ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ಕರಿಬಸವಯ್ಯನವರು ಮಾಡುತ್ತಿದ್ದ ಶನಿಮಾದೇವರ ಕಥೆ…

ಉಮಾಶ್ರೀ ಮನೆಯಲ್ಲಿ ಕರಿಬಸವಯ್ಯ ಅವರು ಶನಿದೇವರ ಕಥೆ ಹೇಳುತ್ತಿದ್ದರು

ಶೇತಮ್ಮನ ಮದುವೆ ಆದ ಹೊಸತರಲ್ಲಿ ಉಮಾಶ್ರೀ ಅವರು ಶನಿ ಮಹಾದೇವರ ಕಥೆ ಹೇಳಿಸುತ್ತಿದ್ದೇವೆ ಬನ್ನಿ ಅಂತ ನಮ್ಮನ್ನೆಲ್ಲಾ ಕರೆದಿದ್ರು. ಅವರ ಅಣ್ಣ ತಮ್ಮಂದಿರು ಮತ್ತು ಅವರ ಆಪ್ತ ಬಂಧುಗಳೆಲ್ಲಾ ಸೇರಿದ ಒಂದು ಅಚ್ಚುಕಟ್ಟಾದ ಕೌಟುಂಬಿಕ ಕಾರ್ಯಕ್ರಮ ಅದು.
ನಾವು ಚಿಕ್ಕ ಹುಡುಗರಿರಬೇಕಾದ್ರೆ ನಮ್ಮ ತಾತ ಕೂಡ ನಮ್ಮನೆಯಲ್ಲಿ ಶನಿದೇವರ ಪೂಜೆ ಮಾಡಿಸುತ್ತಿತ್ತು. ರಾತ್ರಿ ಇಡೀ ಕಥೆ ಹೇಳಿಸಿ ಬೆಳಗಿನ ಜಾವದ ಹೊತ್ತಿಗೆ ಕಾರ್ಯಕ್ರಮ ಮುಗಿಯುತ್ತಿತ್ತು ಆಗ. ಶ್ರಾವಣದಲ್ಲಿ ಈ ಕಥೆ ಮಾಡಿಸುವ ಕಾಲ ಬಂತು ಅಂದ್ರೆ ನಮ್ಮಜ್ಜಿಗೆ ಮತ್ತು ನನ್ನ ತಂಗಿ ಶೇತಮ್ಮನಿಗೆ ಎಲ್ಲಿಲ್ಲದ ಉತ್ಸಾಹ. ಯಾಕಂದ್ರೆ ಸುಣ್ಣ ಬಣ್ಣ, ನೀರು ನಿಡಿ, ಒಪ್ಪ ಓರಣ ಅಂತ ಅವರಿಬ್ಬರ ಸಡಗರ ನೋಡೋಕೆ ಒಂದು ಚಂದ. ನೆಂಟ್ರು ಇಷ್ಟ್ರು, ಅಕ್ಕದೋರು ಪಕ್ಕದೋರು ಅಂತ ಸುಮಾರು ಜನ ಸೇರಿ ಸಂಭ್ರಮದಿಂದ ಈ ಶನಿದೇವರ ಕಥೆ ಹೇಳಿಸಿ ಹಬ್ಬ ಮಾಡೋರು ಬೇಲೂರಿನ ಮನೇಲಿ. ಈ ಕಥೆ ಹೇಳಿಸುವ ಸಮಯದಲ್ಲಿ ಬೆಂಗಳೂರಿಂದ ಮತ್ತು ಮೈಸೂರಿಂದ ನನ್ನ ಅತ್ತೆಯಂದಿರು ಮತ್ತು ಅವರ ಮಕ್ಕಳೆಲ್ಲಾ ಬಂದ್ರೆ ನಂಗೆ ಮತ್ತು ನನ್ನ ತಂಗಿ ಶೇತಮ್ಮನಿಗೆ ಎಲ್ಲಿಲ್ಲದ ಖುಷಿ. ಒಟ್ಟು ಶನಿದೇವರ ಕಥೆ ಅಂದ್ರೆ ಎಲ್ರೂ ಸೇರಿಕೊಂಡು ಖುಷಿ ಖುಷಿಯಿಂದ ಸೇರಿಕೊಂಡು ತುಂಬಾ ನೇಮದಿಂದ ಮಾಡುತ್ತಿದ್ದ ಒಂದು ಆಚರಣೆ ಆಗಿತ್ತು ನಮ್ಮನೆಯಲ್ಲಿ.
ನಮ್ಮಜ್ಜಿ ಕರಿ ಎಳ್ಳನ್ನು ತೊಳ್ದು ಒಣಗಿಸಿ ಹುರ್ದು ಅದಕ್ಕೆ ಕರಿ ಬೆಲ್ಲ ಹಾಕಿ ಮಾಡುತಿದ್ದ ಎಳ್ಳುಡಿ, ಎಳ್ಳಿನ ಚಿಗುಳಿ, ಅಕ್ಕಿ ತಂಟ ನೆನಸಿಕೊಂಡ್ರೆ ಇವತ್ತೂ ಬಾಯಿ ನೀರೂರುತ್ತೆ. ಇದನ್ನೇ ಅಲ್ವಾ ಕೈಗುಣ, ಕೈರುಚಿ ಅಂತ ಕರೆಯೋದು. ನಿಜಕ್ಕೂ ದೇವ ರುಚಿ ಅಂದ್ರೆ ನಮ್ಮಜ್ಜಿ ಕೈರುಚಿನೇ. ರಾತ್ರಿ ಇಡೀ ಎಳ್ಳೆಣ್ಣೆ ದೀಪಹಚ್ಚಿಕೊಂಡು ಉದ್ವೇಗದಲ್ಲಿ ಗಟ್ಟಿ ದನಿಯಲಿ ಹೇಳುವ ಕಥೆಯನ್ನು ಕೇಳುತ್ತಾ. ತಲೆ ತೂಗ್ತಾ ಒಮ್ಮೊಮ್ಮೆ ಕುಣಿದೇ ಬಿಡೋಣ ಅನ್ನಿಸುವ ತರ ನುಡಿಸುತ್ತಿದ್ದ ಹಾರ್ಮೋನಿಯಂ ಮತ್ತು ಇತರೇ ವಾದ್ಯಗಳು, ನಡು ನಡುವೆ ಮೈ ಮೇಲೆ ದೇವರು ಬಂತು ಅಂತ ಮಂಗಳಾರತಿ, ಶನಿ ಮಹಾರಾಜ್ ಕೀ ಜೈ. ಶನಿ ಮಹಾರಾಜ್ ಕಿ ಜೈ ಅನ್ನುವ ಜೈಕಾರಗಳು, ಭಯ ಭಕ್ತಿ ಇವೆಲ್ಲಾ ನಮ್ಮನ್ನು ಬೇರೆಯದ್ದೇ ಒಂದು ಲೋಕಕ್ಕೆ ಕರೆದೊಯ್ಯುತ್ತಿತ್ತು. ಇದೆಲ್ಲಾ ನಾವು ಹೈಸ್ಕೂಲ್ಗೆ ಬರೋ ಹೊತ್ತಿಗೆ ಎಲ್ಲಾ ನಿಂತು ಹೋಗಿತ್ತು. ಸುಮಾರು ಸಂಜೆ ಏಳು ಗಂಟೆಗೆ ಶುರು ಆದ್ರೆ ಪೂಜೆ ಬೆಳಗಿನ ಜಾವಕ್ಕೆ ಈ ಕಾರ್ಯ ಮುಗೀತಿತ್ತು. ಇದನ್ನೆಲ್ಲಾ ನೆನಪಿಸಿಕೊಂಡು ಅಮ್ಮ ಸಂಜೆ ಆರು ಗಂಟೆಗೆ ಪೂಜೆ ಶುರು ಆಗಿಬಿಡತ್ತೆ ಬಂದುಬಿಡ್ರಪ್ಪ ಅಂದು ಬೀಗ ನೆಂಟನನ್ನು ಕರೆಯೋ ರೀತಿಯಲ್ಲಿ ಕರೆದ್ದಿದ್ದಕ್ಕೆ ನಾನೂ ಬೀಗರ ಮನೆಗೆ ಹೋಗುತ್ತಿದ್ದೇನೆ ಅನ್ನುವ ಘನ ಗಾಂಭೀರ್ಯದಲ್ಲಿ ಹೊರಟೆ.
ನಮ್ಮನೆಯಲ್ಲಿ ನಮ್ಮ ಅಜ್ಜಿ ಮತ್ತು ಶೇತಮ್ಮ ಮಾಡುತ್ತಿದ್ದ ತಯಾರಿಗಳ ರೀತಿಯಲ್ಲೇ ಬೀಗರ ಮನೆಯಲ್ಲೂ ತಯಾರಿ ಇದ್ದೇ ಇರುತ್ತೆ. ನಾನು ಸ್ವಲ್ಪ ಬೇಗ ಹೋಗಿ ಸಹಕರಿಸಬೇಕು ಅಂತ ಬೇಗ ಬೇಗ ಸಿದ್ಧನಾದೆ. ಇಷ್ಟಕ್ಕೂ ನನ್ನ ತಂಗಿಗೆ ಶನಿಮಾದೇವರ ಪೂಜೆಗೆ ಸಂಬಂಧಿಸಿದ ಎಲ್ಲಾ ಕೆಲಸ ಬರೋದ್ರಿಂದ ಅವಳಿಗೆ ಏನೂ ಕಷ್ಟ ಆಗೋದಿಲ್ಲ ಅಂತ ನನಗೆ ಪೂರಾ ಭರವಸೆ ಇತ್ತು. ಶೇತಮ್ಮ ಅವಳ ಮನೆಯಲ್ಲಿ ಸೈ ಅನ್ನಿಸಿಕೊಳ್ಳುತ್ತಾಳೆ ಅಂತ ನನಗೆ ನಾನೇ ಹೆಮ್ಮೆ ಪಟ್ಟುಕೊಂಡಿದ್ದು ಇವತ್ತಿನವರೆಗೂ ಎಲ್ಲೂ ಸುಳ್ಳಾಗಿಲ್ಲ. ಮೊದ್ಲು ಸಲ ಇವರು ನನ್ನನು ಪೂಜೆಗೆ ಕರೆದಾಗ, ಆಗಿನ್ನೂ ನಾನು ಬೇಲೂರಿನಲ್ಲೇ ಇದ್ದೆ. ಬೆಂಗಳೂರಿನಲ್ಲಿ ಮನೆ ಮಾಡಿರಲಿಲ್ಲ. ಊರಿಂದ ಹೊರಟು ಶೇತಮ್ಮನ ಮನೆ ಸೇರೋ ತನಕ ನಮ್ಮನೆಯಲ್ಲಿ ನಡೀತಿದ್ದ ಶನಿದೇವರ ಕಥೆಯ ಬೇರೆ ಬೇರೆ ಆಯಾಮಗಳನ್ನು ನೆನೆದು ಅವೆಲ್ಲಾ ಬೀಗರ ಮನೆಯಲ್ಲಿ ಹೇಗೆಲ್ಲಾ ಮಾಡಿರುತ್ತಾರೆ ಅನ್ನುವ ಕುತೂಹಲದಿಂದ ಪ್ರಯಾಣ ಮಾಡಿದೆ. ಇನ್ನೂ ನಮ್ಮೂರಲ್ಲಿ ಕಥೆ ಹೇಳೋರ ತರಾನೇ ಬೆಂಗಳೂರಲ್ಲಿ ಕಥೆ ಹೇಳುತ್ತಾರ ಅಂತೆಲ್ಲಾ ಪ್ರೆಶ್ನೆಗಳನ್ನು ಇಟ್ಟುಕೊಂಡು ತಂಗಿ ಮನೆಗೆ ಬೇಗ ಹೋಗಿ ಏನಾದ್ರೂ ಕೆಲಸ ಕಾರ್ಯ ನೋಡಬೇಕು ಅವರಿಗೆಲ್ಲಾ ಸಹಕರಿಸಬೇಕು ಅಂತ ಮಧ್ಯಾನ್ಹ ಮೂರು ಗಂಟೆ ಹೊತ್ತಿಗೆ ಅವರ ಮನೆಗೆ ಸೇರಿದೆ.
ಮೂರು ಗಂಟೆಗೆ ಹೋದರೂ ಇನ್ನೂ ಏನೂ ತಯಾರಿಗಳು ಆಗಿರಲಿಲ್ಲ. ನನ್ನ ತಂಗಿ ದಡಬಡ ಓಡಾಡುತ್ತಿದ್ದಳು. ಹೊಸ ಹೆಣ್ಣು ಬೇರೆ ಅವಳನ್ನು ನೋಡೋಕೆ ಒಂದು ಚೆಂದ. ಆದ್ರೆ ಅವಳು ಹೊಸ ಹೆಣ್ಣಿನ ತರ ಎಲ್ಲೂ ನಾಚಿ ಮೂಲೆಯಲ್ಲಿ ಕೂರದೇ ಬರೀ ಕೆಲಸದಲ್ಲೇ ತೊಡಗಿದ್ದಳು. ಎಷ್ಟರ ಮಟ್ಟಿಗೆ ಅಂದ್ರೆ ಅವಳ ಮನೆಗೆ ಬಂದ ಅಣ್ಣನನ್ನು ನಕ್ಕು ಕ್ಷಣಾರ್ಧದಲ್ಲೇ ಮಾತಾಡಿಸಿ ಕೈಗೆ ಕುಡಿಯಲು ಒಂದು ಲೋಟ ನೀರು ಕೊಟ್ಟು ಮತ್ತೆ ಕೆಲಸದಲ್ಲೇ ಅವಳು ತೊಡಗಿಸಿಕೊಂಡಳು. ನನಗೋ ಹೊಸ ಮನೆ, ಹೊಸ ಜಾಗ ನೆಂಟರೆಲ್ಲಾ ಹೊಸಬರೇ. ಹೀಗಿದ್ದಾಗ ಕೂತ ಕಡೆ ಕೂರೋಕೆ ಅಗದಲೇ ವಿಲ ವಿಲ ಅಂತ ಒದ್ದಾಡುತ್ತಿದ್ದೆ. ನನ್ನ ತಂಗಿ ಏನಪ್ಪಾ ಇಷ್ಟು ಬೇಗ ಎಷ್ಟೊಂದು ಹೊಂದಿಕೊಂಡಿದ್ದಾಳೆ ಅಂತ ನನ್ನೊಳಗಿದ್ದ ನನ್ನ ತಾಯಿ ಮತ್ತು ನನ್ನ ಆಜ್ಜಿಯ ಜೀವಗಳು ಖುಷಿ ಪಡುತ್ತಿದ್ದವು. ಆದ್ರೂ ಎಲ್ಲೋ ಒಂದು ಕಡೆ ತುಂಬಾ ಪೊಸೆಸಿವ್ ಆಗಿ ‘ನೋಡು ಬಂದಿರುವ ಅಣ್ಣನನ್ನು ಏನೂ ಎತ್ತ ಅಂದಲೇ, ಪಕ್ಕದಲ್ಲಿ ಕೂತ್ಕೊಂಡು ಒಂದಿಷ್ಟು ಮಾತಾಡದೇ ತನ್ನ ಪಾಡಿಗೆ ತಾನು ಬರೀ ಕೆಲಸದಲ್ಲೇ ತೊಡಗಿಸಿಕೊಂಡಿದ್ದಾಳೆ’ ಅಂತ ಸ್ವಲ್ಪ ಬೇಸರ ಕೂಡ ಆಗಿತ್ತು. ಆದ್ರೆ ಅದೇನು ಅಂತಾ ದೊಡ್ಡ ಬೇಸರ ಏನಿಲ್ಲ ಬಿಡಿ. ಇಷ್ಟರ ನಡುವೆ ಶೇತಮ್ಮನ ಜವಾಬ್ದಾರಿ ನೋಡಿ ತುಂಬಾ ಅಂದ್ರೆ ತುಂಬಾ ಖುಷಿ ಪಟ್ಟಿದ್ದೇನೆ ಆಗ ಈಗಲೂ ಕೂಡ. ಯಾಕಂದ್ರೆ ನನ್ನ ತಂಗಿ ತಾನೊಬ್ಬಳೇ ಎಲ್ಲ ಕೆಲಸ ಮಾಡಿಕೊಂಡು ಬಂದವರನ್ನು ನಿಭಾಯಿಸುತ್ತಿದ್ದುದ ಕಂಡು ಈ ಅಣ್ಣ ಅದೆಷ್ಟು ಖುಷಿ ಪಡ್ತಿದ್ನೋ. ನಮ್ಮ ಅಜ್ಜಿಯ ಬದುಕಿನ ಪಾಠಗಳು ಮತ್ತು ಅನೇಕ ಅನುಭವಗಳು ಅವಳನ್ನು ಇಷ್ಟು ದಿಟ್ಟವಾಗಿ ಬೆಳೆಸಿದ್ದಾವೆ ಅಂತ ಅದೆಷ್ಟೋ ಸಲ ಅನ್ನಿಸಿದೆ.

ಸರಿ ಇಷ್ಟೆಲ್ಲಾ ಆದರೂ ಉಮಾಶ್ರೀ ಅವರು ಮನೆಯಲ್ಲಿ ಕಾಣಲೇ ಇಲ್ಲ. ನೆಂಟರೆಲ್ಲಾ ಬಂದಿದ್ರು. ನಮ್ಮನೆಯಿಂದ ನಾನೊಬ್ಬನೇ ಹೋಗಿದ್ದೆ ಸಂಜೆ ಆರಾದ್ರೂ ಪೂಜೆಗೆ ಬೇಕಾದ ಎಲ್ಲಾ ತಯಾರಿಗಳು ಆಗುತ್ತಿದ್ದವು. ಕಥೆ ಹೇಳೋರು ಯಾರೂ ಬಂದಿರಲಿಲ್ಲ. ನಾನು ಎಲ್ಲವನ್ನು ಬೆರಗು ಕಣ್ಣಿನಿಂದ ನೋಡುತ್ತಾ ನಿಂತಿದ್ದೆ. ಸಂಜೆ ಸುಮಾರು ಆರೂವರೆ ಹೊತ್ತಿಗೆ ಅಮ್ಮ ಬಂದ್ರು. ಅವತ್ತೂ ಕೂಡಾ ಅವರು ಶೂಟಿಂಗ್ ಹೋಗಿದ್ದರಂತೆ. ನಾನು ಬಂದವರನ್ನು ಮಾತಾಡಿಸಿ ಅಮ್ಮ ಇವತ್ತೂ ಶೂಟಿಂಗ್ ಹೋಗಿದ್ರಾ? ನಮ್ಮನ್ನೆಲ್ಲಾ ಕರೆದು ನೀವು ಮನೇಲಿ ಇಲ್ಲ ಅಂದ್ರೆ ಹೇಗೆ ಅಂತ ಸ್ವಲ್ಪ ಸಲೀಸಾಗೆ ಕೇಳಿಬಿಟ್ಟೆ. ಅದಕ್ಕವರು ‘ಅಯ್ಯೋ ಮಗನೆ ಶೂಟಿಂಗ್ ಡೇಟ್ ನಾ ಯಾವತ್ತೂ ತಪ್ಪಿಸಿಲ್ಲ. ತಪ್ಪಿಸಿದರೆ ಸಾಹನಿ ಮಹಾದೇವಾ ಒಪ್ಪಲ್ಲಪ್ಪ’ ಅಂದು ನಕ್ಕು ಒಳ ಹೋದರು. ಪೂಜೆ ಏಳು ಗಂಟೆ ಹೊತ್ತಿಗೆ ಎಲ್ಲಾ ದಡಬಡ ತಯಾರಾಯ್ತು. ಶೂಟಿಂಗ್ ಮುಗಿಸುಕೊಂಡು ಬಂದ ಅಮ್ಮ ಕೂಡ ಹದಿನೈದು ನಿಮಿಷದಲ್ಲಿ ತಯಾರಾಗಿ ಬಂದ್ರು. ಕಥೆ ಹೇಳೋರು ಬಂದು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ರು. ಇನ್ನೇನು ಕಥೆ ಏಳು ಗಂಟೆಗೆ ಆರಂಭ ಆಗಬೇಕು ಅಷ್ಟರಲ್ಲಿ ಆರು ಐವತ್ತರ ಸುಮಾರಿಗೆ ಕರಿಬಸವಯ್ಯ ಬಂದರು. ಅವರನ್ನು ನಾನು ಮಾತಾಡಿಸಿದ್ದು ಅದೇ ಮೊದಲು. ಅದಕ್ಕಿಂತ ಮುಂಚೆ ಬೇಲೂರಿನಲ್ಲಿ ನಾನು ಪದವಿ ಓದುವಾಗ ಕಾಲೇಜು ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಬಂದಿದ್ದರು. ಅದು ಬಿಟ್ರೆ ಅವರನ್ನು ಟಿ.ವಿ. ಸಿನಿಮಾದಲ್ಲಿ ಬಿಟ್ಟು ಬೇರೆಲ್ಲೂ ನೋಡಿರಲಿಲ್ಲ. ನಾನು ಕಥೆ ಕೇಳಲು ಇವರು ಬಂದಿದ್ದಾರೆನೋ ಅಂದುಕೊಂಡೆ. ಆದ್ರೆ ಅವ್ರು ಕಥೆ ಹೇಳೋಕೆ ಬಂದಿದ್ದಾರೆ ಅನ್ನೋದು ಗೊತ್ತಾಗಿದ್ದು ಪೂಜೆ ಶುರು ಆಗಿ ಕಥೆ ಹೇಳೋಕೆ ಆರಂಭಿಸಿದ ಮೇಲೇನೆ.
ಕರಿಬಸವಯ್ಯನವರು ಕಥೆ ಹೇಳುತ್ತಿರುವಾಗ ಅಮ್ಮ ತಲೆದೂಗುತ್ತಿದ್ದರು. ನಡು ನಡುವೆ ಹಾಡುತ್ತಿದ್ದ ಕಂದಗಳು, ಪರಾಕುಗಳು, ಜೈಕಾರಗಳು, ಆರತಿ, ಉದ್ವೇಗ, ಹಾರ್ಮೋನಿಯಂ ಅಬ್ಬಾ ಜನಪದ ಕಲೆಯೊಂದು ಮೈವೆತ್ತು ಉಮಾಶ್ರೀ ಅವರ ಮನೆಗೆ ಬಂದಿದಿಯೇನೋ ಅನ್ನಿಸುತಿತ್ತು. ಯಾಕಂದ್ರೆ ಕರಿಬಸವಯ್ಯನವರು ಕಥೆ ಹೇಳುವ ಕ್ರಮ ಮತ್ತು ಬಳಸುತ್ತಿದ್ದ ಮಟ್ಟುಗಳು ಅಲ್ಲಿ ಸೇರಿದ್ದವರನ್ನು ಮೋಡಿ ಮಾಡಿತ್ತು. ಅಮ್ಮ ಕೂಡ ತಾಳ ಇಡ್ಕೊಂಡು ತಾಳ ಹಾಕ್ತ ಹಾಕ್ತಾ ಮೈ ಮರೆತಿದ್ದರು. ಕರಿ ಬಸವಯ್ಯ ಅವರ ಗಂಡುದ್ವನಿ ಜೊತೆ ಆ ತಾಳ ಮೇಳ, ಸಂಗೀತ, ಪೂಜೆಯ ಪರಿಸರ ಇವೆಲ್ಲಾ ಭಕ್ತರಲ್ಲಿ ಗುಂಗು ಹಿಡಿಸುವಂತಿತ್ತು. ಒಮ್ಮೊಮ್ಮೆ ಹಾಡುವಾಗ ನಿಂತಲ್ಲೇ ಮಾಡುವ ನೃತ್ಯ ಇವೆಲ್ಲಾ ನೆನಪಿನಿಂದ ಅಳಿಸಿ ಹೋಗಲ್ಲ ಬಿಡಿ. ಅಮ್ಮ ಕೂಡ ಒಮ್ಮೊಮ್ಮೆ ಹೆಜ್ಜೆ ಹಾಕಿದ್ದು ಉಂಟು. ಬಿಳೀ ಬಟ್ಟೆ ಹಾಕ್ಕೊಂಡು ಕಚ್ಚೆ ಎತ್ತಿ ಕಟ್ಟಿ ಒಂದು ಹಾರ ಹಾಕಿಕೊಂಡು ಎತ್ತರದ ದನಿಯಲ್ಲಿ ಸ್ವರ ಬಿಟ್ರೆ ಅಬ್ಬಾ ಇಡೀ ಮೈಯಲ್ಲಿನ ಎಲ್ಲಾ ನರ ನಾಡಿಗಳೆಲ್ಲಾ ಜುಮ್ ಅಂದುಬಿಟ್ಟು ಮೈಯಲೆಲ್ಲಾ ನಾಗರ ಹಾವು ಹರಿದಂಗೆ ಆಗೋದು. ಅಮ್ಮ ಕೂಡ ಕಥೆಯ ಕೆಲ ಭಾಗಗಳಲ್ಲಿ ತನ್ನ ಪಾಡಿಗೆ ತಾನು ಹಾಡೋರು. ಕರಿ ಬಸವಯ್ಯ ಅವರು ಕಥೆ ಹೇಳುತ್ತಿದ್ದರೆ ಅಮ್ಮ ಒಮ್ಮೊಮ್ಮೆ ಮೌನವಾಗಿ ಎಲ್ಲವನ್ನು ಆಲಿಸಿ ಕೆಳುತಿದ್ರು. ಒಮ್ಮೊಮ್ಮೆ ಕೆ.ಬಿ. ಸರ್ ಅವರು ಹೇಳಿದ ಸನ್ನಿವೇಶಕ್ಕೆ ಕೂತಲ್ಲೇ ತನ್ನ ಮುಖಭಾವದಲ್ಲಿ ಹುಬ್ಬೇರಿಸುತ್ತಾ, ನಗುತ್ತಾ, ಅಳುತ್ತಾ ಅಭಿನಯಿಸುತಿದ್ರು. ಅಂದ್ರೆ ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಗೊತ್ತಾಗುತ್ತಿತ್ತು ಇಲ್ಲ ಅಂದ್ರೆ ಅಮ್ಮ ಒಬ್ಬ ಪೂಜೆ ಮಾಡಿಸೋ ಭಕ್ತೆಯಾಗಿ ಮಾತ್ರ ಕಾಣುತ್ತಿದ್ದರು. ನನಗಂತೂ ಇದೆಲ್ಲಾ ನೋಡುತ್ತಿದ್ದರೆ ಇಲ್ಲೊಂದು ಪೌರಾಣಿಕ ನಾಟಕ ನಡೀತಿದೆಯೇನೂ ಅಂತ ಅದೆಷ್ಟೋ ಸಲ ಅನ್ನಿಸಿಬಿಟ್ಟಿದೆ. ಒಟ್ಟು ಕರಿಬಸವಯ್ಯನವರ ಕಥಾವಾಚನ ಮತ್ತು ಅಮ್ಮ ಅದರೊಳಗೆ ಲೀನವಾಗುತ್ತಿದ್ದ ಬಗೆ ಕಲೆಗೆ ಕಲೆ ಸೇರಿಕೊಳ್ಳುವ ಜುಗಲ್ ಬಂಧಿ ತರ ಕಾಣುತ್ತಿತ್ತು ನನಗೆ.
ಅವತ್ತು ಅವತ್ತು ಮಾಡಿಸಿದ ಶನಿದೇವರ ಕಥೆ ನಿಜವಾಗ್ಲೂ ಕರಿಬಸವಯ್ಯ ಅವ್ರ ಪ್ರತಿಭೆಗೆ ಹಿಡಿದ ಕನ್ನಡಿಯಂತಿತ್ತು. ಅಲ್ಲಿ ದೇವರ ಆರಾಧನೆ ಅನ್ನೋದಕ್ಕಿಂತ ಶನಿದೇವರ ಕಥೆ ಅನ್ನುವ ಕಲಾತ್ಮಕ ಅಭಿವ್ಯಕ್ತಿಯನ್ನು ಸರ್ವರಿಗೂ ಉಣಬಡಿಸುವ ಸಲುವಾಗಿಯೇ ಕಥಾ ಕಾರ್ಯಕ್ರಮವನ್ನು ಏರ್ಪಡಿಸಿದಂತೆ ನನಗೆ ಕಾಣುತ್ತಿತ್ತು. ನಾನು ನಮ್ಮೂರಿನಲ್ಲಿ ಹೇಳುವಂತೆ ರಾತ್ರಿ ಇಡೀ ಕಥೆ ಹೇಳುತ್ತಾರೇನೋ ಅನ್ಕೊಂಡ್ರೆ ಕರಿಬಸವಯ್ಯ ಅವರು ಸುಮಾರು ಹತ್ತು ಗಂಟೆ ಹೊತ್ತಿಗೆ ಆರತಿ ಮಾಡಿಸಿ ಮಂಗಳ ಹಾಡಿಸಿದರು. ಅಷ್ಟರ ಒಳಗೇ ನೆರದವರಲ್ಲಿ ಅವರು ಭಕ್ತಿರಸವನ್ನು ತುಂಬಿದ ಕೆ. ಬಿ. ಅವರ ಕ್ರಮವನ್ನು ಇಂದಿಗೂ ಮರೆಯಲಾರೆ. ನಡು ನಡುವೆ ಹಾಸ್ಯದ ಚಟಾಕಿಗಳನ್ನು ಹಾರಿಸಿ ಕೇಳುಗರಲ್ಲಿ ಆಸಕ್ತಿಯನ್ನು ಮೂಡಿಸುತ್ತಿದ್ದರು. ಆಗಿಂದ್ದಾಗ್ಗೆ ನಮ್ಮ ಉಮಕ್ಕ ನಮ್ಮ ಉಮಕ್ಕ ಅಂತ ಅಮ್ಮನ ಸಾಧನೆಗಳನ್ನೂ ಸೇರಿ ಕಥೆ ಹೇಳುತಿದ್ದ ಅವರ ನಿರೂಪಣಾ ಕ್ರಮವೇ ತುಂಬಾ ವಿಭಿನ್ನವಾಗಿತ್ತು. ನಮ್ಮೂರಲ್ಲಿ ರಾತ್ರಿ ಇಡೀ ಕೇಳಿದ ಕಥೆಯನ್ನು ಕರಿಬಸವಯ್ಯ ಅವರು ಮೂರು ಗಂಟೆಯಲ್ಲಿ ಮುಗಿಸಿ ಬೆಂಗಳೂರಿನ ಜನರ ಸಮಯದ ಅಭಾವಕ್ಕೆ ಹೊಂದಿಕೊಂಡಿತ್ತು.
ಇಷ್ಟರ ನಡುವೆ ಅಮ್ಮ ಈ ಕಥೆಯನ್ನು ಕರಿಬಸವಯ್ಯ ಅವರಿಗಾಗಿಯೇ, ಅವ್ರ ಕಥೆ ಹೇಳುವ ಅಭಿವ್ಯಕ್ತಿಗಾಗಿಯೇ ಮಾಡಿಸುತ್ತಿದ್ದಾರೆ ಅಂತ ಅನೇಕ ಸಲ ನನಗೆ ಅನ್ನಿಸಿದೆ. ಕಲೆಯ ಕುಟುಂಬವೇ ಹೀಗೆ. ಅದರಲ್ಲೂ ರಂಗಭೂಮಿಯಿಂದ ಬಂದ ಕಲಾವಿದರು ಎಂದಿಗೂ ತುಂಬಾ ತಾಂತ್ರಿಕ ಆಗುವುದೇ ಇಲ್ಲ. ಈ ಕಲೆ ಅನ್ನೋದೇ ಹೀಗೆ ತನ್ನ ಹೊಲವನ್ನು ತಾನೇ ಉತ್ತಿಬಿತ್ತಿಕೊಂಡು ಫಲ ಎಲ್ಲರಿಗೂ ಧಾರಳವಾಗಿ ಕೊಡುತ್ತೆ. ಅಮ್ಮ ಕೆ.ಬಿ. ಅವರಿಗೆ ನನ್ನನ್ನು ತುಂಬಾ ಆಪ್ತವಾಗಿ ಪರಿಚಯಿಸಿದರು. ಅವರು ನಮ್ಮ ಉಮಕ್ಕ ಅಂತ ಅದೆಷ್ಟು ವಿನಯ ಮತ್ತು ವಿನೀತರಾಗಿ ನನ್ನ ಬಳಿ ಮಾತಾಡಿದ್ರು ಅಂದ್ರೆ ಅದನ್ನು ಹೇಳಲು ಹೊರಟರೇ ಭಾವನೆಗಳಿಗಳೆಲ್ಲಾ ಮಂಕು ಹಿಡಿದುಬಿಡ್ತಾವೆ. ಅವರಿಬ್ಬರ ಪರಸ್ಪರ ಆಪ್ತತೆ ಮತ್ತು ಒಬ್ಬರಿಗೊಬ್ಬರು ಕೊಟ್ಟಿಕೊಳ್ಳುತ್ತಿದ್ದ ಗೌರವ ಕಂಡು ಇಂದು ನಂಗೆ ಅನ್ನಿಸುವುದು ಒಬ್ಬ ರಂಗ ಕಲಾವಿದ ಆದ್ರೆ ಮಾತ್ರ ಈ ಸಂಸ್ಕಾರ ಬರುತ್ತೆ ಅಂತ ದಟ್ಟವಾಗಿ ಅನ್ನಿಸಿದೆ. ಈ ಖುಷಿಯಲ್ಲಿ ಕೆ.ಬಿ ಅವರು ಮತ್ತು ಅಮ್ಮ ಅಭಿನಯಿಸದ ಸಿನೆಮಾಗಳು ಒಂದೊಂದಾಗಿ ಕಣ್ಣ ಮುಂದೆ ಬರ ತೊಡಗಿದವು. ಆ ಸಿನೆಮಾಗಳಲ್ಲಿ ಅವರಿಬ್ಬರ ಅಭಿನಯದ ದೋಣಿಯಲ್ಲಿ ನಾನು ವಿಹರಿಸೋಕೆ ಶುರು ಮಾಡಿದೆ. ಅದು ಕೊಟ್ಟಿದ್ದು ತುಂಬಾ ಸುಂದರವಾದ ಅನುಭೂತಿ.
ಹೀಗೆ ಕರಿಬಸವಯ್ಯನವರು ಮಾಡುತ್ತಿದ್ದ ಶನಿಮಾದೇವರ ಕಥೆ ಪ್ರತಿ ಅಮ್ಮನ ಮನೆಯಲ್ಲಿ ವರ್ಷ ಮುಂದುವರೆಯುತ್ತಿತ್ತು. ಪ್ರತಿ ವರ್ಷ ಹೋಗುತ್ತಿದ್ದೆ. ವರ್ಷದಿಂದ ವರ್ಷಕ್ಕೆ ಅವರ ಕಥೆ ಹೇಳುವ ಕ್ರಮವನ್ನು ಕೇಳೋದು ಅಂದ್ರೆ ನನಗೆ ಎಲ್ಲಿಲ್ಲದ ಖುಷಿ ಇತ್ತು. ಆದ್ರೆ ಕಳೆದ ಎರಡು ವರ್ಷದಿಂದ ಕರಿಬಸವಯ್ಯನವರು ಹೋದಮೇಲೆ ಅಮ್ಮನ ಮನೆಯಲ್ಲಿ ಶನಿಮಾದೇವರ ಕಥೆ ನಡೆಯಲಿಲ್ಲ. ಅಮ್ಮ ಎಷ್ಟೋ ಸಲ ತನ್ನ ಆಪ್ತ ಕಲಾವಿದರಿಗೆಲ್ಲಾ ರಾತ್ರಿ ಹೊತ್ತು ಪ್ರಯಾಣಿಸಬೇಡಿ ಅಂತ ಹೇಳೋದನ್ನು ನಾನೂ ಸಹ ಅನೇಕ ಸಲ ಕೇಳಿದ್ದೇನೆ. ಕೆ. ಬಿ. ಅವರಿಗೂ ಕೂಡ ಇದೇ ಮಾತನ್ನು ಅಮ್ಮ ಎಷ್ಟೋ ಸಲ ಹೇಳಿದ್ದರು. ಆದ್ರೂ ವಿಧಿಯು ತಾನು ಹೆಣೆದ ಕಥೆಯನ್ನು ತಪ್ಪದೇ ನಮ್ಮೆಲ್ಲರಿಗೂ ಹೇಳಿಬಿಟ್ಟಿತು. ಕೆ.ಬಿ. ಅವರ ಅಭಿನಯವಾಗಲಿ ಅಥವಾ ಶನಿಮಾತ್ಮನ ಕಥೆ ಕೇಳುವ ಯೋಗವಾಗಲಿ ಇನ್ನೂ ಮುಂದೆ ಇಲ್ಲದ ಹಾಗೆ ಆಯಿತು. ಇವತ್ತು ಕರಿಬಸವಯ್ಯ ಸರ್ ನೀವು ಇರಬೇಕಿತ್ತು ನಿಜಕ್ಕೂ. ನೀವೂ ಖುಷಿ ಪಡ್ತಿದ್ರಿ. ಅಮ್ಮ ಕೂಡ ತುಂಬಾ ಖುಷಿ ಪಡ್ತಿದ್ರು. ಬಿರಾದರ್ ಅವರ ಜೊತೆ ನಿಮ್ಮನ್ನೂ ನಾವು ಕಲಾಕ್ಷೇತ್ರದಲ್ಲಿ ನೋಡಬಹುದಿತ್ತು. ಕಪ್ಪು ಹಾಡು, ಕಥೆ, ಬಣ್ಣ ಅಭಿವ್ಯಕ್ತಿ ಎಲ್ಲವೂ ಇನ್ನೂ ಒಂದಷ್ಟು ತನ್ನ ಅರ್ಥವನ್ನು ಹಿಗ್ಗಿಸಿ ಕೊಳ್ಳುವುದನ್ನು ನಾವು ಚಪ್ಪಾಳೆ ಹೊಡೀತಾ ಕಣ್ಣಲ್ಲಿ ಆನಂದದ ಹನಿ ತುಂಬಿಕೊಂಡು ನೋಡಬಹುದಿತ್ತು. ನೀವೂ ನಿಮ್ಮ ಉಮಕ್ಕ ಗೂಟದ ಕಾರಲ್ಲಿ ಓಡಾಡುವ ಕ್ಷಣವನ್ನು ನೋಡಿ ಹೆಮ್ಮೆ ಪಡಬಹುದಿತ್ತು. ಅಮ್ಮ ಮಂತ್ರಿ ಆದಮೇಲೆ ಶನಿಮಾದೇವರ ಕಥೆ ಹೇಳಿಸಿದ್ರೆ ಕಥೆ ಮುಗಿದ ಮೇಲೆ ಸಚಿವೆಗೆ ಜೈಕಾರ ನಮ್ಮಿಂದ ನೀವು ಹಾಕಿಸಬಹುದಿತ್ತು. ವಿ ಮಿಸ್ ಯೂ ಕೆ.ಬಿ.ಸರ್ …..
 

‍ಲೇಖಕರು G

15 February, 2015

ನಿಮಗೆ ಇವೂ ಇಷ್ಟವಾಗಬಹುದು…

11 Comments

  1. ಲಲಿತಾ ಸಿದ್ಧಬಸವಯ್ಯ

    ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ ರಘು, ಶ್ರೀ.ಕರಿಬಸವಯ್ಯನವರ ಶನಿಕಥೆ ಬಗ್ಗೆ ಕೇಳಿದ್ದೆ, ಇಲ್ಲಿ ಅನುಭವಿಸಿದ ಹಾಗಾಯಿತು.ಈ ಶನಿಕಥೆ ಓದಿಸುವವರ ಮನೆಗಳಲ್ಲಿ ನಡೆವ ಸರಬರಾಯಿ ಹೇಳಲಾಸವಲ್ಲ,ಇತ್ತೀಚೆಗೆ ಇದಕ್ಕೆ ಮೈಕು ಹಾಕಿಸುವ ಕುಸಂಪ್ರದಾಯ ಶುರುವಾಗಿದೆ.ನಾವಂತೂ ಯಾರ ಮನೆಯಲ್ಲಿ ಓದಿಸಿದರೂ ಸೈ ಹೋಗಿ ಕೂತುಬಿಡುತ್ತಿದ್ದೆವು. ಅದರಲ್ಲಿ ಮಂಚದಕಾಲಿನ ಮರದ ಹಂಸಕ್ಕೆ ಜೀವ ಬಂದು ಮುತ್ತಿನಸರ ನುಂಗುವ ದೃಶ್ಯ ಒಂದಿದೆ ನೋಡಿ, ಅದನ್ನ ನಮ್ಮ ಕಡೆಯ ಹರೆಪ್ಪದಾಸರು ಬಹಳ ಭಾವುಕರಾಗಿ ವರ್ಣಿಸುತ್ತಿದ್ದರು.ಕಲೆತಿದ್ದ ಮುಕ್ಕಾಲು ಜನವರ್ಗ ಅದೇರೀತಿ ತಮ್ಮ ಮೇಲೆರಗಿದ ಅಕಾರಣ ಕಷ್ಟಗಳನ್ನು ನೆನೆದು ಆಗ ಅಳುವದು ಸಾಮಾನ್ಯ. ಈಗಲೂ ಆ ವಿಕ್ರಮರಾಯನ ಕೈಕಾಲು ಕತ್ತರಿಸುವ ಸನ್ನಿವೇಶಕ್ಕೆ ದಾಸರು ತುಂಬುತ್ತಿದ್ದ ನಾಟಕೀಯತೆ ನನ್ನ ಕಿವಿಗಳಲ್ಲಿದೆ. ನೀವು ಬಳಸಿರುವ ‘ತಂಟ’ ಈ ಪದ ಪ್ರಯೋಗ ನನ್ನನ್ನು ನಮ್ಮೂರಿಗೆ ದರದರ ಎಳೆದುಕೊಂಡು ಹೋಯಿತು. ಇದರ ಶಿಷ್ಠರೂಪ “ತಂಬಿಟ್ಟು” ಎನ್ನುವುದು ನಮಗೆಲ್ಲ ಗೊತ್ತಾಗಿದ್ದು ಪಿಯೂಸಿಗೆ ಬಂದ ಮೇಲೆ! ಅಲ್ಲೀತನಕ ತಂಟಕ್ಕೆ ಅದೆಷ್ಟು ಗಂಟುಬಿದ್ದಿದ್ದೆವೆಂದರೆ ತಂಟದ ಸೋರೆ ಖಾಲಿಯಾದದ್ದೆ ಪತ್ತೆಗೊಡುತ್ತಿರಲಿಲ್ಲ ದೊಡ್ಡವರಿಗೆ. ಶಿವರಾತ್ರಿ ಬಂತೆಂದರೆ ಎಲ್ಲರ ಮನೆಯಲ್ಲೂ ತಂಟದ ಘಮ.ಸೇರುಗಟ್ಟಲೆ ಕಡ್ಲೆಬೀಜ,ಆ ಎಳ್ಳು,ಆ ಗಂಗಡಲೆ ಅಕ್ಕಿ (ಇದರ ಶಿಷ್ಠರೂಪ ಗಂಧಸಾಲೆ ಅಕ್ಕಿ ಅಂತ ಗೊತ್ತಾಗಿದ್ದೂ ಇತ್ತೀಚೆಗೆ!)ಹುರಿವ ಆ ನರುಗಂಪು ಬೀದಿ ತುಂಬಾ ಗಿಡುಗುತ್ತಿತ್ತು. ನೋಡಿ ಒಂದು ಪದಕ್ಕೆ ಒಂದು ಸಂಸ್ಕೃತಿಯನ್ನೆ ಹಿಡಿದುಕೊಳ್ಳುವ ಶಕ್ತಿ ಅದ್ಯಾರು ಕೊಟ್ಟರೂಂತ. ನಿಮ್ಮ ಆ ಶೇತಮ್ಮನ್ನ ಅದೇನು ಪುಣ್ಯ ಮಾಡಿ ಸೊಸೆ ಮಾಡಿಕೊಂಡರೊ ಉಮಕ್ಕ. ಒಳ್ಳೆ ಅತ್ತೆ-ಸೊಸೆ ಜೋಡಿ.

  2. ರಮೇಶ್ ನೆಲ್ಲಿಸರ

    ನಿಜ,ಕರಿಬಸವಯ್ಯ ಸರ್ ಇರಬೇಕಿತ್ತು…

  3. ಬೆಳ್ಳಾಲ ಗೋಪೀನಾಥ ರಾವ್

    ನೆನಪೊಂದೇ …ಈಗ
    ಅವರ ಇನ್ನೊಂದು ರೂಪ ತೋರಿಸಿದಿರಿ..
    ವಿಡಿಯೋ ಅಥವಾ ಅಡಿಯೋ ಇದೆಯಾ ಸರ್..?

  4. ಋತಊಷ್ಮ

    ನೆನಪುಗಳು… ಎಲ್ಲ ಕ್ಷಣಕ್ಷಣದ ನೆನಪುಗಳನ್ನು ಅಚ್ಚುಕಟ್ಟಾಗಿ ನಮ್ಮೊಂದಿಗೆ ಹಂಚಿಕೊಳ್ಳುತ್ತಿರುವಲ್ಲಿ ಇದೊಂದು ಅದ್ಭುತ ಪ್ರಸಂಗ.

  5. ಉಮಾಶ್ರೀ

    ಕರಿಯ ಅಂದಾಗಲೆಲ್ಲ ಓ ಎನ್ನುವ ಜೀವ ಸಹ್ರೃದಯ ಅಕ್ಕಯ್ಯ ಅಂತ ಮನ ತುಂಬಿ ಕರೆಯುತ್ತಿದ್ದ ತಮ್ಮ ನಮೊಂದಿಗಿಲ್ಲ ನನ್ನ ಹಿತೈಷಿ ನಾನು ಯಾರ ಸಾವಿಗಾದರು ವಿಚಲಿತಳಾಗಿ ಅನೇಕ ದಿನ ಮರೆಯಲಾಗದೆ ಮನಸ್ಸು ನೋವು ಅನುಭವಿಸಿದ್ದರೆ ಆ ಜೀವಗಳು ಒಂದು ನನ್ನ ತಂದೆ ಇನೊಂದು ಕರಿಯ ಅಣ್ಣ ತಮ್ಮಂದಿರರಿಲ್ಲದೆ ಹುಟ್ಟಿದ್ದ ನನಗೆ ನಿಜ ಅರ್ಥದಲ್ಲಿ ತಮ್ಮನಾಗಿ ನನ್ನ ನೋವುಗಳಿಗೆ ಸ್ಪಂದಿಸಿದ ಮೊದಲನೆಯವನು ಮತ್ತು ಅವನೇ ಕಡೆಯವನು

  6. Lakshmi

    ಇಡೀ ಚಿತ್ರ ಕಣ್ಣ ಮುಂದೆ ಬಂದತಿದೆ…. ಬರಹ ನಮ್ಮೆದುರೇ ಬಂದು ನಿರೂಪಿಸುತ್ತಿದೆ ಅನ್ನಿಸುತ್ತಿದೆ. ಕರಿಬಸವಯ್ಯ ಮತ್ತು ಉಮಾಶ್ರೀ ಅವರ ವ್ಯಕ್ತಿತ್ವ ಮತ್ತಷ್ಟು ತಿಳಿದಂತಾಯಿತು.. ಧನ್ಯವಾದಗಳು ಅವಧಿಗೆ.

  7. ಉಮಾಶ್ರೀ ಅಭಿಮಾನಿಗಳ ಬಳಗ, ತೇರದಾಳ

    ಅಮ್ಮಾವ್ರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಒಳ್ಳೇ ಅವಕಾಶ. ಕರಿಬಸವಯ್ಯ ಅವರು ಶನಿಮಾದೇವರ ಕಥೆ ಹೇಳುತ್ತಾರೆ ಅಂತ ಗೊತ್ತಾಗಿದ್ದು ಈಗಲೇ. ನಮ್ಮ ತೇರದಾಳ ಉಮಾಶ್ರೀ ಅವರನ್ನು ಪಡೆದದ್ದು ಒಂದು ಸೌಭಾಗ್ಯ. ಅವರ ಬಗ್ಗೆ ಬರೆದ ಬರಹಗಾರರಿಗೂ ಮತ್ತು ಅವಧಿ ಪತ್ರಿಕೆಗೂ ಅನಂತ ನಮನಗಳು.

  8. ಲಲಿತಾ ಸಿದ್ಧಬಸವಯ್ಯ

    ಅರೆರೆ ಉಮಕ್ಕ ಕೂಡಾ ಪ್ರತಿಕ್ರಿಯಿಸಿದ್ದಾರೆ! ಆ ಪಾಟಿ ಕೆಲಸದ ನಡುವೆ ಈ ಕೆಲಸವೂ,, ಗ್ರೇಟ್ ಉಮಕ್ಕ. ಕರಿಬಸವಯ್ಯನವರ ಬಗ್ಗೆ ಅವರು ಇಟ್ಟಿರುವ ಈ ವಾತ್ಸಲ್ಯ ಕಲಾವಿದರ ನಡುವೆ ಸ್ಪರ್ಧೆಯೊ, ವೃತ್ತಿಮಾತ್ಸರ್ಯವೊ,ಅಸಹನೆಯೊ ವ್ಯಕ್ತವಾಗುವದನ್ನೆ ಕಂಡ ನನ್ನಂಥ ಕೇವಲ ಪ್ರೇಕ್ಷಕರಿಗೆ ಬಹಳ ಸಮಾಧಾನ ಅನ್ನಿಸುತ್ತೆ.

  9. Dheeraj Jain

    umasri ammana moolaka halavaru athyabhutha kalamanigalla utthamavada gunagala prichaya nimma ankanada moolaka agide…..nija ide ondu athyunnnatha baravanigeya udaharane…..bari namma maneyannu belagisuva deepavagabaradu adu ellara mansaau hagu maneyannu belaguva deepvagabeku..idu nimma ankanadalli moodi bandide

  10. ಬೇಲೂರು ರಘುನಂದನ್

    ಅಮ್ಮಾ ನೀವೂ ಬಿಡುವು ಮಾಡಿಕೊಂಡು ಅವಧಿ ಓದಿ ಪ್ರತಿಕ್ರಿಯಿಸಿದ್ದೀರಿ. ಏನು ಮಾತಾಡಬೇಕೋ ತಿಳಿಯುತ್ತಿಲ್ಲ. ಲಲಿತಾ ಮೇಡಂ ಪ್ರತಿವಾರ ತಪ್ಪದೇ ಓದಿ ನನ್ನ ಬರಹಕ್ಕೆ ಬೆನ್ನು ತಟ್ಟುತ್ತಿದ್ದೀರಿ. ಪ್ರತಿವಾರ ಅನೇಕ ಓದುಗರು ತಮ್ಮ ಅಭಿಪ್ರಾಯಗಳನ್ನ ಬರೆಯುತ್ತಿದ್ದೀರಿ. ಫೋನ್ ಮಾಡಿ ಮಾತಾಡುತ್ತಿದ್ದೀರಿ. ಬರೆದವನಿಗೆ ಇಷ್ಟು ಸಾಕು ಮತ್ತೇನು ಬೇಡ. ಇವೆಲ್ಲಾ ಜವಾಬ್ದಾರಿಯನ್ನು ಕೂಡ ಹೆಚ್ಚಿಸಿದೆ. ಅವಧಿಗೆ ತುಂಬು ಮನಸಿನ ಧನ್ಯವಾದಗಳು….

  11. ಮಮತ

    ಮತ್ತೊಮ್ಮೆ ಹೊಟ್ಟೆಕಿಚ್ಚು, ನಿಮ್ಮ ತಂಗಿ ಬಗ್ಗೆ ನಮಗಿರೋ ಅಕ್ಕರೆ ಬಗ್ಗೆ … 🙂 ಬಾಲ್ಯದ ಅಥವಾ ಮನೆಯಲ್ಲಿ ನಿರಂತರವಾಗಿ ನಡೆಯೋ ಯಾವುದೇ ಕಾರ್ಯಗಳು ಭಾವನಾತ್ಮಕವಾಗಿ ಬೆಸೆದುಕೊಂಡಿರುತ್ವೆ. ಕೆ.ಬಿ. ರವರ ಹರಿಕತೆ ಚಿತ್ರಣನ ಕಣ್ಣಿಗೆ ಕಟ್ಟೋ ಹಾಗೆ ವರ್ಣಿಸಿದೀರಿ. ತಡವಾಗಿ ಓದಿದೆ ಈಅಂಕಣನ.. ಕಾರ್ಯದೊತ್ತಡ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading