ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭವ್ಯ ಕಬ್ಬಳಿ ಹೊಸ ಕವಿತೆ – ಪದ್ಯಗಳನ್ನೆಲ್ಲಾ ಹುಡುಕಿ ಶಿಕ್ಷಿಸಬೇಕು!

ಭವ್ಯ ಕಬ್ಬಳಿ

ಇದ್ದಹಾಗೆ ಇದ್ದುಬಿಡುವ
ತನ್ನ ಪಾಡಿಗೆ ತಾನು
ಸತ್ಯ ಹೇಳುತ್ತಾ ತಿರುಗುವ
ಸುಳ್ಳೆಂದರೆ ತಿಳಿಯದ ಪದ್ಯವನ್ನು
ಕಟಕಟೆಯಲ್ಲಿ ನಿಲ್ಲಿಸಿ
ಸುಳ್ಳು ಆಪಾದನೆ ಹೊರಿಸಿ
ಹೊರಗೆ ಬಾರದಂತೆ ಬಂದಿಸಿಡಬೇಕು

ಪದ್ಯಗಳನ್ನೆಲ್ಲಾ ಹುಡುಕಿ ಶಿಕ್ಷಿಸಬೇಕು!

ಸಲೀಸು ಎದೆಯ ಇರಿದು
ರಕ್ತ ಒಸರುವಲ್ಲಿ
ಪದಗಳನ್ನೆಲ್ಲಾ ಪೋಣಿಸಿ
ಗೊತ್ತಿಲ್ಲದಂತೆ ಹರಿಬಿಡುವ
ಯಾರನ್ನೂ ನೋಯಿಸದ ಪದ್ಯಕ್ಕೆ
ಕಾಲುವೆ ಕಟ್ಟಿ
ಯಾರನ್ನಾದರೂ ಕಾವಲಿಡಬೇಕು

ಪದ್ಯಗಳನ್ನೆಲ್ಲಾ ಹುಡುಕಿ ಶಿಕ್ಷಿಸಬೇಕು

ಸುಮ್ಮನಿದ್ದರೂ ಸತಾಯಿಸಿ
ಹೇಳಿಯೂ ಹೇಳದಂತಿದ್ದುಕೊಂಡು
ಇದ್ದೂ ಇರದಂತಿರುವ
ಯಾರಿಗೂ ಅರ್ಥವಾಗದ ಪದ್ಯ
ಎಲ್ಲಿಯೂ ಬಾಯಿಬಿಡದಂತೆ
ಬಾಯಿ ಮುಚ್ಚಿಸಬೇಕು

ಪದ್ಯಗಳನ್ನೆಲ್ಲಾ ಹುಡುಕಿ ಶಿಕ್ಷಿಸಬೇಕು

ಜಗದ ಎಲ್ಲಾ ಗೊಂದಲಗಳಿಗೂ
ಗಾಳ ಹಾಕಿ ಹಿಡಿದು ತಂದು
ಹಾಗೇ ಮತ್ತೆ ತೇಲಿಸಿ ಮರೆಸಿ
ಸಮಾಧಾನಕೊಟ್ಟು ರಮಿಸಿ
ಯಾರೂ ಮರೆಯದೆ ಉಳಿದ ಪದ್ಯಕ್ಕೆ
ಯಾರ ನೆನಪೂ ಬಾರದಂತೆ ಮರೆಸಿಬಿಡಬೇಕು

ಶಿಕ್ಷಿಸಬೇಕು, ಅಷ್ಟೆ!
ಆಗ ನೋಡಿ,
ಬದುಕುತ್ತೇವೆ
ನಮ್ಮ ಪಾಡಿಗೆ ನಾವೂ..
ಬದುಕುತ್ತದೆ ಪದ್ಯ
ತನ್ನ ಪಾಡಿಗೆ ತಾನೂ…

‍ಲೇಖಕರು Admin

16 March, 2022

1 Comment

  1. T S SHRAVANA KUMARI

    ಸೊಗಸಾದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading