ಬೈಯ್ಯುವವರ ಮುಂದೆ ಬಿಲ್ಲಾಗಬೇಕು ಎನ್ನುತ್ತವೆ ಪ್ರೇಮಾ ಕವಿತೆಗಳು

                                                                                 ಕವಿತೆ ಬಂಚ್

ಅವಧಿಯ ಮಹತ್ವದ ಪ್ರಯೋಗಗಳಲ್ಲಿ ಮುಖ್ಯವಾದದ್ದು ‘Poet of the Week

ಹೊಸ ಬನಿಯ ಕವಿತೆಗಳನ್ನುಪರಿಚಯಿಸುವ, ಆ ಮೂಲಕ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸುತ್ತಿರುವ ಕವಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.

ಅಷ್ಟೇ ಅಲ್ಲದೆ ಪ್ರಕಟಿಸಿದ ಕವಿತೆಗಳನ್ನು ಕಾವ್ಯ ಪ್ರಿಯರಿಗೆ ಕಳಿಸಿಕೊಟ್ಟು ಅವರ ಅಭಿಪ್ರಾಯವನ್ನು ಪ್ರಕಟಿಸುವುದು. ಇದರಿಂದ ಕವಿಗಳಿಗೆ ಮೊದಲ ಅಭಿಪ್ರಾಯವನ್ನು ಧಕ್ಕಿಸಿಕೊಟ್ಟು ಅವರು ಇನ್ನಷ್ಟು ಬರೆಯಲು ಕುಮ್ಮಕ್ಕು ನೀಡುವುದು ಉದ್ಧೇಶ.

ಈ ವಾರದ POET OF THE WEEK ನಲ್ಲಿ ಪ್ರೇಮಾ ಟಿ ಎಮ್ ಆರ್  ಅವರ ಕವಿತೆಗಳು ನಿಮಗಾಗಿ, ಅವಸರ ಬೇಡ ನಿಧಾನವಾಗಿ ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಕುಮಟಾ ತಾಲೂಕಿನ ಕೂಜಳ್ಳಿಯಲ್ಲಿ ಹುಟ್ಟಿದ ಇವರು ಹಡಗು, ಸಮುದ್ರದ ಒಡನಾಟದಲ್ಲಿ ಬೆಳೆದವರು
ಪ್ರಸ್ತುತ ಕಾರವಾರದಲ್ಲಿ ನೆಲೆಸಿದ್ದಾರೆ  ಕನ್ನಡ ಸ್ನಾತಕೋತ್ತರ ಪದವೀಧರೆ, ಕಥೆ, ಕವನ, ಲೇಖನ, ವಿಮರ್ಶೆ, ಅಂಕಣ ಬರಹ, ಸಂಗೀತ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸೊನ್ನೆಯಾಗೇ ಇರಬೇಕು

ಮುಂಜಾನೆ ಮುಂಬಾಗಿಲು
ಗುಡಿಸಿ  ಸಾರಿಸಿ ರಂಗೋಲಿ ಬರೆದು
ತುಟಿಮೇಲೆ ನಗು
ಹೊದ್ದುಕೊಳ್ಳಬೇಕು
ಬೈಯ್ಯುವವರ ಮುಂದೆ ಬಿಲ್ಲಾಗಬೇಕು
ಮೊಗ್ಗುಮೈಯ್ಯಲ್ಲಿ ಮನೆತುಂಬ ತಿರುಗಬೇಕು
ಹೊಗಳಿದರೆ ಹೂವಾಗಬೇಕು
ಹಕ್ಕಲ್ಲ ಎಸೆದ ರೊಟ್ಟಿಯ ಚೂರು
ಕತ್ತಲ ಕೊನೆದೀಪ
ಆರುವತನಕ
ತಾನಾಗಿದ್ದುಕೊಂಡು
ನಾನೆಂಬುವರಿಗೆಲ್ಲ ಹೂಂಗುಟ್ಟು
ಅಳಬೇಕೆಂದುಕೊಳ್ಳುತ್ತಲೇ ನಕ್ಕು
ನಗುವಲ್ಲೂ ಕಣ್ಕೊನೆಯುಕ್ಕಿ
ಕತ್ತಲ ಕೊನೆಯಾಟಕ್ಕೂ ಹಾಸಿಕೊಂಡು
ತುಟಿಕಚ್ಚಿ ಬಿಕ್ಕಳಿಕೆ ನುಂಗಿ
ತೂಕಡಿಸುತ್ತ ಕಳೆದ
ಕಾಲುಂಗುರಕ್ಕೆ ತಡಕುವ ಭೂಮಿ
ಕನಸೂ ಅವಳದಲ್ಲ
ಕನವರಿಸಬೇಕು ನಾಳೆಗಾಗಿ
ಬೆಳಕ ಸ್ವಾಗತಿಸಲು
ಒಪ್ಪಗೊಳ್ಳಬೇಕು
ಕುಂಕುಮಬೊಟ್ಟು ದುಂಡಗೆ
ಸೊನ್ನೆಯಾಗೇ ಇರಬೇಕು
ಸೂರ್ಯನಹಾಗೆ
ತಂಪಾಗಿರಬೇಕವಳು
ಚಂದ್ರನಹಾಗೆ
ಒದ್ದೆಗೂದಲು ತೊಟ್ಟಕ್ಕುತ್ತದೆ
ಟವಲ್ಲು ಸುತ್ತಬೇಕು
ಒಳಗೂ ಒರೆಸಬೇಕು ಬಟ್ಟೆಯಿಲ್ಲ
ಇದ್ದರೂ ಹೀರಿಕೊಳ್ಳುವದಿಲ್ಲ
ಹಸಿಹಸಿ

ನಿಲ್ಲಿ ಬರುತ್ತೇನೆ

ಮುಂಬಾಗಿಲಿಗೆ ಬರುತ್ತಿದೆ ಪಲ್ಲಕ್ಕಿ
ಅಂಗಳ ಬೆಳಗಬೇಕು
ನಿಲ್ಲಿ ಎದೆಯೊಳಗೊಂದು
ದೀಪ ಹಚ್ಚಿಡುತ್ತೇನೆ

ಹಬ್ಬದಡಿಗೆ ಮಾಡಿದ್ದೇನೆ
ಕುಲದೇವರಿಗೆ ನೈವೇದ್ಯಕ್ಕಿಡಬೇಕು
ತಡಿ ಹಸಿದ ಜೀವವೊಂದ ಹುಡುಕಿ
ಮುಷ್ಠಿಯನ್ನ ಇಕ್ಕಿಯೇ ಬಿಡುತ್ತೇನೆ

ಗುಡಿಯಲ್ಲಿ ಬೆಳಗಿದ
ಆರತಿಯಾವಿ ಕಣ್ಗೊತ್ತಿಕೊಳ್ಳಬೇಕು
ಮೊದಲು ಬೀದಿದೀಪಕ್ಕೊಮ್ಮೆ
ಕೈಮುಗಿದುಬಿಡುತ್ತೇನೆ

ಹಬ್ಬಕ್ಕೊಂದು ಹೊಸಸೀರೆ
ಕೊಳ್ಳಬೇಕೆಂದಿದ್ದೇನೆ
ಹಳೆಯದಿದ್ದರೆ ಕೊಡಿ ಇತ್ತ
ಹೊರಜಗುಲಿಯಲ್ಲಿ ಮುದುಡಿ
ಬಿದ್ದವರ ಮಗ್ಗುಲಿಗೆಂದು
ಕವುದಿ ಹೊಲಿದುಬಿಡುತ್ತೇನೆ

ಬರೆಯಬೇಕೆಂದಿದ್ದೇನೆ ಕವನ
ಎದೆಗೆ ಬಿದ್ದಕ್ಷರ ವ್ಯರ್ಥವಾಗಬಾರದು
ಬಿಡು ಅದಕ್ಕೂ ಮುಂಚೆ
ಹೆಬ್ಬೆಟ್ಟಿನವರಿಗೆ ಸಹಿ ಹಾಕುವದ
ಕಲಿಸಿಯೇ ಬಿಡುತ್ತೇನೆ

ಹಕ್ಕಿಯಾಗಿ ಹಾರಬೇಕೆಂಬುದು
ಬಹುದಿನದ ಕನಸು
ಮುಗಿಲಿಗೇರುವಮುನ್ನ
ನೆಲದೆಲ್ಲ ಬೇಲಿಗುಟ್ಟಗಳ
ಕಿತ್ತಿಟ್ಟು ಬಂದುಬಿಡುತ್ತೇನೆ

ಕುದಿವೆಸರ ಅಗುಳಾಗಬೇಕು

ತನ್ನ ಹೀಗಿಟ್ಟವರನ್ನೆಲ್ಲ
ಶಾಪ ಹಾಕಬೇಕೆಂದುಕೊಂಡಿದ್ದು
ಅದೆಷ್ಟುಬಾರಿಯೋ
ತನಗಿಷ್ಟಬಂದಂತೆ
ಇರಬಹುದಾಗಿದ್ದರೂ
ಅವರಿಟ್ಟ ಪಾತ್ರೆಯೊಳಗೇ
ತುಂಬಿಕೊಂಡಂತೆ
ಬದುಕಿದ್ದು ತನ್ನದೂ
ತಪ್ಪಲ್ಲವಾ?
ಮತ್ತೆ ಈ ಮನೆ
ಅಪ್ಪ ಅಮ್ಮ ಅತ್ತೆಮಾವ
ಈ ಮಗಳ ಅಪ್ಪ
ಎಲ್ಲರೂ ತನ್ನವರಲ್ಲವೇ
ಎಂದುಕೊಳ್ಳುತ್ತಲೇ
ಅವಳು ಅವಳಂತಿರದೇ
ಅಮ್ಮನಂತೆ ಅಕ್ಕನಂತೆ
ಬದುಕ ಬದುಕುತ್ತಲೇ
ಇದ್ದಾಳೆ
ಎಗರಿಬೀಳಬೇಕಾದಲ್ಲೆಲ್ಲ
ತಣ್ಣೆ ಅಂಬಲಿಯಂತೆ
ಹಳ್ಳೆಣ್ಣೆಯಂತೆ
ಹಂದಾಡುತ್ತಾಳೆ ಮಂದಮಂದವಾಗಿ
ಮನೆಮುಂದೆ ಬಿದ್ದುಕೊಂಡ
ಪೆದ್ದಮುಂಡೆಯಂಥ
ಕಾಲ್ದಾರಿಯೇ ತಾನೆಂದುಕೊಂಡಿದ್ದು
ಅದೆಷ್ಟು ಬಾರಿಯೋ
ಉಗುಳಿ ಉಚ್ಚೆ ಹೊಯ್ದರೂ
ಹೊದ್ದು ಮಲಗಿಕೊಂಡ ಬೀದಿ
ತಡೆಯಲಾರದೇ ಗುಡಗುಡಿಸಿದ್ದೂ
ಇದೆಯಾದರೂ ಮತ್ತೆ
ಪಶ್ಚಾತ್ತಾಪದ ಉರಿಯೂ
ಅವಳ ಉಡಿಗೇ
ಕುದಿವೆಸರೊಳಗಿನ ಅಗುಳಾಗಿ
ಮುಚ್ಚಳ ಕೊಡವಿ ಉಕ್ಕಬೇಕು
ಸಿಡಿಯಬೇಕು ಬಿಡಿಯಾಗಿ ಹಿಡಿಯಾಗಿ
ಒಟ್ಟಿದ ಒಲೆ ಆರುವ ತನಕ
ಹುದುಗದೇ ಬುದುಗಬೇಕು
ಒಮ್ಮೆಗಾದರೂ ಅಂದುಕೊಳ್ಳುತ್ತಾಳೆ

 

ಕಡಲಾಗಬೇಕು ಕವಿತೆಯೂ

ಹೇಗೆಲ್ಲ ಬದುಕಬೇಕೆಂದುಕೊಂಡಿದ್ದು
ಇದು ಹೀಗೆಂದುಕೊಂಡಿರಲಿಲ್ಲ
ಬದುಕೆಂದರೆ ಮತ್ತಷ್ಟು ಇನ್ನಷ್ಟು ಅಂದುಕೊಳ್ಳುತ್ತಲೇ
ಪುಟಿದು ನಿಲ್ಲುವ ನಿಯಮಕ್ಕೆ
ಎಳೆದು ಕಟ್ಟಿದ ಹಗ್ಗ ಬಿಗಿಯಾದಂತೆಲ್ಲ
ಮುದುಡುವ ಮನಸಾಗುತ್ತದೆ
ಅಂಗಳದ ಕಿಟಕಿಗೆ
ಮುಖಮಾಡುತ್ತೇನೆ
ಸೂರ್ಯನ ನಾಳಗಳಂಥ
ಹಳದಿ ಗುಲಾಬಿಗಳು
ತಣ್ಣಗಾಗುತ್ತಿರುವ ಬೆರಳುಗಳಿಗೆ
ಬಿಸುಪು ತುಂಬುತ್ತವೆ
ಕನ್ನಡಕ ಮಂಜಾಗುತ್ತದೆ
ಎತ್ತಿ ಬದಿಗಿಡಲಾಗದು
ಒರೆಸುವದಕ್ಕೆ ಮಖಮಲ್ಲಿನ
ತುಂಡು ಹುಡುಕಬೇಕು
ಊಳುವ ಎತ್ತಿನ ಕಣ್ಣಿಗೆ
ಅಡ್ಡಪಟ್ಟಿಗಳು
ನೇರವನ್ನಷ್ಟೇ ಕಾಣಬೇಕು
ಹಸಿರ ಕಂಡಾಗೆಲ್ಲ ಎಳೆಯುತ್ತವೆ
ಬೆನ್ನಿಗೆ ಬೀಳುವ
ಬಾಸುಂಡೆಗಳಿಗೆ  ಬಗ್ಗದೇ
ಸುಡು ಬಿಸಿಲಿಗೆ
ಸೊಪ್ಪಾಗಿ ಕಣ್ಮುಂದೆ
ಸತ್ತಂತೆ ಬಿದ್ದುಕೊಂಡ ಸಹ್ಯಾದ್ರಿ
ಬಿದ್ದ ಹನಿಮಳೆಗೆ
ಹಸಿರೊಡೆದು ನಿಂತಿದೆ
ಹಿಂದಿನಂಗಳದಲ್ಲಿ ನಿಂತರೆ
ಕಣ್ಣಿಗೆಟಕುವ ಕಡಲಿಗೆ
ಎದ್ದು ನಿಲ್ಲುವ ಕಾಂಕ್ರೀಟು
ಪರದೆ ಎಳೆದಿದೆ
ಇದಿಷ್ಟೇ ದಿನದ
ಭಾಗ್ಯ ಅಂದುಕೊಳ್ಳುವಂತಿಲ್ಲ
ಸುತ್ತಿಗೆ ಹಿಡಿಯಬೇಕು
ಕಾಂಕ್ರೀಟು ಕಡಿಯಲು
ಇಲ್ಲ ಮೆಟ್ಟಿಲು
ಕಟ್ಟಿಕೊಳ್ಳಬೇಕು ಹತ್ತಿ ನೋಡಲು
ಕಡಲಾಗಬೇಕು ಕವಿತೆಯೂ
ಗೊಡೆಯಾಗಿ ಎದ್ದುನಿಲ್ಲುವದಲ್ಲ
ಹಾಂ ಬದಲಾವಣೆಯಿಲ್ಲದಿರೆ
ಬದುಕೆಂಬ ಸತ್ಯವೂ
ಒಂದು ವಿಭ್ರಾಂತಿಯೇ

 

 

‍ಲೇಖಕರು Avadhi Admin

April 4, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Dakshayani Nagaraj

    ಎಷ್ಟು ಚಂದದ ಕವಿತೆಗಳು.ಓದಿದರೆ ಮನಸ್ಸಿಗೇನೋ ಹಿತ.ನಮ್ಮನ್ನು ನಾವು ಕಂಡುಕೊಳ್ಳುವಂತೆ ಮಾಡುವ ಸಾಲುಗಳು

    ಪ್ರತಿಕ್ರಿಯೆ
  2. Sandhya naik

    ಕವಿತೆಗಳು ಎಷ್ಟು ಸಹಜವಾಗಿ ಹುಟ್ಟುತ್ತವೆಯೋ ಅಷ್ಟು ಸಹಜವಾಗಿ ಒಳಗಿಳಿಯುತ್ತವೆ… ಯಾವ ಸೂತ್ರಗಳನ್ನೂ ನೆಚ್ಚಿಕೊಳ್ಳದೇ ಅಮ್ಮನ ಅಳತೆಯಿಲ್ಲದ ಅಡುಗೆ, ಅಳತೆ ಮೀರಿ ರುಚಿಕೊಡುವ ಹಾಗೇ ಈ ಐದೂ ಕವನಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ… ಈ ಸೃಷ್ಟಿ ನಿನ್ನಿಂದ ಸಾಧ್ಯವೆನ್ನುವುದು ಗೊತ್ತು ನನಗೆ..ಕುದಿವೆಸರ ಅಗುಳಾಗಬೇಕು ಕವಿತೆಯ ಪ್ರತೀ ಶಬ್ಧವೂ ತಟ್ಟಿತು…
    ತುಂಬ ತುಂಬ ಇಷ್ಟವಾದವು ಅಕ್ಕಾ …ಲವ್ ಯೂ . ❤❤

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: