ಬೇಲೂರು ರಘುನಂದನ್ ಕಾಲಂ : ಸಾಕವ್ವನ ಒಡಲಾಳ


ಅಮ್ಮನಿಗೇ ಅಂತಲೇ ದೇವನೂರು ಸಾಕವ್ವನನ್ನ ಬರೆದರೋ, ದೇವನೂರರ ಸಾಕವ್ವನನ್ನು ಅಭಿನಯಿಸಲು ಅಂತಲೇ ಅಮ್ಮ ಹುಟ್ಟಿದರೋ ಅಂತ ಅನೇಕ ಸಲ ಅನ್ನಿಸುತ್ತಿರುತ್ತೆ ನನಗೆ. ನನಗೆ ಮಾತ್ರ ಅಲ್ಲ, ಅನೇಕರಿಗೆ ಈ ನಾಡಿನಲ್ಲಿ ಅನ್ನಿಸಿರುತ್ತೆ ಬಿಡಿ.
ಮೊದಲನೇ ಸಲ ನಂಗೆ ಒಡಲಾಳ ನಾಟಕ ನೋಡೋಕೆ ಅಂತ ಕರೆ ಬಂತು. ನಾಟಕ ನೋಡೋಕೆ ಹೋಗಿದ್ದು ಅಮ್ಮ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ ಅನ್ನೋದಕ್ಕಿಂತ ನಮ್ಮ ಭಾವ ಅಭಿನಯಿಸುತ್ತಿದ್ದಾರೆ ಅಂತ. ಎಷ್ಟೇ ಆದ್ರೂ ಜೀವದ ತಂಗಿ ಗಂಡ ರಂಗದ ಮೇಲೆ ಬರ್ತಾರೆ ಅನ್ನೋದು ನನಗೆ ಹೆಮ್ಮೆ ಮತ್ತು ಒಂಥರಾ ಬಿಗುಮಾನದ ವಿಷಯ ಆಗಿತ್ತು ಅವಾಗ. ಅದಕ್ಕಿಂತ ಮುಂಚೆ ನಾಟ್ಕ ಗೀಟ್ಕ ಎಲ್ಲ ನಮ್ಮೂರಿನ ಶಾಲೆಯಲ್ಲಿ ಮಾಡಿದ್ದು, ನೋಡಿದ್ದು ಬಿಟ್ರೆ ಬೇರೇನೂ ಅಷ್ಟು ಗೊತ್ತಿರಲಿಲ್ಲ. ಅದೂ ಬೇರೆ ನನ್ನ ತಂಗಿಯ ಸಂಭ್ರಮ ನೋಡಬೇಕು, ಅವಳ ಗಂಡ ರಂಗದ ಮೇಲಿದ್ದಾಗ ಅವಳು ಖುಷಿ ಪಡೋದನ್ನು ನೋಡಿ ಖುಷಿ ಪಡಬೇಕು ಅನ್ನೋದಷ್ಟೇ ನನ್ನ ನಿರೀಕ್ಷೆ ಆಗಿತ್ತು. ಒಬ್ಬ ತಾಯಿನೋ, ಅಥವಾ ಒಬ್ಬ ಅಣ್ಣನೋ ಇಷ್ಟು ಬಿಟ್ರೆ ಬೇರೆ ಏನು ತಾನೇ ತಂಗಿ ವಿಷಯದಲ್ಲಿ ಬಯಸೋಕೆ ಆಗುತ್ತೆ ಹೇಳಿ. ನಮ್ಮ ಭಾವ ನಾಟಕದಲ್ಲಿ ಮಾಡುತ್ತಿದ್ದಾರೆ ಅಂತ ಊರು ಮನೇಲಿ ಸ್ನೇಹಿತರಿಗೆಲ್ಲಾ ಹೇಳಿ ಬೇಲೂರಿನ ಶಿಲ್ಪಗಳನ್ನು ಕಣ್ಣಲ್ಲಿ ಕಟ್ಟಿಕೊಂಡು ರವೀಂದ್ರ ಕಲಾಕ್ಷೇತ್ರದ ಕಡೆ ಹೊರಟೆ. ಅದೇನು ಉತ್ಸಾಹ ಅಂತೀರಿ. ಮೈಯಲ್ಲಾ ದಮ್ಮು ಕಟ್ಟಿದ್ದಂತೆ, ನಾಟಕದ ಮೂರನೇ ಬೆಲ್ ಹೊಡೆಯೋ ತನಕ ನನ್ನಿಷ್ಟದ್ದೇ ಕಲ್ಪನೆ, ಪಾತ್ರ, ಅಭಿನಯ, ಉಡುಗೆ ತೊಡುಗೆ, ಕೊನೆಗೆ ಡೈಲಾಗು ಕೂಡ. ಮೊದಲನೇ ಸಲ ಒಡಲಾಳ ನೋಡದಕ್ಕಿಂತ ಮುಂಚೆ ನಮ್ಮ ಭಾವನದ್ದೇ ಮುಖ್ಯ ಪಾತ್ರ ಅನ್ಕೊಂಡು ಅವರ ಕೇಂದ್ರದಿಂದಲೇ ನಾಟಕ ನೋಡಬೇಕು ಅಂದುಕೊಂಡು ಹೋಗಿದ್ದೆ. ಆಗ ನನ್ನದೇ ಹೊಸ ಒಡಲಾಳ ನಾಟ್ಕ ಕಟ್ಟಿಕೊಂಡುಬಿಟ್ಟಿತ್ತು. ನೆನಸಿಕೊಂಡ್ರೆ ಭಯಂಕರ ನಗು ಬರತ್ತೆ ಈಗಲೂ.
ಅಮ್ಮ ಪುಟ್ನಂಜ ಸಿನೆಮಾದಲ್ಲಿ ಪುಟ್ಟಮಲ್ಲಿ ಪಾತ್ರ ಮಾತ್ರ ನೋಡಿದ್ದು ಬಿಟ್ರೆ ಸಾಕವ್ವನನ್ನ ನೋಡಿರಲಿಲ್ಲ ನಾನು. ಪುಟ್ಮಲ್ಲಿ ತರಾನೇ ಸಾಕವ್ವನ ಪಾತ್ರ ಮಾಡಿದ್ದಾರೆ ಅಂತ ತಂಗಿ ಮದುವೇಲಿ ಯಾರೋ ಹೇಳಿದ್ದನ್ನು ಕೇಳಿಸಿಕೊಂಡಿದ್ದೆ. ಇದನ್ನೆಲ್ಲಾ ಮನಸಿನಲ್ಲಿ ನೆನ್ಕೊಂಡು ನಾಟಕ ನೋಡಲು ಹೊರಟೆ. ಅಂದು ರಂಗಸಂಪದ ಒಡಲಾಳವನ್ನು ಅಭಿನಯಿಸುತ್ತಿತ್ತು. ಕಳೆದ ಮೂರು ದಶಕಗಳಿಂದ ಆಚೆಗಿಂದಲೂ ಹವ್ಯಾಸಿ ರಂಗಭೂಮಿಗಾಗಿ ದುಡಿದ ದೊಡ್ಡ ಅನುಭವೀ ಪಡೆಯೇ ಅಲ್ಲಿತ್ತು. ಕೆಲವರು ಬಣ್ಣ ಹಚ್ಚಿದ್ದರು, ಇನ್ನೂ ಕೆಲವರು ರಂಗದ ಹಿಂದಿನ ಕೆಲಸ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದರು. ಹೆಂಗೇ ಅಂದ್ರೆ ಜಗತ್ತನೇ ಹೆಗಲ ಮೇಲೆ ಹಾಕ್ಕೊಂಡು ಓಡಾಡೋ ಯುವಕರನ್ನು ನಾಚಿಸೋ ತರ. ಇರಲಿ ರಂಗ ಸಂಪದದ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ. ಅಂದು ನಾನು ಸ್ವಲ್ಪ ಬೇಗಾನೇ ಹೋಗಿದ್ದೆ. ಯಾಕಂದ್ರೆ ಬೀಗರು ಕರೆದಾಗ ಬೇಗ ಹೋಗಬೇಕೋ ಅಂತ ಸದಾ ನಮ್ಮಜ್ಜಿ ಹೇಳುತಿತ್ತು. ಅದ್ರಲ್ಲೂ ಹೆಣ್ಣು ಕೊಟ್ಟ ಮನೆಯವರು ಕರೆದಾಗ ಚಣ ಮುಂಚೆನೇ ಅಲ್ಲಿ ಇರಬೇಕು ಅನ್ನೋದು ನಮ್ಮಜ್ಜಿ. ಅವತ್ತು ಚಣ ಮುಂಚೆ ಇರಲಿ ಗಂಟೆ ಮುಂಚೆನೇ ಹೋಗಿದ್ದೆ.

ಅಮ್ಮ ಗ್ರೀನ್ ರೂಂನಲ್ಲಿದ್ರು. ನಮ್ಮ ಭಾವ ಓಡಾಡುತಿದ್ರು. ಬನ್ನಿ ರಘು ಅಂದು ಮತ್ತೆ ಅವರ ಪಾಡಿಗೆ ಅವರು ಹೋದ್ರು. ನಾನೂ ಗ್ರೀನ್ ರೂಂಗೆ ಹೋದೆ. ಅಮ್ಮ ಎಲ್ಲಿ ಅಂತ ಹುಡುಕ್ದೆ ನನ್ನ ಬುದ್ಧಿಗೆ ಅಲ್ಲೇ ಕೂತಿದ್ದ ಸಾಕವ್ವ ಕಾಣಲೇ ಇಲ್ಲ. ರಂಗ ಶಾರದೆ ಅಲ್ಲೇ ಕೂತಿದ್ದಾಳೆ ಅನ್ನೋ ಹಂಗೆ ಕೂತಿದ್ರು. ಸುತ್ತ ಮುತ್ತ ಇದ್ದವರೆಲ್ಲಾ ಅವರ ಮೌನಕ್ಕೆ ಒಂಚೂರು ತೊಂದ್ರೆ ಆಗದಂತೆ ಪಿಸ ಪಿಸ ಅಂತ ಮಾತಾಡ್ಕೋತಿದ್ರು. ಶೇತಮ್ಮ ಅಮ್ಮನ ಪಕ್ಕ ನಿಂತಿದ್ಲು. ಅವಳು ಬಾಯಿ ಮೇಲೆ ಬೆರಳಳಿಟ್ಟು ಮಾತಾಡಿಸಬೇಡ ಅಂತ ಸನ್ನೆ ಮಾಡುತ್ತಾ ಅಮ್ಮನ ಕಾಸ್ಟ್ಯೂಮ್ ಮತ್ತು ಮೇಕಪ್ ಕಿಟ್ ಎಲ್ಲಾ ಜೋಪಾನ ಮಾಡುತಿದ್ಲು. ಮುಖಕ್ಕೆ ಮೈಗೆ ಕಪ್ಪು ಬಣ್ಣ ಬಳ್ಕೊಂಡು, ರವ್ಕೆ ಇಲ್ದೆ ಹಳೇ ಹರುಕ್ಲು ಸೀರೆ ಉಟ್ಕೊಂಡು ಜೋತು ಬಿದ್ದ ಹರಿದ ಕಿವಿ ಆಲೇ, ಮುಖ ಎಲ್ಲಾ ಸುಕ್ಕು ಸುಕ್ಕು ನೋಡ್ತಾ ಅಲ್ಲೇ ನಿಂತಿದ್ದೆ ಅಮ್ಮನ್ನ ಮಾತಾಡಿಸಬೇಕು ಅಂತ. ಆಮಲೇ ಶೇತಮ್ಮ ಕೈ ಹಿಡ್ಕೊಂಡು ಗ್ರೀನ್ ರೂಮ್ನಿಂದ ಹೊರಕ್ಕೆ ಕರ್ಕೊಂಡು ಬಂದು ಈಗ ಅಮ್ಮನ್ನ ಯಾರೂ ಮಾತಾಡಿಸಲ್ಲ ನೀನು ಹೋಗಿ ಮುಂದೆಗಡೆ ಕೂತ್ಕೋ ಹೋಗು ಆಮೇಲೆ ನಾನೂ ಬರ್ತೀನಿ ಅಂತ ಕಳಿಸಿದ್ಲು. ಇದೇನಪ್ಪಾ ಇವಳು ಹಿಂಗೆ ಹೇಳ್ತಿದ್ದಾಳೆ ನಾನು ನಾಟ್ಕ ನೋಡೋಕೆ ಬಂದಿದೀನಿ ಅಂತ ಅವರಿಗೆ ಹೇಗೆ ಗೊತ್ತಾಗುತ್ತೆ ಮಾತಾಡಿಸದಿದ್ದರೆ ಅಂತ ಗೊಣಗಿಕೊಂಡು ಬಂದು ಕೂತೆ. ಅಮಲೇ ಅವಳು ಸಾಕವ್ವನ ಪಾತ್ರ ಮಾಡುವ ಮುನ್ನ ಅಮ್ಮಾ ಯಾರ ಜೊತೇನೂ ಹೆಚ್ಚು ಮಾತಾಡಲ್ವಂತೆ ಅಂದ್ಳು. ಆಗ ಒಂಚೂರು ಸಮಾಧಾನ ಆಯ್ತು.

ನಾಟ್ಕ ಶುರು ಆಯಿತು. ಅಮ್ಮನ ರಂಗ ಪ್ರವೇಶ ಆಯಿತು. ನನ್ನ ನರಗಳಲ್ಲ ಮೂಳೆ ಮೂಳೆಗಳೆಲ್ಲಾ ಜುಮ್ ಅಂದುಬಿಟ್ಟವು. ಕಣ್ಣು ಅದುರುತ್ತಾ, ಮನಸು ಮಿಡಿಯುತ್ತಾ ಮೆದುಳು ಕುಣಿಯೋಕೆ ಶುರು ಮಾಡಿಬಿಟ್ಟವು. ಇಡೀ ಕಲಾಕ್ಷೇತ್ರ ಪೂರ್ತಿ ತುಂಬಿ ಹೋಗಿತ್ತು. ಅಮ್ಮ ಬಂದ ಕೂಡ್ಲೇ ಆ ಪಾಟಿ ಚಪ್ಪಾಳೆ ನಾ ನನ್ನ ಜೀವನದಲ್ಲಿ ಮೊದಲು ಕೇಳಿದ್ದು ಆಗಲೇ. ನಾ ಓದಿಕೊಂಡ ಕಾವ್ಯ ಮೀಮಾಂಸೆ, ಭರತನ ನಾಟ್ಯಶಾಸ್ತ್ರ, ಗ್ರೀಕ್ ನಾಟಕಗಳು ಮತ್ತು ರಂಗದ ಕಲ್ಪನೆಗಳು, ಮಹಾಕಾವ್ಯದ ಲಕ್ಷಣಗಳು, ಎಲ್ಲಾ ಕೈ ಕಟ್ಟಿ ಕೂತುಬಿಟ್ಟವು. ವಿಮರ್ಶೆ ಮತ್ತು ಮೀಮಾಂಸೆಯ ಪಾಠ ಕೇಳುವಾಗ ಮತ್ತು ಓದಿಕೊಂಡಾಗ ಏನೇನು ಗ್ರಹಿಸಿದ್ದೆನೋ ಅದೆಲ್ಲಾ ಅದಕ್ಕಿಂತ ಒಂದು ಪಟ್ಟು ಹೆಚ್ಚೇ ಅನುಭವಕ್ಕೆ ಬಂತು. ಅನುಭವ ಜನ್ಯ ಕಲಾಕೃತಿ ಸಾರ್ವಕಾಲಿಕ ಅಂತ ಮತ್ತೆ ಸ್ಪಷ್ಟ ಆಯಿತು. ಥಿಯರಿ ಓದಿದ್ದೆಲ್ಲಾ ಅನುಭವಕ್ಕೆ ಬಂದ್ರೆ ಅದೇ ನಿಜದ ಓದು ಅಲ್ವಾ. ‘ಕಾವ್ಯೇಷು ನಾಟಕಂ ರಮ್ಯಂ’ ಸತ್ಯ ಸತ್ಯ ಅನ್ನಿಸಿಬಿಡ್ತು ಅವತ್ತು ಸಾಕವ್ವನನ್ನು ನೋಡಿ.
ಒಂದೊಂದು ಸೀನ್ ನಲ್ಲೂ ಅಮ್ಮ ಎಷ್ಟು ಚಂದ ಮಾಡುತ್ತಿದ್ದರು ಅಂದ್ರೆ ನಾನಿಲ್ಲಿ ಅದನ್ನು ವ್ಯಾಖ್ಯಾನಿಸಲು ಹೋದ್ರೆ ಅದು ದಂಡದ ಕೆಲಸ. ಯಾಕಂದ್ರೆ ಇಡೀ ನಾಡಿಗೆ ಅಮ್ಮನ ಅಭಿನಯ ಗೊತ್ತಿರುವಾಗ ನಾ ಏನು ಹೇಳೋದು ಇದೆ ಹೇಳಿ. ಏನೇ ಆಗಲಿ ನಾ ಎಂ.ಎ ಮಾಡುವಾಗ ಒಡಲಾಳ ಓದಿದ್ದೆ ಆಗ ಅರ್ಥ ಆಗಿತ್ತು. ಸಾಕವ್ವನನ್ನು ನೋಡಿದ ಮೇಲೆ ಒಡಲಾಳ ರಕ್ತಕ್ಕೆ ಹೋಗಿ ಉಸಿರಾಡೋಕೆ ಆರಂಭಿಸಿಬಿಟ್ಟಿತು.

ಅಮ್ಮ ತನ್ನ ಎಳೆಯ ವಯಸ್ಸಿನಲ್ಲಿ ಸಾಕವ್ವನ ಪಾತ್ರ ದೆಹಲಿಯಲ್ಲಿ ಮಾಡಿದ್ದಾಗ ಅಲ್ಲಿನ ಪತ್ರಿಕೆಯೊಂದು ರಂಗಭೂಮಿಗೆ ಅಂತೇನಾದ್ರೂ ಆಸ್ಕರ್ ಪ್ರಶಸ್ತಿ ಇದ್ದಿದ್ದರೆ ಅದನ್ನು ಉಮಾಶ್ರೀ ಅವರಿಗೆ ಮೊದಲು ಭಾರತದಲ್ಲಿ ಕೊಡಬೇಕು ಅಂತ ಬರೆದಿತ್ತಂತೆ. ಅಷ್ಟರ ಮಟ್ಟಿಗೆ ಕಲೆ ಮತ್ತು ಅನುಭವ ಮುಪ್ಪುರಿಗೊಂಡ ಪಾತ್ರ ಅದಾಗಿತ್ತು ಅಂತ ಎಷ್ಟೋ ಜನರ ಬಾಯಲ್ಲಿ ನಾನು ಕೇಳಿದ್ದೇನೆ. ನಾನು ನೋಡಿದ ಮೊದಲ ಷೋ ಕೂಡ ಅಷ್ಟೇ ಚೆನ್ನಾಗಿ ಮೂಡಿಬಂದಿತ್ತು. ಗಂಟೆಗಟ್ಟಲೆ ಹಣ್ಣು ಹಣ್ಣು ಮುದುಕಿಯಂತೆ ಬಾಗಿ ನಡೆಯುವ, ದನಿ ನಡುಗಿಸಿ ಮುದುಕಿಯ ದನಿ ಮಾಡಿಕೊಳ್ಳುವ, ಮತ್ತು ನೋಟ ಭಾವಗಳೆಲ್ಲವನ್ನು ವಯಸಿದ್ದಾಗಲೇ ಮುಪ್ಪಾಗಿಸಿಕೊಂಡು ಅಭಿನಯಿಸುವುದರ ಹಿಂದಿನ ಕಲಾಪ್ರೀತಿ ಮತ್ತು ಶ್ರಮ ಅಮ್ಮನಲ್ಲಿ ಬಿಟ್ಟು ಕನ್ನಡದ ಮಟ್ಟಿಗೆ ನಾನಂತು ಬೇರೆ ಯಾರಲ್ಲೂ ಕಂಡಿಲ್ಲ. ಸಾಕವ್ವನ ಅಭಿನಯದ ಬಗ್ಗೆ ನಾ ಏನೇ ಹೇಳಿದರು ನನ್ನ ಮಾತುಗಳು ಸೋಲುತ್ತವೆ ಅಂತ ಗೊತ್ತು ನನಗೆ. ಹಾಗೇನಾದ್ರೂ ನಾ ಮಾಡಿದ್ರೆ, ಹರಿಯುವ ನದಿಯನ್ನು ವಿವರಿಸೋ ಕೆಲಸದ ತರ. ಎಷ್ಟು ಹೇಳಿದ್ರೂ ಮುಗಿಯಲ್ಲ ಹರಿಯುತ್ತಲೇ ಇರತ್ತೆ ಅದು. ಕಡಲಿಗೆ ಸೇರಿತು ಕೊನೆ ಕಂಡಿತು ಅಂದುಕೊಂಡರೆ, ಎಲ್ಲಿ ಹೋಯಿತು ಎಲ್ಲಿ ಸೇರಿತು ಅಂತ ಹುಡುಕಿ ಹುಡುಕಿ ಸೋಲಬೇಕಾಗುತ್ತೆ. ಕೊನೆಗೆ ಮತ್ತೆ ಮೂಲಕ್ಕೆ ಬರಬೇಕಾಗುತ್ತೆ ಅಷ್ಟೇ. ಅಂದ ಹಾಗೆ ಇಡೀ ಕನ್ನಡ ನಾಡು ಮತ್ತೆ ರಂಗದ ಮೇಲೆ ಸಾಕವ್ವ ಬರೋದನ್ನು ನಿರೀಕ್ಷಿಸುತ್ತಲೇ ಇದೆ. ಆ ದಿನ ಬೇಗ ಮತ್ತೆ ಬರಲಿ ಅನ್ನೋ ಒಡಲಾಳದ ಆಶಯ ನನ್ನಂತ ಅನೇಕ ಜೀವಗಳದ್ದು ಕೂಡ. ಪುಟ್ಮಲ್ಲಿ ತರಾನೇ ನಾಟಕದಲ್ಲಿ ಮಾಡಿದ್ದಾರೆ ಅನ್ನೋ ಮಾತನ್ನು ನೆನ್ಕೊಂಡು ಸಾಕವ್ವನ ಅಭಿನಯ ನೋಡಿದ ಮೇಲೆ ಪುಟ್ಮಲ್ಲಿ ಸಾಕವ್ವನ ಮರಿ ಮಗಳು ಅಂದುಕೊಂಡೆ.
ಉಮಾಶ್ರೀ ಅವರ ಮಗ, ಅಂದ್ರೆ ನಮ್ಮ ಭಾವ ಗದೆ ಹಿಡ್ಕೊಂಡು, ಕಾಗದದ ಕಿರೀಟ ಹಾಕ್ಕೊಂಡು, ದೊಗಳೆ ಚಡ್ಡಿ ಇಕ್ಕೊಂಡು ಒಂದು ಹಾಡಿನ ರೂಪದ ಡೈಲಾಗ್ ಹೇಳುತ್ತಾ ರಂಗದ ಮೇಲೆ ಬಂದ್ರು. ಅದೂವರೆಗೂ ನಾ ನಾಟಕವನ್ನು ಸೀರಿಯಸ್ ಆಗಿ ನೋಡುತ್ತಿದ್ದವನು ಕಿಸಕ್ಕನೆ ನಕ್ಕು ಪಕ್ಕದಲ್ಲೇ ಕೂತಿದ್ದ ಶೇತಮ್ಮನನ್ನ ನೋಡಿದೆ. ಅವಳ ಮುಖ ಪೂರ್ತಿ ಕೆಂಪಾಗಿಹೋಗಿತ್ತು. ಆಮೇಲೆ ಮತ್ತೆ ಗಂಭೀರವಾಗಿ ನಾಟಕ ನೋಡುವ ಕಡೆ ಗಮನ ಕೊಟ್ಟೆ. ಅದೆಲ್ಲಾ ಆದ ಮೇಲೆ ನಾಟಕದ ಕೊನೆಯ ಭಾಗಕ್ಕೆ ಬಂದಾಗ ಸಾಕವ್ವನ ಮನೆಯಲ್ಲಿ ಎಲ್ಲರೂ ಪೋಲೀಸರ ದಡಬಡಕ್ಕೆ ನಲುಗುತ್ತಿರುವಾಗ ಅಮ್ಮನ ಮುಖ ಮತ್ತು ನಮ್ಮ ಭಾವನವರ ಇಬ್ಬರ ಮುಖವನ್ನು ನಾನು ನೋಡುತ್ತಲೇ ಇದ್ದೆ. ನಮ್ಮ ಭಾವನವರ ಮುಖಭಾವ ಗಮನಿಸುತ್ತಿದ್ದರೆ ತನ್ನ ತಾಯಿಗೆ ಏನಾದ್ರೂ ಆಗಿಬಿಡುತ್ತೇನೋ ಅನ್ನುವ ಹಾಗೆ ಅಭಿನಯಿಸುತ್ತಿದ್ದರು. ಅದು ಅಭಿನಯ ಮಾತ್ರ ಅಲ್ಲ ಅವರ ಒಡಲಾಳದಿಂದ ಬಂದ ಸಂಕಟವೇ ಸರಿ. ಅಯ್ಯೋ, ನಾನಾದ್ರೂ ಈ ತಾಯಿಯ ಹೊಟ್ಟೆಯಲ್ಲಿ ಹುಟ್ಟಬಾರದಿತ್ತೆ ಅಂದುಕೊಂಡೆ. ಆದ್ರೆ ಇಂದು, ಆ ತಾಯಿ ಕರುಳು ಕೊಡದಿದ್ದರೂ ಮಡಿಲು ಕೊಟ್ಟಿದ್ದಾಳೆ.
ಸರಿ ನಾಟಕ ಎಲ್ಲಾ ಮುಗೀತು. ಅಮ್ಮನನ್ನು ಮಾತಾಡಿಸಲು ಜನ ಎಲ್ಲಾ ಓಡಿ ಬಂದು ಸ್ಟೇಜ್ ಹತ್ತಿದರು. ಆದ್ರೆ ಅವರು ತುಂಬಾ ಸುಸ್ತಾಗಿ ಹೋಗಿದ್ದರು ಆಗಲೇ. ಆದ್ರೂ ಅಭಿಮಾನಿಗಳನ್ನು ಮಾತಾಡಿಸಿ ಫೋಟೋಗಳಿಗೆ ಜೊತೆಯಾಗುತ್ತಿದ್ದರು. ನಾನೂ ದೂರದಲ್ಲಿ ನಿಂತಿದ್ದೆ. ಮನಸೊಳಗೆ ಅಮ್ಮಾ ನಾನು ಬೇಲೂರಿನಿಂದ ಬಂದಿದ್ದೀನಿ ನನ್ನೂ ಮಾತಾಡಿಸಿ ಅಂತ ಅನ್ಕೊತಿದ್ದೆ. ಆದ್ರೆ ನನ್ನ ಒಳಗಿದ್ದ ಮುಜುಗರ ಮುನ್ನುಗ್ಗಿ ಮಾತಾಡಿಸಲು ಬಿಡಲೇ ಇಲ್ಲ. ಅವರನ್ನೆಲ್ಲಾ ನೋಡುತ್ತಾ ಅಲ್ಲೇ ಸುಮ್ಮನೇ ನಿಂತಿದ್ದೆ. ನನ್ನ ತಂಗಿ ಅಮ್ಮನಿಗೆ ಸಹಾಯ ಮಾಡಲು ನಾಟಕ ಮುಗಿದ ಕೂಡಲೇ ಗ್ರೀನ್ ರೂಮಿಗೆ ಓಡಿದಳು. ನಮ್ಮ ಬಾವ ಅದೆಲ್ಲಿ ಹೋದರೋ ಗೊತ್ತಾಗಲಿಲ್ಲ. ನಾ ಮಾತ್ರ ಅಲ್ಲೇ ನಿಂತಿದ್ದೆ. ಎಲ್ಲರೂ ಹೋದ ಬಳಿಕ ಅಮ್ಮ ಸೀದ ಗ್ರೀನ್ ರೂಂಗೆ ಹೋದರು. ಅವರು ಮಾತಾಡಿಸಲಿಲ್ಲ ಅವತ್ತು. ನನಗೋ ರವೀಂದ್ರ ಕಲಾಕ್ಷೇತ್ರವೇ ಕುಸಿದು ಹೋದಂತೆ ಆಯಿತು. ಮೊದಲ ಸಲ ನಾಟಕ ನೋಡಿದ್ದೀನಿ. ಅವರ ಸಾಕವ್ವನ ಡ್ರೆಸ್ ನಲ್ಲಿ ಒಂದು ಫೋಟೋ ತೆಗಿಸಿಕೊಳ್ಳಬೇಕು ಅನ್ನೋ ದೊಡ್ಡ ಆಸೆ ಬೇರೆ ಇತ್ತು. ಯಾರದ್ರೂ ಅಲ್ಲಿದ್ದವರ ಬಳಿ ಫೋಟೋ ತೆಗೆಸಿಕೊಂಡು ಇಸ್ಕೊಳೋಣ ಅಂದುಕೊಂಡಿದ್ದೆ. ಅದನ್ನೂ ಯಾರ ಹತ್ತಿರ ಕೇಳೋಕೂ ಭಯಂಕರ ನಾಚಿಕೆ ನನಗೆ. ಇದೆಲ್ಲಾ ಆಗೋ ಹೊತ್ತಿಗೆ ಅಮ್ಮ ಒಳಗೆ ಹೋಗಿ ಮೇಕಪ್ ತೆಗೆದುಕೊಂಡು ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೋತಿದ್ರು. ತುಂಬಾ ಬೇಸರ ಆಯಿತು ಫೋಟೋ ಹಿಡಿಸಿಕೊಳ್ಳಲಿಲ್ಲ ಅಂತ. ಸರಿ ಎಲ್ಲ ಹೊರಗೆ ಬಂದ್ರು. ನಾ ಅವರೆಲ್ಲಾ ಬರೋ ತನಕ ಕಾದಿದ್ದು ಅಮ್ಮಾ ಅಂದೆ. ಅವರು ‘ನಾಟಕ ಚೆನ್ನಾಗಿತ್ತಾ ಮಗ’ ಅಂದ್ರು. ನಾ ಕಣ್ಣಲ್ಲಿ ಹೌದು ಅಂದೆ. ನಕ್ಕರು ಸುಸ್ತಿತ್ತು ಅವರಿಗೆ. ನಾ ಹೊರಡುತ್ತೇನೆ ಅಂದೆ. ಮನೆಗೆ ಬಂದು ಊಟ ಮಾಡಿಕೊಂಡು ಬೆಳಗ್ಗೆ ಎದ್ದು ಹೋಗು ಅಂದ್ರು. ಮನೆ ಪಾಠದ ಹುಡುಗ್ರು ಬೆಳಿಗ್ಗೆ ಬರೋ ಬ್ಯಾಚ್ ಇತ್ತು. ಇಲ್ಲಮ್ಮಾ ಹೊರಡುತ್ತೇನೆ ಅಂತ ಸೀದ ಬೇಲೂರಿನ ಬಸ್ ಹತ್ತಿದೆ. ಶೇತಮ್ಮಾ ಮನೆಗೆ ಬಾರೋ ಅನ್ನೋ ತರ ನೋಡಿದ್ಲು ಅಷ್ಟೇ. ನಾನೂ ಇನ್ನೊಂದು ಸಲ ಬರ್ತೀನಮ್ಮಾ ಅನ್ನೋ ತರ ನೋಡಿದೆ. ಅವತ್ತು ಅಮ್ಮ ನಾನು ಶೇತಮ್ಮ ಕಣ್ಣಲ್ಲಿ ಮಾತಾಡಿಕೊಂಡಿದ್ದು ಇಂದಿಗೂ ಕಣ್ಣಿಗೆ ಕಟ್ಟಿದ ಹಾಗಿದೆ.

ಇನ್ನೊಂದು ವಿಷಯ ಹೇಳಿ ಮುಗಿಸುತ್ತೇನೆ. ಗಾಯಕ್ಕ ಉಮಾಶ್ರೀ ಅವರ ಮಗಳು. ಗಾಯತ್ರಿ ರಮೇಶ್ ಪೂರ್ತಿ ಹೆಸರು ಈಗ. ಅವರು ದಂತ ವೈದ್ಯೆ. ಈಗ ಅವರಿರುರುವುದು ಖಾನ್ಪುರದಲ್ಲಿ. ಜೀವನೋತ್ಸಾಹದ ಅಕ್ಕ ಅವರು. ಅವ್ರ ಮಾತುಗಳನ್ನು ಕೇಳೋದೇ ಅಂದು ಖುಷಿ ನನಗೆ. ಅಮ್ಮನ ಮೇಲೆ ಅಪಾರವಾದ ಪ್ರೀತಿ ಮತ್ತು ಗೌರವ ಇಟ್ಟುಕೊಂಡಿರುವ ಜೀವ ಅವರದ್ದು. ಇವರೂ ಕೂಡ ರಂಗ ಸಂಪದದ ಪ್ರಸ್ತುತಿ ಉಮಾಶಂಕರ್ ಅವರ ನಿರ್ದೇಶನದ ಎರ್ಮ ನಾಟಕದಲ್ಲಿ ಅಮ್ಮನ ಜೊತೆ ಮಗಳ ಪಾತ್ರ ಮಾಡಿದ್ದರಂತೆ. ಇದು ಹತ್ತನ್ನೆರಡು ವರ್ಷಗಳ ಹಿಂದಿನ ಮಾತು. ಇವರೂ ಕೂಡ ಮುಖ್ಯ ಪಾತ್ರದಲ್ಲಿ ಜೀವ ತುಂಬಿ ಅಭಿನಯಿಸಿದ್ದರು ಅಂತ ಅಮ್ಮನ ರಂಗ ಸಂಪದದ ಸ್ನೇಹಿತರು ನನ್ನ ಬಳಿ ಹೇಳಿದ್ದುಂಟು. ನಾ ಗಾಯಕ್ಕನ ಅಭಿನಯದ ಬಗ್ಗೆ ಕೇಳಿದ್ದು ಬಿಟ್ಟರೆ ನೋಡಿಲ್ಲ. ಆದ್ರೆ ಅವರು ಹಾಡುಗಳನು ಗುನುಗುತ್ತಿರುವುದನ್ನು ಕೇಳಿ ಅವರೊಳಗಿನ ಕಲಾವಿದೆಯನ್ನು ಕಂಡಿರುವುದಂತೂ ನಿಜ.
ಬೇರಿನ ಗುಣಾನೇ ಹೀಗಲ್ವ. ತನ್ನ ಸತ್ವವನ್ನು ಕೊಂಬೆಗೆ, ರೆಂಬೆಗೆ, ಎಲೆಗೆ, ಹೂವಿಗೆ, ಕೊನೆಗೆ ಕಾಯಿಗೆ ಹಣ್ಣಿಗೆ ಕೊಂಡೊಯ್ಯುವುದು. ಉಮಾಸಿರಿ ಅನ್ನೋ ಬೇರು ಏನೂ ಕೇಳದೇ ಕಲೆಗೆ ಕೊಟ್ಟಿದ್ದು ಎಷ್ಟೋ. ಕನ್ನಡದ ಮಣ್ಣಿನಲ್ಲಿ ಕನ್ನಡದ ಮನಸಿನಲ್ಲಿ ಈ ಬೇರು ಗಟ್ಟಿಯಾಗಿ ಬೇರು ಬಿಟ್ಟಿದೆ. ಹುಲುಸಾಗಿ ಫಸಲು ಕೊಟ್ಟಿದೆ. ಮಣ್ಣೊಳಗೆ ಹುದುಗಿರುವ ಬೇರಿನ ಕೊನೆ ಹುಡುಕಲಾಗದ ಕತ್ತರಿಸಲೂ ಆಗದಂತೆ ಬೇರು ಬಿಟ್ಟಿದೆ. ಶಕ್ತಿ ಅಂದ್ರೆ ಇದೇ ಅಲ್ಲವೇ. ಈ ಬೇರು ಇರೋ ತನಕ ಬೆಳೆನೇ. ಆಮೇಲೂ ಕೂಡ ಬೀಜಗಳು ಮತ್ತೆ ಮತ್ತೆ ಬೇರು ಬಿಡುತ್ತಲೇ ಇರುತ್ತವೆ. ಏನಂತೀರಿ.
 

‍ಲೇಖಕರು G

February 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

10 ಪ್ರತಿಕ್ರಿಯೆಗಳು

  1. ಉಮಾಶ್ರೀ ಅಭಿಮಾನಿಗಳು, ತೇರದಾಳ.

    ನಿಜವಾಗ್ಲೂ ಬಾಬು ಸರ್ ಅಭಿನಯಿಸ್ತಾರೆ ಅಂತ ಗೊತ್ತಿರಲಿಲ್ಲ ರೀ. ರಘುನಂದನ್ ಅವರ ಬರಹ ಓದಿದ ಮೇಲೆ ಅಮ್ಮಾವ್ರ ಮಗ ಮತ್ತು ಮಗಳ ಕಲಾಸಕ್ತಿಗೆ ಶರಣೆನ್ನಬೇಕು. ಒಳ್ಳೇ ತಾಯಿಗೆ ಒಳ್ಳೆ ಮಕ್ಕಳು. ನಮ್ಮ ತೇರದಾಳದಲ್ಲೂ ಅಮ್ಮಾವ್ರ ಒಡಲಾಳ ನಾಟಕ ಮಾಡಿಸಬೇಕು. ಅವರ ಸಾಕವ್ವನ ಪಾತ್ರವನ್ನು ನಮ್ಮ ಮಂದಿ ಕೂಡ ನೋಡಬೇಕು. ಈ ಲೇಖನ ಓದಿದ ಮೇಲೆ ಮತ್ತು ಫೋಟೋಗಳನ್ನು ನೋಡಿದ ಮೇಲೆ ಬಾಬಣ್ಣ ಅವರ ಮೇಲೆ ಇನ್ನೂ ಗೌರವ ಹೆಚ್ಚಾಯಿತು. ಅವರು ಖಂಡಿತ ಮುಂದಿನ ಜನ ನಾಯಕರು. ಒಳ್ಳೇ ತಾಯಿ ಹೊಟ್ಟೇಲಿ ಒಳ್ಳೇ ಮಗ. ಒಳ್ಳೇ ಲೇಖನ ಬರೆದಿದ್ದಾರೆ ರಘುನಂದನ್ ಅವರು. ವಾರ ವಾರ ಒಳ್ಳೆ ಒಳ್ಳೇ ಬರಹಗಳನ್ನು ಪ್ರಕಟಿಸಿ ಅಮ್ಮಾವ್ರ ಬಗ್ಗೆ ಹೆಚ್ಚು ತಿಳಿಸಿ ಕೊಡುತ್ತಿರುವ ಅವಧಿ ಪತ್ರಿಕೆಗೆ ತೇರದಾಳದ ಜನ ಋಣಿ.

    ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    ರಘು, ಲೇಖನ ಎಂದಿನಂತೆ ಸರಳ ಸುಂದರ,ರೂಪಕಗಳೆಂಬ ನಗಗಳ ಭಾರವಿಲ್ಲದ ಸರಳ ಹೆಣ್ಣು ನಿಮ್ಮ ಬರವಣಗಿತ್ತಿ! ಒಡಲಾಳ ನಾಟಕವನ್ನು ಸಮುದಾಯ ತಂಡ ತುಮಕೂರಲ್ಲಿ ಪ್ರದರ್ಶಿಸಿ ಇಂದಿಗೆ ಮುವ್ವತ್ತೊ ಮುವ್ವತ್ತೊಂದೊ ವರ್ಷ, ಈಗೇನು ಸೋಜಿಗ ಪಟ್ಟೀರಿ ನೀವು, ಆಗಿನ ನಮ್ಮ ಬೆರಗಿಗೆ ಈಗ ಬಾಯಿಲ್ಲ. ನಾಟಕ ಮುಗಿದು ನಿಜ ಉಮಾಶ್ರೀಯವರು ರಂಗದ ಮೇಲೆ ಬಂದಾಗ ನನಗೆ ಮಾತೇ ನಿಂತುಹೋದವು. ಅಂದಿನಿಂದಲೂ ನಾನು ಉಮಕ್ಕನ ಅಭಿಮಾನಿ. ಸಿಜಿಕೆಯವರ ಅಪೂರ್ವ ಶೋಧ ಈ ಸಾಕವ್ವ. ಆಮೇಲಿನ ಉಮಕ್ಕನ ಪಾತ್ರಗಳೆಲ್ಲ ಒಂದು ತೂಕವಾದರೆ ಈ ಸಾಕವ್ವ, ಮಣಿ ಸಿನಿಮಾದ ಅಮ್ಮ,ಇವೆಲ್ಲ ಒಂದು ತೂಕ. ದೇವನೂರು, ಸಿಜಿಕೆ, ಉಮಕ್ಕ ಈ ತ್ರಿಕೋನದ ಸಂಚಲನ ಅಲೆಕಂಪನ ಇನ್ನೂ ನಿಂತಿಲ್ಲ, ಇದಕ್ಕೆ ನಿಮ್ಮ ಬರಹವೆ ಸಾಕ್ಷಿ. ಮೊದಲ ಸಾಕವ್ವ ರಂಗದ ಮೇಲೆ ಬಂದಾಗ ನೀವಿನ್ನೂ ಹುಟ್ಟಿದ್ದಿರೋ ಇಲ್ಲವೊ ನಾನು ಕಾಣೆ, ಹೀಗೆ ನಾಲ್ಕನೆಯ ಪೀಳಿಗೆಯನ್ನು ಪ್ರಭಾವಿಸುವುದು ಅತ್ಯಂತ ಗಟ್ಟಿ ಕೃತಿಯೊಂದು ಪಡೆಯುವ ದೊಡ್ಡ ಪಾರಿತೋಷಕ.

    ಪ್ರತಿಕ್ರಿಯೆ
  3. ನಾಗರಾಜ್ ಹೆತ್ತೂರ್

    ತುಂಬಾ ಚೆನ್ನಾಗಿದೆ ….

    ಪ್ರತಿಕ್ರಿಯೆ
  4. dr gayathri ramesh

    Wonderfully written raghu. True that i acted with amma. But she allowed me to do it only after i completed my graduation. I acted as her neighbour friend in yarma. That was in 2002.

    ಪ್ರತಿಕ್ರಿಯೆ
  5. ಲಕ್ಷ್ಮೀಕಾಂತ ಇಟ್ನಾಳ

    tuMba Apthavada baraha, endinante, avra odalaalavannu kandumbikonda adrushta nannadu ide,dharwad da rangayanadalli. suMdar lekhan,

    ಪ್ರತಿಕ್ರಿಯೆ
  6. Lakshmi

    ಎಂದಿನಂತೆ ಲೇಖನ ತನ್ನ ತಾನೇ ಓದಿಸಿಕೊಂಡು ಹೋಯಿತು. ನಾನಂತೂ ಒಡಲಾಳ ನಾಟಕ ನೋಡಿಲ್ಲ. ನೋಡಬೇಕೆಂಬ ಹೆಬ್ಬಯಕೆ ಇದೆ….

    ಪ್ರತಿಕ್ರಿಯೆ
  7. Suresh Bidari

    Super…..umashree avaranna hattiradinda nodidavarige avara shakti bagge gottagutte…avaru ondu dodda shakti aa shakti ne avaranna illivaregu karedu tandide….ragunandan sir super thanks for our madam’s information

    ಪ್ರತಿಕ್ರಿಯೆ
  8. Bharavi

    ನಾನು ಉಮಾಶ್ರೀಯವರ ಅಭಿನಯವನ್ನು ’ಪುಟ್ನಂಜ’ ಚಿತ್ರದ ಚಿತ್ರೀಕರಣದ ವೇಳೆ ನೋಡಿದ್ದೆ. ಅಂದು ಆ ಚಿತ್ರ ನನ್ನ ಒಬ್ಬರು ಗೌರವಾನ್ವಿತ ಮಿತ್ರರ ಮನೆಯಲ್ಲಿ(ಚಿಕ್ಕಮಗಳೂರಿನ ಕಳಸ ಸಮೀಪದ ಬಾಳೆಹೊಳೆಯ ತನೂಡಿ ರವಿ ಹೆಗ್ಡೆಯವರ ಮನೆಯಲ್ಲಿ. ಹಿಂದಿಯ ’ಉತ್ಸವ್’ ಚಿತ್ರವೂ ಇಲ್ಲಿಯೇ ಚಿತ್ರೀಕರಣಗೊಂಡಿತ್ತು)ಚಿತ್ರೀಕರಣ ನಡೆಸಿತ್ತು. ಅವರ ಅಭಿನಯ ಒಂದೇ ಶಾಟ್ ಗೆ ಓಕೆ ಆಗುತ್ತಿತ್ತು. ಆ ಸಮಯದಲ್ಲಿ ಯಾರೊಂದಿಗೂ ಹೆಚ್ಚು ಬೆರೆಯದ ಅವರು ಶಾಟ್ ಮುಗಿದ ಕೂಡಲೆ ಉಪ್ಪರಿಗೆಯೇರಿ ಕುರ್ಚಿ ಹಿಡಿದು ಬಿಡುತ್ತಿದ್ದರು. ಅವರ ಸಾಕವ್ವನ ಪಾತ್ರದ ಬಗ್ಗೆ ಪತ್ರಿಕೆಗಳಲ್ಲಿ ಸಾಕಷ್ಟು ಪ್ರಶಂಸಗಳನ್ನು ಓದಿದ್ದೇನೆ. ಅವರು ನಿಜವಾಗಿಯೂ ಕಲೆಯ ತಾಯಿಬೇರು…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: