ಬೆರಣಿಯ ಭಾಗ್ಯ…

ಎಸ್‌ ಸಾಯಿಲಕ್ಷ್ಮೀ

ಅದೊಂದು ಕಾಲ. ಪೂರ್ವದ ಜನರು ಹಂಡೆ ಒಲೆ ಉರಿಸಿ ಕೊಳವೆಯಿಂದ ಊದುತ್ತ ಸೌದೆ, ಪುರಳೆ, ಹೊಟ್ಟು, ಬೆರಣಿ ಉರಿಸುತ್ತಿದ್ದ ವಿರಾಮದ ಯುಗ. ಅಲ್ಲಿಗೆ ಕೊಂಡಿಯಾಗಿದ್ದವರು ಮಲೆನಾಡಿನಿಂದ ಬೆಂಗಳೂರಿಗೆ ವಲಸೆ ಬಂದ ನನ್ನಪ್ಪ. ಅಲ್ಲಿಯ ಆಚಾರ, ವಿಚಾರ, ಉಪಚಾರ, ಅಡುಗೆ ಈ ಎಲ್ಲವನ್ನು ಹಾಗೆ ಬರುವಾಗ ಅಗತ್ಯಕ್ಕಿಂತ ತುಸು ಹೆಚ್ಚೇ ತುಂಬಿಕೊಂಡು ಬಂದು ಉದ್ಯಾನನಗರಿಯ ನಿವಾಸಿಗಳಾಗಿಬಿಟ್ಟಿದ್ದರು. ಮ ರಿ ಮಲೆನಾಡೇ ಇಲ್ಲಿಯು ಸೃಷ್ಟಿಸಿ, ಕೊಂಬೆ ಕೊಂಬೆಯಲ್ಲಿ ಹೂ ಚಿಗುರಿಸಿ, ಹಣ್ಣು, ಕಾಯಿ ತುಳುಕಿಸಿದ್ದರು.

ಹಣ್ಣಿನ ಮರಗಳಿಗಂತೂ ಲೆಕ್ಕವಿಲ್ಲ. ಸಾಲದಕ್ಕೆ ನಾಲ್ಕು ಕಲ್ಪವೃಕ್ಷಗಳು. ಅವು ಎತ್ತರಕ್ಕೆ ಬೆಳೆದು ತಲೆಯೆತ್ತಿ ನಿಂತು ನಾವು ಯಾರಿಗೇನು ಕಮ್ಮಿ? ಎಂಬಂತೆ ಬೀಗುವುವು. ಹಲಸಿನ ಮರ ಹಸಿರು ಎಲೆಯ ಉಡುಗೆ ಹೆಣೆದಂತೆ ಕಂಗೊಳಿಸಿದರೆ, ಅಡಿಯ ಭೂಮಿ ಕಂದುಬಣ್ಣದ ತರಗೆಲೆಯ, ದಿವ್ಯ ನೆಲಹಾಸಿಂದ ಸಂಭ್ರಮಿಸುವುದು. ಅಪ್ಪನಿಗೆ ಅದನ್ನೆಲ್ಲ ಉರಿಸಿ, ಹಂಡೆ ಒಲೆಗೆ ಹವಿಸ್ಸಾಗಿ ನೀಡುವುದು ಪ್ರಿಯ ಕಾಯಕ. ಸಹಾಯಕ್ಕೆ, ಒಣಗಿ ಬಿದ್ದ ತೆಂಗಿನಗರಿಗಳು ಇದ್ದೇ ಇರುವವು.

ಅಪ್ಪ ತಮ್ಮ ನಿತ್ಯದ ಮಣ್ಣ ಕೆಲಸದಲ್ಲಿ, ಮಾಸಿದ ಪಂಚೆ ಮೇಲೆ ಕಟ್ಟಿ ಕೆಳಕ್ಕೆ ಬೀಳಲು ಹವಣಿಸುವ ಸುಲೋಚನೆಯನ್ನು ಆಗೀಗ ಎಡದ ಕೈಯಿಂದ ಹಿಂದಕ್ಕೆ ತಳ್ಳುತ್ತ, ಮತ್ತೊಂದು ಕೈ ಬಳಸಿ ತೋಟದ ಕಸವನ್ನೆಲ್ಲ ಒಟ್ಟು ಮಾಡುವರು. ಅವರ ನಡಿಗೆಯಲ್ಲಿ ಚಿಗರೆಮರಿಯಂತಹ ಉತ್ಸಾಹದ ವೇಗ. ಈ ಎಲ್ಲ ತೋಟೋತ್ಪನ್ನಗಳು, ಬೂದಿಯಾಗುವ ಮೋಕ್ಷಕ್ಕೆ ಅಪ್ಪನ ಕೈ ಕಾಯುತ್ತಿದ್ದರೂ, ಅಪ್ಪನಿಗೆ ಒಣಗಿದ ಬೆರಣಿ ಇಲ್ಲದ್ದಿದ್ದರೆ ಮೊಗದಲ್ಲಿ ಮಂದಹಾಸ ಮೂಡದೆ ಮೂಡೇ ಹಾರಿ ಹೋಗುವುದಂತು ದಿಟ.

ಬಿಸಿಲುಗಾಲದಲ್ಲಿ ಅಪ್ಪ ಅತಿ ಚುರುಕಾಗಿ, ಬೆರಣಿ ಸಂಗ್ರಹಿಸಿ, ಜೋಳದ ರೊಟ್ಟಿಯರಾಶಿಯಂತೆ ಪೇರಿಸಿಡುವರು. ಮಳೆ ಚಳಿಗಾಲಕ್ಕಾಗಿ ಬಫರ್ ಸ್ಟಾಕ್, ಬರಲಿರುವ ವರುಷದ ದಿನಗಳಿಗೆ ಬೆರಣಿಯನ್ನು ಸಂಗ್ರಹಿಸಿ ಎಣಿಸಿ ಹೊಂದಿಸಿ ನೋಡಿನೋಡಿ, ತೃಪ್ತಿ ಅನುಭವಿಸುವರು. ಅದಷ್ಟು ಅವರ ಆಸ್ತಿ, ಆ ಸಗಣಿ ರೊಟ್ಟಿಯ ಸಾಮ್ರಾಜ್ಯದಲ್ಲಿ, ಯಾರಿಗೂ ಪ್ರವೇಶವಿಲ್ಲ.

ಅಪ್ಪನಿಗೆ ಕಾಲಕಾಲಕ್ಕೆ ಬೆರಣಿ ಒದಗಿಸುವ ಕಾಳಮ್ಮ, ನಂಜಮ್ಮ, ಗೌರಮ್ಮ ಪರಮ ಆಪ್ತರು. ಅವರ ಗ್ರೇಡೇ ಬೇರೆ.ಅವರ ದರುಶನ ದೊರೆತರೆ ಜೀವನ ಪಾವನವಾದ ಸ್ಥಿತಿ. ವಿಷ್ಣುವಿನ ಕರದಲ್ಲಿ ಸುದರ್ಶನ ಚಕ್ರವಿದ್ದಂತೆ, ಅಪ್ಪನ ಸಂಕೇತ ಬೆರಣಿ. ಅವರಿಗೆ ಅದರ ಅಗಲ,ಬಣ್ಣ,ಗಾತ್ರ,ವಿನ್ಯಾಸ ಈ ಎಲ್ಲದರ ಬಗ್ಗೆಯು ತಮ್ಮದೇ ಆದ ಲೆಕ್ಕಾಚಾರವಿತ್ತು. ಮುರಿದರೆ ಗರಿಗರಿ ಚಕ್ಕುಲಿಯಂತೆ ಹದವಾಗಿರಬೇಕು. ಆಗಷ್ಟೇ ಅದು ಸಮರ್ಪಕವಾಗಿ ಬೆಂಕಿಯ ವಾಹಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂಬುದು ಅವರ ಅನುಭವದ ನುಡಿ. ಇಂತಹ ಬೆರಣಿಪ್ರಿಯ ಅಪ್ಪನಿಗಾಗಿ ಬಾಲ್ಯದಲ್ಲಿ ನಾನು,ಕ್ಯೂನಲ್ಲಿ ಡಬ್ಬವಿಟ್ಟು, ಭೈರಪ್ಪ, ಕಾರಂತರ ಕೃತಿ ಹಿಡಿದು ಓದುತ್ತ, ಸಾಗುತ್ತ ಸೀಮೆಎಣ್ಣೆ ತಂದುಕೊಡುತ್ತಿದ್ದೆ. ಕಾಶಿಯಿಂಡ ತಂದ ಗಂಗಾಜಲ ಕಂಡಷ್ಟು ಖುಷಿ ಅಪ್ಪನಿಗೆ. ಅಪ್ಪನನ್ನು ಮೆಚ್ಚಿಸಲು ನಾನೆಂದು ಮುಂದು. 

ನಾನಾ ಕಾರಣಗಳಿಂದ, ಒಮ್ಮೆ ನಿರೀಕ್ಷಿಸಿದ ಮಟ್ಟದಲ್ಲಿ, ಅಪ್ಪನಿಗೆ ಬೆರಣಿ ಕಲೆ ಹಾಕಲು ಸಾಧ್ಯವಾಗಿರಲಿಲ್ಲ. ಅಪ್ಪ ಊರಲ್ಲೇ ಉಳಿದಿದ್ದರೆ ಸೈಕಲ್ ಏರಿ ಬೆರಣಿಕರ್ತರನ್ನು ಭೇಟಿ, ಬೇಟೆಯಾಡುತ್ತಿದ್ದರೇನೋ. ಆದರೆ ಇದ್ದಕ್ಕಿದ್ದಂತೆ ಅಪ್ಪ, ಅಮ್ಮ ಏಕಕಾಲಕ್ಕೆ, ಮನೆದೇವರ ಸೇವೆಗೆ ತಿರುಪತಿಗೆ ನಾಕಾರು ದಿನ ಹೋಗಿಬರುವ, ಸಂದರ್ಭ ಒದಗಿಬಂತು. ಅವರಿಗೆ ತಿರುಮಲೆ ಪ್ರಭುವಿಗಿಂತ ಬೆರಣಿದೇವನ ಸಾಕ್ಷಾತ್ಕಾರವೇ ಅಮೂಲ್ಯವೆನಿಸಿದರೂ ತಿವಿಯುವ ದೃಷ್ಟಿಯ, ಪಾಪಪುಣ್ಯದ ಭಯದ ಅಮ್ಮನಿಗೆ ಎದುರು ಹೇಳಲಾದೀತೇ? ಅದೂ ಮನೆದೇವರ ವಿಷಯದಲ್ಲಿ ಮನಸ್ಸಿಲ್ಲದ ಮನದಿಂದ ಅಂತೂ ಹೊರಟರು. ಹೋಗುವಾಗಲೂ ನನಗೆ ಅದೇ ಎಚ್ಚರದ ನುಡಿ. ‘ಕಾಳಮ್ಮ, ನಂಜಮ್ಮ, ಗೌರಮ್ಮ ಎಲ್ಲಿ ಸಿಕ್ಕರೂ ಬಿಡಬೇಡಾ. ಅವರ ಸಬೂಬು ಕೇಳಬೇಡ. ಬೆರಣಿ ಬೇಕೇಬೇಕೂಂತ ಹೇಳು. ಅಡ್ವಾನ್ಸ್ ಐದು ರೂಪಾಯಿ ಕೊಟ್ಟುಬಿಡು. ಆ ದಾಕ್ಷೀಣ್ಯಕ್ಕಾದರೂ ತಂದು ಹಾಕ್ತಾರೆ.’

ಈಗಿನಂತೆ ಆಗ ಮನೆ ಮನೆಗಳಲ್ಲಿ, ಕೈ, ಬಾಯಿ, ಜೇಬುಗಳಲ್ಲಿ ದೂರವಾಣಿ ಇರುತ್ತಿರಲಿಲ್ಲ. ಒಂದು ರಸ್ತೆಯಲ್ಲಿ ಒಂದೆರಡು ಮನೆಯೊಡೆಯರು ಪೋನ್ ಮಾಲೀಕರಾಗಿರುತ್ತಿದ್ದರು ಅಷ್ಟೇ. ಅದು ವ್ಯಕ್ತಿಗಳ ಅಧಿಕಾರ, ಸ್ಥಾನಮಾನ, ಆರ್ಥಿಕ ಅಂತಸ್ತಿನ ಅರ್ಹತೆಯ ಮೇಲೆ ಪೋನ್ ಸಂಪರ್ಕ ಲಭಿಸುತ್ತಿದ್ದುದರಿಂದ ತುರ್ತು ಸಂದರ್ಭ ಹೊರತುಪಡಿಸಿ, ಸಾಮಾನ್ಯರಿಗೆ, ಆ ಸೇವೆಯ ಸೌಲಭ್ಯ ಪ್ರಾಪ್ತವಾಗುತ್ತಿರಲಿಲ್ಲ. ಇಲ್ಲವಾದಲ್ಲಿ, ಅಪ್ಪ ಬೆರಣಿ ಲಭ್ಯತೆಯ ಬಗ್ಗೆ ತಿರುಪತಿಯಿಂದ ನನಗದೆಷ್ಟು ಬಾರಿ ಪೋನ್ ಮಾಡಿಬಿಡುತ್ತಿದ್ದರೋ ತಿಳಿಯೆ.

ಎಲ್ಲೆಲ್ಲಿ ಹುಡುಕಿ ತಡಕಿದರೂ, ಈ ನನ್ನ ಪಾಪಿ ಕಂಗಳಿಗೆ ಕಾಳಮ್ಮ ನಂಜಮ್ಮ, ಗೌರಮ್ಮನ ದರುಶನ ಭಾಗ್ಯ ದೊರೆಯಲಿಲ್ಲ. ನಮ್ಮ ಅಂದಾಜಿನ ಪ್ರಕಾರ ಅಪ್ಪ ಅಮ್ಮ, ತಿರುಪತಿಯಿಂದ ಮರಳಲು, ಒಂದೆರಡು ದಿನಗಳಷ್ಟೇ ಉಳಿದಿದ್ದವು. ಬಂದೊಡನೆ ಬೆರಣಿ ಕಾಣದಿದ್ದರೆ, ಅಪ್ಪನ ಮೊಗದಲ್ಲಿ ಕಟ್ಟಿಕೊಳ್ಳಬಹುದಾದ ನಿರಾಶೆಯ ಕಾರ್ಮುಗಿಲ ಸಂತೆ ನೆನಪಿಗೆ ಬಂದು ನನ್ನ ಆತಂಕ ಹೆಚ್ಚಿತು.

ಆ ದಿನ ಶನಿವಾರ. ಬೆಳಗಿನ ಶಾಲೆ ಮುಗಿಸಿ ಶೀಘ್ರವೆ ಮನೆಗೆ ಬಂದೆ. ಒಳ್ಳೆಯ ಬಿಸಿಲು. ಊಟ ಮಾಡಿದವಳಿಗೆ ಚಂದದ ನಿದ್ರೆ ಆವರಿಸಿತು. ನನಗೆ ಹಗಲುಗನಸು. ಬೆರಣಿಯನ್ನು ರಾಶಿ ಮಾಡಿ ಅಪ್ಪನಿಗೆ ಅರ್ಪಿಸುತ್ತಿದಂತೆ. ಇದ್ದಕ್ಕಿದ್ದ ಹಾಗೆ ‘ಅಂಬಾ’ಎಂಬ ದನಿಗೆ ಬೆಚ್ಚಿ ಕಣ್ಣುಜ್ಜಿಕೊಂಡೆ ಎದ್ದೆ. ನಾಲ್ಕೈದು ಸಲ ಅದೇ ಅಂಬಾ ಸ್ವರ. ಅಂಗಳಕ್ಕೆ ಓಡಿದೆ. ನಾವಾಗ ವಾಸ ಮಾಡುತ್ತಿದ್ದುದು ಎನ್ ಆರ್ ಕಾಲೋನಿಯ, ಗೋಖಲೆ ಇನ್ಸ್ ಟ್ಯೂಟ್ ಎದುರುಮನೆಯಲ್ಲಿ.

ಮನೆಯ ಮುಂದೆ ದೊಡ್ಡ ಖಾಲಿ ಜಾಗ. ಮೂಲೆಗೆ ಕಸದ ತೊಟ್ಟಿ. ಅದಕ್ಕೆ ಅಂಟಿದಶತೆಯೆ ಬಟ್ಟೆ ಒಗೆಯುವ ಕಲ್ಲು. ಅದನ್ನು ದಾಟಿ ಇನ್ನು ಮುಂದೆ ವಿಶಾಲವಾದ ಬುಲ್ ಟೆಂಪಲ್ ರಸ್ತೆ. ಅಕ್ಕಪಕ್ಕದ ರಸ್ತೆಯವರೆಲ್ಲ ನಮ್ಮ ಮನೆಯ ಮುಂದಿನ ಜಾಗ ಬಳಸಿ, ಓಡಾಡುತ್ತಿದ್ದರು. ಆ ರಸ್ತೆ ಬದಿಗೆ ಲೈಟ್ ಕಂಬ. ಅದಕ್ಕೆ ತೂಗು ಹಾಕಿದಂತೆ ಬಿಡುಗಡೆಯಾಗುತ್ತಿದ್ದ, ಹಿಂದಿ ಸಿನಿಮಾಗಳ ನಾಯಕ ನಾಯಕಿಯರ ಆಕರ್ಷಕ ಬಣ್ಣದ ಪ್ರಣಯ ಸನ್ನಿವೇಶದ ಪೋಸ್ಟರ್. ರಾಜೇಶ್‌ಖನ್ನ, ದೇವಾನಂದ, ಶರ್ಮಿಳಾ, ಸಾಧನಾ ಅವರೆಲ್ಲ, ತೊಟ್ಟಿಯ ಬದಿಯ ಆ ಕಂಬದ ಮೇಲೆ ವಿದ್ಯುಚ್ಛಕ್ತಿಯ ಯಾವ ಭಯವು ಇಲ್ಲದೆ ರಾರಾಜಿಸುವರು. ಒಮ್ಮೊಮ್ಮೆ ಅವರ ಮೇಲೆ ಕಾಗೆಯು ಕುಳಿತು ಸಂಗೀತ ಹಾಡುವುದು.

ನಮ್ಮ ಪಕ್ಕದ ಮನೆಯೆ ಇಂಜನೀಯರ್ ಮನೆ. ನಮ್ಮ ಮನೆಯ ಗೋಡೆ ಅವರ ಬಂಗಲೆಯ ಗೋಡೆಗೆ,ಅನ್ಯೋನ್ಯವಾಗಿ ಅಂಟಿಕೊಂಡಿತ್ತು. ಪಾಪ ಗೋಡೆಗಳಿಗೇನು ಗೊತ್ತು, ಶ್ರೀಮಂತರು, ಮಧ್ಯಮ ವರ್ಗದವರೊಡನೆ ಸೌಹಾರ್ದದಿಂದ ಇರಬಾರದೆಂದು.’  ‘ಅಂಬಾ’ ಈ ಕೂಗು, ಒಳಗೆ ಆಗಷ್ಟೇ ಎದ್ದಿದ್ದ, ನನ್ನ ಕಿವಿಯ ಮೇಲೆ, ಬೀಳುತ್ತಲೆ ಇತ್ತು. ಆ ಹಸು, ಒಳಗಿನಿಂದ ಹೊರಕ್ಕೆ ಹಬ್ಬಿಸಿದ್ದ ನಿತ್ಯಮಲ್ಲಿಗೆ ಬಳ್ಳಿಗೆಲ್ಲಿ ಬಾಯಿ ಹಾಕಿಬಿಡುತ್ತದೆಯೋ ಎಂಬ ಆತಂಕದಿಂದ, ಹೊರಕ್ಕೆ ಬಂದರೆ, ಅದೆಂತಹ ಅಪರೂಪದ ದೃಶ್ಯ.

ಹಸುಗಳು, ಗಂಟೆ ಶಬ್ದ ಹೊಮ್ಮಿಸುತ್ತ, ಸಾಲು ಸಾಲಾಗಿ ಮನೆಯ ಮುಂದೆ ಬರುತ್ತಿವೆ. ಅವುಗಳಲ್ಲಿ, ಒಂದು ಹಸುವಿಗೆ, ನೈಸರ್ಗಿಕ ಬಾಧೆ ಕಾಡಿರಬೇಕು. ಅದು ‘ತೂಪ್’ಎಂದು ಸದ್ದು ಮಾಡುತ್ತ, ಸಗಣಿಯ ಪುಟ್ಟ ಬೆಟ್ಟ, ನೆಲಕ್ಕೆ ಉರುಳಿಸಿತು. ಉಳಿದವು ತಮ್ಮ ಗಾಂಭೀರ್ಯ, ವಾಮಾನಿಕೆ ತೊರೆದು ಅದರ ಮೇಲ್ಪಂಕ್ತಿಯನ್ನು ಅನುಸರಿಸಿ ಲೀಟರ್‌ಗಟ್ಟಲೆ ಗಂಜಲದಿಂದ ಮಣ್ಣುತಾಯಿಯನ್ನು ತಣಿಸಿ ಏನೂ ತಿಳಿಯದಂತೆ, ಮುಂದೆ ಹೋಗಿಬಿಟ್ಟವು. ‘ಹಾಳು ಹಸುಗಳು, ಯಾರೂ ಓಡಾಡೋಕೆ ಆಗದ ರೀತಿ ಅಡ್ಡ ಹಾಕಿವೆ’ ಎಂದು ನಾನು ಮನಸಾರೆ ಶಪಿಸಿಕೊಳ್ಳುತ್ತಿರುವಾಗ, ಮಿಂಚಿನಂತೆ ಹೊಳೆದ ಸತ್ಯ, ‘ಇದರಿಂದಲೇ ಅಲ್ಲವೇ ಬೆರಣಿ ಮಾಡೋದು?’ ಆ ಸಗಣಿ ತೊಪ್ಪೆಯನ್ನೆಲ್ಲ ಒಂದು ಒಡೆದ ಪ್ಲಾಸ್ಟಿಕ್ ಬಕೇಟಿನಲ್ಲಿ ತುಂಬಿ ಕಾರ‍್ಯೋನ್ಮುಖಳಾದೆ.

ನಮ್ಮ ಮನೆಯ ಗೋಡೆ, ನೆರೆಯ ಇಂಜನೀಯರ್ ಮನೆಯ ಗೋಡೆಯೆ ನನ್ನ ಕಲಾಕೃತಿಯ ಉದ್ಭವ ಸ್ಥಾನ. ಅದು ಸ್ಥಳ ಒದಗಿಸಿ, ಸಗಣಿಯೆಲ್ಲ ದುಂಡಗೆ ಬೆರಣಿಯ ರೂಪ ತಾಳಿ ವಿಜೃಂಭಿಸಿದವು. ಎರಡು ದಿನ ಕಳೆಯುವಲ್ಲಿ, ಚೆನ್ನಾಗಿ ಒಣಗಿದ ಬೆರಣಿಯ ರಾಶಿ ಸಿದ್ಧವಾಯಿತು. ಇಂಜನೀಯರ್ ಮನೆಯವರು, ಈ ಕಡೆಯ ಗೋಡೆ ನೋಡುವ ಗೊಡವೆಗೂ ಹೋಗದೆ ನಾನು ಪಾರಾದೆ.

ಅಪ್ಪ ಅಮ್ಮ ತಿರುಪತಿಯ ಲಾಡು ಹಿಡಿದು, ಸುಸ್ತಾದ ಮುಖಭಾವ ಹೊತ್ತು, ಬಂದಿಳಿದರು. ಬೆರಣಿಯ ರಾಶಿ ನೋಡಿದ ಅಪ್ಪ ಕಾಳಮ್ಮ, ಗೌರಮ್ಮ, ನಂಜಮ್ಮನಿಗೆ ಧಾರಾಳವಾಗಿ ಹರಸಿದಾಗ, ನಾನು ಅದರ ಮೂಲ ಅರುಹಿದೆ. ಅಪ್ಪನಿಗೆ ಪ್ರಯಾಣದ ದಣಿವೆಲ್ಲ, ಒಂದೇ ಬಾರಿಗೆ ಮಾಯವಾದಂತಾದರೆ, ಅಮ್ಮನ ವದನದಲ್ಲಿ ವಂಶವಾಹಿನಿ ತಂತು, ನನ್ನಲ್ಲು, ಈ ಬೆರಣಿ ಪ್ರೀತಿ ಆಸ್ಥೆ ಚಿಗುರಿಸಿರುವುದನ್ನು ಕಂಡು ಕೇಳಿ ಕೋಪದ ಸಿಡಿಮಿಡಿಯ ಡೈನಮೈಟ್ ಹೊತ್ತಿ, ಕಣ್ಣಲ್ಲೇ ಸ್ಪೋಟಿಸಿತು. ‘ಬಹಳ ಚೆನ್ನಾಗಿ ಒಲಿದಿದೆ ಈ ಬೆರಣಿ ಕಲೆ. ನೀನು ಸ್ಕೂಲ್ ಬಿಟ್ಟು, ಇದೇ ಕೆಲಸ ಮಾಡು. ಇದಕ್ಕೆ ನೀನು ಲಾಯಖ್ಖು.’ ಆದರೆ ಅಪ್ಪ ಮಾತ್ರ ನೋಟದಲ್ಲೇ ಪ್ರಶಂಸೆಯ ಮಳೆಗರೆಯುತ್ತ, ಆಶೀರ್ವವದಿಸುತ್ತಿದ್ದರು.

ಮುಂದೊಂದು ದಿನ ಆಕಾಶವಾಣಿಯ ಹಿರಿಯ ಅಧಿಕಾರಿಯಾಗಿ ಅನೇಕ ವಿದ್ವಾಂಸರು, ಸಾಹಿತಿಗಳು, ಸಂಗೀತ ಕಲಾವಿದರನ್ನು ಸಂದರ್ಶಿಸುವಾಗ, ಅಮ್ಮನ ಹರಕೆ ನೆನಪಾಗುತ್ತದೆ. ಜೊತೆಯಲ್ಲೆ ಆ ಬೆರಣಿ ಕಲೆ ಹಾಗೆ ನಿಂತು ಹೋಯಿತಲ್ಲ, ಎಂಬ ವಿಷಾದವೂ ಮೂಡುತ್ತದೆ.

‍ಲೇಖಕರು Admin

July 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: