ಕನ್ನಡ ಭಾಷೆ ಅನ್ನ ಕೊಡುವ ಭಾಷೆಯಾದರೆ ಮಾತ್ರ ಉಳಿಗಾಲ…

ಕೊಟ್ರೇಶ್ ಕೊಟ್ಟೂರು

ಈಗ ಕರ್ನಾಟಕದಲ್ಲಿ ಕನ್ನಡ ಭಾಷೆಯ ಮೇಲೆ ಆಗುತ್ತಿರುವ ಅನ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕನ್ನಡ ಭಾಷೆಯನ್ನು ವ್ಯವಸ್ಥಿತವಾಗಿ ಮುಗಿಸುವ ಹಂತಕ್ಕೆ ಹೋಗಿದ್ದಾರೆ ನಮ್ಮ ಜನಪ್ರತಿನಿಧಿಗಳು ಎಂದು ಹೇಳಬಹುದು. ಕರ್ನಾಟಕದ ಮೂಲಭಾಷೆಯಾಗಿರುವ ಕನ್ನಡವನ್ನು ಪಾಶ್ಚಾತ್ಯ ಭಾಷೆಯಾದ ಇಂಗ್ಲೀಷ್ ಭಾಷೆ ಬಂದು ಕನ್ನಡ ಭಾಷೆಗೆ ನೆಲೆ ಇಲ್ಲದಂತಾಗಿ ಮಾಡಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದಕ್ಕೆ ಕಾರಣ ನಮ್ಮ ಜಾಗತೀಕರಣ, ನಗರೀಕರಣ ಮತ್ತು ಕನ್ನಡ ಭಾಷೆ ಬಂದರೂ ಅದನ್ನು ಮಾತಾಡದೆ ಇಂಗ್ಲೀಷ್ ಗೆ ಮಾರುಹೋಗಿರುವುದು. ಇಂಗ್ಲೀಷ್ ಭಾಷೆ ಇಷ್ಟೊಂದು ಪ್ರಪಂಚಾದಾದ್ಯಂತ ತನ್ನ ಪ್ರಬಲವಾದ ಬೇರುಗಳನ್ನು ಬಿಟ್ಟಿದೆ ಅದಕ್ಕೆ ಕಾರಣ ಆ ಭಾಷೆಯನ್ನು ಬೆಳೆಸುವವರು ಆ ರೀತಿ ಬೆಳೆಸಿದ್ದಾರೆ.

ಆದರೆ ಕನ್ನಡಕ್ಕೆ ತನ್ನದೇ ಆದ ಶಕ್ತಿಯಿಲ್ಲದೆ ಬರೀ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ ಎನ್ನುವುದು ಕನ್ನಡಿಗರಾದ ನಮಗೆ ನಿಜಕ್ಕೂ ಖೇದಕರ. ಬಾಂಬೆ ಕರ್ನಾಟಕವೆಂದು ಕರೆಸಿಕೊಂಡ ಬೆಳಗಾಂ ಕಡೆ ಮರಾಠಿ ದಾಳಿ, ಹೈದರಾಬಾದ್ ಕರ್ನಾಟಕವೆಂದು ಕರೆಸಿಕೊಂಡ ಬಳ್ಳಾರಿ ಕಡೆ ತೆಲುಗು ದಾಳಿ. ಈ ರೀತಿ ಒಂದೊಂದು ಕಡೆ ಒಂದೊಂದು ಭಾಷೆಗಳು ತಮ್ಮ ಸ್ಥಾನವನ್ನು ಗಟ್ಟಿಗೊಳಿಸುತ್ತಾ ಬಂದಿವೆ.

ಆದರೆ ಮಧ್ಯಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವ ಕನ್ನಡ ಈಗ ಆಗುತ್ತಿರುವುದನ್ನು ಕಂಡರೆ ಮಧ್ಯಕರ್ನಾಟಕದಲ್ಲೂ ಕನ್ನಡ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈಚೆಗೆ ಸರ್ಕಾರಿ ಕನ್ನಡ ಶಾಲೆಗಳ ನಿರ್ಲಕ್ಷ್ಯ, ಅವುಗಳಿಗೆ ಸರಿಯಾದ ಅನುದಾನಗಳಿಲ್ಲ, ಬೋಧಿಸುವ ಶಿಕ್ಷಕರಿಲ್ಲ. ಹೀಗಾಗಿ ಕನ್ನಡ ಭಾಷೆ ಹಿಂದುಳಿದಿದೆ.

ಕನ್ನಡ ಭಾಷೆಯನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಕರ್ನಾಟಕ ರಾಜ್ಯದ ರಾಜಕಾರಣಿಗಳು ಬರೀ ಇಂಗ್ಲೀಷ್ ಭಾಷೆಯನ್ನು ಕಲಿಸಬೇಕು ಮಕ್ಕಳಿಗೆ 2000 ಇಂಗ್ಲೀಷ್ ಶಾಲೆಗಳನ್ನು ತೆರೆಯುತ್ತೇವೆ ಅದಕ್ಕಾಗಿ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳು ನಿಂತರೂ ಪರವಾಗಿಲ್ಲ ಎನ್ನುವ ನಮ್ಮ ಜನಪ್ರತಿನಿಧಿಗಳು ಅವರಿಗಿರುವ ಇಂಗ್ಲೀಷ್ ವ್ಯಾಮೋಹವನ್ನು ತೋರಿಸುತ್ತದೆ.

ಸರ್ಕಾರಿ ಶಾಲೆಗಳಲ್ಲೂ ಇಂಗ್ಲೀಷ್ ಭಾಷೆಯನ್ನು ಕಡ್ಡಾಯವಾಗಿ ಮಾಧ್ಯಮವನ್ನಾಗಿ ಮಾಡುತ್ತೇವೆ ಎನ್ನುವುದು ಕನ್ನಡ ಭಾಷೆಯ ಮೇಲೆ ಇವರಿಗಿರುವ ತಾತ್ಸರ ವನ್ನು ಎತ್ತಿತೋರಿಸುತ್ತಿದೆ. ಹೀಗಾದರೆ ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆಯನ್ನು ಉಳಿಸಿಕೊಂಡು ಬಂದಿರುವ ನಮಗೆ ಕನ್ನಡ ಭಾಷೆ ಒಂದು ಕಾಲದಲ್ಲಿ ಇತ್ತು ಎನ್ನುವ ಕಾಲ ಬಂದರೂ ಬರಬಹುದು ಏಕೆಂದರೆ ಇಂಗ್ಲೀಷ್ ಭಾಷೆಯ ಮೇಲೆ ನಮಗಿರುವ ಉತ್ಸಾಹ. ಕನ್ನಡ ಭಾಷೆಯನ್ನು ಮಾತೃಭಾಷೆ ಎಂದು ಕರೆದುಕೊಳ್ಳುವ ನಾವುಗಳು ಎಷ್ಟು ಮಂದಿ ಮನೆಯಲ್ಲಿ ಕನ್ನಡ ಭಾಷೆಯನ್ನು ಮಾತನಾಡುತ್ತೇವೆ ಎನ್ನುವ ಪ್ರಶ್ನೆಯನ್ನು ನಾವೇ ಹಾಕಿಕೊಳ್ಳುವ ಅನಿವಾರ್ಯ ನಮಗಿದೆ.

ಐಟಿ ಬಿಟಿ ಕಂಪನಿಗಳಲ್ಲಂತೂ ಇಂಗ್ಲೀಷ್ ಭಾಷೆ ಒಂದು ಪ್ರತಿಷ್ಠೆಯ ವಿಷಯವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇಂಗ್ಲೀಷ್ ಬಂದರೆ ಮಾತ್ರ ನಮ್ಮ ಕಂಪನಿಗಳಲ್ಲಿ ಕೆಲಸದ ಅವಕಾಶ ಎನ್ನುವ ಕಂಪನಿಗಳು ಮೊದಲು ಕೇಳುವುದೇ ಇಂಗ್ಲೀಷ್ ಬರುತ್ತದೆಯೋ ? ಇಲ್ಲವೋ ? ಎಂದು ಆ ನಂತರ ಕೆಲಸದ ವಿಷಯ ಹೀಗಿರುವಾಗ ಕನ್ನಡ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಹೇಗೆ ?

ಉದಾಹರಣೆಗೆ ಚೀನಾ ಭಾಷೆಯನ್ನು ನೋಡಿದಾಗ ಅವರು ಇಂಗ್ಲೀಷ್ ಭಾಷೆಯನ್ನು ನಿರಾಕರಿಸಿದವರು, ಅವರು ಯಾವುದೇ ಕಾರಣಕ್ಕೂ ಇಂಗ್ಲೀಷ್ ನ  ವ್ಯಾಮೋಹಕ್ಕೆ ಒಳಗಾಗದೇ ತಮ್ಮ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಲೂ ಅದೇ ಭಾಷೆಯನ್ನು ಪ್ರತಿಷ್ಠೆಯಾಗಿ ಉಳಿಸಿಕೊಂಡಿದ್ದಾರೆ ಅದಕ್ಕೆ ಕಾರಣ ಅವರು ಭಾಷೆಯ ಮೇಲಿಟ್ಟಿರುವ ಪ್ರೀತಿ.

ಆದರೆ ಕನ್ನಡಿಗರಾದ ನಾವು ಕನ್ನಡವನ್ನು ಬರೀ ಮಾತನಾಡಿದರೆ, ಕತೆ, ಕಾದಂಬರಿ, ಕವನಗಳನ್ನು ಬರೆದರೆ ಸಾಲದು ಕನ್ನಡ ಭಾಷೆಯನ್ನು ನೆಲದ ಭಾಷೆಯಾಗಿ ಕಲಿಸುವ ಅನಿವಾರ್ಯತೆ ಇದೆ. ಬರೀ ಕನ್ನಡವನ್ನು ಕಲಿಸಿದರೆ ಸಾಲದು ಅದಕ್ಕೆ ತಕ್ಕದಾಗಿ ಕೆಲಸ ಮಾಡಿ ಅನ್ನ ಸಂಪಾದಿಸುವ ಭಾಷೆಯಾಗಬೇಕು ಆಗ ಮಾತ್ರ ಕನ್ನಡ ಭಾಷೆಗೆ ಉಳಿಗಾಲವಿದೆ ಇಲ್ಲವಾದರೆ ಮುಂದೊಂದು ದಿನ ಕನ್ನಡ ಭಾಷೆ ಇತ್ತು ಎನ್ನುವಷ್ಟರ ಮಟ್ಟಿಗೆ ಕನ್ನಡವನ್ನು ಹುಡುಕಾಡುವ ಕಾಲ ಬರಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಬರೀ ಕನ್ನಡ ಭಾಷೆ ಮಾತನಾಡುವ ಭಾಷೆಯಾಗದೇ ಅನ್ನ ಕೊಡುವ ಭಾಷೆಯೂ ಆಗಬೇಕು.

 

ಯಾಕೆ ಸರ್ಕಾರಕ್ಕೆ ಕನ್ನಡ ಭಾಷೆಯನ್ನು ಸದೃಢವನ್ನಾಗಿ ಮಾಡುತ್ತೇವೆ ಎನ್ನುವ ಇಚ್ಚೆ ಏಕೆ ಬರುತ್ತಿಲ್ಲ ಎನ್ನುವುದು ನನಗಿನ್ನೂ ಸಂಶಯವಾಗಿದೆ. ಇಂಗ್ಲೀಷ್ ಭಾಷೆಯ ಬದಲು ಕನ್ನಡ ಮಾತನಾಡುವುದು ಕಡ್ಡಾಯ ಎಂದು ಐಟಿ ಬಿಟಿ ಕಂಪನಿಗಳಲ್ಲಿ ನಿರ್ಬಂಧ ವಿಧಿಸಲಿ ಕರ್ನಾಟಕದ ಭೂಮಿ ಬೇಕು, ನೀರು ಬೇಕು, ವಿದ್ಯುತ್ ಬೇಕು, ಕೆಲಸ ಮಾಡಲು ಕನ್ನಡಿಗರು ಬೇಕು ಕನ್ನಡ ಭಾಷೆ ಮಾತ್ರ ಬೇಡ ಇದು ಯಾವ ನ್ಯಾಯ ? ಇವರಿರುವುದು ಕರ್ನಾಟಕದಲ್ಲಿ.

ಇಂತಹ ಕಂಪನಿಗಳಿಗೆ ಕನ್ನಡ ಭಾಷೆಯಲ್ಲೇ ಕಂಪನಿಗಳಲ್ಲಿ ವ್ಯವಹರಿಸುವುದಾದರೆ ಇಲ್ಲಿ ನಿಮ್ಮ ಕಂಪನಿಗಳನ್ನು ನಡೆಸಿ ಇಲ್ಲವಾದರೆ ಕರ್ನಾಟಕದಿಂದ ಹೊರಹೋಗಿ ಎನ್ನುವ ಧೈರ್ಯ ಇವರಿಗಿಲ್ಲವೇ ? ಇವರಿಂದ ಆಗುತ್ತಿರುವ ಲಾಭಗಳೂ ಅಷ್ಟಕ್ಕಷ್ಟೆ. ಆದರಿಂದ ಆಗುವ ನಷ್ಟವೇನು ? ಇಂತಹ ದೃಢ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬೇಕು.

ಹೀಗೆ ಕನ್ನಡ ಭಾಷೆಯನ್ನು ನಿರ್ಲಕ್ಷ್ಯಿಸುತ್ತಿರುವ ನಮಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏಕೆ ಬೇಕು, ಕನ್ನಡ ಸಾಹಿತ್ಯ ಪರಿಷತ್ತು ಏಕೆ ಬೇಕು, ಕನ್ನಡ ಸಂಘಟನೆಗಳು ಏಕೆ ಬೇಕು. ಇವೆಲ್ಲ ಸುಮ್ಮನೆ ತಮ್ಮ ತಮ್ಮ ಅಧಿಕಾರದ ಆಸೆಗಳಿಗೆ ಮತ್ರ ಸೀಮಿತವಾಗಿದೆ ಯಾರಿಗೂ ಕನ್ನಡ ಭಾಷೆಯನ್ನು ಉಳಿಸುವ ಇರಾದೆ ಇಲ್ಲದಂತಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಮಾಡುವುದೇಕೆ ? ಅದಕ್ಕಾಗಿ ಕೋಟಿ ಕೋಟಿ ರೂಪಾಯಿಗಳ ಅನುದಾನ ನೀಡುತ್ತಿರುವುದೇಕೆ ?

ಇಂಗ್ಲೀಷ್ ಮೇಲೆ ನಿಮ್ಮ ವ್ಯಾಮೋಹವಿದ್ದರೆ ಇಂಗ್ಲೀಷ್ ಭಾಷೆಯನ್ನೇ ರಾಜ್ಯದ ಆಡಳಿತ ಭಾಷೆಯನ್ನಾಗಿ ಘೋಷಿಸಿ. ಎಲ್ಲಾ ಕನ್ನಡಪರ ಸಂಘಟನೆಗಳನ್ನು ಮುಚ್ಚಿ, ಸುಮ್ಮನೆ ಅವುಗಳಿಗೆ ನೀಡುತ್ತಿರುವ ಅನುದಾನವಾದರೂ ಉಳಿಯಲಿ ನಮ್ಮ ತೆರಿಗೆಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ ಆಗಲಿ. ಇಂಗ್ಲೀಷ್ ಭಾಷೆಯ ಮುಂದೆ ಸುಮ್ಮನೆ ಕನ್ನಡವನ್ನು ಪ್ರತಿಸಲ ಚುಚ್ಚಿ ಚುಚ್ಚಿ ಕೊಲ್ಲುವ ಬದಲು ಒಂದೇ ಸಲ ಮಣ್ಣಾಕಿ ಮುಚ್ಚಿ, ಕನ್ನಡ ಭಾಷೆ ಒಂದು ಕಾಲದಲ್ಲಿ ಇತ್ತು ಎಂದು ಇತಿಹಾಸಕ್ಕೆ ನಿಮ್ಮಿಂದಲೇ ಮುನ್ನುಡಿಯಾಗಲಿ. ಕನ್ನಡ ಭಾಷೆ ಅನ್ನ ಕೊಡುವ ಭಾಷೆಯಾಗಬೇಕು ಆಗ ಮಾತ್ರ ಕನ್ನಡ ಭಾಷೆಗೆ ಉಳಿಗಾಲ ಎನ್ನುವುದು ನನ್ನ ಅಭಿಪ್ರಾಯ.

‍ಲೇಖಕರು Avadhi Admin

April 4, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: