ಬ್ರಿಟೀಷರ ಬಂಗಲೆಯೂ, ಬಡ್ಕಜ್ಜಿಯ ಕಥೆಯೂ….

ಸುಧಾ ಆಡುಕಳ

ಇದ್ದಕ್ಕಿದ್ದಂತೆ ಮೊನ್ನೆ ಮುಖಪುಸ್ತಕದಲ್ಲಿ ಈ ಚಿತ್ರವನ್ನು ಹಾಕಿದಾಗ ಮನಸ್ಸು ಅನಾಮತ್ತಾಗಿ ನನ್ನ ಬಾಲ್ಯಕ್ಕೆ ಓಡಿತು. ಹಸಿರಿನ ನಡುವೆ ಮೈದಳೆದು ನಿಂತ ಈ ಕಟ್ಟಡ ಯಾರೋ ಶ್ರೀಮಂತರು ತಮ್ಮ ಶೋಕಿಗಾಗಿ ಕಟ್ಟಿಕೊಂಡ ಬೇಸಿಗೆಯ ಬಂಗಲೆಯಲ್ಲ. ಇದರ ಹಿಂದೊಂದು ಸ್ವಾತಂತ್ರ್ಯ ಪೂರ್ವದ ಇತಿಹಾಸವೇ ಇದೆ.

ರಸ್ತೆಯೇ ಇಲ್ಲದ ಪೂರ ಕಗ್ಗಾಡಾಗಿದ್ದ ನಮ್ಮೂರಿನ ಕಾಡಿನ ಒಳಗಿರುವ ನೆಸ್ಲನೀರ್ ಎಂಬ ಪುಟ್ಟ ಹೆಸರಿನ ಜಾಗವಿದು. ರಾಷ್ಟ್ರೀಯ ಹೆ್ದ್ದಾರಿಯಿಂದ ಸುಮಾರು ಹನ್ನೆರಡು ಕಿ. ಮೀ. ದೂರದಲ್ಲಿರುವ ಈ ಕಾಡಿನಲ್ಲಿ ಬ್ರಿಟೀಷರು ಒಂದು ಬಂಗಲೆಯನ್ನು ಕಟ್ಟಿಕೊಂಡಿದ್ದರೆಂದರೆ ಇಂದಿಗೂ ಅಚ್ಛರಿಯೆನಿಸುತ್ತದೆ. ಸರಿಯಾದ ಹಂಚಿನ ಮನೆಯೂ ಇಲ್ಲದ ನಮ್ಮೂರಿನಲ್ಲಿ ಇದು ಆಗಿನ ಕಾಲಕ್ಕೊಂದು ಭರ್ಜರಿ ಬಂಗಲೆಯೇ ಆಗಿತ್ತು. ಎಲ್ಲಿಯಾದರೂ ಅಪರೂಪಕ್ಕೊಮ್ಮೆ ಬ್ರಿಟೀಷ್ ಅಧಿಕಾರಿಗಳು ಇಲ್ಲಿ ಬಂದು ಉಳಿಯುತ್ತಿದ್ದರಂತೆ. ಬಹುಶಃ ಕಾಡುಪ್ರಾಣಿಗಳು ಹೇರಳವಾಗಿರುವ ನನ್ನೂರಿಗೆ ಶಿಕಾರಿಯ ಆಸೆಯಿಂದ ಬರುತ್ತಿದ್ದಿರಬಹುದು. ಏಕೆಂದರೆ ಕಾದು ಕುಳಿತು ಹುಲಿಯನ್ನೂ ಕೂಡ ಬೇಟೆಯಾಡುವ ಶಿವಭಟ್ಟ ಎಂಬ ಬೇಟೆಗಾರನ ಕಥೆಯನ್ನು ಅಪ್ಪ ಯಾವಾಗಲೂ ಹೇಳುತ್ತಿದ್ದರು.

ನಾವೆಲ್ಲ ಬೆಳೆಯುವ ಕಾಲಕ್ಕೆ ಇದು ಅಧಿಕಾರಿಗಳ ನಿರೀಕ್ಷಣಾ ಮಂದಿರವಾಗಿ ಬದಲಾಗಿತ್ತು. ದೂರದೂರಿನಲ್ಲಿ ಓದುತ್ತಿರುವ ನಾವೆಲ್ಲರೂ ಸ್ನೇಹಿತರೊಂದಿಗೆ ರಜೆ ಕಳೆಯಲು ಊರಿಗೆ ಹೋದಾಗ ಅವರಿಗೆ ತೋರಿಸುವ ಒಂದು ಪ್ರವಾಸಿ ತಾಣವೂ ಆಗಿತ್ತು. ಇದರ ಇತಿಹಾಸದ ಬಗ್ಗೆ ಊರಿನವರಿಗ್ಯಾರಿಗೂ ಏನೂ ಗೊತ್ತಿರಲಿಲ್ಲ. ಇಡೀ ಊರಿನ ಸಾಕ್ಷಿಪ್ರಜ್ಞೆಯಂತೆ ಬದುಕಿದ ನಮ್ಮೂರ ಬಾಲವಿಧವೆ ಬಡ್ಕಜ್ಜಿಯಲ್ಲಿ ಕೇಳಿದಾಗ ಅವಳು ಹೇಳುತ್ತಿದ್ದ ಐತಿಹ್ಯ  ಇಷ್ಟೆ.

“ಅದೇ ಮಂಕಿಯಿಂದ ಮಣ್ಣು ರಸ್ತಿನಲ್ಲಿ ಬುರ್…. ಅದ್ಕಂಡು ಜೀಪಾ ಓಡಸ್ಕಂಡು ಬತ್ತೀರು ಕಾಣು. ನೋಡರೆ ಎಂಥಾ ಅಂತೀಯ, ನಮ್ಮೂರ ಬಿಳಿಚಿ ಮಂಗನ ಮೊಕಾ ಕಂಡಾಂಗಾತೀದು. ಎಲ್ಲೋ ಅಪರೂಪಕ್ಕೆ ಬತ್ತೀರು. ಬರ್ಕ, ಗಿರ್ಕ ಹೊಡಕಂಡು ತಿಂಡಕಂಡು ಹೊತೀರು. ಅವರು ಬತ್ರರಂದ್ರೆ ಸುಕಾ ಇತ್ತು ಮಾಡೀಯ? ನಾವೆಲ್ಲ ರವಿಕೆ, ಗಿವಕೆ ಹಾಕೋರಲ್ಲ ಕಾಣು. ನಾವ್ಯಾರೂ ದಾರಿಯಲ್ಲಿ ಅವರ ಕಣ್ಣೀಗ ಬೀಳುಕಾಗ ಅಂತ ಊರ ಸಾನುಬೋಗರು ಫರ್ಮಾನು ಹೊರಡಿಸೋರು. ನಾವೆಲ್ಲ ಜೀಪಾ ಅಷ್ಟು ದೂರ ಬರುವಾಂಗೇ ಗೇರಹಕ್ಕಲ ಬಿದ್ದು ಓಡಿಬಿಡೂದು. ಮತ್ತೆ ಸೊಪ್ಪು, ಸೌದಿ ತರೂಕೂ ಹೋಪುಕಿಲ್ಲ. ಅವರು ಇರುವಷ್ಟು ದಿನ ನಮಗೆಲ್ಲ ಜೈಲೆ”

ಬಹುಶಃ  ರವಿಕೆಯನ್ನು ಧರಿಸದೇ ಓಡಾಡುವ ಹಳ್ಳಿಯ ಹೆಣ್ಣುಗಳು ಅಧಿಕಾರಿಗಳ ಕಣ್ಣಿಗೆ ಬೀಳದಿರಲೆಂದು ಊರಿನ ಪ್ರಮುಖರು ವಹಿಸುತ್ತಿದ್ದ ಎಚ್ಚರಿಕೆಯ ನಡೆ ಇದಾಗಿರಲೂ ಸಾಕು. ಅಂತೂ ಬ್ರಿಟೀಷರ ಆಸ್ತಿತ್ವವನ್ನು ನಮ್ಮೂರಿನಲ್ಲಿಯೂ ಸಾಬೀತುಪಡಿಸಲು ಇರುವ ಹಳೆಯ ಪುರಾವೆಯಂತೆ ಈ ಕಟ್ಟಡ ಇನ್ನೂ ಜೀವಂತವಾಗಿ ನಿಂತಿದೆ.

‍ಲೇಖಕರು avadhi

March 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: