ಕಕ್ಷೆಯಲ್ಲಿ 'ನಾಟಕ'

ಕಕ್ಷೆಯಲ್ಲಿ ನಾಟಕೀಯ ರಾಜಕೀಯ
ನಾಗೇಶ್ ಹೆಗಡೆ 
ಬಾಲಕೋಟ್ ದಾಳಿಯಂಥ ತುರ್ತು ಸ್ಥಿತಿಯೇನೂ ಇರಲಿಲ್ಲ ಈಗ. ಅಮೇರಿಕಾ, ರಷ್ಯಾ, ಚೀನಾ ದೇಶಗಳ ಮಾದರಿಯಲ್ಲಿ ನಾವೂ ಉಪಗ್ರಹಗಳನ್ನು ಹೊಡೆದು ಉರುಳಿಸುವ ತಾಂತ್ರಿಕ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ೨೦೧೨ರಲ್ಲೇ ನಮ್ಮ ರಕ್ಷಣಾ ಸಂಶೋಧನಾ ಸಂಸ್ಥೆಗೆ ನಿರ್ದೇಶನ ನೀಡಲಾಗಿತ್ತು.
ಅದು ಸಾಕಷ್ಟು ಕ್ಲಿಷ್ಟ ತಂತ್ರಜ್ಞಾನ ಆಗಿತ್ತು. ನಮ್ಮ ವಿಜ್ಞಾನಿಗಳು ಅದನ್ನೂ ಸಾಧಿಸಿದರು, ‘ಶಾಭಾಸ್’ ಎನ್ನೋಣ. ಎರಡು ತಿಂಗಳ ಹಿಂದೆಯೇ ‘ನಾವು ಆ ಸಾಹಸ ಪ್ರದರ್ಶನಕ್ಕೆ ರೆಡಿ” ಎಂದು ಸರಕಾರಕ್ಕೆ ತಿಳಿಸಿದರು. ಕಕ್ಷೆಯಲ್ಲಿ ಸುತ್ತುತ್ತಿರುವ ನಮ್ಮದೇ ೪೮ ಉಪಗ್ರಹಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಅದನ್ನೇ ಹೊಡೆದು ಉರುಳಿಸುವ ಸಿದ್ಧತೆ ಮಾಡಿಕೊಂಡಿದ್ದರು.
ಅದನ್ನು ಜನವರಿಯಲ್ಲಿ ಹೊಡೆದರೂ ಆಗುತ್ತಿತ್ತು, ಬರುವ ಜೂನ್ ನಲ್ಲಿ ಹೊಡೆದರೂ ಆಗುತ್ತಿತ್ತು. ಚುನಾವಣೆ ಇಷ್ಟು ಸಮೀಪ ಇರುವಾಗ (ಕಾಕತಾಳೀಯವೋ ಏನೋ ಮಾರ್ಚ್ ೨೭ರ ‘ಜಾಗತಿಕ ರಂಗನಾಟಕ ದಿನ’ವೇ) ಅದನ್ನು ಹೊಡೆದು ಹಾಕಿದ್ದಾಯಿತು.
ಚುನಾವಣೆಯ ತುಸು ಮುಂಚೆ ಜನರನ್ನು ಸೆಳೆಯಲು ಏನೆಲ್ಲಾ ನಾಟಕಗಳ ಪ್ರದರ್ಶನ ನಡೆಯುತ್ತವೆ. ಒಂದು ಕಡೆ ರಾಗಾ ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಕಡು ಬಡವರಿಗೆ ತಿಂಗಳಿಗೆ ೬೦೦೦ ರೂಪಾಯಿಗಳ ‘ನ್ಯಾಯ್’ ಕೊಡುತ್ತೇನೆ ಎಂದು ಘೋಷಿಸುತ್ತಾರೆ. ಇನ್ನೊಂದು ಕಡೆ ಮೋದಿ ಆಕಾಶಕ್ಕೆ ಕೈ ತೋರಿಸಿ ಉಪಗ್ರಹದ ಚಿಂದಿ ಉಡಾಯಿಸಿದ ನಮ್ಮವರ ತಾಂತ್ರಿಕ ಸಾಧನೆಯನ್ನು ಕೊಂಡಾಡುತ್ತಾರೆ.
ಕಕ್ಷೆಯಲ್ಲಿ ನುಚ್ಚು ನೂರಾದ ಆ ಉಪಗ್ರಹದ ತುಣುಕುಗಳು ಇನ್ನು ಕೆಲವೇ ದಿನಗಳಲ್ಲಿ ವಾತಾವರಣಕ್ಕೆ ಇಳಿದು ಬಂದು ಉರಿದು ಬೂದಿ ಆಗುತ್ತವಂತೆ. ಇನ್ನೇನು “ಸ್ವಚ್ಛ ಭಾರತ್ ” ಅಭಿಯಾನವನ್ನೇ ಕಕ್ಷೆಗೆ ಏರಿಸಿದರು ನಮ್ಮ ಪ್ರಧಾನಿ ಎಂದು ಭಕ್ತರು ಜೈಕಾರ ಹಾಕಬಹುದು. ನೆಲಮಟ್ಟದ ವೈಫಲ್ಯಗಳನ್ನು ಮುಚ್ಚಿಡಲು ಇದಕ್ಕಿಂತ ದೊಡ್ಡ ನಾಟಕ ಬೇಕೇ?
Actually, ಕ್ಷಿಪಣಿ ಹಾರಿಸಿ ಉಪಗ್ರಹವನ್ನು ಉರುಳಿಸುವುದೂ ಹಳೆಯ ತಂತ್ರಜ್ಞಾನ.
ನೆಲದ ಮೇಲಿಂದಲೇ ಲೇಸರ್ ಕಿರಣ ಹಾಯಿಸಿ ಗಗನನೌಕೆಗಳನ್ನು ಈಗ ನಿಷ್ಕ್ರಿಯ ಮಾಡಬಹುದು.
ಪ್ರಾಯಶಃ ನಮ್ಮ ರಕ್ಷಣಾ ವಿಜ್ಞಾನಿಗಳು ಅದಕ್ಕೂ ತಯಾರಿ ಮಾಡಿಕೊಳ್ಳುತ್ತಿರಬಹುದು. ಇನ್ನು ಐದು ವರ್ಷಗಳ ನಂತರ ಅದೇನಾದರೂ ಸಾಧ್ಯ ಆದರೆ, ೨೦೨೪ರ ಚುನಾವಣೆಯ ವೇಳೆಯಲ್ಲಿ ಕಕ್ಷೆಗೆ ಲೇಸರ್ ಕಿರಣ ಬಿಟ್ಟು ಮತದಾರರ ಗಮನವನ್ನು ಅತ್ತ ಸೆಳೆಯಬೇಡಿ
ಜನಕ್ಕೆ ಮೊದಲು ನೀರು ಕೊಡಿ, ಉದ್ಯೋಗ ಕೊಡಿ, ಕಿರು ಉದ್ಯಮ ನಡೆಸಲು ನಿರಂತರ ವಿದ್ಯುತ್ ‘ಶಕ್ತಿ’ ಕೊಡಿ, ಉಸಿರಾಡಲು ಶುದ್ಧ ಗಾಳಿ ಕೊಡಿ, ಓಡಾಡಲು ಚೊಕ್ಕಟ ಹಾದಿ ಕೊಡಿ, ‘ಬರೀ ಸ್ಲೋಗನ್ ಕೊಡಬೇಡಿ’ ಎಂದು ಕೇಳಬೇಕು.

ಕಾವಲುಗಾರ ಹೆಗಲಿಗೆ, ದುಃಖದುಮ್ಮಾನ ಮಗಳಿಗೆ:


ಈ ಚಿತ್ರವನ್ನು ಯಾರು ತೆಗೆದಿದ್ದೊ ಏನೊ, ಆದರೆ ಇಂದಿನ ದಿನಗಳಲ್ಲಿ ಅತ್ಯಂತ ಸಾಂದರ್ಭಿಕ ಚಿತ್ರವಾಗಿದೆ.
ಆಕಾಶದ ಮತ್ತು ಬಾಹ್ಯಾಕಾಶದ ಸಾಧನೆಯನ್ನೇ ತನ್ನ ಸಾಧನೆ ಎಂಬಂತೆ ಹೆಗಲಮೇಲೆ ಕೂರಿಸಿ ಮೆರೆಯುವುದು; ನೆಲಮಟ್ಟದ ಕಷ್ಟ ಕಾರ್ಪಣ್ಯಗಳನ್ನು ಮರೆಯುವುದು. ಇವೆರಡನ್ನೂ ಈ ಚಿತ್ರ ಪ್ರತಿನಿಧಿಸುತ್ತದೆ.
‘ಹಸಿವೆಯ ಸೂಚ್ಯಂಕ’ದಲ್ಲಿ ಭಾರತದ ಶ್ರೇಯಾಂಕ ತೀರಾ ಕೆಳಕ್ಕಿದೆ . 119 ದೇಶಗಳ ಪೈಕಿ ನಮ್ಮ ಶ್ರೇಯಾಂಕ 103 ಇದೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ನವಜಾತ ಶಿಶುಗಳು ಸಾಯುತ್ತಿವೆ. ಬಡವರಿಗೆ ಅಷ್ಟಿಷ್ಟು ದುಡಿಮೆ ಕೊಡುತ್ತಿದ್ದ ನರೇಗಾ MNREGA ಯೋಜನೆಯಲ್ಲಿ ಕೇಂದ್ರ ಸರಕಾರ ಧನಸಹಾಯ ಕಡಿತ ಮಾಡಿದೆ.
ಹಸಿದವರಿಗೆ ಅಷ್ಟಿಷ್ಟು ಊಟ ಕೊಡುತ್ತಿದ್ದ ಯೋಜನೆಗಳೂ ‘ಆಧಾರ್’ ಎಡವಟ್ಟುಗಳಿಂದಾಗಿ ಗ್ರಾಮೀಣ ಮಹಿಳೆಯರ ಕೈತಪ್ಪುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಿಂದೆಂದಿಗಿಂತ ಹದಗೆಟ್ಟಿವೆ. ಕೃಷಿಗೆ ವಿದಾಯ ಹೇಳಿ ಕೂಲಿನಾಲಿ ಹುಡುಕುವ ‘ಅಸಂಘಟಿತ ಕಾರ್ಮಿಕ’ರ ಸಂಖ್ಯೆ ಅಪಾರವಾಗಿ ಹೆಚ್ಚುತ್ತಿದೆ.
ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ಭಾರತದ ಶ್ರೇಯಾಂಕ 130ರಷ್ಟು ಕೆಳಕ್ಕಿದೆ. ‘ಸಂತಸ ಶ್ರೇಯಾಂಕ’ ಕೂಡ ಅಷ್ಟೇ ಕೆಳಕ್ಕಿದೆ. (130). ಅದು ಮೇಲೇರುವ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ 40 ವರ್ಷಗಳಿಂದಲೂ ಕುಸಿಯುತ್ತಿದ್ದ ಗ್ರಾಮಭಾರತದ ಸ್ಥಿತಿಗತಿ ಈಗ ಇನ್ನಷ್ಟು ಕುಸಿಯುತ್ತಿದೆ. ಮೇಲಕ್ಕೆ ಏರುತ್ತಿರುವುದು ಡಾಲರ್ ಶತಕೋಟ್ಯಧೀಶರ ಸಂಖ್ಯೆ; ಅದೂ 130ರ ಆಸುಪಾಸು ಇದೆ!
ಈಗ ಈ ಚಿತ್ರವನ್ನು ಮತ್ತೊಮ್ಮೆ ನೋಡಿ.
ಇಂಥ ಸಂಗತಿಗಳ ಬಗ್ಗೆ ಚಾನೆಲ್ಲುಗಳು, ಅಭ್ಯರ್ಥಿಗಳು ಚರ್ಚೆ ಮಾಡುತ್ತಿದ್ದರೆ ತಿಳಿಸಿ. ಈ ಚಿತ್ರ ತೆಗೆದವರ ಹೆಸರು ಗೊತ್ತಿದ್ದರೂ ತಿಳಿಸಿ.

‍ಲೇಖಕರು avadhi

April 4, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: