ಬೇಲೂರು ರಘುನಂದನ್ ಕಾಲಂ : ಕವಿತೆ ಬರೆದ ಉಮಾಸಿರಿ


ಕವನ ಸಂಕಲನಕ್ಕೆ ಬೆನ್ನುಡಿ ಬರೆದ ಉಮಾಶ್ರೀ ಕವಿತೆಯನ್ನೂ ಬರೆದಿದ್ದಾರೆ

ಅಮ್ಮ ಕವಿತೆ ಬರೆದರು

ಅಲ್ಲಿ ಹಾಗೆ ಇಲ್ಲಿ ಹೀಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಮಾತನಾಡಿ, ಇದೇ ಭಾಷಣ ಎಂದು ಭಾವಿಸುತ್ತಾ ಬೇರೆಯವರ ಬರಹವನ್ನು, ಬದುಕನ್ನು ಬಾಳಲ್ಲಿ ತುಂಬಿಕೊಳ್ಳುತ್ತಾ ಪ್ರೇಕ್ಷಕರನ್ನು ಅಳಿಸುತ್ತಾ, ನಗಿಸುತ್ತಾ ಬದುಕುವ ನನಗೆ ಶ್ವೇತಪ್ರಿಯನ ಕವನ ಸಂಕಲನಕ್ಕೆ ಬೆನ್ನುಡಿ ಬರೆದುಕೊಡಿ ಎಂಬ ಬೇಡಿಕೆ ನಿಜಕ್ಕೂ ಭಾರವೆನಿಸಿತ್ತು. ಬೇರೆಯವರ ಬರಹದ ಜೊತೆ ಸರಾಗವಾಗಿ ಸರಸವಾಡಬಲ್ಲೆನೇ ಹೊರತು, ಕಲಾವಿದೆಯಾಗಿ ಕವನ, ಕಥೆ, ಕಾದಂಬರಿ ಓದಿ ಅನುಭವಿಸಬಲ್ಲೆನೆ ಹೊರತು ಬಾರದ ಬರಹ ನನಗೆ ಭಾರವೆನಿಸುವುದಿಲ್ಲವೇ? ಎಂದೂ ಯಾರಿಗೂ ಯಾರಿಗಾಗಿಯೂ ಎರಡಕ್ಷರ ಗೀಚುವ ಸಾಹಸ ಮಾಡದ ನಾನು ಇಂದು ಬರೆಯಲೇಬೇಕಾಗಿದೆ. ಕಾರಣ ಬೇಡಿಕೆಯ ಹಿಂದಿರುವ ಅಗಾಧವಾದ, ನಿಷ್ಕಲ್ಮಶವಾದ ಪ್ರೀತಿ, ಅಭಿಮಾನಕ್ಕಾಗಿ.
ಈತ ಹೀಗೆಯೇ ಪ್ರೀತಿ, ಮಮತೆ, ಮಮಕಾರ, ಕಾಳಜಿ, ಅನುಕಂಪ, ಗೌರವ, ಬದ್ಧತೆ ಹೀಗೆ ಅನೇಕ ಗುಣಗಳು, ವಿಶೇಷತೆಗಳು ನನ್ನನ್ನು ಸೆಳೆದಿರುವುದು. ರಘುನಂದನ ಬಡತನವನ್ನೇ ಹಾಸು ಹೊದ್ದು ಬೆಳೆದಿರುವವನು. ಶ್ವೇತಪ್ರಿಯನಾಗಿ ಜಗತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾನೆ. ಇದಲ್ಲವೇ ಸಂತೋಷ!! ಇರುವ ಮೆಟ್ಟಿಲುಗಳನ್ನು ಏರಲಾಗದೆ ತಿಣುಕುವ ಸೋಮಾರಿಗಳಿಗೆ ಬಡತನದ ನೆಪ ಹೇಳಿ ಕನಸುಗಳನ್ನೂ ಕಾಣದೇ ಬದುಕು ಮುಗಿಸುತ್ತಾರೆ. ರಘು ಬದುಕ ಸಾಗರವನ್ನು ಈಜಲು, ನೋವನ್ನು ಮರೆತು ಮುನ್ನುಗ್ಗಲು ತನ್ನೊಳಗಿನ ಉತ್ಸಾಹ ಕುಗ್ಗಿಸದೇ ಕನಸುಗಳನ್ನು ಸಾಕಾರಗೊಳಿಸಲು ಮೊರೆ ಹೋದದ್ದು ಸಾಹಿತ್ಯದ ಕಡೆಗೆ. ತನ್ನ ಬದುಕಿಗಾಗಿ ಮತ್ತು ತನ್ನನ್ನೇ ನಂಬಿ ಬದುಕಿರುವ ಜೀವಗಳಿಗಾಗಿ ತನ್ನನ್ನು ತಾನು ದುಡಿಸಿಕೊಂಡ ಪರಿ ಮಿಕ್ಕವರಿಗೆ ಮಾದರಿ. ಉಣ್ಣಲು ಉಡಲು ಇರದೇ ಇದ್ದ ಬಾಲ್ಯದ ಬೇರಿಗೆ ನೀರು ಚಿಮುಕಿಸಿ ಚಿಗುರು ಮಾಸಿ ಹೋಗದಂತೆ ಕಾಯ್ದ ಅಜ್ಜ ಅಜ್ಜಿ ಧನ್ಯರು.
ಶ್ವೇತಪ್ರಿಯನ ಮನಸ್ಸು ಶ್ವೇತದಂತೆಯೇ ಸ್ವಚ್ಛ ಸಂಸ್ಕಾರಯುಕ್ತವಾದದ್ದು. ನಾನು ಕಂಡಂತೆ ಎಲ್ಲದರ ಬಗ್ಗೆಯೂ ಸಂತೋಷಿಸುತ್ತದೆ, ಮರುಗುತ್ತದೆ. ಅದಕ್ಕೆ ಈ ಸಂಕಲನದ ಕವಿತೆಗಳು ಸುಂದರವಾಗಿ ಮೂಡಿ ಬಂದಿರುವುದೇ ಸಾಕ್ಷಿ. ಕಳೆದು ಹೋಗುತ್ತಿರುವ ಸಕಾರಾತ್ಮಕ ಸಂಪ್ರದಾಯಗಳು ನಮ್ಮದೆನ್ನುವ ಹಿರಿಮೆ ಗರಿಮೆಗಳು ಕಮರಿ ಹೋಗಬಾರದು, ಪರಂಪರೆಗಳು ಗತವಾಗಬಾರದೆಂಬ ಕಾಳಜಿ ತೋರುತ್ತಾ ಆಧುನಿಕತೆಯ ಪೆಡಂಭೂತದ ಕೈಗೆ ಸಿಕ್ಕಿ ನಮ್ಮವರು ಎಲ್ಲದರಲ್ಲೂ ಮಾಸಿದ ಸೌಂದರ್ಯ ಹುಡುಕುತ್ತಾ ತುಕ್ಕು ಹಿಡಿದ ನಗೆ ಬೀರುವ ನಾಗರೀಕ ಬದುಕಿನ ಬಗ್ಗೆ ಕವಿ ವಿಷಾದ ವ್ಯಕ್ತಡಿಸುತ್ತಾರೆ.
ತಾಯಿಯ ಮಮತೆ ಎಂಬುದು ಯಾವುದಕ್ಕೂ ಸಮ ಅಲ್ಲ ಎಂಬ ಮೌಲ್ಯಯುತ ಮಾತುಗಳು ಸಾರ್ವಕಾಲಿಕ. ಮಕ್ಕಳ ಬಗ್ಗೆ ತಾಯಿಯ ಅಧ್ಬುತವಾದ ಆಧಮ್ಯವಾದ ರಕ್ಷಣಾತ್ಮಕ ಭಾವನೆಗಳು ಎಂದಿಗೂ ಚಿರ. ಈ ಕವಿಯಂತೆ ಎಲ್ಲ ಮಕ್ಕಳೂ ಸಹ ನೆನೆದರೆ ತಾಯಂದಿರ ಬಾಳು ಬಂಗಾರ. ತಾಯಿಯ ನಿಷ್ಠೆ ಸಾರ್ಥಕ.
ಯಾರು ಏನು ಇಟ್ಟರೇನು?
ಯಾರು ಏನು ಕೊಟ್ಟರೇನು?
ಎಂಬಂತೆ ತಾಯಿ ಹಣ್ಣಾದಾಗ ಮಕ್ಕಳು ನೀಡುವ ಮಮತೆ ಮಮಕಾರದ ಅಗತ್ಯತೆ ಇಂದಿನ ಕಾಲಕ್ಕೆ ಅವಶ್ಯ.
ನಾನಿನಲ್ಲವೇ
ಬದುಕು ತುಂಬಾ ನಡೆದು ಬರುವೆ
ಬೇವು ಬೆಲ್ಲದಲ್ಲಿ ಇರುವೆ
ಅಂದರೆ ಜೊತೆಯಾಗಿರುವೆ ಎಂಬ ಸಾಂತ್ವನದ ಸಾಲು. ಬೆಲ್ಲವಿದ್ದಲ್ಲಿ ಇರುವೆ ಜೊತೆಯಾಗಲೇ ಬೇಕಲ್ಲವೇ? ಈ ಇರುವಿಕೆಗೂ ಸಾಮ್ಯವಿದೆ. ಕಾರಣ ಬೇವು ಬೆಲ್ಲ ಎರಡೂ ಜೊತೆಯಾಗೇ ಇರುತ್ತದೆ. ಆಗದ್ದನ್ನು ಆಗಿಸಬಹುದಾದ ಮಾತುಗಳಾದರೂ ಬಿರುಗಾಳಿಯಲ್ಲಿ ತಂಪಸೂಸಿ ಸುಡುವ ಬಿಸಿಲ ದಾರಿಯಲ್ಲಿ ಜೀವ ಮಳೆಯ ತರುವ ಕವಿಯ ಪ್ರಯತ್ನ, ಆಗದೆಂದು ಕುಸಿವ ಜೀವಕ್ಕೆ ಜೀವ ತುಂಬುವ ಪ್ರಯತ್ನ, ಅಸಹಾಯಕ ಸ್ಥಿತಿಯ ಮನಸ್ಸಿಗೆ ಸ್ಪೂರ್ತಿದಾಯಕ ಸಾಲುಗಳು, ನಂಬಿಕೆಯನ್ನು ತುಂಬುತ್ತದೆ ಇವು.
ಗೆಜ್ಜೆರೊಟ್ಟಿ ಮಲೆನಾಡ ವಿಶೇಷ ರೊಟ್ಟಿ, ನಾಡಿಗೆ ಅಪರಿಚಿತ, ನೋಡಲು ತಿನ್ನಲು ಚೆಂದ. ಅದೂ ಮುಂದೊಂದು ದಿನ ಗತವಾಗುವ ಮೊದಲು ತಿನ್ನಬೇಕು. ಇಲ್ಲವೇ ತೀಡುವುದ ತಟ್ಟುವುದ ಕಲಿಯಬೇಕು. ಅದರಲ್ಲೂ ಹಣ್ಣಾದ ಜೀವಗಳ ತಟ್ಟಿದ ರೊಟ್ಟಿ ಆಹಾ! ಕವಿಯು ನಾಡಿನ ವಿಶೇಷ ಖಾದ್ಯದ ಬಗ್ಗೆ ಹೇಳುವ ಮತ್ತು ಪರಿಚಯಿಸುವ ರೀತಿ ಚೆಂದ. ಎಳೆಯ ಜೀವದ ಪ್ರೀತಿ ಮಾಯೆಯ ಸೆಳವಿಗೆ ಸಾದಾ ರೊಟ್ಟಿಯ ಬದಲು ಗೆಜ್ಜೆರೊಟ್ಟಿ ಮಾಡುವ ಅಜ್ಜಿ, ಅವಳ ಸುಕ್ಕುಗಟ್ಟಿದ ಕೈಯ ಸುಕ್ಕು ರೊಟ್ಟಿಯಲ್ಲಿಲ್ಲ. ಹಣ್ಣು ಜೀವದ ಕೈಯೊಳಗಿನ ರೊಟ್ಟಿ ಹೊಸ ಹೆಣ್ಣಿನಂತಿದೆ ಎಂಬ ಹೋಲಿಕೆ ಓದುಗರ ಮನಸ್ಸಿಗೆ ಹಿತವೆನಿಸುತ್ತದೆ. ಈಗಿನ ಲೋಕದಲ್ಲಿ ಗೆಜ್ಜೆ ಸಿಗಬಹುದೆ ಹೊರತು ಮಮತೆ ತುಂಬಿದ ಮಮಕಾರದ ಗೆಜ್ಜೆರೊಟ್ಟಿ ಸಿಗುವುದೇ? ಪಿಜ್ಜಾ, ಬರ್ಗರ್ಗಳು ನಡುವೆ ಗೆಜ್ಜೆರೊಟ್ಟಿ ಮಿಸ್ ಆಗುತ್ತಿದೆ ಎನಿಸುತ್ತೆದೆ ನನಗೆ. ಆದರೆ ಆ ಜಾಗಕ್ಕೆ?!!

ಮನವ ಮಿದ್ದಿ ತನುವ ತಿದ್ದಿ
ರೊಟ್ಟಿಯ ಬುತ್ತಿ ಕಟ್ಟಿಕೊಟ್ಟಿಹಳು
ಎಂಬ ಆಶಯದ ಸಾಲುಗಳು ಅನೇಕ ವರ್ಷಗಳು ಮಿದಿಯುವ ಪ್ರಕ್ರಿಯೆಯಲ್ಲಿ ತುಂಬು ಬದುಕು ಸವೆಸಿದ ಜೀವ ಮನವ ಮಿದ್ದಿ ತನುವ ತಿದ್ದುವುದು ಬಾಳ ದಾರಿಯ ಸಂಕೇತವೆಂದರೆ ತಪ್ಪಾಗಲಾರದು.
ಬೆಟ್ಟಗುಡ್ಡಗಳ ಏರಿ ತಪ್ಪಲಿನ ತೋಟ, ಗದ್ದೆ, ಮನೆಗಳು, ಕೆರೆ, ಕುಂಟೆ, ದೇವಸ್ಥಾನದ ದಾರಿಗಳು ನೋಡಲು ಚಂದ. ಅದರಂತೆ ಕವಿಯ ಭೂತಪ್ಪನ ಗುಡ್ಡವೂ ಕೂಡ. ಬಹುಷಃ ಹೊಯ್ಸಳ ಮಹಾರಾಜನ ಕಾಲದ್ದಿರಬಹುದು. ಹೊಯ್ಸಳನಂತೆ ಇತಿಹಾಸವಾಗಿರುವ ಭೂತಪ್ಪ. ಇಂದು ಹೊಯ್ಸಳನೂ ಇಲ್ಲ. ಭೂತಪ್ಪನೂ ಇಲ್ಲ. ಈಗ ಇರುವವರೆಲ್ಲಾ ಬರೀ ನುಂಗಪ್ಪಗಳೇ. ನುಂಗಪ್ಪಗಳು ನುಂಗಿದ ಭೂತಪ್ಪನ ಗುಡ್ಡ ಬೋಳಾಗಿ ದೊಡ್ಡ ಹೊಟ್ಟೆಯ ಪೆಡಂಭೂತಗಳಿಗೆ ತಳಿಗೆಯಾಗಿರುವುದು ನಾಡಿನ ದುರಂತ. ಪ್ರಜಾಪ್ರಭುತ್ವದ ಅಣಕ. ಅಸಹಾಯಕ ಪ್ರಜೆಯ ಬಿಸಿಯ ನಿಟ್ಟುಸಿರು ಖೇದವೆನಿಸುತ್ತದೆ. ನಾಡ ಆಸ್ತಿ ಕಬಳಿಸುವ ಬಕರಿಗೆ ದಿಕ್ಕಾರ ಕೂಗಬೇಕೆನಿಸುತ್ತದೆ. ಅಜಾಗೃತ ಪ್ರಜೆಗಳ ಜಾಗೃತ ಬಕರು ನೀಡುತ್ತಿರುವ ಕೊಡಿಗೆ ಇದು. ಇದಕ್ಕೆಲ್ಲಾ ಉತ್ತರಿಸಬೇಕಾದ್ದು ಅರಿವು.
ಬಣ್ಣ ಹಚ್ಚಿ ಮೈಯ್ಯ ಬಿಚ್ಚುವ ಚಂದದ ಚೆಂಗುಲಾಬಿಗಳನ್ನು ಶಿಲಾಬಾಲಿಕೆ ಎಂದು ಕರೆದಿರುವುದು ವಿಶೇಷ ಹೋಲಿಕೆಯಾಗಿದೆ. ಕವಿಯ ಮನಸ್ಸು ಕಣ್ಣು ಮಿಟುಕಿಸುವ ರಸ್ತೆ ಬದಿಯ ಶಿಲಾಬಾಲಿಕೆಯರ ಬದುಕಿನ ಬಗ್ಗೆ ಯೋಚಿಸುತ್ತದೆ. ಯಂತ್ರವಾಗಿ, ಮಂತ್ರವಾಗಿಸುವ ಮಾಂತ್ರಿಕತೆಗೆ ಕವಿಯ ಮಂತ್ರ ಮುಗ್ಧ ಯೋಚನೆ. ಆಲಯವಿಲ್ಲದ ಬಯಲ ಬಾಲಿಕೆಯರು ಇತರರಿಗೆ ಜೀವಕಳೆ ತುಂಬಿ ಜೀವ ಕಳೆದುಕೊಳ್ಳುವರು. ಇವರನ್ನು ಸಮಾಜ ಒಪ್ಪದು, ಆದರೆ ಅಪ್ಪುವುದು. ಒಪ್ಪದ ಸಮಾಜ ಇವರನ್ನು ಅಪ್ಪುವುದು ನೋಡಿ ಕವಿಯ ಮನಸು ನಗುತ್ತದೆ, ನರಳುತ್ತದೆ. ಇದನ್ನು ಓದುವಾಗ ನನಗೆ ನೆನಪಾದದ್ದು ದಿವಂಗತ ಕೆ.ಹಿರಣ್ಣಯ್ಯನವರ ದೇವದಾಸಿ ನಾಟಕದ ಒಂದು ಸನ್ನಿವೇಶ. ಅಲ್ಲಿ ಮಣಿ ಮಂಜರಿಯ ಪಾತ್ರ ವಸಂತಶೇಖರನನ್ನು ಕುರಿತು ಹೀಗೆ ಹೇಳುತ್ತದೆ,
“ಮರೆಯಲ್ಲಿ ನಮ್ಮ ನೆರೆ ಬೇಡಿ, ಬಹಿರಂಗದಲ್ಲಿ ನಮ್ಮನ್ನು ವೇಶ್ಯೆಯರನ್ನಾಗಿಸಿದವರು ನೀವೇ ಅಲ್ಲವೇ ?
ಇದಕ್ಕಾಗಿ ನಮ್ಮನ್ನು ದೂಷಿಸುವುದೆಂದರೆ ಹಾಲಿಗೋಸ್ಕರ ಹಸುವಿನ ಕೆಚ್ಚಲನ್ನೇ ಕೊಯ್ದಂತಲ್ಲವೇ ?”
ಈ ಸಂಭಾಷಣೆ ರಸ್ತೆ ಬದಿಯ ಶಿಲಾಬಾಲಿಕೆಯರ ಅಂತರಾತ್ಮದ ಆರ್ತನಾದದ ಪ್ರತಿರೂಪ.
ಹಣ್ಣು ಜೀವಗಳು ಹುಣ್ಣು ಎಂದು ಭಾವಿಸುವ ವ್ಯವಸ್ಥೆಯ ಬಗ್ಗೆ ಕವಿ ಸಿಡುಕುತ್ತಾರೆ. ಹೀಗೆ ತಾಯಿ, ಮಮತೆ, ವಾತ್ಸಲ್ಯ, ಭಾಂದವ್ಯ, ಕರ್ತವ್ಯ, ಪ್ರೀತಿ, ಪ್ರೇಮ. ನಿರೀಕ್ಷೆ, ಬದ್ಧತೆ ಹೀಗೆ ಅನೇಕ ಕೊತುಮ್ಬಿಕ ಹಾಗೂ ಸಾಮಾಜಿಕ ಕಳಕಳಿಗಳು ಈ ಸಂಕಲನದಲ್ಲಿ ಕಾಣಸಿಗುತ್ತದೆ.
ಸತಿ ಸರಸ್ವತಿ, ಇನಿಯನ ಮುದ್ದು, ಹರಯ ಬಂದಾಗ, ಚುಕ್ಕಿ ಇಟ್ಟಳು ಲಕುಮಿ, ಹೀಗೆ ಅನೇಕ ಕವನಗಳಲ್ಲಿ ಪ್ರೀತಿ, ಪ್ರೇಮ, ಪ್ರಣಯ, ಸರಸ, ವಿರಸಗಳನ್ನು ನೋಡಬಹುದಾಗಿದೆ. ಮೌಲ್ಯಯುತ ವಸ್ತು ವಿಷಯವನ್ನು ಕವಿ ತಣ್ಣಗೆ ಹೇಳಿರುವುದನ್ನು ಕಾಣಬಹುದಾಗಿದೆ. ಕವಿಯ ವಯಸ್ಸಿಗೆ ತಕ್ಕ ಹಾಗೆ ಸಾಲುಗಳು ಪದ್ಯಗಳ ಸೌಂದರ್ಯವನ್ನು ಸಹಜವಾಗಿ ಹೆಚ್ಚಿಸಿವೆ.
ಭವಿತದ ಬದುಕು ಕವನದಲ್ಲಿ ಬದುಕಿನ ಸತ್ಯಗಳ ಅರಿವು ಗೋಚರಿಸುತ್ತದೆ. ಬಾಲ್ಯದಿಂದಲೇ ಹೋರಾಟ ಪ್ರಾರಂಭ. ಬದುಕಿನ ಹೋರಾಟ ಬಲಿಯುತ್ತಾ ಹೋದ ಹಾಗೆ ಬದುಕಿಗೆ ದಾರಿ ತೋರಿದ್ದು ಶಿಕ್ಷಣ. ಅಂದು ಯಾರೂ ಇರಲಿಲ್ಲ ಪುಸ್ತಕ ಪೆನ್ನು ನೀಡಲು ಅಂದಿನವರೆಲ್ಲಾ ಇಂದು ಇದ್ದಾರೆ ಸಾಧನೆಯ ನೋಡಿ ಸಂಭ್ರಮಿಸಲು. ಏನೇ ಆದರೂ ಗಟ್ಟಿಯಾದ ಕೈಗಳಿಗೆ ಕಾಣದ ಕೈಯೇ ಗುರು. ದೃಢನಂಬಿಕೆ ವಿಶ್ವಾಸಗಳೇ ಗುರು. ಇಂತಹ ಸತ್ಯಗಳು ಹೋರಾಟದ ಬದುಕುಗಳಿಗೆ ಮಾತ್ರ ಅರಿವಾಗುವುದು. ಅರ್ಥವಾಗುವುದು ಕೂಡಾ.
ಕಣ್ಣ ಬಿಡಿಸಬೇಕು
ಮೂಗ ತೀಡಬೇಕು
ಗಟ್ಟಿಯಾಗಿರುವ ಎದೆಯ ಬಂಡೆಯ
ಕುಟ್ಟಿ ತಟ್ಟಿ ಕರ್ಮವೆಸಗಬೇಕು
ಶಿಲೆಯ ಶಿಲ್ಪ ಮಾಡಬೇಕು
ಕಲ್ಪನೆಯ ಕೆತ್ತನೆ ಮಾಡಬೇಕು
ಬಂಡೆಯೂ ನಾನೇ
ಶಿಲ್ಪಿಯೂ ನಾನಾಗಬೇಕು
ಶಿಲ್ಪವ ಚಿತ್ರಿಸುವಾಗ
ಸಾವಿರ ಸಾವಿರ ಉಳಿಯಪೆಟ್ಟು
ನನ್ನ ಕೈಯಿಂದಲೇ ನಾನೇ ತಿನ್ನಬೇಕು
ಅನ್ಯ ಶಿಲ್ಪಿಯ ಶಿಲ್ಪ ಅವನೆದೆಯ ಅಂತರಂಗ
ನಾನೇ ಕೆತ್ತಿಕೊಂಡ ನನ್ನ ಶಿಲ್ಪ
ನನ್ನೆದೆಯ ಭಾವಾಂತರಂಗ
ಬದುಕ ಜೀವನ ತರಂಗ
ಶಿಲ್ಪ ಚಿತ್ರ ಕಾವ್ಯರಂಗ
ಶಿಲ್ಪಿ ಕವನದಲ್ಲಿ ಬದುಕು ರೂಪಿಸಿಕೊಳ್ಳುವ ಬಗ್ಗೆ ಕವಿಯ ಮನದಾಳದ ಮಾತುಗಳಿವು.
ಅನೇಕ ಸವಾಲುಗಳನ್ನು ಸ್ವೀಕರಿಸಿ ರೆಕ್ಕೆ ಗಟ್ಟಿಗೊಳಿಸಿಕೊಂಡು, ಕಾಲು ಬಲ ಪಡಿಸಿಕೊಂಡು, ಜಗದ ದಾರಿಯಲ್ಲಿ ನಡೆಯಳು ಕಲಿತು ಇಂದು ನಮ್ಮ ಮೆಚ್ಚುಗೆಗೆ ಶ್ವೇತಪ್ರಿಯರು ಪಾತ್ರರಾಗಿರುವುದು ಸಾಮಾನ್ಯವೇ ? ಇದಕ್ಕೆ ಹೇಳುವುದು ‘ಅನಾಥೋ ದೈವ ರಕ್ಷಕ’ ಎಂದು. ಈತನ ಕನಸುಗಳು ಸ್ವಪ್ರಯತ್ನದಿಂದ, ಸ್ವಶ್ರಮದಿಂದ ಮತ್ತು ಸಕರಾತ್ಮಕ ಧೋರಣೆಗಳಿಂದ ಈಡೇರಿದಂತಹುದು. ಶಿಲ್ಪಿ ಕಾವ್ಯದ ಸಾಲುಗಳಂತೆ. ಇಂಥ ಸ್ವನಿರ್ಮಾಣದ ಬದುಕನ್ನು ಕಂಡುಕೊಂಡು ಧೃತಿಗೆಡದೇ ಮನಸ್ಸುಗಳು ಗಟ್ಟಿಗೊಳ್ಳಲು ಮತ್ತೆ ಮತ್ತೆ ಅಡರುವ ದುಃಖ ನೋವು ಸಂಕಟಗಳು ಶಿಲ್ಪವನ್ನು ಕೆತ್ತುವ ಉಳಿಗಳಿದ್ದಂತೆ. ಅವು ನಮಗೆ ಪೆಟ್ಟುಕೊಟ್ಟು ಗಟ್ಟಿಯಾದ ಮೂರ್ತಿಯನ್ನಾಗಿ ಮಾಡುತ್ತದೆ. ಅಚಲವಾದ, ತನ್ನದೇ ಆಡ ತತ್ವ ಸಿದ್ಧಾಂತವನ್ನು ನಂಬಿ, ಬದುಕನ್ನು ರೂಪಿಸಿಕೊಂಡು ಕಾವ್ಯ ಲೋಕಕ್ಕೆ ಕಾಲಿರುಸುತ್ತಿದ್ದಾನೆ ಬೇಲೂರು ರಘುನಂದನ್. ಇವನಿಂದ ಅನೇಕ ಕವನ, ಕಥೆ, ಕಾದಂಬರಿ, ನಾಟಕ ಮೂಡಿ ಬರಲಿ. ಉದಯೋನ್ಮುಖ ಸಾಹಿತಿ ಮುಂದೊಂದು ದಿನ ಸಾಹಿತ್ಯ ಲೋಕದ ದಿಗ್ಗಜರ ಸಾಲುಗಳಲ್ಲಿ ನಿಲ್ಲಲಿ. ನಾಡ ನಕ್ಷತ್ರವಾಗಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ.
– ಉಮಾಶ್ರೀ
ಇದು ನನ್ನ ಮೊದಲನೇ ಕವಿತಾ ಸಂಕಲನ ಶ್ವೇತಪ್ರಿಯಕ್ಕೆ ಅಮ್ಮ ಬರೆದ ಮಾತುಗಳು. ನನ್ನ ಚೊಚ್ಚಲ ಕವಿತಾ ಸಂಕಲನ ತರಬೇಕೆಂದು ಯೋಜನೆ ಹಾಕಿಕೊಂಡಾಗ ಬೇಲೂರು ರಘುನಂದನ್ ಅಂತ ಹೆಸರಿಟ್ಟು ನನ್ನ ಒಳಗಿನ ಕವಿಯನ್ನು ಎಚ್ಚರಿಸಿ ನೀನು ಚೆನ್ನಾಗಿ ಕವಿತೆಗಳನ್ನು ಬರೆಯುತ್ತೀಯ ಅಂತ ಹುರಿದುಂಬಿಸಿ ಗುರುಗಳಾದ ಡಾ. ಮಳಲಿ ವಸಂತ್ ಕುಮಾರ್ ಬರೆಸಿದರು. ಮೇಷ್ಟ್ರು ಹೇಳಿದ್ದಕ್ಕೆ ಬರೆದ ಹಳೇ ಪಳೇ ಪದ್ಯಗಳನ್ನೆಲ್ಲಾ ಒಂದು ಕಡೆ ಸೇರಿಸಿ ಸಂಕಲನ ಮಾಡಿದೆ. ನನ್ನಂಥಹ ಅದೆಷ್ಟೋ ಹೊಸ ಕವಿಗಳನ್ನು ಕನ್ನಡಕ್ಕೆ ಪರಿಚಿಯಸಿದ್ದು ಮಳಲಿ ಸರ್ ಕಾಣ್ಕೆ. ಸರಿ ಮುನ್ನುಡಿ ನೀವೇ ಬರೆದು ಕೊಡಿ ಎಂದು ಗುರುಗಳನ್ನು ಕೇಳಿದೆ ಅದಕ್ಕವರು ಮೊದಲ ಕೃತಿಗೆ ತೋರಣ ನಾಂದಿಯ ರೂಪದಲ್ಲಿ ಮುನ್ನುಡಿ ಬರೆದು ಕೊಟ್ಟರು. ಇನ್ನೂ ನನ್ನ ಮೊದಲ ಕೃತಿ ಬರುವುದ್ದೇ ಆದ್ರೆ ಅಮ್ಮ ಖಂಡಿತ ಬರೆಯಬೇಕು ಅಂತ ತುಂಬಾ ಆಸೆ ಇಟ್ಟುಕೊಂಡಿದ್ದೆ. ಅದರಂತೆಯೇ ಅವರನ್ನು ಕೇಳಿದೆ. ಅದಕ್ಕವರು ‘ಹೋಗೋ ಮಗನೇ, ನಾನೇನು ಸಾಹಿತಿನಾ ? ಬರೆದ ಸಾಹಿತ್ಯಕ್ಕೆ ಬಣ್ಣಹಚ್ಚಿಕೊಂಡು ಜೀವ ತುಂಬಿ ಅಭಿನಯಿಸೋಳು ಕಣಪ್ಪ. ನಾ ಬೇಡ ಯಾರಾದ್ರು ಕವಿಗಳ ಹತ್ತಿರ ಬರೆಸು’ ಅಂತ ನಿರಾಕರಿಸಿದ್ದರು. ತುಂಬಾ ಬೇಸರ ಆಗಿತ್ತು ಇನ್ನೊಂದು ವಾರ ಬಿಟ್ಟು ಮತ್ತೆ ಕೇಳಿದೆ ಮತ್ತದೇ ಉತ್ತರ ಕೊಟ್ರು ಅವರು ಬರೆಯಲು ಒಪ್ಪಲಿಲ್ಲ. ಆದ್ರೆ ಅಮ್ಮ ಬರೆಯದೇ ಪುಸ್ತಕ ತರೋದೆ ಬೇಡ ಅಂತ ತೀರ್ಮಾನಿಸಿದ್ದೆ. ಕೊನೆಯ ಪ್ರಯತ್ನ ಎಂದು ಮತ್ತೊಮ್ಮೆ ಅಮ್ಮನ ಹತ್ತಿರ ಕೇಳಿದೆ ಆಗ ಮಗುವಿನ ರೀತಿ ‘ನಾನು ನಿನಗಿಂತ ಹೆಚ್ಚು ಸಾಹಿತ್ಯ ಓದಿಕೊಂಡಿಲ್ಲ ಮಗನೇ. ಆದ್ರೆ ನಿನ್ನ ಪ್ರೀತಿಗೆ ತೋಚಿದ್ದು ಬರೆಯುತ್ತೇನೆ ಆದ್ರೆ ಅದನ್ನು ವಿಮರ್ಶೆ ಅಂತ ಅಂದುಕೊಳ್ಳಬಾರದು.
ಅದು ನನ್ನೊಳಗಿನ ಪ್ರೀತಿಯ ಮಾತುಗಳಷ್ಟೇ’ ಅಂದ್ರು. ನಿಮಗೆ ಏನು ಅನ್ನಿಸುತ್ತೋ ಅದನ್ನೇ ಬರೆದು ಕೊಡಿ ಎಂದು ಹೇಳಿ ಅವರಿಗೆ ಚೊಚ್ಚಲ ಕೃತಿಯ ಕರಡು ಪ್ರತಿ ಕೊಟ್ಟೆ. ತಾನು ಹೋದ ಕಡೆಯೆಲ್ಲಾ ಆ ಪುಸ್ತಕ ಹಿಡಿದುಕೊಂಡು ಬಿಡುವಾದಾಗಲ್ಲೆಲ್ಲಾ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. 2010 ರ ಮಧ್ಯದಲ್ಲಿ ಕೊಟ್ಟಿದ್ದಕ್ಕೆ ಅಮ್ಮ ವಾಪಸ್ ಬರೆದು ಕೊಟ್ಟಿದ್ದು 2011 ರ ಮೊದಲಿಗೆ. ಅಮ್ಮನ ಮಾತುಗಳನ್ನು ಓದಿ ಮಾತುಗಳೆಲ್ಲಾ ಮಂಕಾಗಿ ಮೌನವಾಗಿ ಕೂತುಬಿಟ್ಟವು. ಈ ವಿಷಯವಾಗಿ ಅವರು ಎದ್ರು ಕೂತಾಗ ನನ್ನ ಅಭಿವ್ಯಕ್ತಿ ಬರೀ ಮೌನವಾಗಿತ್ತು ಕಣ್ಣಲ್ಲೇ ನಮಿಸುವುದಾಗಿತ್ತು. ಪುಸ್ತಕ ಬಂತು ಅದಾದ ಮೇಲೆ ಪುಸ್ತಕ ಬಿಡುಗಡೆಗೂ ಬಂದರು. ನಾಡೋಜ ದೇಜಗೌ, ಮಳಲಿ ಸರ್ ಕೂಡ ಪುಸ್ತಕ ಬಿಡುಗಡೆಗೆ ಬಂದಿದ್ದರು. ಅದಾದ ಮೇಲೆ ಕಾಜಾಣದ ಕಾರ್ಯಕ್ರಮಗಳನ್ನು ಹೊರತುಪಡಿಸಿ ಮತ್ತೆ ನನ್ನ ಯಾವ ಕಾರ್ಯಕ್ರಮಗಳಿಗೂ ಅವರು ಬರಲು ಆಗಲಿಲ್ಲ. ನಾನೂ ಕೂಡ ಒತ್ತಾಯಿಸಲಿಲ್ಲ.

***

ಘಾಸಿಯಾಗಿದೆ ಗಾಯವಾಗಿದೆ
ದೇಹಗಳಿಗೆ ಮನಸ್ಸುಗಳಿಗೆ
ಮುದ ನೀಡುವ ರಂಗವೇ
ಮದವೇರಿದೆ ಮತಿಗಳಿಗೆ
ಮಾನವೀಯ ಮೌಲ್ಯಗಳ ಮರೆತ ದುಷ್ಟ ವ್ಯವಸ್ಥೆಗೆ
ಚಿಂತನೆಗೆ ಹಚ್ಚಿ
ಗಾಯ ಮಾಯಗೊಳಿಸುವ ಶಕ್ತಿಗೆ
ಹಂಬಲಿಸುತ್ತಿದೆ
ಹುಚ್ಚು ಹಚ್ಚುವ ಶಕ್ತಿ
ಕಿಚ್ಚು ಹಚ್ಚುವ ಶಕ್ತಿ
ನಿನ್ನ ಶಕ್ತಿ
ನಿನ್ನ ಶಕ್ತಿ ನನಗಾಗಿ ಮೀಸಲಿಡು
ನಿನಗಾಗಿ ಕಾಯುತ್ತಿರುವ ಮಗು ನಾನು
ಸಂತೈಸುವ ತಾಯಿ ನೀನು
ನನ್ನನ್ನು ಅಪ್ಪಿಕೋ ನನ್ನನ್ನು ಉಳಿಸು
ಮಮ್ಮನ್ನು ಉಳಿಸುವ ದಿವ್ಯ ಶಕ್ತಿಯೇ ರಂಗವೇ
ನಿನ್ನ ಸಂಗ ನನಗೆ ಬೇಕಾಗಿದೆ ಬೇಕಾಗಿದೆ..
– ಉಮಾಶ್ರೀ
ಇದು ಇತ್ತೀಚಿಗೆ ನಾಟಕ ಅಕಾಡೆಮಿಯಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಕೂತ ಕಡೆ ಆಶು ಕವಿತೆ ರಚಿಸಿ ಅಮ್ಮ ವಾಚಿಸಿದ ಪದ್ಯ. ಅವರು ಕಾರ್ಯಕ್ರಮವನ್ನು ಕುರಿತು ಮಾತಾಡುತ್ತಾ ಈ ಪದ್ಯವನ್ನು ಓದಿ ತುಸು ಭಾವುಕರಾದರು. ತಾನು ಅದುಮಿಟ್ಟು ಕೊಂಡಿದ್ದನ್ನು ಪದ್ಯದ ಮೂಲಕ ಹೇಳಬೇಕು ಅನ್ನಿಸಿತೇನೋ ಆ ಹೊತ್ತು. ರಂಗಭೂಮಿ ಎಂಬ ತಾಯಲ್ಲಿ ತನ್ನ ನಿವೇದನೆಯನ್ನು ಪದ್ಯ ಬರೆಯುವ ಮೂಲಕ ಅಭಿವ್ಯಕ್ತಿಗೊಳಿಸಿದರು. ಅಮ್ಮ ಪದ್ಯ ಓದುವಾಗ ಇಡೀ ತನ್ನ ರಂಗಭೂಮಿಯ ಜೀವನದ ಸುಧೀರ್ಘ ಯಾನವಿತ್ತು. ಸಭೆ ಮೌನವಾಗಿ ಗಾಢ ಯೋಚನೆಯಲ್ಲಿತ್ತು ಅನ್ನಿಸುತ್ತಿತ್ತು. ನಾನು ಕೂಡ ಆ ಕಾರ್ಯಕ್ರಮದಲ್ಲಿದ್ದೆ. ಅಮ್ಮ ಪದ್ಯ ಬರೆದ ತಕ್ಷಣ ಪಕ್ಕದಲ್ಲೇ ಕೂತಿದ್ದ ಎಚ್.ಎಲ್. ಪುಷ್ಪ ಮೇಡಂ ಅವರಿಗೆ ತೋರಿಸುತ್ತಿದ್ದರು. ಪುಷ್ಪ ಮೇಡಂ ಕವಿತೆ ನೋಡಿ ಹುಬ್ಬೇರಿಸಿ ತಲೆ ಆಡಿಸುತ್ತಿದ್ದುದು ಅಮ್ಮನ ಒಳಗಿದ್ದ ರಂಗ ಪ್ರೇಮಕ್ಕೆ ತಲೆ ಬಾಗುವಂತಿತ್ತು. ಪೂರ್ತಿ ಕವಿತೆ ಆಗಿದೆಯೋ ಇಲ್ಲವೋ ಅಮ್ಮ ಕವಿತೆ ಬರೆದು ಬಿಟ್ಟರು ಅನ್ನುವ ಹೆಮ್ಮೆ ಕುಷಿಗೆ ಕವಿಯಾಗಿ ಕಲಾಕ್ಷೇತ್ರದಲ್ಲಿ ಸಿಕ್ಕ ಸಿಕ್ಕವರಿಗೆಲ್ಲಾ ಹೇಳಿ ಹೌ ಹಾರಿದ್ದೇ. ಅವರು ಕವಿತೆ ಓದಿದ ರೆಕಾರ್ಡಿಂಗ್ ನನ್ನ ಗೆಳೆಯರಿಗೆ ನನ್ನ ವಿದ್ಯಾರ್ಥಿ ಮಿತ್ರರೈಗೆಲ್ಲಾ ಕೇಳಿಸಿ ಸಂತಸ ಪಟ್ಟಿದ್ದೆ. ಕವಯತ್ರಿ ಉಮಾಶ್ರೀಯನ್ನು ಕಂಡು ಹೆಮ್ಮೆ ಪಟ್ಟಿದ್ದೆ.

***

ಇನ್ನೊಂದು ಘಟನೆ ಹೇಳಿ ಮುಗಿಸುತ್ತೇನೆ. ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯನ್ನು ಕುರಿತಾದ ವಿಚಾರ ಸಂಕಿರಣವೊಂದು ಎರ್ಪಾಟಾಗಿತ್ತು. ಎಲ್ಲಿ ಏನು ಎತ್ತ ಇಲ್ಲಿ ಹೇಳಬೇಕೋ ಬೇಡವೋ ಗೊತ್ತಾಗುತ್ತಿಲ್ಲ. ಏನೇ ಇರಲಿ ಬೇಡ ಬಿಡಿ. ಅಮ್ಮನನ್ನು ಒಂದು ಗೋಷ್ಠಿಗೆ ತನ್ನ ರಂಗಭೂಮಿಯ ಅನುಭವಗಳನ್ನು ಕುರಿತು ಮಾತಾಡಲು ಕರೆದಿದ್ದರು. ಅದಕ್ಕೆ ಅಮ್ಮ ಹಿಂದಿನದ್ದೆಲ್ಲಾ ನೆನಪಿಸಿಕೊಂಡು ಸುಮಾರು ಆರೇಳು ಪುಟಗಳಷ್ಟು ಟಿಪ್ಪಣಿ ಮಾಡಿಟ್ಟುಕೊಂಡು ತಯಾರಾಗಿದ್ದರು. ಸರಿ ಗೋಷ್ಠಿಗೂ ಹೋದರು. ಮಾತಾಡಲು ಅಮ್ಮನ ಸರದಿ ಬಂದಿತು. ತನ್ನ ರಂಗಭೂಮಿಯ ಅನುಭವಗಳನ್ನು ಕುರಿತು ಮಾತಾಡಿ ಅಂತ ಮೊದಲೇ ಅವರಿಗೆ ಸೂಚನೆ ಇದ್ದ ಕಾರಣ ಅವರು ಅದೇ ವಿಷಯವನ್ನು ಮಾತಾಡಲು ಆರಂಭಿಸಿದರು. ತನ್ನ ಅನುಭವಗಳನ್ನು ಹೇಳಿಕೊಳ್ಳುವಾಗ ಕಿರಿದಾಗಿ ಎಲ್ಲವನ್ನು ಕ್ರೋಡೀಕರಿಸಿ ಹೇಳಲು ಅಮ್ಮನಿಗೆ ತುಸು ಕಷ್ಟವಾಗಿದೆ. ಅಂದ್ರೆ ಅವರ ರಂಗಭೂಮಿಯ ಅನುಭವ ಬಹಳ ದೊಡ್ಡದು. ಮಾತಾಡುತ್ತಾ ಮಾತಾಡುತ್ತಾ ಅಮ್ಮ ತನ್ನ ನಾಟಕದ ಬದುಕನ್ನು ಕುರಿತು ವಿಸ್ತಾರವಾಗಿ ಮೊದಲಿನಿಂದಲೂ ಮಾತನಾಡಲು ಶುರು ಮಾಡಿದ್ದಾರೆ. ಸಮಯ ನೋಡಿಕೊಂಡಿಲ್ಲ ಅಮ್ಮನಿಗೆ ಕೊಟ್ಟ ಸಮಯಕ್ಕಿಂತ ಒಂದತ್ತು ನಿಮಿಷ ಜಾಸ್ತಿ ಮಾತಾಡಿರಬಹುದು ಬಹುದು. ಆದ್ರೆ ಅವರು ಆ ವೇಳೆಗೆ ರಂಗಭೂಮಿಯ ಅನುಭವದ ಆರಂಬಿಕ ಘಟ್ಟಗಳನ್ನು ಹೇಳುವ ತನಕ ತಲುಪಿದ್ದರಂತೆ ಅಷ್ಟೇ. ಹೀಗಿರುವಾಗ ಗೋಷ್ಠಿಯ ಅಧ್ಯಕ್ಷರು ‘ಸಾಕು ನಿಲ್ಲಿಸಿ ನಿಮ್ಮ ಮಾತುಗಳನ್ನು.
ನೀವು ನಿಮ್ಮ ಅನುಭವದ ನೆಲೆಯಲ್ಲಿ ಮಾತಾಡುತ್ತಿದ್ದೀರಿ ಅದನ್ನೇ ಥಿಯರಿ ಮಾಡಿ ಹೇಳಿ’ ಅಂದರಂತೆ. ಅಮ್ಮ ತನ್ನ ಮಾತುಗಳನ್ನು ತಕ್ಷಣ ನಿಲ್ಲಿಸಿ ಅಲ್ಲಿ ಯಾವ ಪ್ರತಿಕ್ರಿಯೆಗಳನ್ನು ನೀಡದೇ ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಅಂತ ಹೇಳಿ ಹೊರಟುಬಿಟ್ಟರಂತೆ. ಇದಾದ ಮೇಲೆ ಅಲ್ಲೇ ಇದ್ದ ಎಚ್,ಎಸ್ ಶಿವಪ್ರಕಾಶ್ ಅವರು ಮತ್ತು ಕಂಬಾರರು ಬೇಸರ ವ್ಯಕ್ತಪಡಿಸಿ ಆ ಗೋಷ್ಠಿಯ ಅಧ್ಯಕ್ಷರಿಗೆ ಉಮಾಶ್ರೀ ಅವರ ರಂಗಭೂಮಿಯ ಅನುಭವವನ್ನು ಕುರಿತು ಹೇಳಿ ತಮ್ಮ ವಿರೋಧವನ್ನು ವ್ಯಕ್ತ ಪಡಿಸಿದಂತೆ. ಇದನ್ನೆಲ್ಲಾ ಅಮ್ಮ ಅವತ್ತು ಬೇಸರಿಕೊಂಡು ಕಂದಾ ”ನಾನೊಬ್ಬಳು ಕಲಾವಿದೆ ಕಣೋ ನಿಮ್ಮ ಹಾಗೆ ಸಾಹಿತಿ ಅಲ್ಲ” ನಡೆದ ಘಟನೆ ಎಲ್ಲಾ ಹೇಳಿ ಜೋರಾದ ಉಸಿರು ಬಿಟ್ಟು ಫೋನ್ ಇಟ್ಟಿದ್ದರು. ಮಾರನೇ ದಿನ ಏನೂ ಆಗಿಲ್ಲವೆಂಬಂತೆ ತನ್ನ ಕೆಲಸಗಳಲ್ಲಿ ಶ್ರದ್ದೆ ಮತ್ತು ಬದ್ಧತೆಯಿಂದ ತೊಡಗಿಸಿಕೊಂಡರು. ಮೊನ್ನೆ ಮೊನ್ನೆ ಈ ಘಟನೆ ನೆನಪಿಸಿದೆ ಅವರಿಗೆ ಸುತಾರಾಂ ನೆನಪಿರಲಿಲ್ಲ. ಅವರ ಕ್ಷೇತ್ರದಲ್ಲಿ ತಮದಡ್ಡಿ ಗ್ರಾಮವೊಂದರಲ್ಲಿ ಬೆಂಕಿ ಬಿದ್ದು ಜಾನುವಾರುಗಳೆಲ್ಲಾ ಸುಟ್ಟು ಕರಕಲಾಗಿದ್ದವು. ಅದನ್ನೇ ಕುರಿತು ಜೀವಪರವಾದ ಮಾತುಗಳನ್ನು ತಾಸುಗಟ್ಟಲೆ ಆಡುತ್ತಾ ಜೀವದ ಬೆಲೆಯನ್ನು ನೆನೆದು ಕಣ್ಣು ತೇವ ಮಾಡಿಕೊಂಡರು.
 

‍ಲೇಖಕರು G

May 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. ಮಮತ

    ಬೆರಗಾಗಿ ಓದಿದೆ ಬೆನ್ನುಡಿಯನ್ನ! ಮತ್ತೇನು ಹೇಳೋದು !!?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: