ಭಗತ್ ಸಿಂಗ್ ಈಗಲೂ ಯಾಕೆ ಪ್ರಸ್ತುತ ಅಂದ್ರೆ..

ನಾ ದಿವಾಕರ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಸ್ಥಾಪಿತ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದ ಯಥಾಸ್ಥಿತಿವಾದಿಗಳ ದೃಷ್ಟಿಯಲ್ಲಿ ಭಯೋತ್ಪಾದಕನಂತೆ ಕಂಡಿದ್ದ ಭಗತ್ ಸಿಂಗ್, ಚರಿತ್ರೆಯ ಪುಟಗಳಲ್ಲಿ ಮಾತ್ರವೇ ಹುತಾತ್ಮ ಸ್ಥಾನವನ್ನು ಅಲಂಕರಿಸಿ ಹುಸಿ ದೇಶಪ್ರೇಮದ ಉನ್ಮಾದಕ್ಕೆ ರೂಪಕವಾಗಿದ್ದ ಭಗತ್ ಸಿಂಗ್, 1980ರವರೆಗೂ ನೇಪಥ್ಯದಲ್ಲಿದ್ದು ಅಯೋಧ್ಯಾ ಪರ್ವದಲ್ಲಿ ರಥಯಾತ್ರೆಯ ಪ್ರತಿಮೆಯಾಗಿ ರೂಪುಗೊಂಡ ಭಗತ್ ಸಿಂಗ್, ಇಂದು ದೇಶದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಸೈದ್ಧಾಂತಿಕ ಸಂಕಥನದ ಕೇಂದ್ರ ಬಿಂದುವಾಗಿದ್ದಾನೆ.

ಮಾರ್ಚ್ 23 ಭಗತ್ ಸಿಂಗ್ ಹುತಾತ್ಮನಾದ ದಿನ, ಬ್ರಿಟೀಷರು ಭಗತ್ ಸಿಂಗ್ ಎಂಬ ಒಬ್ಬ ದೇಶಪ್ರೇಮಿ ಯುವಕನನ್ನು ಗಲ್ಲಿಗೇರಿಸಿದ ದಿನ ಎಂದಷ್ಟೇ ಹೇಳುವ ಪಠ್ಯ ಪುಸ್ತಕಗಳು ಕಳೆದ ಎಪ್ಪತ್ತು ವರ್ಷಗಳಲ್ಲಿ ಭಗತ್ ಸಿಂಗ್ ಗಲ್ಲಿಗೇರಲು ಮೂಲ ಕಾರಣ ಏನು ಎಂದು ಹೇಳಿಯೇ ಇಲ್ಲ.

ಶಾಸನಸಭೆಯ ಮೇಲೆ ಬಾಂಬ್ ಎಸೆದ ಅಪರಾಧಕ್ಕೆ ಗಲ್ಲು ಶಿಕ್ಷೆಯಾಯಿತು ಎಂದು ಹೇಳುವ ಮೂಲಕ ಬಾಂಬ್ ಎಸೆದ ಭಗತ್ ಸಿಂಗ್ ಮತ್ತು ಸಹಚರರನ್ನು ಪರಿಚಯಿಸಿರುವ ಭಾರತದ ಶಿಕ್ಷಣ ವ್ಯವಸ್ಥೆ, ಈ ಬಾಂಬ್ ಎಸೆಯುವ ಕೃತ್ಯದ ಹಿಂದಿನ ಉದಾತ್ತ ಧ್ಯೇಯ, ಕ್ರಾಂತಿಕಾರಿ ಸಿದ್ಧಾಂತವನ್ನು ಪ್ರಸ್ತಾಪಿಸಿಯೂ ಇಲ್ಲದಿರುವುದು ದುರಂತ.

ಆದರೂ ಉದಾರವಾದಿ ಚಿಂತಕರು ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ ಧ್ವಂಸವಾದದ್ದನ್ನು ಸಮರ್ಥಿಸಲು ಭಗತ್ ಸಿಂಗ್ ಪ್ರತಿಮೆಯನ್ನು ಮತ್ತೊಮ್ಮೆ ರೂಪಕವಾಗಿ ಬಳಸಿಕೊಳ್ಳುತ್ತಿರುವುದನ್ನು ನೋಡಿದರೆ ಬಹುಶಃ ಇನ್ನೂ ಶತಮಾನಗಳ ಕಾಲವೂ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಭಗತ್ ಸಿಂಗ್ ಉನ್ಮತ್ತ ದೇಶಪ್ರೇಮದ ರೂಪಕವಾಗಿಯೇ ಬಳಸಲ್ಪಡುತ್ತಾನೆ ಎನಿಸುತ್ತದೆ.

ಲೆನಿನ್ ಪ್ರತಿಮೆಯ ಸ್ಥಾನದಲ್ಲಿ ಭಗತ್ ಸಿಂಗ್ ಪ್ರತಿಮೆ ಇದ್ದಿದ್ದಲ್ಲಿ ಬಹುಶಃ ತ್ರಿಪುರಾದ ಮತಾಂಧರು ಪ್ರತಿಮೆಯನ್ನು ಧ್ವಂಸ ಮಾಡುತ್ತಿರಲಿಲ್ಲ ಎನ್ನುವ ವಿತಂಡವಾದ ಹಾಸ್ಯಾಸ್ಪದವಾದರೂ ಈ ವಾದದ ಹಿಂದೆ ಒಂದು ಆಡಳಿತ ವ್ಯವಸ್ಥೆಯ ವಿಕೃತ ಸ್ವರೂಪ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ನಿಜ, ಭಾರತದ ಎಡಪಂಥೀಯ ಚಳುವಳಿಗೆ ಭಗತ್ ಸಿಂಗ್ ತಾತ್ವಿಕವಾಗಿ ಪ್ರೇರಕ ಶಕ್ತಿಯಾಗಿದ್ದನೇ ಹೊರತು ರಾಜಕೀಯ ನೆಲೆಯಲ್ಲಿ ಪ್ರೇರಣೆಯಾಗಲಿಲ್ಲ. ಇದಕ್ಕೆ ಕಾರಣಗಳು ಹಲವಾರು. ಆದರೆ ಎಡಪಂಥೀಯ ಚಿಂತಕರ ಸತತ ಪರಿಶ್ರಮ ಮತ್ತು ಪ್ರಯತ್ನ ಇಲ್ಲದೆ ಹೋಗಿದ್ದರೆ ಭಗತ್ ಸಿಂಗ್‍ನ ಕ್ರಾಂತಿಕಾರಿ ಚಿಂತನೆಗಳು, ಬರಹಗಳು ಭೂಗತವಾಗಿಯೇ ಉಳಿಯುತ್ತಿದ್ದವು ಎನ್ನುವುದನ್ನೂ ಮರೆಯುವಂತಿಲ್ಲ.

ತಮ್ಮ ರಾಜಕೀಯ ಧೋರಣೆ ಮತ್ತು ಮಾರ್ಗವನ್ನು ನಿರ್ಧರಿಸುವ ನಿಟ್ಟಿನಲ್ಲಿ, ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾರ್ಕ್ಸ್ ವಾದಿ ತತ್ವಗಳನ್ನು ಭಾರತೀಯ ಸಂದರ್ಭಕ್ಕೆ ಅಳವಡಿಸುವ ನಿಟ್ಟಿನಲ್ಲಿ ಎಡಪಕ್ಷಗಳಿಗೆ ಭಗತ್ ಸಿಂಗ್ ಪ್ರೇರಕ ಶಕ್ತಿ ಆಗಲಿಲ್ಲ. ಅಥವಾ ಮಾರ್ಗದರ್ಶಿಯೂ ಆಗಲಿಲ್ಲ. ಆದರೆ ಹೋರಾಟದ ನೆಲೆಗಳಲ್ಲಿ ಭಗತ್ ಸಿಂಗ್ ಹಾಕಿಕೊಟ್ಟ ಮಾರ್ಗವನ್ನು ಎಡಪಂಥೀಯ ಸಂಘಟನೆಗಳು, ಪಕ್ಷಗಳು ನಿರ್ಲಕ್ಷಿಸಿಯೂ ಇಲ್ಲ. ಇಲ್ಲಿ ಪ್ರತಿಮೆ ಅಥವಾ ರೂಪಕಗಳಿಗಿಂತಲೂ ಸೈದ್ಧಾಂತಿಕ ನೆಲೆಗಳು ಪರಾಮರ್ಶೆಗೆ ಎದುರಾಗುತ್ತವೆ.

ಭಗತ್ ಸಿಂಗ್ ಅನುಸರಿಸಿದ ಕ್ರಾಂತಿಕಾರಿ ಮಾರ್ಗವನ್ನು ಉದಾರವಾದಿ ನೆಲೆಯ ಸಂಸದೀಯ ಪ್ರಜಾತಂತ್ರದ ಆಡಳಿತ ವ್ಯವಸ್ಥೆಯ ಪರಿಭಾಷೆಯಲ್ಲಿ ಉಗ್ರವಾದ ಎಂದೇ ಪರಿಗಣಿಸಲಾಗುತ್ತದೆ. ಇದು ಭಗತ್ ಸಿಂಗ್‍ನನ್ನು 1920ರ ದಶಕದ ಲಾಹೋರಿನಿಂದ 2012ರ ಛತ್ತಿಸ್‍ಘಡದಲ್ಲಿ ತಂದು ನಿಲ್ಲಿಸಿ ವ್ಯಾಖ್ಯಾನಿಸುವ ವಿಕೃತ ಧೋರಣೆ ಎನ್ನಬಹುದು. ತಮ್ಮ ದೇಶಪ್ರೇಮವನ್ನು ಪ್ರದರ್ಶಿಸಲು ಭಗತ್ ಸಿಂಗ್‍ನನ್ನು ಬಳಸಿಕೊಳ್ಳುವ ವಿಕೃತಿಗಿಂತಲೂ ಇದು ಹೀನ ಎನ್ನಬಹುದು.

ಏಕೆಂದರೆ ಭಗತ್ ಸಿಂಗ್ ಈ ಎಲ್ಲ ವಿಕೃತಿಗಳನ್ನು ಮೀರಿ ನಿಲ್ಲುವ ಒಬ್ಬ ಚಿಂತಕ. ಹುತಾತ್ಮ ಎಂಬ ಕ್ಲೀಷೆಯನ್ನು ಹೊರಗಿಟ್ಟು ಭಗತ್ ಸಿಂಗ್‍ನ ಜೀವನ ಮತ್ತು ಆದರ್ಶವನ್ನು ಪರಾಮರ್ಶಿಸುವ ಪ್ರೌಢಿಮೆಯನ್ನು ನಾವು ಬೆಳೆಸಿಕೊಳ್ಳಬೇಕಿದೆ. ಏಕೆಂದರೆ ಭಾರತದ ಕ್ಷುದ್ರ ರಾಜಕಾರಣದಲ್ಲಿ ಹುತಾತ್ಮ ಎಂಬ ಪದವೂ ಸಹ ಮಾರುಕಟ್ಟೆಯ ಸರಕಿನಂತಾಗಿದ್ದು ರಾಜಕೀಯ ಮುನ್ನಡೆಗೆ ಚಿಮ್ಮುಹಲಗೆಯಾಗಿ ಪರಿಣಮಿಸಿದೆ.

ದೇಶ-ದೇಶದ್ರೋಹ-ದೇಶ ಭಕ್ತಿ ಮುಂತಾದ ವಿದ್ಯಮಾನಗಳು ಅನುಕೂಲಸಿಂಧು ರಾಜಕಾರಣದ ನೆಲೆಯಲ್ಲಿ ವ್ಯಾಖ್ಯಾನಿಸಲ್ಪಡುತ್ತಿರುವ ಸಂದರ್ಭದಲ್ಲಿ ಹುತಾತ್ಮ ಎಂಬ ಪದ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ.

ಭಗತ್ ಸಿಂಗ್‍ನ ಕ್ರಾಂತಿಕಾರಿ ಹೋರಾಟದ ಮಾರ್ಗಗಳು ಕೇವಲ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಮಾತ್ರ ಇರಲಿಲ್ಲ. ಹಾಗಾಗಿಯೇ ಕೆಲವು ಸ್ವಾತಂತ್ರ್ಯ ಸೇನಾನಿಗಳ ದೃಷ್ಟಿಯಲ್ಲಿ ಭಗತ್ ಸಿಂಗ್ ಒಬ್ಬ ಕಂಟಕನಾಗಿದ್ದ.

ಭಾರತದ ಶ್ರೇಣೀಕೃತ, ಊಳಿಗಮಾನ್ಯ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿದ್ದ ಶೋಷಣೆ ಮತ್ತು ದಮನಕಾರಿ ಧೋರಣೆಯ ವಿರುದ್ಧ ಸಮರ ಸಾರಿದ ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳು ಒಂದು ವೇಳೆ ಸ್ವಾತಂತ್ರ್ಯದ ಕನಸು ಸಾಕಾರಗೊಳ್ಳುವುದನ್ನು ಕಂಡಿದ್ದರೂ ನವೀಕೃತ ಆಡಳಿತ ವ್ಯವಸ್ಥೆಯ ಅವಕೃಪೆಗೆ ಬಲಿಯಾಗುತ್ತಿದ್ದರೇನೋ ಎಂಬ ಅನುಮಾನ, ಪ್ರಸ್ತುತ ಸಮಾಜೋ ರಾಜಕೀಯ ವ್ಯವಸ್ಥೆಯನ್ನು ಗ್ರಹಿಸುವ ಪ್ರಜ್ಞಾವಂತರಿಗೆ ಮೂಡುವುದು ಸಹಜ.

ಇಂದು ಭಗತ್ ಸಿಂಗ್ ಎಲ್ಲ ರಾಜಕೀಯ ಪಕ್ಷಗಳಿಗೂ ಆದರ್ಶಪ್ರಾಯನಾಗಿದ್ದಾನೆ. ಎಲ್ಲ ಸಂಘಟನೆಗಳೂ ಈ ಹುತಾತ್ಮನ ಆದರ್ಶಗಳಿಂದ ಪ್ರೇರೇಪಣೆ ಪಡೆಯುತ್ತವೆ. ಎಡಪಂಥೀಯ ಸಂಘಟನೆಗಳಿಗೆ ಭಗತ್ ಸಿಂಗ್‍ನ ಸಾಮ್ರಾಜ್ಯಶಾಹಿ ವಿರೋಧಿ ಧೋರಣೆ ಅಪ್ಯಾಯಮಾನವಾದರೆ ಬಲಪಂಥೀಯರಿಗೆ ಅವರದೇ ಆದ ಸೀಮಿತ ಚೌಕಟ್ಟಿನ “ ದೇಶಪ್ರೇಮ-ದೇಶಭಕ್ತಿ ” ಅವನನ್ನು ಆರಾಧಿಸುವಂತೆ ಮಾಡುತ್ತದೆ.

ಭಗತ್ ಸಿಂಗ್ ಗಲ್ಲುಶಿಕ್ಷೆಗೊಳಗಾಗದೆ ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯಲ್ಲಿ ತಾನು ಬಯಸಿದ ಪರಿವರ್ತನೆಯನ್ನು ತರಲು ಯತ್ನಿಸಿದ್ದಲ್ಲಿ ಬಹುಶಃ ಈ ಆರಾಧ್ಯ ದೈವದ ಪಟ್ಟ ಅವನಿಗೆ ದೊರೆಯುತ್ತಿಲಿಲ್ಲವೇನೋ. ಬಹುಶಃ ವಿಶ್ವದ ಇತಿಹಾಸ ಪಠ್ಯಗಳಲ್ಲಿ ಲ್ಯಾಟಿನ್ ಅಮೆರಿಕದ ಕ್ರಾಂತಿಕಾರಿ ಚೆ ಗುವಾರನನ್ನು ಕಡೆಗಣಿಸಿರುವಂತೆಯೇ ಭಾರತದಲ್ಲಿ ಭಗತ್‍ಸಿಂಗ್‍ನನ್ನೂ ಕಡೆಗಣಿಸಲಾಗುತ್ತಿತ್ತು.

ಒಂದು ಅರ್ಥದಲ್ಲಿ ಭಗತ್ ಸಿಂಗ್ ಹುತಾತ್ಮನಾಗಿದ್ದು “ ದೇಶಭಕ್ತಿ ”ಯ ವಕ್ತಾರರಿಗೆ ಒಂದು ವರದಾನವಾಗಿ ಪರಿಣಮಿಸಿತು. ಹಾಗಾಗಿಯೇ ಕೇಸರೀಕರಣಗೊಂಡ ಕೆಂಪುಕೋಟೆಯ ತ್ರಿವರ್ಣ ಧ್ವಜದ ನೆರಳಲ್ಲಿ ವಿಜೃಂಭಿಸುವ ಭಗತ್ ಸಿಂಗ್ ಸೋಮನಾಥ ರಥಯಾತ್ರೆಯಲ್ಲೂ ವಿಜೃಂಭಿಸಿದ್ದುದನ್ನು ಸ್ಮರಿಸಬಹುದು.

ವ್ಯಕ್ತಿಯ ಸಾವು ಅವನ ಆದರ್ಶಗಳನ್ನು ಅಂತ್ಯಗೊಳಿಸುವುದಿಲ್ಲ ಎಂಬ ಭಗತ್‍ಸಿಂಗ್‍ನ ಮುತ್ತಿನಂತಹ ನುಡಿಗಳು ಎಷ್ಟು ಸತ್ಯ. ಭಗತ್ ಸಿಂಗ್ ಹುತಾತ್ಮನಾದ ನಂತರವೂ ಆತನ ಆದರ್ಶಗಳು, ತತ್ವ ಸಿದ್ಧಾಂತಗಳು ಜೀವಂತವಾಗಿವೆ. ಇನ್ನೂ ಶತಮಾನಗಳ ಕಾಲ ಜೀವಂತವಾಗಿರುತ್ತವೆ. ಇಂದು ನಾವು ಈ ಯುವ ಕ್ರಾಂತಿಕಾರಿಯನ್ನು ನೆನೆಯುವುದೇ ಆದರೆ ಬೇರೊಂದು ನೆಲೆಗಟ್ಟಿನಲ್ಲೇ ಸ್ಮರಿಸಬೇಕಾಗುತ್ತದೆ.

ಭಗತ್ ಸಿಂಗ್ ಕೇವಲ ತನ್ನ ಒಂದು ಉದ್ದೇಶಕ್ಕಾಗಿ ಅಥವಾ ತನ್ನ ಎಡಪಂಥೀಯ ಧೋರಣೆಗಳ ಅಸ್ತಿತ್ವವನ್ನು ಉಳಿಸಲೆಂದೇ ಹುತಾತ್ಮನಾಗಲಿಲ್ಲ. ಅಥವಾ ತನ್ನದೇ ಆದ ರಾಜಕೀಯ ಭೂಮಿಕೆಗಾಗಿ, ಅಧಿಕಾರ ರಾಜಕಾರಣಕ್ಕಾಗಿ ಹುತಾತ್ಮನಾಗಲಿಲ್ಲ. ಇಂದು ನಾವು ಕಾಣುತ್ತಿರುವ ಪಕ್ಷ ರಾಜಕಾರಣ ಮತ್ತು ಆತ್ಮರತಿಯ ಚಿಂತನೆಗಳನ್ನು ಮೀರಿ ದೇಶದ ಯುವ ಜನತೆಗೆ, ಭವಿಷ್ಯದ ಪೀಳಿಗೆಗೆ ಸಮ ಸಮಾಜದ ಒಂದು ನಿರ್ದಿಷ್ಟ ಆಯಾಮವನ್ನು ತನ್ನ ಹೋರಾಟದ ಮೂಲಕ ಬಿಂಬಿಸಿದ್ದು ಭಗತ್ ಸಿಂಗ್‍ನ ಹೆಗ್ಗಳಿಕೆ.

ಆದರೆ ಇಂದು ಭ್ರಷ್ಟ ವ್ಯವಸ್ಥೆಯ ಕಬಂಧ ಬಾಹುಗಳಿಗೆ ಸಿಲುಕಿ ನಲುಗುತ್ತಿರುವುದು ಭಗತ್ ಸಿಂಗ್ ಪ್ರತಿಪಾದಿಸಿದ ಉನ್ನತ ಆದರ್ಶಗಳು ಎನ್ನುವುದನ್ನು ಗಮನಿಸಬೇಕು.

ನಿಷ್ಠೆ, ಪ್ರಾಮಾಣಿಕತೆ, ಆದರ್ಶ ಮತ್ತು ಸತ್ಯಸಂಧತೆಯನ್ನು ಭೌಗೋಳಿಕ ಚೌಕಟ್ಟಿನಲ್ಲಿ ಬಂಧಿಸುವ ಬದಲು ಸಾಮಾಜಿಕ ನೆಲೆಯಲ್ಲಿ ಗ್ರಹಿಸಿದಾಗ ಸಮಾಜ ಒಂದು ಉನ್ನತ ಧ್ಯೇಯದೆಡೆಗೆ ಸಾಗುವುದು ಸಾಧ್ಯ.

ಇಲ್ಲವಾದಲ್ಲಿ ಎಲ್ಲವೂ ಭೌಗೋಳಿಕ ದೇಶಪ್ರೇಮದ ಸೀಮಿತ ಶರಪಂಜರದೊಳಗೆ ಬಂಧಿಯಾಗುತ್ತವೆ. ಭಾರತದ ಪ್ರಸ್ತುತ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸನ್ನಿವೇಶವನ್ನು ಗಮನಿಸಿದಾಗ ಭಗತ್ ಸಿಂಗ್ ಮತ್ತು ಸಂಗಾತಿಗಳು ಪ್ರತಿಪಾದಿಸಿದ ಎಲ್ಲ ಮೌಲ್ಯಗಳೂ ಅಪಮೌಲ್ಯಕ್ಕೊಳಗಾಗುತ್ತಿರುವುದು ಎದ್ದು ಕಾಣುತ್ತದೆ.

ಇದಕ್ಕೆ ಕಾರಣ ಎಂದರೆ ಸಮಕಾಲೀನ ಭಾರತದಲ್ಲಿ ಉನ್ನತ ಸಮಾಜವನ್ನು ನಿರ್ಮಿಸಲು ನೆರವಾಗುವ ಎಲ್ಲ ಮೌಲ್ಯಗಳೂ ಬಿಕರಿಗಿವೆ, ಹಾಗೆಯೇ ಈ ಎಲ್ಲ ಮೌಲ್ಯಗಳೂ ಪ್ರಭುತ್ವದ ಶೋಷಣೆಗೆ ಸಿಲುಕಿ ನಲುಗುತ್ತಿವೆ. ಭೌತಿಕವಾಗಿ ಆತ್ಮ, ದೇಹ ಇಲ್ಲದ ಈ ಮೌಲ್ಯಗಳನ್ನು ಗಲ್ಲಿಗೇರಿಸಲು ವ್ಯವಸ್ಥೆಯ ಸಂರಕ್ಷಕರಿಗೆ ಸಾಧ್ಯವಿಲ್ಲ. ಆದರೆ ಈ ಮೌಲ್ಯಗಳನ್ನು ಪ್ರತಿಪಾದಿಸುವ ವ್ಯಕ್ತಿಗಳನ್ನು ಪಂಜರದೊಳಗೆ ಬಂಧಿಸುವ ಮೂಲಕ ನಿರ್ನಾಮ ಮಾಡುವುದು ಸುಲಭಸಾಧ್ಯ.

ರೋಹಿತ್ ವೇಮುಲ, ಕನ್ನಯ್ಯ ಕುಮಾರ್, ಜೆಎನ್‍ಯು ವಿವಾದ, ದಾದ್ರಿ ಮತ್ತು ಊನಾ ಘಟನೆ ಮತ್ತು ಮಾಲ್ಡಾದ ವಿದ್ಯಮಾನಗಳು ರಾಷ್ಟ್ರ ಮತ್ತು ರಾಷ್ಟ್ರೀಯತೆಯ ವ್ಯಾಖ್ಯೆಯನ್ನೇ ವಿಭಿನ್ನ ನೆಲೆಗೆ ಕೊಂಡೊಯ್ದಿದೆ. ರಾಷ್ಟ್ರ ಭಕ್ತಿ ಎನ್ನುವ ಬೌದ್ಧಿಕ ವಿದ್ಯಮಾನ ಇಂದು ಲೌಕಿಕತೆಯನ್ನು ಪಡೆದುಕೊಂಡಿದ್ದು ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಭಕ್ತಿ ಪ್ರದರ್ಶಿಸಲು ಜಯಕಾರ ಕೂಗಬೇಕಾದ ಸಂದರ್ಭ ಒದಗಿಬಂದಿದೆ.

ಹಾಗಾಗಿ ಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಸಂಘರ್ಷವನ್ನು ದೇಶಭಕ್ತಿ-ದೇಶದ್ರೋಹದ ಚೌಕಟ್ಟಿನಲ್ಲೇ ವ್ಯಾಖ್ಯಾನಿಸಲಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶ ಭಗತ್ ಸಿಂಗ್ ಮತ್ತು ಸಂಗಾತಿಗಳನ್ನು ಹುತಾತ್ಮರೆಂದು ನೆನೆಯುತ್ತಿದೆ. ಆತ್ಮವೇ ಇಲ್ಲದ ಸಮಾಜದಲ್ಲಿ ಹುತಾತ್ಮರಿಗೆ ಎಂತಹ ಸ್ಥಾನಮಾನ ಸಿಗಬಹುದು. ಭಗತ್ ಸಿಂಗ್ ಇಂದು ಬದುಕಿದ್ದಲ್ಲಿ ? ಎಂಬ ಪ್ರಶ್ನೆ ಮೂಡಿದಾಗ ದಿಗ್ಮೂಢರಾಗುತ್ತೇವೆ.

‍ಲೇಖಕರು Avadhi GK

March 23, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: