-ಡಾ ಗೋವಿಂದ ಹೆಗಡೆ
ಗಜ಼ಲ್
1
ತನ್ನ ಪಾಡಿಗೆ ತಾನು ಏಕತಾರಿಯ ಮೀಟುತ್ತಾನೆ
ಚತುರ ವೈಣಿಕ, ಹರಿದ ತಂತಿಯ ನುಡಿಸುತ್ತಾನೆ
ಯಾವ ಭಾವಗಳನ್ನು ಎಲ್ಲಿಂದ ತರುವನು ಚೆನ್ನ
ಎದೆಯ ಪಿಸುದನಿಗೆ ಭಾಷೆಯ ಉಡಿಸುತ್ತಾನೆ
ಕಣ್ಣ ಕಣೆಯಲ್ಲಿ ಎಷ್ಟೆಲ್ಲ ನುಡಿಗಳ ಹೂಡುವನಲ್ಲ
ಮಳೆಬಿಲ್ಲು ಇವನು ಬಿರಿದೆದೆಗೂ ಬಣ್ಣ ಬಡಿಸುತ್ತಾನೆ
ಕಾಣದ ಕನಸಿಗೂ ಜೋಗುಳ ಹಾಡುವ ಜೋಗಿ
ಕಿಂದರಿಯ ನುಡಿಸುತ್ತ ಬೆಳಕಿನ ಹಾದಿ ನಡೆಯುತ್ತಾನೆ
ಜಗದ ಉಮ್ಮಳಕೆಲ್ಲ ಕಿವಿಯಾಗುತ್ತಾನೆ ‘ಜಂಗಮ’
ಹಾದಿಯುದ್ದಕ್ಕೂ ಹದುಳವನ್ನೇ ಹರಡುತ್ತಾನೆ
2
ಎದೆಯ ಕೊಂಚವೂ ಅಲುಗಿಸದಿದ್ದರೆ ಅದೆಂಥ ಕವಿತೆ
ಮನವನು ಚೂರೂ ಕಲಕದಿದ್ದರೆ ಅದೆಂಥ ಕವಿತೆ
ಹೂವು ಅವಳು ಮಧು ಚುಂಬನ ಇವಿಷ್ಟೇ ಸಾಕೇ
ಬಿಸಿಲಿನ ಬವಣೆಯ ಬರೆಯದಿದ್ದರೆ ಅದೆಂಥ ಕವಿತೆ
ಕಲ್ಲು-ಮುಳ್ಳುಗಳ ಬಿತ್ತುವ ಕೈಗಳೇ ಎಷ್ಟೆಲ್ಲ
ಒಳಗೆ ಬೆಳಕನು ಹಾಯಿಸದಿದ್ದರೆ ಅದೆಂಥ ಕವಿತೆ
ಹಿಡಿಯನು ತುಂಬಿದೆ ಚೂರಿ ಕಂಗಳ ತುಂಬಿದೆ ಕ್ರೌರ್ಯ
ಬದುಕಿನ ತೇವವ ಕಾಪಿಡದಿದ್ದರೆ ಅದೆಂಥ ಕವಿತೆ
ಒಳಗನು ಇರಿಯುತ ಬಿಡದೇ ಕುತ್ತುತ್ತಿದೆ ಲೋಕ
ಹೊರದಾರಿಗಳ ತೆರೆಯದಿದ್ದರೆ ಅದೆಂಥ ಕವಿತೆ
ಹೆಜ್ಜೆ ಹೆಜ್ಜೆಗೆ ಹಿಂಸೆಯನೇ ಒರೆದಿವೆ ವರ್ಣಗಳು
ಪ್ರೀತಿಯ ಪಿಸುದನಿ ಮೂಡದಿದ್ದರೆ ಅದೆಂಥ ಕವಿತೆ
ಕತ್ತಲ ಪದಗಳ ಹಾಡುತ ಹಾಡುತ ತಲ್ಲಣಿಸಿದೆ ಜೀವ
‘ಜಂಗಮ’ ಪಥವ ತೋರದಿದ್ದರೆ ಅದೆಂಥ ಕವಿತೆ






0 Comments