ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ಸಾಕವ್ವನ ಬಗ್ಗೆ ಗಿರಿಜಾ ಲೋಕೇಶ್ ಹೇಳಿದ್ದು ಹೀಗೆ


ಅನಾದಿ ಕಾಲದಿಂದಲೂ ಪುರಾಣ ಇತಿಹಾಸ ಎಲ್ಲ ತೆಗೆದು ನೋಡಿದ್ರೂ ಹೆಣ್ಣು ಅಂದ್ರೆ ಒಂದು ಭೋಗವಸ್ತು ಅಂತಷ್ಟೇ ಸಮಾಜ ಕಾಣುತ್ತದೆ. ತಾಯಿಯಾಗಿ, ಅಜ್ಜಿಯಾಗಿ, ತಂಗಿಯಾಗಿ, ಅಕ್ಕನಾಗಿ ಹೀಗೆ ಏನೇನೋ ಪಾತ್ರಗಳನ್ನು ಬದುಕಿನಲ್ಲಿ ನಿರ್ವಹಿಸುತ್ತಾಳೆ ಆದ್ರೆ ಅದರ ಬಗೆಗೆ ಕೃತಜ್ಞತಾ ಭಾವವೇ ಇರಲ್ಲ. ಅದರಲ್ಲೂ ಕಲಾವಿದೆಯರು ಅಂದ ಕೂಡಲೇ ಸಮಾಜ ನಿಕೃಷ್ಟವಾಗಿ ಕಾಣುತ್ತದೆ. ಕಲಾವಿದೆಯರಲ್ಲೂ ನಾಟಕ ಮಾಡುವ ಸ್ತ್ರೀಯರು ಅಂದ್ರೆ ಕೀಳಾಗಿ ಕಾಣುವ ಭಾವವೇ ಹೆಚ್ಚು. ಅದು ಯಾವಾಗ ಗೊತ್ತಾಗುತ್ತೆ ಅಂದ್ರೆ ನಮ್ಮ ಮಕ್ಕಳನ್ನು ಮದುವೆ ಮಾಡಿಕೊಡಬೇಕಾದ ಸಮಯದಲ್ಲಿ ಸಂಬಂಧ ಬೆಳೆಸುವಾಗ ನಮ್ಮನ್ನು ಸಮಾಜ ಹೇಗೆ ಕಾಣುತ್ತೆ ಅನ್ನೋದು ಇನ್ನೂ ಸ್ಪಷ್ಟವಾಗಿ ಗೊತ್ತಾಗುತ್ತೆ.
ಅದುವರೆಗೂ ನಮಗೆ ಇವೆಲ್ಲಾ ಏನೂ ಗೊತ್ತಾಗಲ್ಲ. ಬಣ್ಣ ಅಭಿನಯ ಅಂದುಕೊಂಡು ಬದುಕು ಸಾಗಿಸಿರ್ತೀವಿ. ನಾವೇನೋ ಪ್ರೀತಿ ಮಾಡಿ ಮದುವೆ ಮಾಡಿಕೊಂಡು ಜೀವನ ಮಾಡಿರುತ್ತೇವೆ. ಆದ್ರೆ ನಮ್ಮ ನಮ್ಮ ಮಕ್ಕಳಿಗೆ ಒಂದು ಮದುವೆ ಮಾಡುವ ಸಮಯದಲ್ಲಿ ಕಲಾವಿದರ ಮಕ್ಕಳು ಎಂದು ಅದೂ ಇದೂ ಹೇಳುವವರೂ ಇದ್ದಾರೆ. ನಾವೇನೋ ಸೆಲೆಬ್ರೆಟಿಗಳಾದರೂ ಸಮಾಜ ನೋಡುವ ದೃಷ್ಟಿಯೇ ಬೇರೆ. ಇದೆಲ್ಲಾ ಕಷ್ಟಗಳನ್ನು ಉಮಾಶ್ರೀ ಅನುಭವಿಸಿದ್ದಾಳೆ ಕೂಡ.
ನಾನು, ಉಮಾಶ್ರೀ ಅವರೆಲ್ಲಾ ಹೊಟ್ಟೆ ಪಾಡಿಗೆ ಕಲಾವಿದರಾಗಿದ್ದು. ಹಸಿವಿಗಾಗಿ ಕಲಾವಿದರಾಗಿದ್ದು. ಹಸಿವಿದ್ದಾಗ ಮಾತ್ರ ಪರಿಪೂರ್ಣ ಕಲಾವಿದರಾಗಲು ಸಾಧ್ಯ. ಅದು ಎಲ್ಲ ರೀತಿಯ ಹಸಿವು. ಆದ್ರೆ ಈಗಿನ ಕಲಾವಿದರು ಖುಷಿಗೆ, ಟೈಮ್ ಪಾಸ್ ಮತ್ತು ಪ್ರಸಿದ್ಧಿಗೆ ಅಭಿನಯ ಮಾಡುತ್ತಾರೆ. ಹಣ ಬರುತ್ತೆ ಐಶಾರಾಮಿ ಜೀವನ ಮಾಡುವ ಸಲುವಾಗಿ ಬಣ್ಣ ಹಚ್ಚುವವರೇ ಹೆಚ್ಚು ಈಗ. ನಾವೆಲ್ಲಾ ಹಸಿವಿಗಾಗಿ ಕಲಾವಿದರಾಗಿದ್ವಿ. ಜ್ಞಾನ, ಅಕ್ಷರ, ಪಾತ್ರಗಳನ್ನ ಹೇಗೆ ಅಭಿನಯಸಿಯಬೇಕು ಅನ್ನುವ ಹಸಿವೆ ನಮ್ಮನ್ನು ಕಾಡುತಿತ್ತು. ಒಂದು ಹೊಸ ನಾಟಕ ಶುರು ಆಯಿತು ಅಂದ್ರೆ ಎಲ್ಲಾ ಕಲಾವಿದರು ಸೈಡ್ ವಿಂಗ್ ನಲ್ಲಿ ಇರಲೇಬೇಕಿತ್ತು. ಎಲ್ಲಾ ಪಾತ್ರಗಳನ್ನೂ ನೋಡಬೇಕಿತ್ತು. ಕಲಿಯುವ ಹಸಿವಿತ್ತು. ಪ್ರತಿಯೊಬ್ಬರೂ ಹೊಸತನ್ನು ಕಲಿಯುವ ಮತ್ತು ಹೊಟ್ಟೆ ಪಾಡಿನ ಹಸಿವಿಗಾಗಿ ಬಣ್ಣ ಹಚ್ಚುತ್ತಿದ್ದೆವು.
ಉಮಾಶ್ರೀಗಿಂತ ಆರೇಳು ವರ್ಷ ದೊಡ್ಡವಳು ನಾನು. ಆಗ ಟೀನೇಜ್ ನ ಹವ್ಯಾಸಿ ಕಲಾವಿದೆ. ಖುಷಿಗೆ ಅಂತ ನಮ್ಮ ತಂದೆ ತಾಯಿ ಬಾಲ್ಯದಲ್ಲಿ ಭರತ ನಾಟ್ಯ ನೃತ್ಯ ಕಲಿಸಿದ್ದರು. ಮಕ್ಕಳು ಡ್ಯಾನ್ಸ್ ಮಾಡಿದ್ರೆ ಚಂದ ಅಂತ ಮನೆಯವರ ಭಾವನೆ. ಆಗಿನ ಸುಭಾಷ್ ನಗರದಲ್ಲಿ ಅಂದ್ರೆ, ಈಗಿನ ಮೆಜೆಸ್ಟಿಕ್. ಅಲ್ಲಿ ಹಿರಣ್ಣಯ್ಯ ಮಿತ್ರಮಂಡಳಿ ಇತ್ತು. ಹಿರಣ್ಣಯ ಮಿತ್ರಮಂಡಳಿ ಅಂದ್ರೆ ನಮಗೆಲ್ಲಾ ಒಂಥರಾ ತವರು ಮನೆ ಇದ್ದ ಹಾಗೆ. ಹವ್ಯಾಸಿ ಕಲಾವಿದೆಯಾಗಿ ಹಿರಣ್ಣಯ ಮಿತ್ರ ಮಂಡಳಿಗೆ ನೃತ್ಯ ಮಾಡಲು ಹೋಗ್ತಿದ್ದೆ. ಅದೂ ಕೂಡ ಹೋಗಿದ್ದು ಹಸಿವಿಂದಲೇ. ಅಂದ್ರೆ ಅದು ಕಲಿಕೆಯ ಹಸಿವಲ್ಲ. ಹೊಟ್ಟೆ ಪಾಡಿನ ಹಸಿವಿಗಾಗಿ ಹಿರಣ್ಣಯ ಮಿತ್ರ ಮಂಡಳಿಗೆ ಹೋಗಿ ಸೇರಿಕೊಂಡಿದ್ದೆ. ಮೊದ ಮೊದಲು ನಮ್ಮ ತಂದೆ ಒಬ್ಬ ಒಳ್ಳೆಯ ಬಿಸಿನೆಸ್ ಮೆನ್ ಆಗಿದ್ರು. ಅದೇನು ದುರಾದೃಷ್ಟವೋ ಏನೋ ವ್ಯಾಪಾರ ಎಲ್ಲ ಬಿದ್ದು ಹೋಗಿ ನಾವೆಲ್ಲಾ ಬೀದಿಗೆ ಬಂದ್ವಿ. ತಂದೆಗೆ ಸಹಾಯ ಆಗಲಿ ಎಂದು ಅನಿವಾರ್ಯವಾಗಿ ನಾನೂ ಕೂಡ ಹೊಟ್ಟೆ ಪಾಡಿನ ಹಸಿವಿಗಾಗಿ ಹಿರಣ್ಣಯ ಮಿತ್ರಮಂಡಳಿಗೆ ಹೋದೆ. ಕೊಟ್ಟು ತಿನ್ನುವ ಕುಟುಂಬ ಬೀದಿಗೆ ಬಂದಾಗ ಕೈ ಹಿಡಿಯುವವರು ಯಾರು ಇರಲಿಲ್ಲ. ಬಣ್ಣದ ದಾರಿಗೆ ಹೋಗದೇ ದಾರಿಯಿರಲಿಲ್ಲ.
ಹೀಗೆ ಒಂದು ಸಲ ನೃತ್ಯ ಮಾಡಿ ಬಟ್ಟೆ ಬದಲಿಸುತ್ತಿದ್ದೆ. ಆಗೆಲ್ಲಾ ತಟಿಗೆಗಳಿಂದ ನಾಟಕದ ಟೆಂಟ್ ನಿರ್ಮಿಸಿರುತ್ತಿದ್ದರು. ನಾ ಬಟ್ಟೆ ಬದಲಿಸುವುದನ್ನ, ನನ್ನ ವೇಷ ಭೂಷಣಗಳನ್ನು, ಆ ತಟಿಗೆಯ ಮಧ್ಯದ ಸಂಧಿಯಿಂದ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದವಳೇ ಉಮಾಶ್ರೀ. ನಾ ‘ಯಾರೆ’ ಅದು ಅಂದಿದ್ದಕ್ಕೆ ‘ನಾನು ಉಮೀ’ ಅಂದಿದ್ಲು. ನಾ ಕರೆದು ‘ನೀನೂ ನಾಟಕದಲ್ಲಿ ಪಾರ್ಟ್ ಮಾಡಬೇಕೇನೆ ?’ ಅಂತ ಕೇಳಿದೆ. ಹೂ ಅಂತ ತಲೆ ಆಡಿಸಿದಳು ಉಮಾಶ್ರೀ. ನಾನು ಬೇಡಮ್ಮ ಇದೆಲ್ಲಾ ನಮಗೇ ಸಾಕು ಚೆನ್ನಾಗಿ ಓದ್ಕೋ ಹೋಗಮ್ಮ ಅಂದು ಕಳಿಸಿದ್ದೆ. ಅಷ್ಟು ಹೊತ್ತಿಗಾಗಲೇ ಉಮಾಶ್ರೀ ಹಿರಣ್ಣಯ ಮಿತ್ರ ಮಂಡಳಿಯ ನಂಟು ಬೆಳೆಸಿಕೊಂಡಿದ್ದಳು ಎಂದು ಆಮೇಲೆ ಗೊತ್ತಾಯಿತು. ನಂಟು ಅಂದ್ರೆ ಪಾರ್ಟ್ ಮಾಡಿ ಅಲ್ಲ. ಅಲ್ಲಿದ್ದು ಎಲ್ಲವನ್ನು ನೋಡಿ ಕಲಿಯುವ ಅದಮ್ಯ ಆಸಕ್ತಿಯಿಂದ. ರಂಗಭೂಮಿಯ ಹಾಗು ಹೋಗುಗಳನ್ನು ಗಮನಿಸುತ್ತಲೇ ಇದ್ದಳು ಬಾಲ್ಯದಿಂದಲೂ. ಅವತ್ತು ಹಾಗೆ ನೋಡಿದ ಉಮಾಶ್ರೀ ಇವತ್ತು ಎಷ್ಟು ಎತ್ತರದ ಕಲಾವಿದೆಯಾಗಿದ್ದಾಳೆ ಅಂದ್ರೆ ಆಶ್ಚರ್ಯ ಆಗುತ್ತೆ. ನಿಜಾ ಹೇಳ್ತೀನಿ ಆಕೆ ಒಬ್ಬ ಅಭಿಜಾತ ಕಲಾವಿದೆ.

ಇದಾದ ಮೇಲೆ ಮತ್ತೆ ಉಮಾಶ್ರೀಯನ್ನು ನೋಡಿದ್ದು ಯಯಾತಿ ನಾಟಕದ ಸಂದರ್ಭದಲ್ಲಿ. ನನಗೆ ಮದುವೆ ಆಗಿತ್ತು. ಮಕ್ಕಳು ಮರಿ ಎಲ್ಲಾ ಆಗಿತ್ತು. ಅದಾಗ ತಾನೇ ಮರಾಟಿ ಖಾಂಡೇಖರ್ ಅವರ ಕನ್ನಡ ಅನುವಾದ ನಾಟಕ ಓದಿದ್ದೆ. ಅದನ್ನು ಓದುತ್ತಾ ಓದುತ್ತಾ ಅದರಲ್ಲಿನ ಶರ್ಮಿಷ್ಠೆ ಪಾತ್ರವನ್ನು ಮಾಡಬೇಕು ಅಂತ ಅನ್ನಿಸಲು ದಟ್ಟವಾಗಿ ಶುರು ಆಗಿತ್ತು ನನಗೆ. ಹಾಗಂದುಕೊಂಡ ಮಾರನೇ ದಿನ ಆರ್. ನಾಗೇಶ್ ಮತ್ತು ಸಿ.ಜಿ.ಕೆ ಅವರು ಮನೆಗೆ ಬಂದ್ರು. ಮನೆಗೆ ಬಂದವರು ‘ಹೊಸ ನಾಟಕ ಶುರು ಮಾಡುತ್ತಿದ್ದೇವೆ ಅದ್ರಲ್ಲಿ ಗಿರಿಜಮ್ಮ ಪಾರ್ಟ್ ಮಾಡಬೇಕು’ ಅಂತ ಕೇಳಲು ಬಂದಿದ್ರು. ಸರೀ,, ನಾಟಕ ಯಾವುದು ಅಂತ ನೋಡಿದ್ರೆ ಕಾರ್ನಾಡರ ಯಾಯಾತಿ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅಂತ ನಾಟಕದಲ್ಲಿ ಅಭಿನಯಿಸಲು ಒಪ್ಪಿದೆ.
ಅಷ್ಟು ಹೊತ್ತಿಗೆ ಉಮಾಶ್ರೀ ಕನ್ನಡ ರಂಗಭೂಮಿ ಮತ್ತು ಸಿನೆಮಾದಲ್ಲಿ ಹೆಸರಾಗಿದ್ದ ಕಲಾವಿದೆ. ಯಾವ ಪೇಪರ್ ತಗೊಂಡ್ರೂ ಉಮಾಶ್ರೀ ಅಭಿನಯದ ನಾಟಕದ್ದೇ ಸುದ್ಧಿ. ಇದೇನಪ್ಪಾ ನಾನು ನಾಟಕ ಮಾಡೋದನ್ನ ಬಿಟ್ಟಿದ್ದೇ ತಪ್ಪಾಯ್ತು. ಮದುವೆ ಮಕ್ಕಳು ಎಲ್ಲಾ ಮಾಡಿಕೊಳ್ಳದಿದ್ದರೆ ನಾನೂ ಇವತ್ತು ಎಲ್ಲಾ ನಾಟಕದಲ್ಲಿ ಅಭಿನಯಿಸಬಹುದಿತ್ತು ಮಿಂಚಬಹುದು ಅಂತಾ ತುಂಬಾ ಅನ್ನಿಸೋದು. ಅವಳನ್ನು ನೋಡಿದ್ರೆ ಹೊಟ್ಟೆಕಿಚ್ಚು ಬೇರೆ. ಸರಿ ಹೀಗಿದ್ದಾಗ ಮತ್ತೆ ನಾಟಕ ಮಾಡಲು ಕರೆ ಬಂದಿದ್ದು ಸಂತಸವಾಗಿ ಸಂಭ್ರಮದಿಂದ ಸಿದ್ಧಳಾಗಿಬಿಟ್ಟಿದ್ದೆ. ಆ ವೇಳೆಗೆ ಮದುವೆ ಮತ್ತು ಮಕ್ಕಳು ಅಂತೆಲ್ಲಾ ಆಗಿ ನಾಟಕ ಮಾಡೋದನ್ನು ಬಿಟ್ಟು ಸುಮಾರು ದಿನ ಆಗಿತ್ತು. ನಾನೂ ಒಣಗಿದ ನೆಲದಂತೆ ಕಾಯುತ್ತಿದ್ದೆ. ಎಲ್ಲಾ ಕಡೆ ಉಮಾಶ್ರೀ ಉಮಾಶ್ರೀ ಅನ್ನುವ ಮಾತುಗಳು ಸದಾ ಕಿರಿ ಕಿರಿ ಉಂಟು ಮಾದುತ್ತಿತ್ತು. ಆ ಸಮಯದಲ್ಲಿ ಉಮಾಶ್ರೀ ಬಹಳ ದೊಡ್ಡ ಹವಾ ಕನ್ನಡ ರಂಗಭೂಮಿಯಲ್ಲಿ ಸೃಷ್ಟಿಸಿಬಿಟ್ಟಿದ್ದಳು. ಎಲ್ಲೆಲ್ಲೂ ಉಮಾಶ್ರೀ, ಉಮಾಶ್ರೀ ಅನ್ನುವ ವಾತಾವರಣ ಇತ್ತು. ಸರಿ ಮಾರನೇ ದಿನ ಯಯಾತಿ ನಾಟಕದ ರಿಹರ್ಸಲ್ ಗೆ ಅಂತ ಹೋದೆ. ಅಲ್ಲಿ ಹೋದ್ರೆ. ಅಲ್ಲೂ ಉಮಾಶ್ರೀನಾ. ಇದೇನಪ್ಪಾ ಅನ್ಕೊಂಡೆ. ಇರಲಿ, ಒಂದು ಕೈ ನೋಡೇ ಬಿಡೋಣ ಇರು ಉಮಾಶ್ರೀ ಮಾಡ್ತೀನಿ ನಿನಗೆ ಅನ್ಕೊಂಡೆ.
ಅಂದು ಹಿರಣ್ಣಯ ಮಿತ್ರ ಮಂಡಳಿಯಲ್ಲಿ ಪರದೆ ಸರಿಸಿ ನನ್ನನ್ನು ನೋಡಿದ್ದು ಇದೇ ಉಮಾಶ್ರೀ ಅನ್ನೋದು ಮರೆತು ಬಿಟ್ಟಿದ್ದೆ. ಆಮೇಲೆ ಗೊತ್ತಾಯ್ತು ಅದೇ ಉಮೀ ಈ ಉಮಾಶ್ರೀ ಅಂತ. ಅದೇ ನಾಟಕದಲ್ಲಿ ಉಮಾಶ್ರೀ ಸ್ವರ್ಣಲತೆ ಪಾತ್ರ ಮಾಡಿದ್ಲು. ನಾನು ಶರ್ಮಿಷ್ಠೆ ಪಾತ್ರ ಮಾಡಿದ್ದೆ. ತುಂಬಾ ಚೆನ್ನಾಗಿ ಸ್ವರ್ಣಲತೆ ಪಾತ್ರ ಮಾಡಿದ್ದಳು ಉಮಾಶ್ರೀ. ಇವತ್ತೂ ಮರೆಯಲಾಗುವುದಿಲ್ಲ ಉಮಾಶ್ರೀ ಅಂದು ಮಾಡಿದ ಸ್ವರ್ಣಲತೆಯ ಪಾತ್ರವನ್ನು. ನಾಟಕ ಯಶ್ವಸಿ ಆಯಿತು. ಮಾರನೇ ದಿನ ಪ್ರಜಾವಾಣಿ ಪತ್ರಿಕೆ ತೆಗೆದು ನೋಡಿದ್ರೆ ಯಯಾತಿ ನಾಟಕದಲ್ಲಿ ಗಿರಿಜಾ ಲೋಕೇಶ್ ಅತ್ಯುತ್ತಮ ಅಭಿನಯ ಅಂತ ಬರೆದಿತ್ತು. ಖುಷಿಯೋ ಖುಷಿ. ಸ್ವರ್ಗಕ್ಕೆ ಮೂರೇ ಗೇಣು. ಅದೂವರೆಗೂ ಉಮಾಶ್ರೀ ಸುದ್ದಿನೇ ಎಲ್ಲಾ ಪತ್ರಿಕೆಯಲ್ಲಿ ಬರುತ್ತಿತ್ತಲ್ಲ ಅದನ್ನು ನಾನು ಮೀರಿಸಿಬಿಟ್ಟೆ ಅಂತ ಹಿರಿ ಹಿರಿ ಹಿಗ್ಗಿದೆ . ಈ ವಿಷ್ಯ ಸ್ನೇಹಿತರಿಗೆಲ್ಲಾ ಫೋನ್ ಮಾಡಿ ಹೇಳಿ ಬಿಡೋಣ ಅಂತ ನನ್ನ ಗೆಳತಿಗೆ ಫೋನ್ ಮಾಡಿ, ‘ ನಾಟಕದಲ್ಲಿ ನನ್ನ ಅಭಿನಯ ಹೊಗಳಿ ಬರೆದಿದ್ದಾರೆ ಕಣೆ’ ಅಂದೆ. ಅದಕ್ಕೆ ಅವಳು ‘ಹೌದಾ ನಿನ್ನನ್ನು ಹೊಗಳಿದ್ದಾರ ? ನಮ್ಮ ಮನೆಗೆ ಬಂದ ಪತ್ರಿಕೆಯಲ್ಲಿ ಉಮಾಶ್ರೀ ಅಭಿನಯ ಚೆನ್ನಾಗಿದೆ’ ಅಂತ ಬರೆದಿದ್ದಾರೆ ಅಂದ್ಲು. ಹೌದಾ ಎಂದು ಪೆಚ್ಚಾಗಿಬಿಟ್ಟೆ.
ಉಮಾಶ್ರೀ ಸಿನೆಮಾ ರಂಗದಲ್ಲಿ ಹೆಜ್ಜೆ ಇಡುತ್ತಿದ್ದಳು. ಅನುಭವ ಸಿನೆಮಾ ಮತ್ತು ಬೇರೆ ಬೇರೆ ಡಬ್ಬಲ್ ಮೀನಿಂಗ್ ಪಾತ್ರಗಳನ್ನ ನೋಡಿದಾಗ ಯಾಕಪ್ಪಾ ಈ ಹೆಣ್ಣು ಮಗಳನ್ನು ಇಂಡಸ್ಟ್ರೀ ಹೀಗೆ ನಡೆಸಿಕೊಳ್ಳುತ್ತಿದೆಯಲ್ಲ ಅಂತಾ ತುಂಬಾ ನೋವಾಗುತ್ತಿತ್ತು. ನನಗೆ ನನ್ನ ಮನೆಯಲ್ಲಿ ಸಮೃದ್ದಿಯಾದ ಪ್ರೀತಿ ಕೊಟ್ಟು ನನ್ನನ್ನು ಕಾಪಾಡಿಕೊಳ್ಳುವ ವಾತಾವರಣ ಇತ್ತು . ನನ್ನ ಪ್ರೀತಿಸುವ ತಂದೆ ಮತ್ತು ಅಣ್ಣ ಎಲ್ಲಾ ಇದ್ರೂ. ಆದ್ರೆ ಉಮಾಶ್ರೀ ಅನ್ನುವ ಹುಡುಗಿಗೆ ಯಾರೂ ಇಲ್ಲವಲ್ಲಪ್ಪ. ನಾನಾದ್ರೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇತ್ತು. ಈ ಡೈಲಾಗ್ ಹೇಳಲ್ಲ ಅಂತ ಧೈರ್ಯವಾಗಿ ಹೇಳಲು ಸಾಧ್ಯ ಆಗುತ್ತಿತ್ತು. ಆದ್ರೆ ನನ್ನ ತರದ ಅವಕಾಶ ಈ ಉಮಾಶ್ರೀ ಅನ್ನೋ ಹುಡುಗಿಗೆ ಇಲ್ಲವಲ್ಲ ಅಂತ ತುಂಬಾ ನೋವಾಗುತ್ತಿತ್ತು. ಉಮಾಶ್ರೀಗೆ ಆಯ್ಕೆಯ ಪ್ರೆಶ್ನೆ ಇರಲೇ ಇಲ್ಲ. ಅವಳು ಮಕ್ಕಳನ್ನು ಸಾಕುವ ಸಲುವಾಗಿ ಬಂದ ಪಾತ್ರವನ್ನು ಒಪ್ಪಿಕೊಳ್ಳಲೇ ಬೇಕಾಗಿತ್ತು. ನಿಜಕ್ಕೂ ಚಿತ್ರರಂಗ ಆ ರೀತಿ ಅವಳನ್ನು ದುಡಿಸಿಕೊಂಡರೂ ದಿಟ್ಟವಾಗಿ ಬದುಕನ್ನು ಕಟ್ಟಿಕೊಂಡು ಈಗ ಸಮಾಜವನ್ನು ಕಟ್ಟುತ್ತಿರುವುದು ನಿಜಕ್ಕೂ ಚಿತ್ರರಂಗದ ಹೆಮ್ಮೆ. ಅಂದು ಡಬ್ಬಲ್ ಮೀನಿಂಗ್ ಪಾತ್ರಗಳಲ್ಲಿ ಅಸಹ್ಯವಾಗಿ ದುಡಿಸಿಕೊಂಡಿದ್ದಕ್ಕೆ ಉಮಾಶ್ರೀಯ ಬಗೆಗೆ ಎಂದಿಗೂ ತಪ್ಪಾಗಿ ಯೋಚಿಸಲು ಸಾಧ್ಯವೇ ಇಲ್ಲ. ನಾವೆಲ್ಲಾ ಹೆಮ್ಮೆ ಪಡಲೇಬೇಕು. ಯಾಕಂದ್ರೆ ಬದುಕಿನ ಅನಿವಾರ್ಯತೆಗಳು ಉಮಾಶ್ರೀಯನ್ನು ಬೆಳಸಿದ್ದು ದಿಟ್ಟತೆಯತ್ತ. ಲೋಕೇಶ್ ಅವರು ತುಂಬಾ ಸಲ ಉಮಾಶ್ರೀ ಮತ್ತು ಚಿತ್ರ ರಂಗದಲ್ಲಿ ನೊಂದ ಹೆಣ್ಣುಮಕ್ಕಳನ್ನು ಕುರಿತು ಹೇಳುತ್ತಿದ್ದರು. ‘ಯಾವೊಬ್ಬ ಹೆಣ್ಣು ಮಗಳು ತಪ್ಪು ಮಾಡುವುದಿಲ್ಲ. ಅಕಸ್ಮಾತ್ ಏನಾದ್ರೂ ತಪ್ಪು ಮಾಡಿದ್ರೆ ಅದರ ಹಿಂದೆ ಒಬ್ಬ ಗಂಡೇ ಇರುತ್ತಾನೆ. ಉಮಾಶ್ರೀ ಮಾಡಿದ್ದು ತಪ್ಪಲ್ಲ. ಬದುಕಿನ ಅನಿವಾರ್ಯತೆಯೂ ಅವಳನ್ನು ಬಿಡಲೇ ಇಲ್ಲ. ಅವಳ ಆಯ್ಕೆಗೆ ಈ ಸಮಾಜ ಅವಕಾಶ ಕೂಡ ಮಾಡಿಕೊಡಲೇ ಇಲ್ಲ’ ಎಂದು ಬೇಸರ ಮಾಡಿಕೊಂಡು ಕಣ್ಣು ತೇವ ಆಗಿಸಿಕೊಂಡ ದಿನಗಳೂ ಕೂಡ ಇವೆ.
ತುಂಬಿದ ಮನೆ ಸಿನೆಮಾದಲ್ಲಿ ಉಮಾಶ್ರೀ ನನಗೆ ಅತ್ತೆ. ಅದೆಂಥಾ ಅಭಿನಯ ಅದನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಲೋಕನಾಥ್ ಅನ್ನುವ ಹಿರಿಯ ಕಲಾವಿದರ ಎದುರು ಉಮಾಶ್ರೀ ಪಾತ್ರ ಮಾಡಿ ಸೈ ಅನ್ನಿಸಿಕೊಂಡಿದ್ದು ಮಾತ್ರ ಉಮಾಶ್ರೀ ಒಳಗಿನ ಕಲಾವಿದೆಯ ಶಕ್ತಿ. ಒಡಲಾಳದ ಸಾಕವ್ವನ ಪಾತ್ರ, ತುಂಬಿದ ಮನೆಯಲ್ಲಿನ ಅತ್ತೆ ಪಾತ್ರದಲ್ಲಿ ಜೀವ ತುಂಬಲು ಸಾಧ್ಯಮಾಡಿಕೊಟ್ಟಿದೆ ಅನ್ನಿಸುತ್ತೆ. ಆ ಸಿನೆಮಾದಲ್ಲಿ ಉಮಾಶ್ರೀ ನನಗೆ ನಿಜವಾದ ಅತ್ತೆಯೇ ಅನ್ನುವಂತೆ ಅನ್ನಿಸುತ್ತಿತ್ತು. ಅದಾದ ಮೇಲೆ ರುಪಾಯಿ ರಾಜ ಸಿನೆಮಾದಲ್ಲೂ ಒಟ್ಟಿಗೆ ಅಭಿನಯ ಮಾಡಿದ್ವಿ. ಇನ್ನೂ ಬೇರೆ ಬೇರೆ ಸಿನೆಮಾಗಳಲ್ಲಿ ನಾನೂ ಉಮಾಶ್ರೀ ಪಾತ್ರ ಮಾಡಿದ್ದೇವೆ. ಸೆಟ್ ನಲ್ಲಿ ನಾವೆಲ್ಲಾ ನಗು ನಗುತ್ತಾ ಇದ್ದರೆ ಬಿಡುವಿನ ವೇಳೆಯಲ್ಲಿ ಉಮಾಶ್ರೀ ಮಾತ್ರ ಒಂದು ಕಡೆ ಕುಳಿತು ಧ್ಯಾನಸ್ಥಳಾಗಿ ಪಾತ್ರದ ಬಗ್ಗೆಯೇ ನಿಗಾವಹಿಸುತ್ತಿದ್ದ ಕ್ಷಣಗಳನ್ನು ನೋಡಿದ್ದೇನೆ. ಅವಳಲ್ಲಿನ ಬದ್ಧತೆಯೇ ಇವತ್ತು ಈ ಎತ್ತರಕ್ಕೆ ಕರೆದುಕೊಂಡು ಹೋಗಿದೆ ಅನ್ನುವುದು ನನ್ನ ಭಾವನೆ.
ಶೂಟಿಂಗ್ ನಡೆಯುವಾಗ ಕೆಲ ಸಂದರ್ಭದಲ್ಲಿ ರಾಜಕೀಯದವರು ಪಕ್ಷದ ವಿಷಯಗಳನ್ನು ಮಾತಾಡುವ ಸಲುವಾಗಿ ಕಾರ್ಯಕರ್ತರು ಬರುತ್ತಿದ್ದರು. ಆಗೆಲ್ಲಾ ನನಗೆ, ಇವಳು ರಾಜಕೀಯಕ್ಕೆ ಹೋಗಬಾರದು. ಮತ್ತೆ ಅಲ್ಲಿ ಇನ್ನು ಯಾವ ಯಾವ ತರದ ನೋವುಗಳನ್ನು ತಿನ್ನುತ್ತಾಳೋ ಅಂತ ಭಯ ಆಗುತ್ತಿತ್ತು. ಆಗೆಲ್ಲಾ ದೇವರೇ ನೀನೇ ಕಾಪಾಡಪ್ಪ ಎಂದು ಕೇಳಿಕೊಂಡಿದ್ದೇನೆ. ಸರಿ, ಆದ್ರೆ ಅದು ಹಾಗೇ ಆಗಲ್ಲಿಲ್ಲ. ಅಲ್ಲೂ ತನ್ನ ದಿಟ್ಟತೆಯನ್ನು ಉಮಾಶ್ರೀ ನಿರ್ವಹಿಸಿದಳು. ಎತ್ತರಕ್ಕೆ ಹೋದಳು, ಮಂತ್ರಿ ಆದಳು. ಕನ್ನಡ ಸಿನಿಮಾ ಲೋಕದಲ್ಲೇ ಸಚಿವೆಯಾದ ಮೊದಲ ಕಲಾವಿದೆ ಉಮಾಶ್ರೀ ಎಂದು ಹೇಳಲು ಸಂತೋಷವಾಗುತ್ತದೆ. ನನಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವಾಗ ಹಳೆಯದೆಲ್ಲಾ ನೆನಪಾಯಿತು, ನಾ ಉಮಾಶ್ರೀ ರಾಜಕೀಯಕ್ಕೆ ಹೋಗೋದು ಬೇಡ ಅಂದುಕೊಂಡಿದ್ದೆ. ಆದ್ರೆ ಅವಳಿಂದಲೇ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆಯಲು ಬಹಳ ಖುಷಿ ಆಗಿತ್ತು. ಇದನ್ನು ಅವತ್ತು ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕಾರ್ಯಕ್ರಮದ ದಿನ ’ನೋಡಿ ಸರ್ ರಾಜಕೀಯಕ್ಕೆ ನಮ್ಮ ಉಮಾಶ್ರೀ ಹೋಗೋದೇ ಇಷ್ಟ ಇರಲಿಲ್ಲ ನನಗೆ. ಆದ್ರೆ ಇವತ್ತು ಅವಳ ಇಲಾಖೆಯಿಂದಲೆ ಪ್ರಶಸ್ತಿ ಪಡೆಯುವಂತಾಗಿದೆ’ ಎಂದು ಸಿದ್ದರಾಮಯ್ಯ ಅವರ ಬಳಿ ಹೇಳಿದ್ದೆ. ಏನೇ ಆಗಲಿ ಉಮಾಶ್ರೀ ಒಬ್ಬ ಪರಿಪೂರ್ಣ ಮಹಿಳೆ. ಅವಳು ಇನ್ನೂ ಎತ್ತರಕ್ಕೆ ಏರಿ ಕನ್ನಡ ಮಣ್ಣಿನ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ. ಕೊನೆಗೆ ಒಂದು ವಿಷ್ಯ ಮೊದಲು ಇದ್ದ ಸಾತ್ವಿಕ ಹೊಟ್ಟೆ ಕಿಚ್ಚು ಈಗಂತೂ ಇಲ್ಲ. ಅವಳ ಸಾಧನೆ ನಮ್ಮೆಲ್ಲರ ಹೆಮ್ಮೆ . ಅವಳು ಇನ್ನೂ ಎತ್ತರಕ್ಕೆ ಏರಲಿ. ಮತ್ತೆ ಮತ್ತೆ ರಂಗಭೂಮಿಯಲ್ಲಿ ಬಣ್ಣ ಹಚ್ಚಲಿ. ಸಾಧ್ಯವಾದರೆ ನಾವಿಬ್ಬರೂ ಒಟ್ಟಿಗೆ ರಂಗದಲ್ಲಿ ಬಣ್ಣ ಹಚ್ಚಬೇಕು ಅನ್ನುವ ಆಸೆಯಂತೂ ಇದೆ.
 

‍ಲೇಖಕರು G

28 June, 2015

ನಿಮಗೆ ಇವೂ ಇಷ್ಟವಾಗಬಹುದು…

5 Comments

  1. vijayaraghavan R

    ಸುಂದರ ನಿರೂಪಣೆ. ಹೃದ್ಯವಾಗಿದೆ. ಶುದ್ಧ ಮನಸ್ಸೊಂದು ಸಹ ಕಲಾವಿದೆಯನ್ನು ಹೇಗೆ ನೋಡಬಹುದೋ ಹಾಗೆಯೇ ಇದೆ.

  2. Suresh Bidari

    Super & perfect uman

  3. ಲಕ್ಷ್ಮೀಕಾಂತ ಇಟ್ನಾಳ

    ತುಂಬ ಆಪ್ತ ಬರಹ, ಉಮಾಶ್ರೀಯವರಷ್ಟೆ ಎತ್ತರದಲ್ಲಿ ಗಿರಿಜಾ ಲೋಕೇಶ ಕಾಣುತ್ತಾರೆ, ಇಬ್ಬರಿಗೂ ಅಭಿನಂದನೆಗಳು ಸಲ್ಲಲೇಬೇಕು.

  4. ಮಮತ

    ಬಹಳ ಬಹಳ ಚೆನ್ನಾಗಿದೆ. ಒಬ್ಬ ಕಲಾವಿದೆಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರು ಅವರ ಜೊತೆ ಜೊತೆಗೇ ಸಾಗಿ ಬಂದ ಸಹ ಕಲಾವಿದರು ಮಾತ್ರ. ಅದನ್ನ ಬಹಳ ಸೂಕ್ಷ್ಮವಾಗಿ ಗಮನಿಸಿ ಮನದಾಳದಿಂದ ನುಡಿಗಳನ್ನಾಡಿದ್ದಾರೆ ಗಿರಿಜ ಮೇಡಂ.

  5. kalavathi.S

    ಒಬ್ಬ ‘ಗಿರಿಜೆ’, ಒಬ್ಬ ‘ಉಮಾ’ ಇಬ್ಬರೂ ಒಬ್ಬರಲ್ಲವೇ? ತೊಟ್ಟಿಲ ತೂಗುವ ಕ್ಯೆಗಳು ಜಗವ ತೂಗುತ್ತಿವೆ! ಒಬ್ಬರ ಜಗ ಇನ್ನೂಬ್ಬರಿಗೆ ಸೋಜಿಗ! ಒಂದೇ ಜಗತ್ತಿನ ಎರಡು ತಾರೆಗಳೂ ಈ ನಾಡಿನ ಮಣ್ಣಿನ ಸೊಗಡಿನವೆಂಬ ಹೆಮ್ಮೆ ನಮಗೆ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading