ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ಪುಟ್ಮಲ್ಲಿಯನ್ನು ಮೊದಲು ಅಮ್ಮಾ ಅಂದಿದ್ದು….


ನಾನು ಓದಿದ್ದು ಬಿ.ಎ. ಐಚ್ಚಿಕ ಕನ್ನಡದಲ್ಲಿ. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಪಾಠ ಮಾಡಲಿಲ್ಲ ಅಂದ್ರೆ ಟ್ಯೂಶನ್ ಗೆ ಕಡಿಮೆ ವಿಧ್ಯಾರ್ಥಿಗಳು ಬರುತ್ತಾರೆ ಅಂತ ರಾತ್ರಿ ಇಡೀ ಲೆಕ್ಕಗಳನ್ನು ಮಾಡಿ, ಇಂಗ್ಲಿಷ್ ವ್ಯಾಕರಣ ಕಲಿತು, ಸೂತ್ರಗಳನ್ನು ಬಿಡಿಸಿ ಮಕ್ಕಳಿಗೆ ಪಾಠ ಹೇಳುತ್ತಿದ್ದೆ. ಇದರ ಜೊತೆಗೆ ನನ್ನಿಷ್ಟದ ಕನ್ನಡ ಮತ್ತು ಸಮಾಜ ವಿಜ್ಞಾನದ ಪಾಠಗಳನ್ನು ಕೂಡ ಮಾಡುತ್ತಿದ್ದೆ. ಕೊನೆ ಕೊನೆಗೆ ನಾನು ಎಂ.ಎ. ಕನ್ನಡದಲ್ಲಿ ಮಾಡುವ ಹೊತ್ತಿಗೆ ಪಿ.ಯು.ಸಿ ವಿಧ್ಯಾರ್ಥಿಗಳಿಗೆ ಇಂಗ್ಲಿಷ್ ಕೂಡ ಪಾಠ ಮಾಡಲು ಶುರು ಹಚ್ಚಿದ್ದೆ. ನಾನು ಓದಿದ್ದು ಬೇರೆಯಾದರೂ ನಾ ಹೇಳಿಕೊಟ್ಟ ಪಾಠವೇ ಬೇರೆ. ಆದರೂ ಮಕ್ಕಳೆಲ್ಲಾ ಶೇಕಡಾ ನೂರು ಪಲಿತಾಂಶ ತಂದುಕೊಡುತ್ತಿದ್ದರು. ನನ್ನ ಪಲಿತಾಂಶ ನೋಡುವ ದಿನಗಳಲ್ಲಿ, ಬೇಲೂರಿನ ಅದೆಷ್ಟೋ ಮಕ್ಕಳ ಪಲಿತಾಂಶವನ್ನು ನೋಡುವುದು, ಪೋಷಕರ ಪ್ರೀತಿಯ ಮಾತುಗಳನ್ನು ಕೇಳುವುದು ಮತ್ತು ನನ್ನ ಜೊತೆಗೇ ಬೇಲೂರಿನ ಪ್ರತಿಷ್ಠಿತ ಶಾಲೆಗಳ ಶಿಕ್ಷಕರು ಪಾಠ ಮಾಡಿದ್ದ ವಿದ್ಯಾರ್ಥಿಗಳಿಗಿಂತ ಹೆಚ್ಚು ಅಂಕ ನನ್ನ ವಿದ್ಯಾರ್ಥಿಗಳಿಗೆ ಬರುವುದು, ಇದೆಲ್ಲಾ ಸಂಭ್ರಮದ ವಿಷಯ ನನಗೆ. ಮತ್ತು ಹೆಚ್ಚು ಮಕ್ಕಳು ಪಾಠಕ್ಕೆ ಬರುತ್ತಾರೆ ಅನ್ನುವ ಕನಸು ಜೊತೆಗೆ. ಅಬ್ಬಾ ಎಷ್ಟೊಂದು ಮಹತ್ವಾಕಾಂಕ್ಷೆ, ಶ್ರಮ, ಶಕ್ತಿ, ಉತ್ಸಾಹ, ಧೈರ್ಯ ಎಲ್ಲಿದ್ದವೋ ಎಲ್ಲಾ. ಇಷ್ಟೆಲ್ಲಾ ಹರ ಸಾಹಸ ಮಾಡುತ್ತಿದ್ದುದು, ತುತ್ತು ನಿಲ್ಲದಿರಲಿ ಅಂತ. ಬದುಕಿನ ರಥ ಉರುಳಿಸುವ ಚಕ್ರಗಳಿಗೆ ಗ್ರೀಸು ಎಣ್ಣೆ ಹಾಕುವ ಸಲುವಾಗಿ. ಮತ್ತೇ, ನಾಲ್ವರಂತೆ ಜೀವನ ಸಾಗಿಸಬೇಕು ಅನ್ನುವ ಸಣ್ಣ ಆಸೆ ಮತ್ತು ಕನಸು ಅಷ್ಟೇ.
ಅವತ್ತು ಎಸ್.ಎಸ್.ಎಲ್.ಸಿ ಹುಡುಗರಿಗೆ ಪಾಠ ಮಾಡಲು ತಯಾರಿ ನಡೆಸುತ್ತಿದ್ದೆ. ಪಾಠ ಯಾವುದೆಂದರೆ ನಕ್ಷತ್ರ, ಜ್ಯೋತಿರ್ವರ್ಷ, ಸೂರ್ಯ, ಗ್ಯಾಲಕ್ಸಿ ಇತ್ಯಾದಿ. ನನಗೆ ವಿಜ್ಞಾನ ಪಾಠ ಮಾಡೋದು ಅಂದ್ರೆ ಎಲ್ಲಿಲ್ಲದ ಉತ್ಸಾಹ. ತಯಾರಿಯೂ ಕೂಡ ಅಷ್ಟೇ ಖುಷಿ ಕೊಡುತ್ತಿತ್ತು. ಸಂಜೆಯ ಬ್ಯಾಚ್ ಆಗಲೇ ಬಂದಿತ್ತು. ಮಕ್ಕಳೆಲ್ಲಾ ಗಿಜಿ ಗಿಜಿ ಅನ್ನುತ್ತಿದ್ದರು. ಸುಮಾರು ನಲವತ್ತು ಮಕ್ಕಳ ಬ್ಯಾಚ್ ಅದು. ಹಾಲುಹಾದಿ ಗ್ಯಾಲಕ್ಸಿಯ ಪಾಠ ಬಹಳ ಜೋರಾಗಿತ್ತು. ಮಕ್ಕಳು ತನ್ಮಯರಾಗಿ ಕೇಳುತ್ತಿದ್ದರು. ಎಷ್ಟೆಂದರೆ ಪಾಠ ಮಾಡುತ್ತಿದ್ದ ಹೆಂಚಿನ ಮನೆಯ ರಿಪೀಸು ಮತ್ತು ಪಕಾಸುಗಳಿಗೆ ಸೂರ್ಯ ಚಂದ್ರ ಗ್ರಹ ನಕ್ಷತ್ರಗಳು ನೇತು ಹಾಕಿಕೊಂಡಿವೆಯೇನೋ ಹಾಗೆ. ಎಲ್ಲರೂ ಬಿಟ್ಟ ಕಣ್ಣು ಬಿಟ್ಟಂತೆ ಪಾಠ ಕೇಳುತ್ತಿದ್ದರು. ಇನ್ನೇನು ನಕ್ಷತ್ರಗಳ ದೂರವನ್ನು ಲೆಖ್ಖ ಹಾಕುವ ಮಾಪನವನ್ನು ಕುರಿತು ಹೇಳುವಷ್ಟರಲ್ಲಿ, ಕಷ್ಟ ಪಟ್ಟು ಕೊಂಡು ಕೊಂಡಿದ್ದ ನನ್ನ ಟಾಟಾ ಇಂಡಿಕಾಂ ಮೊಬೈಲ್ ಗೆ ಫೋನ್ ಬಂತು. ನಾ ಯುವುದೋ ಫೋನ್ ಇರಬೇಕು, ಕ್ಲಾಸ್ ಮುಗಿದ ಮೇಲೆ ಮಾತಾಡೋಣ ಅಂತ ಸುಮ್ಮನಿದ್ದೆ. ಮತ್ತೆ ಮತ್ತೆ ಫೋನ್ ಬಂತು. ನಾನೂ ನೋಡೋವಷ್ಟು ನೋಡಿ ಫೋನ್ ಎತ್ತಿ ಪಾಠ ಮಾಡ್ತಿದ್ದೀನಿ ಅಮೇಲ್ ಮಾಡ್ರಿ ಅಂದೆ. ತಕ್ಷಣ ಆ ಬದಿಯಿಂದ ‘ನಾನಪ್ಪ ಉಮಾಶ್ರೀ ಮಾತಾಡುತ್ತಿದ್ದೇನೆ’ ಅಂದ್ರು.
ಸೂರ್ಯ ಯಾವುದೋ, ಚಂದ್ರ ಯಾವುದೋ, ಗ್ಯಾಲಕ್ಸಿ, ಗ್ರಹ ನಕ್ಷತ್ರ ಎಲ್ಲಾ ಒಟ್ಟಿಗೆ ಹೆಂಚಿಗೆ ಅಂಟಿಕೊಂಡಿದ್ದವು ಅಂತ ನನ್ನ ವಿಧ್ಯಾರ್ಥಿಗಳು ಅನ್ಕೊಂಡಿದ್ರಲ್ಲಾ ಅವನ್ನ ನಾನು, ಅವೆಲ್ಲಾ ಕೆಳಕ್ಕೆ ಬೀಳ್ತಿದ್ದಾವೇನೋ ಅನ್ಕೊಂಡು ಮೇಲ್ನೋಡ್ಕೊಂಡು
‘ಅಮ್ಮ ನಮಸ್ತೆ, ಹೇಳಿ ಅಮ್ಮ ಅಂದೆ’, ಹಾಗೆ ಹೇಳುವಾಗ ಮೈಯೆಲ್ಲಾ ಹಿಡಿ ಆಗೋಯ್ತು. ಕಣ್ಮುಂದೆ ಪುಟ್ಮಲ್ಲಿನೇ ಬಂದು ಮಾತಾಡುತ್ತಿದ್ದಳೇನೋ ಅನ್ನುವ ಭಾವ ಸ್ವಗತದಲ್ಲಿ.
‘ಏನಿಲ್ಲಪ್ಪ ನಿನ್ನ ತಂಗಿಯ ಫೋಟೋ ನೋಡಿದ್ದೇನೆ, ಜಾತಕ ಕೂಡ ಸರಿ ಬಂದಿದೆ. ಚೂಡಾಮಣಿಯವರ ಹತ್ತಿರಾನೂ ಮಾತಾಡಿದ್ದೇನೆ. ಒಮ್ಮೆ ನೇರವಾಗಿ ಹುಡುಗಿಯನ್ನು ನೋಡಬಹುದೇನಪ್ಪಾ?’ ಅಂದ್ರು.
ಎನ್ ಉತ್ತರ ಹೇಳಲಿ, ‘ಅದಕ್ಕೇನಂತೆ ಅಮ್ಮ’ ಆಯಿತು ಅಂದು ಬಿಟ್ಟೆ.
ದೊಡ್ಡವರಿಗೆ ಪೋನ್ ಕೊಡು? ನಿಮ್ಮ ಅಪ್ಪ ಅಮ್ಮ ಎಲ್ಲಿದ್ದಾರೆ ? ಮನೆ ಇದೆಯಾ ? ಹುಡುಗಿಗೆ, ಹಾಡೋಕೆ ಬರುತ್ತಾ ? ಡ್ರೈವಿಂಗ್ ಬರುತ್ತಾ ? ಇಂಗ್ಲಿಷ್ ಬರುತ್ತಾ ? ಹೀಗೆ ಯಾವ ಪ್ರಶ್ನೆಯನ್ನು ಕೇಳಲಿಲ್ಲ.
‘ನಾನು ಆಯಿತು ಅಂದ ಮೇಲೆ, ಯಾವಾಗ ಬರುತ್ತೀರಾ?’ ಮನೆಗೆ ಅಂದೆ.

ಅದಕ್ಕವರು, ‘ಮನೆಗೆಲ್ಲಾ ಸದ್ಯಕ್ಕೆ ಬೇಡ ಕಂದಾ, ಹುಡುಗಿ ಕರ್ಕೊಂಡು ಬೆಂಗಳೂರಿಗೆ ಬಂದುಬಿಡು ಅಲ್ಲೇ ನೋಡೋಣಾ’ ಅಂದ್ರು. ಸೀರೆ ಉಡಿಸಿ, ಮಲ್ಲಿಗೆ ದಿಂಡು ಮುಡಿಸಿ, ವಡವೆ ಎಲ್ಲಾ ಹಾಕಿ ನಿನ್ನ ತಂಗಿಗೆ ಹಿಂಸೆ ಕೊಡಬೇಡ ರಘು. ಚೂಡಿದಾರ ಸಾಕು’ ಅಂದ್ರು.
‘ಸರಿ ಅಮ್ಮ ಆಯಿತು’ ಅಂದೆ. ಅದನ್ನೆಲ್ಲಾ ಹಾಕು ಅಂದಿದ್ರೂ ನಾ ಹಾಕಿಸುತ್ತಿರಲಿಲ್ಲ ಕೂಡಾ.
ತುಂಬಾ ಆಸೆ ಮತ್ತು ವಿನಮ್ರತೆಯಿಂದ ‘ನಾನೂ ನೇರವಾಗಿ ಹುಡುಗನನ್ನು ನೋಡಬಹುದಾ ?’ ಅಂದೆ. ಅದಕ್ಕೆ ಮೊದಲು ಬೆಂಗಳೂರಿನ ಬನಶಂಕರಿ ಮಹಿಳಾ ಸಮಾಜದಲ್ಲಿ ಹುಡುಗನ ಫೋಟೋ ನೋಡಿದ್ದೆ.
ಅಯ್ಯೋ ಹುಚ್ಚಾ, ‘ನೀನೂ ನಿನ್ನ ತಂಗಿ ಕೂಡಾ ಹುಡುಗನನ್ನು ನೋಡಬೇಕು, ನಿಮಗೆ ಒಪ್ಪಿಗೆ ಆದರೆ ಅಮಲೇ ಮುಂದಿನದ್ದು ನೋಡೋಣಾ’ ಅಂದ್ರು
‘ಸರಿ ಭಾನುವಾರ ಚೂಡಾಮಣಿಯವರ ಮನೆಯಲ್ಲಿ ಹುಡುಗಿಯನ್ನು ನೋಡೋಣಾ’ ಅಂದ್ರು.
‘ಸರಿ’ ಅಂದೆ.
‘ಇನ್ನೊಂದು ವಿಷಯ ರಘು ನೆಂಟರು, ಅವರು ಇವರೂ ಅಂತೆಲ್ಲಾ ಯಾರೂ ಬೇಡ ಮೊದಲು, ನಾನು ನನ್ನ ಮಗ, ನೀನೂ ನಿನ್ನ ತಂಗಿ ಆಮೇಲೆ ಚೂಡಾಮಣಿ ಅವರು ಸಾಕು ಅಂದ್ರು. ಹೆಚ್ಚಿನ ತಯಾರಿ ಎಲ್ಲಾ ಏನೂ ಬೇಡಪ್ಪ. ತಿಂಡಿ ತೀರ್ಥ ಅಂತೆಲ್ಲಾ ತಲೆ ಕೆಡಿಸಿಕೊಳ್ಳಬೇಡ’ ಅಂದ್ರು.
ನಾನು ಇದಕ್ಕೆಲ್ಲಾ ಏನು ಮಾತಾಡಬೇಕು ತಕ್ಷಣ ತಿಳಿಯದೇ ‘ಆಯಿತು’ ಅಂದೆ.
ಉಮಾಶ್ರೀ ಅವರು ಫೋನ್ ಮಾಡಿದ್ದು ಗುರುವಾರ ಸಂಜೆ, ಭಾನುವಾರ ಬೆಳಿಗ್ಗೆ ಹೊತ್ತಿಗೆ ಶೇತಮ್ಮನ್ನ ಕರ್ಕೊಂಡು ಬೆಂಗಳೂರಿಗೆ ಹೋಗಬೇಕು ಅಂತ ತೀರ್ಮಾನಿಸಿ, ಚೂಡತ್ತಿಗೆಗೆ ಫೋನ್ ಮಾಡಿದೆ. ಅವರು ‘ನನಗೂ ಉಮಾಶ್ರೀ ಅವರು ಫೋನ್ ಮಾಡಿದ್ದಾರೆ. ನೀನು ಶನಿವಾರನೇ ಶ್ವೇತಳನ್ನು ಕರ್ಕೊಂಡು ಬಂದುಬಿಡಪ್ಪ’ ಅಂದ್ರು. ಅವರಿಗೂ ‘ಆಯಿತು’ ಅಂದೆ.
ಭಾನುವಾರದ ಕಾರ್ಯಕ್ರಮ ನಿಗಧಿ ಆದ ಮೇಲೆ ಹೇಳೋಕೆ ಆಗದ ಒತ್ತಡ ಶುರು ಆಯಿತು.ನನ್ನ ತಂಗಿಯ ಬದುಕು ಚೆನ್ನಾಗಿ ಆಗಿಬಿಡತ್ತೆ. ಒಂದೊಳ್ಳೆ ಮನೆ ಸಿಗತ್ತೆ. ಬಾಲ್ಯದಿಂದಲೂ ಕಷ್ಟವನ್ನೇ ಉಂಡವಳು ರಾಣಿ ತರ ಇರುತ್ತಾಳೆ, ಇವಳೂ ಒಪ್ಪಿ ಅವರೂ ಒಪ್ಪಿದರೆ ಎಷ್ಟೇ ಕಷ್ಟ ಆದರೂ ಸರಿ ಮದುವೆ ಮಾಡಿಬಿಡೋಣ ಅನ್ನುವ ಕುಕ್ಕೆ ಕುಕ್ಕೆ ಕನಸಿನ ಅಡಿಪಾಯಕ್ಕೆ ಮೊದಲ ಕಲ್ಲಿಟ್ಟೆ. ಉಮಾಶ್ರೀ ಅವರ ಹತ್ತಿರ ಮಾತಾಡಿದ ಮೇಲೆ ತಂಗಿ ಮದುವೆ ಅನ್ನುವ ಖುಷಿಗೆ ಮೈ ಮನಸು ಬುದ್ಧಿ ಎಲ್ಲಾ ಸಂತೋಷಕ್ಕೆ ಕಣ್ಣೀರು ಹಾಕೋದಕ್ಕೆ ಶುರು ಮಾಡಿಬಿಟ್ಟವು. ಇನ್ನೂ ಅವತ್ತು ರಾತ್ರಿ ಹೃದಯಕ್ಕೆ ಮತ್ತು ಕಣ್ಣಿಗೆ ಪುರುಸೊತ್ತಿರಲಿಲ್ಲ. ಅತ್ತಿದ್ದೇ ಅತ್ತಿದ್ದು. 24 ವರ್ಷ ಆದ್ರೂ ಆಕಡೆ ನನ್ನ ತಂಗಿ ಈಕಡೆ ನಾನು ನಮ್ಮಜ್ಜಿಯ ಹೊಟ್ಟೆ ಇಡ್ಕೊಂಡು ಮಲಗುತ್ತಿದ್ದೆವು. ನಮ್ಮಜ್ಜಿ ಸೆರಗಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಿದ್ದರೆ, ಅವರ ಮೈ ಬಿಸಿ ‘ಶೇತಿ ಮದ್ವೆ ಮಾಡಿ ಬಿಡೋ’ ಅಂತಾ ಯಾವಾಗಲೂ ಹೇಳುತ್ತಿದ್ದ ಮಾತುಗಳು ಮತ್ತಷ್ಟು ಧೈರ್ಯ ಕೊಡುತ್ತಿತ್ತು. ನಾ ಗುಬ್ರ ಹಾಕಿಕೊಂಡು ಅಳುತ್ತಿದ್ದುದು ನಮ್ಮಜ್ಜಿಗೆ ಮತ್ತು ನನ್ನ ತಂಗಿಗೆ ಇಬ್ಬರಿಗೂ ಗೊತ್ತಾಗಿತ್ತು. ಅವರು ಯಾಕೆ ಅಂತ ಆ ರಾತ್ರಿ ಕೇಳಲಿಲ್ಲ. ಅವರಿಬ್ಬರೂ ನನ್ನನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ನನ್ನ ಭಾವನೆಗಳು ಓತಪ್ರೋತವಾದಾಗ ನನ್ನ ಪಾಡಿಗೆ ನನ್ನನ್ನ ಬಿಟ್ಟು ಬಿಡೋರು. ಹಾಗಾಗಿ ಅವರಿಬ್ಬರೂ ಆಗ ಏನೂ ಕೇಳಲಿಲ್ಲ. ನನಗೆ ಚೆನ್ನಾಗಿ ನೆನಪಿದೆ, ಆ ಹೊತ್ತು ನಮ್ಮಜ್ಜಿ ರಗ್ಗನ್ನು ನನ್ನ ಮೈ ಮೇಲೆ ಸರಿ ಮಾಡಿತು. ನನ್ನಜ್ಜಿ ಹೊಟ್ಟೆ ಹಿಡ್ಕೊಂಡು ಮಲಗಿದ್ದ ನನ್ನ ಕೈ ಮೇಲೆ ನನ್ನ ತಂಗಿ ಕೈ ಇಟ್ಟಳು. ಒಂದೇ ರಗ್ಗಿನೊಳಗೆ ಅವರಿಬ್ಬರೂ ತೋರಿದ ಆ ದಿವ್ಯ ಪ್ರತಿಕ್ರಿಯೆ ಇಂದೂ ನನ್ನನ್ನ ಮಗುವಾಗಿಸುತ್ತೆ. ಅನುಭವಗಳಿಗೆ ಎಷ್ಟೊಂದು ಶಕ್ತಿ ಇರತ್ತೆ ನೋಡಿ. ಇಲ್ಲಿ ನನ್ನ ಅತಿ ಭಾವ ಮತ್ತು ಅಭಿವ್ಯಕ್ತಿ ವಾಚ್ಯ ಅನ್ನಿಸುತ್ತಿದೆ. ಆದರೂ ಮರುಕಳಿಯೂ ಅದೆಷ್ಟೋ ಚೈತನ್ಯ ಕೊಡುತ್ತಿರುವುದರಿಂದ ಬರೀಬೇಕು ಅನ್ನಿಸುತ್ತಿದೆ. ಇರಲಿ,
ಬೆಳಿಗ್ಗೆ ಎದ್ದ ಮೇಲೆ, ಎಂದಿನಂತೆ ಮನೆಪಾಠಕ್ಕೆ ಹುಡುಗರು ಬಂದಿದ್ದರು. ಪಾಠ ಮುಗಿಸಿದೆ. ನಾನು ನನ್ನ ತಂಗಿ ತಿಂಡಿ ತಿನ್ನಬೇಕಾದ್ರೆ, ನಾ ತಡೆದು ಇಟ್ಟುಕೊಂಡಿದ್ದ ವಿಷಯವನ್ನು ಅವಳಿಗೆ ಮತ್ತು ನಮ್ಮ ಅಜ್ಜಿ ತಾತನಿಗೆ ಹೇಳಿದೆ. ಅವಳಿಗೆ ನೂರು ರುಪಾಯಿಕೊಟ್ಟು ಫೇರ್ ಅಂಡ್ ಲವ್ಲಿ ತಗೋ, ಹಾಗೇ ಐಬ್ರೋ ಮಾಡಿಸಿಕೋ ಅಂತ ಹೇಳಿ, ಮತ್ತೆ ಕಾಲೇಜಿನ ಕಡೆ ಹೊರಟೆ. ನಾ ಮಾತಾಡಿ ಹೊರಡೋ ಕೊನೇ ತನಕ ಸುಮ್ಮನಿದ್ದು ‘ಅಷ್ಟೊಂದು ದುಡ್ಡೆಲ್ಲಿ ತರ್ತೀಯೋ ? ನನಗೋಸ್ಕರ ಬಂಡೆ ಹೊತ್ಕೊಂಡು ತಿರುಗಬೇಡ’ ಅಂತ ಹೇಳುವಾಗಿನ ನನ್ನ ತಂಗಿಯ ಪ್ರೀತಿ ಮತ್ತು ನನ್ನನ್ನು ಕಾಪಾಡಿ ಸಲಹುವ ಶಕ್ತಿಯನ್ನು ಎಂದಿಗೂ ಮರೆಯಲಾರೆ.
ಇದೇನಪ್ಪ ಉಮಾಸಿರಿ ಅಂತ ಹೇಳಿ ಅಣ್ಣಾ ತಂಗಿ ಕಥೆ ಹೇಳುತ್ತಿದ್ದೀನೆ ಅಂದುಕೊಳ್ಳಬೇಡಿ. ಇನ್ನೊಂದು ಮೂರು ಅಥವಾ ನಾಲ್ಕು ಎಪಿಸೋಡುಗಳು ಇವುಗಳನ್ನು ಬಿಟ್ಟು ಬರೆಯಲು ನನ್ನಿಂದ ಸಾಧ್ಯವೇ ಇಲ್ಲಾ… ಹಾಗಾಗಿ ನೀವು ನನ್ನನ್ನು ಸಹಿಸಿಕೊಳ್ಳಲೇ ಬೇಕು. ನಾನೂ ಒಂಚೂರು ನಿರಾಳ ಆಗುತ್ತೇನೆ ಏನಂತೀರಿ ???
 

‍ಲೇಖಕರು G

23 November, 2014

ನಿಮಗೆ ಇವೂ ಇಷ್ಟವಾಗಬಹುದು…

18 Comments

  1. Anonymous

    Such a moving narration Sir. Your prose has the capacity to evoke ‘thoughts that do often lie too deep for tears.’ I am sure your story will find resonance with many a struggling individuals belonging to that period of time.

    • Anonymous

      am proud to say me as your student sir.

  2. D.Ravivarma

    ಭಾನುವಾರದ ಕಾರ್ಯಕ್ರಮ ನಿಗಧಿ ಆದ ಮೇಲೆ ಹೇಳೋಕೆ ಆಗದ ಒತ್ತಡ ಶುರು ಆಯಿತು.ನನ್ನ ತಂಗಿಯ ಬದುಕು ಚೆನ್ನಾಗಿ ಆಗಿಬಿಡತ್ತೆ. ಒಂದೊಳ್ಳೆ ಮನೆ ಸಿಗತ್ತೆ. ಬಾಲ್ಯದಿಂದಲೂ ಕಷ್ಟವನ್ನೇ ಉಂಡವಳು ರಾಣಿ ತರ ಇರುತ್ತಾಳೆ, ಇವಳೂ ಒಪ್ಪಿ ಅವರೂ ಒಪ್ಪಿದರೆ ಎಷ್ಟೇ ಕಷ್ಟ ಆದರೂ ಸರಿ ಮದುವೆ ಮಾಡಿಬಿಡೋಣ ಅನ್ನುವ ಕುಕ್ಕೆ ಕುಕ್ಕೆ ಕನಸಿನ ಅಡಿಪಾಯಕ್ಕೆ ಮೊದಲ ಕಲ್ಲಿಟ್ಟೆ. ಉಮಾಶ್ರೀ ಅವರ ಹತ್ತಿರ ಮಾತಾಡಿದ ಮೇಲೆ ತಂಗಿ ಮದುವೆ ಅನ್ನುವ ಖುಷಿಗೆ ಮೈ ಮನಸು ಬುದ್ಧಿ ಎಲ್ಲಾ ಸಂತೋಷಕ್ಕೆ ಕಣ್ಣೀರು ಹಾಕೋದಕ್ಕೆ ಶುರು ಮಾಡಿಬಿಟ್ಟವು. ಇನ್ನೂ ಅವತ್ತು ರಾತ್ರಿ ಹೃದಯಕ್ಕೆ ಮತ್ತು ಕಣ್ಣಿಗೆ ಪುರುಸೊತ್ತಿರಲಿಲ್ಲ. ಅತ್ತಿದ್ದೇ ಅತ್ತಿದ್ದು. 24 ವರ್ಷ ಆದ್ರೂ ಆಕಡೆ ನನ್ನ ತಂಗಿ ಈಕಡೆ ನಾನು ನಮ್ಮಜ್ಜಿಯ ಹೊಟ್ಟೆ ಇಡ್ಕೊಂಡು ಮಲಗುತ್ತಿದ್ದೆವು. ನಮ್ಮಜ್ಜಿ ಸೆರಗಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಿದ್ದರೆ, ಅವರ ಮೈ ಬಿಸಿ ‘ಶೇತಿ ಮದ್ವೆ ಮಾಡಿ ಬಿಡೋ’ ಅಂತಾ ಯಾವಾಗಲೂ ಹೇಳುತ್ತಿದ್ದ ಮಾತುಗಳು ಮತ್ತಷ್ಟು ಧೈರ್ಯ ಕೊಡುತ್ತಿತ್ತು. ನಾ ಗುಬ್ರ ಹಾಕಿಕೊಂಡು ಅಳುತ್ತಿದ್ದುದು ನಮ್ಮಜ್ಜಿಗೆ ಮತ್ತು ನನ್ನ ತಂಗಿಗೆ ಇಬ್ಬರಿಗೂ ಗೊತ್ತಾಗಿತ್ತು. ಅವರು ಯಾಕೆ ಅಂತ ಆ ರಾತ್ರಿ ಕೇಳಲಿಲ್ಲ. ಅವರಿಬ್ಬರೂ ನನ್ನನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ನನ್ನ ಭಾವನೆಗಳು ಓತಪ್ರೋತವಾದಾಗ ನನ್ನ ಪಾಡಿಗೆ ನನ್ನನ್ನ ಬಿಟ್ಟು ಬಿಡೋರು. ಹಾಗಾಗಿ ಅವರಿಬ್ಬರೂ ಆಗ ಏನೂ ಕೇಳಲಿಲ್ಲ. ನನಗೆ ಚೆನ್ನಾಗಿ ನೆನಪಿದೆ, ಆ ಹೊತ್ತು ನಮ್ಮಜ್ಜಿ ರಗ್ಗನ್ನು ನನ್ನ ಮೈ ಮೇಲೆ ಸರಿ ಮಾಡಿತು. ನನ್ನಜ್ಜಿ ಹೊಟ್ಟೆ ಹಿಡ್ಕೊಂಡು ಮಲಗಿದ್ದ ನನ್ನ ಕೈ ಮೇಲೆ ನನ್ನ ತಂಗಿ ಕೈ ಇಟ್ಟಳು. ಒಂದೇ ರಗ್ಗಿನೊಳಗೆ ಅವರಿಬ್ಬರೂ ತೋರಿದ ಆ ದಿವ್ಯ ಪ್ರತಿಕ್ರಿಯೆ ಇಂದೂ ನನ್ನನ್ನ ಮಗುವಾಗಿಸುತ್ತೆ. ಅನುಭವಗಳಿಗೆ ಎಷ್ಟೊಂದು ಶಕ್ತಿ ಇರತ್ತೆ ನೋಡಿ. ಇಲ್ಲಿ ನನ್ನ ಅತಿ ಭಾವ ಮತ್ತು ಅಭಿವ್ಯಕ್ತಿ ವಾಚ್ಯ ಅನ್ನಿಸುತ್ತಿದೆ. ಆದರೂ ಮರುಕಳಿಯೂ ಅದೆಷ್ಟೋ ಚೈತನ್ಯ ಕೊಡುತ್ತಿರುವುದರಿಂದ ಬರೀಬೇಕು ಅನ್ನಿಸುತ್ತಿದೆ. ಇರಲಿ,..sir heart touching…
    mundina barahakkagi kaadiruve…

  3. ಗವಿಸಿದ್ಧ ಹೊಸಮನಿ

    ಕೆಲ ಸಾಲುಗಳು ನನ್ನನ್ನು ತುಂಬಾ ಕಾಡಿದವು. ಅಂತಹ ಸಾಲುಗಳನ್ನು ಯಾಕೋ ಎರಡೆರಡು ಭಾರಿ ಓದಿದೆ. ಘಾಸಿಗೊಂಡೆ. ಬದುಕಿಗಾಗಿ ಎಷ್ಟೆಲ್ಲಾ.. ಅಬ್ಬಾ..! ಅತೀ ಭಾವುಕತೆ ಇಲ್ಲಿದೆ ಅಂತನಿಸುವುದಿಲ್ಲ ನನಗೆ. ಒಂದು ತಾಯಿಯ ಮನಸು, ಬದುಕಿಗಾಗಿ ಅದು ಪಡುವ ಯಾತನೆ ಇಲ್ಲಿದೆ..

  4. Gopaala Wajapeyi

    ಒಂದೇ ಪೆಟ್ಟಿಗೆ ಓದಿ ಮುಗಿಸಲೇಬೇಕು; ಅಷ್ಟು ಚೆನ್ನಾಗಿದೆ ಅನುಭವ ಕಥನ. ರಘು, ನಿಮ್ಮ ಹೃದಯದಿಂದ ನಮ್ಮ ಹೃದಯಕ್ಕೆ ಸೇತು ನಿಮ್ಮ ಈ ಅಂಕಣ.

  5. Rajendra B. Shetty

    ಓದುತ್ತಾ ಹೋದ ಹಾಗೆ ಮನ ತುಂಬಿ ಬಂತು. ನಿನ್ನೆ ನನಗೆ ಒಂದು ಹಳೆಯ ಕಾಗದದ ಚೂರು ಸಿಕ್ಕಿತ್ತು. ಅದರಲ್ಲಿ ಬರೆದಿದ್ದೆ, “ಎಲ್ಲರಿಗೂ ನನ್ನ ತಂಗಿಯಂತಹವರೇ ಸಿಗಲಿ”. ನಿಮ್ಮ ಲೇಖನ ಓದಿದ ನಂತರ ಅನಿಸಿದ್ದು, ಎಲ್ಲಾ ಹೆಣ್ನು ಮಕ್ಕಳಿಗೂ ನಿಮ್ಮಂತಹ ಅಣ್ಣ ಸಿಗಲಿ ಎಂದು. ದೇವರು ಒಳ್ಳೆಯದು ಮಾಡುತ್ತಾನೆ

  6. srinidhi

    ಸುಲಲಿತ ಬರಹ…ಕಣ್ಣ ಮು೦ದೆ ಹಾಗೇ ದೃಶ್ಯ ಇಳಿಸಿದೆ!

  7. dinesh maneer

    tumba chnnagi odisikondu hoguttide kooda, sarala preethi eshtu divyavagiruttade annuvudu tumba chnnagi torisiddera , mundina bhanuvarakkaagi kaayuttene

  8. Anonymous

    Nice sir

  9. santhosh gandhi

    Nijavagiyu thumbha chanagide sir

  10. Meena B Gowda

    Really very interesting sir

  11. indu vishwanath

    Hi raghu..neevu anubhavisiddanna sogasagi barediddeeri…aparoopada khanagalu….bahala rasavathagi barereyuva nimma kale…sundara..mundina kanthannu yeduru noduthiddene…god bless

  12. ವೆಂಕಟೇಶ ನಾಯಕ್

    ಕಣ್ಣಿಗೆ ಕಟ್ಟುವ ನಿರೂಪಣೆ, ಅಕ್ಷರಗಳ ಮೂಲಕ ನೀವು ಬಿಚ್ಚಿಡುವ ಭಾವನೆ! ನಿಜವಾಗಿಯೂ ಅದ್ಭುತ , ಮುಂದಿನ ಅಂಕಣಕ್ಕೆ ಕಾಯುತ್ತಿರುವೆ

  13. Sneha Ramakanth

    ಮುಂದಿನ ಸಂಚಿಕೆಗೆ ಕಾಯೋ ಅಷ್ಟು ತಾಳ್ಮೆ ಇಲ್ಲಾ ಅನ್ಸ್ತು… ಈಗ್ಲೆ ಹೇಳಿದ್ದರೆ ಏನಾಗಿರೋದು ಅನ್ನೊ ಅಷ್ಟು ಕುತೂಹಲ ಮೂಡಿಸಿತು ಸರ್ ತುಂಬ ಅತ್ಯುತಮ… ಕೆಲವು ಬಹಳ ಇಷ್ಟ ಆದವು ……ವಿಜ್ಞಾನ ಓದಿ ಪಾಠ ಮಾಡಿದ್ದು…ಓದಿ ಪಾಠ ಮಾಡುವ ಸುಖಾನೆ ಬೇರೆ… ನಾನು ಅದನ್ನ ಅನುಭವಿಸಿದೇನೆ… ಮುಂದಿನದದು ಬೇಗ ಬರುವಂತಾಗಲಿ ಕಾಲ ಚಕ್ರ ಬೇಗ ಓಡಲಿ

  14. ಸುಗುಣ ಮಹೇಶ್

    ನಿಮ್ಮಂತ ಅಣ್ಣ ಎಲ್ಲರಿಗೂ ಸಿಗಲಿ. ಬಡತನದ ಜೀವನ ಅನುಭವಿಸಿದವರಿಗೇ ಗೊತ್ತು. ಉಮಾಶ್ರೀ ಅವರ ಬಗ್ಗೆ ಹೆಚ್ಚು ತಿಳಿಯುವ ಆಸೆ.

  15. bhagya

    Nice sir.onde sala odide.mattondu sala odide.heartly touching sir.nanu barediddini.ondu sala odi anta neevu helode beda.nane kaadu oduttene.nice sir

  16. manjunath.s

    ತಂಗಿ ಮದುವೆಯ ಜವಾಬ್ದಾರಿ ಆತಂಕ ಮತ್ತು ಬದುಕಿನ ವಾಸ್ತವ ಸೊಗಸಾಗಿ ವಿವರಿಸಿದ್ದೀರ. ಮುಂದಿನ ಕಂತಿನ ನಿರೀಕ್ಷೆಯಲ್ಲಿದ್ದೇನೆ.

  17. Mamatha

    ನಿಮ್ಮ ಭಾವುಕತೆ ನಮಗರ್ಥವಾಗುತ್ತೆ. ಸ್ವಲ್ಪ ಅತಿಬಾವುಕರು ನೀವು. ಬದುಕಲ್ಲಿ ಅತಿ ಕಷ್ಟಪಟ್ಟು, ಮಹತ್ವಾಕಾಂಕ್ಷೆ ಹೊತ್ತು, ಬರುವಾಗ ಒಂದೊಳ್ಳೆಯ ಕಾಲಘಟ್ಟದಲ್ಲಿ ಗತ ಜೀವನ overflow ಆಗಿ ಹರಿಯೋದು ಸಹಜ ಅನ್ನಿಸುತ್ತೆ. ಎಲ್ಲವನ್ನೂ ಹೊರಹಾಕಿಬಿಡಬೇಕು. ಹಗುರಾಗಬೇಕು. ಚಂದದ ನಿರೂಪಣೆ. ಆಪ್ತ ಬರಹ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading