ದೀಪಕ್ ಚಾಹರ್ ಎಂಬ ಪ್ಯೂರ್ ಪ್ಲೇಯರ್

ಕೃಷ್ಣ ಭಟ್

ಇಂಥದ್ದೊಂದು ಪರಿಸ್ಥಿತಿಯಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಕೇವಲ ಆಟವೊಂದೇ ಸಾಕಾಗುವುದಿಲ್ಲ. ಜತೆಗೆ ಕಾಲೂರಿ ನಿಲ್ಲುವ ದೃಢ ಮನೋಬಲ, ಕೊನೆವರೆಗೂ ಕೈಸೋಲದೆ ಹೋರಾಡ್ತೇನೆ ಎನ್ನುವ ಛಲವೂ ಬೇಕಾಗಿರ್ತದೆ.

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಗಿದ್ದೂ ಅದೇ. ದೀಪಕ್ ಚಾಹರ್ ಕ್ರೀಸಿಗೆ ಬಂದಾಗ ಆರು ವಿಕೆಟ್ ಗಳು ಉರುಳಿಬಿದ್ದಿದ್ದವು. ಕೃಣಾಲ್ ಪಾಂಡ್ಯನನ್ನು ಹೊರತುಪಡಿಸಿದರೆ ಬ್ಯಾಟಿಂಗ್ ಸ್ಪೆಷಲಿಸ್ಟ್ ಗಳು ಉಳಿದಿರಲಿಲ್ಲ. ಕೈಯಲ್ಲೇನೋ 138 ಬಾಲಿತ್ತು, 116 ರನ್ ಬೇಕಿತ್ತು. ಆದರೆ ವಿಕೆಟ್ ಬೇಕಲ್ಲ?

ಅಂಥ ಹೊತ್ತಿನಲ್ಲಿ ಅಂಗಣಕ್ಕಿಳಿವ ಮುನ್ನ ಕೋಚ್ ರಾಹುಲ್ ದ್ರಾವಿಡ್ ಬೆನ್ನು ತಟ್ಟಿ ಹೇಳಿದ್ದರು: ನೀನು ಏಳನೇ ಡೌನ್ ನ ಆಟಗಾರ. ಹಿಂದೆ ಯಾರು, ಮುಂದೆ ಯಾರು? ಗುರಿ ಎಷ್ಟು? ಅದು ಸಾಧ್ಯಾನಾ? ಎಂಬ ಯಾವ ಸಂಗತಿಯನ್ನೂ ತಲೆಯಲ್ಲಿ ಇಟ್ಟುಕೊಳ್ಳಬೇಡ. ಕೊನೆಯ ಚೆಂಡಿನವರೆಗೂ ಆಡುವ ಒಂದೇ ದೃಷ್ಟಿ ನಿನ್ನಲ್ಲಿರಲಿ… ಹೋಗಿ ಬಾ.. ಅಂದಿದ್ದರು.

ದೀಪಕ್ ಚಾಹರ್ ಅದನ್ನೇ ಮಾಡಿದರು. ಯಾರೊಬ್ಬರೂ ಭಾರತ ಗೆಲ್ಲಬಹುದು ಅಂತ ಕಲ್ಪಿಸಿಕೊಳ್ಳಲೂ ಇಲ್ಲ. ಯಾವಾಗ ಆಲೌಟಾದೀತು ಎನ್ನುವುದಷ್ಟೇ ಲೆಕ್ಕಾಚಾರ. ತಂಡದ ಮೊತ್ತ 193 ಆದಾಗ ಕೃಣಾಲ್ ಔಟಾಗುತ್ತಿದ್ದಂತೆಯೇ ಕೊನೆಯಾಸೆ ಇಟ್ಟುಕೊಂಡವರೂ ಕೈಬಿಟ್ಟಿದ್ದರು.

ಆದರೆ ಅಷ್ಟು ಹೊತ್ತಿಗೆ ದೀಪಕ್ ಚಾಹರ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರು. ರನ್ ಗಳಿಗೆ ಹಪಹಪಿಸದೆ ಸುಮ್ಮನೆ ಕ್ರೀಸ್ ನಲ್ಲಿ ಉಳಿಯುವುದಷ್ಟೇ ಉದ್ದೇಶ ಎಂಬಂತೆ ಆಡುತ್ತಿದ್ದರು. ನಂತರ ಬಂದ ಭುವನೇಶ್ವರ್ ಅವರನ್ನೂ ತಮ್ಮದೇ ಟೋನ್ ಗೆ ಸೆಟ್ ಮಾಡಿದ್ರು.

ಒಂದು ಹಂತದಲ್ಲಿ ಗೆಲುವು ಅಸಾಧ್ಯ ಎಂಬ ಸ್ಥಿತಿಯಿಂದ ನಿಧಾನಕ್ಕೆ ಎದ್ದ ಭಾರತಕ್ಕೆ 225 ರನ್ ಆದಾಗ ಗೆದ್ದರೂ ಗೆಲ್ಲಬಹುದು ಎಂಬ ಆಸೆ ಹುಟ್ಟುವಂತಾಯಿತು. ಆದರೆ ಲಂಕಾ ಬತ್ತಳಿಕೆಯ ಬೌಲರ್ ಗಳನ್ನು‌ ಕಡೆಗಣಿಸುವಂತೆಯೇ ಇರಲಿಲ್ಲ.

ಒಂದು ಹಂತದಲ್ಲಿ ಬೌಂಡರಿ ಮೂಲಕ ಆಕ್ರಮಣದ ಶಕ್ತಿ ತೋರಿದರೂ ಕಂಟ್ರೋಲ್ ಮಾಡಿಕೊಂಡರು ಚಾಹರ್. ಈ ತಾಳ್ಮೆ ಎಷ್ಟಿತ್ತೆಂದರೆ 16 ಬಾಲ್ ನಲ್ಲಿ 15 ರನ್ ಬೇಕಿದ್ದಾಗಲೂ ಹಸರಂಗನ ನಾಲ್ಕು ಒಳ್ಳೆಯ ಎಸೆತಗಳಿಗೆ ಅಷ್ಟೇ ಗೌರವ ನೀಡಿದ್ದರು.

ಅಂತಿಮವಾಗಿ 5 ಎಸೆತಗಳು ಉಳಿದಿರುವಂತೆಯೇ ಗೆಲುವಿನ ಹಾರ ತೊಡಿಸಿ ಕುಣಿದಾಡಿದರು. ಇಡೀ ತಂಡವೇ ಕುಣಿದು ಕುಪ್ಪಳಿಸಿತು.

ನಿಜವೆಂದರೆ, ನಿನ್ನೆ ಹೊಡೆದ 69 ರನ್ ಗಳಿವೆಯಲ್ಲ.. ಅದು ಯಾವುದೇ ಫಾರ್ಮಟ್ ನಲ್ಲಿ, ಯಾವುದೇ ಕ್ರಿಕೆಟ್ ನಲ್ಲಿ ದೀಪಕ್ ಹೊಡೆದ ಗರಿಷ್ಠ ರನ್! ಆವತ್ತೊಮ್ಮೆ ಐಪಿಎಲ್ ನಲ್ಲಿ ಪಂಜಾಬ್ ತಂಡದ ವಿರುದ್ಧ 20 ಎಸೆತಗಳಲ್ಲಿ 39 ರನ್ ಬಾರಿಸಿ ಚೆನ್ನೈಯನ್ನು ಗೆಲ್ಲಿಸಿದ್ದರು. ಆಗ ಅವರ ಬ್ಯಾಟಿನ ಶಕ್ತಿ ಸ್ವಲ್ಪ ಮಟ್ಟಿಗೆ ಜಾಹೀರಾಗಿತ್ತು. ಇದನ್ನು ಬಿಟ್ಟರೆ ಐದು ಏಕದಿನದಲ್ಲಿ ಗಳಿಸಿದ ಒಟ್ಟು ಸ್ಕೋರು 87! 103 ಟಿ 20 ಪಂದ್ಯಗಳಿಂದ ಹುಟ್ಟಿದ್ದು ಬರೀ 265 ರನ್.

ಉತ್ತರ ಪ್ರದೇಶದ ಆಗ್ರಾದ ಈ 28ರ ಯುವಕನ ಅಣ್ಣ ರಾಹುಲ್ ಚಾಹರ್ ಕೂಡಾ ಒಳ್ಳೆಯ ಬೌಲರ್. ಅಣ್ಣನೊಂದಿಗೆ, ತಂಗಿಯೊಂದಿಗೆ ಸದಾ ಜೋಕ್ ಮಾಡ್ತಾ ಇರುವ ಹುಡುಗ ದೀಪಕ್.

ಅಣ್ಣನ ಅದ್ಭುತ ಆಟದ ಬಳಿಕ ತಂಗಿ ಮಾಲತಿ ಚಾಹರ್ ಇನ್ ಸ್ಟಾದಲ್ಲಿ ಹೇಳಿದ್ದು ಹೀಗೆ: ನೀನು ಸ್ಟಾರ್ ಕಣೋ.. ಸದಾ ಮಿನುಗ್ತಾ ಇರಬೇಕು..

ನಾವು ಹೇಳೋದು ಅದನ್ನೇ ಅಲ್ವಾ?

‍ಲೇಖಕರು Admin

July 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: