
ಗಾಂಧಿ ನಗರದಲ್ಲಿ ಉಮಾಶ್ರೀ ಅನ್ನೋ ಜೀವದ ಸ್ಥಾನವೇ ಬೇರೆ ಇಂದು. ಅಂದು ಅದರ ಕಥೆ ನಿಮಗೂ ಗೊತ್ತೇ ಇದೆ ಬಿಡಿ. ಪಟ್ಟಣಕ್ಕೆ ಬಂದ ಪತ್ನಿಯರು ಸಿನೆಮಾದಲ್ಲಿ ‘ಎಸ್ ಬಾಸ್, ನೋ ಬಾಸ್’ ಅನ್ನೋ ಡೈಲಾಗ್ ಹೇಳುತ್ತಾ ಬಂದಿದ್ದು ಹಿರಿತೆರೆಗೆ. ಸಾಕವ್ವನ ಸಾಮರ್ಥ್ಯ ಸಿನೆಮಾ ಇಂಡಸ್ಟ್ರಿಗೆ ಸರಿಯಾಗಿ ಗೊತ್ತಾಗಲು ಅಮ್ಮ ಪುಟ್ಮಲ್ಲಿಯ ತನಕ ಕಾಯಲೇ ಬೇಕಾಯಿತು. ಇವರ ವಿಷಯದಲ್ಲಿ ಕಾಯೋದು ಅಂದ್ರೆ ಒಂದು ಸಿದ್ಧಿ. ಕಾಡುದಾರಿ, ಕಾಲುದಾರಿ, ಸವೆದದಾರಿ, ಕಲ್ಲುದಾರಿ, ಮುಳ್ಳುದಾರಿ, ಏರು, ತಗ್ಗು ಇವನ್ನೆಲ್ಲಾ ದಾಟಿಕೊಂಡು ಹೆದ್ದಾರಿ ಬರಲು ತನ್ನ ಅರ್ಧ ಆಯಸ್ಸನು ಅಮ್ಮ ಕಳೆಯಬೇಕಾಯಿತು. ಕಾದಿದ್ದು ತಪ್ಪು ಅಂತೇನಿಲ್ಲ, ಆದ್ರೂ ಆರಂಭದಲ್ಲೇ ಪ್ರತಿಭೆ ಇದ್ರೂ ಪ್ರಕಾಶಕ್ಕೆ ಸರಿಯಾದ ಅವಕಾಶ ಮಾಡಿಕೊಡಲೇ ಇಲ್ಲ ನಮ್ಮ ಸಿನೆಮಾ ಇಂಡಸ್ಟ್ರಿ. ಗಾಡ್ ಫಾದರ್ರೋ, ಮದರ್ರೋ ಇಲ್ಲದಿದ್ರೆ ಇಲ್ಲಿ ಸಲ್ಲೋಕೆ ಆಗೋಲ್ಲ. ಅಥವಾ ಸಮಯ ಬೇಕಾದೀತು. ಹರಿಯೋ ನೀರಿಗೆ ಎಷ್ಟು ಅಂತ ಬದ ಕಟ್ಟಿ ನಿಲ್ಲಿಸೋಕೆ ಆಗುತ್ತೆ ಹೇಳಿ. ಹೌದು ‘ಹರಿಯೋ ನೀರಿಗೆ ಯಾವ ದೊಣ್ಣೆ ನಾಯಕರ ಅಪ್ಪಣೆ ಬೇಡ’ ಅನ್ನೋದು ದಿಟವೇ ತಾನೆ.
ಮೊದಲು ಮೊದಲು ಸಿನೆಮಾ ಕ್ಷೇತ್ರದಲ್ಲಿ ಅಮ್ಮನಿಗೆ ಸಿಕ್ಕಿದ್ದು ಸಣ್ಣ ಸಣ್ಣ ಪಾತ್ರಗಳು. ಅನುಭವದ ಪಾತ್ರ ಏನೂ ಕಡಿಮೆಯಿಲ್ಲ. ಎನ್.ಎಸ್ ರಾವ್ ಅವರ ಜೊತೆಗೆ ಅಭಿನಯಿಸಿದ ಪಾತ್ರಗಳೂ ಕೂಡ ಬಹು ದೊಡ್ಡವೇ. ಜನ ಯಾವುದನ್ನ ಪ್ರೀತಿಸುತ್ತಾರೆ, ಬಹುವಾಗಿ ಇಷ್ಟ ಪಡುತ್ತಾರೆ ಅಂದ್ರೆ ಅದಕ್ಕೆ ನಿಜವಾಗಲು ಮನ್ನಣೆ ಇದೆ ಅನ್ನೋ ಪ್ರಮೇಯ ಗೊತ್ತಿರುವಂಥದ್ದೇ. ಹಾಸ್ಯದ ಪಾತ್ರಗಳಲ್ಲಿ, ಡಬ್ಬಲ್ ಮೀನಿಂಗ್ ಸೆಕ್ಸ್ ಬಾಂಬ್ ಪಾತ್ರಗಳಲ್ಲಿ ಕಂಡಾಗ ಕನ್ನಡದ ಪ್ರೇಕ್ಷಕರು ಉಘೇ ಉಘೇ ಅಂದ್ರು. ಮತ್ತೆ ಮತ್ತೆ ಅವೇ ಬೇಕು ಅನ್ನೋ ನಿರೀಕ್ಷೆ ಇಟ್ಟುಕೊಳ್ಳೋಕೆ ಶುರು ಮಾಡಿದರು. ಅಮ್ಮ ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ಯಾವತ್ತೂ ಸುಳ್ಳು ಮಾಡಲಿಲ್ಲ ಬಿಡಿ. ಎಷ್ಟೋ ಸಲ ಅವರು ಮಾತಾಡುವಾಗ ಕೆಲ ಪಾತ್ರಗಳನ್ನು ಮಾಡಿದಾಗ ಆದಂಥ ಮಾನಸಿಕ ಯಾತನೆಯನ್ನು ನನ್ನ ಬಳಿ ಹಂಚಿಕೊಂಡಿದ್ದಾರೆ. ಇಷ್ಟರ ನಡುವೆ ಒಬ್ಬ ನಿಷ್ಟಾವಂತ ಕಲಾವಿದೆ ಕನ್ನಡಕ್ಕೆ ಹತ್ತಿರವಾಗಿದ್ದು ಕೊನೆಗೆ ಕನ್ನಡವೇ ಆಗಿದ್ದು ಕನ್ನಡದ ಸಾಕ್ಷಿಪ್ರಜ್ಞೆಗೆ ಗೊತ್ತಿರುವ ವಿಷಯವೇ. ಸಿಕ್ಕಿದ ಅವಕಾಶಗಳಲ್ಲಿ ನಡೆಯುತ್ತಾ ಸಾಕವ್ವನಾಗಿ ಪುಟ್ಮಲ್ಲಿಯಾಗಿ ಗುಲಾಬಿ ತನಕ ನಡೆದ ದಾರಿ ಕನ್ನಡದ ಸಿನೆಮಾ ಚರಿತ್ರೆಯಲ್ಲೇ ಅಳಿಸಲಾಗದ ಶಾಸನ. ಉಮಾಶ್ರೀ ಅಂದ್ರೆ ಪುಟ್ಮಲ್ಲಿ. ಪುಟ್ಮಲ್ಲಿ ಅಂದ್ರೆ ಉಮಾಶ್ರೀ.
ರವಿಚಂದ್ರನ್ ಕನ್ನಡದಲ್ಲಿ ಒಂಥರಾ ಅದ್ದೂರಿ ನಟ. ರವಿಚಂದ್ರನ್ ಅಭಿನಯ, ನಾಯಕಿಯರ ಜೊತೆ ಹೆಜ್ಜೆಹಾಕುತ್ತಿದ್ದರೆ ನಾವು ಮಹಾಭಾರತದ ಕತೆಗಳಲ್ಲಿ ಕೇಳಿದ ಮತ್ತು ಓದಿಕೊಂಡ ಕೃಷ್ಣ ಮತ್ತು ಗೋಪಿಕೆಯರ ದೃಶ್ಯ ಕಣ್ಣ ಮುಂದೆ ಬರೋದಂತು ನಿಜ. ರವಿಚಂದ್ರನ್ ಅವರು ತಮ್ಮ ಸಿನೆಮಾಗಳಲ್ಲಿ ನಾಯಕಿಯರನ್ನು ಆರಿಸಿಕೊಂಡಿದ್ದು ಅಭಿನಯಿಸಿದ್ದು ನಿಮಗೆಲ್ಲಾ ಗೊತ್ತಿಲ್ಲ ಅಂತ ನಾನೂ ಭಾವಿಸಿಲ್ಲ. ಅವರ ಸಿನಿಮಾಗಳಲ್ಲಿ ಕೊಟ್ಟ ನವಿರುತನವನ್ನು ಇಡೀ ಸಿನಿಮಾ ರಂಗ ಬೆಕ್ಕಸ ಬೆರಗಾಗಿ ನೋಡಿದ್ದುಂಟು. ಕೆಲವರು ಮುಖ ಮುರಿದವರೂ ಉಂಟು. ಒಂದಂತೂ ನಿಜ ರವಿಚಂದ್ರನ್ ಅವರು ಒಂದು ಬಹು ದೊಡ್ಡ ಸಂಚಲನವನ್ನಂತೂ ಕನ್ನಡಕ್ಕೆ ತಂದುಕೊಟ್ಟವರು.
ಖುಷ್ಬೂ, ಜೂಹಿ ಚಾವ್ಲ, ಮಧು ಬಾಲಾ ಇಂತಹ ಗ್ಲಾಮರಸ್ ಬೊಂಬೆಗಳೇ ರವಿಚಂದ್ರನ್ ಅವರ ಕಣ್ಣಲ್ಲಿ ಕಲಾಕೃತಿಗಳಾಗಿದ್ದಾರೆ. ಸುಂದರ ಮೈ ಮಾಟದ ನಾಯಕಿರನ್ನು ಮಾತ್ರ ತನ್ನ ಸಿನೆಮಾಗಳಲ್ಲಿ ಪಾತ್ರ ಮಾಡಿಸಿದ್ದಾರೆ. ನಿಂಬೆ ಹಣ್ಣು, ದಸರಾ ಬೊಂಬೆಯಂತಾ ರೂಪಕಗಳನ್ನು ಹುಡುಕುತ್ತಿದ್ದ ರವಿಚಂದ್ರನ್ ಅವರಿಗೆ ಈ ನೆಲದ ಸಾಕವ್ವ ಸಿಕ್ಕಿದ್ದು ಕನ್ನಡದ ಸಿನೆಮಾಕ್ಕೆ ಸಿಕ್ಕಿದ ಫಲವತ್ತಾದ ನೆಲ. ಬಿತ್ತಿದ್ದೆಲ್ಲಾ ಬೆಳೆ. ಎರಚಿದ್ದೆಲ್ಲಾ ಫಸಲು. ಸಾಕವ್ವನ ಶಕ್ತಿಯನ್ನು ಅರಿತು ಒಂದು ಬಹು ದೊಡ್ಡ ಆವರಣದ ಒಳಗೆ ಉಮಾಶ್ರೀ ಅಮ್ಮನನ್ನು ರವಿಚಂದ್ರನ್ ಅವರು ಕೇಂದ್ರಕ್ಕೆ ತಂದು ಬಿಟ್ಟರು. ಕೇಂದ್ರ ಆಗುವ ಶಕ್ತಿ ಅಮ್ಮನಿಗೂ ಕೂಡಾ ಇದ್ದೇ ಇತ್ತು. ಇದಾದ ಮೇಲೆ ಪುಟ್ಮಲ್ಲಿ ಜೀವ ಇಡೀ ಕನ್ನಡದ ಮನಸುಗಳ ಒಳಗೆ ಹೋಗಿ ಭದ್ರವಾಗಿ ಕೂತುಬಿಟ್ಟಿತು. ಬಿತ್ತಿದ ಬೀಜ, ಮರವಾಗೋ ಸಸಿ ಯಾವತ್ತಾದ್ರು ಹಸಿವು ತೀರಿಸುತ್ತೆ ನೆರಳು ಕೊಡತ್ತೆ ಅನ್ನೋದು ಮಾತು ಎಷ್ಟು ಸತ್ಯ ಅಲ್ವಾ ? ಪುಟ್ಟಮಲ್ಲಿ ಪಾತ್ರದಲ್ಲಿ ಅಮ್ಮ ತೆರಯ ಮೇಲೆ ಬಂದ್ರೆ ಸಿನೆಮಾ ಮಂದಿರದಲ್ಲಿ ಜನ ಕೂತ ಕಡೆ ಕೂತಿರುತ್ತಿರಲಿಲ್ಲ. ಅದೊಂಥರಾ ನಮ್ಮ ಕನ್ನಡದ ಮಣ್ಣಿನ ರೋಮಾಂಚನ. ಪುಟ್ಟಮಲ್ಲಿ ಪಾತ್ರವನ್ನು ಮೆಚ್ಚದೇ ಇರುವ ಜನರೇ ಇಲ್ಲ ಅನ್ನೋದು ನಿಮಗೂ ಗೊತ್ತಿದೆ. ಎಷ್ಟೋ ಸಲ ‘ಪುಟ್ನಂಜ ಸಿನೆಮಾದ ನಾಯಕ ಉಮಾಶ್ರೀ’ ಅಂತ ರವಿಚಂದ್ರನ್ ಅವರು ಹೇಳಿದ್ದನ್ನು ನಾನು ಕೇಳಿದ್ದೇನೆ. ಇರಲಿ ಪುಟ್ನಂಜ ಸಿನೆಮಾ ಪುಟ್ಟಮಲ್ಲಿ ಪಾತ್ರ ಇವೆಲ್ಲಾ ನಿಮಗೂ ಗೊತ್ತಿರುವ ವಿಷಯವೇ ಇದನ್ನೆಲ್ಲಾ ನಾ ವಿವರಿಸೋಕೆ ಹೋದ್ರೆ ನನ್ನ ಮೂರ್ಖತನ ನನ್ನೆದುರಿಗೆ ಕನ್ನಡಿ ಮುಂದೆ ಬಂದಂತೆ ಕಂಡುಬಿಡತ್ತೆ. ಹಾ ಇನ್ನೊಂದು ವಿಷಯ ಪುಟ್ಟಮಲ್ಲಿ ಪಾತ್ರದ ಸಂದರ್ಭ ಬಂದಾಗ ಬೀಸು ಅವರನ್ನು ಅಮ್ಮ ನೆನಪಿಸಿಕೊಂಡಿದ್ದನ್ನು ನಾನು ಕೇಳಿದ್ದೇನೆ. ಒಟ್ಟು, ಪುಟ್ಟಮಲ್ಲಿಯ ಎಲ್ಲ ಯಶಸ್ಸುಗಳ ಹಿಂದೆ ಇರುವ ಬಹು ದೊಡ್ಡ ಶಕ್ತಿ ಅಂದ್ರೆ ದೇವನೂರರ ಸಾಕವ್ವ ಮತ್ತು ಅಮ್ಮನ ಅಗಾಧವಾದ ಅನುಭವ ಲೋಕ.
ಐದಾರು ತಿಂಗಳುಗಳ ಹಿಂದೆ ಅಮ್ಮ ನನಗೆ ಫೋನ್ ಮಾಡಿ ‘ದೃಶ್ಯ ಸಿನೆಮಾಕ್ಕೆ ಟಿಕೆಟ್ ಬುಕ್ ಮಾಡು’ ಅಂದ್ರು. ನಾ ಕಾಲೇಜಿನಲ್ಲಿ ಎಂ. ಎ. ಹುಡುಗರಿಗೆ ಬೇಂದ್ರೆ ಕಾವ್ಯ ಪಾಠ ಮಾಡುತ್ತಿದ್ದೆ ಆಗ. ಇವರು ಇದ್ದಕ್ಕಿದ್ದಂತೆ ಸುಮಾರು ಹನ್ನೆರಡು ಗಂಟೆ ಹೊತ್ತಿಗೆ ಸಿನೆಮಾಗೆ ಹೋಗೋಣ ಅಂತ ಕರೆದ್ರು. ಅಮ್ಮ ಬಿಡುವಾಗೋದೆ ತೀರಾ ಕಮ್ಮಿ ಇಲ್ಲ ಅನ್ನಬಾರದು ಅಂದುಕೊಂಡು ‘ಅಯಿತಮ್ಮ ಟಿಕೆಟ್ ಬುಕ್ ಮಾಡಿ ಹೇಳುತ್ತೇನೆ ಇರಿ’ ಅಂತೇಳಿ ಫೋನ್ ಇಟ್ಟೆ. ನನಗೋ ಕಾಲೇಜು, ಅದರಲ್ಲೂ ನಾವೀಗ ಕೆಲಸ ಮಾಡುತ್ತಿರುವುದು ಕಾರ್ಪೊರೇಟ್ ವಲಯದವರ ತರ. ಬೆಳಿಗ್ಗೆ ಹೋಗಿ ಬಯೋಮೆಟ್ರಿಕ್ ಮುಂದೆ ಮುಖ ತೋರಿಸಿ ಸಂಜೆ ಐದಕ್ಕೆ ಸರಿಯಾಗಿ ಮತ್ತೆ ಮುಖ ತೋರಿಸಿ ಬರಲೇ ಬೇಕು. ಮೇಷ್ಟ್ರುಗಳು ಹೈಟೆಕ್ ಈಗ. ಎನ್ ಮಾಡೋದು ಕಾಲೇಜಿಗೆ ಬಂದು ಬಿಟ್ಟಿದ್ದೇನೆ ಮುಂಚೆನೇ ಹೇಳಿದ್ರೆ ರಜ ಹಾಕಿಬಿಡುತ್ತಿದ್ದೆ ಅನ್ಕೊಂಡು ಕಸಿವಿಸಿಯಲ್ಲಿದ್ದೆ. ಇದರ ನಡುವೆ ವಾಟ್ಸಪ್ ನಲ್ಲಿ ಮೆಸೇಜ್ ಕಳಿಸುತ್ತಲೇ ಇದ್ರು ‘ಎಷ್ಟು ಹೊತ್ತಿಗೆ ಸಿನೆಮಾಗೆ ಹೋಗೋದು. ಎಲ್ಲಿ ಸಿಕ್ತಿಯಾ’ ಅಂತ. ನಾನು ‘ಇರಿ ಅಮ್ಮ ನೋಡುತ್ತಿದ್ದೇನೆ, ಥಿಯೇಟರ್ ಟಿಕೆಟ್ಟು ಅದು ಇದೂ ಹೇಳಿ ತಳ್ಳಿ ಹಾಕುತ್ತಿದ್ದೆ. ಕಾಲೇಜು ಇದೆ, ಕಾಲೇಜು ಮುಗಿಸಿಕೊಂಡು ಬರುತ್ತೇನೆ ಅಂತ ಹೇಳುವ ದಾಷ್ಟ್ಯ ಯಾವತ್ತೂ ಆ ತಾಯಿಯ ಮುಂದೆ ಬರೋದಿಲ್ಲ. ಸರಿ ‘ಅಮ್ಮ ಫುಲ್ ರಶ್ ಎಲ್ಲೂ ಟಿಕೆಟ್ ಸಿಗುತ್ತಿಲ್ಲ. ಸಂಜೆ ಮೇಲೆ ಒರಿಯನ್ ಮಾಲ್ ನಲ್ಲಿದೆ ಬುಕ್ ಮಾಡಿಬಿಡುತ್ತೇನೆ’ ಅಂದೆ. ‘ಸಂಜೆ ತನಕ ಕಾಯಬೇಕೆನೋ’ ? ಅಂದ್ರು . ‘ಹೂ’ ಅಂದೆ. ನಿಜ ಹೇಳಬೇಕಂದರೆ ಮಧ್ಯಾಹ್ನಕ್ಕೆ ಟಿಕೆಟ್ ಸಿಕ್ಕಿತ್ತು. ನನಗೆ ಹೋಗಲು ಆಗದೆ ಸಂಜೆಗೆ ತಳ್ಳಿ ಹಾಕಿದ್ದೆ. ಈ ಸೂಕ್ಷ್ಮ ಅಮ್ಮನಿಗೂ ಗೊತ್ತೇ ಆಗಿರುತ್ತೆ ಅನ್ನುವುದು ನನಗೂ ಗೊತ್ತು. ಯಾಕಂದ್ರೆ ನನ್ನ ಉಸಿರಾಟದ ಲಯ ಗುರುತಿಸೋರು ಅವರು. ಸರಿ ಸಂಜೆ ನಾ ಕಾಲೇಜು ಮುಗಿಸಿಕೊಂಡು ಬಡ ಬಡ ಒರಿಯನ್ ಮಾಲ್ ಕಡೆ ಓಡಿದೆ. ಸಂಜೆ ಆರಕ್ಕೆ ಸಿನೆಮಾ ಇತ್ತು. ನಾ ಹೋಗುವ ವೇಳೆಗೆ ಅಮ್ಮ ಬಂದುಬಿಟ್ಟಿದ್ದರು. ಸರಿ ಅಮ್ಮನ ಡ್ರೈವರ್, ಗನ್ ಮ್ಯಾನ್, ಮತ್ತು ಸ್ಪೆಷಲ್ ಆಫೀಸರ್ ಅವರುಗಳು ಜೊತೆ ಇದ್ದರು. ನಾನೂ ಅಮ್ಮ ಇಬ್ಬರೂ ಸಿನೆಮಾ ಒಟ್ಟಿಗೆ ನೋಡಿದೆವು. ಸಿನೆಮಾ ನೋಡುತ್ತಾ ನೋಡುತ್ತಾ ಸಿನೆಮಾದ ಬಗೆಗೆ ಒಂದಷ್ಟು ಮಾತಾಡಿಕೊಂಡೆವು. ಒಂದೇ ಪೋಡಾದಲ್ಲಿ ಪಾಪ್ ಕಾರ್ನ್ ತಿನ್ನುತ್ತಾ ಸಿನೆಮಾ ನೋಡಿದ ಸುಖ ದೊಡ್ಡದು ನನಗೆ.
ಸಿನೆಮಾ ಮುಗಿದ ಕೂಡ್ಲೇ ‘ಒಂದು ಬೊಕೆ ತಗೋ ರವಿಚಂದ್ರನ್ ಅವರ ಮನೆಗೆ ಹೋಗಿ ಅಭಿನಂದಿಸಿ ಬರೋಣ’ ಅಂದ್ರು. ಲೇಟಾಗಿತ್ತು ಹುಡುಕಿ ಬೊಕ್ಕೆ ತೆಗೆದುಕೊಂಡದ್ದು ಆಯಿತು. ಸರಿ ನಾನೂ ಅಮ್ಮ ಸೀದ ರವಿಚಂದ್ರನ್ ಅವರ ಮನೆಗೆ ಹೋದ್ವಿ. ನಾ ಅವರ ಮನೆಗೆ ಹೋಗಿದ್ದು ಅದೇ ಮೊದಲು. ನಾವು ಹೋಗೋ ಹೊತ್ಗೆ ರವಿ ಸರ್ ನಮ್ಮನ್ನು ಬರ ಮಾಡಿಕೊಂಡರು. ಇಬ್ಬರೂ ಮಾತಾಡಲು ಶುರು ಮಾಡಿದರು. ಎಂದಿನಂತೆ ಅಮ್ಮ ತನ್ನ ಮಡಿಲ ಕೂಸು ಎಂಬಂತೆ ಅಭಿಮಾನದಿಂದ ರವಿಚಂದ್ರನ್ ಅವರಿಗೆ ನನ್ನನ್ನು ಪರಿಚಯಿಸಿದರು. ಈ ಹೊತ್ತಿನ ಮತ್ತು ಅಂದಿನ ಸಿನೆಮಾ ರಂಗದ ಅನೇಕ ವಿಷಯಗಳನ್ನು ಸುಮಾರು ಒಂದು ಗಂಟೆ ಪರಸ್ಪರ ಇಬ್ಬರೂ ಮಾತಾಡುತ್ತಿದ್ದರು. ನಡು ನಡುವೆ ನನ್ನನ್ನು ಮಾತಿಗೆಳೆಯುತ್ತಿದ್ದರು. ನನಗೋ ಮೊದಲೇ ಮುಜುಗರ. ಅದ್ರಲ್ಲೂ ರವಿಚಂದ್ರನ್ ಅವರ ಮನೆಯಲ್ಲಿ ಅವರ ಜೊತೆ ಅಮ್ಮನ ಜೊತೆ ಕೂತು ಮಾತಾಡುತ್ತಿದ್ದೇನೆ ಅನ್ನೋದೇ ಒಂದು ಕನಸಿನ ಲೋಕವಾಗಿತ್ತು. ಹೆಚ್ಚೇನೂ ನಾ ಮಾತಾಡಲಿಲ್ಲ. ಮಾತಾಡಲಿಲ್ಲ ಅನ್ನೋದಕ್ಕಿಂತ ಹೆಚ್ಚಾಗಿ ಮಾತು ಹೊರಡುತ್ತಿರಲಿಲ್ಲ. ಇಬ್ಬರು ಸಾಧಕರ ಮುಂದೆ ಆಗ ತಾನೆ ಕಣ್ಣು ಬಿಟ್ಟ ಮಗುವಿನಂತೆ ಪಿಳ ಪಿಳ ಕಣ್ಣು ಬಿಟ್ಟುಕೊಂಡು ಇಬ್ಬರನ್ನೂ ನೋಡುತ್ತಿದೆ. ಅವರು ಮಾತಾಡಿಸಿದಾಗ ಒಂಚೂರು ಮಾತಾಡಿ ತೆಳ್ಳಗೆ ನಕ್ಕು ಸುಮ್ಮನಾಗಿಬಿಡುತ್ತಿದ್ದೆ.

ಎಲ್ಲಾ ಆದ ಮೇಲೆ ಎಂದಿನಂತೆ ಹಾಲು, ಊಟ ಇತ್ಯಾದಿ ಉಪಚಾರಗಳು ನಡೆದವು. ಅಮ್ಮ ಮಾತಾಡುತ್ತ ಮಾತಾಡುತ್ತಾ ದೃಶ್ಯ ಸಿನೆಮಾದ ಅಭಿನಯದ ಬಗ್ಗೆ ರವಿ ಸರ್ ಜತೆ ಮಾತಾಡಿದರು. ರವಿಚಂದ್ರನ್ ಅವರ ಅಭಿನಯದ ಬಗ್ಗೆ ಮಾತಾಡುತ್ತಾ ಹಳೇ ಸಿನೆಮಾಗಳ ಪ್ರಸ್ತಾಪ ಕೂಡ ಮಾಡಿಕೊಂಡು ಪ್ಲಾಶ್ ಬ್ಯಾಕ್ ನೆನಪಿಸಿಕೊಂಡು ಮತ್ತೆ ಅದರ ಸವಿಯನ್ನು ಇಬ್ಬರೂ ಸ್ಮರಿಸಿಕೊಂಡರು. ದೃಶ್ಯದ ಅಭಿನಯ, ಅದರ ತಂತ್ರ, ಚಿತ್ರಕಥೆ ಇತ್ಯಾದಿಗಳ ಬಗ್ಗೆ ಅಮ್ಮ ಮೆಚ್ಚುಗೆ ವ್ಯಕ್ತ ಪಡಿಸಿ ಸಿನೆಮಾದಲ್ಲಿ ಪೋಲಿಸ್ ಆಫಿಸರ್ ಪಾತ್ರಕ್ಕೆ ತಕರಾರು ತೆಗೆದರು. ‘ಅಧಿಕಾರಿಗಳೆಂದರೆ ಆಕೆಯಂತೆ ಅಷ್ಟೊಂದು ಖಡಕ್ ಇರಲ್ಲ. ಆಮೇಲೆ ಅಭಿನಯ ಕೂಡ ತುಂಬಾ ಆರೋಗೆಂಟ್ ಆಗಿದೆ’ ಅಂದ್ರು. ಅದಕ್ಕೆ ರವಿ ಸರ್ ಕೂಡ ಹೌದು ಅಂತ ತಲೆ ಅಲ್ಲಾಡಿಸಿ ಹೌದೆಂದು ಇನ್ನೊಂದಷ್ಟು ಆ ಪಾತ್ರದ ಬಗ್ಗೆ ಮಾತಾಡಿದರು. ಮತ್ತೆ ರವಿಚಂದ್ರನ್ ಸರ್ ಹಿಂದಿನ ಮತ್ತು ಈಗಿನ ಸಿನಿಮಾ ಲೋಕದ ತೌಲನಿಕ ವಿಮರ್ಶೆ ಮಾಡೋಕೆ ಶುರು ಮಾಡಿದರು. ಅಮ್ಮ ಕೂಡ ಅನೇಕ ವಿಷಯಗಳನ್ನು ಸಿನೆಮಾ ಲೋಕವನ್ನು ಕುರಿತು ಚರ್ಚೆ ಮಾಡುತ್ತಿದ್ದರು. ಒಂಥರಾ ಜುಗಲ್ ಬಂದಿ ಚೆನ್ನಾಗಿತ್ತು. ರವಿಚಂದ್ರನ್ ಅವರ ಮಾತಿನ ನಡುವೆ ಅಮ್ಮ ಸಿನೆಮಾದಿಂದ ದೂರ ಆಗಿರುವ ಬಗ್ಗೆ ಒಂದು ಸಣ್ಣ ಬೇಸರವನ್ನು ಕೂಡ ವ್ಯಕ್ತ ಪಡಿಸುತ್ತಿದ್ದರು. ಮತ್ತೆ ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ಲೋಕದ ಚರ್ಚೆಗಳ ಕಡೆ ಮಾತುಗಳು ಹೊರಳಿಕೊಂಡವು. ರವಿ ಚಂದ್ರನ್ ಅವರು ಅಮ್ಮನ ಶಕ್ತಿಯನ್ನು, ಅಭಿನಯದ ಸಾಮರ್ಥ್ಯವನ್ನು ನನ್ನ ಬಳಿ ಹೇಳಿದ್ರೂ ಕೂಡ. ಶೂಟಿಂಗ್ ಸಂದರ್ಭದ ಕೆಲವು ಕಥೆಗಳನ್ನ, ಘಟನೆಗಳನ್ನು ನೆನಪಿಸಿಕೊಂಡರು ಪರಸ್ಪರ. ಇದೆಲ್ಲಾ ಆದ ಮೇಲೆ ರವಿ ಸರ್ ಶ್ರೀದೇವಿಯ ಪ್ರಸ್ತಾಪ ಮಾಡುತ್ತಾ ಆಕೆ ದೊಡ್ಡ ಕಲಾವಿದೆ. ಕಣ್ಣಲ್ಲೇ ಅಭಿನಯಸುವ ಕೆಲವೇ ಕೆಲವು ಕಲಾವಿದೆಯರಲ್ಲಿ ನಿನ್ನ ತರ ಆಕೆಯೂ ಕೂಡ ಒಬ್ಬರು ಅಂತ ಅಮ್ಮನಿಗೆ ಹೇಳುತ್ತಾ ಅವರ ಜೊತೆ ಸಿನೆಮಾ ಮಾಡಬೇಕಿತ್ತು ಆದ್ರೆ ಇನ್ನೂ ಆಗಿಲ್ಲ ಅನ್ನುವ ಇಂಗಿತ ವ್ಯಕ್ತ ಪಡಿಸಿದರು.
ಅಮ್ಮಾ ಕೂಡ ಅದೆಷ್ಟೋ ಸಲ ರವಿಚಂದ್ರನ್ ಅವರನ್ನು ಮನದುಂಬಿ ಸ್ಮರಿಸಿದ್ದನು ನಾ ನೋಡಿದ್ದೇನೆ. ಮಂತ್ರಿಯಾದ ಮೇಲೂ ಒಂದು ಕಾರ್ಯಕ್ರಮದಲ್ಲಿ ತನ್ನ ಸಿನೆಮಾ ಬದುಕಿನ ಯಶಸ್ಸಿನ ಹಿಂದೆ ರವಿಚಂದ್ರನ್ ಅವರನ್ನು ನನೆಸಿಕೊಂಡು ಭಾವುಕರಾಗಿದ್ದನ್ನು ಮತ್ತು ರವಿಚಂದ್ರನ್ ಅವರೂ ಕೂಡ ಕಣ್ಣು ತೇವ ಮಾಡಿಕೊಂಡಿದ್ದನು ನೋಡಿದ್ದೇನೆ. ಪರಸ್ಪರ ಗೌರವ ಮತ್ತು ವಿಶ್ವಾಸಗಳಿಗೆ ಇರುವ ಶಕ್ತಿ ಎಷ್ಟು ದೊಡ್ಡದು ಅಲ್ವಾ. ಒಟ್ಟು ಅವತ್ತು ಐದು ದಶಕಗಳ ಸಿನೆಮಾ ಲೋಕ ಮತ್ತು ಅದರ ಹರವನ್ನು ಇಬ್ಬರ ಮಾತುಗಳನ್ನು ಕೇಳಿಕೊಂಡು ಇಬ್ಬರ ವ್ಯಕ್ತಿತ್ವಗಳ ಸರಳತೆಯ ಸಾಗರವನ್ನು ಮನದಣಿಯೆ ನೋಡುತ್ತಿರುವಾಗ ರಾತ್ರಿ ಹನ್ನೊಂದು ಮೂವತ್ತಾಗಿತ್ತು. ಸರಿ ರವಿಚಂದ್ರನ್ ಅವರ ಮನೆಯಿಂದ ಹೊರಟ್ವಿ. ನಾ ಅವತ್ತು ಕಲಿತದ್ದು ಅದೆಷ್ಟೋ. ಕಲಿಯಬೇಕಾದ್ದು ಇನ್ನೂ ಎಷ್ಟೆಷ್ಟೋ ಅಂದು ಕೊಂಡಿದ್ದಂತೂ ನಿಜ.
‘ನಾವು ಯಾರನ್ನು ಗೌರವಿಸುತ್ತೆವೆಯೋ ಅವರ ಗುಣಗಳೇ ನಮ್ಮಲ್ಲಿ ಮೂಡುತ್ತವೆ. ನಾವು ಯಾರನ್ನು ಆರಾಧಿಸುತ್ತೆವೆಯೋ ಅವರಂತೆಯೇ ನಾವೂ ಆಗಿಬಿಡುತ್ತೇವೆ’ ಅನ್ನುವ ಕುವೆಂಪು ಅವರ ಮಾತುಗಳು ಅವತ್ತು ನೆನಪಾಗಿಬಿಟ್ಟಿತು. ಇಲ್ಲಿ ಗೌರವ ಮತ್ತು ಆರಾಧನೆ ಅನ್ನುವ ಅರ್ಥಗಳು ಹಿಗ್ಗುವ ಮತ್ತು ಕುಗ್ಗುವ ಸಾಧ್ಯತೆಗಳು ಅವರವರ ನೆಲೆಗೆ ಮತ್ತು ಬದುಕಿಗೆ ಬಿಟ್ಟ ವಿಷಯ ಅಲ್ವಾ ? ಕುವೆಂಪು ಅವರ ದರ್ಶನದ ನನ್ನೊಗಳನ್ನು ಬೇರೊಂದು ಸಾಧ್ಯತೆಯಲ್ಲಿ ತೆರೆಸಿಬಿಟ್ಟಿತು ಅಂದು. ಐವತೈದರ ಹರಯದಲ್ಲಿ ಅಮ್ಮ ‘ರಘು ನಾನು ಭಾರತದ ಅತ್ಯುತ್ತಮ ನಟಿ. ಬೆಸ್ಟ್ ಆಕ್ಟ್ರೆಸ್ ಕಣೋ’ ಅಂತ ಹೇಳಿದ್ದ ಮನದುಂಬಿದ ಸಂತಸದ ಹಿಂದೆ ಖಂಡಿತ ರವಿಚಂದ್ರನ್ ಅವರ ಪಾಲೂ ಇದೆ. ಹೌದಲ್ವಾ ಪೋಷಕ ನಟಿ ಉಮಾಶ್ರೀ ಭಾರತದ ಬೆಸ್ಟ್ ಆಕ್ಟ್ರೆಸ್……………



ನಾವು ಯಾರನ್ನು ಗೌರವಿಸುತ್ತೆವೆಯೋ ಅವರ ಗುಣಗಳೇ ನಮ್ಮಲ್ಲಿ ಮೂಡುತ್ತವೆ. ನಾವು ಯಾರನ್ನು ಆರಾಧಿಸುತ್ತೆವೆಯೋ ಅವರಂತೆಯೇ ನಾವೂ ಆಗಿಬಿಡುತ್ತೇವೆ’ – ಎಂಥಾ ಮಾತುಗಳು. ಅವರ ಸಾನಿಧ್ಯದಲ್ಲಿ ನೀವೂ ಕೂಡ…………. !! ಪುಟ್ಮಲ್ಲಿ ಪಾತ್ರ ಮರೆಯೋದುಂಟೇ. ಕ್ಲಾಸಿಕ್ ಅದು. ಅಂತೂ ದಿಗ್ಗಜರ ಸಹವಾಸದಲ್ಲಿ ಅಪೂರ್ವ ವ್ಯಕ್ತಿತ್ವ ರೂಪುಗೊಳ್ತಿದೆ 🙂 ಸೊಗಸು
thank u belur sir morning olle artical oodhidhe 2 day paper holiday yenu maadodu antha eddhe bt !! Uma shree andha koodale nange nenapoogodhe PUUTAA MALLI umashri ma,m aa paathaarakke JEEVA thumbi act maadidhare “”NAAU YAARAANNU GOWRAVSUTHEOO AA GUNAGALE NAMMAALLI MOODUTHAVA 100% HOWDHU SIR AADAAKKE ”’BIITHIDANTHE BALE ”ANNODU THANKU SIR RAVI SIR BAGGE ENNASTU THILIDUKONDAUU
yugadiya shubhaashayagalu
bahala dinagaladamele ondu adbhuha bavanalokavanne nodidanthayithu..nija obba kalavida este ettarakke beledaru avara samskara avaranna belesida hage avaru beledirthare adakke ee ibbaru mahan kalavidhare sakshi…..ondu kade Umasri amma ella pathrakku sai…innondu kade mahan kalavida,hosa kalpaneya harikara ….ee ibbaru nijavagiyu namma kannada chitralokada athyamoolya manigalu.anthavarannu nammantha samanyarige parichayisuthiruva nimage sadanyavadhagalu..shubhambhuyath
ರಘು ಲೇಖನ ಚೆನ್ನಾಗಿದೆ. ಒಂದು ಸಿನಿಮಾ ನೋಡೋದು, ಕೂಡಲೆ ಹೂಗುಚ್ಛ ಹಿಡಿದು ಹೋಗಿ ಕಲಾವಿದನ್ನ ಅಭಿನಂದಿಸೋದು ಈ ಸೌಹಾರ್ದವೆಲ್ಲ ತೋರಿಕೆಗೆ ಬರೋದಲ್ಲ. ಒಳ್ಳೆ ಸಂಸ್ಕಾರ ಒಳ ಬೆಸುಗೆಯಷ್ಟೆ. ಖುಷಿಯಾಯ್ತು.
Umaashree avarannu kuritaada laekana tumba aatmeeyavaagide. estae beledaru odala kicchinondige tanna pratibeyannu mandaagniyante irisikonda Umaashree naalina peeligege yendoo ondu kowtukavae agiddaare.