ಲಾಸ್ಟ್ ಸೀನ್ 2.35 am

” ಪ್ರತಿಯೊಂದು ಹೊಸ ತಂತ್ರಜ್ಞಾನದ ಆವಿಷ್ಕಾರವೂ
ಮನುಷ್ಯನ ಮತ್ತೊಂದು ಮೂರ್ಖತನವನ್ನು ಹೊರಹಾಕುತ್ತದೆ ”

ಮೆಸೆಂಜರ್ ನ ಹೊಸ ಚಾಟ್ ಗೆ ಬಂದು ಬಿದ್ದ ಈ ಸಾಲುಗಳನ್ನು ಓದುತ್ತಿದ್ದಂತೆಯೇ ಇವು ನನ್ನವೇ ಸಾಲುಗಳಲ್ಲವೇ ಎಂದು ಯೋಚಿಸತೊಡಗಿದೆ.‌ ಅಷ್ಟರಲ್ಲಿ ಅದೇ ಚಾಟ್ ನಲ್ಲಿ ಮತ್ತೊಂದು ಮೆಸೇಜ್ ಬಂತು:

‘ಸರ್, ನಾನು ಅಂಕಿತ. ನಮ್ಮೂರು ಹೊಸಪೇಟೆ. ನಿನ್ನೆ ಕಾಲೇಜಿನಲ್ಲಿ ನನ್ನ ಸ್ನೇಹಿತಳೊಬ್ಬಳಿಗೆ ವಾಟ್ಸಪ್ ಗುಂಪೊಂದರಲ್ಲಿ ಈ ಮೇಲಿನ ಸಾಲುಗಳಿರುವ ಇಮೇಜ್ ಬಂದಿತ್ತು. ಅದ್ಹೇಗೆ ವಿಜ್ಞಾನದ, ತಂತ್ರಜ್ಞಾನದ ಆವಿಷ್ಕಾರಗಳು ನಮ್ಮ ಮೂರ್ಖತನವನ್ನು, ವಂಚನೆಯನ್ನು, ಅಪನಂಬಿಕೆಯನ್ನು ಹೊರಹಾಕಬಲ್ಲವು‌ ಎಂಬ ಬಗ್ಗೆ ಎಲ್ಲರೂ ಚರ್ಚಿಸಿದೆವು. ಅನೇಕರು ಈ ಸಾಲುಗಳನ್ನು ಒಪ್ಪಲಿಲ್ಲ.

ಆ ಗುಂಪಿನಲ್ಲಿ ನಾನು ಏನೂ ಹೇಳಿರಲಿಲ್ಲ. ಆದರೆ ಆ ಇಮೇಜ್ ನ ಸ್ಕ್ರೀನ್ ಶಾಟ್ ನಲ್ಲಿ ನೀವು ಹಾಕಿದ ಈ ಫೇಸ್ ಬುಕ್ ಸ್ಟೇಟಸ್ ನೊಂದಿಗೆ ನಿಮ್ಮ ಹೆಸರೂ ಇತ್ತು. ಹಾಗಾಗಿ ನಿಮ್ಮ ಪ್ರೊಫೈಲ್ ಹುಡುಕಿದೆ. ನಿಮ್ಮ ಈ ಸಾಲುಗಳನ್ನು ಪುರಸ್ಕರಿಸುವಂಥ ಅನುಭವವೊಂದನ್ನು ನಾನು ನಿಮ್ಮಲ್ಲಿ ಹೇಳಿಕೊಳ್ಳಬಹುದೆ?’

‘ ಸರಿ. ನಿಮಗೇನು ಅಭ್ಯಂತರವಿಲ್ಲದಿದ್ದರೆ ಹೇಳಿ’ ಎಂದು ರಿಪ್ಲೈ ಮಾಡಿದೆ.
‘ ಓಕೆ’ ಎಂದು ಹೇಳಿದ ಹುಡುಗಿ ಒಂದು ವಾರವಾದರೂ ಏನೊಂದೂ ಮೆಸೇಜು ಕಳಿಸಲಿಲ್ಲ.  ಮತ್ತೆ ಮತ್ತೆ ಅದೇನು ಎಂದು ಕೇಳುವ ಉತ್ಸಾಹವನ್ನು ನಾನೂ ತೋರಿಸಲಿಲ್ಲ.

*              *               *               *             *

Then came a lengthy message from Ankitha.

“ಸರ್,ತಡಮಾಡಿದ್ದಕ್ಕೆ ಕ್ಷಮೆ ಇರಲಿ. ಅದಕ್ಕೆ ಕಾರಣವೂ ಇದೆ. ನಿಮ್ಮ ಆ ಸಾಲುಗಳು ನಿಜ ಸರ್. ಅದಕ್ಕೆ ನಾನೇ ಉದಾಹರಣೆ. ಕಳೆದ ಆರು ವರ್ಷಗಳಿಂದ ನಾನು ಮತ್ತು ಸುಮಂತ್ ಎಂಬ ಹುಡುಗ ಪ್ರೀತಿಸುತ್ತಿದ್ದೇವೆ.‌ ಅವನು ಬಳ್ಳಾರಿಯ ಯೂನಿವರ್ಸಿಟಿಯಲ್ಲಿ ಮಾಸ್ಟರ್ ಡಿಗ್ರಿ ಓದುತ್ತಿದ್ದಾನೆ. ನಾನು ಪದವಿ ನಂತರ ಓದು ಮುಂದುವರೆಸುವಷ್ಟು ಅನುಕೂಲವಿಲ್ಲದ ಕಾರಣ ಟೆಲಿಕಾಂ ಕಂಪೆನಿಯೊಂದರಲ್ಲಿ ಪಬ್ಲಿಕ್ ರಿಲೇಶನ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡ್ತಿದ್ದೀನಿ. ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟ ಪಡ್ತೀವಿ. ಅವನ ಬಗ್ಗೆ ನಾನೂ,ನನ್ನ ಬಗ್ಗೆ ಅವನೂ ವಿಪರೀತ ಪೊಸೆಸ್ಸಿವ್ ಆಗಿದ್ದೀವಿ ಕೂಡ.

ನಮ್ಮಿಬ್ಬರ ಪ್ರೀತಿಯ ಬಗ್ಗೆ ಇನ್ನು ಯಾರಿಗೂ ತಿಳಿದಿಲ್ಲ. ಹೇಗಾದರೂ ಮಾಡಿ ನಮ್ಮ ಪ್ರೀತಿಯನ್ನು ಸಕ್ಸಸ್ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ ನಾವು ಸಾಕಷ್ಟು ಎಚ್ಚರಿಕೆ ವಹಿಸುತ್ತಾ ಬಂದಿದ್ದೇವೆ. ಎಲ್ಲೆಂದರಲ್ಲಿ ಸುತ್ತಿ, ಯಾರದೋ ಕಣ್ಣಿಗೆ ಬಿದ್ದು ಅದು ಇನ್ಯಾರಿಂದಲೋ ನಮ್ಮ ಮನೆಯವರಿಗೆ ತಿಳಿದು ರಂಪಾಟಾಗುವುದು ಬೇಡ ಎಂಬ ಕಾರಣಕ್ಕೆ ವಾರಕ್ಕೋ ಹದಿನೈದು ದಿನಕ್ಕೋ ಒಮ್ಮೆ ಭೇಟಿ ಮಾಡ್ತಿದ್ವಿ.

ಆಗ ಇಬ್ಬರೂ ಒಂದೊಂದು ಪತ್ರ ಬರೆದುಕೊಂಡು ಬರ್ತಿದ್ವಿ. ಅವನು ತುಂಬಾ ರೊಮ್ಯಾಂಟಿಕ್ ಆಗಿ ಬರೆಯುತ್ತಿದ್ದ. ಅವನ ಪತ್ರಗಳಿಗಾಗಿ ನಾನು ಕಾಯುತ್ತಿದ್ದೆ. ನಾನೂ ಪತ್ರ ಬರೆಯುತ್ತಿದ್ದೆ. ನಮ್ಮ ಬಳಿ ಮೊಬೈಲ್ ಇಲ್ಲದ ಕಾರಣ ಪತ್ರಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ತೀರ ಅಪರೂಪಕ್ಕೆ ನಾನು ಅಪ್ಪನ ಮೊಬೈಲ್ ನಿಂದ ಅವನ ರೂಮ್ ಮೇಟ್ ಗೆ ಮಿಸ್ ಕಾಲ್ ಕೊಟ್ಟರೆ ಕಾಲ್ ಮಾಡುತ್ತಿದ್ದ. ಅದು ಕೇವಲ‌ ನಮ್ಮ ಭೇಟಿ ಯಾವಾಗ ಎಂಬುದನ್ನು ಕನ್ಫರ್ಮ್ ಮಾಡಿಕೊಳ್ಳುವುದಕ್ಕೆ ಮಾತ್ರ ಆಗಿರುತ್ತಿತ್ತು. ಆ ಭೇಟಿಗಾಗಿ ಕಾಯುವುದು, ಪತ್ರಕ್ಕಾಗಿ ಕಾಯುವುದು, ಆ ತುಡಿತ ಅದೆಷ್ಟು ಹಿತವಾಗಿರುತ್ತಿತ್ತು.‌

ಅದೆಂಥಾ ಸಮಯ ಪರಿಪಾಲನೆ ನಮ್ಮಲ್ಲಿತ್ತೆಂದರೆ ನಾನು ಅವರಿವರ ಕಣ್ತಪ್ಪಿಸಿ ಬರುವುದು ಕೊಂಚ ತಡವಾದರೂ ‘ಪ್ರೀತಿಸುವ ಹುಡುಗರನು ಯಾರು ಕಾಯಿಸಬಾರದು’ ಎಂದು ಹಾಡುತ್ತಿದ್ದ. ತಕ್ಷಣ ನಾನವನ ಕೈಗೊಂದು ಪತ್ರ ಇಡುತ್ತಿದ್ದೆ. ಪ್ರತಿ ಪತ್ರದ ಪ್ರಾರಂಭ ಹೇಗಿರುತ್ತದೆಂದು ಅವನಿಗೆ ಗೊತ್ತಿರುತ್ತಿತ್ತು. ಬೇಂದ್ರೆಯವರ ಆ ಸಾಲುಗಳನ್ನು ಕಿವಿಯಲ್ಲಿ ಉಸುರುತ್ತಿದ್ದ.

*              *              *              *               *

“ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳುಬಂದಿ
ಕೆನ್ನೆ ತುಂಬ ಮುತ್ತು”

ಎಂದು ಅವನು ಆ ಭೇಟಿಯಲ್ಲೂ ನನ್ನ ಪತ್ರದಲ್ಲಿರಬಹುದಾದ ಈ ಖಾಯಂ ಸಾಲುಗಳನ್ನು ನಾನು ಪತ್ರವನ್ನು ಅವನಿಗೆ ಕೊಡುವ ಮುನ್ನವೇ ಹೇಳಿ ನನ್ನ ಕೈಗೊಂದು ಗಿಫ್ಟ್ ಪ್ಯಾಕ್ ಇಟ್ಟ.‌ ಅದು ಅವನ ಮೊದಲ ಸಂಬಳದಿಂದ ತಂದಿದ್ದ ಗಿಫ್ಟ್ ಆಗಿತ್ತು. ತೆಗೆದು ನೋಡಿದರೆ ಅವನು ಕೊಟ್ಟಿದ್ದು ನಮ್ಮಿಬ್ಬರನ್ನು ಮತ್ತಷ್ಟು ಹತ್ತಿರ ಮಾಡಬಲ್ಲ ಸ್ಮಾರ್ಟ್ ಫೋನ್. ಅವನೋ ಕ್ಯಾಂಪಸ್ ಸೆಲೆಕ್ಷನ್ ಆದ ನಂತರ ಹೇಗೋ ಮನೆಯವರಿಗೆ ದುಂಬಾಲು ಬಿದ್ದು ತನಗೊಂದು ಫೋನ್ ಕೊಂಡಿದ್ದ. ಈಗ ತನ್ನ ಮೊದಲ ಸಂಬಳದಲ್ಲಿ ನನಗೊಂದು ಸ್ಮಾರ್ಟ್ ಫೋನ್ ಕೊಡಿಸಿ ನಮ್ಮಿಬ್ಬರ ನಡುವಿನ ಅಂತರ, ಅಂದರೆ ಬೆಂಗಳೂರಿಗೂ ಹೊಸಪೇಟೆಗೂ ಇರುವ ಅಂತರವನ್ನ ಇಲ್ಲವಾಗಿಸಿದ್ದ. ಆ ದಿನ ಹೊರಟು ಹೋಗುವಾಗ ಒಂದು ಮಾತು ಹೇಳಿದ್ದ; ಇನ್ನು ಮೇಲೆ ಬೇಂದ್ರೆಯವರ ಸಾಲುಗಳನ್ನು ನೀನು ಪತ್ರದಲ್ಲಿ ಬರೀಬೇಕಿಲ್ಲ. ನಿನ್ನ ಧ್ವನಿಯಲ್ಲೇ ರೆಕಾರ್ಡ್ ಮಾಡಿ ಕಳಿಸಬಹುದು.

*                 *                   *                  *

ನನಗೆ ಬರುವ ಸಂಬಳದಲ್ಲಿ ಸ್ಮಾರ್ಟ್ ಫೋನ್ ಖರೀದಿ ಕಷ್ಟವೆಂಬುದು ಮನೆಯವರಿಗೆಲ್ಲ ತಿಳಿದಿದ್ದರೂ ಕಂಪನಿಯ ಲಕ್ಕಿ ಡ್ರಾನಲ್ಲಿ ನನಗೆ ಬಹುಮಾನ ಬಂದಿದೆ ಎಂದು ಹೇಳಿ ಅವರನ್ನೆಲ್ಲ ನಂಬಿಸಿದೆ. ಪ್ರೀತಿಯಲ್ಲಿರುವಾಗ ಮಕ್ಕಳು ತಂದೆತಾಯಿಗಳಿಗೆ ಹೇಳುವ ಸುಳ್ಳುಗಳು ಎಷ್ಟು ಕರಾರುವಕ್ಕಾಗಿರುತ್ತವಲ್ಲವೆ ಸರ್?

*             *                *                *                *

ಇಷ್ಟುದ್ದದ ಮೆಸೇಜನ್ನು ನಾನು ಮೆಸೆಂಜರ್ ನಲ್ಲಿ ಓದುತ್ತಿರುವುದನ್ನು ಗಮನಿಸಿದ ನನ್ನವಳು ‘ಅದೇನು ಯಾವಾಗ್ಲೂ ಮೊಬೈಲ್ ಹಿಡ್ಕೊಂಡಿರ್ತಿಯಾ? ಇಷ್ಟಾದರೂ ನಾನೇನಾದ್ರೂ ಮನೇಗ್ ತಗೋಂಡ್ ಬಾ ಅಂತ ಮೆಸೇಜ್ ಮಾಡಿದ್ರೆ ನೋಡಿರಲಿಲ್ಲ ಅಂತೀಯಾ’ ಎಂದು ದಬಾಯಿಸಿದಳು. ತಕ್ಷಣ ಬೇರೆ ಸ್ಕ್ರೀನ್ ಓಪನ್ ಮಾಡಿ, ‘ಈಗೇನ್ ತರ್ಬೇಕು ಹೇಳು’ ಎಂದೆ. ‘ಪಾಪುಗೆ ಪ್ಯಾಂಪರ್ಸ್ ಖಾಲಿ ಆಗಿದೆ ತಗೊಂಡ್ ಬಾ ಅಂತ ವಾಟ್ಸಪ್ ಲ್ಲಿ ಮೆಸೇಜ್ ಮಾಡಿದ್ದೀನಿ. ಬ್ಲೂ ಟಿಕ್ ಕೂಡ ಬಂದಿದೆ.ನೋಡಿದಿಯಾ. ಆದರೂ ತಂದಿಲ್ಲ’ ಎಂದು ವ್ಯಂಗ್ಯವಾಡಿದಳು. ಅವಮಾನವಾದಂತಾಯಿತು. ‘ಆಯ್ತು ಈಗ್ಲೇ ತರ್ತೀನಿ’ ಎಂದು ಹೇಳಿ ಹೊರಟೆ. ಆದರೆ ಅಂಕಿತಾ ನನಗೆ ಕೇಳಿದ ಆ ಪ್ರಶ್ನೆ ಮತ್ತೆ ನನ್ನನ್ನು ಮೆಸೆಂಜರ್ ಕಡೆ ಕರೆದೊಯ್ದಿತು. ರಸ್ತೆಯಲ್ಲಿ ನಡೆಯುತ್ತಲೇ ಅವಳ ಮೆಸೇಜಿನ ಓದನ್ನು ಮುಂದುವರೆಸಿದೆ.

*                    *                      *                    *

ಅದರಲ್ಲೂ ಮೊಬೈಲ್ ಬಂದಮೇಲೆ ಇಂತಹ ಸುಳ್ಳುಗಳು ನನಗೆ ಮಾಮೂಲಿಯಾಗಿಬಿಟ್ಟವು. ಅಪ್ಪನ ಮೊಬೈಲ್ ನಲ್ಲಿ ಮಾತಾಡಲು ಹೆದರುತ್ತಿದ್ದವಳು ಈಗ ಅರಾಮಾಗಿ ಸುಮಂತ್ ನೊಂದಿಗೆ ಮಾತಾಡುತ್ತಾ ಹುಡುಗಿಯೊಡನೆ ಮಾತಾಡಿದಂತೆ ನಟಿಸಲು ಶುರು ಮಾಡಿದೆ. ತಡರಾತ್ರಿಯವರೆಗೂ ವಾಟ್ಸಪ್ ನಲ್ಲಿ ಚಾಟ್ ಮಾಡಲಾರಂಭಿಸಿದೆವು. ಹಗಲು ಕೆಲಸದಲ್ಲಿದ್ದರೂ ನಿರಂತರವಾಗಿ ಚಾಟ್ ಮಾಡುತ್ತಲೇ ಇದ್ದೆವು. ನಾನು ರಿಪ್ಲೈ ಮಾಡುವುದು ಸ್ವಲ್ಪ ತಡವಾದರೂ ಅವನು ಚಡಪಡಿಸುತ್ತಿದ್ದ. ಅಷ್ಟರಲ್ಲಿ ಹತ್ತಾರು ಮೆಸೇಜುಗಳನ್ನು ಕಳಿಸಿರುತ್ತಿದ್ದ.ಅವನ ಪೊಸೆಸ್ಸಿವ್ ನೆಸ್ ಕಂಡು ನಾನು ತುಂಬಾ ಖುಷಿಪಡುತ್ತಿದ್ದೆ. ನನ್ನನ್ನು ಅರೆಕ್ಷಣ ಬಿಟ್ಟಿರಲಾರದಂಥ ಅವನ ಪ್ರೀತಿ ನನಗೆ ಒಂದು ವಿಸ್ಮಯವೆಂಬಂತೆ ಕಾಣುತ್ತಿತ್ತು.

ಕ್ರಮೇಣ ಇದು ವಿಪರೀತವಾಯ್ತು. ಸಾಮಾನ್ಯವಾಗಿ ನಾವು Good night, Bye ಎಂದು ಮೆಸೇಜ್ ಕಳಿಸಿದ ಮೇಲೂ ಒಂದು ಗಂಟೆ ಮತ್ತೆ ಚಾಟ್ ಮಾಡುತ್ತಿದ್ದುದೂ ಉಂಟು. ಎಷ್ಟೋ ಬಾರಿ ನಮ್ಮ ಚಾಟ್ ರೊಮ್ಯಾಂಟಿಕ್ ಆಗಿರುತ್ತಿತ್ತು. ಒಲ್ಲದ ಮನಸ್ಸಿನಿಂದಲೇ ವಿದಾಯ ಹೇಳಿ ಮಲಗುತ್ತಿದ್ದೆವು. ಆದರೆ ಅವೊತ್ತೊಂದಿನ ಅವನು ಹೇಳಿದ ಮಾತು ಕೇಳಿ ನನಗೆ ತುಂಬಾ ಭಯ ಮತ್ತು ಬೇಸರ ಎರಡೂ ಆಯಿತು. ಹಿಂದಿನ ದಿನ ರಾತ್ರಿ ಇಬ್ಬರೂ  12.45 ರ ತನಕ ಚಾಟ್ ಮಲಗಿದ್ದೆವು. ಬೆಳಗ್ಗೆ ಎದ್ದವನೇ ಕಾಲ್ ಮಾಡಿದ. ನನಗೆ ಮಾತಾಡಲು ಆಗುವುದಿಲ್ಲ ಎಂದು ಕಟ್ ಮಾಡಿದೆ. ಆಮೇಲೆ ಆಫೀಸಿಗೆ ಹೋದವಳು ಕಾಲ್ ಮಾಡಿದೆ.

‘ ಓಹ್ .ಈಗ ನೆನಪಾಯ್ತಾ?’ ಅಂದ
‘ ಯಾಕೆ ಹೀಗೆ ಕೇಳ್ತಾ ಇದೀಯಾ?’ ಎಂದೆ.
‘ರಾತ್ರಿ ನಾನು ಮಲಗಿದ ಮೇಲೆ ಮತ್ತೆ ಯಾರ ಹತ್ರ ಚಾಟ್ ಮಾಡ್ತಿದ್ದೆ?’ ಎಂದು ಏರುಧ್ವನಿಯಲ್ಲಿ ಕೇಳಿದ.
‘ ಯಾಕೋ ಹಾಗ್ ಕೇಳ್ತೀಯ.ನಾನ್ ಯಾರ್ ಹತ್ರ ಮಾತಾಡ್ಲಿ? ನಿನ್ಗೆ ಲಾಸ್ಟ್ ಮೆಸೇಜ್ ಮಾಡಿ, ಗುಡ್ ನೈಟ್ ಹೇಳಿ ಮಲಗಿದ್ನಲ್ವ?’ ಅಂದೆ
‘ಯಾಮಾರ್ಸಬೇಡ. ನಿಜ ಹೇಳು.ನೀನ್ ಯಾರ್ದೋ ಜೊತೆ ಚಾಟ್ ಮಾಡ್ತಿರ್ತೀಯಾ’ ಎಂದು ರೇಗಿದ
‘ಯಾಕೆ ಸುಮಂತ್ ಹೀಗೆ ಮಾತಾಡ್ತೀಯಾ ಇವತ್ತು. ಏನಾಗಿದೆ‌ ನಿನಗೆ?’
‘ಹೌದು ಯಾವತ್ತೋ ಮಾತಾಡ್ಬೇಕಿಗದ್ನ ಇವತ್ತು ಹೇಳ್ತಿದ್ದೀನಿ. ನಿನ್ನೆ ರಾತ್ರಿ ನಿನ್ನ ವಾಟ್ಸಪ್ ಲಾಸ್ಟ್ ಸೀನ್ 2.35 a.m.ತೋರ್ಸಿದೆ. ಬೆಳಗ್ಗೆ ಎದ್ದವನೇ ನೋಡಿದೆ. ನಾವು 12.45 ಕ್ಕೆ ಚಾಟಿಂಗ್ ಮುಗ್ಸಿ ಮಲಗಿದ ಮೇಲೂ ನೀನು 2.35ರ ತನಕ ಯಾರ ಹತ್ರಾನೋ ಚಾಟ್ ಮಾಡಿದ್ದೀಯ ಇಲ್ಲ ಅಂದ್ರೆ ಅದ್ಯಾಕೆ ಅಷ್ಟೊತ್ತಲ್ಲಿ ಲಾಸ್ಟ್ ಸೀನ್ ಅಂತಾ ತೋರಿಸರ್ಬೇಕಿತ್ತು? ಮೊಬೈಲ್ ಕೊಡ್ಸಿದ್ದು ನಾನು. ಚಾಟ್ ಮಾಡೋಕ್ ಮತ್ಯಾರೋ?’ ಎಂದವನೇ ನನ್ನ ಪ್ರತಿಕ್ರಿಯೆಯನ್ನೂ ಕೇಳದೇ ಕಾಲ್ ಕಟ್ ಮಾಡಿಬಿಟ್ಟ.

ನಾನೆಷ್ಟು ಬಾರಿ ಕಾಲ್ ಮಾಡಿದರೂ ರಿಸೀವ್ ಮಾಡಲಿಲ್ಲ. ಸಮಜಾಯಿಷಿ ನೀಡಿ ನಾನು ಕಳಿಸಿದ ಯಾವ ಮೆಸೇಜಿಗೂ ರಿಪ್ಲೈ ಮಾಡಲೂ ಇಲ್ಲ. ನನಗೆ ವಿಪರೀತ ಅಳು ಬಂತು ಸರ್‌. ಮರುದಿನವೇ ಏನೋ ಒಂದು ನೆಪ ಹೇಳಿ ಬೆಂಗಳೂರಿಗೆ ಬಂದೆ. ನೇರ ಅವನ ಆಫೀಸಿಗೇ ಹೋದೆ‌. ಮೊದಲು ಭೇಟಿಯನ್ನು ನಿರಾಕರಿಸಿದಾನದರೂ ಆನಂತರ ಬಂದ.

ಬಹಳ ದಿನಗಳ ನಂತರ ಭೇಟಿಯಾದ್ದರಿಂದ ನಾನು ಪತ್ರ ತರುವುದನ್ನು ಮರೆತಿರಲಿಲ್ಲ. ನಾನು ಪತ್ರ ಅವನ ಕೈಗಿಟ್ಟ ತಕ್ಷಣವೇ ಎಲ್ಲ ಜಗಳವನ್ನೂ ಮರೆತವನಂತಾದ. ಎಂದಿನಂತೆ ಪತ್ರದ ಮೊದಲ ಸಾಲುಗಳನ್ನು ಜೋರಾಗಿ ಓದಿದ :
“ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳುಬಂದಿ
ಕೆನ್ನೆ ತುಂಬ ಮುತ್ತು”

ನಂತರ ನಾನು ಮಾತು ಆರಂಭಿಸಿದೆ.

‘ನಾನೂ ನಿನಗೆ ಎಷ್ಟೋ ಸರಿ ಕಾಲ್ ಮಾಡಿದಾಗ ಬ್ಯುಸಿ ಬರುತ್ತೆ, ನೀನು ಮೆಸೇಜಿಗೆ ರಿಪ್ಲೈ ಮಾಡಿರಲ್ಲ, ಆದರೆ ಲಾಸ್ಟ್ ಸೀನ್ ಮಾತ್ರ ತೋರಿಸಿರುತ್ತೆ, ಲಾಸ್ಟ್ ಸೀನ್ ಆವಾಗಷ್ಟೇ ತೋರ್ಸಿರುತ್ತೆ ಆದರೆ ಕಾಲ್ ಮಾತ್ರ ನೀನು ರಿಸೀವ್ ಮಾಡಿರಲ್ಲ‌. ಅದನ್ನೆಲ್ಲ ನಾನ್ಯಾಕೆ ಅನುಮಾನದಿಂದ ನೋಡಬಾರದು ಸುಮಂತ್? ಈ ಮೊಬೈಲ್‌ ನಿಂದಾಗಿ ನಿನಗೆ ನನ್ನ ಮೇಲೆ ಅನುಮಾನ ಬರುತ್ತಿದೆ ಎಂದಾದರೆ ಇದನ್ನು ಇಲ್ಲೇ ಬಿಟ್ಟು ಹೋಗ್ತೀನಿ.
ಎಂದಿದ್ದಕ್ಕೆ ಅವನಿಗೂ ನಾಚಿಕೆಯಾಯಿತು. ತಲೆ ತಗ್ಗಿಸಿ ನಿಂತು ಕ್ಷಮೆ ಕೇಳಿದ.

ಅವನನ್ನು ಅತಿಯಾದ ಪಶ್ಚಾತ್ತಾಪದಲ್ಲಿ ಬಿಡಬಾರದು ಎಂಬ ಕಾರಣಕ್ಕೆ ನಾನೇ ಅವನೆದರು ನನ್ನ ಮೊಬೈಲ್ ನಲ್ಲಿದ್ದ ವಾಟ್ಸಪ್ ನ್ನು ಡಿಲೀಟ್ ಮಾಡಿಬಿಟ್ಟೆ. ‘ ಹೇ ಹಾಗೇನೂ ಮಾಡ್ಬೇಡ’ ಅಂತ ಹೇಳಿದನಾದರೂ ರೀ ಇನ್ ಸ್ಟಾಲ್ ಮಾಡಿಕೊಳ್ಳೋಕೆ ಒತ್ತಾಯ‌ವಂತೂ ಮಾಡ್ಲಿಲ್ಲ. ಈಗ ಬರೀ ಕಾಲ್ ನಲ್ಲಿ ಮಾತಾಡ್ತೀವಿ ಸರ್.

ನಿಮ್ಮ ಈ ಫೇಸ್ ಬುಕ್ ಸ್ಟೇಟಸ್ ನೋಡಿ ನಿಜಕ್ಕೂ ತಂತ್ರಜ್ಞಾನ-ವಿಜ್ಞಾನಗಳು ನಮ್ಮೊಳಗಿನ ಮೂರ್ಖ ಮತ್ತು ವಿಕೃತಗಳನ್ನು ಹೊರಹಾಕುವುದು ನಿಜವಲ್ಲವೆ ಎಂದೆನ್ನಿಸಿತು. ನಾವು ಯಾವಾಗ ಭೇಟಿ ಆಗ್ತೇವೆ ಎಂಬುದು ಕೂಡ ಗೊತ್ತಿಲ್ಲದ ಕಾಲದಲ್ಲಿ ಪ್ರೀತಿಸಿದವರು ಈಗ ಪ್ರತಿ ನಿಮಿಷ ಜೊತೆಲಿರೋ ಥರ ಮಾಡಿರೋ ಈ ಮೊಬೈಲ್ ಗಳು ನಿನವಾಗಲೂ ನಮ್ಮನ್ನ ದೂರ ಮಾಡಿಬಿಟ್ಟಿವೆಯಲ್ಲ.

ಅರೆಕ್ಷಣ ಸಂಪರ್ಕ ಸಾಧ್ಯವಾಗದೇ ಹೋದರೆ ಪೊಲೀಸಿಂಗ್ ಕೆಲಸ ಮಾಡೋಕ್ ಶುರು ಮಾಡ್ಕೋತೀವಲ್ಲ ಅನ್ನಿಸಿ ನಿಮ್ಮ ಸಾಲುಗಳನ್ನು ಮೆಚ್ಚಿಕೊಂಡೆ. ಮತ್ತು ಹಾಗಾಗಿ ನನ್ನ ಈ ಅನುಭವವನ್ನು ಹೆಸರು ಬದಲಿಸಿ ನಿಮಗೆ ಹೇಳಿದ್ದೇನೆ. ಈಗವನು ನನಗೆ ವಾಟ್ಸಪ್ ರೀ ಇ‌ನ್ ಸ್ಟಾಲ್ ಮಾಡಿಕೊಳ್ಳಲು ಒತ್ತಾಯ ಮಾಡುತ್ತಿದ್ದಾನೆ. ಮಾಡಿಕೊಳ್ಳಲಾ? ಬೇಡವಾ? ಎಂಬುದರ ಬಗ್ಗೆ ನಿಮ್ಮ ಸಲಹೆಯನ್ನು ಕೋರುತ್ತೇನೆ.ನಿಮ್ಮ ಅಮೂಲ್ಯ ಸಮಯವನ್ನು ಇದನ್ನು ಓದಲು ಮೀಸಲಿಟ್ಟಿದ್ದಕ್ಕೆ ಕೃತಜ್ಞತೆಗಳು.

*                       *                       ‌*               *

ವಾರಪತ್ರಿಕೆಯಲ್ಲಿ ಪ್ರಕಟವಾಗುವ ‘ಆಪ್ತ ಸಮಾಲೋಚನ’ ಅಂಕಣಕ್ಕೆ ಸಲಹೆ ಕೋರಿ ಬರೆದ ಪತ್ರದಂತಿದ್ದ ಈ ಬರಹವನ್ನು ಓದಿ ಮುಗಿಸುವಾಗ ನಾನು ಫಾರ್ಮಾದಿಂದ ಪ್ಯಾಂಪರ್ಸ್ ತಂದು ಕೊಟ್ಟು ಮನೆಯಲ್ಲಿ ಕೂತಿದ್ದೆ. ನನ್ಮವಳನ್ನೊಮ್ಮೆ ನೋಡಿದೆ. ಅಡುಗೆ ಮನೆಯಲ್ಲಿ ಬ್ಯುಸಿ ಇದ್ದಳಾಕೆ. ಅಂಕಿತಾಗೆ ಏನು ಉತ್ತರಿಸುವುದೆಂದು ತಿಳಿಯದೆ ಮತ್ತೊಂದು ಪ್ರಶ್ನೆ ಕೇಳಿದೆ.

‘ ಹೌದು‌. ಆ ರಾತ್ರಿ 2.35a.m.ಗೆ ನೀನೇಕೆ ಮೊಬೈಲ್ ನೋಡಿದ್ದೆ? ಅದರಲ್ಲೂ ವಾಟ್ಸಪ್ ಏಕೆ ಓಪನ್‌ ಮಾಡಿದ್ದೆ?’

‘ಮೊಬೈಲ್ ಬಂದಾಗಿನಿಂದ ಒಮ್ಮೆಯೂ ಬಳಸದಿದ್ದ ;

“ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳುಬಂದಿ
ಕೆನ್ನೆ ತುಂಬ ಮುತ್ತು”
ಎಂಬೀ ಸಾಲುಗಳನ್ನು ರೆಕಾರ್ಡ್ ಮಾಡಿ ಕಳಿಸೋಣ ಬೆಳಗ್ಗೆ ಕೇಳಿ ಅವ ಖುಷಿ ಪಡ್ತಾನೆ ಅಂದುಕೊಂಡು ಎದ್ದೆ‌ ಸರ್. ಆದರೆ‌ ಅದು ಆ ರಾತ್ರಿ ಸಾಧ್ಯ ಆಗಲಿಲ್ಲ.
ಎಂದು ಅಂಕಿತ ರಿಪ್ಲೈ ಮಾಡಿದಳು.

‘ ವಾಹ್ ! That’s en apic gesture. You can go ahead and install watsapp’ ಎಂದಷ್ಟೇ ರಿಪ್ಲೈ ಮಾಡಿದೆ.

ಸಾಕಷ್ಟು ಥಮ್ಸಪ್ ಗಳು, ನಮಸ್ಕಾರಗಳು‌, ಹೆಬ್ಬೆಟ್ಟಿನ ಗುರುತುಗಳನ್ನು ಕಳಿಸಿದ ಅಂಕಿತ ಕೊನೆಯಲ್ಲಿ ಒಂದು ಸೂಚನೆ ಕಳಿಸಿದ್ದನ್ನು ಹೇಳಿದರೆ ಈ ಇಡೀ ಕಥೆಯ ಸಾರ ಇನ್ನೂ ಸ್ಪಷ್ಟವಾದೀತು ಎಂಬ ಕಾರಣಕ್ಕೆ ನಿಮಗೂ ಅದನ್ನು ಹೇಳಿಬಿಡುತ್ತೇನೆ. ಅವಳ ಮೆಸೇಜ್ ಹೀಗಿತ್ತು :

“ಸರ್, ದಯವಿಟ್ಟು ತಪ್ಪು ತಿಳಿಯಬೇಡಿ. ನಾನು ನಿಮ್ಮೊಂದಿಗೆ ಹಂಚಿಕೊಂಡದ್ದನ್ನು ನೀವು ನಿಮ್ಮ ಫೇಸ್ ಬುಕ್ ವಾಲ್ನಲ್ಲಿ ಹಂಚಿಕೊಳ್ಳುವುದೋ ಅಥವಾ ಅದಕ್ಕೆ ಸಂಬಂದಿಸಿದ ಸ್ಟೇಟಸ್ ಒಂದನ್ನು ಹಾಕುವುದನ್ನೋ ಮಾಡಬೇಡಿ. ಕಾರಣ ನಿಮಗೆ ಗೊತ್ತು”

ಇದನ್ನೋದಿ ನಾನೊಂದು ಕಿರುನಗೆ ಬೀರಿದೆ. ನನ್ನವಳ‌ ಗಮನಕ್ಕೂ ಬಾರದಂತೆ ಅಂಕಿತಾಳ ಎಲ್ಲ ಮೆಸೇಜುಗಳನ್ನು ಡಿಲೀಟ್ ಮಾಡಿ, ಸಂಪೂರ್ಣ ಚಾಟ್ ನ್ನೇ ಡಿಲೀಟ್ ಮಾಡಿದೆ. ಅವಳೂ ಹಾಗೇ ಮಾಡಿರಬಹುದು ಅಥವಾ ಮೆಸೆಂಜರ್ ನ್ನೇ ಡಿಲೀಟ್ ಮಾಡಿರಬಹುದಾಕೆ.

ಅಂಕಿತಾಳ ಈ ಆತಂಕ ನನ್ನದೂ, ನಿಮ್ಮದೂ ಮತ್ತು ಅಕ್ಷರಗಳಿಗೆಲ್ಲ ಸಾಕ್ಷ್ಯ ಕೇಳುವ ಪ್ರತಿಯೊಬ್ಬರದೂ ಅಲ್ಲವೆ?

‍ಲೇಖಕರು avadhi

February 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Sudha Hegde

    ಹೊಸಕಾಲದ ತಲ್ಲಣಗಳು ಬರವಣಿಗೆಯಾಗಲು ತವಕಿಸುತ್ತಿದ್ದವು. ನೀವದನ್ನು ಆಗುಮಾಡುತ್ತಿರುವಿರಿ. ಬರೆಯುತ್ತಿರಿ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: