ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ಸ್ತ್ರೀ ಅಂದರೆ ಅಷ್ಟೇ ಸಾಕೇ ?

ರಬಕವಿಯಲ್ಲೊಂದು ಮಹಿಳಾ ಸಮಾವೇಶ

ಯಾದೇವಿ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ, ಯಾದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ ಹೀಗೆ ಹೆಣ್ಣಿನ ಶಕ್ತಿಯನ್ನು ವರ್ಣಿಸುವುದು, ಗೌರವ ವಾಚಕಗಳಲ್ಲಿ ಉಲ್ಲೇಖಿಸುವುದು ನಮ್ಮ ಸಂಸ್ಕೃತಿಯಲ್ಲಿ ಇವತ್ತಿನ ಮಾತಲ್ಲ. ಮನೆಯ ಮಹಾಲಕ್ಷ್ಮಿ ಎಂದು ಹೊಗಳಿ ಉಬ್ಬಿಸಿ ಹೊಸಿಲು ದಾಟ ಬೇಡಮ್ಮ ಎಂದು ಆದರ್ಶದ ಪಂಜರದೊಳಗೆ ಇಟ್ಟು ಹೆಣ್ಣನ್ನು ಹೇಳಿಕೊಟ್ಟಂತೆ ಉಲಿಯಬೇಕೆಂಬ ಗಿಳಿಪಾಠದ ಭೋಧನೆಗಳಿಗೇನು ನಮ್ಮಲ್ಲಿ ಕಮ್ಮಿ ಇಲ್ಲ. ಹೊಸಿಲು ದಾಟಿದ ಹೆಣ್ಣು ಕಾಲಿನ ಕಸಕ್ಕಿಂತ ಕಡೆಯಾಗಿ ಕಂಡು ಹೆಣ್ಣಿನ ಅಗಾಧ ಶಕ್ತಿಯನ್ನು ಕಸಿದು ಮೂಲೆಗೆ ಕೂರಿಸಿದ ಉದಾಹರಣೆಗಳಿಗೂ ನಮ್ಮ ಪರಂಪರೆಯಲ್ಲಿ ಬರವಿಲ್ಲ. ಇಷ್ಟರ ನಡುವೆ ಬದುಕಿನ ಅಸಂಖ್ಯ ನೋವುಗಳನ್ನು ಉಂಡು ಗಟ್ಟಿಯಾದ ಗಟ್ಟಿಗಿತ್ತಿ ಕನ್ನಡದ ರಂಗಭೂಮಿ ಮತ್ತು ಸಿನಿಮಾರಂಗದ ತಾರೆ ಸಾಕವ್ವ ಇಂದು ದೇಶ ಕಟ್ಟುವ ಕೆಲಸದಲ್ಲಿ ನಿರತರಾಗಿರುವುದನ್ನು ಕಂಡರೆ ‘ತೊಟ್ಟಿಲನ್ನು ತೂಗುವ ಕೈ, ಜಗವನ್ನೂ ತೂಗುತ್ತದೆ’ ಅನ್ನುವ ಮಾತು ಎಷ್ಟು ಸತ್ಯ ಅನ್ನುವುದು ಸ್ಪಷ್ಟವಾಗುತ್ತದೆ.
ಇತ್ತೀಚಿಗೆ ರಬಕವಿಯಲ್ಲಿ ನಡೆದ ಮಹಿಳಾ ಸಬಲೀಕರಣ ಸ್ತ್ರೀ ಶಕ್ತಿ ಸಂಘಗಳ ಸಮಾವೇಶಕ್ಕೆ ನಾನೂ ಹೋಗಿದ್ದೆ. ಅದರ ಹಿಂದಿನ ಶಕ್ತಿ ಅಮ್ಮನದ್ದು. ನನ್ನ ಕಟ್ಟುಪದಗಳನ್ನು ಆಧರಿಸಿದ ‘ಭೂಮಿ’ ನಾಟಕ ಪ್ರದರ್ಶನ ಅವತ್ತು ಸಂಜೆ ಅದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳುವುದಿತ್ತು ಅನ್ನುವ ಮುಖ್ಯ ಕಾರಣಕ್ಕೆ ನಾನೂ ಈ ಸಮಾವೇಶಕ್ಕೆ ಅನಿವಾರ್ಯ ಹೋಗಲೇ ಬೇಕಾಯಿತು, ಹೋಗಿದ್ದಕ್ಕೆ ಅಮ್ಮನ ನಾಯಕತ್ವ ಏನು ಅನ್ನುವ ನನ್ನ ತಿಳುವಳಿಕೆಯು ಮತ್ತಷ್ಟು ವಿಸ್ತರಿಸಿಕೊಂಡಿತು. ಈ ಹಿಂದೆ ಅವರ ಸಂಘಟನಾ ಶಕ್ತಿಯನ್ನು ನೋಡಿದ್ದರೂ ನನ್ನ ಅರಿವಿನ ಪರಿಧಿ ಎಷ್ಟು ಚಿಕ್ಕದು ಅಂತ ಗೊತ್ತಾಗಿದ್ದು ಆ ಸಮಾವೇಶದಲ್ಲಿ ಪಾಲ್ಗೊಂಡಾಗಲೇ.
ಬೆಳಿಗ್ಗೆ ಹೋದ ಕೂಡಲೇ ನಾಟಕದ ತಯಾರಿ ಏನೇನು ಮಾಡಿಕೊಳ್ಳಬೇಕು ಎಂದು ನೋಡುವ ಸಲುವಾಗಿ ಹೊತ್ತಿಗೆ ಮುಂಚೆಯೇ ರಂಗದ ಬಳಿ ಇದ್ದೆ. ನಾ ಹೋಗುವ ವೇಳೆಗೆ ಉಮಾಶ್ರೀ ಅಮ್ಮ ಬರ ಬರ ಆಗಬೇಕಿದ್ದ ಕೆಲಸಗಳನ್ನು ಮಾಡಿಸುತ್ತಿದ್ದರು. ವೇದಿಕೆ, ಆಸನ ವ್ಯವಸ್ಥೆ, ಊಟ, ಮಳಿಗೆಗಳ ವ್ಯವಸ್ಥೆ ಎಲ್ಲಾ ಗಮನಿಸುತ್ತಿದ್ದರು. ತಾನು ಹೇಳಿದಂತೆ ತುಸು ಕೆಲಸ ಆಗಿಲ್ಲ ಅನ್ನುವ ಸಲುವಾಗಿ ಗರಂ ಕೂಡ ಆಗಿದ್ದರು. ಅವರನ್ನು ನೋಡಿ ನನಗೂ ಮಾತಾಡಿಸಲು ತುಸು ಭಯವೇ ಆಗಿತ್ತು. ಸರಿ ಮಾತಾಡಿಸಿಬಿಡೋಣ ಅಂತ ಹತ್ತಿರಹೋದೆ. ಅಲ್ಲಿ ಮಳಿಗೆಗಳು ತಾನು ಹೇಳಿದಂತೆ ಹಾಕಿಲ್ಲ. ಅದಾಗಲೇ ಹಾಕಿದ್ದ ಮಳಿಗೆಗಳು ಸಾರ್ವಜನಿಕರಿಗೆ ಅನಾನುಕೂಲ ಆಗುತ್ತದೆ ಎಂದು ಮಳಿಗೆಗೆ ಎಂದು ನೆಟ್ಟಿದ್ದ ಬಂಬನ್ನು ತಾನೇ ಅಲುಗಾಡಿಸಿ ಕಿತ್ತು ಎಸೆದರು. ಮತ್ತೆ ಸರಿಯಾಗಿ ಮಳಿಗೆಗಳನ್ನು ಹಾಕುವುದು ಹೇಗೆ ಅಂತ ಪೆಂಡಾಲಿನವನಿಗೆ ಮತ್ತು ಆ ಎಲ್ಲಾ ಕೆಲಸ ಮಾಡಿಸುತಿದ್ದ ಅಧಿಕಾರಿಗಳಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಸೂಚನೆ ಕೊಟ್ಟರು. ಎಲ್ಲರೂ ತುಟುಕ್ ಪಿಟುಕ್ ಅನ್ನದೇ ಆಯ್ತಮ್ಮ ಅನ್ನುವಂತೆ ಬೆಳಗ್ಗೆ ಹತ್ತು ಗಂಟೆಯ ಒಳಗೆ ಸರಿಯಾದ ಕ್ರಮದಲ್ಲಿ ಮಳಿಗೆಗಳನ್ನು ಮತ್ತು ವೇದಿಕೆಯನ್ನು ಸಜ್ಜುಗೊಳಿಸುವ ಕೆಲಸಕ್ಕೆ ಅಣಿಯಾದರು. ಅವರು ಕೋಪದಲ್ಲಿದ್ದಾರೆ ಏನು ಮಾತಾಡಿಸುವುದು ಅಂದುಕೊಂಡೆ ಆದರೂ ಮನಸು ಕೇಳಲಿಲ್ಲ ನಕ್ಕು ಅಮ್ಮಾ ಅಂದೆ. ‘ಸಂಜೆ ನಾಟಕಕ್ಕೆ ಲೈಟಿಂಗ್ ಮಾಡೋಕೆ ಬೆಂಗಳೂರಿನಿಂದ ಟೆಕ್ನಿಷಿಯನ್ಸ್ ಬಂದ್ರ? ಎಲ್ಲಾ ಇನ್ನೂ ಒಂದು ಗಂಟೆಯೊಳಗೆ ಸಿದ್ಧವಾಗಿಬಿಡಬೇಕು ಕಾರ್ಯಕ್ರಮ ಶುರು ಆದ ಮೇಲೆ ವೇದಿಕೆ ಬಿಟ್ಟುಕೊಡುವುದಿಲ್ಲ. ಯಾಕೆಂದರೆ ಒಂದಾದ ಮೇಲೆ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ’ ಎಂದು ಗಟ್ಟಿ ದನಿಯಲ್ಲಿ ಹೇಳಿ ಬಡ ಬಡ ನಡೆದರು.

ಲೈಟಿಂಗ್ ಮಾಡುವ ತಂತ್ರಜ್ಞರು ಮತ್ತು ನಾಟಕಕ್ಕೆ ಬೇಕಾದ ಲೈಟುಗಳು ನಾವು ಅವತ್ತು ತಂದಿರಲಿಲ್ಲ. ಅದಕ್ಕೂ ಸಾಕಷ್ಟು ಕಾರಣಗಳಿದ್ದವು. ಆದ್ರೆ ಇದನ್ನೆಲ್ಲಾ ಹೇಗೆ ಅಮ್ಮನಿಗೆ ಹೇಳೋದು ಹೇಗೆ. ಸಿಟ್ಟಿನಲ್ಲಿ ಬೇರೆ ಇದ್ದಾರೆ. ಮೊದಲೇ ರಂಗಭೂಮಿಯ ಕಲಾವಿದೆ. ನಾಟಕ ಅಂದ್ರೆ ಜೀವ ಅವರಿಗೆ. ಅದಕ್ಕಿಂತ ಮಿಗಿಲಾಗಿ ಎಲ್ಲವೂ ಸರಿಯಾಗಿ ವ್ಯವಸ್ಥಿತವಾಗಿ ಇರಬೇಕೆಂದು ಬಯಸುವ ಉಮಾಶ್ರೀ ಅನ್ನುವ ಜೀವಕ್ಕೆ ಲೈಟ್ ತಂದಿಲ್ಲ ಎಂದು ಹೇಗೆ ಹೇಳುವುದು ಅಂತ ಜೀವ ಕೈಲಿ ಇಟ್ಕೊಂಡು ಅವರಿಗೆ ಮುಖ ತೋರಿಸದಂತೆ ಅತ್ತಿಂದ ಇತ್ತ ಇತ್ತಿಂದ ಅತ್ತ ತಿರುಗುತ್ತಿದ್ದೆ. ಎದುರು ಸಿಕ್ಕರ ಇನ್ನೆಲ್ಲಿ ಮತ್ತೆ ನಾಟಕದ ತಯಾರಿಯ ಬಗ್ಗೆ ಕೇಳಿ ಬಿಡುತ್ತಾರೋ ಅಂತ. ಆದ್ರೆ ಬೆಳಗಿನ ಕಾರ್ಯಕ್ರಮ ಎಲ್ಲಾ ಆಗಿ ಸಂಜೆ ನಾಟಕ ನಡೆಯಬೇಕೆನ್ನುವ ವೇಳೆಗೆ ಬೆಳಗಿನಿಂದ ಮುಚ್ಚಿಟ್ಟಿದ್ದ ಕಥೆ ಹೇಳಬೇಕಾಯಿತು. ಒಂದು ಸಲ ಹುಬ್ಬೇರಿಸಿ ನಾಟಕದ ಹುಡುಗರ ಬೆನ್ನು ಸವರಿ ತಾನೇ ಕಪ್ಪು ಪರದೆ ಕಟ್ಟಿಸಿಕೊಡುವ ನಾಟಕಕ್ಕೆ ಅನುಕೂಲ ಆಗುವಂತೆ ವೇದಿಕೆ ಸಿದ್ಧಪಡಿಸಿ ಕೊಟ್ಟಿದ್ದನ್ನು ಕಂಡಾಗ ಈ ರಂಗಭೂಮಿಯ ಜೀವ ತಾನೇರಿದ ಎತ್ತರವನ್ನು ಎಂದೂ ತಲೆಗೆ ಹತ್ತಿಸಿಕೊಳ್ಳದೆ ಕಲಾವಿದರನ್ನು ತಾಯಂತೆ ಪೊರೆದಿದ್ದನ್ನು ಇಡೀ ನಾಟಕ ತಂಡ ಮತ್ತೆ ಮತ್ತೆ ಧನ್ಯತೆಯಿಂದ ನೆನೆಯುತ್ತದೆ. ಉಮಾಶ್ರೀ ಅಮ್ಮನಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಕಿದ್ದು ಸಾರ್ಥಕ ಆಯಿತು ಅನ್ನುವ ಭಾವ ಇಡೀ ರಂಗ ತಂಡದಲ್ಲಿ ಮತ್ತೆ ಮತ್ತೆ ಗೌರವವನ್ನು ಮೂಡಿಸುತ್ತಿತ್ತು.
ಆ ಸಮಾವೇಶದ ದಿನ ಸಚಿವರಾದ ಎಸ್. ಆರ್. ಪಾಟೀಲ್, ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ಮಹಿಳಾ ಅಭಿವೃದ್ಧಿ ನಿಗಮದ ವಾಸಂತಿ ಶಿವಣ್ಣ, ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಮತಿ ಜಯಮಾಲ, ಬಾಲವಿಕಾಸ ಅಕಾಡೆಮಿಯ ದ್ರಾಕ್ಷಾಯಿಣಿ ಬಸವರಾಜು, ಸಾಹಿತಿಗಳಾದ ಕೆ.ಲೀಲಾ, ವಿನಯಾ ವಕ್ಕುಂದ, ಡಾ.ಲೀಲಾ ಸಂಪಿಗೆ ಮತ್ತು ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಪಿಚ್ಚಳ್ಳಿ ಶ್ರೀನಿವಾಸ ಅವರುಗಳೆಲ್ಲಾ ಬಂದಿದ್ದರು. ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಪೂರ್ಣಕುಂಭ ಮತ್ತು ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಹೊರಟರು. ಮೆರವಣಿಗೆಯನ್ನು ಜಯಮಾಲ ಅವರು ಉಧ್ಘಾಟಿಸಿದರು. ಅದೆಲ್ಲಿದ್ದರೋ ಏನೋ ಜನ ಸಾವಿರಾರು ನದಿಗಳಂತೆ ಹರಿದುಬಂದರು. ಮಹಿಳಾ ಸಾಧಕಿಯರೊಂದಿಗೆ ಸಾವಿರಾರು ಮಂದಿ ಹೆಣ್ಣುಮಕ್ಕಳು ಮೆರವಣಿಗೆ ಸಾಗುತ್ತಿದ್ದರೆ ‘ಮೆರವಣಿಗೆ ಹೊರಡುತ್ತೇವೆ ನಾವು’ ಅನ್ನುವ ಮಹಿಳಾ ಸಬಲೀಕರಣದ ಕ್ರಾಂತಿ ಗೀತೆಯ ಸಾಲುಗಳು ಮತ್ತೆ ಮತ್ತೆ ನೆನಪಾಗಿ ರೋಮಾಂಚನವಾಗುತಿತ್ತು. ಇಡೀ ತೇರದಾಳ ಮತಕ್ಷೇತ್ರದ ಹೆಣ್ಣು ಮಕ್ಕಳೆಲ್ಲಾ ಒಂದೆಡೆ ಸಮಾನ ಆಶಯಕ್ಕಾಗಿ ಸೇರಿದ್ದರು ಅಲ್ಲಿ. ಎಲ್ಲಿ ನೋಡಿದರೂ ಹೆಣ್ಣು ಮಕ್ಕಳೇ ಅಲ್ಲೆಲ್ಲಾ. ಗಂಡಸರು ಅಲ್ಲೊಬ್ಬ ಇಲ್ಲೊಬ್ಬ ಕಾಣುತ್ತಿದ್ದರು. ವೇದಿಕೆಯ ಮುಂದೆಯೂ ಕಣ್ಣು ಹಾಯಿಸಿದಷ್ಟೂ ಹೆಣ್ಣುಕುಲವೇ ಕಾಣುತ್ತಿತ್ತು ಹೊರತು ಪುರುಷರು ಹೆಚ್ಚಿರಲಿಲ್ಲ.

ಕಾರ್ಯಕ್ರಮ ಆರಂಭವಾಯಿತು. ಮೊದಲಿಗೇ ನಿರೂಪಕರು ಒಂಚೂರು ತಡಬಡಿಸಿ ಕಸಿವಿಸಿಗೊಂಡರು. ತಕ್ಷಣ ಎಲ್ಲಾ ಪ್ರೋಟೋಕಾಲ್ ಮಣ್ಣು ಮಸಿ ಎಲ್ಲಾ ಬದಿಗೊತ್ತಿ ಅಮ್ಮ ತಾನೇ ಬಂದು ಎಲ್ಲರನ್ನೂ ವೇದಿಕೆಗೆ ಕರೆದು ಸ್ವಾಗತಿಸಿ ನಿರೂಪಕರಿಗೆ ಕಾರ್ಯಕ್ರಮ ಚಾಲ್ತಿ ಮಾಡಿಕೊಟ್ಟರು. ಆಮೇಲೆ ನಿರೂಪಕರು ಕಾರ್ಯಕ್ರಮವನ್ನು ನಡೆಸಿಕೊಂಡು ಹೋದರು. ಅಷ್ಟೇ ಅಲ್ಲ ಹೂವು ಹಣ್ಣು ತರಲು ಕೂಡಾ ಗೊಂದಲ ಮಾಡಿಕೊಂಡಾಗಲೂ ತಾನೇ ಹೋಗಿ ಹಾರ ಹಣ್ಣು ತಂದು ಸ್ವಾಗತಿಸಿದ್ದನ್ನು ಕೂಡ ಇಡೀ ಸಭೆ ನೋಡುತ್ತಲೇ ಇತ್ತು. ಇಡೀ ಕಾರ್ಯಕ್ರಮ ಮುಗಿಯುವ ತನಕ ಒಂದು ಗಳಿಗೆ ಕುಳಿತುಕೊಳ್ಳದೆ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾ ತನ್ನ ಕ್ಷೇತ್ರದಲ್ಲಿನ ಕಾರ್ಯಕರ್ತರಿಗೆ ಕೆಲಸ ಮಾಡುವುದನ್ನು ಹೇಳಿಕೊಡುತ್ತಾ ವೇದಿಕೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಟ್ಟರು. ಇಂಥಹ ಒಬ್ಬ ಕ್ರಿಯಾಶೀಲ ಮತ್ತು ಬದ್ಧತೆಯುಳ್ಳ ನಾಯಕಿ ತೇರದಾಳ ಮತಕ್ಷೇತ್ರಕ್ಕೆ ಸಿಕ್ಕಿದ್ದಾರೆ ಅನ್ನುವುದು ನೆರೆದಿದ್ದ ಎಲ್ಲರಿಗೂ ಕಾಣುತ್ತಿತ್ತು. ನಾಯಕತ್ವ ಒಂದು ಮೌಲ್ಯ ಅನ್ನುವುದನ್ನು ಅಂದಿನ ಇಡೀ ಕಾರ್ಯಕ್ರಮ ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇತ್ತು.
ಜಯಮಾಲ, ಕೆ. ನೀಲಾ, ಮಂಜುಳಾ ಮಾನಸ, ವಿನಯಾ ವಕ್ಕುಂದ, ಲೀಲಾ ಸಂಪಿಗೆ, ವಾಸಂತಿ ಶಿವಣ್ಣ ಹೀಗೆ ವೇದಿಕೆಯಲ್ಲಿದ್ದ ನೆರದಿದ್ದ ಎಲ್ಲಾ ಸಾಧಕಿಯರು ವೇದಿಕೆಯ ಮುಂದೆ ಕಣ್ಣು ಹಾಯಿಸುವಷ್ಟು ನೆರೆದಿದ್ದ ಮಹಿಳೆಯರನ್ನು ಕಂಡು “ ಮಹಿಳಾ ಸಬಲೀಕರಣ” ಅಂದ್ರೆ ಇದುವೇ. ರಬಕವಿ, ಬನಹಟ್ಟಿ, ತೇರದಾಳದ ನೆಲದಿಂದಲೇ ಮಹಿಳಾ ನಾಯಕತ್ವದ ಕನಸುಗಳನ್ನು ಕಾಣೋಣ. ಸಬಲಗೊಳ್ಳೋಣ. ಮಹಿಳಾ ಸಾಮರ್ಥ್ಯವನ್ನು ನಾಡಿಗೆ ತೋರೋಣ ಎಂದು ಮೌಲಿಕವಾಗಿ ಮಾತಾಡಿದರು. ಹಾಗೂ ಅತ್ಯುತ್ತಮ ಸಚಿವರು ನಿಮಗೆ ಸಿಕ್ಕಿದ್ದಾರೆ ಎಂದು ಹೇಳುತ್ತಲೇ ಸ್ತ್ರೀ ನಾಯಕತ್ವ, ಮಹಿಳಾ ಸಬಲೀಕರಣ, ಮಹಿಳಾ ದೌರ್ಜನ್ಯ, ಸ್ತ್ರೀ ಸ್ವತಂತ್ರ, ಲಿಂಗ ತಾರತಮ್ಯ ಇತ್ಯಾದಿ ಮಹಿಳೆಗೆ ಸಂಭಂದಿಸಿದ ವಿಷಯಗಳನ್ನು ಮೈ ಜುಮ್ ಅನ್ನುವಂತೆ, ತನ್ನ ತಾ ಅರಿಯುವಂತೆ ಮಾತಾಡಿ ಸಾವಿರ ಸಾವಿರ ಮಹಿಳೆಯರು ಇದ್ದ ಸಭೆಯಲ್ಲಿ ಸಂಚಲನ ಉಂಟು ಮಾಡಿದರು.
ಸಮಾರಂಭದ ಕೊನೆಗೆ ಅಮ್ಮ ಮಾತಾಡಿದರು. ಒಂದು ಚಾರಿತ್ರಿಕ ಭಾಷಣವೇ ಸರಿ ಅದು. ಇಡೀ ಮಹಿಳೆ ಸಬಲ ಗೊಳ್ಳಬೇಕಾದ ಉದ್ಧಾರ ಮಂತ್ರದಂತಿತ್ತು ಮಹಿಳಾ ಸಮಾವೇಶದಲ್ಲಿ ಅವರು ಆಡಿದ ಮಾತುಗಳು. ತನ್ನ ಕ್ಷೇತ್ರದ ಸಾಧನೆಯನ್ನು ಕುರಿತು ಅವರು ಹೇಳುತ್ತಾ ಮೂವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಒಂದೂ ಮುಕ್ಕಾಲು ಕೋಟಿಯ ಕಲಹಳ್ಳಿಯಾ ಏತ ನೀರಾವರಿ ಯೋಜನೆ ಒಬ್ಬ ಮಹಿಳೆಯಾಗಿ ತಂದಿದ್ದು, ಇಷ್ಟು ವರ್ಷಗಳಾದರೂ ಟಾರು ಸಿಮೆಂಟು ಕಾಣದ ರಸ್ತೆಗಳಿಗೆಲ್ಲಾ ಟಾರು ಕಾಣಿಸಿದ್ದು, ಹೀಗೆ ಅನೇಕ ಕಾರ್ಯಕ್ರಮಗಳನ್ನು ಮಾತು ಕೊಟ್ಟಂತೆ ತನ್ನ ಕ್ಷೇತ್ರದ ಜನತೆಯ ಉದ್ಧಾರಕ್ಕೆ ಕೋಟಿ ಕೋಟಿ ಹಣ ಸರ್ಕಾರದಿಂದ ತಂದು ಕ್ಷೇತ್ರಾಭಿವೃದ್ಧಿ ಮಾಡುತ್ತಿರುವುದರ ಉಲ್ಲೇಖಗಳನ್ನು ಕೇಳಿದೊಡನೆ ಉಮಾಶ್ರೀ ಅವರ ಇಚ್ಛಾ ಶಕ್ತಿಗೆ ಹಿಡಿದ ಕನ್ನಡಿಯಂತಿತ್ತು. ತನ್ನ ಕ್ಷೇತ್ರದ ಎಲ್ಲಾ ಊರುಗಳ, ಹಳ್ಳಿಗಳ ಹೆಸರುಗಳನ್ನ ಒಂದೂ ಬಿಡದಂತೆ ಉಲ್ಲೇಖಿಸಿ ಮಾತಾಡುತ್ತಿದ್ದದ್ದನ್ನು ಕಂಡಾಗ ಅವರು ಎಷ್ಟು ಕ್ಷೇತ್ರ ಮತ್ತು ಅದರ ಅಭಿವೃದ್ಧಿಯ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ ಅನ್ನುವುದು ಅಲ್ಲಿದ್ದ ಪ್ರತಿಯೊಬ್ಬರಿಗೂ ತಿಳಿಯುತ್ತಿತ್ತು. ಅವ್ರ ಮಾತುಗಳೆಲ್ಲಾ ಮಹಿಳೆ ಸಬಲೆಯಾಗಬೇಕು ಅಂತ ಎಲ್ಲರನ್ನು ಪ್ರಭಾವಿಸುವಂತೆ ಮಾತಾಡುತ್ತಿದ್ದರೆ, ಸಭೆಯಲ್ಲಿದ್ದ ಪ್ರತಿಯೊಬ್ಬರ ಕೈಗಳು ತನ್ನಷ್ಟಕ್ಕೆ ತಾನೇ ಚಪ್ಪಾಳೆ ಹೊಡೆದುಕೊಳ್ಳುತ್ತಿದ್ದವು. ಕಿವಿಗಳು ಉಮಾಶ್ರೀ ಅಮ್ಮನ ದನಿಯನ್ನೇ ಹಿಂಬಾಲಿಸುತ್ತಿದ್ದವು. ಚರ್ಮ ಜುಮುಗುಡುತ್ತಿತ್ತು. ಮನಸು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಿತ್ತು. ಏರು ಬಿಸಿಲಲ್ಲೂ ಅತ್ತ ಇತ್ತ ಹೋಗದೇ ಮಧ್ಯಾನ್ಹ ಮೂರಾದರೂ ಎಲ್ಲ ಮಹಿಳೆಯರು ತನ್ನ ಸಬಲೀಕರಣದ ಮಂತ್ರಗಳನ್ನು ಆ ಸಮಾವೇಶದಲ್ಲಿ ಪಡೆಯುತ್ತಿದ್ದರು.
ಸ್ತ್ರೀ ಶಕ್ತಿ ಗುಂಪುಗಳಿಗೆ, ಅಂಗವಿಕಲರಿಗೆ,ದೇವದಾಸಿ ಹೆಣ್ಣುಮಕ್ಕಳಿಗೆ ಹಾಗೂ ಇತರ ಮಹಿಳಾ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ದೇವದಾಸಿ ಹೆಣ್ಣುಮಕ್ಕಳು ವೇದಿಕೆಯ ಮೇಲೆ ಬಂದು ಚೆಕ್ ಪಡೆದದ್ದು ಬಹುಶಃ ಇದೇ ಮೊದಲು. ಹೀಗೆ ಲೈಂಗಿಕ ಅಲ್ಪ ಸಂಖ್ಯಾತ ಮತ್ತು ದೇವದಾಸಿ ಹೆಣ್ಣುಮಕ್ಕಳನ್ನು ಎಲ್ಲರಂತೆ ವೇದಿಕೆ ಏರಿಸಿ ಎಲ್ಲರಂತೆ ತನ್ನ ಹಕ್ಕಿನ ಬಾಬ್ತು ಪಡೆಯುವಂತೆ ಪ್ರೇರೆಪಿಸಿದ್ದು, ಅಮ್ಮ ಇದ್ದಿದ್ದರಿಂದಲೇ ಸಾಧ್ಯವಾಗಿದ್ದು ಎಂದು ಯಾವುದೇ ಮುಲಾಜಿಲ್ಲದೇ ಹೇಳಬಹುದು. ತನ್ನ ಕ್ಷೇತ್ರದ ಜನ ನೋಡಲಿ ಎಂದು ಕರ್ನಾಟಕದ ಎಲ್ಲ ಭಾಗಗಳಿಂದ ಜನಪದ ಕಲಾವಿದರನ್ನು ಕರೆಸಿ ಮಹಿಳಾ ಸಬಲೀಕರಣ ಕೇಂದ್ರಿತ ಕಾರ್ಯಕ್ರಮಗಳನ್ನು ಮಾಡಿಸಿದರು. ಜೊತೆಗೆ ರಾಜಗುರು ಹೊಸಕೋಟೆ ನಿರ್ದೇಶನದ ಮಹಿಳಾ ಶೋಷಣೆ, ಮಂಗಳಮುಖಿ ವಿಷಯಾಧಾರಿತ ಮಹಿಳಾ ಪರ ‘ಭೂಮಿ’ ನಾಟಕವನ್ನು ಪ್ರದರ್ಶನ ಮಾಡಿಸಿದರು. ಸರ್ಕಾರದ ಎಲ್ಲಾ ಇಲಾಖೆಗಳಿಂದ ಸಿಗಬಹುದಾದ ಸವಲತ್ತುಗಳನ್ನು ತಿಳಿದುಕೊಳ್ಳುವಂತೆ ಆಯಾಯ ಇಲಾಖೆಯ ಮಾಹಿತಿ ಸಿಗುವಂತೆ ಪ್ರದಶನಗಳನ್ನು ಕೂಡಾ ಆಯೋಜಿಸಿದ್ದರು.
ಬಹುದೊಡ್ಡ ದೂರದರ್ಶಿತ್ವದ ಆಶಯಗಳೊಂದಿಗೆ ಸುಮಾರು ಆರೇಳು ಸಾವಿರ ಹೆಣ್ಣುಮಕ್ಕಳಿಗೆ ಒಂದು ಇಡೀ ದಿನದ ಕಾರ್ಯಕ್ರಮ ರೂಪಿಸಿದ್ದು ತೇರದಾಳ ಮತಕ್ಷೇತ್ರದಲ್ಲಂತೂ ಇದೇ ಮೊದಲು ಎಂದು ಪ್ರತಿಯೊಬ್ಬರೂ ಮಾತಾಡಿದ್ದು ಸಭೆಯಲ್ಲಿ ಮತ್ತೆ ಮತ್ತೆ ಕೇಳಿಬರುತ್ತಿತ್ತು. ಪಕ್ಕದ ಮನೆಯವರಿಂದಲೇ ಒಮ್ಮೊಮ್ಮೆ ಸಹಕಾರ ಸಿಗುವುದಿಲ್ಲ, ಹೀಗಿದ್ದಾಗ ತನ್ನದಲ್ಲದ ಊರಿನಲ್ಲಿ ಹೋಗಿ ಜನ ವಿಶ್ವಾಸವನ್ನು ಪಡೆದು, ಜನ ಮನ್ನಣೆಯನ್ನು ಪಡೆದು ಸಚಿವೆಯಾಗಿ ಅದೇ ಕ್ಷೇತ್ರದ ಸಮಗ್ರ ಉದ್ಧಾರಕ್ಕೆ ಶ್ರಮಿಸುತ್ತಾರೆ ಅನ್ನುವುದು ಸ್ತ್ರೀ ಶಕ್ತಿಯ ವ್ಯಾಪ್ತಿಯನ್ನು ಸೂಚಿಸುತ್ತದೆ. ಅದಕ್ಕೆ ಅಲ್ವಾ ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂದು ಹೇಳೋದು. ಉಮಾಶ್ರೀಯವರಂಥ ಒಬ್ಬ ಜನಪರ ಕಾಳಜಿಯುಳ್ಳ ನಾಯಕಿಯರು ಇದ್ದರೆ ಬೆನ್ನಿಗೆ ಬಿದ್ದಾದರೂ ಸರಿ ತನ್ನ ಮಡಿಲ ಜೀವಗಳನ್ನು ಪೊರೆಯುತ್ತಾರೆ. ಭೂಮಿಯಂಥಾ ಹೆಣ್ಣುಮಕ್ಕಳು ಅಧಿಕಾರದ ಚುಕ್ಕಾಣಿ ಹಿಡಿದರೆ ಉಮಾಶ್ರೀ ಅಮ್ಮನಂಥಾ ಶಕ್ತಿ ದುಪ್ಪಟ್ಟು ದುಪ್ಪಟ್ಟು ಆಗಿ ಸಮಾಜ ಸುಭೀಕ್ಷತೆಯಾ ಕಡೆ ಹೆಜ್ಜೆ ಹಾಕುತ್ತದೆ ಎನ್ನುವುದು ಸ್ಪಷ್ಟ. ಇಷ್ಟೆಲ್ಲಾ ಶಕ್ತಿಯುಳ್ಳ ಹೆಣ್ಣನ್ನು ಜಿ.ಎಸ್.ಎಸ್ ಅವರು ಹೇಳಿದ ‘ಸ್ತ್ರೀ ಅಂದರೆ ಅಷ್ಟೇ ಸಾಕೇ’ ? ಎಂದು ಹೇಳಿ ಸುಮ್ಮನಾಗಲು ಸಾಧ್ಯವೇ ? ಅನ್ನುವ ಮಾತು ಮತ್ತೆ ಮತ್ತೆ ಸಾವಿರ ಸಾವಿರ ಉಮಾಶ್ರೀಯರನ್ನು ಸಮಾಜ ಕಾಣಲಿ ಅನ್ನುವ ಆಶಯವನ್ನು ನಮ್ಮಲ್ಲಿ ಬಿತ್ತುತ್ತದೆ. ಒಟ್ಟು ಇಡೀ ದಿನದ ಕಾರ್ಯಕರ್ಮ ಎಲ್ಲಾ ರೀತಿಯಲ್ಲೂ ಯಶವನ್ನೇ ಕಂಡಿತು.

‍ಲೇಖಕರು G

26 April, 2015

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. shobha venkatesh

    chennagide

  2. Anonymous

    thumbha channag ede sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading