ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಲ್‍ಬಾಟಮ್ – ಕೌತುಕ ಪ್ರಿಯರಿಗಾಗಿ

ಗೊರೂರು ಶಿವೇಶ್

ಜಿಂದೆ ನಂಜುಂಡಸ್ವಾಮಿ, ಎನ್ ನರಸಿಂಹಯ್ಯ, ಮಾ.ಬಿ.ಶೇ., ಸುಂದರರಾಜ್, ಎಂ ಶಿವಾಜಿರಾವ್.. ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಪತ್ತೇದಾರಿ ಓದುಗರ ವಲಯದಲ್ಲಿ ಜನಪ್ರಿಯವಾಗಿದ್ದ ಹೆಸರುಗಳು.

ಟಿ.ಕೆ. ರಾಮರಾವ್ ಆಗಿನ ಪ್ರಸಿದ್ದ ಪತ್ರಿಕೆಗಳಲ್ಲಿ ದಾರವಾಹಿಯಾಗಿ ಹರಿದುಬರುತ್ತಿದ್ದ ಪತ್ತೇದಾರಿ ಎಳೆ ಹೊಂದಿದ ಹಾಗೂ ಸಾಮಾಜಿಕ ಕಾದಂಬರಿಗಳಿಂದ ಜನಪ್ರಿಯತೆ ಸಾಧಿಸಿದ್ದರೆ ಇವರಾದರೂ ಕಳ್ಳತನ, ದರೋಡೆ, ವಿಬಿನ್ನ ರೀತಿಯ ವಂಚನೆ, ಕೊಲೆಗಳ ಕಥೆಗಳಿಂದ ಕಥೆಗಳಿಂದ ಪ್ರಖ್ಯಾತರು.

ತಿಂಗಳಿಗೊಂದರಂತೆ ಇವರ ಕಾದಂಬರಿಗಳು ಬರುವ ವೇಗವನ್ನು ಕಂಡು ಬೆರಗಾಗಿದ್ದು ಉಂಟು. ಆಮೇಲೆ ಅವುಗಳಲ್ಲಿ ಬಹುತೇಕವು ಇಂಗ್ಲೀಷ್ ಕಾದಂಬರಿಗಳ ಸ್ಪೂರ್ತಿ ಇಲ್ಲವೆ ಅವುಗಳ ಪಡಿಯಚ್ಚು ಎಂಬ ಅರಿವಿಗೆ ಬಂದದ್ದು.

ಇರಲಿ ಪ್ರಣಯಭರಿತ ಪತ್ತೇದಾರಿ ಕಾದಂಬರಿಗಳನ್ನು ಪುಸ್ತಕಗಳ ನಡುವೆ, ಸೀಬೆ ಮರದ ಕೆಳಗೆ, ಅಟ್ಟದ ಮೇಲೆ ಕುಳಿತು ಓದಿದ್ದು ನೆನಪಿನ ಭಾಗ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ಆಗಾಗ್ಗೆ ನಮ್ಮ ಕಡೆ ನೋಡಿ ‘ಚೆನ್ನಾಗಿ ಓದಿದರೆ ಕುಳಿತು ಉಣ್ಣಬಹುದು, ಇಲ್ಲವಾದರೆ ತಮ್ಮಂತೆ ಹಿಟ್ಟಿಗೆ ಹಿಟ್ಟು, ಬಟ್ಟೆಗೆ ಬಟ್ಟೆ ಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸುತ್ತಾ ಆಗಾಗ್ಗೆ ನಮ್ಮ ಕೈಯಲ್ಲಿ ಪುಸ್ತಕಗಳಿರುವುದನ್ನು ಖಚಿತಪಡಿಸಿಕೊಳ್ಳುತ್ತಾ ಹೋಗುತ್ತಿದ್ದರು.

ನಾವು ಅವರ ಪತ್ತೇದಾರಿ ಕಣ್ಣುಗಳಿಂದ ತಪ್ಪಿಸಿಕೊಳ್ಳುತ್ತಾ ಪತ್ತೇದಾರಿ ಕಾದಂಬರಿ ಓದಿದ ಖುಷಿ ರೋಚಕತೆ ಅನುಭವಿಸುವುದರ ಜೊತೆಗೆ ಅಂತ್ಯದಲ್ಲಿ ಪತ್ತೆಯಾಗುವ ಅಪರಾಧಿಯನ್ನು ನಾನು ಮೊದಲೇ ಊಹಿಸಿದ್ದೇ ಎಂದು ನಮ್ಮ ಸೂಕ್ಷ್ಮಗ್ರಹಿಕೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿದ್ದ ಸಮಯ.

ಆ ಹಳೆಯ ದಿನಗಳನ್ನು ಮತ್ತೆ ನೆನಪಿಸಲು ಈಗ ತೆರೆಗಪ್ಪಳಿಸಿದ ರಿಷಬ್ ಶೆಟ್ಟಿ ಅಭಿನಯದ ಜಯತೀರ್ಥ ನಿರ್ದೇಶನದ ಬೆಲ್‍ಬಾಟಮ್. ಬೆಲ್‍ಬಾಟಮ್ ಪ್ಯಾಂಟ್‍ಗಳು ಗಂಟೆತಳದ ಪ್ಯಾಂಟ್ ಗಳೆಂದು ಜನಪ್ರಿಯವಾಗಿದ್ದ ತ್ರಿಮೂರ್ತಿ, ಶಂಕರ್‍ಗುರು, ಸೀತಾರಾಮ್ ಚಿತ್ರಗಳ ಕಾಲ. ಆ ಕಾಲಘಟ್ಟದಲ್ಲಿ ನಡೆಯುವ ಸಿನಿಮಾವಿದು.

ಮೂರು ಪೋಲಿಸ್ ಠಾಣೆಯಲ್ಲಿ ಒಂದೇ ರೀತಿ ನಡೆಯುವ ಕಳ್ಳತನ ಕದ್ದಮಾಲುಗಳನ್ನು ಕಳ್ಳರ ಸಮೇತ ಹಿಡಿದು ಕೋರ್ಟ್‍ಗೆ ಒಪ್ಪಿಸುವ ಮುನ್ನಾದಿನ ಭದ್ರತಾ ತಿಜೋರಿಯಲ್ಲಿ ಇಟ್ಟ ಸಂದರ್ಭದಲ್ಲಿ ಪೋಲಿಸರ ಬಿಗಿ ಕಣ್ಗಾವಲಿನ ನಡುವೆ ನಡೆಯುವ ಕಳ್ಳತನ. ಪೋಲಿಸ್ ಅಧಿಕಾರಿಗಳ ಬುಡಕ್ಕೆ ಬಂದ ಈ ಕೇಸನ್ನು ಪತ್ತೆ ಹಚ್ಚಲು ಹೊರಡುವವ ಚಿಕ್ಕವಯಸ್ಸಿನಿಂದಲೇ ಪತ್ತೇದಾರಿ ಕಾದಂಬರಿಗಳನ್ನು ಓದಿ ಪತ್ತೇದಾರನಾಬೇಕೆಂದು ಹೊರಟು ಅಪ್ಪನ ಬಲಾತ್ಕಾರಕ್ಕೆ ಸಿಕ್ಕಿಬಿದ್ದು ಈಗ ಸಾಮಾನ್ಯ ಪೋಲೀಸ್ ಆಗಿ ಕೆಲಸ ಮಾಡುತ್ತಿರುವ ದಿವಾಕರ್‍ಗೆ. ಹಿರಿಯ ಪೋಲೀಸ್ ಅಧಿಕಾರಿಗಳಿಂದ ಛೇಡಿಕೆ ಒಳಗಾಗಿ ಆಕಸ್ಮಿಕವಾಗಿ ಕೊಲೆಯ ಕೇಸೊಂದರಲ್ಲಿ ಯಶ ಸಾಧಿಸಿದ ಪರಿಣಾಮವಾಗಿ ಯಾವುದೇ ಕ್ಯೂ ಇಲ್ಲದೆ ಪತ್ತೆ ಹಚ್ಚುವ ಹೊಸ ಜವಾಬ್ದಾರಿ ಬಿದ್ದಿದೆ. ಕತ್ತಲಲ್ಲಿ ಕರಿಬೆಕ್ಕು ಹುಡುಕುವಂಥ ಈ ರಹಸ್ಯವನ್ನು ಹೇಗೆ ಬೇಧಿಸುತ್ತಾನೆ ಎಂಬುದು ಚಿತ್ರದ ಕಥಾಹಂದರ.

ಟಿ.ಕೆ. ದಯಾನಂದ್ ಕನ್ನಡದ ವಿಶಿಷ್ಠ ಬರಹಗಾರ ಹಾಗೂ ನಿರ್ದೇಶಕ. ಅವರ ಅನೇಕ ಕಥೆಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಬಹುಮಾನ ಪಡೆದಿವೆ. ಅವರ ಬೆಂಕಿಪಟ್ಣ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೆ ಸದ್ದು ಮಾಡದಿದ್ದರೂ ಚಿತ್ರ ಸಹೃದಯ ವೀಕ್ಷಕರನ್ನು ಆಕರ್ಷಿಸಿತ್ತು. ಬೆಲ್‍ಬಾಟಮ್ ಚಿತ್ರಕ್ಕೆ ಅವರದೇ ಕಥೆ. ಚಿತ್ರದಲ್ಲೂ ತಟ್ಟನೆ ಗಮನಸೆಳೆಯುವುದು ಕಥೆಯಲ್ಲಿ ಬರುವ ವಿಶಿಷ್ಠ ಪಾತ್ರಗಳು. ನಾಲ್ಕು ಹೆಂಡರ ಗಂಡ ಮರಕುಟುಕ, ಗೂಬೆ ಶಾಂತಿ, ಹಲ್ಲಿ ಶಾಂತಿ, ಮಾಡುವ ಗೂಬೆ ರಾಮ, ಗ್ರಂಥಿಕೆ ಅಂಗಡಿಯ ಸಗಣಿ ಪಿಂಟೋ, ಮಾಟಕಾರ ಮೋಡಿ ನಂಜಪ್ಪ. . . ಮುಂತಾದ ವಿಭಿನ್ನ ಪಾತ್ರ ಸೃಷ್ಠಿಗಾಗಿ ಕಥೆಗಾರನ ತಟ್ಟನೆ ಗಮನ ಸೆಳೆಯುತ್ತಾರೆ.

ರೆಟ್ರೋ ಚಿತ್ರದ ಶೈಲಿಗಾಗಿ ತಂತ್ರಜ್ಞರು ವಸ್ತ್ರ ವಿನ್ಯಾಸಕರ ಪ್ರರಿಶ್ರಮ ಎದ್ದುಕಾಣುತ್ತದೆ. ಎಂಬತ್ತರ ದಶಕದ ಹಳೆಯ ಗಾರೆಕಟ್ಟಡಗಳ ಪೋಲಿಸ್ ಸ್ಟೇಷನ್, ತಿಜೋರಿಗಳು, ಪಾಳುಬಿದ್ದು ಗುಹೆಯಂಥ ಮನೆಗಳು ಹಾಡಿನ ಚಿತ್ರೀಕರಣ ಬಹುತೇಕ ಹಳೆ ರೆಟ್ರೋ ಮಾದರಿಯಲ್ಲಿದ್ದು ವಸ್ತ್ರವಿನ್ಯಾಸಕರ ಮತ್ತು ಕಲಾನಿರ್ದೇಶಕರ ಶ್ರಮ ಎದ್ದುಕಾಣುತ್ತದೆ.

ಟೋನಿ, ವೆನ್ನಿಲಾ ಚಿತ್ರದ ಮೂಲಕ ಸಹೃದಯ ವೀಕ್ಷಕರಿಗೆ ಮನಗೆದ್ದ ಜಯತೀರ್ಥ ಚಿತ್ರದ ನಿರ್ದೇಶಕ. ಟೋನಿ ಚಿತ್ರದಲ್ಲಿ ಟಾಲ್‍ಸ್ಟಾಯ್‍ನ ಕಥೆಯ ನೆರಳಿನ ಹಿನ್ನೆಲೆಯಲ್ಲಿ ಉತ್ತಮವಾಗಿ ಮೂಡಿಬಂದಿತ್ತು. ಕನ್ನಡದ ಜಾನಪದ ಹಾಡು, ಜನಪದಲೋಕದ ವಿಶಿಷ್ಟ ಪ್ರಪಂಚವನ್ನು ಪರಿಚಯಿಸುವುದು ಅವರ ಶೈಲಿ. ಈ ಚಿತ್ರದಲ್ಲಿ ಆದಿಜ್ಯೋತಿ ಪರಂಜ್ಯೋತಿ ಬಂದದ್ದು ಜನಪದ ಗೀತೆಯನ್ನು ಮನೋಜ್ಞವಾಗಿ ಬಳಸಿದ್ದಾರೆ.

ಸುಳಿವೇ ಇಲ್ಲದೆ ಅಪರಾಧ ಪ್ರಕರಣವನ್ನು ಬೇಧಿಸಿ ಹೊರಟ ಪತ್ತೇದಾರ್ ಸುಧಾಕರ್ ಮಾಹಿತಿ ಪಡೆಯಲು ಹೊರಟಾಗ ಸಿಗುವ ಪಾತ್ರಗಳು ಮತ್ತೊಂದು ಪಾತ್ರವನ್ನು ಪರಿಚಯಿಸುವುದು, ಆ ಪಾತ್ರ ಮತ್ತ್ತೊಂದು ಪಾತ್ರವನ್ನು ಪರಿಚಯಿಸುತ್ತಾ ಚಿತ್ರ ಮುಂದುವರಿದು ಬಹುತೇಕ ಆ ಪಾತ್ರಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಆ ಪ್ರಕರಣದಲ್ಲಿ ಬಾಗಿಯಾಗಿರುವುದು ಚಿತ್ರದ ವಿಶಿಷ್ಠತೆ. ಇವು ನೋಡುಗರ ಕುತೂಹಲದ ಗರಿಗೆದರುವುದು ಅವರನ್ ಬಿಟ್ಟು ಇವರನ್ ಬಿಟ್ಟು ಅವರ್ಯಾರ್ ? ಎಂಬಂತೆ ಅವರವರ ಯೋಚನಾಶಕ್ತಿಗೆÉ ತಕ್ಕಂತೆ ಅಪರಾಧಗಳನ್ನು ಊಹಿಸುವುದು ಮತ್ತು ಎಲ್ಲರ ನಿರೀಕ್ಷೆಯನ್ನು ಬುಡಮೇಲು ಮಾಡುವ ಅಂತ್ಯ ಚಿತ್ರದ ಯಶಸ್ಸಿನ ಸೂತ್ರವೆನ್ನಬಹುದು.

ಚಲನಚಿತ್ರ ನಿರ್ದೇಶಕರಾಗಿ ರಿಶಿ, ಕಿರಿಕ್‍ಪಾರ್ಟಿ, ಸ.ಹಿ.ಪ್ರಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರದ ಯಶಸ್ವಿ ನಿರ್ದೇಶಕ ರಿಷಬ್‍ಶೆಟ್ಟಿ ಹಿಂದಿನ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಾಡಿದ್ದರೆ ಇಲ್ಲಿ ಪೂರ್ಣ ಪ್ರಮಾಣದ ಹಾಸ್ಯಮಿಶ್ರಿತ ಪತ್ತೇದಾರನ ಪಾತ್ರ ನಿರ್ವಹಿಸಿದ್ದಾರೆ. ಒಮ್ಮೊಮ್ಮೆ ಜಗ್ಗೇಶ್ ಶೈಲಿ ಅನುಕರಿಸುತ್ತಿದ್ದಾರೆಂಬ ಅನಿಸುವುದನ್ನು ಹೊರತುಪಡಿಸಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಹರಿಪ್ರಿಯ ಚಿತ್ರದ ಪ್ರಮುಖ ಪಾತ್ರದಲ್ಲಿದ್ದು ಪಾತ್ರ ಪೋಷಣೆ ಉತ್ತಮವಾಗಿದೆ. ಇನ್ನು ಎಲ್ಲ ಪಾತ್ರಗಳಿಂದಲೂ ಅತ್ಯುತ್ತಮ ಅಭಿನಯ ಬಂದಿದೆ..

ಚಿತ್ರವನ್ನು ಗೆಲ್ಲಿಸುವ ಮತ್ತೊಂದು ಪ್ರಮುಖ ಅಂಶ ಚಿತ್ರದ ಸಂಬಾಷಣೆ. ರಘು ನಿಡವಳ್ಳಿ ಅವರ ಸಂಭಾಷಣೆ ಹಾಸ್ಯದ ಕಚಗುಳಿ ಇಡುತ್ತಲೆ ಕೆಲವೊಮ್ಮೆ ವಿಚಾರಪೂರ್ಣ ಸಂಭಾಷಣೆಯಿಂದ ನೋಡುಗರ ಮನಗೆಲ್ಲುತ್ತದೆ. ಈಗ ಐವತ್ತರ ಆಸುಪಾಸಿನಲ್ಲಿರುವವರಿಗೆ ಗತಕಾಲವನ್ನು ನೆನಪಿಸುವ ಇಂದಿನ ವಯೋಮಾನದವರಿಗೆ ಸಸ್ಪೆನ್ಸ್ ಥ್ರಿಲ್ಲರ್ ನ್ನು ಉಣಬಡಿಸುವ ಚಿತ್ರ ಇದೀಗ ಯಶಸ್ಸಿನ ಹಾದಿಯನ್ನು ಹಿಡಿದಿದೆ.

‍ಲೇಖಕರು avadhi

26 February, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading