ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ಮತ್ತು ಮಗ ಏನೂ ಹೇಳದೇ ಹೊರಟುಬಿಟ್ಟರು


ಕಾಯಿಸದೇ ಉಮಾಶ್ರೀ ಅವರು ಸರಿಯಾದ ಸಮಯಕ್ಕೆ ಬಂದ್ರು. ನನ್ನ ತಂಗಿ ರೂಮಿನಲ್ಲಿ ಸುಮ್ಮನೇ ಕೂತಿದ್ದಳು. ಕನ್ನಡಿ ಅವಳನ್ನೇ ನೋಡುತ್ತಿತ್ತು. ಅವಳು ಏನೇನನ್ನೋ ಬಿಂಬಿಸಿಕೊಳ್ಳುತ್ತಿರುವಂತೆ ಮುಖಭಾವ ಕಂಡಿತು. ಗಾಬರಿ, ಆತಂಕ, ಭಯ ಎಲ್ಲಾ ಅವಳ ಕೈಲಿದ್ದ ಕರ್ಚಿಫ್ ನೋಡಿಯೇ ನನಗೆ ಗೊತ್ತಾಗುತ್ತಿತ್ತು. ಉಮಾಶ್ರೀ ಅವರು ಬಂದು ಕೂತೊಡನೆ ಹುಡುಗಿ ಕರ್ಕೊಂಡು ಬನ್ನಿ ಅಂದ್ರು. ನಾ ಹೋಗಿ ಧೈರ್ಯದಿಂದ ಬಂದು ಸೋಫಾ ಮೇಲೆ ಕುತ್ಕೊಳಮ್ಮ, ಕಾಫಿ ಮತ್ತು ಸಿಹಿಯನ್ನು ಚೂಡತ್ತಿಗೆ ಕೊಡುತ್ತೆ ಅಂದೆ. ಅವಳ ಸಮ್ಮತಿ ತುಂಬಾ ದೀನವಾಗಿತ್ತು. ಅಕಸ್ಮಾತ್ ಅವರು ಒಪ್ಪಿ ಬಿಟ್ಟರೆ ನನ್ನ ಅಣ್ಣನಿಗೆ ಮದುವೆ ಮಾಡಲು ಕಷ್ಟ ಆಗುತ್ತೆ. ಅದಕ್ಕೆ ಬೇಕಾಗೋ ಹಣ ಎಲ್ಲಿ ತರ್ತಾನೆ ಅನ್ನೋ ತಾಯ್ತನದ ಆತಂಕ ನನಗೆ ಮಾತ್ರ ಅವಳ ಕಣ್ಣುಗಳಲ್ಲಿ ಕಾಣುತ್ತಿತ್ತು. ಆದ್ರೆ ಆ ಸಂದರ್ಭದಲ್ಲಿ ನಾ ಏನೂ ಮಾತಾಡದೇ ನಾ ನಿನ್ನ ಬದುಕಿನುದ್ದಕ್ಕೂ ಇರುತ್ತೇನೆ ಅನ್ನುವ ವಿಷಯವನ್ನು ಮೌನದ ಭಾಷೆ ಮತ್ತು ಕಣ್ಣಿನ ನೋಟದಲ್ಲಿ ಹೇಳಿ ಉಮಾಶ್ರೀ ಅವರು ಇದ್ದೆಡೆ ನನ್ನ ತಂಗಿಯನ್ನು ಕರ್ಕೊಂಡು ಬಂದೆ.
ಚೂಡತ್ತಿಗೆ ಕಾಫಿ ಕೊಡುವುದಕ್ಕಿಂತ ಮುಂಚೆ ಶೇತಮ್ಮನ ಹತ್ತಿರ ನೀರು ಕೊಡಿಸಿದರು. ನೀರು ಕುಡಿದ ಕೂಡ್ಲೇ ‘ಶ್ವೇತಾ ಪರೀಕ್ಷೆಗಳು ಯಾವಾಗಮ್ಮ?’ ಅಂದ್ರು. ಇವಳು ‘ಇನ್ನೂ ದಿನಾಂಕ ಗೊತ್ತಾಗಿಲ್ಲಮ್ಮ’ ಅಂದ್ಲು. ‘ನೋಡಮ್ಮ ನಮ್ಮನೆಯಲ್ಲಿ ನನಗೆ ನನ್ನ ಮಗ, ನನ್ನ ಮಗನಿಗೆ ನಾನು ಇಬ್ಬರೇ. ಶ್ವೇತ ನನಗೆ, ನನ್ನ ಮಗನಿಗೆ ತಾಯಾಗಲು ಒಪ್ಪಿಗೆ ಏನಮ್ಮಾ? ನಮ್ಮನೇನಾ, ನಮ್ಮನ್ನು ಕಾಪಾಡ್ತೀಯ ತಾಯಿ’ ಅಂದ್ರು. ತಾತ್ವಿಕವಾದ ಈ ಪ್ರೆಶ್ನೆಗೆ ತಕ್ಷಣಕ್ಕೆ ಏನು ಉತ್ತರ ಕೊಡಬೇಕು ಅಂತ ಅವಳಿಗೆ ಗೊತ್ತಾಗದೇ ತಲೆ ಅಲ್ಲಾಡಿಸಿ ನನ್ನನ್ನು ನೋಡಿದಳು. ಉಮಾಶ್ರೀ ಅವರೂ ನನ್ನನ್ನೇ ನೋಡಿದರು. ‘ನಿಮ್ಮಿಬ್ಬರ ಪ್ರೀತಿ ಮತ್ತು ಹೊಂದಾಣಿಕೆ ಎಷ್ಟಿದೆ ಅಂತ ಅವಳು ನಿನ್ನನ್ನೇ ನೋಡುವುದನ್ನು ನೋಡಿದ್ರೆ ಗೊತ್ತಾಗುತ್ತೆ ರಘು’ ಅಂದ್ರು. ಆನಂದ ಬಣ್ಣದ ಚೂಡಿದಾರದಲ್ಲಿ ಅಂದು ನನ್ನ ತಂಗಿ ತುಂಬಾ ಸುಂದರವಾಗಿ ಕಾಣುತ್ತಿದ್ದಳು. ಹೇಗೆಂದರೆ ಬೇಲೂರಿನ ಸೌಂದರ್ಯವೆಲ್ಲಾ ಒಟ್ಟಿಗೆ ಬಂದಂತೆ. ಒಂದತ್ತು ನಿಮಿಷ ಶ್ವೇತಳನ್ನೇ ತದೇಕ ಚಿತ್ತದಿಂದ ನೋಡಿದ ಉಮಾಶ್ರೀ ಅವರು ಅವಳ ಬಳಿ ಬೇರೆ ಏನೂ ಮಾತಾಡದೇ ‘ನಿನಗೆ ಕಿರಿಕಿರಿ ಆಗುತ್ತಿದ್ದರೆ ಒಳಗೆ ಹೋಗಮ್ಮ’ ಅಂದ್ರು. ಅವಳು ಒಳಗೆ ಹೋಗೋದಕ್ಕಿಂತ ಮುಂಚೆ ಅವರು ‘ನನ್ನ ಮಗನನ್ನು ಕರೆಸುತ್ತೇನೆ’ ಅಂದ ಕೂಡ್ಲೇ ನಾ ಶೇತಮ್ಮನ ಮುಖ ನೋಡಿದೆ. ಅವಳ ಮುಖ ಪೂರ್ತಿ ಕೆಂಪಾಗಿತ್ತು. ನನ್ನ ತಂಗಿ ಒಳಗೆ ಹೋದ ತಕ್ಷಣ ಉಮಾಶ್ರೀ ಅವರು ಚೂಡತ್ತಿಗೆಗೆ ‘ಬೇಲೂರ ಶಿಲಾಬಾಲಿಕೆ ಇದ್ದ ಹಾಗಿದ್ದಾಳೆ ಅಲ್ವಾ’ ಅಂದ್ರು. ಚೂಡತ್ತಿಗೆ ಒಪ್ಪಿಗೆಯ ನಗು ನಕ್ಕು ‘ಹೌದು ಮೇಡಂ ಶಿಲಾಬಾಲಿಕೆನೇ, ಕಷ್ಟ ಸುಖ ಗೊತ್ತಿರುವ ಉಳಿ ಪೆಟ್ಟು ತಿಂದಿರೋ ಸಂಸ್ಕಾರವಂತ ಜವಾಬ್ದಾರಿ ಹೆಣ್ಣುಮಗಳು’ ಅಂದ್ರು. ಅದಕ್ಕವರು ‘ಹೌದು ಚೂಡಾ ಅದು ಅವಳ ಮತ್ತು ಅವಳಣ್ಣನ ನಡೆ ನುಡಿಯಲ್ಲೇ ಗೊತ್ತಾಗುತ್ತೆ’ ಅಂದ್ರು.
ಚೂಡತ್ತಿಗೆ, ‘ನಿಮ್ಮ ಮಗನನ್ನು ಕರೆಸಿದ್ದರೆ ರಘು ಮತ್ತು ಶ್ವೇತ ನೋಡುತಿದ್ರು ಮೇಡಂ’ ಅಂದ್ರು. ಅದಕ್ಕವರು ತಲೆಯಾಡಿಸಿ ಅವರ ಮಗನಿಗೆ ತಕ್ಷಣ ಫೋನ್ ಮಾಡಿದರು. ಜೆ.ಪಿ. ನಗರ ಮತ್ತು ಜಯನಗರ ಹತ್ತಿರ ಹತ್ತಿರ ಆಗಿದ್ದರಿಂದ ಹತ್ತು ನಿಮಿಷದೊಳಗೆ ಉಮಾಶ್ರೀ ಅವರ ಮಗ ಬಂದರು. ಇದೇನಪ್ಪಾ ಮದುವೆ ಗಂಡು ಹಿಂಗೆ ಬಂದಿದ್ದಾರಲ್ಲಾ ಅಂದುಕೊಂಡೆ. ಯಾಕಂದ್ರೆ ಗಡ್ಡ ಹಂಗೇ ಇತ್ತು, ಗೋವಾದಲ್ಲಿ ಬೀಚ್ ಹತ್ತಿರ ಮಾರುವ ತೆಂಗಿನ ಮರದ ಚಿತ್ರಗಳಿರುವ ಶರ್ಟ್ ತರದ ಅಂಗಿ ಒಂದು ಸವಕಲು ಜೀನ್ಸ್ ಹಾಕಿದ್ದರು. ನಾನ್ ಇದೇನಪ್ಪಾ ಉಮಾಶ್ರೀ ಅವರ ಮಗ ಇಷ್ಟೊಂದು ಸರಳವಾಗಿ ಬಂದಿದ್ದಾರಲ್ಲಾ ಅಂದುಕೊಂಡೆ. ಆದ್ರೆ ಅವರ ಮುಖದಲ್ಲಿ ಸರಳತೆ ಮತ್ತು ಜೀವನ ಪ್ರೀತಿ ನನಗೆ ಗೊತ್ತಾಗುತ್ತಿತ್ತು. ನನ್ನ ಕಲ್ಪನೆಯ ಹುಡುಗ ನನ್ನ ತಂಗಿಗೆ ಸಿಕ್ಕಿದರು ಅನ್ನುವ ಖುಷಿಗೆ ನನ್ನ ಮೈ ಮನಸುಗಳು ಹಿಡಿಯಾಗಿಬಿಟ್ಟವು. ಅದೊಂತರ ವಿವರಿಸಲಾಗದ ಸಂತೋಷ. ಇಷ್ಟರ ನಡುವೆಯೂ ಇನ್ನೊಂಚೂರು ಎತ್ತರ, ಒಂಚೂರು ಬಣ್ಣ ಇದ್ದಿದ್ರೆ ತುಂಬಾ ಚೆನ್ನಾಗಿತ್ತು ಅಂದುಕೊಂಡೆ. ಆ ವೇಳೆಗೆ ಉಮಾಶ್ರೀ ಅವರು ‘ರಘು ನನ್ನ ಮಗ ಬಾಬು’ ಅಂದ್ರು. ಭಾವನಿಗೆ ಕೊಡಬೇಕಾದ ಎಲ್ಲಾ ತರದ ಗೌರವ ಮರ್ಯಾದೆಗಳು ಆಗಲೇ ಬಂದುಬಿಟ್ಟವು. ನಮಸ್ಕಾರ ಅನ್ನುವಾಗಲೇ ನನ್ನ ಗಂಟಲು ಮನಸು ಮತ್ತು ದೇಹ ತಂಗಿಯನ್ನು ಕೈ ಹಿಡಿಯುವ ಹುಡುಗ ಅಂತ ಗದ್ಗದಿತವಾಗಿತ್ತು. ಆದ್ರೆ ಅತಿ ಭಾವನೆ ಇರೋ ನನ್ನ ಗುಣ ಕೊನೆ ಕರುಣೆಯನ್ನು ಬಯಸುತ್ತಿದ್ದಾರೆ ಅಂದುಕೊಳ್ಳಬಾರದು ಅಂತ ಬುದ್ಧಿ ಮತ್ತೆ ಮತ್ತೆ ಎಚ್ಚರಿಸುತಿತ್ತು. ಸರಿ ನಾನು ನಮಸ್ಕಾರ ಹೇಳಿದ್ದಕ್ಕೆ ಅವರು ಪ್ರತಿಯಾಗಿ ನಕ್ಕರು. ನಗುವೆಂದರೆ ಬುದ್ಧನ ನಗು. ಅಬ್ಬಾ ಅಂದುಕೊಂಡೆ. ಮತ್ತೊಮ್ಮೆ ಹುಡುಗ ಹುಡುಗಿಯನ್ನು, ಹುಡುಗಿ ಹುಡುಗನ್ನು ನೋಡಲು ಅನುವು ಮಾಡಿಕೊಡಲಾಯಿತು. ಮೊದಲ ನೋಟಕ್ಕೆ ಇಬ್ಬರೂ ಒಪ್ಪಿದರು. ಉಮಾಶ್ರೀ ಅವರು ನನಗೆ ಕೇಳಿದರು, “ನನ್ನ ಮಗ ನಿನಗೆ ಒಪ್ಪಿಗೆ ಆಯ್ತಾ? ನಿನ್ನ ತಂಗಿಯನ್ನೂ ಕೇಳಿ ಹೇಳಪ್ಪ” ಅಂದ್ರು.
ನನ್ನ ವಯಸ್ಸು 24. ಮದುವೆಗೆ ಒಪ್ಪಿಗೆ ಸೂಚಿಸುವುದು ಮತ್ತು ಆ ಜವಾಬ್ದಾರಿಯನ್ನು ಹೊತ್ತುಕೊಳ್ಳುವಾಗ ನನ್ನ ಅಪ್ಪನ ದಿವ್ಯ ನಿರ್ಲಕ್ಶ್ಯವನ್ನೂ ಮತ್ತು ನಮ್ಮ ತಾಯಿಯ ಬದುಕಿನುದ್ದಕ್ಕೂ ಉಂಡ ನೋವು ಮತ್ತು ಅಸಹಾಯಕತೆಗಳನ್ನು ನೆನೆದು ಹೆಜ್ಜೆ ಹಿಂದಿಡಬಾರದು. ನನ್ನ ತಂಗಿ ಚೆನಾಗಿದ್ದರೆ ನಾನೂ ನಿರುಮ್ಮಳವಾಗಿ ನೆಮ್ಮದಿಯಾಗಿರುತ್ತೇನೆ. ನನ್ನ ಬದುಕಿನ ಮಹತ್ವದ ಗುರಿಗಳಲ್ಲಿ ಶ್ವೇತಮ್ಮನಿಗೆ ಒಬ್ಬ ಒಳ್ಳೇ ಸಂಗಾತಿಯನ್ನು ಹುಡುಕಿಕೊಡಬೇಕು. ಹಾಗಾಗಿ ಮದುವೆ ಆಗುವ ಹುಡುಗ ಯಾವ ಕಷ್ಟದಲ್ಲೂ ಇರಬಾರದು. 21 ವರ್ಷ ಕಷ್ಟ, ಜವಾಬ್ದಾರಿ, ನೋವು, ಇತ್ಯಾದಿ ಪಟ್ಟ ಪಾಡುಗಳು ಮತ್ತೆ ಮುಂದಿನ ಬದುಕಲ್ಲಿ ಅವಳ ಮುಂದೆ ಬಂದು ನಿಲ್ಲಬಾರದು ಅಂದುಕೊಂಡು, ಅದೆಲ್ಲಿತ್ತೋ ಏನೋ ಧೈರ್ಯ ‘ನನಗೆ ಒಪ್ಪಿಗೆ ಅಮ್ಮಾ’ ಅಂದುಬಿಟ್ಟೆ. ದೊಡ್ದವರನ್ನ ಕೇಳಬೇಕು, ಅವರನ್ನ ಇವರನ್ನ ಕೇಳಬೇಕು ಅಂತ ಅನಿಸಲೇ ಇಲ್ಲ. ಇನ್ನೂ ನಮ್ಮ ಬದುಕನ್ನು ಪೂರ್ತಿ ಪ್ರೀತಿ ಮತ್ತು ಕಾಳಜಿಗಳಿಂದ ಆವರಿಸಿಕೊಂಡಿದ್ದ ನಮ್ಮಜ್ಜಿ ಮತ್ತು ತಾತನನ್ನು ಕೇಳಬೇಕು ಅಂತ ಅನಿಸಿದರೂ ನನ್ನ ನಿರ್ಧಾರದ ಮೇಲೆ ಅವರಿಗೆ ಪೂರ್ತ ಒಪ್ಪಿಗೆ ಮತ್ತು ಧೈರ್ಯ ಮುಂಚಿನಿಂದ ಇದ್ದ ಕಾರಣ, ಊರಿಗೆ ಹೋಗಿ ಅವರಿಗೆ ತಿಳಿಸೋಣ ಅಂದುಕೊಂಡು ಸುಮ್ಮನಾದೆ. ಇನ್ನೂ ನಮ್ಮ ತಾಯಿ ನಾ ಏನು ಮಾಡಿದರೂ ಸೈಯ್ಯೇ . ಹಾಗಾಗಿ ಶೇತಮ್ಮನ ಬದುಕಿನ ಜವಾಬ್ದಾರಿಯನ್ನು ನಾನೇ ನಿಭಾಯಿಸಬೇಕೆಂಬ ಛಲ ಎಚ್ಚರಗೊಂಡಿತು.

ಇಷ್ಟೆಲ್ಲಾ ಆದಮೇಲೆ ನನ್ನ ತಂಗಿಯನ್ನು ಕೇಳಿದೆ. ಹುಡುಗ ಮತ್ತು ಉಮಾಶ್ರೀ ಅವರು ನಿನಗೆ ಒಪ್ಪಿಗೆನಾ ಶೇತಮ್ಮಾ? ಅನ್ನುವಾಗ ನನ್ನ ಕಣ್ಣುಗಳು ತುಂಬಿ ಹೋಗಿದ್ದವು. ಗಂಟಲು ಬಿಗಿಯುತ್ತಿತ್ತು. ಅದೆಂತಾ ಪೊಸೆಸಿವ್ ವ್ಯಕ್ತಿತ್ವ ಅವಳದ್ದು. ತಂಗಿ ತಾಯಾಗುವುದೆಂದರೆ ಹೀಗೆ ಅಲ್ಲವೇ? ಅವಳು ‘ಒಪ್ಪಿಗೆ ಕಣೋ ಆದ್ರೆ, ಲಕ್ಷಾಂತರ ದುಡ್ಡು ಎಲ್ಲಿ ತರ್ತೀಯೋ? ಮನೆ ಪಾಠ ಮಾಡೋ ನಾವು ಎಷ್ಟು ಸಾಲ ಮಾಡೋಕೆ ಆಗುತ್ತೆ ಹೇಳು. ನಾನೇನು ಮದುವೆ ಆಗಿ ಇಲ್ಲಿಗೆ ಬಂದು ಬಿಡುತ್ತೇನೆ. ಆಮೇಲೆ ನಿನ್ ಕಥೆ ಏನೂ ರಘು. ನನ್ನ ಬದುಕಿಗಾಗಿ ನೀನು ಈ ತರ ತಕ್ಷಣದ ನಿರ್ಧಾರ ತಗೋಬೇಡ. ಯೋಚಿಸು ಇನ್ನೂ ಸ್ವಲ್ಪ. ಇಬ್ರೂ ಕೆಲಸಕ್ಕೆ ಹೋಗಿ ಒಂದಷ್ಟು ದುಡ್ಡು ಮಾಡಿಕೊಂಡು ಆಮೇಲೆ ಮದುವೆ ಮಾಡಿಕೋತೀನಿ. ಆದ್ರೇ ಉಮಾಶ್ರೀ ಅವರು ಮತ್ತು ಅವರ ಮಗ ಇಬ್ಬರೂ ನಂಗೆ ಇಷ್ಟ ಆಗಿದ್ದಾರೆ. ಇಷ್ಟ ಆಗಿದ್ದಾರೆ ಅಂತ ನಿನ್ನನ್ನು ಮತ್ತೆ ಕಷ್ಟಕ್ಕೆ ದೂಡಲು ನಂಗೆ ಇಷ್ಟ ಇಲ್ಲ. ಇಷ್ಟು ದಿನ ನೀನು ಅನುಭವಿಸಿದ್ದೇ ಸಾಕು’ ಅಂದ್ಲು.ಅವಳು ಮಾತಾಡುವಾಗ ಸ್ಪಷ್ಟತೆ ಇತ್ತು. ಅವಳೂ ಎಂದೂ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವುಕಳಾಗುತ್ತಿರಲ್ಲಿಲ್ಲ. ನಿಜಕ್ಕೂ ಅತ್ಯಂತ ಜೀವನದ ಪ್ರೇಮ ಮತ್ತು ವಿಶ್ವಾಸವಿದ್ದ ಗಟ್ಟಿ ಹೆಣ್ಣು ಮಗಳು ಆಕೆ. ಎಷ್ಟೋ ಸಲ ನನಗೆ ಮನಸನ್ನು ನಿಯಂತ್ರಿಸುವ ಪಾಠಗಳನ್ನು ಹೇಳುತ್ತಿದ್ದಳು. ಈ ಸಂದರ್ಭದಲ್ಲೂ ಆಕೆ ಆಡಿದ ಮಾತುಗಳು ನಿಖರವಾಗಿದ್ದವು. ಅದೆಲ್ಲಾ ಬಿಡಮ್ಮ ಈಗ ನಂಗೆ ಒಂದು ಗೌರ್ಮೆಂಟ್ ಕೆಲಸ ಸಿಕ್ಕುದ್ರೆ ಹಿಂಗ್ ಬಂದ ಕಷ್ಟ ಹಂಗೇ ಹೋಗಿಬಿಡತ್ತೆ. ನಿಮ್ಮಣ್ಣ ಅಸಿಸ್ಟೆಂಟ್ ಪ್ರೊಫೆಸರ್ ಆಗಿಬಿಡುತ್ತಾನೆ. ಸಂಬಳಾನು ಜಾಸ್ತಿ ಬರತ್ತೆ. ಅದೆಲ್ಲಾ ಯೋಚಿಸಬೇಡ ನನಗೆ ಆದ್ರೆ ನಿನ್ನ ಬದುಕು ಮುಖ್ಯ ಅಂದೆ. ಹೀಗೆ ಇನ್ನೂ ಏನೇನೂ ನನ್ನ ಬದುಕಿನ ಮಹತ್ವಾಕಾಂಕ್ಷೆಯ ಗುರಿಗಳನ್ನು ಅವಳಿಗೆ ಹೇಳಿದೆ ನನಗೆ ಮುಂದೆ ಯಾವ ಸಮಸ್ಯೆಗಳು ಬರೋದೇ ಇಲ್ಲಾ ಅಂತೇಳಿ ಅವಳು ಒಪ್ಪುವಂತೆ ಮಾತಾಡಿದೆ. ಕೊನೆಗೆ ನನ್ನ ಮಾತನ್ನು ಅಗಾಧವಾಗಿ ಗೌರವಿಸುತ್ತಿದ್ದ ಅವಳು ‘ಆಯಿತು ಒಪ್ಪಿಗೆ’ ಅಂದಳು.
ಶೇತಮ್ಮನ ಒಪ್ಪಿಗೆಯನ್ನು ಪಡೆದು ಬಂದು ಉಮಾಶ್ರೀ ಅವರಿಗೆ ಹೇಳಿದೆ. ಅವರೂ ಮತ್ತೊಮ್ಮೆ ಅವರ ಮಗನನ್ನು ಕೇಳಿದರು, ಅವರೂ ತಲೆಯಲ್ಲಾಡಿಸಿ ಸುಂದರವಾದ ನಗೆ ನಕ್ಕರು. ನನಗೂ ಖುಷಿ ಆಯಿತು. ಉಮಾಶ್ರೀ ಅವರು ನನ್ನ ತಂಗಿಯ ಹತ್ತಿರ ಹೋಗಿ ‘ನನ್ನ ಮಗನ ಹತ್ತಿರ ಮಾತಡುತ್ತೀಯ ಶ್ವೇತಾ’ ಅಂದ್ರು. ಇವಳು ಯಾವ ಪ್ರತಿಕ್ರಿಯೆಯನ್ನೂ ಕೊಡದೇ ಸುಮ್ಮನಿದ್ದಳು. ಮತ್ತೆ ಅವರ ಮಗನನ್ನು ಅದೇ ಪ್ರೆಶ್ನೆಯನ್ನು ಕೇಳಿದರು. ಅವರು ಹೌದು ಅನ್ನುವಂತೆ ತಲೆಯಾಡಿಸಿದರು. ಸರಿ ಹಾಗಿದ್ರೆ ಇಬ್ಬರೂ ಮಾತಾಡಿಕೊಂಡು ಬನ್ನಿ ಅಂದು ಮೇಲಿನ ಕೊಠಡಿಗೆ ಕಳಿಸಿದರು.
ಅವಳು ಅತ್ತ ಹೋದೊಡನೆ ನನ್ನ ಎದೆಯ ಬಡಿತ ಜೋರಾಯಿತು. ಅವಳು ಎಂದೂ ಯಾರ ಹತ್ತಿರಾನೂ ಮಾತಾಡಿರಲಿಲ್ಲ ಹೀಗೆ. ಅಮೇಲೆ ಇಂಗ್ಲಿಷ್ ಎಲ್ಲಾ ಬರಲ್ಲ ನನ್ನ ಜೀವಕ್ಕೆ. ಅವರೇನಾದ್ರೂ ಇಂಗ್ಲಿಷಿನಲ್ಲಿ ಮಾತಾಡಿಸಿದ್ರೆ ಏನ್ ಮಾತಾಡ್ತಾಳೋ ಏನೋ. ಅವರು, ಇವಳ ಮೊಬೈಲ್ ನಂಬರ್ ಕೇಳಿದ್ರೆ ಇವಳು ನನ್ನ ಹತ್ತಿರ ‘ಮೊಬೈಲ್ ಇಲ್ಲಾ ಅನ್ನುವಾಗ ಅದೇನು ಸಂಕಟ ಅನುಭವಿಸುತ್ತಾಳೋ ಏನೋ. ಹೀಗೇ ಏನೇನೋ ಅವ್ಯಕ್ತ ಭಯ ನೋವು ಆತಂಕಗಳು ನನ್ನೊಳಗೆ ಸುಳಿದಾಡಿ ಚಡಪಡಿಸುತ್ತಿರುವಾಗ ಉಮಾಶ್ರೀ ಅವರು ನನ್ನ ಪಕ್ಕ ಬಂದು ಕೂತು ನನ್ನ ಎಂ.ಎ ಓದು ಬರಹದ ಬಗ್ಗೆ ಮಾತಾಡುತ್ತಾ ನನ್ನ ಗಮನವನ್ನು ಬೇರೆಡೆಗೆ ಹೊಯ್ದರು. ಆಗ ಈ ಹಿಂದೆ ನೀವು ನನಗೆ ಹಂಸಲೇಖಾ ಅವರಿಗೆ ಪತ್ರ ಬರೆದುಕೊಟ್ಟಿದ್ದು, ಭೇಟಿ ಮಾಡಿದ್ದು, ಮತ್ತು ನಿಮ್ಮ ಮನೆಗೆ ಬಂದಿದ್ದು ಎಲ್ಲಾ ಹೇಳಿಬಿಡೋಣಾ ಅಂದುಕೊಂಡೆ ಮತ್ತೇಕೋ ಬೇಡವೆನಿಸಿ ಸುಮ್ಮನಾದೆ. ಹಿಂಗೆ ಲೋಕಾವರಿ ಮಾತಾಡುತ್ತಿರುವಾಗ ಅವರಿಬ್ಬರು ಮಾತಾಡಿಕೊಂಡು ಬಂದರು. ಬಂದು ತಾಯಿ ಮಗ ಮಾತಾಡಿಕೊಳ್ಳುತ್ತಿರುವಾಗ. ನಾನು ಅವರಿಬ್ಬರನ್ನು ‘ನನ್ನ ತಂಗಿ ನಿಮಗೆ ಒಪ್ಪಿಗೆಯಾ’ ಅಂತ ಕೇಳಿದೆ. ನಕ್ಕು ತಕ್ಷಣ ‘ಫೋನ್ ಮಾಡುತ್ತೇವೆ ಅಂದು ನಾವು ಹೊರಡುತ್ತೇವೆ’ ಅಂದ್ರು. ಹೊರಡುವುದಕ್ಕಿಂತ ಮುಂಚೆ ಅವರಿಗಾಗಿ ಉಳಿಸಿದ್ದ ಘಮಗುಡುವ ಒಂದು ಮೊಳ ಮಲ್ಲಿಗೆ ಮುಡಿದು ಹರಿಶಿನ ಕುಂಕುಮ ಇಟ್ಟುಕೊಂಡು ಹೊರಟೇಬಿಟ್ಟರು. ನಾ ನನ್ನ ತಂಗಿಯ ಮುಖ ನೋಡಿದೆ. ಅವಳೂ ನನ್ನ ಮುಖ ನೋಡಿದಳು. ಚೂಡತ್ತಿಗೆ ನಮ್ಮಿಬ್ಬರನ್ನೇ ನೋಡುತ್ತಿತ್ತು. ನಾನೂ ಚೂಡತ್ತಿಗೆ ಅವರನ್ನು ಬೀಳ್ಕೊಡಲು ಹೋದ್ವಿ. ಅಂಬಾಸಿಡರ್ ಕಾರ್ನಲ್ಲಿ ಉಮಾಶ್ರೀ ಅವರು ಮತ್ತು ಅವರ ಮಗ ಏನೂ ಹೇಳದೇ ವಾಪಸ್ ಹೊರಟುಬಿಟ್ಟರು. ಅವರ ಸ್ಪಷ್ಟವಾದ ನಿರ್ಧಾರ ಸೂಚಿಸಲಿಲ್ಲವಲ್ಲ ಅಂತ ಗೊಂದಲ ಆಯಿತು. ಏನೇನೋ ಅಂದುಕೊಂಡು ಬಿಟ್ಟೆ. ಮತ್ತೆ ಅವರ ಫೋನ್ ಬರುತ್ತೆ ಅಂತ ಕಾಯುತ್ತಾ ಮೊಬೈಲ್ನ ಮತ್ತೆ ಮತ್ತೆ ನೋಡುತ್ತಲೇ ಇದ್ದೆ. ಮತ್ತೆ ಮತ್ತೆ ಮೊಬೈಲ್ ಚಾರ್ಜ್ ಮಾಡುತ್ತಿದ್ದೆ……………
 

‍ಲೇಖಕರು G

7 December, 2014

ನಿಮಗೆ ಇವೂ ಇಷ್ಟವಾಗಬಹುದು…

13 Comments

  1. shri

    ishtu Saralateya Jana innu namma samaajdalli
    iddara?ansutte. samskruti, Saralateya, tunuku.

  2. suguna mahesh

    ತುಂಬಾ ಚೆನ್ನಾಗಿದೆ ನಿಮ್ಮ ಅನುಭವ… ತಂಗಿಗೆ ತಕ್ಕ ಅಣ್ಣ… ಅಣ್ಣನಿಗೆ ತಕ್ಕ ತಂಗಿ… ಸೊಸೆ ತಾಯಿಯಾಗುವುದು ಎಂಥಾ ಪ್ರೀತಿಯ ಮಾತು ಉಮಾಶ್ರೀರವರಲ್ಲಿ…

  3. Chaitra.K.S

    ANNa-Thangi Preethi kandu manassu odde.NiroopaNe sahajavaagiddu,aapthaavaagide.Mundina kanthigaagi kayutthiddene.AbhinandanegaLu!!

  4. samyuktha

    🙂

  5. Raghuram Bhat

    Lovely! I am still waiting for Umashree’s life story to start…

  6. Bharavi

    ಅಣ್ಣ-ತಂಗಿಯರ ಪರಸ್ಪರ ಪ್ರೀತಿ-ವಿಶ್ವಾಸಗಳನ್ನು ಕಂಡು ಮನ ಮೂಕವಾಗಿದೆ. ಅದು ಎಂದಿಗೂ ಬತ್ತದಿರಲಿ.

  7. ಸುನೀಲ್ ಕುಮಾರ್ ಮೇಗೂರ್

    ಕುತೂಹಲ ಕಾರಿ ಆಗಿದೆ……ಮುಂದೇ….ನೀರಿಕ್ಷೇಯಲ್ಲಿ …..

  8. shruthi m.p

    sir nanage annaella adre annana preeti entadu anta gothu nimmanta annana padeda nimma tangi danyaru……………. ee bharahadalli anna tangige torisuva preeti akkare, asare,ellavu vyaktavagide. nijakku e kaladalli annadiru tamma javabdari maretiddare edannu ella annadiru odidare esto chenna sir……………………..

  9. chikkaveeresh s v

    Tumba chennagide sir

  10. Rajendra B. Shetty

    ಏನನ್ನೂ ಬರೆಯಲು ತೋಚುತ್ತಿಲ್ಲ, ಬರೆಯದೆ ಇರಲೂ ಆಗುತ್ತಿಲ್ಲ. ಅಣ್ನ ತಂಗಿಯರ ಪ್ರೀತಿ, ತಂಗಿಯ ಮದುವೆಗೆ ಅಣ್ಣ ಪಡುವ ತೊಂದರೆಗಳು ಓದುತ್ತಾ ಹೋದ ಹಾಗೆ ಮನಸ್ಸು ಬಹಳ ಹಿಂದೆ ಓಡಿತು.
    ನಾಳೆಯ ಆಸೆ, ಭರವಸೆಗಳು ನಮ್ಮನ್ನು ಇಂದು ಕಷ್ಟ ಪಡುವಂತೆ ಸಹಕರಿಸುತ್ತವೆ. “ಸುಂದರ ನಾಳೆಯ” ಭರವಸೆ ಇರಲಿ.

  11. Dheeraj Jain

    wow..what a fantastic narration…………the reader can feel it what happening in each sentence………truly you are the best sir,,,,,,everything came up in a beautiful way….god bless u and ur family..happy reaing

  12. Anonymous

    ನಿಮ್ ಜೀವದ್ ಜೀವನ ರೂಪಿಸೋ ನಿಮ್ ನಿರುಪನೆಗೆ ಅದೆಷ್ಟು ಸೊಗಸಾಗಿದೆ ಸರ್. ನಿಜಕ್ಕೂ ರೋಮಾಂಚನವಾಗ್ತಿದೆ, ಅಣ್ಣ-ತಂಗಿಯರ ಬಾಂದವ್ಯ, ವಾತ್ಸಲಗಯಗಳ ಬೆಲೆ ಗೊತ್ತಿಲ್ಲದವರಿಗೂ ಈ ನಿಮ್ಮ ಬರವಣಿಗೆ ಖಂಡಿತಾ ಪ್ರೀತಿ-ವಾತ್ಸಲ್ಯಗಳ ಅರಿವು ಮೂಡಿಸುವಂಥದು. __/!\__

  13. Meena B Gowda

    ನಿಮ್ ಜೀವದ್ ಜೀವನ ರೂಪಿಸೋ ನಿಮ್ ನಿರುಪನೆಗೆ ಅದೆಷ್ಟು ಸೊಗಸಾಗಿದೆ ಸರ್. ನಿಜಕ್ಕೂ ರೋಮಾಂಚನವಾಗ್ತಿದೆ, ಅಣ್ಣ-ತಂಗಿಯರ ಬಾಂದವ್ಯ, ವಾತ್ಸಲಗಯಗಳ ಬೆಲೆ ಗೊತ್ತಿಲ್ಲದವರಿಗೂ ಈ ನಿಮ್ಮ ಬರವಣಿಗೆ ಖಂಡಿತಾ ಪ್ರೀತಿ-ವಾತ್ಸಲ್ಯಗಳ ಅರಿವು ಮೂಡಿಸುವಂಥದು. __/!\__

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading