ಅಮ್ಮ ಹೇಳುವ ಬಿಡುವಿನ ವ್ಯಾಖ್ಯಾನ ಎದೆಗೆ
ಸೋಕಿದಾಗ ಒಳಗು ಬೆಳಗಿತು
ಕಳೆದ ವಾರ ಅಮ್ಮನ ಹುಟ್ಟಿದ ಹಬ್ಬ ಆಚರಿಸಿದ್ದು ಒಂದು ಸುಂದರ ಅನುಭವ. ಅಮ್ಮನ ಅಕ್ಕ ತಂಗಿಯರು, ವಾರಗಿತ್ತಿಯರು ಅಕ್ಕ ಪಕ್ಕದ ಮನೆಯ ಮಕ್ಕಳು, ಬಂಧುಗಳು ಮತ್ತು ಮನೆಯವರೆಲ್ಲಾ ಸೇರಿದ್ದವು. ಅಮ್ಮ ಶಿರಾದಲ್ಲಿ ನಡೆದ ಯಾವುದೋ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾತ್ರಿ ಎಂಟೂವರೆಗೆ ಬಂದ್ರು. ನಾವೆಲ್ಲಾ ಅವರನ್ನು ಸ್ವಾಗತಿಸಲು ಕಾದಿದ್ದೆವು. ಬಂದಕೂಡಲೇ ಅಜ್ಜಿ ಮೊಮ್ಮಗಳು ಕೇಕ್ ಕತ್ತರಿಸಲು ತಯಾರಾದರು. ಅಮ್ಮ ಬಂದು ಐದು ನಿಮಿಷಕ್ಕೆ ಒಂದೊಳ್ಳೆ ರೇಶಿಮೆ ಸೀರೆ ಉಟ್ಕೊಂಡು ಬಂದ್ರು. ಬಂದ ಕೂಡಲೇ ಅಮ್ಮನನ್ನು ಅತ್ಯಂತ ಪ್ರೀತಿಸುವ ಮತ್ತು ಗೌರವಿಸುವ ಅವರ ಅಕ್ಕ ಕಮಲಕ್ಕ ಪ್ರೀತಿಯಿಂದ ಕೊಟ್ಟ ಗಾಜಿನ ಬಳೆಗಳನ್ನು ತೊಟ್ಟುಕೊಂಡರು. ಆ ಸನ್ನಿವೇಶ ಕಟ್ಟಿಕೊಡುತ್ತಿದ್ದ ಭಾವನಾತ್ಮಕತ, ಸಂವೇದನೆ ಇರುವ ಜೀವಗಳಿಗೆ ಜೀವ ಮಿಡಿಯುವಂತಿತ್ತು.
ಎಂದಿನಂತೆ ಶೇತಮ್ಮ ಬಂದವರನ್ನೆಲ್ಲಾ ಮಾತಾಡಿಸುತ್ತ ಎಲ್ಲರಿಗೂ ತಾನೇ ಮಾಡಿದ್ದ ಶಾವಿಗೆ ಪಾಯಸ ಕೊಡುತ್ತಿದ್ದಳು. ಎಲ್ಲಾರೂ ಪಾಯಸದ ಸವಿಯನ್ನು ಸವಿದು ಪೈನ್ ಆಪಲ್ ಪೇಷ್ಟ್ರೀಯಾಕಡೆಗೆ ಗಮನವಿಟ್ಟಿದ್ದರು. ಸರಿ ಅಮ್ಮ ಮತ್ತು ನಿಸರ್ಗ ಇಬ್ಬರೂ ಕೇಕ್ ಕತ್ತರಿಸಿದರು. ಎಲ್ಲರೂ ಹ್ಯಾಪಿ ಬರ್ಥಡೇ ಟೂ ಯೂ ಅಂತ ಶುಭಾಷಯ ಗೀತೆ ಹಾಡುತ್ತಿದ್ದರೆ. ಅದೇ ಲಯದ “ಹುಟ್ಟು ಹಬ್ಬದ ಶುಭಾಷಯ ಹುಟ್ಟು ಹಬ್ಬದ ಶುಭಾಷಯ” ಅಂತ ಸಹೃದಯ ಕನ್ನಡದಲ್ಲಿ ಹಾಡುತ್ತಿದ್ದ. ಅದನ್ನು ಕೇಳಿದ ಅಮ್ಮನ ಕಣ್ಣುಗಳಲ್ಲಿ ಸಂತಸವಿತ್ತು. ಆಮೇಲೆ ಎಲ್ಲರೂ ಸಹೃದಯನ ದನಿಗೆ ಜೊತೆಯಾದರು.
ಸಮಾರಂಭಕ್ಕೆ ಬಂದಿದ್ದ ಎಲ್ಲಾ ನೆಂಟರು ಇಷ್ಟರು ಶುಭಾಶಯ ಹೇಳಿ ಕೇಕ್ ತಿನ್ನಿಸಿ ಸಂಭ್ರಮ ವ್ಯಕ್ತ ಪಡಿಸಿದರು. ಉಭಯ ಕುಶಲೋಲೋಪರಿ ವಿಚಾರಿಸಿದ ಅಮ್ಮ ತನ್ನ ಅಕ್ಕ ತಂಗಿಯರನ್ನ, ನಾದಿನಿಯರನ್ನ ಪ್ರೀತಿಯಿಂದ ಮಾತಾಡಿಸಿದರು. ಅಂದು ತನ್ನ ಹಿರಿಯ ಅಕ್ಕ ಧನಲಕ್ಷ್ಮಿಯವರನ್ನು ತುಂಬು ಗೌರವದಿಂದ ಮಾತಾಡಿಸಿದ್ದು ಮರೆಯ ಸಾಧ್ಯವಾಗದ ಘಟನೆ. ಅಮ್ಮನ ಹಿರಿಯ ವಾರಗಿತ್ತಿಯವರಾದ ಧನಲಕ್ಷ್ಮಿಯವರು ಒಲುಮೆಯಿಂದ ಶಾಲು ಹೊದಿಸಿ ಗಂಧದ ಹಾರ ಹಾಕಿ ತನ್ನ ಶುಭಾಶಯ ಸೂಚಿಸಿದರು. ಸಮಾಜದಲ್ಲಿ ಎಷ್ಟು ಶಾಲು ಎಷ್ಟು ಹಾರ ತುರಾಯಿಗಳನ್ನು ಹಾಕಿಸಿಕೊಂಡಿದ್ದರೂ ತನ್ನ ಅಕ್ಕ ಶಾಲು ಹೊದಿಸಿ ಹಾರ ಹಾಕುವಾಗ ಅಮ್ಮನ ಕಣ್ಣುಗಳಲ್ಲಿ ವಿಶೇಷವಾದ ಹೊಳಪು ಕಾಣುತಿತ್ತು. ಅಷ್ಟೇ ಅಲ್ಲ ಪರಸ್ಪರ ಒಬ್ಬರನೊಬ್ಬರು ಗೌರವಿಸುವ ಕ್ಷಣಗಳಿಗೆ ವ್ಯಕ್ತವಾಗುವ ಮಾತುಗಳೆಲ್ಲಾ ಅವ್ಯಕ್ತವಾಗುತ್ತಿದ್ದವು. ಧನಲಕ್ಷ್ಮಕ್ಕನವರು ಅಮ್ಮನಿಗೆ ತುತ್ತು ತಿನಿಸಿದರು. ಅಮ್ಮ ಶೇತಮ್ಮನ ಮದುವೆಯ ವೇಳೆಯಲ್ಲಿ ಅವರು ನನ್ನ ವಾರಗಿತ್ತಿಯಲ್ಲ ಅವರು ನನ್ನ ತಾಯಿಯ ಸಮಾನ ಎಂದು ಪರಿಚಯಿಸಿದ ಘಳಿಗೆ ನೆನಪಾಯಿತು. ತನ್ನ ಓರಗೆಯವರ ಜೊತೆ ಮಾತಾಡುತ್ತಾ “ಸೀರೆ ಚೆನ್ನಾಗಿದೆ ಕಣೆ ಎಲ್ಲಿ ತಗೊಂಡೆ ? ಬಳೆ ಡಿಸೈನ್ ಚೆನ್ನಾಗಿದೆ” ಅಂತ ಅವರನ್ನೆಲ್ಲಾ ಅತೀ ಆತ್ಮೀಯತೆಯಿಂದ ಮಾತಾಡಿಸಿದ್ದು ಅಮ್ಮನ ಸರಳತೆ ವ್ಯಕ್ತ ಪಡಿಸುತಿತ್ತು, ಹೀಗೆ ಮಾತಾಡುತ್ತಾ ಸೀರೆ ಚೆನ್ನಾಗಿದೆ ಅಂತ ಹೇಳಿ “ ಎಲ್ಲಿ ತಂದೆ ಸೀರೆ ? ಎದುರಿನಿಂದ ‘ಜುಮ್ಮಾ ಮಸೀದಿ ರೋಡ್ ‘ ಅಂದ್ರು ಒಬ್ಬರು. ‘ನಾನೂ ತಗೋಬೇಕು. ಯಾವ ಅಂಗಡೀನೆ ?’ ‘ನೀನು ಹೋದ್ರೆ ಅಷ್ಟೇ ಒಂದಕ್ಕೆ ಡಬ್ಬಲ್ ಹೇಳ್ತಾರೆ. ನಾನೇ ತಂದು ಕೊಡ್ತೀನಿ’ ಅಂದ್ರು ಅಮ್ಮನ ರಕ್ತ ಸಂಬಂಧಿಯೊಬ್ಬರು. ಮನೆ ಮನೆಯವರ ಮಾತು, ತಮಾಷೆ ಎಲ್ಲಾ ಇಡೀ ಸಮಾರಂಭಕ್ಕೆ ನವಿರುತನ ತಂದಿತ್ತು.
ಇದೆಲ್ಲಾ ಆದ ಮೇಲೆ ನಿಸರ್ಗ ಮತ್ತು ಅಮ್ಮ ಇಬ್ಬರೂ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು. ಮೊದಲು ಅಣ್ಣಮ್ಮನ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದು, ಆಮೇಲೆ ನಿಸರ್ಗ ಮತ್ತು ಸಹೃದಯನ ನೃತ್ಯ, ಹೀಗೆ ಸಾಗಿ ಕೊನೆಗೆ ಅಮ್ಮ ನಿಸರ್ಗಳಿಗೆ ಹುಲಿ ವೇಷದ ಹೆಜ್ಜೆಗಳನ್ನು ಮಟ್ಟುಗಳನ್ನು ಹೇಳಿಕೊಟ್ಟರು. ಅವಳೂ ಕೂಡ ಆ ಹೆಜ್ಜೆಗಳನ್ನು ಹಾಗೆಯೇ ಅನುಸರಿಸುತ್ತಿದ್ದಳು. ಅವರಿಬ್ಬರ ಹೆಜ್ಜೆಗಳಲ್ಲಿ ಬಣ್ಣದ ಇತಿಹಾಸ ಮತ್ತೆ ಮುಂದುವರೆಯುವ ಎಲ್ಲಾ ಲಕ್ಷಣಗಳು ಕಾಣುತಿದ್ದವು. ಶೇತಮ್ಮ ನಿಸರ್ಗ ಮತ್ತು ಅಮ್ಮನ ವಿಷಯದಲ್ಲಿ ಹೇಳಿದ ಮಾತುಗಳು ಸತ್ಯವೆನಿಸಿತು. ನಿಸರ್ಗಳ ಹೆಜ್ಜೆ, ಮುಖ ಭಾವ ಮತ್ತು ಆಂಗಿಕಗಳೆಲ್ಲಾ ಥೇಟ್ ಉಮಾಶ್ರೀಯ ಪಡಿಯಚ್ಚು ಅನ್ನುವಂತೆಯೇ ಇತ್ತು. ಹೀಗೆ ಹತ್ತು ಗಂಟೆಗೆ ಶುರು ಆದ ನೃತ್ಯ ರಾತ್ರಿ ಹನ್ನೆರಡಾದರೂ ನಿಲ್ಲಲಿಲ್ಲ. ಇಬ್ಬರ ಶಕ್ತಿ ಮತ್ತು ಆಸಕ್ತಿಗಳು ಮನೆ ಮಂದಿಯಲ್ಲೆಲ್ಲಾ ಸಂತಸ ತಂದಿತ್ತು. ಚಪ್ಪಾಳೆ ತಟ್ಟುವ ಕೈಗೆ ದಣಿವಾಗಲಿಲ್ಲ. ನಗುವ ಮುಖಕ್ಕೆ ಸೋಲಾಗಲಿಲ್ಲ. ಮನಸೋ ಕುಣಿ ಕುಣಿದು ಕುಪ್ಪಳಿಸುತಿತ್ತು.
ಊಟ, ನೃತ್ಯ ಶುಭಾಶಯಗಳೆಲ್ಲಾ ಮುಗಿದ ಬಳಿಕ ಅಮ್ಮ ನನ್ನ ಜೊತೆ ಮಾತಿಗೆ ಕೂತರು. ಅವರೊಟ್ಟಿಗೆ ಮಾತಾಡಿ ಸುಮಾರು ದಿನಗಳು ಕಳೆದಿದ್ದವು. ಅವರ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತು ಶುರುವಾದ ಮಾತುಕತೆ ನಿಜಕ್ಕೂ ಬದುಕಿನುದ್ದಕ್ಕೂ ಕಾಪಿಟ್ಟು ಕಾಯ್ದುಕೊಳ್ಳಬಹುದಾದ ಶ್ವೇತಪ್ರಿಯ ಗುರುವಿನ ಮಾತುಗಳಂತೆ ಇದ್ದವು. ಎಂದಿನಂತೆ ಅಮ್ಮನ ಕಣ್ಣುಗಳಲ್ಲಿ ಸಾಂತ್ವನದ ದೀಪವಿತ್ತು. ದನಿಯಲ್ಲಿ ಆತ್ಮವಿಶ್ವಾಸದ ಸ್ವರಗಳು ಹೊರಡುತ್ತಿದ್ದವು. ಅಮ್ಮನೊಡನೆ ಮುಖಾಮುಖಿ ಮಾತಾಡಿ ಅನೇಕದಿನಗಳು ಕಳೆದಿದ್ದ ಕಾರಣ ಅಂದಿನ ಮಾತುಕತೆ ತುಂಬಾ ಆಪ್ಯಾಯವಾಗಿ ಮೈ ಮನಸನ್ನು ತುಂಬಿಕೊಳ್ಳುತ್ತಿತ್ತು. ಅಮ್ಮಾ ಐವತ್ತೊಂಭತ್ತು ವರ್ಷಗಳ ತನಕ ಒಂದು ದಿನ ಕೂರಲಿಲ್ಲ. ಇವತ್ತಾದ್ರೂ ಬೆಳಗಿನಿಂದ ನೀವು ಬಿಡುವು ಮಾಡಿಕೊಲ್ಲಬಹುದಿತ್ತು ಅಂದೆ. “ಬಿಡುವು ಅಂತ ಕೂತಿದ್ರೆ ನಿಮ್ಮಮ್ಮ ಇವತ್ತು ಹೀಗಿರಲು ಆಗ್ತಿರಲಿಲ್ಲ ಕಂದಾ. ಬಿಡುವು ಮಾಡಿಕೊಳ್ಳಬೇಕು ಅಂತಲೇ ಬಿಡುವು ಮಾಡಿಕೊಳ್ಳಬಾರದು. ಸಮಯಕ್ಕೆ ಗೊತ್ತಿರುತ್ತೆ ಯಾವಾಗ ಬಿಡುವು ಮಾಡಿಕೊಳ್ಳಬೇಕು ಅಂತ. ಕೆಲಸ ಮಾಡುವ ಮೈಗೆ ಮನಸಿಗೆ ಬಿಡುವು ಕೊಡಬಾರದು. ಕೊಟ್ರೆ ಮುಗೀತು ಸುಖದ ರುಚಿ ಸೋಮಾರಿ ತನಕ್ಕೆ ತಿರುಗಿಸಿಬಿಡುತ್ತೆ. ಆಸೆ ಹುಟ್ಟಿಸುತ್ತೆ. ಬೇಕಾದ್ದು ಬೇಡವಾದದ್ದನ್ನು ಕೇಳುತ್ತೆ. ಬಿಡುವು ಅಂದ್ರೆ ತನಗೆ ತಾನೇ ಬರಬೇಕು. ನಾವೇ ಅದರ ಬಳಿ ಹೋಗೋದಲ್ಲ. ನೀನೊಬ್ಬ ಕವಿ ಇದನ್ನೆಲ್ಲಾ ಹೇಳಬೇಕಾ” ಅಂದ್ರು. ಆಮೇಲೆ “ಇನ್ನೊಂದು ಮಾತು ರಘು ನಮ್ಮ ಬಿಡುವು ಇನ್ನೊಬ್ಬರ ಬಹಳ ಮುಖ್ಯ ಸಮಯ ಆಗುತ್ತೆ ಅನ್ನೋದೇ ಆದ್ರೆ ಆ ತರದ ಬಿಡುವನ್ನು ಬಿಟ್ಟು ಬಿಡೋದು ಸರೀನೇ ಅಲ್ವಾ ? ಬಿಡುವು ಒಂದು ಮೌಲ್ಯ ಕಣೋ”.
ಹೌದಮ್ಮಾ ಆದರೂ ನಿಮ್ಮ ಆರೋಗ್ಯ ಮುಖ್ಯ ಅಲ್ವಾ ಅಂದಿದ್ದು ಅಷ್ಟೇ “ನನ್ನ ಬದುಕಿನಲ್ಲಿ ಯಾವುದೂ ಕೂಡ ಸುಮ್ಮನೇ ಬಂದಿಲ್ಲ. ನಾ ಏನೇನೆಲ್ಲಾ ಪಡೆದಿದ್ದೇನೋ ಅದರ ಹಿಂದೆ ಅದೆಷ್ಟೋ ನೋವುಗಳಿವೆ. ತ್ಯಾಗವಿದೆ ಮತ್ತು ಶ್ರಮವಿದೆ. ಪ್ರತಿಭೆ ಕೈ ಹಿಡಿದರೂ ಸಾಮಾಜಿಕಳಾಗ ಬೇಕಾದ್ರೆ ಶ್ರಮ, ನೋವು, ಅವಮಾನಗಳ ದೊಡ್ಡ ಪರಂಪರೆಯೇ ಇದೆ. ಆಗೆಲ್ಲಾ ಬೆಳಿಗ್ಗೆ ಮಧ್ಯಾನ್ಹ ಮತ್ತು ರಾತ್ರಿ ನಾಟಕಗಳನ್ನು ಮಾಡಿದ್ರೆ ರಾತ್ರಿ ಪ್ರಯಾಣ ಮಾಡುವಾಗ ಅಥ್ವಾ ನಾಟಕ ಮಾಡುವ ಊರಿನಲ್ಲೇ ದಿಂಬಿಗೆ ತಲೆ ಇಟ್ಟೊಡನೆ ನಿದ್ದೆ ಹತ್ತಿಬಿಡುತ್ತಿತ್ತು. ಅದೆಷ್ಟೋ ನನ್ನ ವಯಸ್ಸಿನ ರಾತ್ರಿಗಳನ್ನು ಹೀಗೆ ಕಳೆದು ಸುಖದ ಅರ್ಥಗಳನ್ನು ನನ್ನ ದಾರಿಗೆ ತಂದುಕೊಂಡೆ. ನನ್ನ ನಾ ಬಂಧಿಸಿಕೊಂಡು ಬದುಕನ್ನು ಕಂಡುಕೊಂಡೆ. ನಿದ್ದೆ ಹತ್ತದ ಅದೆಷ್ಟೋ ರಾತ್ರಿಗಳಿಗೆ ಸಾಂತ್ವನ ಕೊಟ್ಟದ್ದು ಅದೇ ಶ್ರಮ. ಮೈ ಬಗ್ಗಿಸಿ ದುಡಿದ ದುಡಿಮೆಯೇ” ಕಂದಾ. “ನೀನೇ ಹೇಳು ಬಿಡುವು ತಗೊಂಡಿದ್ರೆ ನಿನ್ನಮ್ಮನ ಬದುಕು ಬೇರೆ ರೂಪವನ್ನು ಪಡೆದುಕೊಂಡು ಬಿಟ್ಟಿರುತ್ತಿತ್ತು ಅಲ್ವಾ? ಅದೇ ಅಭ್ಯಾಸ ಕಣೋ ಈಗಲೂ. ಕೂರಲು ಬಿಡಲ್ಲ ಜೀವ. ಕೂತ್ರೆ ಗೆದ್ದಲು ಹತ್ತುತ್ತೆ ಕಾಯಕ್ಕೆ. ಜವಾಬ್ದಾರಿಗೆ ಸಮಯಕೊಡಬೇಕೇ ಹೊರತು ವಯಕ್ತಿಕತೆಗಲ್ಲಾ, ನೀವೆಲ್ಲಾ ಎಲ್ಲಿ ಹೋಗ್ತೀರೋ ನನ್ನ ಜೊತೆ ಇದ್ದೇ ಇರ್ತೀರಾ ಅಲ್ವಾ ?”
ಅಮ್ಮನ ಮಾತುಗಳನ್ನು ಕೇಳುತ್ತಾ ಮಾತು ಹೊರಡಲಿಲ್ಲ ನನಗೆ ಅವರ ಕಣ್ಣನ್ನೇ ನೋಡುತ್ತಿದ್ದೆ ಅಮ್ಮ ಮತ್ತೆ ಮಾತು ಮುಂದುವರೆಸುತ್ತಾ “ಎಷ್ಟಾದರೂ ಸರಿ ನೋವುಗಳನ್ನು ಒಳಗೆ ಹಾಕಿಕೊಳ್ಳಬೇಕು. ಒಳಗಿರುವ ಜ್ವಾಲಾಮುಖಿಯನ್ನು ಯಾರಿಗೂ ತೋರಿಸಬಾರದು. ನಗುತ್ತಲೇ ಬದುಕನ್ನು ಎದುರುಗೊಳ್ಳಬೇಕು. ನಮಗೆ ನೋವು ಕೊಡುತ್ತಿದ್ದಾರೆ ಅಂತ ಗೊತ್ತಾದರೆ ನೂರು ಸಲ ನಮ್ಮವರೇ ಎಂದು ನಕ್ಕು ಮಾತಾಡಿಸಬೇಕು. ಮತ್ತೆ ಮತ್ತೆ ಅದನ್ನೇ ನೋವನ್ನು ಕೊಡುವವರು ಮುಂದುವರೆಸಿದರೆ ಯಾವ ಪ್ರತಿಕ್ರಿಯೆಗಳನ್ನು ಕೊಡದೇ ಸುಮ್ಮನಾಗಿ ಬಿಡಬೇಕು. ನಾವು ಅವಮಾನಿಸಿದವರನ್ನು ದೂರವಿಟ್ಟಿದ್ದೇವೆ ಅನ್ನುವ ಯಾವ ಕುರುಹನ್ನು ಜಗತ್ತಿಗೆ ಕೊಡಬಾರದು. ಆದ್ರೆ ಮನಸಿನಿಂದ ಅವಮಾನ ಮಾಡಿದವರನ್ನು, ನೋವು ಕೊಟ್ಟವರನ್ನು ತೆಗೆದು ಹಾಕಿ ಬಿಡಬೇಕು. ಕೊರಗುವುದರಲ್ಲಿ ಯಾವ ಅರ್ಥವೂ ಇಲ್ಲಪ್ಪ . ಯಾರೂ ನಮ್ಮನ್ನು ಒಪ್ಪಿಕೊಳ್ಳದೇ ಇದ್ದಾಗಲೂ ಉಳಿಯುವುದೇ ಬದುಕು. ನಮ್ಮ ಗೆಳೆತನ ನಾವೇ ಮಾಡಿದ್ರೆ ಸಾಧನೆಗೆ ಅನೇಕ ದಾರಿಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ನೋವು ಉಣ್ಣುವುದು ಕೂಡ ಬದುಕಿನ ಅತ್ಯಂತಿಕ ಸುಖ ಅಂತ ನಾನು ನಂಬಿದ್ದೇನೆ. ಮೊದಲು ಬದುಕಿನ ಬರ್ಬರತೆಯಿಂದ ನಿದ್ದೆ ಕೆಟ್ಟೆ. ಆಮೇಲೆ ನಾಟಕ, ಸಿನೆಮಾ ಅಂತ ಸಮಯ ಕೊಟ್ಟೆ. ಜನ ಪ್ರೀತಿ ಕೊಟ್ಟರು ಉಮಾಶ್ರೀಗೆ. ಕನ್ನಡದಲ್ಲಿ ಉಳಿಯುವಂತೆ ಗಳಿಸುವಂತೆ ದಾರಿ ಮಾಡಿಕೊಟ್ಟರು ಅಭಿಮಾನಿಗಳು. ಅವರೇ ಅಧಿಕಾರ ಕೊಟ್ಟಿದ್ದಾರೆ. ಈಗ ಜನರಿಗೆ ನಾನು ನನ್ನ ಸಮಯ ಕೊಡೋದೇ ನ್ಯಾಯ ಅಲ್ವಾ ರಘು. ಪಡೆದದ್ದನ್ನು ಕೊಡುವದರಲ್ಲಿ ಅರ್ಥ ಇದೆಯಪ್ಪಾ. ಹೀಗೆಲ್ಲಾ ನನ್ನ ಬದುಕಿನ ದಾರಿ ತನಗೆ ತಾನೇ ನಡೆಸಿಕೊಂಡು ಹೋಗುವಾಗ ಬಿಡುವು ಅಂತ ಸುಮ್ಮನಿದ್ದರೆ ನಾನು ನನ್ನ ಒಳಗಿರುವ ಶಕ್ತಿಗೆ, ಜನ ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಅಲ್ವಾ” ಎಂದು ನನ್ನ ನೋಡಿದರು.
ನನ್ನ ನೋಟ ಅವರ ನೋಟ ಒಂದಾಗಿತ್ತು. ಅಮ್ಮನ ಮನದಲ್ಲಿ ತುಂಬಿಕೊಂಡು ಮನೆ ಕಡೆ ಹೊರಟೆ. ಆಗ ರಾತ್ರಿ ಒಂದು ದಾಟಿತ್ತು. ಆದ್ರೆ ಅಮ್ಮನ ಮಾತುಗಳಿಂದ ನನ್ನ ಎದೆಯೊಳಗೆ ಬೆಳಗಾಗಿತ್ತು .




“””Noouoo oonuuudhu KOODA BAADUKINA SUKHA”””” & “””Oolaghiruva JWAALAMUKHI””” Yannu thoriasaabaaradhu antha healirouudharalli yestoondhu jeevvandha noouugalive aadannu ondhe maathinaali heliddare entha problems yestoo hennumakklu kooda suffering but Belur sir Umashrri Ma,m avaara Experience galannu MANASSUU muutuuvanthe baarediddare