
ನಾನು ಉತ್ತರಹಳ್ಳಿಲ್ಲಿ ಬಾಡಿಗೆ ಮನೇಲಿ ಇದ್ದಾಗ ಉಮಾಶ್ರೀ ಅವರು ಮೈಸೂರು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಎಂ.ಎ ( ರಾಜ್ಯಶಾಸ್ತ್ರ ) ಕಟ್ಟಿದ್ರು. 2009 ನೇ ಸಾಲು ಅದು. ನನಗಿನ್ನು ಸರ್ಕಾರಿ ಕೆಲಸ ಸಿಕ್ಕಿದ ಹೊಸತು. 2008 ರ ವಿಧಾನಸಭಾ ಚುನಾವಣೆಯಲ್ಲಿ ಅವರು ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಿ ತುಂಬಾ ಕಡಿಮೆ ಅಂತರದಿಂದ ಸೋಲನ್ನಪ್ಪಿದ್ದರು. ಸೋತರೂ ಕೂಡ ತಮ್ಮ ವಾಸ್ತವ್ಯವನ್ನು ಅವರು ಬೆಂಗಳೂರಿಗೇನು ಸ್ಥಳಾಂತರಿಸಲಿಲ್ಲ. ಉಮಾಶ್ರೀ ಅವ್ರು ಅಲ್ಲೇ ಇದ್ದು ಸೋಲಿಗೆ ಕಾರಣಗಳನ್ನು ಹುಡುಕುತ್ತಾ ತಳ ಮಟ್ಟದಲ್ಲಿ ಪಕ್ಷ ಸಂಘಟನೆ ಕಡೆ ಪೂರ್ತಾ ನಿಗಾ ವಹಿಸಿದ್ರು. ಈ ಕಡೆ ಬೆಂಗಳೂರಿನ ಮನೆ, ಮಗ, ಸೊಸೆ, ಮೊಮ್ಮಗಳು, ಎಲ್ಲಾ ಅವರವರ ಪಾಡಿಗೆ ರಥ ಚಾಲೂ ಮಾಡ್ತಿದ್ರು. ಹೀಗೆಲ್ಲಾ ಇರುವಾಗ ಬರುವ ಚುನಾವಣೆಗೆ ಒಂದಿಷ್ಟು ಓದಿದರೆ ರಾಜಕೀಯದ ಕೆಲಸಗಳಿಗೆ ಉಪಯೋಗ ಆದೀತು ಅಂತಲೇ ಎಂ.ಎ ಕಟ್ಟಿದ್ರು ಅನ್ನಿಸುತ್ತೆ. ಅದಕ್ಕಿಂತ ಹೆಚ್ಚಾಗಿ ಅವರಿಗೆ ಓದಿನಲ್ಲೂ ತೀರಾ ಹೆಚ್ಚಿನ ಆಸಕ್ತಿ ಇತ್ತು ಬಿಡಿ. ಯಾಕಂದ್ರೆ ಅವರ ಮನೆಯ ಪುಸ್ತಕಗಳ ಸಂಗ್ರಹ ನೋಡಿದ್ರೆ ಅವರ ವ್ಯಕ್ತಿತ್ವವನ್ನು ತಿಳ್ಕೋಬಹುದು ಹಾಗಿತ್ತು. ಅವರ ಪುಸ್ತಕದ ಕಪಾಟಿನಲ್ಲಿ ಸಾಹಿತ್ಯ, ರಂಗಭೂಮಿ, ವಿಜ್ಞಾನ, ಆಹಾರ, ಆರೋಗ್ಯಕ್ಕೆ ಸಂಭಂದಿಸಿದ ಪುಸ್ತಕಗಳ ರಾಶಿಯೇ ಇದಾವೆ. ಇಷ್ಟೆಲ್ಲಾ ಓದಿನ ಆಸಕ್ತಿ ಇರುವ ಉಮಾಶ್ರೀ ಪಿ.ಜಿ. ಮಾಡೋಕೆ ಹೊರಟಿದ್ದು ನಂಗೆ ಹೆಚ್ಚು ವಿಶೇಷ ಏನೂ ಅನ್ನಿಸಲಿಲ್ಲ. ಆದ್ರೆ ಅವರು ಪರೀಕ್ಷೆಗಾಗಿ ಓದಿದ ಪರಿ ಮಾತ್ರ ಬಹು ವಿಶೇಷ ಅನ್ನಿಸ್ತು. ಇರಲಿ ಉಮಾಶ್ರೀ ಅವರು ರಾಜ್ಯಶಾಸ್ತ್ರದಲ್ಲಿ ಎಂ.ಎ ಪರೀಕ್ಷೆ ತೆಗೆದು ಕೊಂಡಾಗ ಅವರಿಗೆ ಐವತ್ನಾಲ್ಕು ವರ್ಷ.
ಸರಿ ಪರೀಕ್ಷೆ ಏನೋ ತೆಗೆದುಕೊಂಡರು ಆದ್ರೆ ಓದಲು ಅವರಿಗೆ ಚೂರೂ ಸಮಯವಿರಲಿಲ್ಲ. ಆದ್ರೆ ಬಿಡುವಿರದ ಒತ್ತಡದ ನಡುವೆ ಓದಬೇಕೆಂಬ ಅದಮ್ಯ ಆಸೆ ಮಾತ್ರ ಅವರನ್ನು ಕಾಡುತ್ತಲೇ ಇತ್ತು. ಯಾವಾಗ ಫೋನ್ ಮಾಡಿದ್ರೂ ಪರೀಕ್ಷೆಗೆ ಓದಲಿಲ್ಲ ಮಗಾ ಅಂತ ಗೋಳಾಡೋರು. ಆಗ ಮತ್ತೆ ಅಲ್ಲೊಂದು ಇಲ್ಲೊಂದು ಸಿನೆಮಾ, ಒಂಚೂರು ಕಿರುತೆರೆ ಅಂತ ಮತ್ತೆ ತೊಡಗಿಸಿಕೊಂಡಿದ್ರು. ಅದೂ ಅವರ ಬದುಕಿನ ಶೇಕಡಾ ಹತ್ತರಷ್ಟು ಮಾತ್ರ. ಉಳಿದ ತೊಂಬತ್ತು ಭಾಗ ಪೂರ್ತಿ ಅವರ ಗಮನ ಎಲ್ಲಾ ತನ್ನ ಮತಕ್ಷೇತ್ರವೇ ಆಗಿತ್ತು. ಕಟ್ಟುವಲ್ಲಿ ಆಕೆ ಗಟ್ಟಿಗಿತ್ತಿ. ಅದಕ್ಕೆ ಅಲ್ಲಿಂದ ರಾತ್ರಿ ಟ್ರೈನ್ ಹತ್ತಿ ಬೆಳಗ್ಗೆ ಇಲ್ಲಿ ಇಳಿದು ಸಂಜೆ ತನಕ ಶೂಟಿಂಗ್ ಮುಗಿಸಿ ಮತ್ತೆ ರಾತ್ರಿ ರೈಲಿಗೆ ಮನೆಗೂ ಹೋಗದೇ ಪುಟಾಣಿ ಮೊಮ್ಮಗಳನ್ನೂ ನೋಡಿ ಮಾತಾಡಿಸದೇ ವಾಪಸ್ ಹೋದ ಅದೆಷ್ಟೋ ಉದಾಹರಣೆಗಳುಂಟು. ಎಷ್ಟೋ ಸಲ ಬೆಂಗಳೂರಿನ ಮನೆಯನ್ನು ತನ್ನ ನಿತ್ಯದ ಒತ್ತಡದ ಬದುಕಿನಲ್ಲಿ ಮರೆತೇ ಹೋಗಿರ್ತಿದ್ರು. ಒಮ್ಮೊಮ್ಮೆ ತಿಂಗಳಲ್ಲಿ ಮೂರ್ನಾಲ್ಕು ಸಲ ಬೆಂಗಳೂರಿಗೆ ಬಂದ್ರೂ ಮನೆಗೇ ಹೋಗಿರ್ತಿರಲಿಲ್ಲ. ಅದೆಲ್ಲಾ ಇರಲಿ ಈಗ ನೇರ ವಿಷ್ಯಕ್ಕೆ ಬರ್ತೀನಿ. ಇಷ್ಟು ಒತ್ತಡದ ಬದುಕಿನಲ್ಲಿ ಉಮಾಶ್ರೀ ಅವರು ಪರೀಕ್ಷೆ ತಗೊಂಡು, ಓದಿ, ಬರೆದು ಏನಾದ್ರೂ ಕಲಿಕೆ ಆಗುತ್ತಾ ಅನ್ನೊದು ನನ್ನ ಕುತೂಹಲವಾಗಿತ್ತು. ಇದರಾಚೆಗೆ ಅವರ ಬದುಕಿನ ಅನುಭವವೇ ದೊಡ್ಡದು ಬಿಡಿ. ಅವರಿಗಿರೋ ರಾಜಕೀಯ ಮತ್ತು ಸಾಂಸ್ಕೃತಿಕ ಒತ್ತಡದಲ್ಲಿ ಓದೋಕೆ ಬರೆಯೋಕೆ ಅವರಿಂದ ಆಗಲ್ಲ ನೇರ ಪರೀಕ್ಷೆಗೆ ಹೋಗಿ ಜನರಲ್ ಉತ್ತರಗಳನ್ನು ಬರೆದು ಬರುತ್ತಾರೆ ಅಂದುಕೊಂಡಿದ್ದೆ.
ಹೀಗಂದುಕೊಂಡಿದ್ದಾಗ ನಾನು ಸೂಲಿಬೆಲೆ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ಅವತ್ತು ಮಧ್ಯಾನ್ಹ ಊಟ ಮುಗಿಸಿ ನನ್ನ ಪ್ರೀತಿಯ ಸ್ನೇಹಿತರಾದ ಶ್ರೀವರ್ಷ ಅವರ ಹತ್ತಿರ ಅದೂ ಇದೂ ಲೋಕಾವರಿ ಮಾತಾಡುತ್ತಿದ್ದಾಗ ಉಮಾಶ್ರೀ ಅವರು ಫೋನ್ ಮಾಡಿ, ‘ನಿಮ್ಮನೆಗೆ ಸಂಜೆ ಮನೆಗೆ ಬೇಗ ಬಂದುಬಿಡೋ ನಾನ್ ಬರ್ತಿದ್ದೀನಿ’ ಅಂದ್ರು. ನಾ ಯಾಕೆ ಅಂತ ಕೇಳೋ ಅಷ್ಟರಲ್ಲಿ ಫೋನ್ ಇಟ್ಟಿದ್ದರು. ಸರಿ ನಾ ಅವರು ಬರೋ ಹೊತ್ತಿಗೆ ಮನೆ ಸೇರಿ ಬಿಡೋಣಾ ಅಂತ ಪ್ರಿನ್ಸಿಪಾಲರ ಅನುಮತಿ ಕೇಳಿ ಬೇಗ ಹೊರಟೆ. ಎನ್ ಬೇಗ ಹೊರಟ್ರೂ ಹೊಸಕೋಟೆ, ಕೆ.ಆರ್. ಪುರಂ. ಎನ್.ಜಿ.ಎಫ್, ಕಾರ್ಪೋರೇಶನ್, ಪದ್ಮನಾಭನಗರ, ಉತ್ತರಹಳ್ಳಿ ಇದು ನನ್ನ ನಿತ್ಯದ ರಾಜಮಾರ್ಗ. ಹೋಗೋದು ಬರೋದು ಎಲ್ಲಾ ಬಸ್ಸಲ್ಲೇ. ಅಯ್ಯಪ್ಪಾ ಎನ್ ಜಿ.ಎಫ್ ಟ್ರಾಫಿಕ್ಕು ಎಂಟು ಜನ್ಮದ ಹಿಂದಿನ ಶತ್ರೂಗೂ ಬೇಡ. ಇರಲಿ ಈ ಮಹಾ ಮಾರ್ಗದಲ್ಲಿ ಹೊರಟು ಅವತ್ತು ಮನೆ ಸೇರೋ ಹೊತ್ತಿಗೆ ಏಳು ಗಂಟೆ ಆಗೋಗಿತ್ತು. ಉಸ್ಸಪ್ಪಾ ಅಂತ ಮನೆಗೆ ಬಂದೆ. ಉಮಾಶ್ರೀ ಅವರು ನಮ್ಮನೆಗೆ ಆಗಲೇ ಬಂದು ರೂಮನಲ್ಲಿ ನೈಟಿ ಹಾಕ್ಕೊಂಡು ಕೂತುಬಿಟ್ಟಿದ್ದರು. ಅವರು ಬರೋದು ಹೋಗೋದು ಎಲ್ಲಾ ಇತ್ತು. ಆದ್ರೆ ನಮ್ಮನೇಲಿ ಯಾವಾಗ್ಲೂ ಉಳೀತಿರಲಿಲ್ಲ. ಒಂದೇ ಊರು. ಅವರ ಮನೆಗೂ ನಮ್ಮನೆಗೂ ಆಟೋಲಿ ಹದಿನೈದು ನಿಮಿಷದ ದಾರಿ ಉಳಿಯೋದಾದ್ರೂ ಯಾಕೆ ಹೇಳಿ ?. ಆದ್ರೆ ಅವತ್ತು ಉಮಾಶ್ರೀ ಅವರು ನೈಟಿ ಹಾಕಿ ನಮ್ಮನೇಲಿ ಇದ್ದದ್ದನ್ನು ನೋಡಿ ನಂಗೆ ಆಶ್ಚರ್ಯ ಮತ್ತು ಖುಷಿ ಎರಡೂ ಆಯಿತು. ಆ ದಿನ ನಮ್ಮನೇಲೆ ಉಳಿತಾರೆ ಅನ್ನುವ ವಿಷಯವನ್ನು ನಾನೇ ನಿಶ್ಚಯ ಮಾಡಿಕೊಂಡೆ. ಸರಿ ಅವರನ್ನು ಎಂದಿನಂತೆ ಉಭಯ ಕುಶಲೋಪರಿ ವಿಚಾರಿಸಿ, ಸೀದಾ ಅಡುಗೆ ಮನೆಗೆ ಹೋದೆ. ನನ್ನ ಹೆಂಡತಿ ಹತ್ರ ಹೋಗಿ ಅಡುಗೆ ಎನ್ ಮಾಡುತ್ತೀಯ ಅಂದಿದ್ದಕ್ಕೆ ಅವಳು ನೀವು ಬರೋದನ್ನೇ ಕಾಯುತ್ತಿದ್ದೆ ಅಂದ್ಲು. ಸರಿ ನಾ ಓಡೋಗಿ ನಾಟಿ ಕೋಳಿ ತಂದು ಸಾರು ಮಾಡಿ ತಂದು ಮೊಟ್ಟೆ ಬೇಯಿಸ್ದೆ. ಅವರಿಗೆ ಅಂದು ತುಂಬಾ ಸುಸ್ತಾಗಿತ್ತು. ಹಾಗೇ ಗೋಡೆಗೆ ಒರಗಿ ಕೂತು ಮೌನವನ್ನು ಅನುಭವಿತಿದ್ರು. ಊಟ ಗೀಟ ಎಲ್ಲಾ ಆದ ಮೇಲೆ ‘ನೋಡಪ್ಪ ಸರಿಯಾಗಿ ಇನ್ನೊಂದು ತಿಂಗಳಿಗೆ ನನಗೆ ಪರೀಕ್ಷೆ. ನಾಳೆ ಬೆಳಿಗ್ಗೆಯಿಂದ ನೀನ್ ಮೇಷ್ಟ್ರು ನಾ ಸ್ಟೂಡೆಂಟ್. ಪರೀಕ್ಷೆ ಬರೆದು ಹೆಚ್ಚಿನ ಅಂಕ ತಗೋಬೇಕು. ಬೆಳಿಗ್ಗೆ ಸಂಜೆ ನಿನ್ನ ಸಮಯವನ್ನು ನಂಗೆ ಕೊಡಬೇಕು’ ಅಂದ್ರು. ನಾನು ತಲೆಯಾಡಿಸಿದೆ. ತಕ್ಷಣ ನಾನು ನಿಮ್ಮ ಜೀವನದ ಅನುಭವದ ಮುಂದೆ ನಾನೆಲ್ಲಿಯ ಮೇಷ್ಟ್ರು ನಿಮಗೆ. ನೀವೇ ಸಿಲಬಸ್ ಇಟ್ಕೊಂಡು ಓದುತ್ತಾ ಹೋಗಿ. ನಿಮಗೆ ಎಲ್ಲಾ ಅರ್ಥ ಆಗುತ್ತೆ ಅಂದೆ. ‘ನಾನೂ ಓದುತ್ತೇನೆ, ಆದ್ರೆ ನೀನೂ ನನ್ನ ಜೊತೆ ಇರಬೇಕು’ ಅಂದ್ರು. ನಾ ಆಯಿತು ಎಂದು ತಲೆಯಾಡಿಸಿದೆ.

ಮಾರನೇ ದಿನ ಬೆಳಿಗ್ಗೆ ಭಾನುವಾರ. ಅವರಿಗೆ ಕಾಫೀ ಕೊಡಲು ಹೋದಾಗ ಅವರ ತಿಂಗಳಿಗೆ ಆಗುವಷ್ಟು ಬಟ್ಟೆ ಬರೆ ಮತ್ತು ಇತರೇ ಲಗೇಜ್ ತಂದಿದ್ದನ್ನು ನೋಡಿದೆ. ಪುಸ್ತಕ, ಪೆನ್ನು, ಪ್ಯಾಡು ಜೊತಗೆ. ಅವನ್ನೆಲ್ಲಾ ಒಂದು ಪುಟಾಣಿ ರೂಂನಲ್ಲಿ ಅವರಿಗೆ ಇಟ್ಟುಕೊಳ್ಳಲು ಜಾಗ ಮಾಡಿಕೊಟ್ಟೆ. ಆ ರೂಂಗೆ ಅಟ್ಯಾಚ್ ಬೇರೆ ಇರಲಿಲ್ಲ. ಆ ರೂಂಗೆ ಮಾತ್ರ ಅಲ್ಲಾ, ನಾವಿದ್ದ ಮನೆಗೆ ಇದ್ದದ್ದೇ ಕಾಮನ್. ನನಗೇ ಒಳಗೊಳಗೆ ಕಸಿವಿಸಿ ಸಂಕಟ. ಇವರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲು ಆಗುತ್ತಿಲ್ಲವಲ್ಲ ನನ್ನ ಬಳಿ ಎಂದು. ನನ್ನ ಮುಜುಗರವನ್ನು ಗಮನಿಸಿ ಇವೆಲ್ಲಾ ತಲೇಲಿ ಇಟ್ಕೋಬೇಡ ನಾ ಓದೋಕೆ ಬಂದಿರೋದು ಅದು ಬಿಟ್ಟು ಬೇರೆ ಯಾವ ಯೋಚನೆ ಮಾಡಬೇಡ ಅಂದ್ರು. ನಾನೂ ಆಯಿತು ಅಂದೆ.
ಓದು ಆರಂಭಿಸುವ ಮೊದಲು ಅವರು ಮಾಡಿದ ಕೆಲಸ ಅವರ ಮೊಬೈಲ್ ಸ್ವಿಚ್ ಆಫ್ ಮಾಡಿಬಿಟ್ಟರು. ಆಮೇಲೆ ಒಟ್ಟು ಸಿಲಬಸ್ ಕಾಪಿ ಇಟ್ಟುಕೊಂಡು ಇಬ್ಬರೂ ಸೇರಿ ಎಲ್ಲವನ್ನು ಓದಿ ತಯಾರಾಗುವ ತರ ಒಂದು ವೇಳಾ ಪಟ್ಟಿಯನ್ನು ಹಾಕಿದೆವು. ಅದ್ರಲ್ಲಿ, ಓದು, ಬರಹ, ಊಟ, ನಿದ್ದೆ, ಚರ್ಚೆ ಹೀಗೆ ಅನೇಕ ಭಾಗಗಳಿದ್ದವು. ಆದ್ರೆ ಪರೀಕ್ಷೆ ಓದಿಗೆ ಅವರ ಆ ಒಂದು ತಿಂಗಳ ಓದಿನಲ್ಲಿ ಸಿಂಹಪಾಲಿತ್ತು. ಹಾಸಿಗೆ ಮೇಲೆ ಓದಿದ್ರೆ ಮಲಗೋ ಹಾಗೆ ಆಗುತ್ತೆ ಅಂತ ತಿಂಗಳಿಡೀ ಒಂದು ಚಾಪೆ ದಿಂಬಿನಲ್ಲಿ ಕಾಲ ಹಾಕಿದ್ರು. ಊಟ ಉಪಚಾರ ಕೂಡ ಪೂರ್ತಿ ಪಥ್ಯ. ಹೆಚ್ಚು ಕ್ಯಾಲರಿಯ ಊಟ ತಿಂಡಿ ತಿನ್ನುತ್ತಿರಲಿಲ್ಲ. ಹಸಿ ತರಕಾರಿ, ಒಂದಿಷ್ಟು ಹಣ್ಣು, ಒಂದೆರಡು ಮೊಟ್ಟೆಯ ಬಿಳಿಭಾಗ, ಹಾಲು ಇಷ್ಟರಲ್ಲೇ ಒಂದೊಂದು ದಿನ ಕಾಲ ಹಾಕ್ತಿದ್ರು. ಅದೆಷ್ಟೋ ಸಲ ಊಟ ಗೀಟ ಎಲ್ಲಾ ಮರೆತು ಓದಿನಲ್ಲಿ ತಲ್ಲೀನರಾಗಿಬಿಡ್ತಿದ್ರು. ಅವರಿಗೆ ಪರೀಕ್ಷೆ ಮುಗಿಯೋ ತನಕ ಟಿ.ವಿ. ಎತ್ತಿಟ್ಟು ಬಿಟ್ಟಿದ್ವಿ.
ಸಿದ್ಧಗೊಂಡಿರುವ ವೇಳಾಪಟ್ಟಿಯ ಯೋಜನೆಯಂತೆ ಬೆಳಗಿನ ಜಾವ ಐದು ಗಂಟೆಗೆ ಉಮಾಶ್ರೀ ಅವರು ಎದ್ದುಬಿಡೋರು. ಓದುತ್ತಾ ಓದುತ್ತಾ ಮುಖ್ಯ ಮುಖ್ಯವಾದ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳಿ ಅಂದಿದ್ದೆ. ಹಾಗೂ ಓದಿದ ನಂತರ ಆ ವಿಷಯಕ್ಕೆ ಸಂಭಂದಿಸಿದ ಎಲ್ಲಾ ಮುಖ್ಯಾಂಶಗಳನ್ನು ಬರೆಯಿರಿ ಅಂದಿದ್ದೆ, ಬುಲೆಟ್ ಪಾಯಿಂಟ್ಸ್ ಕಾಣೋ ರೀತಿ ಅವರಿದ್ದ ಕೋಣೆಗೆ ಒಂದು ಪುಟ್ಟ ನೋಟೀಸ್ ಬೋರ್ಡ್ ಕೂಡ ಹಾಕಿದ್ವಿ. ಅದನ್ನೂ ಕೂಡ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ರು. ಹೀಗೆ ಅವರು ಪರೀಕ್ಷೆ ಓದು ಮತ್ತು ತಯಾರಿಗೆ ಸಂಭಂದಿಸಿದ ಯಾವ ಮಾತುಗಳನ್ನು ತೆಗೆದುಹಾಕದೇ, ಓದಿ ಬರೆದು ಟಿಪ್ಪಣಿ ಮಾಡಿಟ್ಟುಕೊಳ್ಳೋರು. ಒಮ್ಮೊಮ್ಮೆ ಜೋರಾಗಿ ಓದಿಕೊಳ್ಲೋರು. ಎಷ್ಟರ ಮಟ್ಟಿಗೆ ಅಂದ್ರೆ ನಮ್ಮನೆ ಮೇಲಿದ್ದ ಆ ಮನೆಯಾ ಓನರ್ ಉಷಾ ದರ್ಶನ್ ಅವರು ಕೆಳಗಿಳಿದು ಬಂದು ಇವರ ಓದು ಬರಹದ ಶೈಲಿ ನೋಡಿ ದಂಗಾಗಿ ಹೋಗಿದ್ದರು ಕೂಡ. ಒಟ್ಟು ಉಮಾಶ್ರೀ ಅವರು ಬೆಳಿಗ್ಗೆ ಓದೋಕೆ ಶುರು ಮಾಡಿದ್ರೆ ರಾತ್ರಿ ಎಂಟಕ್ಕೆ ಮುಗಿತ್ತಿತ್ತು. ಪರೀಕ್ಷಾ ಯಜ್ಞಕ್ಕೆ ಬೇಕಾದ ಓದಿನ ಹವಿಸ್ಸು ಕೊಡೋದನ್ನು ನಿಲ್ಲಿಸೋ ಹೊತ್ತಿಗೆ ಒಂದು ಲೋಟ ಹಾಲು ಕುಡಿದು, ಒಂದು ಮೊಟ್ಟೆ ತಿಂದು ಮಲಗಿ ಬಿಡೋರು.
ನಾ ಕಾಲೇಜಿಂದ ಬಂದ ಕೂಡಲೇ ಬೆಳಗಿನಿಂದ ಓದಿದ್ದನ್ನೆಲ್ಲಾ ನನ್ನೆದುರು ಹೇಳಿ. ಅದಕ್ಕೆ ಸಂಭದಿಸಿದ ಅಂಶಗಳನ್ನೆಲ್ಲಾ ಹೇಳಿ, ಬರೆದದ್ದನ್ನೆಲ್ಲಾ ತೋರಿಸಿ, ಕೆಲ ಗೊಂದಲವಿದ್ದ ಅಂಶಗಳನ್ನು ಹಾಗೆ ಇಟ್ಟುಕೊಂಡು ಸಂಜೆ ಇಬ್ಬರೂ ಸೇರಿ ಚರ್ಚಿಸುತ್ತಿದ್ದೆವು. ಚಿಕ್ಕ ಮಕ್ಕಳ ತರ ಮತ್ತೆ ಮಲಗೋ ಹೊತ್ತಿಗೆ ಇನ್ನೊಮ್ಮೆ ಎಲ್ಲವನ್ನು ಪುನರಾವರ್ತನೆ ಮಾಡಿ ಮಲಗುತ್ತಿದ್ದರು ಉಮಾಶ್ರೀ ಅವರು. ಹಿಂಗೇ ನಾವಂದುಕೊಂಡಂತೆ ಇಡೀ ಸಿಲಬಸ್ ಮುಗಿಸುವಲ್ಲಿ ಶೇಕಡಾಎಪ್ಪತ್ತು ಯಶಸ್ವಿ ಆದ್ವಿ. ಕೆಲ ವಿಷಯಗಳು ನನಗೂ ಗೊತ್ತಾಗುತ್ತಿರಲಿಲ್ಲ. ನಾನೋ ಸಾಹಿತ್ಯದ ವಿದ್ಯಾರ್ಥಿ. ಇನ್ನ ರಾಜ್ಯಶಾಸ್ತ್ರ ನಾ ಪಿ.ಯು.ಸಿ ಯಲ್ಲಿ ಓದಿದ್ದು ಎಷ್ಟೋ ಅಷ್ಟೇ. ಆದ್ರೂ ಓದಿಕೊಂಡು ಚರ್ಚಿಸೋಕೆ ಅಡ್ಡಿ ಇರಲಿಲ್ಲ. ಹೀಗೆ ನಾ ಹೊಸದಾಗಿ ಓದಿಕೊಂಡೇ ಎಷ್ಟೋ ವಿಷಯಗಳನ್ನು ಗಂಟೆಗಟ್ಟಲೆ ಚರ್ಚಿಸಿದ್ದೇವೆ . ಒಮ್ಮೊಮ್ಮೆ ರಾತ್ರಿ ಒಂದಾದರೂ ಸೈಯ್ಯೇ. ತೀರಾ ಗೊತ್ತಾಗದ್ದಿದ್ದ ವಿಷಯಗಳನ್ನು ಮುಕ್ತ ವಿ. ವಿ ಯಾ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾದ ಸುರೇಶ್ ಅವರ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಒಟ್ಟು ಅವರ ಜೊತೆಗೆ ನಾನೂ ಸಂವಿಧಾನ , ರಾಷ್ಟ್ರೀಯ, ಅಂತರಾಷ್ಟ್ರೀಯ ನೀತಿಗಳು, ಸರ್ಕಾರ, ಕಾನೂನು, ಥಾಟ್, ಪ್ಲೇಟೋ, ಅರಿಸ್ಟಾಟಲ್, ಕಾರ್ಲ್ಮಾಕ್ಸ್, ಹೀಗೇ ಎಷ್ಟೆಲ್ಲಾ ಕಲ್ತಿದ್ದೆ. ಆದ್ರೆ ನೆನಪಿನಲ್ಲಿ ನಂಗೆ ಉಳಿದಿದ್ದು ಕಡಿಮೇನೇ. ಆದ್ರೆ ಉಮಾಶ್ರೀ ಅವರೊಟ್ಟಿಗಿನ ಒಂದೂ ಕಾಲು ತಿಂಗಳ ಒಡನಾಟ ಮಾತ್ರ ಕೊಟ್ಟಿದ್ದು ಅನೇಕ ನನಗೆ.
ಪರೀಕ್ಷೆ ದಿನ ಹತ್ತಿರ ಬಂದಿತ್ತು. ಪರೀಕ್ಷಾ ಓದಿನ ತಯಾರಿ ಚೆನ್ನಾಗಿಯೇ ಆಗಿತ್ತು. ಪರೀಕ್ಷೆ ಚಾಮಾರಾಜಪೇಟೆಯ ಆಸ್ಟಿನ್ ಕಾಲೇಜಿನಲ್ಲಿತ್ತು. ಪರೀಕ್ಷೆ ದಿನ ಬೇಗ ಎದ್ದು ಮಾಡಿಕೊಂಡಿದ್ದ ಟಿಪ್ಪಣಿಗಳನ್ನೆಲ್ಲಾ ಎಲ್ಲಾ ತಿರುವಿ ಹಾಕಿ ಪರೀಕ್ಷೆಗೆ ಹೋಗ್ತಿದ್ರು. ಸಂಜೆ ನಾ ಕಾಲೇಜು ಮುಗಿಸಿಕೊಂಡು ಬರುವ ಹೊತ್ತಿಗೆ ಅವರೂ ಬಂದು ಮುಂದಿನ ಪರೀಕ್ಷೆಗೆ ತಯಾರಾಗುತ್ತಾ ಕೂತಿರುತಿದ್ರು. ನಾ ಬಂದದನ್ನು ಗಮನಿಸಿ ಪ್ರೆಶ್ನೆ ಪತ್ರಿಕೆಯನ್ನು ಕೈಗಿಟ್ಟು ಬರೆದ ಉತ್ತರವನ್ನು ಒಪ್ಪಿಸುವುದಿದೆಯಲ್ಲಾ ಅವರ ಓದಿನ ಬಗೆಗಿನ ಕಾಳಜಿ ಮತ್ತು ಆಸ್ಥೆಯನ್ನು ಸೂಚಿಸುತ್ತಿತ್ತು. ಕೊನೆಗೆ ಇಬ್ರೂ ಸೇರಿ ಇಷ್ಟು ಅಂಕ ಅಷ್ಟು ಅಂಕ ಬರತ್ತೆ ಅಂತ ಮಾತಾಡಿಕೊತಿದ್ದಿದ್ದನ್ನು ನೆನಸಿಕೊಂಡ್ರೆ ತಮಾಷೆ ಅನ್ನಿಸುತ್ತೆ ಈಗ. ಆದ್ರೆ ಅಂದು ಅವರು ಬರೆದ ಉತ್ತರಗಳನ್ನು ಹೇಳುತ್ತಾ ಹೇಳುತ್ತಾ ಅವರ ಮುಖದಲ್ಲಾಗುತ್ತಿದ್ದ ಬದಲಾವಣೆಯನ್ನೂ ತೋರಿದ ಆತ್ಮವಿಶ್ವಾಸವನ್ನು ಇಂದಿಗೂ ಮರೆಯಲಾರೆ.
ಎಲ್ಲಾ ಪರೀಕ್ಷೆಗಳು ಮಗಿಯುವ ಹೊತ್ತಿಗೆ ಉಮಾಶ್ರೀ ಅವರು ನಮ್ಮ ಮನೆಗೆ ಒಗ್ಗಿ ಹೋಗಿದ್ರು. ಸುಮಾರು ಒಂದೂ ಕಾಲು ತಿಂಗಳು ನಮ್ಮ ಮನೆಯಲ್ಲಿದ್ದರು. ಅಷ್ಟೂ ದಿನ ಓದು ಬರಹ ಚರ್ಚೆ ಇವಿಷ್ಟೇ. ಎಲ್ಲಾ ಪರೀಕ್ಷೆಗಳು ಚೆನ್ನಾಗಿ ಬರೆದಿದ್ದೇನೆ ಒಂದರವತ್ತು ಪರ್ಸೆಂಟ್ ಬಂದ್ರೆ ಪಿ.ಎಚ್,ಡಿ ಮಾಡಬೇಕು ಕಣೋ. ನನಗೆ ಗೌರವ ಡಾಕ್ಟರೇಟ್ ಬೇಡ. ಜಯಮಾಲ ಅವರ ತರಹ ಮಹಿಳೆ ಮತ್ತು ರಾಜಕಾರಣ ಅನ್ನುವ ವಿಷಯವನ್ನು ಕುರಿತು ಇಂದಿರಾಗಾಂಧಿ, ಸೋನಿಯಾ, ಮೋಟಮ್ಮ, ಜಯಲಲಿತಾ, ಮಮತಾ ಬ್ಯಾನರ್ಜಿ ಹೀಗೆ ಅನೇಕ ಮಂದಿ ಮಹಿಳಾ ರಾಜಕಾರಣಿಗಳನ್ನೆಲ್ಲಾ ಒಳಗೊಂಡಂತೆ ಅಧ್ಯಯನ ಮಾಡುತ್ತೇನೆ ಅಂದಿದ್ರು. ಅಂದು ಅವರು ಹೇಳಿದ ಮಾತುಗಳನ್ನು ನೆನೆದಾಗ ಮೊನ್ನೆ ಮೊನ್ನೆ ಅವರು ಆಸಕ್ತಿಯಿಂದ ಪಿ.ಎಚ್.ಡಿ ಮಾಡಲು ಹೊರಟಾಗ ಮಾಡಿದ ಅವಾಂತರಗಳಿಂದ ಕುರಿತಂತೆ ಬೇಸರವಾಗುತ್ತದೆ. ಯಾಕಂದ್ರೆ ಇತ್ತೀಚಿಗೆ ಪಿ.ಎಚ್.ಡಿ ಸೀಟಿಗಾಗಿ ವೈವ ದಿನದಂದು ಬೆಳಗಿನ ಜಾವಾ ನಾಲ್ಕರರಿಂದ ಅಗತ್ಯವಾದ ರಿಸರ್ಚ್ ಮೆಥಡಾಲಜಿ ಬಗೆಗೆ ತಿಳಿದು ಕೊಳ್ಳಲು ಸುಮಾರು ಎರಡು ಗಂಟೆ ಫೋನ್ ಮಾಡಿ ಚರ್ಚಿಸಿದರು. ಈ ವಿಷಯವನ್ನು ತನ್ನ ಓದಿನ ಆಸಕ್ತಿಗೆ ಮಂತ್ರಿಯಾಗಿ ಲಾಬಿ ಮಾಡಿದ್ದಾರೆ ಅನ್ನುವ ಆರೋಪದಿಂದ ತುಂಬಾ ನೊಂದಿದ್ದರು. ಆದ್ರೆ ಎಲ್ಲೂ ಅವರು ತಮ್ಮ ನೋವನ್ನು ಬಹಿರಂಗ ಪಡಿಸುತ್ತಿರಲಿಲ್ಲ. ತಾಳಿಕೊಳ್ಳುವ ಗುಣ ಅವರಿಂದ ಕಲಿಬೇಕು ನೋಡಿ. ಇದೇ ಸಂಭಂದ ಒಂದು ದೊಡ್ಡ ವಾಟ್ಸ್ ಆಪ್ ಕನ್ನಡದಲ್ಲಿ ಟೈಪ್ ಮಾಡಿ ಕಳಿಸಿದ್ದರು. ಅದನ್ನು ಓದಿ ನನ್ನ ಕಣ್ಣು ತೇವ ಆಗಿದ್ದವು, ಇಡೀ ಅವರ ಓದಿನ ಆಸಕ್ತಿ ಗೊತ್ತಿದ್ದ ನಂಗೆ ಅವರ ಆ ಮೆಸೇಜ್ ತುಂಬಾ ನೋವನ್ನು ಕೊಟ್ಟಿತ್ತು. ಆಮೇಲೆ ಆ ಸಂದೇಶ ತುಂಬಾ ಮೌಲಿಕವಾಗಿತ್ತು ಕೂಡ. ಅದನ್ನು ಸೇವ್ ಮಾಡಲು ಹೋಗಿ ನಾ ಡಿಲೀಟ್ ಮಾಡಿಬಿಟ್ಟಿದ್ದೆ. ಆಮೇಲೆ ಅವರ ಮೊಬೈಲ್ನಿಂದ ಸೇವ್ ಮಾಡಿಕೊಳ್ಳೋಕೆ ಹೋಗಿ ಅಲ್ಲೂ ಡಿಲೀಟ್ ಮಾಡಿಬಿಟ್ಟೆ. ಅಮ್ಮಾ ಸಾರಿ ಅಂತೇಳಿ ನೀವೇ ಅನೇಕ ಪಿ.ಎಚ್. ಡಿ ಗಳಿಗೆ ವಸ್ತು. ನಿಮ್ಮ ಅನುಭವ, ಕಲೆ, ನಾಟಕ, ಸಾಕವ್ವ, ಪುಟ್ಮಲ್ಲಿ ಪಾತ್ರಕ್ಕೆ ಜನ ವಿಶ್ವ ವಿದ್ಯಾಲಯ ಈಗಾಗಲೇ ಡಾಕ್ಟರೇಟ್ ಕೊಟ್ಟುಬಿಟ್ಟಿದೆ. ನೀವೀಗ ಡಾ. ಉಮಾಶ್ರೀ . M.A in Political Science (ph,d) ಅಮ್ಮಾ ಅಂದುಬಿಟ್ಟೆ, ಮತ್ತೆ ಮುಂದೊಂದು ದಿನ ಯಾವುದಾದರು ವಿಶ್ವ ವಿದ್ಯಾಲಯದಿಂದ ಸಚಿವ ಸ್ಥಾನ ಮುಗಿದ ಮೇಲೆ ಸಂಶೋಧನೆ ಮಾಡಿವಿರಂತೆ ಅಂದು ಸಮಾಧಾನ ಮಾಡಿದೆ. ನಾ ಸಮಾಧಾನ ಮಾಡೋದಿರಲಿ ಅವರೇ ಅಷ್ಟು ಹೊತ್ತಿಗೆ ಸಮಾಧಾನ ಮಾಡಿಕೊಂಡು ಆಗೋ ಕೆಲಸದ ಕಡೆ ಗಮನ ಕೊಡುತ್ತಿದ್ದರು. ಅವರೇ ನನಗೆ ಬೇಜಾರು ಮಾಡಿಕೊಳ್ಳಬೇಡ ಅಂದು ಹೇಳಿ ಅವತ್ತು ಫೋನ್ ಇಟ್ಟಿದ್ದರು.
ಇರಲಿ ಪರೀಕ್ಷೆ ಎಲ್ಲಾ ಆದ ಮೇಲೆ ಉಮಾಶ್ರೀ ಅವರು ತಮ್ಮ ಮನೆಗೆ ಹೊರಡಲು ತಯಾರಾದ್ರು. ಹೋಗೋ ದಿನ ಮೊಬೈಲ್ ಆನ್ ಮಾಡಿದ್ರು. ನನಗೋ ಅವರನ್ನು ಕಳಿಸಿಕೊಡೋಕೆ ಸಂಕಟ. ಇನ್ನೇನು ಮಾಡಲು ಆಗುತ್ತೆ ಅಂದುಕೊಂಡು ಅವರನ್ನು ಬೀಳ್ಕೊಟ್ಟೆ. ಒಂದೆರಡು ದಿನ ಬಿಟ್ಟು ಒಂದೊಳ್ಳೆ ಮಿಕ್ಸಿಯನ್ನು ನಾ ಕಾಲೇಜಿಂದ ಬರುವ ಹೊತ್ತಿಗೆ ತಂದಿಟ್ಟು ಹೋಗಿದ್ರು. ಆಗ ನಮ್ಮನೆಯಲ್ಲಿದ್ದ ಡಕೋಟಾ ಮಿಕ್ಸಿ ಶಬ್ದ ಜೋರಾಗಿ ಮಾಡ್ತಿತ್ತು. ಅವರು ಓದುವಾಗ ಯಾವಾಗಾಲಾದ್ರು ಈ ಮಿಕ್ಸಿ ತೊಂದ್ರೆ ಕೊಟ್ಟಿರಬಹುದು. ಅದಕ್ಕೆ ಇದನ್ನೆಲ್ಲಾ ಗಮನಸಿ ಮಿಕ್ಸಿಯನ್ನು ತಂದಿಟ್ಟು ಹೋಗಿದ್ರು ಅನ್ನಿಸುತ್ತೆ. ಬೇಡ ಅನ್ನೋಕೆ ನನಗೆ ಯಾವ ಬಾಯೂ ಇರಲಿಲ್ಲ. ಕೆಲವೊಮ್ಮೆ ಪ್ರೀತಿಗಳು ಯಾವ ಯಾವ ರೂಪದಲ್ಲಿ ಇರತ್ತೋ ಅನ್ನೋದು ಹೇಳೋಕೆ ಆಗಲ್ಲ. ನಾವು ಅತಿಯಾಗಿ ಪ್ರೀತಿಸೋವರು ಕೊಡೋ ವಸ್ತುಗಳು ಕೂಡ ಅಷ್ಟೇ ಪ್ರೀತಿಯನ್ನು ಸ್ಪುರಿಸುತ್ತಿರುತ್ತವೆ ಅಲ್ವಾ ?
ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ರಾಜ್ಯಶಾಸ್ತ್ರದಲ್ಲಿ ಎಂ ಎ ಮಾಡಿದ್ದು

ರಘು, ನಿಮ್ಮ ಬರಹ ಬಹಳ ಆರ್ದ್ರವಾಗಿದೆ. ಉಮಕ್ಕ ನಮ್ಮ ಕಡೆ ಹೆಣ್ಣುಮಗಳು. ಹೆಡ್ ಲೈನ್ ಓದಿದ ಮೇಲೆ ಬಿಡೋಕೆ ಆಗೋದೆ ಇಲ್ಲ ನೋಡಿ. ಅವರ ಪಿಹೆಚ್ ಡಿ ಹಳವಂಡವಾದಾಗಲೆ ನಾನಂದುಕೊಂಡಿದ್ದೆ, ಎಂತೆಂಥ ಘೋರವನ್ನೆ ಏಕಾಂಗಿ ಎದುರಿಸಿದ ಮಹಿಳೆ ಈ ಜುಜುಬಿ ಡಿಗ್ರಿಗೆ ತಾರಾತಿಗಡಿ ಏಕೆ ಮಾಡಾರು ಅಂತ. ಜನ ಹೀಗೇ
ಮೇಲೇರಿದವರನ್ನು ನೋಡಿದರೆ ಕಣ್ಣು ಉರಿಯಾಗುತ್ತವೆ. ಮುಂದೊಂದು ದಿನ ಅವರು ಡಾಕ್ಟರೇಟ್ ಓದಿಯೇ ಪಡೆಯುತ್ತಾರೆ ನೋಡ್ತಿರಿ. ಜಯಮಾಲಾ ಮತ್ತು ಉಮಾಶ್ರೀ ಅವರ ಈ ಓದಿನ ಹಂಬಲ ಹೆಣ್ಣುಮಕ್ಕಳಿಗೆ ನಿಜವಾದ ಆದರ್ಶ ಅಂತ ನನಗನ್ನಿಸುತ್ತೆ.
Umashree will inspire many women to take up education, if they have discontinued for any reason…
raghunandhan nimma bhrvanige, vichar mandane, apthathe hidisithu nammellara mecchin doodda kalavidyeya saralathe thumbaista aythu nimma bhravanige niranthravgirali
ಉಮಾಶ್ರೀ ಅವರು ಎಲ್ಲರಿಗೂ ಸ್ಪೂರ್ತಿ…
Umasri amma u r really a great person..we respect you and wish u very all the best..Sir you are really lucky person who got an opportunity to teach amma..great…………….this edition also came up very well..looking forward for next edition