ಬಂಗಾರಪ್ಪ ಎಂಬ ಜನನಾಯಕನ ಪತನಪರ್ವ..

‘ಗರ್ಭಗುಡಿಯಲ್ಲಿ ಏನಿದೆ ಎಂದು ನೋಡ್ಕೊಂಡ್ ಬರಕ್ಕೋಗಿದ್ದೆ’

ಬಂಗಾರಪ್ಪ ಎಂಬ ಜನನಾಯಕನ ಪತನಪರ್ವ..

“ಬಿಜೆಪಿಗೆ ಹೋಗ್‌ತಕ್ಕಂತ ತೀರ‍್ಮಾನ ನನ್ದಲ್ಲ. ಅದು ಜನ್ರ ತೀರ‍್ಮಾನ, ಈ ಬಂಗಾರಪ್ಪ ಹಂಗೆಲ್ಲಾ ಸುಮ್ ಸುಮ್ನೆ ನಿರ್ಧಾರ ತಗೋಳೋ ಬಂಗಾರಪ್ಪ ಅಲ್ಲ, ಜನ್ರು ಹೇಳ್ದಂಗೆ ಕೇಳೋ ಬಂಗಾರಪ್ಪ, ಜನ್ರು ಒಳ್ಳೇದಿಕ್ಕೆ ಪಕ್ಷ ಬದಲಿಸಿದ್ರೇ ತಪ್ಪೇನಿದೆ? ಅಂತಿಮವಾಗಿ ಜನ್ರಿಗೆ ಗೆ ಒಳ್ಳೆದು ಮಾಡೋದೇ ಈ ಬಂಗಾರಪ್ಪನ ಉದ್ದೇಶ ಮತ್ತು ಗುರಿ.. “.

೨೦೦೪ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಾರೆಕೊಪ್ಪ ಬಂಗಾರಪ್ಪ ತಮ್ಮ ಬಿಜೆಪಿ ಸೇರ‍್ಪಡೆಯನ್ನು ಸಮರ್ಥಿಸಿಕೊಳ್ಳುತ್ತಾ ಹೋದರು. ಪತ್ರಿಕಾ ಸಂದರ್ಶನಕ್ಕೆ ಅವರ ಮುಂದೆ ಕುಳಿತಿದ್ದ ನಾನು ಬಂಗಾರಪ್ಪ ಅವರ ರಾಜಕೀಯ ವರಸೆಗೆ ಚಿತ್ತಾಗಿ ಹೋಗಿದ್ದೆ.

೨೦೦೪ ರಾಜ್ಯ ರಾಜಕಾರಣ ಹೊಸ ದಿಕ್ಕಿನಡೆಗೆ ಮತ್ತು ಸೈದ್ಧಾಂತಿಕವಾಗಿ ದಿಗಿಲು ಹುಟ್ಟಿಸಿದ ಕಾಲಘಟ್ಟ ಎನ್ನಬಹುದು. ಪರಂಪರಾಗತವಾಗಿ ಬಿಜೆಪಿ ಕೋಮುವಾದಿ ಪಕ್ಷ ಎಂದು ಜರಿಯುತ್ತಲೆ, ಕೆಡವುತ್ತಲೆ, ತಲೆ ಎತ್ತದಂತೆ ಕಾಯ್ದುಕೊಂಡು ಬಂದ ಎಸ್. ಬಂಗಾರಪ್ಪ ಅವರು ೨೦೦೪ ರಲ್ಲಿ ಮತ್ತೆ ದೇಶದಲ್ಲಿ ಎನ್.ಡಿ ಎ ಅಧಿಕಾರಕ್ಕೆ ಬರುತ್ತದೆ. ಕೇಂದ್ರದಲ್ಲಿ ಮಂತ್ರಿ ಆಗಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿಯ ನಡುಮನೆಗೆ ನಡೆದು ಹೋದರು. ಅವತ್ತಿಗೆ ರಾಜ್ಯದ ಸೆಕ್ಯೂಲರ್ ರಾಜಕಾರಣವನ್ನು ಮಕಾಡೆ ಮಲಗಿಸಿಬಿಟ್ಟ ಕೀರ್ತಿ ಬಂಗಾರಪ್ಪ ಅವರಿಗೆ ಸಲ್ಲುತ್ತದೆ.

ನಾನು ಚಿಕ್ಕಂದಿನಿಂದಲೂ ವ್ಯಕ್ತಿಗತವಾಗಿ ಬಂಗಾರಪ್ಪ ಅವರ ಅಪ್ಪಟ ಅಭಿಮಾನಿ. ಅವರ ಆಡಳಿತ ವೈಖರಿ, ರಾಜಕೀಯ ತಾಕತ್ತು, ಜನಸಾಮಾನ್ಯರ ಬಗೆಗಿನ ಅವರಿಗಿರುವ ಒಲವು-ನಿಲುವುಗಳು ನನ್ನನ್ನು ಸೂಜಿಗಲ್ಲಿನಂತ ಸೆಳೆದಿದ್ದವು. ಅಂತಹ ಬಂಗಾರಪ್ಪ ಅವರು ಬಿಜೆಪಿಗೆ ಸೇರಿದ್ದು ನನಗೆ ಆಶ್ಚರ್ಯ, ಮತ್ತು ಬೇಸರವನ್ನು ತಂದಿತ್ತು.

ಅಂತಹ ಬಂಗಾರಪ್ಪ ಅವರನ್ನು ಪತ್ರಕರ್ತನಾಗಿ ಸಂದರ್ಶನ ಮಾಡುವ ಅವಕಾಶ ದಕ್ಕಿದ್ದು ಕಾಲದ ಮಹಿಮೆ ಎನ್ನಬಹುದು. ಸಂದರ್ಶನದ ಕೊನೆ ಎಂಬಂತೆ ‘ಆಫ್ ದಿ ರೆಕಾರ್ಡ್ ಸರದಿ’ಯಲ್ಲಿ “ಸರ್, ನೀವು ಬಿಜೆಪಿಗೆ ಸೇರಿದ್ದು ನನಗೆ ಇಷ್ಟ ಆಗಲಿಲ್ಲ. ಇದೊಂದು ರಾಜಕೀಯ ಆತ್ಮಹತ್ಯೆ ಆಗಬಹುದು, ನಿಮ್ಮಂತಹವರಿಗೆ ಅಲ್ಲಿರುವುದು ಕಷ್ಟ ಆಗುತ್ತದೆ..” ಎಂದೆ. ಮೂಗಿನ ಮೇಲೆ ಜಾರಿದ ಕನ್ನಡಕವನ್ನು ತೋರು ಬೆರಳಿನಿಂದ ಮೇಲಕ್ಕೇರಿಸಿಕೊಂಡು ನನ್ನ ಭುಜಕ್ಕೆ ಕೈಯೂರಿ ಎದ್ದು ನಿಂತ ಬಂಗಾರಪ್ಪ ಅವರು “ಮಿಸ್ಟರ್ ರವಿಕುಮಾರ್, ಈ ಬಂಗಾರಪ್ಪ ಎಲ್ಲಿದ್ರೂ ಬಂಗಾರಪ್ಪನೇ… ಈ ಕಾಂಗ್ರೇಸ್ನೋರಿಗೆ ಬುದ್ದಿ ಕಲ್ಸಿಸ್ತಿನಿ…ನೋಡ್ತಾ ಇರಿ….ಈ ಬಂಗಾರಪ್ಪ ಏನೂ ಅಂತ ತೋರ‍್ಸ್ತಿನಿ.. ” ಎಂದು ಸುಕ್ಕುಗೊಂಡ ರೇಷ್ಮೆ ಶರ್ಟ್ ನ್ನು ಕೊಡವಿಕೊಂಡು ಹೆಜ್ಜೆ ಹಾಕತೊಡಗಿದರು.

ಗೋಲ್ಡ್ ಪ್ರೇಮ್ ನ ಕಡುಗಪ್ಪು ಕನ್ನಡಕದ ಒಳಗೆ ಅಡಗಿದ್ದ ಅವರ ಕಣ್ಣುಗಳನ್ನು ದಿಟ್ಟಿಸಿ ಇದೊಂದು ಅವಕಾಶವಾದಿ ಬಂಗಾರಪ್ಪ ಅವರ ವರಸೆಯೆ ಎಂದು ಕೇಳಬೇಕೆನ್ನುವ ನನ್ನ ಮನಸ್ಸಿನ ಮರ್ಮ ಅರಿತವರಂತೆ ಎಚ್ಚೆತ್ತುಕೊಂಡ ಬಂಗಾರಪ್ಪ ಅವರು ‘good interview’ ಎಂದು ಕೈ ಕುಲಕಿ ಕಾರು ಹತ್ತಿ ಹೋದರು.

****
ಅವತ್ತಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಬಂಗಾರಪ್ಪ ಅವರು ಬಿಜೆಪಿಗೆ ಸೇರಿದ್ದನ್ನು ಕೃಷ್ಣ ತಮ್ಮ ಆಕ್ಸಫರ್ಡ್ ಶೈಲಿಯಲ್ಲೇ ಟೀಕಿಸಿದ್ದರು. ಮಂತ್ರಿಯಾಗಿದ್ದ ಕುಮಾರ್‌ ಬಂಗಾರಪ್ಪ ನನ್ನು ತಂದೆ ಬಂಗಾರಪ್ಪನಿಂದ ಬೇರ್ಪಡಿಸಿದ ಕೀರ್ತಿ ಕೃಷ್ಣ ಅವರಿಗೆ ಸಲ್ಲಬೇಕು, ಕೆಪಿಸಿಸಿ ಅಧ್ಯಕ್ಷರಾಗಿದ್ದ ಫೈರ್ ಬ್ರಾಂಡ್ ಜನಾರ್ಧನ ಪೂಜಾರಿ ಅವರು ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಎಸ್. ಬಂಗಾರಪ್ಪ ಅವರಿಗೆ ‘ಕೋಮುವಾದಿ’ ಎಂದು ಪಟ್ಟ ಕಟ್ಟಿ , ಅವರ ಪಕ್ಷಾಂತರ ಗುಣವನ್ನು ಮಂಗನಿಗೆ ಹೋಲಿಸಿ ‘ಬಂಗಾರಪ್ಪ ಅವರು ಮರದಿಂದ ಮರಕ್ಕೆ ಹಾರುವ ಮಂಗ . ಈ ಮಂಗಕ್ಕೆ ಜನ ಈ ಬಾರಿ ತಕ್ಕ ಪಾಠ ಕಲಿಸಬೇಕು’ ಎಂದು ಲೇವಡಿ ಮಾಡುತ್ತಾ ಜನರಿಗೆ ಕರೆ ನೀಡತೊಡಗಿದರು.

ಪೂಜಾರಿ ಅವರ ಟೀಕೆಗೆ ಕೆರಳಿದ ಬಂಗಾರಪ್ಪ ಮರುದಿನದಿಂದಲೇ ತಮ್ಮ ಎಲ್ಲಾ ಚುನಾವಣಾ ಪ್ರಚಾರ ಸಭೆಗಳಲ್ಲಿ ವ್ಯಕ್ತಿಯೊಬ್ಬನಿಗೆ ಆಂಜನೇಯನ ವೇಷ ಹಾಕಿಸಿ ವೇದಿಕೆಯ ಮೇಲೆ ನಿಲ್ಲಿಸಿಕೊಂಡು ಭಾಷಣ ಮಾಡಲಾರಂಭಿಸಿದರು. ಪೂಜಾರಿ ಅವರ ಲೇವಡಿಗೆ ಉತ್ತರ ಕೊಡುತ್ತಾ “ಹೌದು, ನಾನು ಮಂಗ. ಮಂಗ ಎಂದರೆ ವೀರಾಂಜನೇಯ, ರಾಮನ ಭಂಟ ಹನುಮ , ಇಂತಹ ರಾಮ ಭಂಟನನ್ನು ಪೂಜಾರಿ ಅವಮಾನ ಮಾಡಿದ್ದಾನೆ. ಇದು ರಾಮನಿಗೆ ಮಾಡಿದ ಅವಮಾನ, ಸೋನಿಯಾಗಾಂಧಿ ಎಂಬ ವಿದೇಶಿ ಮಹಿಳೆಯ ಪೂಜಾರಿಕೆ ಮಾಡುತ್ತಿರುವ ಈ ಪೂಜಾರಿ ರಾಮಭಂಟನನ್ನು ಅವಮಾನ ಮಾಡುತ್ತಿದ್ದಾನೆ. ಕಾಂಗ್ರೆಸ್ ಎಂಬ ಲಂಕೆಗೆ ಬೆಂಕಿ ಹಚ್ಚದೆ ಈ ಮಂಗ ಬಿಡುವುದಿಲ್ಲ” . ಎಂದು ಕಿಚ್ಚು ಹಾಯಿಸಿಬಿಟ್ಟರು. ಜನರ ಸಿಳ್ಳೆ, ಕೇಕೆ , ಚಪ್ಪಾಳೆಗೆ ಇನ್ನಷ್ಟು ಹುಮ್ಮಸ್ಸುಗೊಂಡು ತಮ್ಮದೇ ಶೈಲಿಯಲ್ಲಿ ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡುತ್ತಿದ್ದರು.

ಜನಾರ್ಧನ ಪೂಜಾರಿ ಅವರಿಗೆ ಇದು ನುಂಗಲಾರದ ತುತ್ತಾಯಿತು. ಚುನಾವಣೆ ಮುಗಿಯುವವರೆಗೂ ಪೂಜಾರಿ ಅವರು ಮಂಗ ಎಂಬ ಪದವನ್ನೆ ಉಚ್ಛರಿಸಲಿಲ್ಲ. ಆದರೆ ಬಂಗಾರಪ್ಪ ಮಾತ್ರ ತಮ್ಮ ವಿರುದ್ದ ಪೂಜಾರಿ ಅವರ ಮಂಗ ನಿಂದನೆಯನ್ನೇ ಅಸ್ತ್ರವನ್ನಾಗಿಸಿ ಗೆದ್ದು ಬಿಟ್ಟರು. ಆದರೆ ಕೇಂದ್ರದಲ್ಲಿ ಯುಪಿಎ ಆಡಳಿತ ಬಂದು ಬಿಟ್ಟಿತು. ಬಂಗಾರಪ್ಪ ಅವರು ಬಿಜೆಪಿ ಸೇರಿ ಎನ್.ಡಿ.ಎ ಸರ್ಕಾರದಲ್ಲಿ ಮಂತ್ರಿ ಆಗುವ ಕನಸು ಭಗ್ನಗೊಂಡು ವರ್ಷೋಪ್ಪತ್ತಿನಲ್ಲೇ ಸಮಾಜವಾದಿ ಸೈಕಲ್ ಹತ್ತಿಕೊಂಡು ಜನರ ಮುಂದೆ ಬಂದರು. 

ಆಗಲೂ ಅವರ ಮುಂದೆ ಮತ್ತೊಂದು ಸಂದರ್ಶನಕ್ಕೆ ಕುಳಿತಿದ್ದ ನನ್ನ ಪ್ರಶ್ನೆಯನ್ನು ಊಹಿಸಿದಂತೆ “ಸುಮ್ನೆ ಒಳಗೆ ಏನೇನಿದೆ ಎಂದು ನೋಡ್ಕಂಡ್ ಬರೋಕೋಗಿದ್ದೆ. ಅಷ್ಟೇ…ಯಾ, ಅಲ್ಲಿ ಪುರೋಹಿತ್ರೆ ಜಾಸ್ತಿ ಇದ್ದಾರೆ. ಚೆಡ್ಡಿ ಹಾಕ್ಕೊಂಡು, ಲಾಠಿ ಹಿಡ್ಕಂಡ್ ಲೈನ್ ನಲ್ಲಿ ನಿಲ್ಲೋ ಜಯಮಾನವೇ ನಮ್ದಲ್ಲ. ಸ್ವಾಭಿಮಾನ ಬಿಟ್ಟು ಬದ್ಕೋ ಬಂಗಾರಪ್ಪ ನಾನಲ್ಲ.. ಈ ಚೆಡ್ಡಿಗಳಿಗೆ ಬುದ್ದಿ ಕಲ್ಸ್ದೆ ಸುಮ್ನೆ ಬಿಡೋಲ್ಲ….. ” ಎಂದು ಗುಡುಗಿದರು.

೧೯೯೯ರಲ್ಲಿ ಕೇವಲ 40 ಸ್ಥಾನಗಳ ಆಜುಬಾಜಿನಲ್ಲಿ ಸ್ಥಾನಗಳಲ್ಲಿ ತೆವಳಿದ್ದ ಬಿಜೆಪಿಯನ್ನು ೨೦೦೪ ರ ಚುನಾವಣೆಯಲ್ಲಿ ೭೯ ಸ್ಥಾನಗಳ ದೊಡ್ಡ ಬಲದೊಂದಿಗೆ ಅಧಿಕಾರದ ಅಂಗಳಕ್ಕೆ ತಂದು ಬಿಟ್ಟು ಕಾಂಗ್ರೆಸ್ ಎಂಬ ತನ್ನ ಮನೆಗೆ ಮರಳಿದ ಬಂಗಾರಪ್ಪ ಅವರನ್ನು ಬಿಜೆಪಿಯನ್ನು ಅಧಿಕಾರದ ಸನಿಹಕ್ಕೆ ತಂದು ನಿಲ್ಲಿಸಿದ್ದ ಪಶ್ಚಾತಾಪ ಬಾಧಿಸುತ್ತಿತ್ತು. ಆದರೆ ಅದನ್ನು ಅವರೆಂದೂ ಹೊರಗೆಡಹದೆ ಕಪ್ಪ ಕನ್ನಡಕದ ಒಳಗಿನ ಕಣ್ಣಿನಲ್ಲೇ ಇಂಗಿಹೋಗುತ್ತಿತ್ತು. ಇಂತಹ ಬಂಗಾರಪ್ಪ ನವರ ವಿರುದ್ದ ೨೦೦೯ ಲೋಕಸಭಾ ಚುನಾವಣೆಯಲ್ಲಿ ಅವತ್ತಿನ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಗ ಬಿ,ವೈ ರಾಘವೇಂದ್ರನನ್ನು ಕಣಕ್ಕಿಳಿಸಿದರು. ಮತದಾನಕ್ಕೆ ಇನ್ನೂ ಒಂದು ವಾರವಿರುವಾಗ ಬಂಗಾರಪ್ಪ ನವರ ಬಳಿ ಬೂತ್ ಕಾರ್ಯಕರ್ತರಿಗೂ ಕೊಡಲು ಕನಿಷ್ಟ ಖರ್ಚಿನ ಕಾಸೂ ಕೂಡ ಇಲ್ಲದಂತಾಯಿತು,

ಕಾಗೋಡು ತಿಮ್ಮಪ್ಪ, ಅವತ್ತಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನಕುಮಾರ್ ಸೇರಿದಂತೆ ಹಲವು ಕಾಂಗ್ರೇಸ್ ನಾಯಕರುಗಳು ‘ಸರ್ ಸ್ವಲ್ಪ ದುಡ್ಡು ಬೇಕು ನಾವು ಖಂಡಿತ ಗೆಲ್ಲುತ್ತೇವೆ.. ‘ ಎಂದು ಬಂಗಾರಪ್ಪ ಅವರ ಬಳಿ ಕೇಳುತ್ತಿದ್ದರು. ‘ನನ್ನತ್ರ ದುಡ್ಡಿಲ್ಲ. ಬೇಕಾದ್ರೆ ಚುನಾವಣೆ ಮಾಡಿ ಇಲ್ಲವೇ ಬಿಡಿ , ಅದೇನಾಗುತ್ತೋ ನೋಡೋಣ…. ಎಂದು ಎಂದಿನ ಗತ್ತಿನಲ್ಲಿ ಕೈ ಚೆಲ್ಲಿದ್ದರು.’ ಬಂಗಾರಪ್ಪ ಅವರ ಸ್ವಭಾವ ಗೊತ್ತಿದ್ದ ಕಾಂಗ್ರೆಸ್ ಮುಖಂಡರೆಲ್ಲಾ ಒಬ್ಬೊಬ್ಬರಾಗಿಯೇ ಜಾಗ ಖಾಲಿ ಮಾಡಿದರು. ಹಣ, ಆರೋಗ್ಯ ಎರಡು ಇಲ್ಲದ ಬಂಗಾರಪ್ಪ ಅವರೆಡೂ ಇದ್ದಂತೆ ತಮ್ಮನ್ನು ತಾವು ಬಲವಂತವಾಗಿ ಸಂಭಾಳಿಸಿಕೊಳ್ಳುವುದು ಕಾಣುತ್ತಿತ್ತು.

ಕೆಲವೇ ಆಪ್ತ ಸಹಾಯಕರೊಂದಿಗೆ ಮೌನಕ್ಕೆ ಜಾರಿದ್ದ ಬಂಗಾರಪ್ಪರನ್ನು ಮಾತಿಗೆಳೆದೆ ಅವತ್ತೂ ಕೂಡ ರಾಜ್ಯದ ಖ್ಯಾತ ವಾರಪತ್ರಿಕೆಯೊಂದಕ್ಕೆ ಸಂದರ್ಶನ ಕ್ಕಾಗಿ ಅವರ ಮುಂದೆ ಕುಳಿತಿದ್ದೆ.( ಆ ಪತ್ರಿಕೆಯಲ್ಲಿ ಸಂದರ್ಶನ ಪ್ರಕಟಗೊಳ್ಳಲಿಲ್ಲ. ಕಾರಣ ಕೇಳಬೇಡಿ!) ಸಂದರ್ಶನದ ಕೊನೆಯಲ್ಲಿ ಮತ್ತದೇ ‘ಆಫ್ ದಿ ರೆಕಾರ್ಡ್’ ಸರದಿಯಲ್ಲಿ ‘ಸರ್ ಚುನಾವಣೆಗೆ ದುಡ್ಡಿಲ್ಲ ಅಂತಿದಿರೀ ಮತ್ತೆ ಹೇಗೆ ಚುನಾವಣೆ ನಡೆಸ್ತೀರಿ..ಕೊನೆ ಕ್ಷಣದಲ್ಲಿ ಹೀಗಂದ್ರೆ ಕಷ್ಟ ಅಲ್ವ ಸರ್.. ‘ ಎಂದು ಕೇಳಿದೆ.

“ಸೀ.. ನನ್ನತ್ರ ದುಡ್ಡಿಲ್ಲ ನಿಜ, ಆದ್ರೆ ದುಡ್ಡು ತರೋ ಶಕ್ತಿ ಈ ಬಂಗಾರಪ್ಪಂಗೆ ಐತೆ, ಆದ್ರೆ ಇವತ್ತೇನಾಗಿದೆ ಅಂದ್ರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಅವರತ್ರ ಹಡ್ಬೆ ದುಡ್ಡಿದೆ. ನಾನು ಬೂತಿಗೆ ಐದುಸಾವ್ರ ಕೊಟ್ರೆ ಅವ್ನು ಹತ್ತು ಸಾವ್ರ ಕೊಡ್ತಾನೆ, ನಾನು ಹತ್ತು ಕೊಟ್ಟ್ರೆ ಅವ್ನು ಇಪ್ಪತ್ತು ಕೊಡ್ತಾನೆ…… ಈ ಪೈಪೋಟಿ ಕಷ್ಟ, ಯಡಿಯೂರಪ್ನ ದುಡ್ಡು ,ಅಧಿಕಾರದ ಮುಂದೆ ನನ್ ದುಡ್ಡು ಓಡೋಲ್ಲ, ಅದ್ಕೆ ನಾನು ದುಡ್ ಇಲ್ದೆ ಎಲೆಕ್ಷನ್ ಮಾಡ್ತಿನಿ, ಜನ ದುಡ್ಡಿಗೆ ಓಟಾಕ್ತಾರೋ….. ಅಥವಾ ಈ ಬಂಗಾರಪ್ಪಂಗೆ ಓಟಾಕ್ತಾರೋ ನೋಡೇ ಬಿಡ್ತಿನಿ, ಈ ಬಂಗಾರಪ್ಪ ಬೇಕೋ , ದುಡ್ಡು ಬೇಕೋ ಜನಾನೇ ತೀರ‍್ಮಾನ ಮಾಡ್ಲಿ.., ಈ ಬಂಗಾರಪ್ಪನತ್ರ ದುಡ್ಡಿಲ್ಲ ಅಂತನೇ ಬರೀರಿ..” ಎಂದರು. ಅವರು ಜನರ ಮೇಲೆ ಮತ್ತು ತಮ್ಮ ರಾಜಕೀಯ ಪ್ರಯೋಗಗಳ ಮೇಲೆ ಇಟ್ಟಿದ್ದ ವಿಶ್ವಾಸ ಅಸೀಮ. ನಿಶ್ಯಸ್ತ್ರ ಯೋಧನೊಬ್ಬ ಆತ್ಮಬಲದ ಮೇಲೆ ಯುದ್ಧಕ್ಕೆ ಹೊರಟಂತೆ ಕಾಣುತ್ತಿತ್ತು.

ಮತದಾನದ ದಿನ ಬಹಳಷ್ಟು ಬೂತ್ ಗಳಲ್ಲಿ ಬಂಗಾರಪ್ಪ ಅವರ ಪರ ಓಟು ಕೇಳುವವರು , ಮತಗಟ್ಟೆ ಏಜೆಂಟ್‌ರುಗಳೆ ಇರಲಿಲ್ಲ. ಫಲಿತಾಂಶ ಪ್ರಕಟಗೊಂಡು ಯಡಿಯೂರಪ್ಪ ಅವರ ಮಗ ರಾಘವೇಂದ್ರ ಗೆಲುವಿನ ನೆಗೆ ಬೀರಿದ್ದರು. ಅನಾರೋಗ್ಯದಿಂದ ಬಸವಳಿದು, ಬರಿಗೈ ಫಕೀರನಂತೆ ತಟ್ಟಾಡಿಕೊಂಡು ಓಡಾಡಿದ ಬಂಗಾರಪ್ಪ ಕೇವಲ ೫೨.೮೯೩ ಮತಗಳ ಅಂತರದಲ್ಲಿ ಸೋಲುಂಡಿದ್ದು ಯಡಿಯೂರಪ್ಪ ಅವರಿಗೆ ಸಮಾಧಾನ ತಂದಿರಲಿಲ್ಲ. . ಬಂಗಾರಪ್ಪ ಅವರ ಠೇವಣಿ ಕಳೆಯಬೇಕು ಎಂದು ಶತಪಥಗುಟ್ಟಿದ್ದ , ಅದಕ್ಕಾಗಿ ಏನೆಲ್ಲಾ ಮಾಡಿದ್ದ ಯಡಿಯೂರಪ್ಪ ಅವರ ಆಕ್ರೋಶ ಸ್ಪೋಟಗೊಂಡಿತ್ತು. ಕೈಯಲ್ಲಿ ಮುಖ್ಯಮಂತ್ರಿ ಪದವಿ ಇಟ್ಟುಕೊಂಡು, ಹತ್ತಾರು ಕೋಟಿಗಳನ್ನು ಸುರಿದರೂ ಇಷ್ಟು ಸಣ್ಣ ಪ್ರಮಾಣದ ಮಾರ್ಜಿನ್ ಲೀಡ್ ಅವರನ್ನು ಕೆಂಗೆಡಿಸಿತ್ತು (ಇದೇ ಈಶ್ವರಪ್ಪ ಅವರ ಮೇಲಿನ ಮುನಿಸಿಗೂ ಕಾರಣವಾಯಿತು, ಅದು ಮತ್ತೊಂದು ಕತೆ)

ಬಂಗಾರಪ್ಪ ಜನರ ಮೇಲಿನ ನಂಬಿಕೆಯಲ್ಲಿ ನೈತಿಕವಾಗಿ ಗೆದ್ದಿದ್ದರು. ಅಲ್ಲಿಂದ ಮುಂದೆ ನಡೆದದ್ದು ಬಂಗಾರಪ್ಪ ಎಂಬ ಜನನಾಯಕನ ದುರಂತ ಪತನಪರ್ವ…..

ಈ ಬಾರಿ ಲೋಕಸಭಾ ಚುನಾವಣೆ ಯಡಿಯೂರಪ್ಪ ಮತ್ತು ಬಂಗಾರಪ್ಪ ಕುಟುಂಬದ ನಡುವಿನ ಮತ್ತೊಂದು ಸುತ್ತಿನ ಕದನ ನಡೆದಿರುವಾಗ ಬಂಗಾರಪ್ಪ ಮತ್ತೆ ನೆನಪಾದರು.

ಬಿಜೆಪಿಗೆ ಹೋದ ಇದೇ ಬಂಗಾರಪ್ಪ ಅವರನ್ನು ಮಂಗ ಎಂದು ಲೇವಡಿ ಮಾಡಿದ್ದ ಫೈರ್ ಬ್ರಾಂಡ್ ಜನಾರ್ಧನ ಪೂಜಾರಿ ಎಸ್. ಎಂ ಕೃಷ್ಣ ಅವರುಗಳು ತಮ್ಮ ರಾಜಕೀಯ ಇಳಿಸಂಜೆಯಲ್ಲಿ ದೇಶಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂದು ಹೇಳಿದಾಗ ಬಂಗಾರಪ್ಪ ಅವರ ಕಾಲದ ಇವರ ನಡೆಯ ವೈರುಧ್ಯವನ್ನು ಕಂಡು ಅಸಹ್ಯವೆನಿಸಿತು.

ಡಿ.ಬಿ. ಚಂದ್ರೇಗೌಡ ,ಶ್ರೀನಿವಾಸ್ ಪ್ರಸಾದ್‌ರಂತಹ ಒಂದು ಕಾಲದ ಸಕ್ಯೂಲರ್‌ಗಳು ಬಿಜೆಪಿ ಸೇರಿದ್ದು ಸಿದ್ದಾಂತಕ್ಕೆ ನಿಲುಕದ ನಡೆ. ೧೫ ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ದಲಿತ ನಾಯಕ ಕೆ.ಬಿ ಶಾಣಪ್ಪ ಈಗ ಅಗ್ರಹಾರದಿಂದ ನಿಷ್ಕಾರುಣ್ಯವಾಗಿ ಹೊರನೂಕಿದ ಮಗುವಿನಂತೆ ಬಂದು ಮಲ್ಲಿಕಾರ್ಜುನ ಖರ್ಗೆ ಅವರ ಎದೆಗೆ ಆತುಕೊಂಡಿದ್ದಾರೆ. ಇನ್ನೂ ಹಲವರ ಸರದಿ ಬಾಕಿ ಇದೆ.

ಕಾಲ ಎಲ್ಲವನ್ನೂ ಕಂಡುಂಡು ಉರುಳಲಿದೆ…..

‍ಲೇಖಕರು avadhi

April 4, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. BVKULKARNI

    mr Bangarappa was a Mass leader came from Gopal Gowda school of socialist. when he became CM, people expected lot from him. But he became Corrupt, and misGovernance. By the time he joined BJP, he had lost his leadership and credibility in politics. He had lost his sheen by then. He did not do good work as CM. That way Siddaramaiah tenure was good in 2013-2018. had he not touched controversy of Lingayats and neglecting certain sections, he would have come back.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: