‘ನನ್ನ ಮರಣದ ನಂತರವೂ ನಾನು ಬದುಕಿರಲು ಬಯಸುತ್ತೇನೆ- ಆನ್ ಫ್ರಾಂಕ್

ತೇಜಾವತಿ ಎಚ್ ಡಿ
ಹದಿಮೂರು ವರ್ಷದ ಕಿಶೋರಿ ಆನ್ ಫ್ರಾಂಕ್ ಬರೆದ 384 ಪುಟಗಳ ಡೈರಿಯು ಕಿಶೋರಾವಸ್ಥೆಯ ತಲ್ಲಣಗಳು ಒಳಹೊರ ವ್ಯಕ್ತಿತ್ವಗಳ ಸಂಘರ್ಷಗಳೊಂದಿಗೆ ಮುಖಮುಖಿಯಾಗುತ್ತ ಪ್ರಬುದ್ಧತೆಯೆಡೆಗೆ ಸಾಗುವ ಅಪರೂಪ ಕಥನ. ಆಗ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನ ಆಡಳಿತವಿತ್ತು. ಜರ್ಮನ್ನರು ಶ್ರೇಷ್ಠ, ಉಳಿದವರು ಕನಿಷ್ಠ ಎಂಬ ಧೋರಣೆಯಿಂದ ಲೆಕ್ಕವಿಲ್ಲದಷ್ಟು ಯಹೂದಿಗಳನ್ನು ವಿನಾಕಾರಣ ದ್ವೇಷಿಸುತ್ತ ಎಲ್ಲ ಸಾರ್ವಜನಿಕ ಸ್ಥಳಗಳಿಂದ ಅವರನ್ನು ವಜಾಗೊಳಿಸಲಾಗಿತ್ತು.
ಸೌಲಭ್ಯಗಳಿಂದ ವಂಚಿಸಿ ಅವರನ್ನು ದೇಶಭ್ರಷ್ಟರೆಂದು ಘೋಷಿಸಿ ಇತರ ದೇಶಗಳಿಗೆ ಓಡಿಹೋಗುವಂತೆ ತಾಕೀತು ಮಾಡಲಾಗಿತ್ತು. ನಾಜಿಗಳು ನೆದರ್ ಲ್ಯಾಂಡ್ ನ್ನು ವಶಪಡಿಸಿಕೊಂಡ ಸಮಯ ಆನ್ ಫ್ರಾಂಕ್ ಕುಟುಂಬದಲ್ಲಿ ತಂದೆ ಒಟ್ಟೋ ಫ್ರಾಂಕ್, ತಾಯಿ ಎಥಿಡ್, ಸಹೋದರಿ ಮಾರ್ಗೋಟ್, ವ್ಯಾನ್ಡಾನ್ ಕುಟುಂಬದ ಹರ್ಮನ್ ವ್ಯಾನ್ ಪೆಲ್ಸ್, ಆತನ ಪತ್ನಿ ಅಗಸ್ಟ್, ಪುತ್ರ ಪೀಠರ್ ಹಾಗೂ ದಂತ ವೈದ್ಯರಾದ ಆಲ್ಬರ್ಟ್ ಈ ಎಂಟು ಜನ ಯಹೂದಿಗಳು ಆಮ್ಸ್ಟರ್ ಡಾಮ್ ನ ‘ಓಪೆಕ್ಟ’ ಎಂಬ ವ್ಯವಹಾರ ಸಂಸ್ಥೆಯನ್ನು ಅಡಗುತಾಣವಾಗಿ ಮಾಡಿಕೊಂಡು ಸುಮಾರು ಎರಡು ವರ್ಷಗಳ ಕಾಲ ಗುಪ್ತವಾಸದ ದಿನಗಳನ್ನು ಸಂಕಟ, ಸಂತಸ, ಮೋಜು – ಮಸ್ತಿ, ವೈಯಕ್ತಿಕ ತಾಕಲಾಟಗಳು, ಬಾಂಧವ್ಯ ವೈರುಧ್ಯಗಳ ನಡುವೆ ದೂಡಿದ ಅನುಭವ ಕಥನವನ್ನು ಆನ್ ಫ್ರಾಂಕ್ ಡಚ್ ಭಾಷೆಯಲ್ಲಿ ಮೂರು ವಾಲ್ಯೂಮ್ ಗಳಲ್ಲಿ ಬರೆದಿದ್ದಾಳೆ. ‘Het Achterhuis’ ಶೀರ್ಷಿಕೆಯ ಅಡಿಯಲ್ಲಿ ಇದು ಪ್ರಕಟವಾಗಿದೆ.
ಜೂನ್ 14 1942 ರಿಂದ ಆರಂಭಿಸಿದ ಡೈರಿಯಲ್ಲಿನ ಕೊನೆಯ ಪುಟ ಆಗಸ್ಟ್ 1,1944 ರಂದು ಬರೆದದ್ದು. ಅದಾದ ಮೂರು ದಿನದ ಬಳಿಕ ಅಂದರೆ ಅಗಸ್ಟ್ 4,1944 ರಂದು ಸ್ಥಳೀಯ ಕಪಟಿಯೊಬ್ಬ ಗೆಸ್ಟಪೋಗಳಿಗೆ (ಗುಪ್ತ ಪೊಲೀಸರಿಗೆ) ಮಾಹಿತಿ ನೀಡಿದ ಪರಿಣಾಮ ಈ ಎಂಟು ಮಂದಿ ಯಹೂದಿಗಳು ಗುಪ್ತವಾಸದಿಂದ ಹೊರಬಂದು ಶರಣಾಗಬೇಕಾಯಿತು. ಅಲ್ಲಿಂದ ಅವರನ್ನು ನಾಜಿ ಯಾತನಾಶಿಬಿರಗಳಿಗೆ ಸಾಗಿಸಲಾಯಿತು.

“Paper is more patient than man” – (ಕಾಗದ ಮನುಷ್ಯನಿಗಿಂತ ಹೆಚ್ಚು ಸಹನಶೀಲವಾದದ್ದು) ಎನ್ನುವ ಆನ್ ಫ್ರಾಂಕ್ ಇಡೀ ಡೈರಿಯನ್ನು ‘ಕಿಟಿ’ ಎಂಬ ಅಂತರಂಗದ ಗೆಳೆಯನಿಗೆ ಸಂಬೋಧಿಸಿ ಬರೆದಿದ್ದಾಳೆ. ಕಿಶೋರಿಯೊಬ್ಬಳು ಗುಪ್ತವಾಸದ ಅವಧಿಯಲ್ಲಿ ಚಿತ್ತಸ್ವಾಸ್ತ್ಯವನ್ನು ಕಾಪಾಡಿಕೊಳ್ಳಲು, ಏಕಾಂಗಿ ಭಾವ ಹಾಗೂ ಖಿನ್ನತೆಯಿಂದ ಹೊರಬರಲು, ಯಾರೊಂದಿಗೂ ಹೇಳಲಾಗದ ಮಾನಸಿಕ ತೊಳಲಾಟಗಳನ್ನು ವ್ಯಕ್ತಪಡಿಸಲು ಕಂಡುಕೊಂಡ ಅಪೂರ್ವ ತಂತ್ರ ಈ ಡೈರಿ. ಹದಿಮೂರನೇ ಹುಟ್ಟುಹಬ್ಬದ ಪ್ರಯುಕ್ತ 1942 ಜೂನ್ 12 ರಂದು ಅವಳ ತಂದೆ ಈ ಡೈರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದರು.
ಜರ್ಮನಿಯಲ್ಲಿ ಹಿಟ್ಲರ್
ಚಾನ್ಸಲರ್ ಆಗುತ್ತಿದ್ದಂತೆಯೇ ಒಟ್ಟೋ ಫ್ರಾಂಕ್ ತನ್ನ ಕುಟುಂಬವನ್ನು ಆಮ್ಸ್ಟರ್ ಡ್ಯಾಮ್ ಗೆ ಕರೆತಂದು ಅಲ್ಲಿನ ಮಾಂಟೆಸ್ಸರಿ ಶಾಲೆಗೆ ಆನ್ ಫ್ರಾಂಕ್ ಳನ್ನು ಸೇರಿಸಿದ್ದರು. ಅಲ್ಲಿನ ಸಾಮುದಾಯಿಕ ಉಪನ್ಯಾಸಗಳಲ್ಲಿ ಭಾಗವಹಿಸುತ್ತಿದ್ದ ಅವಳಿಗೆ ಯಾತನಾ ಶಿಬಿರದ ಕಠೋರ ಸತ್ಯಗಳು ತಿಳಿದಿದ್ದವು. ಜರ್ಮನ್ನರ ಆಗಮನದಿಂದ ಯಹೂದಿಗಳ ಸಂಕಟ ಕಾಲ ಆರಂಭವಾಗಿ ಯಹೂದಿ ವಿರೋಧಿ ಕಟ್ಟಳೆಗಳು ಅನುಷ್ಠಾನವಾಗಿದ್ದವು. ಯಹೂದಿಗಳೆಲ್ಲರೂ “yellow star” ಗಳನ್ನು ತೊಟ್ಟು ತಮ್ಮದೇ ಬೈಸಿಕಲ್ ಗಳಲ್ಲಿ ಓಡಾಡುವುದರ ಜೊತೆಗೆ ಕೇವಲ ಜೂಯಿಸ್ ಶಾಪ್ (ಯಹೂದಿಗಳ ಅಂಗಡಿ) ಗಳಲ್ಲಿ ಮಾತ್ರ ಸೀಮಿತ ಅವಧಿಯೊಳಗೆ ತಮ್ಮ ಶಾಪಿಂಗ್ ಮುಗಿಸಬೇಕಿತ್ತು.
ಕ್ರೈಸ್ತರೊಂದಿಗೆ ಬೆರೆಯುವಂತಿರಲಿಲ್ಲ. ಶಾಲೆ, ಕ್ರೀಡೆ, ಮನರಂಜನೆ, ಪ್ರಯಾಣ ಎಲ್ಲವೂ ನಿಷೇಧಿಸಲ್ಪಟ್ಟವು. ನಾಜಿಗಳ ಕಪಿಮುಷ್ಠಿಯಿಂದ ಪಾರಾಗಲು ಒಟ್ಟೋ ಗುಪ್ತವಾಸದ ನಿರ್ಧಾರವನ್ನು ತಿಳಿಸಿದಾಗ ಆ ಪುಟ್ಟ ಹೃದಯ “ಓ ದೇವರೇ ಈ ಎಲ್ಲ ಸಂಕಟದ ಸಂಗತಿಗಳು ದೂರವೇ ಇರಲಿ ” ಎಂದು ಬೇಡಿತು. ಅದರ ಬೆನ್ನಲ್ಲೇ ಸಹೋದರಿ ಮಾರ್ಗೋಟ್ ಗೆ ಕಾಲ್ ಅಪ್ ನೋಟಿಸ್ ಬಂದಿತ್ತು. ಅಂದರೆ ಸೈನ್ಯಕ್ಕೆ ಸೇರಲು ಅನುಮತಿ ನೀಡುವುದು. ಅವು ನಿಜಕ್ಕೂ ಸೆರೆ ಶಿಬಿರಗಳು, ನರಕದ ಜೈಲು ಕೋಣೆಗಳಾಗಿದ್ದವು. ಸಿಕ್ಕಸಿಕ್ಕ ಯಹೂದಿಗಳನ್ನೆಲ್ಲ ದನಗಳಂತೆ ಗಾಡಿಗಳಲ್ಲಿ ತುಂಬಿ ಯಹೂದಿ ಕ್ಯಾಂಪ್ ಗಳಿಗೆ ಕರೆದೊಯ್ದು ತಲೆಬೋಳಿಸಿ ಸಣ್ಣ ಸಣ್ಣ ಶೌಚಗೃಹಗಳಲ್ಲಿ ನೂರಾರು ಜನರನ್ನು ತುರುಕುತ್ತಿದ್ದರು.
ಪ್ರತ್ಯೇಕ ವ್ಯವಸ್ಥೆಗಳಿಲ್ಲದೆ ಲಿಂಗಭೇದವೆನ್ನದೆ ಒಟ್ಟಿಗೆ ಮಲಗಬೇಕಿದ್ದರಿಂದ ಅಲ್ಲಿನ ಮಹಿಳೆ, ಹುಡುಗಿಯರು ಯಾವ ಕ್ಷಣದಲ್ಲಾದರೂ ಗರ್ಭಿಣಿಯಾರಾಗುತ್ತಿದ್ದರು. ಅಲ್ಲಿಂದ ಪಾರಾಗುವುದು ಅಸಾಧ್ಯವಾಗಿತ್ತು.ಯಹೂದಿಗಳನ್ನು ಉಸಿರುಗಟ್ಟಿಸಿ ಸಾಯಿಸುತ್ತಿದ್ದ ವರದಿಯನ್ನು ಇಂಗ್ಲಿಷ್ ರೇಡಿಯೋ ಪ್ರಸಾರ ಮಾಡುತ್ತಿತ್ತು. ಸೆರೆ ಸಿಕ್ಕ ಒತ್ತೆಯಾಳುಗಳ ತಲೆಯನ್ನು ಗೋಡೆಗೆ ಜಜ್ಜಿ ಸಾಯಿಸಿ ಆಕಸ್ಮಿಕ ಮರಣವೆಂದು ಪತ್ರಿಕೆಗಳಿಗೆ ವರದಿ ನೀಡುತ್ತಿದ್ದ ಜರ್ಮನ್ನರ ಕ್ರೌರ್ಯ ಮಿತಿ ಮೀರಿತ್ತು.

ಹಿಟ್ಲರ್ ನ ಆಡಳಿತದ ಕಾರಣ ಜರ್ಮನ್ನರು ಹಾಗೂ ಯಹೂದಿಗಳು ಪ್ರಪಂಚದ ಬದ್ಧ ವೈರಿಗಳಾದರು. ಇದೆಲ್ಲದರಿಂದ ತಡ ಮಾಡದೆ ಒಟ್ಟೋ ಫ್ರಾಂಕ್ ಕುಟುಂಬ ತನ್ನ ಸಹೋದ್ಯೋಗಿಗಳ( ಕ್ರೋಲರ್ ಮತ್ತು ಕೂಫಸ್) ನೆರವಿನಿಂದ ತನ್ನ ಆಫೀಸ್ ನ್ನು ಗುಪ್ತವಾಸಕ್ಕೆ ಆಯ್ಕೆ ಮಾಡಿಕೊಂಡು ತಮಗೆ ಬೇಕಾದಂತೆ ಮಾರ್ಪಾಡು ಮಾಡಿಕೊಂಡರು. ಆಗಾಗ ರೇಡಿಯೋ ಕೇಳುವ ಅವಕಾಶವಿದ್ದರಿಂದ ಹೊರಗೆ ನಡೆಯುತ್ತಿದ್ದ ವಿಚಾರಗಳು ತಿಳಿಯುತ್ತಿದ್ದವು. ಮಿ.ಕೂಫಸ್ ಪ್ರತಿ ವಾರ ಆನ್ ಫ್ರಾಂಕ್ ಳಿಗೆ ಪುಸ್ತಕಗಳನ್ನು ತಂದುಕೊಡುತ್ತಿದ್ದಳು. ಒಟ್ಟೋ ಫ್ರಾಂಕ್ ತನ್ನ ಮಕ್ಕಳಿಬ್ಬರಿಗೂ ಅಲ್ಲೇ ಎಲಿ ವೂಸನ್ ರಿಂದ ದೂರ ಶಿಕ್ಷಣದ ವ್ಯವಸ್ಥೆಯನ್ನು ರಹಸ್ಯವಾಗಿ ಮಾಡಿಸಿದ್ದರು.
ಆನ್ ಓದಿನ ವಿಸ್ತರಣೆಯೊಂದಿಗೆ ಫ್ರೆಂಚ್ ಕಲಿಕೆ, ಗಣಿತ, ಶಾರ್ಟ್ ಹ್ಯಾಂಡ್, ಇಂಗ್ಲಿಷ್ ಪುಸ್ತಕಗಳ ಓದು, ಭಾಷಾಂತರ ಎಲ್ಲವನ್ನೂ ಮಾರ್ಗೋಟ್ ಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಳು. ಗುಪ್ತವಾಸದಲ್ಲಿ ಫ್ರಾಂಕ್ ಕುಟುಂಬದ ಪುಸ್ತಕ ಪ್ರೀತಿ ಗಮನ ಸೆಳೆಯುವುದರ ಜೊತೆಗೆ ಗುಪ್ತವಾಸವನ್ನು ಕಳೆಯಲು ಅದು ಅನಿವಾರ್ಯವೂ ಆಗಿತ್ತು. ಛನುಕಾ ಮತ್ತು ಸೇಂಟ್ ನಿಕೋಲಾಸ್ ನಂತಹ ಸಣ್ಣ ಸಣ್ಣ ಆಚರಣೆಗಳನ್ನು ಲಭ್ಯವಿರುವ ಉಡುಗೊರೆ ವಿನಿಮಯದ ಮೂಲಕ ಸಂಭ್ರಮಿಸಿ ಜೀವನ ಪ್ರೀತಿ ಹೆಚ್ಚಿಸಿಕೊಳ್ಳುತ್ತಿದ್ದರು.
ಕಿಶೋರಾವಸ್ಥೆಗೆಗೆ ಕಾಲಿಡುವ ಹುಡುಗಿಯೊಬ್ಬಳು ಆಗ ತಾನೇ ರೆಕ್ಕೆ ಪುಕ್ಕ ಮೂಡಿದ ಪಕ್ಷಿಯೊಂದು ಸ್ವಚ್ಛಂದವಾಗಿ ಹಾರಲಾರದೆ ಮೂಕ ಪಕ್ಷಿಯಾಗಿ ಪರಿತಪಿಸುವಂತೆ ದೀರ್ಘ ಕಾಲ ಪ್ರಪಂಚದೊಂದಿಗಿನ ಒಡನಾಟವೇ ಇಲ್ಲದಂತೆ ಸಮವಯಸ್ಕರಿಲ್ಲದ ವಿವಿಧ ವಯೋಮಾನದ ಮನಸ್ಥಿತಿ, ವೈರುಧ್ಯದ ನಡುವೆ ಕತ್ತಲು ಬೆಳಕಿನಲ್ಲಿ ದಿನ ದೂಡುವಂತಾಯಿತು. ಆಗಾಗ ಬೈನಾಕ್ಯೂಲರ್ ವೀಕ್ಷಣೆ ಮಾತ್ರ ಹೊರಗಿನ ಸಂಗತಿಗಳನ್ನು ತಿಳಿಸುವ ಮಾಧ್ಯಮವಾಗಿತ್ತು .
ಹಸಿರು ಮತ್ತು ಬೂದು ಬಣ್ಣದ ಸೇನಾವಾಹನಗಳ ಮೂಲಕ ಬರುವ ಜರ್ಮನ್ನರ ಕೈಗೆ ಸಿಕ್ಕು ಮುದುಕರು, ಕಂದಮ್ಮಗಳು, ಬಸುರಿ, ಹೆಣ್ಣುಮಕ್ಕಳು, ರೋಗಿಗಳಾದಿಯಾಗಿ ಸಾವಿನ ಮೆರವಣಿಗೆಯಲ್ಲಿ ಸಾಗುವಾಗ ಮನ ಕಲಕುತ್ತಿದ್ದ ಆನ್ ಳ ಮನ ತನ್ನಿಂದ ಏನೂ ಸಹಾಯ ಮಾಡಲಾಗ್ತುತ್ತಿಲ್ಲವಲ್ಲ ಎಂದು ನೋಯುತ್ತಿತ್ತು. ಹಾಲೆಂಡಿನ ಅನಾಥ ಮಕ್ಕಳು ತುಂಡು ಬ್ರೆಡ್ಡಿಗಾಗಿ ಕೊರೆಯುವ ಚಳಿಯಲ್ಲೂ ದಾರಿಹೋಕರನ್ನು ತಡೆದು ನಿಲ್ಲಿಸಿ ಕೈಚಾಚುವ ಮಾನವೀಯತೆಯು ಅಧೋಗತಿಗಿಳಿದು ಕರುಳು ಹಿಂಡುವ ದೃಶ್ಯಕ್ಕಿಂತ ಹರಿದ ಬಟ್ಟೆ ತೊಟ್ಟು ಗುಪ್ತವಾಸದಲ್ಲಿರುವ ತಾವೇ ಸ್ವರ್ಗಸುಖಿಗಳು ಎಂಬ ಭಾವನೆ ಸಮಾಧಾನ ನೀಡುತ್ತಿತ್ತು.

ಹೆತ್ತವರಿಂದ ಕೊರತೆಯಾದ ಪ್ರೀತಿಯನ್ನು ಭವಿಷ್ಯದಲ್ಲಿ ಸಿಗುವ ಗೆಳೆಯನಿಂದ ನೀಗಿಸಿಕೊಳ್ಳಲು ಇಚ್ಚಿಸುವ ಆನ್ ಮನೆಯ ಸದಸ್ಯರಿಂದ ಅವಮಾನವಾದಾಗಲೂ ಎಲ್ಲವನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಪ್ರೀತಿಯನ್ನು ಮಾತ್ರವೇ ಪ್ರತಿಯಾಗಿ ನೀಡಲು ಬಯಸುವ ಹುಡುಗಿ. ಕರ್ಕಶ ಧ್ವನಿಯೊಂದಿಗೆ ಗಿರಕಿ ಹೊಡೆಯುವ ಶತ್ರು ವಿಮನಗಳು ಕ್ಷಣ ಕ್ಷಣಕ್ಕೂ ಭಯದ ಭೂತಗಳಾಗಿ ನೀರವ ರಾತ್ರಿಗಳನ್ನು ಕದಡಿ ಮಲಗಿದ್ದವರ ಕನಸಲ್ಲಿ ದುಃಸ್ವಪ್ನಗಳಾಗಿ ಕಾಡುತ್ತಿದ್ದವು.
ಜಾಗತಿಕ ಯುದ್ಧದ ಪರಿಣಾಮ, ಭವಿಷ್ಯದ ಕನಸು, ವರ್ತಮಾನದ ದೀನ ಬದುಕುಗಳ ಕುರಿತು ಚಿಂತನಾಶೀಲಾಳಾಗಿದ್ದ ಆನ್ ಕಿರು ವಯಸ್ಸಿಗೇ ತೋರಿರುವ ಪ್ರಬುದ್ಧತೆಯನ್ನು ಅವಳ ಬರಹದಲ್ಲಿ ಕಂಡಾಗ ಅಚ್ಚರಿಯಾದರೂ ಅದಕ್ಕೆ ಕಾರಣ ಅವಳ ಪರಿಸರವೂ ಹೌದು. ಸದಾ ಒಂದಿಲ್ಲೊಂದು ಪುಸ್ತಕದ ಓದು, ವಿಮರ್ಶೆಗಳ ಕುರಿತ ಚರ್ಚೆ ಸಾಮಾನ್ಯವಾಗಿದ್ದ ಕುಟುಂಬದಲ್ಲಿ ತಂದೆ ಪಿಮ್ (ಒಟ್ಟೋ ಫ್ರಾಂಕ್ ) ಕೂಡ ಓರ್ವ ಕವಿ, ಡಚ್ ಭಾಷೆಯಲ್ಲಿ ಕವಿತೆ ಬರೆಯುತ್ತಿದ್ದರು.
ಮಾರ್ಗೋಟ್ ಅದನ್ನು ಭಾಷಾಂತರಿಸುತ್ತಿದ್ದಳು. ಪಾದರಸದಂತಿದ್ದ ಹುಡುಗಿ ದಿನ ಕಳೆದಂತೆ ಭಾವನೆಗೆ ಸ್ಪಂದಿಸದ ತಾಯಿ, ಸಹೋದರಿಯೊಂದಿಗಿನ ಅಸಮಾಧಾನ, ಡಸೆಲ್ ವೈದ್ಯನ ತಪಾಸಣೆಯ ನೆಪದ ಕಿರಿಕಿರಿ, ಮನೆಯ ಸದಸ್ಯರ ವರ್ತನೆಗಳು ಹತಾಶೆ, ಏಕಾಂಗಿತನಗಳಿಂದ ಹೊರಬರಲು, ಒತ್ತಡ ನಿರ್ವಹಣೆಗಾಗಿ ವೆಲೇರಿಯನ್ ಮಾತ್ರೆ ನುಂಗುವ ಹಂತ ತಲುಪಿದ್ದಳು.
ಕೊನೆ ಕೊನೆಗೆ ಅಂತರ್ಮುಖಿಯಾಗಿ ತನ್ನೆಲ್ಲ ಭಾವನೆಗಳನ್ನು ಕೇವಲ ಕಾಗದದ ಮೇಲೆ ತೋರಿಸಿದ್ದಳು. ಕಿಶೋರಾವಸ್ಥೆಯಲ್ಲಿ ಉಂಟಾಗುವ ಸಹಜ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಆನ್ ಕೂಡ ಅನುಭವಿಸಿ ಪ್ರೀತಿಗಾಗಿ ಹಂಬಲಿಸುವ ಮುಗ್ಧೆಯಾಗಿ, ಸ್ವಾನುಕಂಪದಿಂದ ಎಲ್ಲರ ಗಮನ ಸೆಳೆಯಲು ಉದ್ದಟತನ ಪ್ರದರ್ಶಿಸುವ ಎಲ್ಲ ಸಂವೇದನೆಗಳನ್ನು ಒಟ್ಟೊಟ್ಟಿಗೆ ಅನುಭವಿಸುವ ದಿಟ್ಟೆಯಾಗಿ, ತರುಣ್ಯದ ಸೆಳೆತಕ್ಕೆ ತಳಮಳಗೊಳ್ಳುವ ತರುಣಿಯಾಗಿ ಕೊನೆಗೆ ಅಂತರಂಗದ ಸಖ್ಯ ಬೆಳೆಸಿ ಪ್ರಕೃತಿಯಲ್ಲಿನ ದೈವತ್ವವನ್ನು ಆರಾಧಿಸುತ್ತ ತನ್ನ ಏಕಾಂಗಿತನವನ್ನು ದೂರ ತಳ್ಳುವ ಪ್ರಬುದ್ದೆಯಾಗಿ ಕಾಣುತ್ತಾಳೆ. ಮಾತೃ ಮಮತೆಯಿಂದ ವಂಚಿತರಾದ ಮಕ್ಕಳಲ್ಲಿನ ಅಭದ್ರತೆ, ಸಂವೇಗಗಳ ಸ್ಫೋಟ, ಅಂತರ್ಮುಖ ಚಲನೆ ಆನ್ ಹಾಗೂ ಪೀಠರ್ ರಲ್ಲಿ ಕಾಣುತ್ತದೆ. ಹಾಗಾಗಿಯೇ ಆನ್ ಗೆ ಪೀಠರ್ ಹತ್ತಿರಗುತ್ತಾನೆ.
ಕ್ರಮೇಣ ಆನ್ ತನ್ನ ರೋಧನೆ, ಏಕಾಂಗಿತನ, ಆರೋಪ, ನ್ಯೂನತೆಗಳು ಎಲ್ಲವನ್ನು ಅರಿತು, ವಿಶ್ಲೇಷಿಸುತ್ತ ಆತ್ಮ ವಿಶ್ವಾಸವಿಟ್ಟು ಅಂತರಂಗದಿಂದ ವಿಕಸಿತಳಾಗುತ್ತಾಳೆ. ಹರೆಯದ ವಯಸ್ಸು ಹೊಸತನಕ್ಕೆ ತೆರೆದುಕೊಂಡು ಮುಗ್ಧ ಮನಸುಗಳಲ್ಲಿ ಪುಳಕವರಳುವ ಹಲವು ಸನ್ನಿವೇಶಗಳು, ಎಳೆಯ ಮನಸ್ಸುಗಳ ತ್ರಿಕೋನ ಪ್ರೇಮಕತೆಯೂ ಬಂದುಹೋಗುತ್ತದೆ. ಭವಿಷ್ಯದಲ್ಲಿ ಪತ್ರಕರ್ತಳೋ, ಬರಹಗಾರ್ತಿಯೋ ಆಗಬಯಸಿದ್ದ ಆನ್ ಅದರ ಮುನ್ನುಡಿಯಾಗಿ ಈ ಡೈರಿಯನ್ನು ಬರೆಯುತ್ತ ಸಾಗಿದ್ದಳು.

ತನ್ನ ಬರಹದ ಬಗ್ಗೆ ಭರವಸೆ, ಅಭಿಮಾನವಿದ್ದ ಅವಳು ಕಾದಿದ್ದು ಕೇವಲ ಪ್ರತಿಭೆಯ ಅನಾವರಣಕ್ಕಾಗಿ. ಗುಪ್ತ ಗೃಹದಲ್ಲಿ ಲೇಖನಗಳು, ಕಥೆಗಳನ್ನು (Eva’s dream, cady’s life, Ellen the fairy) ಬರೆದಿದ್ದಳು. ಈ ಕಾರಣದಿಂದಲೇ ಅವಳು “ನನ್ನ ಮರಣದ ನಂತರವೂ ನಾನು ಬದುಕಿರಲು ಬಯಸುತ್ತೇನೆ ಮತ್ತು ಬರವಣಿಗೆಯ ಈ ಪ್ರತಿಭೆಯನ್ನು ನನಗೆ ವರವಾಗಿ ಕೊಟ್ಟ ಸಲುವಾಗಿ ದೇವರಿಗೆ ನಾನು ಕೃತಜ್ಞಳು” ಎಂದು ಬರೆದುಕೊಂಡಿದ್ದಾಳೆ.
ಬರವಣಿಗೆಯನ್ನು ಜೀವಿಸಿದ ಆನ್ ಸಾಕಷ್ಟು ಅಧ್ಯಯನ ಶೀಲೆ, ಭವಿಷ್ಯದ ಬೇಡಿಕೆಯ ತಾರೆ. ಇತಿಹಾಸದ ವಂಶವೃಕ್ಷ ತಯಾರಿಸುವುದು, ಪುರಾಣ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿದ್ದ ಅವಳು “ದೇವರು ತನಗೊಂದು ಜೀವಂತ ಬದುಕುವ ಅವಕಾಶ ನೀಡಿದ್ದೇ ಆದರೆ ಜಗತ್ತಿಗಾಗಿ ಮತ್ತು ಮನುಕುಲದ ಒಳಿತಿಗಾಗಿ ಕೆಲಸ ಮಾಡುವೆ” ಎನ್ನುತ್ತಾಳೆ.
“ಹೊರಗೆ ನಡೆ, ತೆರೆದ ಬಯಲಿಗೆ, ಸ್ವಚ್ಛಂದ ಪ್ರಕೃತಿಯ ಮಡಿಲಲ್ಲಿ, ಸೂರ್ಯನ ಕಿರಣಗಳಿಗೆ ಮೈಯೊಡ್ದು, ಆನಂದವನ್ನು ಅನುಭವಿಸು, ಸುಖಿಸು, ನಿನ್ನೊಳಗಿನ ಆನಂದವನ್ನು ಅನುಭವಿಸುತ್ತಾ ಅಲ್ಲಿ ದೇವರನ್ನು ಕಾಣು, ನಿನ್ನ ಸುತ್ತಲಿನ ಜಗತ್ತಿನಲ್ಲಿ ಇನ್ನೂ ಉಳಿದಿರುವ ಸೌಂದರ್ಯಕ್ಕಾಗಿ ಖುಷಿಪಡು ಮತ್ತು ಸಂತಸದಿಂದಿರು “ಖಿನ್ನ ಮನಸ್ಕರಿಗೆ ಆನ್ ಫ್ರಾಂಕ್ ಹೇಳುವ ಮಾತುಗಳಿವು. ಆದರೆ ಅವಳೇ ಖಿನ್ನತೆಗೆ ಒಳಗಾಗಿದ್ದು ವಿಪರ್ಯಾಸ. ಅವಳಲ್ಲಿನ ಅಗಾಧ ಜೀವನಪ್ರೀತಿ, ಕಾಳಜಿ, ಜೀವನದ ಆಸ್ವಾದನೆ, ಆಲೋಚನೆ ಎಲ್ಲವೂ ವಿಭಿನ್ನ.
ಸುಮಾರು 2 ವರ್ಷಗಳ ಕಾಲ ಗುಪ್ತವಾಸದಲ್ಲಿದ್ದ ಇವರು ಅಗಸ್ಟ್ 4,1944 ರಲ್ಲಿ ಕೊನೆಗೂ ನಾಜಿಗಳಿಗೆ ಶರಣಾಗಬೇಕಾಯಿತು. ಅಲ್ಲಿಂದ ನಾಜಿ ಸಂಪ್ರದಾಯದಂತೆ ಮತ್ತೆಂದೂ ಒಂದಾಗದಂತೆ ಬೇರ್ಪಟ್ಟ ಆನ್ ಕುಟುಂಬ ಸರಕು ಸಾಗಣೆಯ ರೈಲಿನಲ್ಲಿ ಒಂದು ಬೋಗಿಯಲ್ಲಿ ಎಂಬತ್ತರಂತೆ ಮೂರು ರಾತ್ರಿ ಮೂರು ಹಗಲು ಕೊರೆಯುವ ಚಳಿಯಲ್ಲಿ ಪ್ರಯಾಣಿಸಿ ಪೋಲೆಂಡ್ ನ ‘ಅಶ್ಚಿಟ್ಜಿ’ ಯಾತನಾ ಶಿಬಿರ ತಲುಪಿತು. ಅಲ್ಲಿನ ಅರೆಸುಟ್ಟ ಶವಗಳ ವಾಸನೆ, ವಿಷಾನಿಲ ಮತ್ತು ಚಿತಾಗಾರ ತಂತ್ರಗಳ ಮೂಲಕ ಬಂಧಿಸಿಟ್ಟ ಯಹೂದಿಗಳನ್ನು ಕೊಲ್ಲುತ್ತಿದ್ದ ನಾಜಿಗಳ ನಿರಂತರ ಮಾನಸಿಕ ಯಾತನೆಯಿಂದ ನರಳಿದ ಆನ್ ಮಾನಸಿಕ ಆಘಾತಕ್ಕೆ ಒಳಗಾದಳು.
ಜರ್ಮನಿಯ ‘ಬೆಲ್ಸನ್’ ಯಾತನಾ ಶಿಬಿರಕ್ಕೆ ಸ್ಥಳಾಂತರವಾದ ಫ್ರಾಂಕ್ ಕುಟುಂಬದ ಹೆಣ್ಣುಮಕ್ಕಳು ತಾಯಿ, ಸಹೋದರಿ ಕೊನೆಗೆ 1945 ರಲ್ಲಿ ಆನ್ ಕೂಡ ಅಜ್ಞಾತವಾಗಿ ಮರಣ ಹೊಂದಿದಳು. ಅದೃಷ್ಟವಶಾತ್ ಬದುಕುಳಿದ ಒಟ್ಟೋ ಫ್ರಾಂಕ್ ಗೆಸ್ಟಪೋ ಗಳು ರದ್ದಿ ಕಾಗದಗಳೆಂದು ಭಾವಿಸಿ ಎಸೆದಿದ್ದ ಆನ್ ಳ ಡೈರಿಯನ್ನು ಯುದ್ಧದ ನಂತರ ಡಚ್ ಭಾಷೆಯಲ್ಲಿ ಪ್ರಕಟಿಸಿದರು. ಇಲ್ಲಿಯವರೆಗೆ ಜಗತ್ತಿನ ಸು 70 ಭಾಷೆಗಳಲ್ಲಿ ಪ್ರಕಟವಾಗಿರುವ ಇದನ್ನು ಕನ್ನಡಕ್ಕೆ ನಾಗರೇಖಾ ಗಾಂವಕರ ಅನುವಾದಿಸಿದ್ದಾರೆ. ಹೀಗೆ ಭವಿಷ್ಯದ ಪ್ರಖರ ನಕ್ಷತ್ರವೊಂದು ದುರಂತಮಯ ಅಂತ್ಯ ಕಂಡದ್ದು ಮನಸ್ಸಿಗೆ ಖೇದವುಂಟುಮಾಡುವ ಸಂಗತಿ.









ಉತ್ತಮ ಪುಸ್ತಕ ಪರಿಚಯ