
”ದೇವರಲ್ಲಿ ಎಂದಿಗೂ ಕೇವಲ ಸ್ವಂತದ ಏಳಿಗೆಯಾಗಲಿ ಅಂತ ಬೇಡಿಕೊಳ್ಳದೇ ಹತ್ತು ಜನರ ಏಳಿಗೆಯಾಗಲಿ ಅಂತ ಬೇಡಿಕೋ. ದೇವರು ಕೊಡುವ ವರಕ್ಕಿಂತ ಆ ಹತ್ತು ಜನರನ್ನು ಉದ್ಧಾರ ಮಾಡಿದ ಪುಣ್ಯ ದೊಡ್ಡದು. ಸಂತೋಷವಾಗಿದ್ದಾಗ ಯಾರಿಗೂ ವಾಗ್ದಾನ ಮಾಡಬಾರದು. ಕೋಪ ಬಂದಾಗ ಪ್ರತಿಕ್ರಿಯಿಸಬಾರದು. ದುಃಖದಲ್ಲಿದ್ದಾಗ ನಿರ್ಧಾರ ತೆಗೆದುಕೊಳ್ಳಬಾರದು. ಧನಾತ್ಮಕವಾಗಿ ಯೋಚಿಸುವವನನ್ನು ವಿಷವೂ ಕೊಲ್ಲಲಾರದು. ಋಣಾತ್ಮಕವಾಗಿ ಯೋಚಿಸುವವನ ಖಾಯಿಲೆಯನ್ನು ಯಾವ ಔಷದಿಯೂ ಗುಣಪಡಿಸಲಾರದು. ಹೇಗೆ, ಹಾಲು ಮೊಸರುಗಳಿಗಿಂತ ತಡವಾಗಿ ಹುಟ್ಟಿದರೂ ತುಪ್ಪವು ಹಾಲು ಮೊಸರುಗಳಿಗಿಂತ ಶ್ರೇಷ್ಠ ಎನಿಸಿಕೊಳ್ಳುವುದೋ, ಹಾಗೆಯೇ ಹಿರಿತನವೆನ್ನುವುದು ಉತ್ತಮಗುಣಗಳಿಂದಾಗಿ ಲಭ್ಯವಾಗುವುದೇ ಹೊರತು ಕೇವಲ ವಯಸ್ಸಿನಿಂದಲ್ಲ. ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಛ ಮಟ್ಟದ ಸತ್ಯ ಕೈಗೂಡುತ್ತದೆ. ಅಸತ್ಯ ಯಾವಾಗಲೂ ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿಲ್ಲದಂತೆ ಮಾಡುತ್ತದೆ. ಇನ್ನೂ ಹೇಗೆ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ”. ಇದಿಷ್ಟೂ ಮಾತುಗಳನ್ನು ಅಮ್ಮ ನಮ್ಮ ಅಜ್ಜಿ ಕಾಲವಾದ ದಿನ ಕಳಿಸಿದ ವಾಟ್ಸಪ್ ಸಂದೇಶ.
ನಿಮಗೆ ನೆನಪಿರಬಹುದು ಈ ಹಿಂದೆ ನಮ್ಮ ಅಜ್ಜಿಯ ಪ್ರಸ್ತಾಪ ಮಾಡಿದ್ದೆ. ನನ್ನ ಮತ್ತು ಶೇತಮ್ಮನ ಬದುಕಿನಲ್ಲಿ ನಮ್ಮಜ್ಜಿ ಎಷ್ಟು ಆತುಕೊಂಡಿದ್ದರು ಅಂತ. ಇಪ್ಪತ್ನಾಲ್ಕು ಇಪ್ಪತೈದು ವರ್ಷ ಆದ್ರೂ ನಾನು ನನ್ನ ತಂಗಿ ಇಬ್ರೂ ನಮ್ಮಜ್ಜಿಯ ಆಕಡೆ ಈಕಡೆ ಬಿಗಿಯಾಗಿ ಅವಳ ಹೊಟ್ಟೆ ಇಡ್ಕೊಂಡು ಮಲಗ್ತಿದ್ವಿ. ಎಂದೂ ಖಾಲಿಯಾಗದ ಪ್ರೀತಿಯ ಕಡಲು ನಮ್ಮಜ್ಜಿ. ಅವಳು ಇರೋತನಕ ನನಗೂ ಶೇತಮ್ಮನಿಗೂ ಕೊಟ್ಟಿದ್ದು ಅಳೆಯಲಾಗದ ಜೀವನ ಪ್ರೀತಿ ಮತ್ತು ಮುಗಿಯದ ಹರಿವ ಹೊಳೆಯ ಋಣವ. ನಮ್ಮಿಬ್ಬರ ಬದುಕಿನಲ್ಲಿ ಅವಳು ಬಿತ್ತಿದ್ದೆಲ್ಲಾ ಫಲ. ಜೊಳ್ಳಿನ ಮಾತೇ ಇಲ್ಲ. ಅವಳು ನಮ್ಮಿಬ್ಬರ ಮೇಲೆ ತೋರುತ್ತಿದ್ದ ಅಗಾಧವಾದ ಪ್ರೀತಿಯ ಆಳ ಅಗಲಗಳನ್ನು ಅಮ್ಮ ಯಾವಾಗಲೂ ಪ್ರೀತಿಯಿಂದಲೂ ಮತ್ತು ಬೆರಗಿನಿಂದಲೂ ನೋಡುತ್ತಿದ್ದರು ಗೌರವಿಸುತ್ತಿದ್ದರೂ ಕೂಡ.
ನಮ್ಮ ಅಜ್ಜಿಯು ಅವರ ಆಸೆಯಂತೆ ನಮ್ಮನೆಯಲ್ಲೇ ಇದ್ರು. ಅವರ ಕೊನೆ ದಿನಗಳಲ್ಲಿ ಅಮ್ಮ ಒಂದೆರಡು ಸಲ ನಮ್ಮ ಮನೆಗೆ ಬಂದಿದ್ದರು. ಅವರು ಬಂದಾಗ ಅವರನ್ನು ನೋಡಿದ ಕೂಡಲೇ ನಮ್ಮಜ್ಜಿ ತದೇಕ ಚಿತ್ತದಿಂದ ಅವರನ್ನೇ ನೋಡುತ್ತಿತ್ತು. ಇನ್ನೂ ಕೆಲವೊಮ್ಮೆ ನನ್ನ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ ಅನ್ನುವ ಭಾವದಿಂದ ದೃಷ್ಟಿ ಹರಿಸುತ್ತಿತ್ತು. ಆಗ ಅಮ್ಮ ಆ ಹಣ್ಣು ಗೈ ಹಿಡಿದುಕೊಂಡು ಅವಳ ಮಾಗಿದ ಬದುಕಿನ ಸುಕ್ಕಿಗೆ, ಹೊಕ್ಕುಳದ ಒಲವಿಗೆ ಕಣ್ಣಲ್ಲೇ ಮಾತಾಡುತ್ತಿದ್ದರು. ಆ ಎರಡೂ ಜೀವಗಳ ಕಣ್ಣುಗಳಲಿ ಹೊಯ್ದಾಡುತ್ತಿದ್ದ ಸಾಂತ್ವನದ ಕಾಂತಿಯನ್ನು ನೋಡುತ್ತಾ ನಾ ಕಲಿತದ್ದು ಅನೇಕ. ಆ ಸಂದರ್ಭದಲ್ಲಿ ಇಬ್ಬರ ಕಣ್ಣುಗಳಲ್ಲೂ ಹನಿಯಾಡುತ್ತ ಅನುಭವೀ ಬದುಕಿನ ಸಾರವತ್ತಾದ ಹನಿ ಭುವಿಗೆ ಜಾರುತ್ತಿದ್ದಂತೆ ನಮ್ಮ ಅಜ್ಜಿ ಇನ್ನೇನು ಕೆಲ ದಿನಗಳಲ್ಲೇ ಪಂಚಭೂತ ಸೇರುತ್ತಾಳೆ ಅಂತ ಬಲವಾಗಿ ಅನ್ನಿಸೋಕೆ ಶುರು ಆಗೋಯ್ತು. ಆಮೇಲೆ ನಮ್ಮಜ್ಜಿ ಮಾತಾಡಿಯೇ ತುಂಬಾ ದಿನ ಆಗಿತ್ತು ಹೀಗಿದ್ದಾಗ ಅಮ್ಮ ನಮ್ಮಜ್ಜಿಯನ್ನು ನೋಡೋಕೆ ಬಂದಿದ್ದಾಗ ಶೇತಮ್ಮ ಹತ್ತಿರ ಕರೆದು ಕೋಳಿಸಾರು ಮಾಡಿಡು ಅವರಿಗೆ ಅಂತ ಹೇಳಿತ್ತು. ಅಮ್ಮ ಅಂದ್ರೆ ನಮ್ಮ ಅಜ್ಜಿಗೆ ಅದಮ್ಯವಾದ ಪ್ರೀತಿ. ಮದುವೆ ಆದ ಹೊಸತರಲ್ಲಿ ನನ್ನ ತಂಗಿಗೆ ಇನ್ಮೇಲೆ ಅವರೇ ನಿನ್ನ ತಾಯಿ. ಅವರನ್ನು ಚೆನ್ನಾಗಿ ನೋಡಿಕೋ ಅಂತ ಕೂಡ ಹೇಳಿದ್ರು. ಹೀಗೆ ಹೇಳ್ತಾ ಹೇಳ್ತಾ ‘ಡಂ ಡುಂ ಅನ್ಬೇಕಾದ್ರೆ ನಗು ಬಂತು, ಎದ್ ರಾಗಿ ಬೀಸ್ಬೇಕಾದ್ರೆ ಮೈ ಜುಮ್ ಅಂತು’ ಅಂತ ನಮ್ಮಜ್ಜಿ ಹೇಳ್ತಿದ್ದ ಮಾತನ್ನು ಈಗಲೂ ನನ್ನ ತಂಗಿ ನೆನಪಿಸಿಕೊಂಡು ಕಣ್ಣು ತೇವ ಮಾಡ್ಕೋತಾಳೆ.
ಒಟ್ಟು ಅಮ್ಮ, ನಮ್ಮ ಅಜ್ಜಿ ವಿಷಯ ಬಂದಾಗಲೆಲ್ಲಾ ಸ್ವಲ್ಪ ಭಾವುಕರಾಗಿ ತನ್ನ ತಂದೆಯನ್ನು ನೆನಪಿಸಿಕೊಳ್ತಿದ್ರು. ಅದೇ ತರ ಕೊನೆ ಕೊನೇ ಸಂದರ್ಭದಲ್ಲಿ ನಮ್ಮಜ್ಜಿಯನ್ನು ನೋಡೋಕೆ ಬಂದಾಗ ನಾನು, ನನ್ನ ಸಂಗಾತಿ ಲಕ್ಷ್ಮಿ, ನನ್ನ ತಮ್ಮ ಸಂತು ಯಾವ ಹಿಂಸೆ ಅಸಹ್ಯಗಳಿಲ್ಲದೇ ನಮ್ಮ ಅಜ್ಜಿಯ ಸೇವೆ ಮಾಡೋದನ್ನ ಕಂಡು ತನ್ನ ತಂದೆಯ ಕೊನೆ ಘಳಿಗೆಗಳಲ್ಲಿ ಮಾಡಿದ ಸೇವೆಯನ್ನು ನೆನಪಿಸಿಕೊಂಡು ಅವರ ಬಗ್ಗೆ ಹೇಳುದ್ರು.

ಉಮಾಶ್ರೀ ಅಮ್ಮನ ಸಾಕು ತಂದೆ ಸ್ವತಂತ್ರ ಹೋರಾಟಗಾರರು. ಅವರು ಅಮ್ಮನ ನಾಟಕಗಳ ಮಹಾನ್ ಅಭಿಮಾನಿಯಂತೆ. ಅಷ್ಟೇ ಅಲ್ಲ ಮೊದಲ ಅಭಿಮಾನಿ ಕೂಡ ಅಂತೆ. ಅಮ್ಮನ ಅಭಿನಯವನ್ನು ಕಂಡು ಅದರ ಸರಿ ತಪ್ಪುಗಳನ್ನು ವಿಮರ್ಶಿಸುತ್ತಾ ಅವರ ಕಲಿಕೆಗೆ ಕಾರಣವಾದವರಂತೆ. ಅಮ್ಮನ ಸಾಕುತಾಯಿಯ ಅನೇಕ ವಿರೋಧಗಳ ನಡುವೆ ಸದಾ ಕಲೆ, ರಂಗಭೂಮಿ, ಅಭಿನಯ ಇವುಗಳಿಗೆ ಸದಾ ಪ್ರೋತ್ಸಾಹಿಸುತ್ತಿದ್ದ ಜೀವವಂತೆ. ಅದಕ್ಕೆ ಅಮ್ಮನಿಗೆ ತನ್ನ ಸಾಕು ತಂದೆ ಅಂದ್ರೆ ಅದಮ್ಯವಾದ ಪ್ರೀತಿ ಮತ್ತು ಕಾಳಜಿ. ನಮ್ಮ ಅಜ್ಜಿಯ ಸ್ಥಿತಿಯನ್ನು ಕಂಡು ತನ್ನ ತಂದೆಯ ಕೊನೆಗಾಲವನ್ನು ನೆನೆಯುತ್ತಾ ಬಚ್ಚಲು ಮನೆಯಲ್ಲಿ ತನ್ನ ತಂದೆಯನ್ನು ನಿಲ್ಲಿಸಿಕೊಂಡು ತನ್ನ ಹೆಗಲ ಮೇಲೆ ಮುಖ ಹಾಕಿಸಿಕೊಂಡು ಸೊಂಟವನ್ನು ಭದ್ರವಾಗಿ ಇಟ್ಕೋ ಅಂತ ಹೇಳಿ ಸ್ನಾನ ಶೌಚಗಳನ್ನು ಮಾಡಿಸಿದ ಮಾತುಗಳನ್ನು ಹೇಳುವಾಗ ಅವರೊಳಗನ್ನು ಕೇಳುತ್ತಾ ಕೇಳುತ್ತಾ ನಾನು, ಲಕ್ಷ್ಮಿ, ತಮ್ಮ ಸಂತು ನಿಂತಲ್ಲೇ ಕರಗುತ್ತಾ ನಮ್ಮನೆಯಲ್ಲಿದ್ದ ವಯಸ್ಸಾದ ಮಗುವನ್ನು ನೋಡಿಕೊಂಡ ಎಲ್ಲ ಚಿತ್ರಗಳು ಕಣ್ಣಮುಂದೆ ಒಂದಾದ ಮೇಲೆ ಒಂದರಂತೆ ಬಂದವು. ಆದ್ರೆ ಇಲ್ಲಿ ಎಲ್ಲಾ ಹರಿದಾಡುತ್ತಿದ್ದುದು ಮುದಿತನದ ನೋವು ಅಸಹಾಯಕತೆಗಳನ್ನು ಪೊರೆಯುವುದಕ್ಕೆ ನಾವು ಎಷ್ಟು ಸೂಕ್ಷ್ಮರಾಗಬೇಕು, ನಾವೆಷ್ಟು ರೀತಿಗಳಲ್ಲಿ ತಾಯಂದಿರಾಗಬೇಕು. ಕಡೇಪಕ್ಷ ದಾದಿಯ ಗುಣವನ್ನಾದರು ರೂಢಿಸಿಕೊಳ್ಳಬೇಕು ಅನ್ನೋದಷ್ಟನ್ನು ಮಾತ್ರ ಮತ್ತೆ ಮತ್ತೆ ನಮ್ಮ ಮನಸುಗಳು ಸಾಬೀತುಪಡಿಸಿಕೊಳ್ತಿದ್ವು. ಏನೇ ಆಗ್ಲಿ ಮೈಯಲ್ಲಿ ಶಕ್ತಿ ಇಲ್ಲದೇ ಏನೂ ಆಗದಲೇ ಇರೋವರಿಗೆ ಆಗೋದು ಅಂದ್ರೆ ನಿಜವಾದ ಸಮಾಧಾನದ ಸುಖ. ಆ ತೃಪ್ತಿಗೆ ಯಾವುದೂ ಸಮವಿಲ್ಲ ಕೂಡ. ಅವತ್ತು ಅಮ್ಮ ನಮ್ಮನೆಗೆ ಬಂದಾಗ ನಡೆದ ಈ ಘಟನೆಗಳು, ವಿನಿಮಯವಾದ ಭಾವನೆಗಳು, ಮಾತುಗಳೆಲ್ಲಾ ಮುಗಿದು ಮೌನದ ಸಾಂತ್ವನಗಳು ಮನುಷ್ಯತ್ವದ ದಾರಿಗೆ ನೀರೆರೆಯುತ್ತಿದ್ದವು. ಪ್ರೀತಿ ಮತ್ತು ಅನುಭೂತಿಗಳು ಮತ್ತೆ ಮತ್ತೆ ನೆಂದು ಮೆತ್ತಗಾದಾಗ ಸಾಗೋ ದಾರಿ ಪೂರ್ತಾ ತಣ್ಣಗಾಗಿರುತ್ತೆ ಅಂತಾ ನಮ್ಮ ಅಜ್ಜಿ ಮತ್ತು ಉಮಾಶ್ರೀ ಅಮ್ಮನಿಂದ ಕಲಿತದ್ದು ಅದೆಷ್ಟೋ. ಹೀಗಿದ್ದಾಗ ಎಂಥಾ ಬಿಸಿಯೂ ಕೂಡ ಏನನ್ನೂ ಸುಡುವುದಿಲ್ಲ ಅಲ್ವಾ. ಬಿಸಿಯನ್ನು ನುಂಗಿದ ಜೀವಗಳೆಲ್ಲಾ ಹೀಗೆ ಮೊಳಕೆಯಾಗೋದು, ಚಿಗುರಿನ ಜೊತೆಯಾಗಿ ಮತ್ತೆ ಮೊಳಕೆಯಾಗೋದನ್ನ ಕಲಿಸಿಕೊಡೋದು ಹೀಗೇ ಅಲ್ವಾ ಥೇಟ್ ಅಮ್ಮನ ತರ, ನಮ್ಮ ಅಜ್ಜಿಯ ತರ.
ನಮ್ಮಜ್ಜಿಯ ಉಸಿರಾಟದ ಲೆಖ್ಖಾಚಾರ ಶುರು ಆಗ್ತಿದೆ ನಮಗೆಲ್ಲಾ ಅನ್ನಿಸೋಕೆ ಆರಂಭ ಆದಕೂಡಲೇ ಶೇತಮ್ಮ ಎಷ್ಟೇ ಒತ್ತಡಗಳಿದ್ದರೂ ಬಿಡುವು ಮಾಡಿಕೊಂಡು ಮನೆಗೆ ಬಂದು ಹೋಗುತ್ತಿದ್ದಳು. ಅದಕ್ಕೆ ಅವಳ ಸಂಗಾತಿಯಾದ ನಮ್ಮ ಭಾವ ಕೂಡ ಸದಾ ಸಹಕರಿಸುತ್ತಿದ್ದರು. ಒಮ್ಮೆ ಹೀಗೆ ಅವರಿಬ್ಬರು ನಮ್ಮ ಮನೆಗೊಮ್ಮೆ ಬಂದಾಗ ಐದು ವರ್ಷಗಳಿಂದ ಮಲಗಿದ್ದ ಅಜ್ಜಿ ಮೈಯಲ್ಲಿ ಸಣ್ಣ ಸಣ್ಣ ಗಾಯಗಳಾಗ್ತಿದ್ದ ಶುರುವಾತಿನ ಕಾಲ. ಅದನ್ನು ನೋಡಿದ ನಮ್ಮ ಭಾವ ನನಗೆ ಆಗಾಗ ಮಗ್ಗುಲು ಬದಲಿಸಿ, ಸದಾ ಶುದ್ಧವಾಗಿಡಿ ಅಂತ ಹೇಳಿ ಅವರು ತಮ್ಮ ಅಜ್ಜಿ ತಾತನನ್ನು ಪೊರೆದದ್ದು, ಕೊನೆಯಲ್ಲಿ ಅವರ ಆರೋಗ್ಯವನ್ನು ನೋಡಿಕೊಂಡ ಎಲ್ಲಾ ಟಿಪ್ಸ್ ಹೇಳಿ ಹೋದರು. ಆಗ ನಂಗೆ ನನ್ನ ತಂಗಿಗೆ ಆದ ಸಂತೋಷಕ್ಕೆ ಕೊನೆ ಇರಲಿಲ್ಲ ಬಿಡಿ. ಯಾಕಂದ್ರೆ ಹೆಣ್ಣು ಕೊಟ್ಟ ಮೇಲೆ ಆ ಮನೆಯ ಬಗೆಗೆ ಕಾಳಜಿವಹಿಸುವವರು ತೀರಾ ಕಮ್ಮಿ. ಬಹುಷಃ ನಾನು ತೋರಿದ ಪ್ರೀತಿ ಮತ್ತು ಗೌರವಗಳು ಕಾರಣ ಒಂಚೂರು ಇದ್ರೂ ಉಮಾಶ್ರೀ ಅಮ್ಮ ಅವರಲ್ಲಿ ತುಂಬಿರುವ ಸಂಸ್ಕಾರ ದೊಡ್ಡದು. ಅಜ್ಜಿಯನ್ನು ಅವರು ನೋಡಿ ಹೋಗಿ ಸರಿಯಾಗಿ ಒಂದು ವಾರಕ್ಕೆ ಒಂದು ಆಸ್ಪತ್ರೆಯಲ್ಲಿ ಇರತ್ತಲ್ಲ ಆ ತರದ್ದು ಊಟ ಔಷದೋಪಚಾರಕ್ಕೆ ಅನುಕೂಲ ಆಗುವ ಹಾಗೆ ಮೇಲೆತ್ತಬಹುದಾದ ಒಂದು ಮಂಚವನ್ನು ಮತ್ತು ಹುಣ್ಣಾಗುವುದನ್ನು ನಿಯಂತ್ರಿಸುವ ವಾಟರ್ ಬೆಡ್ ಕಳಿಸಿಕೊಟ್ಟಿದ್ರು. ನಾನಂತೂ ಆ ದಿನ ಮೌನಕ್ಕೆ ಶರಣಾಗಿ ಬಿಟ್ಟಿದ್ದೆ. ಕೆಲವು ಸಂಬಂಧಗಳು ತೋರುವ ಕಾಳಜಿಗಳು ಯಾವ ವ್ಯಾಖ್ಯಾನಕ್ಕೂ, ಯಾವ ಕೂಡಿ ಕಳೆವ ಲೆಖ್ಖಕ್ಕೂ ಸಿಕ್ಕಲ್ಲ. ಕೊಟ್ಟಿದ್ದಕ್ಕೆ ವಾಪಸ್ ಕೇಳುವ ಅಥ್ವ ಮನುಷ್ಯ ಸಂಬಂಧಗಳು ಬರೀ ನಿರೀಕ್ಷೆಗಳಲ್ಲೇ ಆವರಿಸಿಕೊಳ್ಳುವಾಗ ನಮ್ಮ ಭಾವ ಮತ್ತು ನನ್ನ ಬದುಕನ್ನೇ ತುಂಬಿಕೊಂಡ ನನ್ನ ಮಡದಿ ಸಾಯುವ ತನಕ ಶಿರಸಾವಹಿಸಿ ಅಜ್ಜಿಯ ಸೇವೆ ಮಾಡಿದ್ದನ್ನು ತೋರಿದ ಪ್ರೀತಿಯ ಅಳತೆ ಮಾಡಲು ಹೊರಟರೆ ನಾವು ಕಳೆದುಕೊಳ್ಳೋದೇ ಹೆಚ್ಚು. ನಮ್ಮಜ್ಜಿ ಎಂಟು ತಿಂಗಳು ಮಲಗಿದ ನನ್ನ ಭಾವ ಕಳಿಸಿಕೊಟ್ಟ ಮಂಚ ಮತ್ತು ನೀರಿನ ಹಾಸಿಗೆ ಆ ಸದಾ ಪ್ರೀತಿಯನ್ನೇ ಸ್ಪುರಿಸುವ ಅಜ್ಜಿಯ ಆಶೀರ್ವಾದದ ಫಲದಂತೆ ಮತ್ತು ನಮ್ಮ ಭಾವನ ಪ್ರೀತಿ ಕಾಳಜಿಯ ದ್ಯೋತಕವಾಗಿ ಅದಾ ಅರಳುತ್ತಲೇ ದಿನಬೆಳಗಾದರೆ ನನ್ನನ್ನು ಎದುರುಗೊಳ್ಳುತ್ತದೆ. ಇವೆಲ್ಲಕ್ಕೂ ನಮ್ಮಲ್ಲಿ ಸಾವಿಲ್ಲ ಅಂತ್ಯವೂ ಇಲ್ಲ. ಹೀಗೆ ನಮ್ಮ ಭಾವನಲ್ಲಿ ಅದೆಷ್ಟೋ ಸಲ ಉಮಾಶ್ರೀ ಅಮ್ಮನನ್ನೇ ಕಂಡು ವಿಸ್ಮಯಗೊಂಡಿದ್ದೇನೆ ಕೂಡ.
ಅಮ್ಮ ಇತ್ತೀಚಿಗೆ ಬೀದಿಯಲ್ಲಿದ್ದ ವೃದ್ಧ ಕಲಾವಿದನ್ನು ವೃದ್ಧಾಶ್ರಮಕ್ಕೆ ಸೇರಿಸಿ ಯೋಗಕ್ಷೇಮ ವಿಚಾರಿಸಿದ್ದು, ತೇರದಾಳದ ಕ್ಯಾನ್ಸರ್ ರೋಗಿಯನ್ನು ಮೂರು ತಿಂಗಳು ಬೆಚ್ಚನೆಯ ಕಾಳಜಿ ತೋರಿದ್ದು, ಒಬ್ಬ ರೋಗಿಗೆ ಬೇಕಾದ ಆತ್ಮವಿಶ್ವಾಸ ಕೊಟ್ಟು ಕೊನೆಗೆ ಅವರ ಆಸೆಯನ್ನು ನೆರವೇರಿಸಿದ್ದು, ಪ್ರಶಸ್ತಿಗಳ ಆಯ್ಕೆಯೋ ಅಥವಾ ಇನ್ನಿತರ ಸಂದರ್ಭಗಳಲ್ಲಿ ಅದೆಷ್ಟೋ ಸಾಧನೆ ಮಾಡಿದ್ರೂ ಯಾವ ಪರಿಗಣನೆಗೆ ತೆಗೆದುಕೊಳ್ಳದ ಹಿರೀಕರನ್ನು ಗುರುತಿಸಿದ್ದು ಅಷ್ಟೆಲ್ಲಾ ಯಾಕೆ ಅವರು ನನ್ನ ಅಜ್ಜಿಯ ಬಗೆಗೆ ನಮ್ಮಲ್ಲಿ ಅವರನ್ನು ಕಾಪಾಡುವ ಬಗೆಗೆ ತುಂಬಿದ ಆತ್ಮವಿಶ್ವಾಸ ನನಗೆ ಬಹಳ ದೊಡ್ಡದು. ಅಮ್ಮ ನೀವೀಗ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಇಲಾಖೆಯ ಸಚಿವರು. ಅಮ್ಮಾ ನಿಮ್ಮೊಳಗಿನ ಶಕ್ತಿಗೆ ದಕ್ಕಬೇಕಾದದ್ದು ದಕ್ಕಿದೆ. ಸದಾ ಪೊರೆಯುವ ಗುಣವುಳ್ಳ ನಿಮ್ಮಿಂದ ಅದೆಷ್ಟೋ ನೊಂದ, ಯಾವ ಕಾಳಜಿಗಳಿಲ್ಲದೆ ಅಸಹಾಯಕರಾಗಿರುವ ಅದೆಷ್ಟೋ ವೃದ್ಧರ ಬಾಳಿಗೆ ಬೆಳಕಾಗುವ, ಸುಕ್ಕಾದ ಶಕ್ತಿ ಕುಂದಿದ ಕೈಗಳ ಊರುಗೋಲಾಗುವ ಅವಕಾಶ ನಿಮ್ಮದಾಗಿದೆ. ಕೆಲಸದಿಂದ ಮಾತ್ರ ತೆರದುಕೊಳ್ಳುವ ನಿಮ್ಮ ಗುಣ ಯಾವುದೇ ಜಾಹೀರಾತುಗಳನ್ನು ಬಯಸುವುದಿಲ್ಲ. ನಿಮ್ಮ ದಿಟ್ಟ ಹೆಜ್ಜೆಗಳಿಗೆ ಅಮ್ಮಾ ಆಲ್ ದಿ ಬೆಸ್ಟ್…. ಅಮ್ಮಾ ಐ ಲವ್ ಯೂ….
ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂತ ನಾನೇ ಯೋಚಿಸುದ್ರೆ ಕಳೆದುಕೊಂಡಿರುವುದರಿಂದ ನಿರಾಳ ನಿರುಮ್ಮಳ ಆಗೋದು ಹೇಳಿಕೊಂಡಾಗ ಅನ್ನಿಸುತ್ತೆ. ತೆರೆದ ಕಣ್ಣಿನ ರೆಪ್ಪೆ ಮುಚ್ಚಿ ತೆಗೆದಾಗಲೇ ಅಲ್ವಾ ಹನಿ ಕೆಳಗೆ ಜಾರೋದು. ಹೆಚ್ಚು ಮುಚ್ಚದೇ ಬಿಟ್ಟ ಕಣ್ಣು ಬಿಟ್ಟಂತೆ ಎಷ್ಟು ಹೊತ್ತು ಇಟ್ಟುಕೊಳ್ಳೋದು ಹೇಳಿ. ಕಣ್ಣ ರೆಪ್ಪೆ ನಿಮ್ಮೆದುರು ಆಡಿಸುವುದರಿಂದ ಒಂಚೂರು ಸಮಾಧಾನ ಆಗುತ್ತೆ ಅಂದ್ರೆ ಹೇಳೋದ್ರಲ್ಲಿ ತಪ್ಪಿಲ್ಲ ಅಲ್ವಾ. ಜಾಸ್ತಿ ಮಾತಾಡುತ್ತಿದ್ದೇನೆ ಅಂದ್ರೆ ಹೊಟ್ಟೆಗೆ ಹಾಕಿಕೊಳ್ಳಿ. ಇಷ್ಟೊತ್ತು ಆಡಿದ ಮಾತುಗಳನ್ನು ನಮ್ಮಜ್ಜಿ ಕೊನೆ ಉಸಿರೆಳೆದಾಗ ಕಳಿಸಿದ ವಾಟ್ಸಪ್ ಸಂದೇಶದ ಹಿನ್ನೆಲೆಯಲ್ಲಿ ಓದಿದರೆ ಉಮಾಶ್ರೀ ಅಮ್ಮಾ ಬಿಚ್ಚಿಕೊಳ್ಳುವುದೇ ಬೇರೆ ಬೇರೆ ನೆಲೆಗಳಲ್ಲಿ ಅಲ್ವಾ ??
ಬೇಲೂರು ರಘುನಂದನ್ ಕಾಲಂ : ಪುಟ್ಟಮಲ್ಲಿ ಅಂದರೆ ಅಮ್ಮನ ವಾತ್ಸಲ್ಯ, ಮಗಳ ಪ್ರೀತಿ

ಮಾನವೀಯ ಮುಖಗಳ ನವಿರು ನಿರೂಪಣೆ. ಈ “ಹೋಗುತ್ತೆ , ಅಂತಿತ್ತು” , ಅಂತೆಲ್ಲಾ ಸಂಬಂಧಗಳ್ನ ನಿರೂಪಿಸ್ಬೇಕಾದ್ರೆ ಅಲ್ಲಿ ಏ…ಷ್ಟೋಂದು ಆತ್ಮೀಯತೆ ಇರುತ್ತೆ ಅಂತ ಊಹಿಸ್ಬಹುದು.ನೊಂದವರ್ನ ದೂರದಿಂದ ಕಂಡು ಅನುಕಂಪ ಸೂಚಿಸೋದು ಬೇರೆ. ತಾನೇ ಸೇವೇಲಿ ಪಾಲ್ಗೊಳ್ಳೋದು ಬೇರೆ.ಬದುಕು ಪೂರ್ತಿ ದುಡಿದು ಅಂತ್ಯದಲ್ಲಿ ಅಸಹಾಯಕರಾಗೋ ಜೀವಗಳನ್ನ ಎಷ್ಟು ಷೊರೆದ್ರೂ ಕಡಿಮೆನೆ. ನಮ್ಗೂ ಅಜ್ಜ ಅಜ್ಜಿ ಇದ್ರು ಮತ್ತು ಅವರನ್ನ ನಮ್ ಚಿಕ್ಕಮ್ಮ ಚಿಕ್ಕಪ್ಪಂದ್ರು ನೋಡಿಕೊಂಡ ಅದಮ್ಯ ಪರಿ ಕಣ್ಣ ಮುಂದಿದೆ.
ಹಾಗೆ ಕೆಲವು ಕರೆಕ್ಷನ್ಸ್ ಇವೆ ಬರಹದಲ್ಲಿ. ಒಂದೇ ಒಂದು ಹೇಳ್ತೇನೆ. “ನಮ್ಮ ಭಾವ ಮತ್ತು ನನ್ನ ಮಡದಿ ….. ” ಆ ವಾಕ್ಯವನ್ನ ಇನ್ನೊಮ್ಮೆ ಓದಿ. ಸರಿಯೆನಿಸಿದರೆ ಓಕೆ. ಬಟ್….
nanage modalu ammanavara Sandesh dalli swamy vivekananda ra vichaargalannu tilisiddaare annistu, namma shaleyalli swamiji yavara janmadinadandu nammellaralli swalpa vivekananda iddare andidde aa matu eega innashtu gattiyaytu annistide nimma ankana hiriyara seve paramatmana seve endu bus nalli matra odi mareyuva janara kannu teresuvantide. nanu nimmante umashri ammanavarainda samaaj dalli nirlakshakke olagaagiruva lakshaantara Ajji taatanavar kasht parihaarakke kramagalannu apekshisuttene.
Bahala athmiyathe nimma lekhandinda kandubaruthy……………..nija adu bhari helikeyallagali athava lekhandallagali avara anupama and belekattalagada niswartha prema ..adu ammanallu idy hagu nimma lekhanadamulaka namgu thildidy..nijavaglu namma bhavany hagu namma sambandagalu eradu vishistavagi moodibandidy..dhanyavada sir
ಮಾನವೀಯ ಸಂಬಂಧಗಳ ಹೃದಯಸ್ಪರ್ಶಿ ನಿರೂಪಣೆ.ನನಗೆ ನನ್ನ ಅಪ್ಪನ ಇಂತಹ ಸೇವೆ ಮಾಡಲು ಸಿಕ್ಕಿದ್ದು ಕೇವಲ ೧೮ ದಿನಗಳಷ್ಟೇ….ಓದುವಾಗ ಕಣ್ತುಂಬಿ ಬಂತು….
“ಸಂತೋಷ ಬಂದಾಗ ವಾಗ್ದಾನ ಮಾಡಬಾರದು,ಕೋಪ ಬಂದಾಗ ಪ್ರತಿಕ್ರಿಯಿಸಬಾರದು” – ಎಂಥಾ ಲೌಕಿಕ ತಿಳುವಳಿಕೆಯ ಮಾತು ರಘುನಂದನ್ ಇದು. ಒರಳಲ್ಲಿ ನುರಿಯದವರ ಬಾಯಿಂದ ಇಂಥ ಮಾತು ಹೊರಡೋದು ಕಷ್ಟ. ಇಲ್ಲಿ ಮಮತಾ ಹೇಳಿರುವ ಮಾತು ಬಹಳ ನಿಜವಾದದ್ದು. ಅನುಕಂಪ ಸೂಚಿಸೋದೆ ಬೇರೆ, ಸೇವೇಲಿ ಪಾಲ್ಗೊಳ್ಳೊದೇ ಬೇರೆ. ಮೊದಲನೇದು ಯಾರು ಬೇಕಾದ್ರು ಮಾಡಬಹುದಾದದ್ದು.ನೀವು ನಿಮ್ಮನ್ನು ಸಾಕಿದ ಅಜ್ಜೀ ರುಣದಿಂದ ಸ್ವಲ್ಪ ಮಟ್ಟಿಗಾದರು ಮುಕ್ತರಾದಿರಿ, ಎಷ್ಟೋ ಸರ್ತಿ ರುಣಮುಕ್ತರಾಗ್ಬೇಕು ಅನ್ನುವ ಆಸೆ ಕುತ್ತಿಗೇ ತನಕವಿದ್ದರು ದೇವರು ಅದನ್ನು ಮಾಡಲಾಗದ ಪರಿಸ್ಥಿತಿಗೆ ನಮ್ಮನ್ನು ದೂಡಿ ಅಸಹಾಯಕತೆಯಲ್ಲಿ ವಿಲವಿಲ ಒದಾಡುವಂತೆ ಮಾಡುತ್ತಾನೆ. ಇಂಥಹುದೊಂದು ಸಂಕಟದಲ್ಲಿ ಸಿಲುಕಿರುವ ನನಗೆ ಎಷ್ಟೊ ಸರ್ತಿ ಮಾನಸಿಕ ಯಾತನೆಯಿಂದ ಯಾವ ಕ್ಷಣದಲ್ಲಾದರು ಹುಚ್ಚು ಹಿಡಿದುಬಿಡುತ್ತೇನೊ ಅನ್ನಿಸಿದೆ. ಈ ಒಂದು ರೀತಿಯಲ್ಲಿ ಅಜ್ಜಿಗೆ ಸೇವೆ ಸಲ್ಲಿಸುವ ಪೂರ್ತಿ ಸ್ವಾತಂತ್ರ್ಯ ದಕ್ಕಿ ನೀವು ನಿಮ್ಮ ಕುಟುಂಬ ಅದನ್ನು ಸಾರ್ಥಕವಾಗಿ ಬಳಸಿಕೊಂಡಿರಿ.ಪುಣ್ಯವಂತರು ನೀವುಗಳು. ಆದರೆ ಬೀಗರಾದ ಉಮಕ್ಕನಿಗೆ ಈ ಸೇವೆಯಲ್ಲಿ ಭಾಗವಹಿಸೊ ದರ್ದೇನೂ ಇರಲಿಲ್ಲ, ಆದರೆ ಅವರೂ ಅವರ ಮಗ ವಹಿಸಿದ ಕಾಳಜಿ ನೆನೆಸಬೇಕಾದ್ದು ನೋಡಿ. “ನಿನಗೇನು ಅಂಥದ್ದು ಅಜ್ಜಿ ಸೇವೆ ಮಾಡೊಕೆ ಹೋಗಿ ನಿಲ್ಲೋದು, ಅಲ್ಲೇನು ನಿನ್ನಣ್ಣ ತಮ್ಮ ಇಲ್ಲವಾ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಬಿದ್ದಿರು” ಅಂಥ ಮನೆಸೊಸೆಯ ಕಾಲು ಕಟ್ಟಿ ಹಾಕೋ ನೆಂಟರೆ ತುಂಬಿರುವಾಗ ಇಂಥ ಬೀಗರು ಸಿಕ್ಕೋಕು ಕೇಳಿಕೊಂಡು ಬಂದಿರಬೇಕು ರಘುನಂದನ್.