಿಗಳಂತಿರುವ ದಿಲ್ಲಿ ಹಾಟಿನ ಪುಟ್ಟ ಅಂಗಡಿಗಳು ಸ್ವತಃ ಈ ಸ್ಥಳವನ್ನು ದಿಲ್ಲಿಯ ಮುಖ್ಯ ಶಾಪಿಂಗ್ ಕೇಂದ್ರಗಳಲ್ಲೊಂದಾಗಿ ಪರಿವರ್ತಿಸಿವೆ. ಹೀಗಾಗಿ ಈಗ ದಿಲ್ಲಿಯ ಜನಪ್ರಿಯ ಮಾರುಕಟ್ಟೆಗಳನ್ನೆಲ್ಲಾ ಪಟ್ಟಿ ಮಾಡಲು ಹೊರಟರೆ ದಿಲ್ಲಿ ಹಾಟಿಗೂ ಒಂದು ಸ್ಥಾನ ಸಿಗುವುದು ಖಚಿತ.

ದಿಲ್ಲಿ ಹಾಟ್ ರೂಪುಗೊಳ್ಳುವ ಹಿಂದಿದ್ದಿದ್ದು ದಸ್ತ್ ಕರ್ ಹಾಟ್ ಸಮಿತಿ ಎಂಬ ಸಂಸ್ಥೆಯೊಂದರ ದೂರದೃಷ್ಟಿ. ಈ ಕಲಾವಿದರ ಒಕ್ಕೂಟದ ಸಂಸ್ಥಾಪಕಿಯಾಗಿರುವ ಜಯಾ ಜೈಟ್ಲಿ ಭಾರತದ ಕಲಾಪ್ರಕಾರಗಳನ್ನು, ಜನಪದವನ್ನು, ಕಲಾವಿದರನ್ನು, ಕುಸುರಿ ಕೆಲಸಗಾರರನ್ನು, ಕಲೆಯನ್ನೇ ನಂಬಿಕೊಂಡು ಬದುಕುತ್ತಿರುವ ಪುಟ್ಟ ಉದ್ಯಮಿಗಳನ್ನು, ಅಳಿದುಹೋಗುತ್ತಿರುವ ಕಲಾ ಪ್ರಕಾರಗಳನ್ನು ತಮ್ಮ ಮಕ್ಕಳಿಗೆ ಕಲಿಸುತ್ತಾ ಅವುಗಳನ್ನು ತಮ್ಮ ಕೈಲಾದಷ್ಟು ಜೀವಂತವಾಗಿರಿಸುವ ಕೈಂಕರ್ಯದಲ್ಲಿ ತೊಡಗಿರುವ ಕನಸುಗಾರರನ್ನು, ಇವುಗಳನ್ನು ಹಲವು ರೂಪಗಳಲ್ಲಿ ದಾಖಲಿಸುತ್ತಿರುವ ಕಲಾಸಕ್ತರನ್ನು… ಹೀಗೆ ಸಾಂಸ್ಕೃತಿಕ ನೆಲೆಯಲ್ಲಿ ಭಾರತದ ಮೂಲೆಮೂಲೆಯಲ್ಲಿರುವ ಹಲವು ಪ್ರತಿಭಾವಂತರನ್ನು ಒಗ್ಗೂಡಿಸಿ, ಅವರ ಉತ್ಪನ್ನಗಳು ಹೆಚ್ಚಿನವರನ್ನು ತಲುಪಿ, ಆರ್ಥಿಕ ನೆಲೆಯಲ್ಲೂ ಅವರ ಜೀವನಮಟ್ಟವನ್ನು ಸುಧಾರಿಸುವ ದೂರದರ್ಶಿತ್ವವನ್ನಿಟ್ಟುಕೊಂಡು ದೊಡ್ಡ ಕನಸೊಂದನ್ನು ಕಂಡಿದ್ದರು. ಜೈಟ್ಲಿಯವರ ಈ ರೂಪುರೇಷೆಯನ್ನೇ ಆಧರಿಸಿ ಮುಂದೆ ೧೯೯೪ ರಲ್ಲಿ ‘ದಿಲ್ಲಿ ಹಾಟ್’ ಜನ್ಮತಾಳಿತ್ತು.

ಅಂದು ಜೈಟ್ಲಿಯವರು ಹೀಗೆ ಬಿತ್ತಿದ ಬೀಜವೊಂದು ಇಂದು ದೊಡ್ಡದಾದ ಹೆಮ್ಮರವಾಗಿ ಬೆಳೆದು ನಿಂತಿದೆ. ಕೆಂಪು ಕಲ್ಲಿನ ನೆಲ, ಕಲಾತ್ಮಕ ಕಂಬಗಳು, ಗುಡಿಸಲಿನಂತಿನ ಮೇಲ್ಛಾವಣಿ, ಪುಟ್ಟ ಸಂಗಡಿಗಳ ಸರಣಿ… ಇತ್ಯಾದಿಗಳಿಂದ ವಿಶಿಷ್ಟವಾಗಿ ಕಾಣುವ ಹಾಟ್ ಪ್ರದೇಶವು, ಇಂದು ತನ್ನದೇ ಆದ ರೀತಿಯಲ್ಲಿ ಗ್ರಾಮೀಣ ಭಾರತದ ಸೊಗಡನ್ನು ಹೊರಗಿನವರಿಗಾಗಿ ಪ್ರಸ್ತುತಪಡಿಸುತ್ತಿದೆ. ಈ ನಿಟ್ಟಿನಲ್ಲೇ ಕಲಾಕೃತಿಗಳು, ಮೂರ್ತಿಗಳು, ಆಭರಣಗಳು, ಆಲಂಕಾರಿಕ ವಸ್ತುಗಳು, ದಿನಬಳಕೆಯ ವಸ್ತುಗಳು, ಮಡಕೆಗಳು, ಪಾತ್ರೆಗಳು, ಚೀಲಗಳು, ಚಪ್ಪಲಿಗಳು, ಬುಟ್ಟಿಗಳು, ದೀಪಗಳು, ಗೊಂಬೆಗಳು, ಬಟ್ಟೆಗಳು, ಪುಸ್ತಕಗಳು… ಹೀಗೆ ಎಲ್ಲವೂ ಇಲ್ಲಿ ಸಾಂಪ್ರದಾಯಿಕ ಸ್ಪರ್ಶವನ್ನು ಪಡೆದುಕೊಂಡು, ಕಮರ್ಷಿಯಲ್ ಅವತಾರದಲ್ಲಿ ಗ್ರಾಹಕರಿಗಾಗಿ ತೆರೆದುಕೊಂಡಿವೆ.

ಪ್ರತೀ ರಾಜ್ಯಗಳಿಗೂ ರಾಯಭಾರ ಕಚೇರಿಯಂತಿರುವ ಇಲ್ಲಿಯ ಪುಟಾಣಿ ಸ್ಟಾಲ್ ಗಳು ಆಯಾ ರಾಜ್ಯಗಳ ವಿಶೇಷ ಉತ್ಪನ್ನಗಳನ್ನು ಇಲ್ಲಿ ಪ್ರಸ್ತುತಪಡಿಸುವುದು ವಿಶೇಷ. ಹೀಗಾಗಿ ಹಲವು ರಾಜ್ಯಗಳ ವಿವಿಧ ಬಗೆಯ ಉತ್ಪನ್ನಗಳನ್ನು ಇಲ್ಲಿಯ ಆವರಣದಲ್ಲೇ ಮನದಣಿಯೆ ನೋಡಬಹುದು. ಇಷ್ಟವಾದರೆ ಖರೀದಿ ಕೂಡ ಅಲ್ಲೇ. ಅದು ಬಟ್ಟೆ, ಆಹಾರವೈವಿಧ್ಯ, ಕಲಾಪ್ರಕಾರ… ಹೀಗೆ ಏನೇ ಆಗಿರಲಿ. ಈ ಕಾರಣದಿಂದಾಗಿ ಎಲ್ಲಾ ಆಸಕ್ತರಿಗೂ ದಿಲ್ಲಿ ಹಾಟ್ ಶಹರದ ಅಚ್ಚುಮೆಚ್ಚಿನ ತಾಣಗಳಲ್ಲೊಂದು.

ಹೀಗಾಗಿಯೇ ಗುಜರಾತಿನ ಪಿಥೋರಾದಿಂದ ಮಿಝೋ ನೇಯ್ಗೆಯವರೆಗೂ, ಜಮ್ಮ-ಕಾಶ್ಮೀರದ ಪಶ್ಮೀನಾದಿಂದ ತಮಿಳುನಾಡಿನ ಟೋಡಾ ನೇಯ್ಗೆಯವರೆಗೂ ನಮಗಿಲ್ಲಿ ವಿವಿಧ ಬಗೆಯ ಬಟ್ಟೆಗಳು ಲಭ್ಯ. ಮಹಾರಾಷ್ಟ್ರದ ವರ್ಲಿ ಕಲಾಕೃತಿಗಳಿಂದ ತ್ರಿಪುರದ ಬಿದಿರ ಕಲಾಕೃತಿಗಳವರೆಗೆ, ಮಧ್ಯಪ್ರದೇಶದ ಗೊಂಡಾ ಕಲೆಯಿಂದ ಉತ್ತರಾಖಂಡದ ಅಂಗೋರಾದವರೆಗಿನ ಕಲಾಪ್ರಕಾರಗಳು, ಬೆಂಗಾಲಿ ಶೈಲಿಯ ಮೀನಿನಿಂದ ಹಿಡಿದು ತಮಿಳುನಾಡಿನ ತರಹೇವಾರಿ ದೋಸೆಗಳು, ಬಾಯಲ್ಲಿ ನೀರೂರಿಸುವ ಗುಜರಾತಿ ಸಿಹಿತಿಂಡಿಗಳಿಂದ ಹಿಡಿದು ಖಾರಪ್ರಿಯರು ಮೆಚ್ಚುವ ನಾಗಾ ಖಾದ್ಯಗಳು… ಹೀಗೆ ಎಲ್ಲವೂ ದಿಲ್ಲಿ ಹಾಟ್ ಅಂಗಣದಲ್ಲಿ ಭರಪೂರ.

ಹೀಗೆ ಗ್ರಾಮೀಣ ಭಾರತದ ಕಲೆ ಮತ್ತು ಸಂಸ್ಕೃತಿಯನ್ನೇ ಆಧಾರವಾಗಿಟ್ಟುಕೊಂಡು ಹುಟ್ಟಿದ ದಿಲ್ಲಿ ಹಾಟ್ ಕಳೆದೆರಡು ದಶಕಗಳಿಂದ ವಿಕಾಸವಾಗುತ್ತಾ ಇಂದು ದಿಲ್ಲಿಯ ಪ್ರಮುಖ ಆಕರ್ಷಣೆಯ ತಾಣಗಳಲ್ಲೊಂದಾಗಿದೆ. ಹಾಟ್ ಪ್ರವೇಶಕ್ಕೆ ಅಲ್ಪಮೊತ್ತದ ಪ್ರವೇಶ ಧನವಿದ್ದರೂ ಸ್ಥಳೀಯರಿಗೂ, ವಿದೇಶೀಯರಿಗೂ ಇದು ಅಚ್ಚುಮೆಚ್ಚಿನ ತಾಣ. ಸರಕಾರಿ ಹಿಡಿತದಲ್ಲಿರುವ ದಿಲ್ಲಿ ಹಾಟ್ ವ್ಯಾಪಾರಿ ಕೇಂದ್ರವು ಸರಕಾರಕ್ಕೆ ಲಾಭದಾಯಕ ಆದಾಯದ ಮೂಲವೂ ಹೌದಂತೆ. ಹೀಗಾಗಿ ಹಿಂದೆ ಐ.ಎನ್.ಎ ಮಾರ್ಕೆಟ್ಟಿನಲ್ಲಿ ಮಾತ್ರವಿದ್ದ ಹಾಟ್ ಕೇಂದ್ರವು ನಂತರದ ದಿನಗಳಲ್ಲಿ ದಿಲ್ಲಿಯ ಪೀತಾಂಪುರ ಮತ್ತು ಜನಕಪುರಿ ಪ್ರದೇಶದಲ್ಲೂ ತೆರೆದುಕೊಂಡಿದೆ. ಅಲ್ಲದೆ ರೈತರ ಉತ್ಪನ್ನಗಳಿಗೆ ಮೀಸಲಾದ ಕಿಸಾನ್ ಹಾಟ್’ ಮತ್ತು ಕೌಶಲಗಳಿಗೆ ಒತ್ತನ್ನು ನೀಡುವಹುನರ್ ಹಾಟ್’ ಇದರದ್ದೇ ವಿಸ್ತರಿತ ರೂಪಗಳು.

ಇಂದು ಸರಕಾರಿ-ಖಾಸಗಿಯೆಂಬ ಭೇದವಿಲ್ಲದೆ ತನ್ನದೇ ಅಂಗಳದಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ದಿಲ್ಲಿ ಹಾಟ್ ಆತಿಥೇಯನ ಪಾತ್ರವನ್ನೂ ಯಶಸ್ವಿಯಾಗಿ ನಿಭಾಯಿಸುತ್ತಿದೆ. ಭಾರತದ ಮೊದಲ ಕಾಮಿಕ್ ಕನ್ವೆನ್ಷನ್ ಆಗಿದ್ದ ‘ಕಾಮಿಕ್ ಕಾನ್ ಇಂಡಿಯಾ’ ಜನಪ್ರಿಯವಾಗಿದ್ದು ದಿಲ್ಲಿ ಹಾಟ್ ಅಂಗಳದಲ್ಲಿ. ಇನ್ನು ಫುಡ್ ಫೆಸ್ಟಿವಲ್ ಗಳಿಂದ ಹಿಡಿದು ವೇದಿಕೆಗಳನ್ನು ಸಿದ್ಧಪಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲೂ ದಿಲ್ಲಿ ಹಾಟ್ ಪ್ರಶಸ್ತವಾದ ಸ್ಥಳ.

ದಿಲ್ಲಿ ಹಾಟ್ ನಂತಹ ಸ್ಥಳದಲ್ಲಿ ಏನಾದರೊಂದು ಉತ್ಸವದ ಆಯೋಜನೆಯಾಗುತ್ತಿದೆ ಎಂದಾದರೆ ಹಾಟ್ ಅಕ್ಷರಶಃ ಮದುವಣಗಿತ್ತಿಯಂತೆ ಬದಲಾಗುತ್ತದೆ. ಆಯಾ ಸಮಾರಂಭದ ಥೀಮ್ ಗೆ ತಕ್ಕಂತೆ ಮತ್ತಷ್ಟು ಸಿಂಗಾರಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ದಿಲ್ಲಿ ನಿವಾಸಿಗರಿಗಂತೂ ಈ ಸಂದರ್ಭದಲ್ಲಿ ಹಬ್ಬದ ವಾತಾವರಣ. ಅವರಿಗೋ ವಾರಾಂತ್ಯದ ವಿಹಾರಕ್ಕೊಂದು ಒಳ್ಳೆಯ ನೆಪ. ಇತ್ತ ಸಹಜವಾಗಿ ರಜಾದಿನ ಮತ್ತು ವಾರಾಂತ್ಯಗಳಲ್ಲಿ ಹೆಚ್ಚುವ ಜನಸಂದಣಿಯ ಜಪ.

ಈಚೆಗೆ ಫೆಬ್ರವರಿ ೨೦೨೧ ರಲ್ಲಿ ಹದಿನೈದು ದಿನಗಳ ಕಾಲ ಆಯೋಜಿಸಲಾಗಿದ್ದ ‘ಆದಿ ಮಹೋತ್ಸವ್’ ಕೂಡ ದಿಲ್ಲಿ ಹಾಟಿನಲ್ಲಿ ಯಶಸ್ವಿಯಾಗಿಯೇ ನೆರವೇರಿತ್ತು. ಭಾರತದ ಬುಡಕಟ್ಟು ಜನಾಂಗಗಳನ್ನು ಮುಖ್ಯ ಥೀಮ್ ಆಗಿ ಇಟ್ಟುಕೊಂಡಿದ್ದ ಕಾರ್ಯಕ್ರಮವು ಹದಿನೈದು ದಿನಗಳ ಕಾಲ ಭಾರತೀಯ ಬುಡಕಟ್ಟುಗಳ ಸಂಸ್ಕೃತಿಯನ್ನು ಸ್ವಾರಸ್ಯಕರ ರೂಪದಲ್ಲಿ ದಿಲ್ಲಿಯ ಜನತೆಗೆ ಪರಿಚಯಿಸಿತ್ತು. ಬುಡಕಟ್ಟು ಜನಾಂಗಗಳ ಕಲಾ ಶ್ರೀಮಂತಿಕೆಯನ್ನಷ್ಟೇ ಅಲ್ಲದೆ, ಭಾರತದ ವಿವಿಧ ರಾಜ್ಯಗಳ ಬುಡಕಟ್ಟಿನ ಖಾದ್ಯಗಳನ್ನೂ ಕೂಡ ಸ್ಥಳೀಯರು ಸವಿಯುವಂತಾಗಿದ್ದು ಈ ಬಾರಿಯ ವಿಶೇಷ.

ಈ ಗುಂಗಿನಲ್ಲೇ ಹಳೆಯ ಕೆಲ ನೆನಪುಗಳು ಮತ್ತೆ ಓಡೋಡಿ ಬರುತ್ತವೆ ನೋಡಿ. ಪ್ರತೀವರ್ಷವೂ ಅದ್ದೂರಿಯಾಗಿ ನಡೆಯುವ ಸೂರಜ್ ಕುಂಡ್ ಮಹಾಮೇಳವು ದಿಲ್ಲಿ ನಿವಾಸಿಗಳಿಗೆ ಹೊಸ ಸಂಗತಿಯೇನಲ್ಲ. ಹೀಗಿರುವಾಗ ಕೆಲ ವರ್ಷಗಳ ಹಿಂದೆ ಸೂರಜ್ ಕುಂಡ್ ಮೇಳದಲ್ಲಿ ಕರ್ನಾಟಕವು ಥೀಮ್ ರಾಜ್ಯವಾಗಿ ಆಯ್ಕೆಯಾದ ಪರಿಣಾಮ, ಇಡೀ ಉತ್ಸವವನ್ನೇ ‘ಕರ್ನಾಟಕ ಸ್ಪೆಷಲ್’ ಶೈಲಿಯಲ್ಲಿ ಆಯೋಜಿಸಿದ್ದರು. ಈ ನೆಪದಲ್ಲಿ ಒಂದು ಭಾನುವಾರ ಸೂರಜ್ ಕುಂಡ್ ಪ್ರದೇಶಕ್ಕೆ ಹೊರಟ ನಮ್ಮ ಬ್ಯಾಚುಲರ್ ಯುವಕರ ತಂಡವು ಕರ್ನಾಟಕದ ವಿವಿಧ ಖಾದ್ಯಗಳನ್ನು ದಿನವಿಡೀ ಸವಿಯುತ್ತಾ, ಕನ್ನಡದ ಸಂಸ್ಕೃತಿಯನ್ನು ಸಾರುವ ಸೆಟ್ ಗಳನ್ನು, ಗೊಂಬೆಗಳನ್ನು, ಬೃಹತ್ ಪ್ರತಿಕೃತಿಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಾ ಅಡ್ಡಾಡುತ್ತಿದ್ದಿದ್ದು ಇಲ್ಲಿಯ ಹಲವು ನೆನಪುಗಳಲ್ಲಿ ಇಂದಿಗೂ ಹಸಿರು.

ಈ ಬಾರಿಯ ಆದಿ ಮಹೋತ್ಸವ್ ಕೂಡ ಇಂಥಾ ಕೆಲ ವಿಶೇಷ ನೆನಪುಗಳಿಗೆ ನಾಂದಿ ಹಾಡಿತ್ತು. ಮುಂಡಾ ಬುಡಕಟ್ಟು ಜನಾಂಗದ ಪ್ರತಿನಿಧಿಯಾಗಿ ಒಡಿಸ್ಸಾದ ಭುವನೇಶ್ವರ್ ನಿಂದ ಆಗಮಿಸಿದ್ದ ರಾಮೇಶ್ವರ್ ಮುಂಡಾ, ಈ ಬಾರಿಯ ಖ್ಯಾತ ಆಹ್ವಾನಿತ ಅತಿಥಿ ಕಲಾವಿದರಲ್ಲೊಬ್ಬರು. ಸಾಂಪ್ರದಾಯಿಕ ಪಟ್ಟಚಿತ್ರಗಳ ರಚನೆಯಲ್ಲಿ ವಿಶೇಷವಾದ ಪರಿಣತಿಯನ್ನು ಪಡೆದಿರುವ ಮುಂಡಾ ತಾಳೆಗರಿಯಲ್ಲೂ ಕೂದಲು ಸೀಳುವಂತಿನ ಸೂಕ್ಷ್ಮದಲ್ಲಿ ಸಂಕೀರ್ಣ ಚಿತ್ರಗಳನ್ನು ರಚಿಸಬಲ್ಲರು. ಇಂದು ತಾನು ಸುಮಾರು ನಲವತ್ತು ವಿದ್ಯಾರ್ಥಿಗಳಿಗೆ ಈ ಕಲೆಯನ್ನು ಬೋಧಿಸುತ್ತಿದ್ದೇನೆ ಎನ್ನುವ ರಾಮೇಶ್ವರ್ ಮುಂಡಾ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರಕ್ಕೆ ನಾಮಾಂಕಿತರಾಗಿದ್ದ ಪ್ರತಿಭಾವಂತ ಕಲಾವಿದರೂ ಹೌದು.

ಇನ್ನು ಬುಡಕಟ್ಟು ಜನಾಂಗ ಮಹೋತ್ಸವದ ಮತ್ತೊಂದು ಆಕರ್ಷಣೆಯಾಗಿದ್ದ ‘ಖಾದ್ಯ ಉತ್ಸವ’ದಲ್ಲಿ ಈ ಬಾರಿ ಹೆಚ್ಚಿನ ಆಸಕ್ತರನ್ನು ಸೆಳೆದಿದ್ದು ಜಾರ್ಖಂಡ್ ಮೂಲದ ಒಂದು ವಿಶಿಷ್ಟ ಖಾದ್ಯ. ಅಷ್ಟಕ್ಕೂ ಅದೇನೆಂದರೆ ಕೆಂಪಿರುವೆಗಳಿಂದ ಮಾಡಲಾಗಿದ್ದ ಒಂದು ಬಗೆಯ ಚಟ್ನಿ. ಕೆಂಪಿರುವೆಗಳನ್ನು ಮಟ್ಟಸವಾಗಿ ಜಜ್ಜಿ, ನಿಂಬೆರಸ ಸಹಿತವಾಗಿ ಹಲವು ಮಸಾಲಾಗಳನ್ನು ಬೆರೆಸಿ, ಪೇಸ್ಟ್ ರೂಪದಲ್ಲಿ ಸಿದ್ಧಪಡಿಸಲಾದ ಚಟ್ನಿಯು ಒಂದು ಬಗೆ. ಇನ್ನು ರಾಶಿ ಕೆಂಪಿರುವೆಗಳನ್ನು ಒಂದಷ್ಟು ಮಾತ್ರ ಜಜ್ಜಿ, ಅವುಗಳು ಗರಿಗರಿಯಾಗಿ ಸ್ಪಷ್ಟವಾಗಿ ಕಾಣುವಂತೆ, ಹುರಿದ ತಿಂಡಿಯಂತೆ ತಿನ್ನುವುದು ಮತ್ತೊಂದು ಬಗೆ. ಜಾರ್ಖಂಡ್ ಸೇರಿದಂತೆ ಒಡಿಶಾ ಮತ್ತು ಛತ್ತೀಸ್ ಗಢ್ ಪ್ರದೇಶಗಳಲ್ಲೂ ಈ ಕೆಂಪಿರುವೆಯ ಚಟ್ನಿ ಸಖತ್ ಜನಪ್ರಿಯವಂತೆ. ಉಳಿದಂತೆ ಭಾರೀ ಜನಮೆಚ್ಚಿದ ಖಾದ್ಯಗಳಾಗಿ ಇಲ್ಲಿ ಈ ಬಾರಿ ಬಿಕರಿಯಾಗಿದ್ದು ತೆಲಂಗಾಣದ ಚಿಕನ್/ಮಟನ್ ಬಿರಿಯಾನಿ ಮತ್ತು ನಾಗಾಲ್ಯಾಂಡ್ ಮೂಲದ ಅಕ್ಕಿಯಿಂದ ಸಿದ್ಧಪಡಿಸಲಾದ ಬಿಯರ್.

ಐದು ಬೆರಳು ಕೂಡಿ ಒಂದು ಮುಷ್ಟಿಯು,
ಹಲವು ಮಂದಿ ಸೇರಿ ಈ ಸಮಷ್ಟಿಯು…
ಬೇರೆ ಬೇರೆ ಒಕ್ಕಲು,
ಒಂದೇ ತಾಯ ಮಕ್ಕಳು…

ಭಾರತದ ವೈವಿಧ್ಯತೆಯ ಬಗ್ಗೆ ಹೀಗೆ ಬರೆದಿದ್ದರು ನಮ್ಮೆಲ್ಲರ ಮೆಚ್ಚಿನ ಕವಿ ಹೆಚ್ಚೆಸ್ವಿ. ರಾಷ್ಟç ರಾಜಧಾನಿಯ ಪಾಲಿಗೆ ‘ದಿಲ್ಲಿ ಹಾಟ್’ ಅಂಥದ್ದೇ ಒಂದು ವಿಶಿಷ್ಟ ಸಾಂಸ್ಕೃತಿಕ ರಾಯಭಾರಿ.

March 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Prashantha Naik

    ‘ದಿಲ್ಲಿಹಾಟ್’ ಎಂಬ ಸಾಂಸ್ಕೃತಿಕ ರಾಯಭಾರಿ ದೆಹಲಿಯ ಜೀವನವನ್ನು ಚಿತ್ರಿಸುವ ಲೇಖನವು ತುಂಬಾ ಚೆನ್ನಾಗಿ ಮೂಡಿಬಂದಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: