ಮೊಹಿದೀನರ ಪತ್ನಿ..

ರಹಮತ್ ತರೀಕೆರೆ 

ನಾನು ಈಚೆಗೆ ಓದಿ ತುಂಬ ಪ್ರಭಾವಿತನಾದ ಆತ್ಮಕಥೆಯೆಂದರೆ `ನನ್ನೊಳಗಿನ ನಾನು’.

ಇದು ಅರಸು-ರಾಮಕೃಷ್ಣ ಹೆಗಡೆ- ಪಟೇಲರ ಕಾಲದಲ್ಲಿ ಶಾಸಕರೂ ಮಂತ್ರಿಗಳೂ ಆಗಿದ್ದ, ಹಳಗಾಲದ ಮೌಲ್ಯಾದರ್ಶ ರಾಜಕಾರಣದ ಪ್ರತಿನಿಧಿಯಂತಿದ್ದ, ಬಿ.ಎ. ಮೊಹಿದೀನ್ ಅವರ ಆತ್ಮಕಥೆ.

ಇದರೊಳಗಿನ ಕೊನೆಯ ಭಾಗ ನನ್ನನ್ನು ಹಿಡಿದು ಅಲ್ಲಾಡಿಸಿಬಿಟ್ಟಿತು. ಇದು ನನ್ನನ್ನು ಒಳಗೊಂಡಂತೆ ಅನೇಕ ಪುರುಷರು, ತಮ್ಮ ಬಾಳಿನಲ್ಲಿ ಮಾಡಿರಬಹುದಾದ ತಪ್ಪು, ತೋರಿರಬಹುದಾದ ಸಣ್ಣತನ ಮತ್ತು ಕಲಿತಿರಬಹುದಾದ ಪಾಠದ ಹಾಗೆ ತೋರಿತು.

ಆ ಭಾಗ ಹೀಗಿದೆ:

ಪ್ರತಿದಿನವೂ ನನ್ನನ್ನು ಕಾಡುತ್ತಿರುವ ಈ ಒಂದು ವಿಷಯವನ್ನು ನಿಮ್ಮಲ್ಲಿ ಹೇಳಿಕೊಳ್ಳದೇ ಹೋದರೆ ಅದೊಂದು ಆತ್ಮವಂಚನೆಯಾದೀತು. ಮಾತ್ರವಲ್ಲ, ಆ ವಂಚನೆಯನ್ನು ಸಹಿಸಿಕೊಳ್ಳಲೂ ನನಗಾಗದು. ವಿಷಯ ಏನೂ ಎಂದರೆ, ನಾನೊಮ್ಮೆ ನನ್ನ ಪತ್ನಿ ಖತೀಜಾಳಿಗೆ ಹೊಡೆದುಬಿಟ್ಟೆ. ಇದು ನಾನು ನನ್ನ ಜೀವನದಲ್ಲಿ ಮಾಡಿದ ಒಂದು ಬಹಳ ದೊಡ್ಡ ತಪ್ಪು. ಈ ತಪ್ಪು ಇಂದಿಗೂ ನನ್ನನ್ನು ಕೊರೆಯುತ್ತಿದೆ. ಆ ಘಟನೆಯನ್ನು ನೆನೆದಾಗಲೆಲ್ಲ ನಾಚಿಕೆಯಾಗುತ್ತಿದೆ.

ಅದು ನನ್ನ ಚಿಕ್ಕಮಗಳ ಮದುವೆಯ ಸಂದರ್ಭ. ಮನೆಯ ಹೆಂಗಸರು ನೆಂಟರು ಎಲ್ಲ ಮದುಮಗಳನ್ನು ಕರೆತರಲು ಮದುಮಗನ ಮನೆಗೆ ಹೊರಟು ನಿಂತಿದ್ದರು. ಅವರ ಜೊತೆ ಖತೀಜಾಳೂ ಹೊರಟಿದ್ದಳು. ಎಲ್ಲರೂ ತಯಾರಾಗಿ ನಿಂತು ಇವಳಿಗಾಗಿ ಹೊರಗೆ ಕಾಯುತ್ತಿದ್ದರು. ಎಷ್ಟು ಹೊತ್ತಾದರೂ ಇವಳು ಕೋಣೆಯಿಂದ ಹೊರಬರುವುದು ಕಾಣಲಿಲ್ಲ. ನಾನು ಒಳಗೆ ಹೋಗಿ ನೋಡಿದರೆ, ಮನೆಯ ಇಬ್ಬರು ಕೆಲಸದ ಬಾಲಕಿಯರಿಗೆ ಅಲಂಕಾರ ಮಾಡುತ್ತಿದ್ದಳು. ಆ ಬಾಲಕಿಯರು ನಮ್ಮ ದೂರದ ಬಂಧುವೊಬ್ಬರ ಮಕ್ಕಳು. ಅವರು ತುಂಬಾ ಬಡತನದಲ್ಲಿದ್ದುದರಿಂದ ನಮ್ಮ ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದೆವು. ಇವಳು ಅವರಿಬ್ಬರಿಗೆ ಹೊಸಬಟ್ಟೆಹಾಕಿಸಿ ತಲೆಬಾಚಿ, ಹೂಮುಡಿಸುತ್ತಿದ್ದಳು. ಇದನ್ನು ಕಂಡ ನನಗೆ ಎಲ್ಲಿಲ್ಲದ ಕೋಪ ಬಂತು.

“ಅವರಿಗೆ ಯಾಕೆ ಅಲಂಕಾರ ಮಾಡ್ತಿಯಾ, ಎಲ್ಲಿಗೆ ಕರೆದುಕೊಂಡು ಹೋಗ್ತೀಯಾ?’’ ಕೇಳಿದೆ. ಆ ಬಾಲಕಿಯರ ಅಲಂಕಾರದ ಸಂಭ್ರಮದಲ್ಲೇ ಮುಳುಗಿದ್ದ ಅವಳು “ಬಡವರ ಮಕ್ಕಳು ಪಾಪ. ನಮ್ಮ ಜೊತೆ ಬರಲಿ’’ ಎಂದಳು. ಅಷ್ಟು ಹೇಳಿದ್ದೇ ತಡ, ನಾನು ಕೋಪ ತಡೆಯಲಾರದೆ ಅವಳ ಕೆನ್ನೆಗೊಂದು ಬಾರಿಸಿಬಿಟ್ಟೆ. ಅವಳು ಒಮ್ಮೆಲೇ ನಡುಗಿಬಿಟ್ಟಳು. ಅವಳಿಗೆ ಇದು ಅನೀರಿಕ್ಷಿತವಾಗಿತ್ತು. ಅರ್ಥವಾಗದೆ ನನ್ನನ್ನೇ ದಿಟ್ಟಿಸುತ್ತಿದ್ದ ಅವಳ ಕಣ್ಣುಗಳಲ್ಲಿ ನೀರಧಾರೆ ಹರಿಯತೊಡಗಿತು. ಇದು ಮನೆಯಲ್ಲಿ ದೊಡ್ಡ ವಿಷಯವಾಯಿತು. ಮನೆಯಲ್ಲಿದ್ದವರ ಸಂಭ್ರಮವೆಲ್ಲ ಕರಗಿಹೋಯಿತು. ಆಮೇಲೆ ಅವಳು ಮಗಳನ್ನು ಕರೆತರಲು ಹೋಗಲಿಲ್ಲ. ಅಳುತ್ತಾ ಕೋಣೆ ಸೇರಿದಳು. ಸಂಭ್ರಮದಲ್ಲಿದ್ದ ಆ ಕೆಲಸದ ಮಕ್ಕಳೂ ಮೂಲೆ ಸೇರಿದವು. ಇಡೀ ಕಾರ್ಯಕ್ರಮವೇ ಹಾಳಾಗಿಬಿಟ್ಟಿತು.

ಅವಳು ಬಹಳ ದಿನ ನನ್ನೊಡನೆ ಮಾತನಾಡಲಿಲ್ಲ. ನನಗೂ ಅವಳ ಮುಖ ನೋಡಲು ಧೈರ್ಯವಿರಲಿಲ್ಲ. ಆಮೇಲೆ ಈ ಘಟನೆಯನ್ನು ನಾನು ಮರೆತುಬಿಟ್ಟಿದ್ದೆ. ಅವಳು ಸಹಜವಾಗಿಯೇ ಇದ್ದಳು. ಒಂದು ದಿನ ಅವಳು ನನ್ನಲ್ಲಿ ಕೇಳಿದಳು “ನೀವು ಅಂದು ನನ್ನನ್ನು ಯಾಕೆ ಹೊಡೆದಿರಿ? ನಾನೇನು ತಪ್ಪು ಮಾಡಿದ್ದೆ’’ ಎಂದು. “ಮತ್ತೆ ನೀನು ಆ ಕೆಲಸದ ಮಕ್ಕಳನ್ನು ಕರೆದುಕೊಂಡು ಮದುಮಗಳನ್ನು ಕರೆತರಲು ಬೀಗರ ಮನೆಗೆ ಹೊರಟಿದ್ದಿಯಲ್ಲಾ, ಇದು ಸರಿಯಾ? ಅಷ್ಟೂ ನಿನಗೆ ಗೊತ್ತಾಗುವುದಿಲ್ಲವಾ?’’ ಕೇಳಿದೆ.

“ಅವರನ್ನು ನಾನು ಎಂದೂ ಕೆಲಸದ ಮಕ್ಕಳಂತೆ ನೋಡಿಲ್ಲ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಸ್ವಂತ ಮಕ್ಕಳಂತೆ ಸಮಾನವಾಗಿ ಕಂಡಿದ್ದೇನೆ. ಪಾಪ. ಬಡವರ ಮಕ್ಕಳು. ಮನೆ, ತಂದೆ-ತಾಯಿ ಎಲ್ಲರನ್ನು ಬಿಟ್ಟು ಹೊಟ್ಟೆಯ ಹಸಿವಿಗಾಗಿ ಇಲ್ಲಿಗೆ ಕೆಲಸಕ್ಕೆ ಬಂದಿದ್ದಾರೆ. ಅವರಿಗೆ ಎಲ್ಲಿಗಾದರೂ ಹೋಗಲಿಕ್ಕಿದೆಯಾ ಹೇಳಿ. ನಮ್ಮ ಮಕ್ಕಳ ಹಾಗೆಯೇ ಅವರಿಗೂ ಆಸೆಗಳಿರುವುದಿಲ್ಲವಾ? ಮದುವೆ, ಸಭೆ ಸಮಾರಂಭಗಳಿಗೆ ಹೊಸಬಟ್ಟೆ ಧರಿಸಿಕೊಂಡು ಹೋಗಬೇಕೂಂತ ಕನಸುಗಳಿರುವುದಿಲ್ಲವಾ? ಆ ಮಕ್ಕಳು ಅಂದು ಎಷ್ಟೊಂದು ಸಂಭ್ರಮದಲ್ಲಿದ್ದರು. ಎಲ್ಲ ಹಾಳುಮಾಡಿಬಿಟ್ಟಿರಿ ನೀವು. ಬಡವರು, ಶ್ರೀಮಂತರು, ನಮ್ಮ ಮಕ್ಕಳು, ಬೇರೆಯವರ ಮಕ್ಕಳು, ಕೆಲಸಮಕ್ಕಳು ಎಂದು ಯಾವತ್ತೂ ಅಸಮಾನತೆಯಿಂದ ನೋಡಬಾರದು. ಭೇದ-ತಾರತಮ್ಯ ಮಾಡಬಾರದು. ಬಡವರಾಗಿ ಹುಟ್ಟಿದ್ದು ಅವರ ತಪ್ಪಲ್ಲ. ಅವರನ್ನು ಬಡವರಾಗಿ ಕಾಣುವುದು, ಕೆಲಸದವರೆಂದು ಕೀಳಾಗಿ ನಡೆಸಿಕೊಳ್ಳುವುದು ತಪ್ಪು. ನನಗಂತೂ ಅದು ಸಾಧ್ಯವೇ ಇಲ್ಲ…’’ ಎಂದಳು.

ಅವಳು ಹೇಳಿದ ಆ ಮಾತು ನನ್ನ ಕಣ್ಣು ತೆರೆಸಿತು. ನನ್ನ ಬದುಕಿನ ದಾರಿಯನ್ನೇ ಬದಲಿಸಿತು. ನನ್ನಲ್ಲಿ ಹೊಸ ಚಿಂತನೆಯನ್ನು ಹುಟ್ಟುಹಾಕಿತು. ಅಂದಿನಿಂದ ಬದುಕಿನಲ್ಲಿ ನಾನು ಯಾರನ್ನೂ ಭೇದ-ಭಾವದಿಂದ ನೋಡಿಲ್ಲ. ಅಸಮಾನತೆಯಿಂದ ಕಂಡಿಲ್ಲ. ಸಮಾನತೆ, ಜಾತ್ಯತೀತತೆ, ಸಹೋದರತೆಯನ್ನು ನಾನು ನನ್ನ ಪ್ರೀತಿಯ ಪತ್ನಿ ಖದೀಜಾಳಿಂದ ಕಲಿತೆ. ಅವಳು ಕಲಿಸಿದ ಈ ಸಿದ್ಧಾಂತವನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ. ಈಗಲೂ ಒಮ್ಮೊಮ್ಮೆ ಅವಳು ಅಂದಿನ ಘಟನೆಯನ್ನು ನೆನಪಿಸುತ್ತಾಳೆ. ಆಗೆಲ್ಲ ಅವಳ ಮುಗ್ಧಮುಖ ನೋಡಲಾಗದೇ ನಾನು ಮುಖ ತಿರುಗಿಸುತ್ತೇನೆ. ನನಗೆ ನಾಚಿಕೆಯಾಗುತ್ತದೆ. ಪಶ್ಚಾತ್ತಾಪದಿಂದ ತಲೆತಗ್ಗಿಸುತ್ತೇನೆ.

ನನ್ನ ಖತೀಜಾಳಿಗೆ ಮಾತು ಬಹಳ ಕಡಿಮೆ. ಮನೆಗೆ ಯಾರು ಬಂದರೂ ಅವರೊಡನೆ ಹೆಚ್ಚು ಮಾತನಾಡುವದಿಲ್ಲ. ಬೆರೆಯುವುದಿಲ್ಲ. ಯಾವುದೇ ವಿಷಯದಲ್ಲಿ ಚರ್ಚೆ, ತಕರಾರು ಇಲ್ಲ. ಅವಳದೇ ಲೋಕ. ಅವಳಷ್ಟಕ್ಕೇ ಅವಳು. ಮನೆಯೊಳಗೆ ಅವಳ ಧ್ವನಿಯೂ ಯಾರಿಗೂ ಕೇಳಿಸುವುದಿಲ್ಲ. ಅವಳಿದ್ದಾಳೆಂದೇ ಗೊತ್ತಾಗುವುದಿಲ್ಲ. ಇಂತಹ ಮುಗ್ಧೆ, ಅವಿದ್ಯಾವಂತೆಯಿಂದ ನಾನು ಬದುಕಿನಲ್ಲಿ ಬಹಳ ದೊಡ್ಡಪಾಠ ಕಲಿತೆ. ಈಗಲೂ ನನ್ನ ಮುಂದೆ ಬಂದು ನಿಂತಾಗ ಅವಳ ಮುಗ್ಧಮುಖ, ನಿಷ್ಕಳಂಕ ಕಣ್ಣುಗಳನ್ನು ದಿಟ್ಟಿಸುತ್ತಾ ನಾನು ಮೌನವಾಗಿಬಿಡುತ್ತೇನೆ. ಅವಳನ್ನು, ಅವಳ ಸುಂದರ ಮುಖವನ್ನು, ಅವಳ ಪವಿತ್ರವಾದ ಪ್ರೀತಿಯನ್ನು ಹೃದಯದಲ್ಲಿ ತುಂಬಿಕೊಳ್ಳುತ್ತಾ, ನೆನಪಿಸಿಕೊಳ್ಳುತ್ತಾ ಕಣ್ಣು ಮುಚ್ಚುತ್ತೇನೆ.

ಬದುಕಿನುದ್ದಕ್ಕೂ ಇಂತಹ ಒಂದು ಹೆಣ್ಣು ನನಗೆ ಸಿಕ್ಕಿದ್ದು ನನ್ನ ಪುಣ್ಯ, ಸೌಭಾಗ್ಯ, ದೇವರು ನನಗೆ ಕರುಣಿಸಿದ ಒಂದು ವರ ಎಂದು ಭಾವಿಸಿದ್ದೇನೆ. ಅವಳ ಬಗ್ಗೆ ನೆನೆಯುವಾಗಲೆಲ್ಲ ಹೃದಯಾಂತರಾಳದಿಂದ ಪ್ರೀತಿ, ಹೆಮ್ಮೆ ಉಕ್ಕಿ ಬರುತ್ತದೆ. ಆಗೆಲ್ಲ ಕಣ್ಣುಗಳು ಒದ್ದೆಯಾಗುತ್ತವೆ. ದೇವರು ನನ್ನ ಖತೀಜಾಳಿಗೆ ಒಳ್ಳೆಯದನ್ನು ಮಾಡಲಿ.’’

ಸಾಮಾನ್ಯವಾಗಿ ಗಂಡಸರಿಗೆ ಅದರಲ್ಲೂ ಸಾರ್ವಜನಿಕ ವ್ಯಕ್ತಿಗಳಾಗಿರುವವರಿಗೆ ಸಹಜವಾಗಿ ರೂಢವಾಗಿರುವ ನಡಾವಳಿಗಳನ್ನು ಪಾಲಿಸುವ, ತಮ್ಮ ದೊಡ್ಡತನದ ಇಮೇಜನ್ನು ಕಾಪಾಡಿಕೊಳ್ಳುವ ಒಂದು ಗುಣವಿರುತ್ತದೆ. ಇದರ ಭರದಲ್ಲಿ ಅವರಿಗೆ ಆಸುಪಾಸಿನಲ್ಲಿರುವ ಅಧಿಕಾರವಿಲ್ಲದ ಸಾಮಾನ್ಯ ವ್ಯಕ್ತಿಗಳ ಭಾವನೆಗಳನ್ನು ಗಮನಿಸುವ ಸೂಕ್ಷ್ಮತೆಯೇ ಕಳೆದುಹೋಗಿರುತ್ತದೆ.

ವ್ಯಂಗ್ಯವೆಂದರೆ, ಇಂಥ ಅಸೂಕ್ಷ್ಮತೆ ತೋರುತ್ತಿರುವ ವ್ಯಕ್ತಿಯಾದರೊ, ಸಮಾಜವಾದಿ ರಾಜಕಾರಣದ ಗರಡಿಯಲ್ಲಿ ಬೆಳೆದವರು. ಅವರಿಗೆ ತಮ್ಮ ಮನೆಯಲ್ಲಿರುವ ಕೆಲಸದ ಮಕ್ಕಳ ಆಸೆ ಕನಸುಗಳನ್ನು ಅರ್ಥಮಾಡಿಕೊಳ್ಳಲು ಆಗಿಲ್ಲ. ಆದರೆ ಸಾರ್ವಜನಿಕ ವ್ಯಕ್ತಿಯಲ್ಲದ, ತನ್ನದೇ ಕುಟುಂಬವನ್ನು ಒಂದು ಜಗತ್ತೆಂದು ಪರಿಭಾವಿಸಿಕೊಂಡು ಬದುಕುವ, ಒಬ್ಬ ಸಾಮಾನ್ಯ ಗೃಹಿಣಿಗೆ ಇದು ಸಾಧ್ಯವಾಗಿದೆ.

ಮಾತ್ರವಲ್ಲ, ಅಧಿಕಾರಿವಿಲ್ಲದ ಜನರ ಭಾವನೆಗಳಿಗೆ ಸ್ಪಂದಿಸುವುದು ಜೀವನದಲ್ಲಿ ಎಷ್ಟು ಮುಖ್ಯವೆಂದು ಗಂಡನಿಗೆ ಆಕೆ ಹಿತವಚನ ಹೇಳುತ್ತಿದ್ದಾಳೆ. ಹಾಗೆ ಹೇಳುವಾಗ ಇರುವುದು ದೊಡ್ಡ ಆದರ್ಶಮೌಲ್ಯಗಳ ಬೋಧೆಯಲ್ಲ. ದೈನಿಕ ಬದುಕಿನಲ್ಲೇ ಹುಟ್ಟುವ ಸಾಮಾನ್ಯಪ್ರಜ್ಞೆ. ಕಾಮನ್‍ಸೆನ್ಸಿನಲ್ಲಿರುವ ಮಾನವೀಯತೆ. ಬುದ್ಧನ ಕರುಣೆ. ಗಾಢವಾದ ಸಮಾಜವಾದದ ಪಾಠ. ತಮ್ಮ `ಸಾಮಾನ್ಯ’ ಮಡದಿಯರಿಂದ, ಮಗಳಿಂದ ಪಾಠ ಕಲಿತಿರುವ ದೊಡ್ಡವರ ಪಟ್ಟಿ ಚರಿತ್ರೆಯಲ್ಲಿ ತುಂಬ ನಿಡಿದಾಗಿದೆ.

ಖತೀಜಾ-ಪೈಗಂಬರರ ಪತ್ನಿಯ ಹೆಸರು. ಇವರು ತಮ್ಮ ಕಾಲದಲ್ಲಿ ಆಗರ್ಭ ಶ್ರೀಮಂತರೂ ವ್ಯಾಪಾರಿ ಸಂಸ್ಥೆಯ ಒಡತಿಯೂ ಆಗಿದ್ದವರು. ಆದರೆ ಕರಾವಳಿಯ ಈ ಖತೀಜಾ ಹೀಗೆ ಸಾರ್ವಜನಿಕ ವ್ಯಕ್ತಿಯಲ್ಲ. ಒಬ್ಬ ಸಾಮಾನ್ಯ ಮಹಿಳೆ. ಬಡವರ ಮಕ್ಕಳ ಆಸೆಗಳನ್ನು ಅರಿತು ಸ್ಪಂದಿಸಬಲ್ಲ ಜೀವ. ತನ್ನ ಮಗಳನ್ನು ಕರೆತರುವ ಸಂಭ್ರಮದಲ್ಲಿ ಕೆಲಸದ ಮಕ್ಕಳೂ ಪಾಲುಗೊಳ್ಳಬೇಕು ಎಂಬ ಸಮುದಾಯ ಪ್ರಜ್ಞೆಯುಳ್ಳ ತಾಯಿ. ಅನಾಮಿಕೆಯಾದ ಈ ಹೆಣ್ಣುಪಾತ್ರವು, ಇಡೀ ಆತ್ಮಕತೆಯಲ್ಲಿ ಎರಡು ಪುಟದಲ್ಲಿ ಮಾತ್ರ ಬಂದರೂ, ಮನಸ್ಸಿನಲ್ಲಿ ಉಳಿದುಬಿಡುವಷ್ಟು ಪ್ರಭಾವಶಾಲಿಯಾಗಿದೆ.

ಖತೀಜಾರ ಈ ಪಾತ್ರವನ್ನು ಓದುವಾಗ ನನಗೆ `ಒಡಲಾಳ’ದ ಸಾಕವ್ವ, ಲಂಕೇಶರ `ಅವ್ವ’, ಕುವೆಂಪು ಅವರ `ಮದುಮಗಳು’ ಕಾದಂಬರಿಯ ದೊಡ್ಡಸೇಸಿ ಮುಂತಾದವರೆಲ್ಲ ನೆನಪಾದರು. ಭವ್ಯತೆ ಎನ್ನುವುದು ಉಸಿರುಬಿಗಿಹಿಡಿದು ನಿಲ್ಲಿಸಬಲ್ಲ ದೊಡ್ಡ ಪರ್ವತ, ಜಲಪಾತ, ವಾಸ್ತುಕಲೆಗಳಲ್ಲಿ ಮಾತ್ರವಲ್ಲ, ಗುಬ್ಬಚ್ಚಿ ತನ್ನ ಮರಿಗಳನ್ನು ನಾಯಿಯಿಂದ ರಕ್ಷಿಸಲು ಮಾಡುವ ಹೋರಾಟದಲ್ಲೂ ಇರಬಲ್ಲದು ಎಂದು ಭವ್ಯತಾತತ್ವದ ಮೀಮಾಂಸಕ ಎ.ಸಿ. ಬ್ರಾಡ್ಲೆಯವರ ವ್ಯಾಖ್ಯಾನವೂ ನೆನಪಾಯಿತು. ನಾವು ನಮ್ಮ ಮಕ್ಕಳಿಗೆ ತಂದೆ ತಾಯಾಗಿ, ಅವರ ಆಶೋತ್ತರಗಳಿಗೆ ಮಿಡಿಯುವುದು ದೊಡ್ಡ ಸಂಗತಿಯಲ್ಲ. ನಮ್ಮವಲ್ಲದ ಮಕ್ಕಳಿಗೂ ತಾಯಿತಂದೆ ಆಗುವುದು ಮಹತ್ವದ್ದು. ಖತೀಜಾ ಕನ್ನಡ ಸಾಹಿತ್ಯ ಕಂಡರಿಸಿರುವ ಅಪೂರ್ವವಾದ ಮಾನವೀಯ ಹೆಣ್ಣುಜೀವವಾಗಿದೆ. ಸಾಹಿತ್ಯದ ಮಾನವೀಯತೆ ಇರುವುದೇ ಇಂತಹ ಪಾತ್ರಗಳಲ್ಲಿ.

ಆತ್ಮಕಥೆಗಾರನ ದೊಡ್ಡತನವೆಂದರೆ, ತನ್ನ ದೋಷವನ್ನು ಪ್ರಾಂಜಲವಾಗಿ ಪರಿಭಾವಿಸುವುದು. ಜೀವನದ ಪಾಠವನ್ನು ಕಲಿತೆ ಎಂದು ಪುರುಷನಾಗಿ ಸಾರ್ವಜನಿಕ ವ್ಯಕ್ತಿಯಾಗಿ ಸಾರ್ವಜನಿಕವಾಗಿ ಹೇಳಿಕೊಳ್ಳುವುದು. ತನ್ನ ಜೀವನದಲ್ಲಿ ಅದು ದೊಡ್ಡ ಪಾಠವಾಯಿತು, ಬದುಕಿನ ಕ್ರಮವನ್ನೇ ಬದಲಿಸಿತು ಎಂದು ಘೋಷಿಸಿಕೊಂಡಿರುವುದು. ಆತ್ಮವಂಚನೆಯನ್ನು ತಾನೇ ಖಂಡಿಸಿಕೊಂಡಿರುವುದು.

ಮೊಹಿದೀನ್, ಕನ್ನಡದ ದೊಡ್ಡ ಬರೆಹಗಾರ ಇರಲಿಕ್ಕಿಲ್ಲ. ಆದರೆ ಅವರದು ಕರ್ನಾಟಕದ ಶ್ರೇಷ್ಠ ಮನಸ್ಸುಗಳಲ್ಲಿ ಒಂದು. ಅವರ ಸರಳತೆ ಪ್ರಾಮಾಣಿಕತೆ ಪರಿತಾಪದ ದನಿಯಿಂದ ಮೂಡಿರುವ ಈ ಬರೆಹ ಶ್ರೇಷ್ಠ ಬರೆಹವಾಗಿದೆ. ಜೀವನದಲ್ಲಿ ಮಾಡಿದ ತಪ್ಪನ್ನು ಪರಿಭಾವಿಸದೆ ಪರಿತಪಿಸದೆ ತಿದ್ದಿಕೊಳ್ಳದೆ ಇರುವವರು ಎಂದೂ ದೊಡ್ಡವರಾಗಲು ಸಾಧ್ಯವಿಲ್ಲ. ಅನೇಕಸಲ ನಾವು ಸಹಜವೆಂದು ಆಡುವ ಮಾತು, ತೋರುವ ವರ್ತನೆಯಲ್ಲಿರುವ ಈ ತಪ್ಪನ್ನು ತೋರಿಸಿಕೊಡುವುದು ಪವಿತ್ರ ಧರ್ಮಗ್ರಂಥಗಳಲ್ಲ; ಮಹಾತ್ಮರ ಅಮೃತವಾಣಿಯಲ್ಲ. ಸಾಮಾನ್ಯರಾದ ನಮ್ಮಷ್ಟು ಅಧಿಕಾರವಿಲ್ಲದ ಜನರು. ಕೆಲವೊಮ್ಮೆ ಅವರು ಮಾತಾಡಲಿಕ್ಕಿಲ್ಲ. ತಮ್ಮ ಮುಖಭಾವದಲ್ಲಿ ಕಣ್ಣೋಟದಲ್ಲಿ ನಮ್ಮ ಕ್ಷುದ್ರತನಕ್ಕೆ ಕನ್ನಡಿ ಹಿಡಿಯಬಲ್ಲರು.

ಕಾನೂನು ಮಾಡುವ ಹಾಗೂ ದೇಶವನ್ನು ಆಳುವ ರಾಜಕಾರಣಿ ಒಬ್ಬರನ್ನು, ಮನೆಯ ನಾಲ್ಕು ಗೋಡೆಯ ಒಳಗಿನ ಬದುಕನ್ನೇ ಜಗತ್ತನ್ನಾಗಿ ಪರಿಭಾವಿಸಿದ ಜೀವನವಿವೇಕವುಳ್ಳ ಅನಾಮಿಕ ಗೃಹಿಣಿಯೊಬ್ಬರು, ತಿದ್ದಬಲ್ಲರು. ಇದೇ ಹೊತ್ತಲ್ಲಿ ನನಗೆ ಚಂದ್ರಗುಪ್ತ ಚಾಣಕ್ಯರಿಗೆ ನಿಜವಾದ ರಾಜಕೀಯ ಪಾಠವನ್ನು, ಅವರಿಗೆ ಕೂಳುಬಡಿಸುವ ಒಬ್ಬ ಅಡುಗೂಲಜ್ಜಿ, ಅವರು ಉಣ್ಣುವ ಕ್ರಮವನ್ನು ಗಮನಿಸಿ ಹೇಳುವ ಪ್ರಸಂಗ ನೆನಪಾಗುತ್ತದೆ. ಮಕ್ಕಳಿಂದ ಆಳುಗಳಿಂದ ಜೀವನ ಸಂಗಾತಿಯಿಂದ ಕಲಿಯಬಲ್ಲ ಸೂಕ್ಷ್ಮತೆ ತೋರಬಲ್ಲವರು ಹೆಚ್ಚು ಮಾನವಂತರಾಗಬಲ್ಲರು.

ಮೊಹಿದೀನರ `ನನ್ನೊಳಗಿನ ನಾನು’ ಕನ್ನಡದ ಅತ್ಯುತ್ತಮ ಆತ್ಮಕಥೆಗಳಲ್ಲಿ ಒಂದು.

ಇದು ಮರಣದ ಸಾನಿಧ್ಯದಲ್ಲಿ ಕುಳಿತು, ಒಬ್ಬ ವ್ಯಕ್ತಿ ಬಾಳನ್ನು ಹಿಂತಿರುಗಿ ನೋಡಿಕೊಂಡು ದಾರ್ಶನಿಕ ಪ್ರಜ್ಞೆಯಲ್ಲಿ ಪರಿಭಾವಿಸಿದ ಪ್ರಬುದ್ಧವಾದ ಬರವಣಿಗೆ. ಇಲ್ಲಿನ ವಿವರಗಳು ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಬರೆಯುವವರಿಗೆ ಮಹತ್ವದ ಆಕರಗಳಾಗಿವೆ. ಮತೀಯವಾದದ ಆಡೊಂಬೊಲವಾಗಿರುವ ಕರ್ನಾಟಕದ ಅನೇಕ ಪ್ರದೇಶಗಳು, ಕೆಲವು ವರ್ಷಗಳ ಹಿಂದೆ ಎಂಥ ಘನವಾದ ಮಾನವೀಯ ಸಂಬಂಧಗಳ ಬದುಕನ್ನು ಕಟ್ಟಿಕೊಂಡಿದ್ದವು ಎಂಬುದನ್ನು ಈ ಕೃತಿ ಹೇಳುತ್ತದೆ.

ಈಗ ಮೊಹಿದೀನರು ನಮ್ಮ ಜತೆಯಿಲ್ಲ. ಆದರೆ ಅವರ ಆತ್ಮಕತೆಯಿದೆ-ನಮ್ಮ ವೈಯಕ್ತಿಕ ಹಾಗೂ ನಾಡಿನ ಸಾರ್ವಜನಿಕ ಆತ್ಮಸಾಕ್ಷ್ಮಿಯನ್ನು ಕಾಡಿಸುವ ಹಾಗೆ; ಕಲಿಯಬಲ್ಲವರಿಗೆ ರಾಜಕೀಯ ಪಾಠಗಳನ್ನು ಹೇಳಬಲ್ಲ ಗುರುವಿನ ಹಾಗೆ; ದೇಶವನ್ನು ಆಳುವವರಿಗೆ ಬೇಕಿರುವುದು ಬಾಹುಬಲವಲ್ಲ. ಅಂತಃಕರಣ ಎಂದು ಸೂಚಿಸುವ ಹಾಗೆ.

‍ಲೇಖಕರು avadhi

April 4, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ನರಸಿಂಹಮೂರ್ತಿ ಹಳೇಹಟ್ಟಿ

    ತರೀಕೆರೆ ಸರ್ ನೀಡಿರುವ ‘ನನ್ನೊಳಗಿನ ನಾನು’ ಆತ್ಮಕಥೆಯ ಒಳನೋಟ ತುಂಬಾ ಸೊಗಸಾಗಿದೆ; ಓದಲು ಪ್ರೇರೇಪಿಸುತ್ತದೆ. ಧನ್ಯವಾದಗಳು ಸರ್….

    ಪ್ರತಿಕ್ರಿಯೆ
  2. C P Nagaraja

    ಬರಹವನ್ನು ಓದಿ ಮುಗಿಸುತ್ತಿದ್ದಂತೆಯೇ ನನ್ನ ಕಣ್ಣಂಚು ಒದ್ದೆಯಾಯಿತು. ಖತೀಜಾ ಅವರು ಬಡಮಕ್ಕಳಲ್ಲಿ ಇಟ್ಟಿದ್ದ ಪ್ರೀತಿ ಮತ್ತು ಈ ಪ್ರಸಂಗದಿಂದ ಮೊಹಿದೀನ್ ಅವರು ಪಡೆದ ಅರಿವು ಮಾನವರ ಬದುಕಿನಲ್ಲಿ ದೊಡ್ಡ ಮೌಲ್ಯ ಯಾವುದು ಎಂಬುದನ್ನು ಮನಗಾಣಿಸುತ್ತವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: