ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ನೀರು ತಂದ ಸಾಕವ್ವ

ನೀರು ತಂದವಳು

ಜೀವನದ ಮೂಲಭೂತ ಅಗತ್ಯಗಳಿಗಾಗಿ ಎಲ್ಲಿ ನೀರು ಇರುತ್ತದೋ ಅಲ್ಲಿ ನಗು ಇರುತ್ತದೆ. ಜನರ ಜೀವನದಲ್ಲಿ ನೆಮ್ಮದಿ ಇರುತ್ತದೆ ಎಂಬ ಮಾತು ಸತ್ಯ. ಇತ್ತೀಚಿಗೆ ನನ್ನ ಪಿಎಚ್.ಡಿ. ಸಂಶೊಧನೆಯ ಸಲುವಾಗಿ ಕ್ಷೇತ್ರ ಕಾರ್ಯಕ್ಕೆ ಬಾಗಲಕೋಟೆ ಜಿಲ್ಲೆಯ ಉಮಾಶ್ರೀಯವರ ರಾಜಕೀಯ ಕಾರ್ಯಕ್ಷೇತ್ರ ತೇರದಾಳ ಮತಕ್ಷೇತ್ರಕ್ಕೆ ಹೋಗಿದ್ದೆ. ಕಂಡಿದ್ದು ಕೇಳಿದ್ದು ಅನುಭವಕ್ಕೆ ಬಂದಿದ್ದು ಅನೇಕ. ಕೆಲವು ಪಕ್ಕಾ ಸಂಶೋಧನೆಗೆ ಅಗತ್ಯವಾದ ಅಂಕಿ ಅಂಶಗಳ ವಿವರದಂತೆ ಕಂಡವು. ಇನ್ನೂ ಹಲವು ಮನದಲ್ಲಿ ಜೀವಂತಿಕೆಯ ಸೆಲೆಗಳಾಗಿ ಉಳಿದವು. ನನ್ನ ಹುಡುಕಾಟದ ದಾರಿ ಮೊದಲು ಶುರು ಆಗಿದ್ದು ಸತ್ಯಕಾಮರ ನೆಲೆಯಾದ ಜಮಖಂಡಿ ಜಿಲ್ಲೆಯ ಕಲ್ಹಳ್ಳಿ ಅನ್ನುವ ಗ್ರಾಮದಿಂದ.
ಸ್ವತಂತ್ರ ಪೂರ್ವದಲ್ಲಿ ಹಾಗೂ ಸ್ವತಂತ್ರ ಬಂದ ನಂತರ ಅಂದ್ರೆ ಸುಮಾರು ಸನ್ ಸಾವಿರದ ಒಂಭೈನೂರಾ ಅರವತ್ತೇಳರ ತನಕ ಕಲ್ಹಳ್ಳಿ, ನಾವಲಗಿ, ಸಿದ್ಧಾಪುರ, ಕುಳುಲಿ, ಶಿರೋಳ, ಮುಗೋಳಖೋಡ, ಬೆಳಗಲಿ, ಬಂಡಿಗಣಿ ಗ್ರಾಮಗಳಿಗೆ ನೀರಿನ ಮೂಲವಾಗಿ ಮಳೆ ಪೂರ್ತಾ ಕೈ ಹಿಡಿಯುತ್ತಿತ್ತು. ಈ ಮಳೆಯ ಪ್ರಮಾಣ ಎಂಭತ್ತೆರಡನೇ ಇಸವಿಗೆ ಬರುವ ಹೊತ್ತಿಗೆ ಸರಿ ಸುಮಾರು ಅರ್ಧಕ್ಕೆ ಕುಸಿಯಿತು. ಆಮೇಲಂತೂ ಈ ಮಳೆ ತಳಕ್ಕೆ ಕುಸಿದು ಅದರ ಕಥೆ ಹೇಳೋದೇ ಬೇಡ. ಮಳೆ ನಂಬಿ ಜೀವನ ಮಾಡುತ್ತಿದ್ದ ರೈತರ ಬದುಕಿನ ಬವಣೆ ತೀರಾ ನಿಕೃಷ್ಟವಾಗಿತ್ತು. ಸಾಗುವಳಿ ಜಮೀನುಗಳೆಲ್ಲಾ ಒಣಗಿ ಬಣಗುಡಲು ಶುರುವಾಯಿತು. ಎಪ್ಪತ್ತು ಎಂಭತ್ತು ಎಕರೆ ಜಮೀನು ಹೊಂದಿದ್ದ ರೈತರೂ ಕೂಡ ಭೂಮಿಯಿಂದ ದುಡಿಮೆ ಕುಸಿದು ಕೂಲಿ ಮಾಡುವ ಸ್ಥಿತಿ ಬಂದುಬಿಟ್ಟಿದ್ದರು. ಕೆಲವರು ವಲಸೆ ಹೋದರು. ಇನ್ನೂ ಕೆಲವರು ದೂರದ ಊರುಗಳಿಂದ ಹುಣಸೇ ಹಣ್ಣನ್ನು ತಂದು ಅದನ್ನು ಬಡಿದು, ಬೀಜ ತೆಗೆದು ಸ್ವಚ್ಛಗೊಳಿಸಿ ಮಾರಾಟ ಮಾಡುವ ಕಾಯಕಕ್ಕೆ ಹೊಂದಿಕೊಂಡರು. ನೀರಿಲ್ಲದಿದ್ದಾಗ ಮೇವಿಲ್ಲದೆ ಜಾನುವಾರುಗಳು ಕೂಡ ಸೊರಗಿಬಿಟ್ಟವು. ಹೈನುಗಾರಿಕೆಯೂ ತಳ ಕಚ್ಚಿತು. ಪಶು ಪಕ್ಷಿ ಜೀವ ಸಂಕುಲಗಳಿಗೆಲ್ಲಾ ದಾವು ಹತ್ತಿಕೊಂಡಿತು.
ಮೊದ ಮೊದಲು ಜನರ ಬವಣೆಯನ್ನು ನೋಡಲಾರದೇ ಸಾಹಿತಿಗಳಾದ ಸತ್ಯಕಾಮ ಮತ್ತು ರಾವ್ ಬಹಾದ್ದೂರ್ ಅವರ ನೇತೃತ್ವದಲ್ಲಿ ಹಳ್ಳಿಯ ಜನರೆಲ್ಲಾ ರಸ್ತೆ ರೂಖೋ ಹೋರಾಟವನ್ನು ಕೂಡ ಮಾಡಿದ್ದರು. ಆಮೇಲೆ ಸಂಗಪ್ಪ ಉಪ್ಪಲದಿನ್ನಿ ಅವರ ಮುಂದಾಳತ್ವದಲ್ಲಿ ಸುಮಾರು ಮೂರು ದಶಕ ನೀರಿಗಾಗಿ ಹೋರಾಟ ನಡೆಯುತ್ತಲೇ ಇತ್ತು. ಅಷ್ಟೇ ಅಲ್ಲ ಸುಮಾರು ನಲವತ್ತು ವರ್ಷಗಳಿಂದ ಅನೇಕ ಹಳ್ಳಿಯ ಹಿರಿಯರು, ಮುಖಂಡರು ಮತ್ತು ಸಾಮಾನ್ಯ ಜನರು ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಲೇ ಇದ್ದರು.
ಹೀಗಿದ್ದಾಗ ಉಮಾಶ್ರೀ ಅವರು ಆರಿಸಿ ಬಂದು ಸಚಿವರಾದ ಮೊದಲ ಹದಿನೈದು ದಿನಗಳಲ್ಲಿ ಕಲಹಳ್ಳಿಯ ಗ್ರಾಮದ ಮುಖಂಡ ಸಂಗಪ್ಪ ಉಪ್ಪಲದಿನ್ನಿ ಅವರ ನೇತೃತ್ವದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಇದೇ ಏತ ನೀರಾವರಿಯನ್ನು ಕುರಿತು ಮನವಿಯನ್ನು ಸಲ್ಲಿಸಿದರು. ಸೋತಾಗಲೂ ಕೂಡ ಕ್ಷೇತ್ರದ ಆಗು ಹೋಗುಗಳ ಬಗ್ಗೆ ತೀರಾ ನಿಗಾ ಇಟ್ಟಿದ್ದ ಉಮಾಶ್ರೀ ಅವರು ಕಲ್ಹಳ್ಳಿ ಗ್ರಾಮಸ್ಥರ ಕೋರಿಕೆಗೆ ತಕ್ಷಣ ಕೈಗೆತ್ತಿಕೊಂಡರು. ಯೋಜನೆಯ ಬೆನ್ನಿಗೆ ಬಿದ್ದು ಹದಿನೈದು ಕಿಲೋಮೀಟರ್ ದಾರಿಯಿಂದ ಕೃಷ್ಣಾ ನದಿಯಿಂದ ನೀರು ತರಲು ಕಾಯಕಲ್ಪ ಹಾಕಿಕೊಂಡರು. ಏತ ನೀರಾವರಿ ಯೋಜನೆಯ ಬಗೆಗೆ ಸರ್ಕಾರದ ಗಮನಕ್ಕೆ ತಂದು ಜನರ ಸಂಕಷ್ಟಗಳನ್ನು ಅರ್ಥ ಮಾಡಿಸಿ ಬೃಹತ್ ನೀರಾವರಿ ಇಲಾಖೆಯಿಂದ 174 ಕೋಟಿ ಮೊತ್ತದ ವೆಂಕಟೇಶ್ವರ ಏತ ನೀರಾವರಿ ಯೋಜನೆಯನ್ನು 2014 – 15 ನೇ ಬಜೆಟ್ ನಲ್ಲಿ ಮಂಜೂರು ಮಾಡಿಸಿಯೇ ಬಿಟ್ಟರು.
ಪ್ರಯತ್ನವಾದಿ ಉಮಾಶ್ರೀ ಅವರು ಶ್ರಮ ಫಲಿಸಿ ಈಗ ಟೆಂಡರ್ ಆಗಿ ಕೆಲಸ ಕ್ರಿಯೆಗೊಳ್ಳಬೇಕಷ್ಟೇ. ಕರ್ನಾಟಕದಲ್ಲೇ ಮಹತ್ವದ ಏತ ನೀರಾವರಿ ಯೋಜನೆ ಇದಾಗಿದ್ದು ಸುಮಾರು ನಲವತ್ತು ವರ್ಷಗಳು ಮತ್ತು ಅದಕ್ಕೂ ಹಿಂದಿನ ಪ್ರಯತ್ನಕ್ಕೆ ಮಹಿಳೆಯೊಬ್ಬಳ ದಿಟ್ಟ ಹೆಜ್ಜೆ ಬಲವಾಯಿತು. ಬೆಳಗಿನ ಜಾವ ಐದು ಗಂಟೆಗೆ ಎದ್ದು ರೊಟ್ಟಿ ಕಟ್ಟಿಕೊಂಡು ಕೂಲಿಗೆ ಹೋಗಿವ ಮಂದಿ ತಮ್ಮ ತಮ್ಮ ಊರುಗಳಲ್ಲೇ ಉಳಿದು ತಮ್ಮದೇ ಭೂಮಿಯನ್ನು ಉಳುಮೆ ಮಾಡಲು ಕಾತುರಾಗಿದ್ದಾರೆ. ಎಲ್ಲಿಂದಲೋ ಹುಣಸೇ ಹಣ್ಣು ತಂದು ಬಡಿದು ಮತ್ತೆಲ್ಲೋ ಹೋಗಿ ಮಾರಾಟ ಮಾಡಿ ಬದುಕು ಸಾಗಿಸುವುದು ತಪ್ಪುತ್ತದೆ ಎಂದು ಹಳ್ಳಿಗರೆಲ್ಲಾ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲಸವಿಲ್ಲದ ಯುವ ಸಮುದಾಯ ನೀರು ಬಂದೊಂಡನೆ ಕಾಯಕ ಕೈಗೆತ್ತಿಕೊಳ್ಳಲು ಕಾತುರತೆಯಿಂದ ಕಾಯುತ್ತಿದೆ. ಪ್ರಾಣಿ ಪಕ್ಷಿ ದನ ಕರ ಸಕಲ ಜೀವ ಸಂಕುಲಗಳಿಗೂ ನೀರು ಬರುವ ದಾರಿ ಜೀವ ಉಳಿಯುವಂತೆ ಮಾಡಿದೆ. ರೈತರೆಲ್ಲಾ ಬದುಕಿದರೆ ಊರು ಬದುಕುತ್ತದೆ ಅನ್ನುವ ಸತ್ಯ ಹತ್ತಿರವಾಗುತ್ತದೆ. ಫಲವತ್ತಾದ ಮಣ್ಣಿದ್ದರೂ ಏನೂ ಬೆಳೆಯಲಾಗದ ಬಂಧನದಿಂದ ಜನ ಬಂಧ ಮುಕ್ತರಾಗುವ ಕನಸಿನಲ್ಲಿ ಇದ್ದಾರೆ. ಈ ಕನಸು ನನಸಾಗಲು ನೀರು ಬರಬೇಕಷ್ಟೇ. ಆ ದಿನವೂ ಕೂಡ ದೂರವಿಲ್ಲ.
ವ್ಯಕ್ತಿ ಯಾವತ್ತೂ ಮುಖ್ಯ ಅಲ್ಲ ಸಮಾಜ ಮುಖ್ಯ ಅನ್ನುವ ಉಮಾಶ್ರೀ ಅವರು ಇದೇ ಕಲಹಳ್ಳಿಗೆ ಸಾಕಷ್ಟು ಸೌಕರ್ಯಗಳನ್ನು ತಂದಿದ್ದಾರೆ. ಏತ ನೀರಾವರಿ ಯೋಜನೆಗೆ ಈ ಹಿಂದೆಲ್ಲಾ ಶ್ರಮಿಸಿದ ಎಲ್ಲ ನಾಯಕರುಗಳು ಬಾಗಶಃ ರೈತ ಮೂಲದವರೇ ಆಗಿದ್ದಾರೆ. ರೈತರ ಬದುಕಿನ ಪರಿಸರದಿಂದ ದೂರವಿದ್ದ ಉಮಾಶ್ರೀ ರಂಗ ನಟಿಯಾಗಿ ಮಣ್ಣಿನ ಮಕ್ಕಳಿಗಾಗಿ ದುಡಿದದ್ದು ಒಂದು ಮಹತ್ವದ ವಿಷಯವೇ ಸರಿ. ಕಲಹಳ್ಳಿಯಲ್ಲಿ ಜನರ ಪ್ರೀತಿಗೆ ಇಂದು ಉಮಾಶ್ರೀ ಅವರು ಪೂಜ್ಯನೀಯರಾಗಿದ್ದರೆ. ಎಷ್ಟೋ ಮಂದಿ ತಮ್ಮ ಮನೆಯ ದೇವರ ಗೂಡಿನ ಪಕ್ಕ ಉಮಾಶ್ರೀ ಅವರ ಫೋಟೋ ಇಟ್ಟುಕೊಂಡಿದ್ದಾರೆ. ನೀರು ಹರಿದ ಮೇಲೆ ಇದೇ ಗ್ರಾಮಸ್ಥರ ಆಸೆಯಂತೆ ಕಾಲುವೆಯೊಂದಕ್ಕೆ ಉಮಾಶ್ರೀ ನಾಲೆ ಎಂದು ಹೆಸರಿಡುತ್ತಾರಂತೆ. ಇದಾವ ನಿರೀಕ್ಷೆಗಳೂ ಇಲ್ಲದ ಉಮಾಶ್ರೀ ಅವರು ನೀರು ತರಲು ದುಡಿದಿದ್ದು ಕಾಯಕ ನಿಷ್ಠೆಗಾಗಿ, ದುಡಿವ ಕೈಗಳ ಬಲ ಮಾಡುವ ಕಾಯಕ್ಕಾಗಿ. ಸಂವೇದನೆ ಉಳ್ಳ ಸ್ತ್ರೀ ಅಧಿಕಾರದ ಅಸ್ತ್ರ ಹಿಡಿದರೆ ಸಮಾಜ ಕೊಂಚವಾದರೂ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತದೆ ಎಂಬುದು ಪಾರದರ್ಶಕವಾಗಿ ಖಂಡಿತವಾಗಿಯೂ ಕಾಣುತ್ತದೆ.

ಒಂದಷ್ಟು ಜನ ಊರಿನ ಮುಖ್ಯಸ್ಥರು ಪಕ್ಷಬೇಧ ಮರೆತು ಯೋಜನೆಯ ಮಂಜೂರಾತಿಗಾಗಿ ಓಡಾಡಿದ್ದಾರೆ ಕೂಡ. ಇದೇ ವಿಷಯವಾಗಿ ಅನೇಕ ವರ್ಷಗಳಿಂದ ಬೆಂಗಳೂರು , ಮುಖ್ಯಮಂತ್ರಿಗಳ ಭೇಟಿ, ನೀರಾವರಿ ಸಚಿವರುಗಳ ಭೇಟಿ, ಹೀಗೆಲ್ಲಾ ಸುಮಾರು ನಲವತ್ತು ವರ್ಷಗಳಿಂದ ಬೇಸತ್ತಿದ್ದ ಕಲ್ಹಳ್ಳಿಯ ಜನತೆಗೆ ಈಗ ಸಂಭ್ರಮದ ಸಮಯ. ಇದಕ್ಕಾಗಿ ಸದಾ ಮಂಚೂಣಿಯಲ್ಲಿದ್ದ ನಾಯಕರುಗಳ ತಪಸ್ಸಿಗೆ ಫಲಕೊಡುವ ಸಮಯ ಎನ್ನಬಹುದು.
****
ಪ್ರತೀ ವರ್ಷ ಬೇಸಿಗೆಯಲ್ಲಿ ತೇರದಾಳ ಮತ್ತು ರಬಕವಿ ವ್ಯಾಪ್ತಿಯಲ್ಲಿ ಸಾವಿರಾರು ಜನ ಅನೇಕ ಸಾಂಕ್ರಾಮಿಕ ರೋಗಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಬೇಸಿಗೆ ಆದರೆ ಸಾಕು ಎಲ್ಲಾ ಆಸ್ಪತ್ರೆಗಳು ಕಿಕ್ಕಿರಿದು ತುಂಬಿರುತ್ತಿದ್ದವು. ಎಷ್ಟೇ ಜಾಗರೂಕತೆ ವಹಿಸಿದರೂ ನೀರಿನಿಂದ ಬರುವ ಅನಾರೋಗ್ಯದ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗುತ್ತಿರಲಿಲ್ಲ. ಬೇಸಿಗೆಯಲ್ಲಿ ಮಾತ್ರವಲ್ಲ ಹೊಸ ಮಳೆ ಬಂದಾಗಲೂ ಕೂಡ ಅನೇಕ ಆರೋಗ್ಯದ ಸಮಸ್ಯೆಗಳು ಇಲ್ಲಿನ ಜನಕ್ಕೆ ಇದ್ದೇ ಇತ್ತು. ಕಾರಣ ಬೇಸಿಗೆಯಲ್ಲಿ ನದೀ ಪಾತ್ರಗಳು ಒಣಗಿ ಅಲ್ಲೆಲ್ಲಾ ಅನೇಕ ಕಷ್ಮಲಗಳು ಸಂಗ್ರಹವಾಗಿರುತಿತ್ತು. ಮಳೆ ಬಂದು ಮಹಾರಾಷ್ಟ್ರದ ಕೊಯ್ನಾ ಜಲಾಶಯದದಿಂದ ನೀರುಬಿಟ್ಟಾಗ ಹರಿದು ಬರುವಾಗ ಅನೇಕ ರಾಸಾಯನಿಕಗಳನ್ನು ಬ್ಯಾಕ್ಟೀರಿಯಗಳನ್ನು ಹೊತ್ತು ತರುತ್ತಿತ್ತು. ಹೀಗೆ ಬಂದ ನೀರು ಹಿಪ್ಪರಗಿ ಬ್ಯಾರೇಜ್ ನಲ್ಲಿ ತಿಂಗಳುಗಟ್ಟಲೆ ಸಂಗ್ರಹವಾಗುತ್ತಿದ್ದ ಕಾರಣ ಮತ್ತೆ ರೋಗಾಣುಗಳು ಅಲ್ಲಿ ಶೇಖರವಗುತ್ತಿತ್ತು. ಹೀಗಿದ್ದಾಗ ನಗರಸಭೆ ಮತ್ತು ಪುರಸಭೆಯ ನೀರಿನ ಶುದ್ಧೀಕರಣ ಸಫಲವಾಗುತ್ತಿರಲಿಲ್ಲ.
ಸದಾ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದ ಜನತೆಯ ಸಮಸ್ಯೆಯನ್ನು ತಿಳಿದ ಉಮಾಶ್ರೀ ಅವರು ಸುಮಾರು ಎಂಟು ಕುಡಿಯವ ನೀರಿನ ಘಟಕಗಳನ್ನು ಶಾಸಕರ ನಿಧಿಯಿಂದ ಸ್ಥಾಪಿಸಿದ್ದಾರೆ. ಈಗ ಜನರು ಇಪ್ಪತ್ತು ಪೈಸಕ್ಕೆ ಕೊಟ್ಟು ಒಂದು ಲೀಟರ್ ಶುದ್ಧ ನೀರನ್ನು ಬಳಸುತ್ತಿದ್ದಾರೆ. ರಬಕವಿ, ಬನಹಟ್ಟಿ, ಮಹಾಲಿಂಗಪುರ ಮತ್ತು ತೇರದಾಳ ನಗರ ವ್ಯಾಪ್ತಿಯಲ್ಲಿ ಶೇಕಡಾ ಎಂಭತ್ತರಷ್ಟು ನೀರಿನಿಂದ ಬರುತ್ತಿದ್ದ ಆರೋಗ್ಯದ ಸಮಸ್ಯೆಗಳು ನಿವಾರಣೆ ಆಗಿವೆ. ಈ ಹಿಂದಿನ ವರ್ಷದ ಅಂಕಿ ಅಂಶದ ಪ್ರಕಾರ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ವಾಂತಿ ಭೇದಿಗೆ ತುತ್ತಾಗಿದ್ದರು. ಈ ವರ್ಷ ಬೇಸಿಗೆಯಲ್ಲಿ ಆ ತರಹದ ಸಾಮೂಹಿಕ ಆರೋಗ್ಯದ ಸಮಸ್ಯೆಗಳು ಕಂಡು ಬರಲಿಲ್ಲ ಎಂದು ರಬಕವಿ ಮತ್ತು ತೇರದಾಳದ ವೈದ್ಯರುಗಳು ಮತ್ತು ಮೆಡಿಕಲ್ ಶಾಪ್ ಮಾಲೀಕರುಗಳು ಹೇಳುತ್ತಾರೆ. ಜನಸಾಮಾನ್ಯರೂ ಕೂಡ ಹಿಂದಿನ ವರ್ಷದ ಬವಣೆಯನ್ನು ನೆನೆದು ಈ ಹೊತ್ತಿನ ಸ್ಥಿತಿಯನ್ನು ಸ್ಮರಿಸಿ ನಿರಾಳರಾಗುತ್ತಾರೆ. ಮೊದ ಮೊದಲು ಸರತಿ ಸಾಲಲ್ಲಿ ನಿಂತು ನೀರು ತೆಗೆದುಕೊಂಡು ಹೋಗಲು ಹಿಂಜರಿಯುತ್ತಿದ್ದ ಜನರಲ್ಲಿ ಇಂದು ಜಾಗೃತಿ ಮೂಡಿದೆ. ಸಾಮಾನ್ಯ ಜನರಿಗೆ ಕುಡಿವ ನೀರು ಲಭ್ಯವಾಗಿ ಆರೋಗ್ಯ ಉತ್ತಮವಾಗಿದೆ. ಇಲ್ಲಿನ ಜನರೇ ಹೇಳುವಂತೆ ನೀರು ನಮ್ಮ ಮೂಲಭೂತ ಅಗತ್ಯ. ಅದನ್ನು ಅರಿತ ಉಮಾಶ್ರೀ ಅವರು ಇಂದು ಕುಡಿಯುವ ನೀರಿನ ಘಟಕಗಳನ್ನು ಅಲ್ಲಲ್ಲಿ ಸ್ಥಾಪಿಸಿರುವುದರಿಂದ ಉತ್ತಮ ಆರೋಗ್ಯ ಜನತೆಯದ್ದಾಗಿದೆ. ಬಡ ಮಕ್ಕಳು ಮರಿ ಮತ್ತೆ ಮತ್ತೆ ಖಾಯಿಲೆ ಬೀಳುವುದು ತಪ್ಪಿದೆ ಎನ್ನುತ್ತಾರೆ.
****
ಕೆರೆಯನ್ನು ಕಟ್ಟಿಸು, ಅರವಟ್ಟಿಗೆಗಳನ್ನು ನಿರ್ಮಿಸು ಅಂತೆಲ್ಲಾ ನಮ್ಮ ಪರಂಪರೆ ನಮಗೆ ಹೇಳಿಕೊಟ್ಟಿದೆ. ನಾಯಕನನೆಂದರೆ ಜನರಿಗೆ ಪಶು ಪಕ್ಷಿಗೆ ನೀರಿನ ಮೂಲಗಳನ್ನು ಕಾಪಾಡುವಂತೆ ಕೆಲಸ ಮಾಡಬೇಕು ಅನ್ನುವ ಮಾತು ಎಂದಿಗೂ ಸತ್ಯ. ಇಡೀ ನಮ್ಮ ಚರಿತ್ರೆಯನ್ನು ತೆಗೆದು ನೋಡಿದಾಗ ಅನೇಕ ಜನಪರ ರಾಜ ಮಹಾರಾಜರು ಕೆರೆಗಳನ್ನು ಕಟ್ಟಿಸಿದ ಮತ್ತು ಅರವಟ್ಟಿಗೆಗಳನ್ನು ನಿರ್ಮಿಸಿದ ಉದಾಹರಣೆಗಳು ಸಾಕಷ್ಟು ನಮ್ಮ ದೇಶದಲ್ಲಿದೆ. ಮನೆಗೆ ಬಂದವನಿಗೆ ಮೊದಲು ನೀರು ಕೊಟ್ಟು ಯೋಗಕ್ಷೇಮ ವಿಚಾರಿಸು ಎಂದು ಹೇಳುವುದು ನಮ್ಮ ಸಂಸ್ಕೃತಿ. ಆದರೆ ಇಂದು ನೀರಿನ ಮೂಲಗಳು ಮಾಯವಾಗುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಸಾಮಾನ್ಯ ಮನುಷ್ಯನ ಆಸೆಬುರುಕುತನ, ಅಧಿಕಾರ, ಮಾರುಕಟ್ಟೆ, ಹಣ ಹೀಗೆ ಇನ್ನೂ ಸಾಕಷ್ಟು ಜಾಗತಿಕ ಕಾರಣಗಳನ್ನು ಕೊಡಬಹುದು. ಹೀಗಿದ್ದಾಗ ಒಣಗಿದ ಕೆರೆಗಳನ್ನು, ಹೂಳು ತುಂಬಿದ ಕೆರೆ ಕಟ್ಟೆಗಳನ್ನು ಜೀರ್ನೋದ್ಧಾರ ಮಾಡಿ ಅವುಗಳನ್ನು ಸಂರಕ್ಷಿಸುವ ಕೆಲಸ ಕೂಡ ಮುಖ್ಯವೇ. ಇನ್ನು ಕೆಲ ಕೆರೆಗಳಂತೂ ಐತಿಹಾಸಿಕ ಮಹತ್ವನ್ನು ಪಡೆದ ಸ್ಮಾರಕಗಳಾಗಿರುತ್ತವೆ. ಅದೆಷ್ಟೂ ಶತಮಾನಗಳು ಸಕಲ ಜೀವ ಸಂಕುಲಕ್ಕೆ ನೀರು ಕೊಟ್ಟ ಮತ್ತೆ ಮತ್ತೆ ಉಕ್ಕುವ ನಿಧಿಯಾಗಿರುತ್ತವೆ. ಇಂತಹ ಕೆರೆಗಳನ್ನು ಸಂರಕ್ಷಿಸುವುದು ಸರ್ಕಾರದ ಮತ್ತು ಜನಪ್ರತಿನಿಧಿಗಳ ಕೆಲಸ. ಹಾಗೂ ಜನ ಸಾಮಾನ್ಯನ ಜವಾಬ್ದಾರಿ ಕೂಡ. ಕೆರೆಗಳ ಮೌಲ್ಯವನ್ನು ಅರಿತು ಉಮಾಶ್ರೀ ಅವರು ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಕೆರೆಗಳಿಗೆ ಪುನಶ್ಚೇತನದ ಯೋಗಕ್ಕೆ ದಾರಿ ಮಾಡಿದ್ದಾರೆ. ಸರಿ ಸುಮಾರು ಹತ್ತಾರು ಕೆರೆಗಳು ಹೂಳಿನಿಂದ ಮುಕ್ತವಾಗುವ ಮತ್ತು ನೀರಿನ ಮೂಲಗಳು ಕೆರೆಯಲ್ಲಿ ಹೆಚ್ಚಾಗುವ ಜೊತೆಗೆ ಕೆರೆ ನೀರು ಸಂಗ್ರಹಣೆಗೆ ವೈಜ್ಞಾನಿಕವಾಗಿ ಜರುಗಿಸಬೇಕಾದ ಕ್ರಮಗಳ ಬಗ್ಗೆ ಉಮಾಶ್ರೀ ಅವರು ಹೆಚ್ಚು ಗಮನಕೊಡುತ್ತಿದ್ದಾರೆ.
ಮಹಾಲಿಂಗಪುರದ ಇಂಗು ಕೆರೆ, ತೇರದಾಳದ ಹತ್ತಿರ ಜೀರಗೆರಿ ಇಂಗು ಕೆರೆ, ಗೋಲಭಾವಿ ಹತ್ತಿರದ ಸಣ್ಣ ಇಂಗು ಕೆರೆ, ಶಿರೋಳ ರಸ್ತೆಯಲ್ಲಿರುವ ಕಲಹಳ್ಳಿ ಇಂಗು ಕೆರೆ, ಬಂಡಿಗಣಿ ಗ್ರಾಮದ ಕೆರೆ, ಮದನ ಮಟ್ಟಿ ರಸ್ತೆಯಲ್ಲಿರುವ ಹಳಿಂಗಳಿ ಇಂಗು ಕೆರೆಗಳಿಗೆಲ್ಲಾ ಸಣ್ಣ ನೀರಾವರಿ ಇಲಾಖೆಯಿಂದ ಮೂರು ಕೋಟಿ ಇಪ್ಪತ್ತು ಲಕ್ಷ ಅನುದಾನ ತಂದು ಟೆಂಡರ್ ಕರೆದು ಇಗಾಗಲೇ ಕೆರೆಯ ಸುಧಾರಣ ಕಾರ್ಯ ಶುರುವಾಗಿದೆ. ಇಷ್ಟೇ ಅಲ್ಲದೇ ಇನ್ನುಳಿದ ಕೆಲ ಕೆರೆಗಳಿಗೆ ನಬಾರ್ಡ್ ವತಿಯಿಂದ ಅನುದಾನ ತಂದು ಆ ಎಲ್ಲಾ ಕೆರೆಗಳ ಸುಧಾರಣೆ ಮಾಡುವ ಕಡೆಗೂ ಉಮಾಶ್ರೀ ಅವರು ತೀವ್ರ ತರವಾಗಿ ಕೆಲಸ ಮಾಡುತ್ತಿದ್ದಾರೆ.
ಕಷ್ಟ ಸುಖ ಉಂಡ ಉಮಾಶ್ರೀಯಂಥಹ ಹೆಣ್ಣು ಮಗಳೊಬ್ಬಳು ಸಮಾಜ ಸುಭೀಕ್ಷವಾಗಿ ಇರಬೇಕು ಅಂತಲೇ ಸದಾ ಮಿಡಿಯುತ್ತಾರೆ ಅದಕ್ಕಾಗಿ ದುಡಿಯುತ್ತಾರೆ ಕೂಡ. ಅದಕ್ಕಾಗಿ ಕೈ ಮೀರಿ ದುಡಿದು ನೀರಿನ ಮೂಲಗಳನ್ನು ಗಟ್ಟಿ ಮಾಡುತ್ತಿದ್ದಾರೆ ನಮ್ಮ ಗಟ್ಟಿಗಿತ್ತಿ ಉಮಾಶ್ರೀಯವರು. ತಮ್ಮ ಅಧಿಕಾರವನ್ನು ಸಮರ್ಥವಾಗಿ ಬಳಸಿ ಈಗ ತಮ್ಮದೇ ಊರು ಮನೆ ಆಗಿರುವ ತೇರದಾಳ ಮತಕ್ಷೇತ್ರಕ್ಕೆ ಯಾವ ಯಾವ ಮೂಲಗಳಿಂದ ನೀರಿನ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವೋ ಹಾಗೆಲ್ಲಾ ಶ್ರಮಿಸಿದ ನಿಷ್ಠಾವಂತ ರಾಜಕಾರಣಿಯಾಗಿದ್ದಾರೆ.” ಎಂದು ತೇರದಾಳದ ಮತಕ್ಷೇತ್ರದ ಜನರು ಅಭಿಪ್ರಾಯವನ್ನು ಕ್ಷೇತ್ರಕಾರ್ಯದ ಸಮಯದಲ್ಲಿ ಹಂಚಿಕೊಂಡರು. ಇದನ್ನೆಲ್ಲಾ ಗಮನಿಸಿದ ನನಗೆ ಕಾಡಿದ ರೂಪಕವೆಂದರೆ ಸಾಕವ್ವ “ನೀರು ತಂದವಳು”
 

‍ಲೇಖಕರು G

5 July, 2015

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. ಅಕ್ಕಿಮಂಗಲ ಮಂಜುನಾಥ

    ಆರಿಸಿ ಬಂದವರೆಲ್ಲಾ ಇಂಥದೇ ಮನಸ್ಸುಳ್ಳವರಾದರೆ ಮನುಷ್ಯನಿಗೆ ಸಮಸ್ಯೆಗಳಾದರೂ ಎಲ್ಲಿರುತ್ತವೆ ?
    ಉಮಾಶ್ರೀಗೆ, ಅವರ ಕ್ರಿಯಾಶೀಲತೆಯನ್ನು ನಮಗೆ ತಿಳಿಸಿದ ರಘುನಂಧನ್ ರವರಿಗೆ ಅಭಿನಂದನೆಗಳು.

  2. Chandrakala M Chandrakala M

    Umashree avara kriyasheelathege abhinandanegalu.avara kaaryasaadhaneyannu thumba acchukattagi prathinidhisuva ragunandansir avarigu abhinandanegalu..

  3. Harishbabu Tanegar

    ಜೀವಜಲದ ಪ್ರಾಮುಖ್ಯತೆ ಬಗ್ಗೆ ಉಮಾಶ್ರೀಯವರು ವಹಿಸಿದ ಕಾಳಜಿ,ಕಾರ್ಯರೂಪಕ್ಕೆ ತಂದ ಯೋಜನೆಗಳು
    ಬರ,ರೋಗರುಜಿನಗಳನ್ನು ದೂರವಿರಿಸಿವೆ ಹಾಗೂ ಸಾಮಾಜಿಕವಾಗಿ ಭದ್ರತೆಯೇ ಕಳೆದುಕೊಂಡ ಜನರ ಪಾಲಿನ ಗಂಗೆ ಎಂದು ಇವರನ್ನು ಕರೆಯಲಡ್ಡಿಯಿಲ್ಲ.ಇದು ಇತರ ಪ್ರಜಾನಾಯಕರಿಗೆ ಮಾದರಿಯಾಗಿ ಸಮೃದ್ಧ ರಾಜ್ಯದ ಕನಸು ನನಸಾಗಬೇಕಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading