ಬೆಚ್ಚಿ ಬಿದ್ರಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ʼಚಿಕ್ ಹುಡ್ಗೀರು… ಮೊಸ್ತು ಅದಾರೆ. ನಿಮ್ಮಂತೋರ್ಗೆ ಕಾಣ್ಸಲ್ಲ ಅಷ್ಟೆ. ನಮಗ್ಗೊತ್ತು. ಯಾವ್ ‌ಓಟೆಲ್ಗೆ, ಯಾವ್‌ ಬಿಲ್ಡಿಂಗ್‌ಗೆ ಹೊಸ ಹುಡ್ಗೀರ್ನ ಎಲ್ಲಿಂದ ಕರ್ಕೊಂಡ್ಬಂದರ್ವೆ, ಇಲ್ಲಾ ಎತ್ತಾಕ್ಕೊಂಡ್ಬಂದವ್ರೆ, ನಮ್ತಾವ್ ‌ಬರೋರು ಯಾರು ಯಾವ ವೊಸಾ ವುಡ್ಗಿ ಅತ್ರ ಓಗ್ತಾರೆ. ಎಲ್ಲ ಗೊತ್ತಾಗುತ್ತೆ.ʼ  

ಬೆಚ್ಚಿ ಬಿದ್ರಾ? ೧೯೯೫-೯೬ರ ಆಸುಪಾಸಿನಲ್ಲಿ ಇಂತಹ ಮಾತುಗಳನ್ನು ಕೇಳುವಾಗ ಮೊದಮೊದಲಲ್ಲಿ ನನಗೂ ಕಸಿವಿಸಿ ಆಗ್ತಿತ್ತು. ಬೆಚ್ಚಿಬಿದ್ದದ್ದೂ ಉಂಟು. ‘ಜಾಗೃತಿ’ ಸಂಸ್ಥೆಯ ರೇಣು ಅಪ್ಪಚ್ಚು ಮತ್ತವರ ಸಂಗಡಿಗರೊಂದಿಗೆ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿದ್ದ ಸಾಗರ್ ‌ಚಿತ್ರಮಂದಿರದ ಅಕ್ಕಪಕ್ಕದ ರಸ್ತೆಗಳು, ಪುಟ್ಟ ಪುಟ್ಟ ಹೊಟೆಲ್ಗಳಲ್ಲಿ ಕುಳಿತು ಸೆಕ್ಸ್‌ ವರ್ಕ್ ‌ಮಾಡುವ ಮಹಿಳೆಯರೊಂದಿಗೆ ಮಾತುಕತೆಯಾಡುವಾಗ ಈ ರೀತಿಯ ವಾಕ್ಯಗಳು ಬಹಳ ಸಾಮಾನ್ಯವಾಗಿತ್ತು.

ಲೈಂಗಿಕ ಕೆಲಸ / ಸೆಕ್ಸ್‌ ವರ್ಕ್‌ನಲ್ಲಿರುವವರ ಮಕ್ಕಳಿಗಾಗಿ ಮತ್ತು ವ್ಯಾಪಾರಿ ಲೈಂಗಿಕ ಶೋಷಣೆಯಿಂದ ರಕ್ಷಿಸಲ್ಪಟ್ಟ ಮಕ್ಕಳಿಗಾಗಿ ಮೈಸೂರಿನಲ್ಲಿ ಪರಶುರಾಂ ಮತ್ತು ಸ್ಟಾನ್ಲಿ ಯವರ ಮುಂದಾಳತ್ವದಲ್ಲಿ ನಡೆಯುವ ‘ಒಡನಾಡಿ’ ಸಂಸ್ಥೆ ರೂಪುಗೊಳ್ಳುತ್ತಿದ್ದಾಗ ಆದ ಚರ್ಚೆಗಳಲ್ಲಿ ಕೇಳಿ ಬರುತ್ತಿದ್ದ ಆತಂಕ ʼಈ ಮಕ್ಕಳು ಅವರ ಕುಟುಂಬದೊಡನೆಯೇ ಇದ್ದರೆ ಅವರೂ ಅದೇ ಹಾದಿಗೆ ಹೋಗುವುದು ಸ್ವಾಭಾವಿಕವೇ ಆಗಿಬಿಡುತ್ತದೆ.

ಇಷ್ಟರ ಮೇಲೆ ಎಲ್ಲೆಲ್ಲಿಂದಲೋ ಹೆಣ್ಣು ಮಕ್ಕಳನ್ನು  ಸಾಗಿಸಿಕೊಂಡು ಬಂದು ಲೈಂಗಿಕ ಶೋಷಣೆಗೆ ಹಾಕುವವರ ಜಾಲವೂ ಇದ್ದು ಅವರ ಪ್ರಭಾವಕ್ಕೂ ಈ ಮಕ್ಕಳು ಸುಲಭವಾಗಿ ಬೀಳುವ ಸಾಧ್ಯತೆಯಿದೆʼ.

ಆಂಧ್ರ ಪ್ರದೇಶದ ಒಂಗೋಲ್‌ನಲ್ಲಿ ಸೆಕ್ಸ್‌ವರ್ಕ್‌ನಲ್ಲಿರುವ ಮಹಿಳೆಯರು ಮತ್ತು ಅವರ ಕುಟುಂಬದವರೊಡನೆ ಹೆಲ್ಪ್‌ಸಂಸ್ಥೆಯ ರಾಮಮೋಹನ್ ‌ನಿಮ್ಮರಾಜು ಅವರ ತಂಡದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದದ್ದು, ಈ ಮಹಿಳೆಯರ ಮಕ್ಕಳಿಗಾಗಿ ಹಗಲು ಮತ್ತು ರಾತ್ರಿ ಹೊತ್ತಿನ ಮಕ್ಕಳ ಆರೈಕೆ ಕೇಂದ್ರಗಳನ್ನು ನಡೆಸಬೇಕು. ಇಲ್ಲವಾದರೆ ಈ ಮಕ್ಕಳು ಬಹಳ ಸುಲಭವಾಗಿ ಶೋಷಣೆಗೆ ಈಡಾಗುತ್ತಾರೆ. ಶೋಷಣಾಮಯ ಲೈಂಗಿಕ ಹಿಂಸೆಯಲ್ಲಿ ಬೆರೆತು ಹೋಗುತ್ತಾರೆ. ಅಥವಾ ಮಕ್ಕಳನ್ನು ಕದ್ದುಕೊಂಡು, ಸಾಗಿಸಿಕೊಂಡು ಹೋಗುವವರ ಪ್ರಭಾವಕ್ಕೆ ಬೀಳುತ್ತಾರೆ.

ಹೈದರಾಬಾದಿನಲ್ಲಿ ಪ್ರಜ್ವಲ ಸಂಸ್ಥೆ ನಡೆಸುವ ಸುನೀತಾಳೊಂದಿಗೆ ಕೇಂದ್ರದ ಮಕ್ಕಳ ಕಾರ್ಯಕ್ರಮಗಳ ವಿಶ್ಲೇಷಣೆ ನಡೆಸುವಾಗ ಅರ್ಥವಾದದ್ದು ವೇಶ್ಯಾವಾಟಿಕೆಗಳಿಗೆ ಮಾರಾಟವಾದ ಮಕ್ಕಳನ್ನು ರಕ್ಷಿಸುವುದಕ್ಕೆ ಸರ್ಕಾರ ಸ್ಪಷ್ಟವಾದ ನೀತಿ, ಕಾನೂನು ಮತ್ತು ಅವುಗಳ ಜಾರಿಗೆ ವ್ಯವಸ್ಥೆ ಮಾಡಲೇಬೇಕು. 

ಈ ಎಲ್ಲದರಲ್ಲೂ ಇರುವುದು ಹೆಚ್ಚೂ ಕಡಿಮೆ ಒಂದೇ ಎಳೆ. ಮಕ್ಕಳನ್ನು ಕುರಿತು ಕಾಳಜಿ. ಮಕ್ಕಳು ಲೈಂಗಿಕ ಶೋಷಣೆಗೆ, ಹಿಂಸೆಗೆ ಬಲಿಯಾಗದಂತೆ ರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಜಾರಿಗಾಗಿ ಯತ್ನ. 

ಜಗತ್ತಿನ ಎಲ್ಲ ದೇಶಗಳಲ್ಲಿ ಮಕ್ಕಳನ್ನು, ಅದರಲ್ಲೂ ಹದಿವಯಸ್ಸಿನ ಹೆಣ್ಣು ಮಕ್ಕಳನ್ನು ವಿಧವಿಧವಾದ ರೀತಿಗಳಲ್ಲಿ ಲೈಂಗಿಕವಾಗಿ ಬಳಸಲು ಒದಗಿಸುವ ಭೂಗತ ಮಾರುಕಟ್ಟೆ ಸದಾ ಸಕ್ರಿಯವಾಗಿದೆ. ಹೆಚ್ಚಿನ ಹಣದ ಹೂಡಿಕೆಯಿಲ್ಲ. ಯಾರದೋ ದುಡಿಮೆ(!) ಮತ್ತು ಯಾರೋ ಶೋಷಣೆಗೆ ಸಿಲುಕುವವರು. ಅಪಾಯವಿದೆ. ಸಿಕ್ಕಿಬಿದ್ದರೆ ಕಾನೂನು ಪೊಲೀಸು, ನ್ಯಾಯಾಲಯ, ಶಿಕ್ಷೆ. ಹೀಗಾಗಿ ಅದಕ್ಕೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡರೆ ಆಯಿತು ಎನ್ನುವ ಅನುಭವಿಗಳು ಎಲ್ಲೆಡೆ ಇದ್ದಾರೆ. ಎಲ್ಲೋ ಅಪರೂಪಕ್ಕೆ ಅಡ್ಡಕಸಬಿಗಳು ಅಥವಾ ಹೊಸಬರು ಸಿಕ್ಕಿಬೀಳುತ್ತಾರೆ. ಅಷ್ಟೆ!

ಭಾರತ ಸಂವಿಧಾನ ಮೂಲಭೂತ ಹಕ್ಕುಗಳ ವ್ಯಾಪ್ತಿಯಲ್ಲೇ (ಪರಿಚ್ಛೇದ ೨೩.೧) ಮನುಷ್ಯರ ಸಾಗಣೆ ಮಾರಾಟವನ್ನು ನಿಷೇಧಿಸಿದೆ. ೧೯೫೬ರಷ್ಟು ಹಳೆಯದಾದ ಅನೈತಿಕ ಮಾನವ ಕಳ್ಳಸಾಗಣೆ (ತಡೆ) ಕಾಯಿದೆ ಜಾರಿಯಲ್ಲಿದೆ. ಭಾರತ ದಂಡ ಸಂಹಿತೆಗೆ ೨೦೧೩ರಲ್ಲಿ ಸೆಕ್ಷನ್‌೩೭೦ಕ್ಕೆ ತಿದ್ದುಪಡಿಯಾಗಿ ಮಾನವ ಕಳ್ಳಸಾಗಣೆ ವಿಚಾರದೊಳಗೆ ಮಕ್ಕಳನ್ನು ದೈಹಿಕ ಶೋಷಣೆ ಅಥವಾ ಲೈಂಗಿಕ ಶೋಷಣೆ, ಜೀತಕ್ಕೆ ತಳ್ಳುವುದು ಮತ್ತು ಅಂಗಾಂಗ ಕಳ್ಳತನವನ್ನೂ ಒಳಗೊಂಡಂತೆ ಶಿಕ್ಷಾರ್ಹ ಆಪರಾಧಿಕ ಕೃತ್ಯಗಳೆಂದು ಪರಿಗಣಿಸಲಾಗಿದೆ. 

ಈಗ ಸಾಕಷ್ಟು ಜನಜನಿತವಾಗುತ್ತಿರುವ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ ೨೦೧೫ರಲ್ಲೂ ಸಾಗಣೆಗೀಡಾಗಬಹುದಾದ ಅಥವಾ ಸಾಗಣೆಗೀಡಾದ ಮಕ್ಕಳನ್ನು ಕುರಿತು ವಿಶೇಷ ಗಮನ ಕೊಡಬೇಕು ಎಂಬ ನಿರ್ದೇಶನವಿದೆ. ಆದರೂ ಮಕ್ಕಳ ಸಾಗಣೆ ಮಾಡಿದರೆಂದು ಶಿಕ್ಷೆಗೆ ಗುರಿಯಾದವರ ಸಂಖ್ಯೆ ಅಷ್ಟಿಲ್ಲ. 

ಕರ್ನಾಟಕ ಸರ್ಕಾರಕ್ಕಾಗಿ ೨೦೦೫ರಲ್ಲಿ ಯುನಿಸೆಫ್ ಪರವಾಗಿ ಶ್ರೀಮತಿ ಸುಚಿತ್ರಾ ರಾವ್‌ ಅವರೊಡಗೂಡಿ ʼಮಹಿಳೆಯರು ಮತ್ತು ಮಕ್ಕಳ ಸಾಗಣೆ ಮತ್ತು ಮಾರಾಟ ತಡೆ ಕ್ರಿಯಾ ಯೋಜನೆʼ ಸಿದ್ಧಪಡಿಸುವ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನನಗೆ ವಹಿಸಿತ್ತು. ಮಕ್ಕಳ ಹಕ್ಕುಗಳ ಕ್ಷೇತ್ರದ ಕ್ರಿಯಾಶೀಲರ ಹತ್ತಿರ ಒಂದಷ್ಟು ಹಿನ್ನೆಲೆ ಮಾಹಿತಿಗಳಿತ್ತು.

ಈ ಹಿಂದೆ ಮಾರಾಟ ಸಾಗಣೆಗೊಳಗಾದ ಮಕ್ಕಳನ್ನು ರಕ್ಷಿಸುವ ಸಂಸ್ಥೆಗಳೊಡನೆ ಹತ್ತಿರದಿಂದ ಕೆಲಸ ಮಾಡಿದ ಅನುಭವವಿತ್ತು. ಕ್ರಿಯಾ ಯೋಜನೆಗೆ ಪೂರಕವಾಗಿ ಬೇಕಾದ ವಿಚಾರ ಸಂಗ್ರಹಿಸಲು, ಪೂರಕವಾದ ಅಂಶಗಳನ್ನು ಪಟ್ಟಿ ಮಾಡಲು ಗೃಹ ಇಲಾಖೆ /ಪೊಲೀಸ್‌; ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ; ಕಾನೂನು ಇಲಾಖೆಯೇ ಮೊದಲಾದವರೊಂದಿಗೆ ಸಮಾಲೋಚನೆಗಳನ್ನು ನಡೆಸಿದ್ದೆ.

ಜೊತೆಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಸ್ವಯಂಸೇವಾ ಸಂಘಟನೆಗಳು, ವ್ಯಕ್ತಿಗಳು, ಮಾಹಿತಿಗಳ ಕಣಜಗಳೇ ಆಗಿದ್ದ ಕೆಲವು ಪತ್ರಕರ್ತರು, ಕಾನೂನು ತಜ್ಞರೊಂದಿಗೆ ವಿವರಗಳನ್ನು ತೆಗೆದುಕೊಳ್ಳುತ್ತಿದ್ದೆ. ಅಷ್ಟು ಹೊತ್ತಿಗೆ ಈ ವಿಚಾರವನ್ನು ಕುರಿತು ಸಾಕಷ್ಟು ಬಾರಿ ಓಡಾಡಿದ್ದರೂ, ಹೊಸ ಹೊಸ ಸಂಗತಿಗಳು, ಪ್ರಕರಣಾಧ್ಯಯನಗಳು ಬಂದಾಗ ನಡುಗಿದ್ದುಂಟು. ಜೊತೆಗೆ ಭರವಸೆಯ, ಪುನರ್ವಸತಿ ಹಾಗೂ ತಡೆಗಟ್ಟುವಿಕೆಯ ಹೊಸ ಸಾಧ್ಯತೆಗಳನ್ನು ಕಂಡಾಗ ಪುಳಕವಾಗುತ್ತಿತ್ತು.    

ಜಾಗೃತಿ, ಒಡನಾಡಿ ಮತ್ತು ಹೆಲ್ಪ್ ‌ಸಂಸ್ಥೆಗಳೊಡನೆ ಅವರ ಯೋಜನೆಗಳನ್ನು ಕುರಿತು ಮಾತನಾಡುವಾಗ ನಾನು ಕ್ರೈ ಸಂಸ್ಥೆಯಲ್ಲಿದ್ದೆ. ಜನರಿಂದ ಸಂಪನ್ಮೂಲಗಳನ್ನು ಸಂಗ್ರಹಿಸಿ ಅದನ್ನು ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆ, ಅಭಿವೃದ್ಧಿ ಕೆಲಸಗಳನ್ನು ನಡೆಸುವ ಸ್ವಯಂಸೇವಾ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡುವ ಜನೋಪಕಾರಿ ಕೆಲಸವನ್ನು ಕ್ರೈ ನಡೆಸುತ್ತಿದೆ.

ಸಹಾಯ ಅಪೇಕ್ಷಿಸಿ ಕ್ರೈ ಸಂಸ್ಥೆಯನ್ನು ಸಂಪರ್ಕಿಸುವ ಸಂಸ್ಥೆಗಳ ಪೂರ್ವಾಪರ ತಿಳಿದುಕೊಳ್ಳುವ, ಅವರ ಯೋಜನೆ, ಕಲ್ಪನೆ, ಗುರಿ ಉದ್ದೇಶ, ಅವರು  ಕೆಲಸ ಮಾಡುವ ಸಮುದಾಯವೇ ಮೊದಲಾದವುಗಳನ್ನು ಕುರಿತು ಅಧ್ಯಯನ ಮಾಡಿ, ಸೂಕ್ತವೆನಿಸಿದರೆ ಅಂತಹವರಿಗೆ ದೇಣಿಗೆ ನೀಡಲು ಸಂಸ್ಥೆಯ ವರಿಷ್ಟರಿಗೆ ಸಲಹೆ ಕೊಡುವುದು ನನ್ನ ಕೆಲಸವಾಗಿತ್ತು. ಜೊತೆಗೆ ಅವರ ಕೆಲಸಗಳನ್ನು ಕುರಿತು ಉಸ್ತುವಾರಿ ಮಾಡುವುದು, ಅವರಿಗೆ ಬೇಕಾದ ಮಾಹಿತಿ, ತರಬೇತಿ ಕೊಡುವುದು ಇತ್ಯಾದಿ ಜೊತೆಗಿತ್ತು.  

ಸಾಗಣೆ ಮಾರಾಟಕ್ಕೆ ಈಡಾದ ಮತ್ತು ವೇಶ್ಯಾವಾಟಿಕೆಗಳಿಗೆ ಮಾರಾಟವಾಗಿದ್ದ ಹೆಣ್ಣುಮಕ್ಕಳನ್ನು ರಕ್ಷಿಸಿ, ಅವರಿಗೆ ಆಪ್ತ ಸಮಾಲೋಚನೆ ಮಾಡಿ, ಚಿಕಿತ್ಸೆ ಒದಗಿಸಿ, ಪೌಷ್ಟಿಕ ಆಹಾರ, ಔಷಧಿ ಕೊಟ್ಟು, ಅವರ ಕುಟುಂಬಗಳೊಡನೆ ಸೇರಿಸಿ ನೆಮ್ಮದಿ ಒದಗಿಸುವ ಕೆಲಸದ ಆವಶ್ಯಕತೆಯನ್ನು ಜಾಗೃತಿ ಸಂಸ್ಥೆ ಮುಂದಿಟ್ಟಿತ್ತು. ಬೆಂಗಳೂರಿನಲ್ಲಿ ಮಾರಾಟ ಸಾಗಣೆಗೀಡಾದ ಮಕ್ಕಳೇ ಎಂದು ಹಲವರು ಹುಬ್ಬೇರಿಸಿದ್ದರು.

ಈ ವಿಚಾರವನ್ನು ಸ್ಪಷ್ಟ ಮಾಡಿಕೊಳ್ಳಲು ಹಲವು ಬಾರಿ ರೇಣು ಅಪ್ಪಚ್ಚು ಅವರೊಡನೆ ಕೆಂಪೇಗೌಡ ರಸ್ತೆ, ಕಲಾಸಿಪಾಳ್ಯ, ರೈಲ್ವೆ ನಿಲ್ದಾಣ, ಕೆಂಪೇಗೌಡ ಬಸ್‌ಸ್ಟಾಂಡ್‌ಗಳಲ್ಲಿ ತಿರುಗಾಡಬೇಕಿತ್ತು. ಜೊತೆಗೆ ರಸ್ತೆ ಬದಿಯಲ್ಲಿ, ಚಿಕ್ಕ ಚಿಕ್ಕ ಹೊಟೆಲ್‌ಗಳಲ್ಲಿ, ಬಸ್‌ಸ್ಟಾಂಡು, ರೈಲ್ವೆನಿಲ್ದಾಣದ ಮೂಲೆಗಳಲ್ಲಿ (ಪೊಲೀಸ್‌ಕಣ್ಣಿಗೆ ಬೀಳದಂತೆ) ಕುಳಿತು ವಿವರಗಳನ್ನು ಕೇಳಬೇಕಿತ್ತು.

ನಿಜ ಹೇಳ್ತೇನೆ ಅಂದಿನ ಆ ಮನಸ್ಥಿತಿಯಲ್ಲಿ ಮೊದಮೊದಲು ನನಗಿದ್ದ ಆತಂಕ ಯಾರಾದರೂ ನನ್ನನ್ನ ಈ ಮಹಿಳೆಯರೊಂದಿಗೆ ನೋಡಿಬಿಟ್ಟರೆ ಎನ್ನುವುದು. ಮೊದಲ ಬಾರಿಗೆ ʼಜಾಗೃತಿʼಯ ಕೇಂದ್ರಕ್ಕೆ ಹೋಗಿದ್ದಾಗ ಅಲ್ಲಿ ರಕ್ಷಣೆಯಲ್ಲಿದ್ದ ಹೆಣ್ಣುಮಕ್ಕಳೊಡನೆ ಮಾತನಾಡುವಾಗ ನನಗಾದ ಮುಜುಗರ ನೋಡಿ ರೇಣು ಜೋರಾಗಿ ನಕ್ಕಿದ್ದರು.

ʼನಿಮಗಿಂತ ವಿನತೆ ಶರ್ಮಾ (ಈಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನ ನಡೆಸಿರುವ ಪ್ರಾಧ್ಯಾಪಕಿ, ಆಗ ನಾವು ಸಹೋದ್ಯೋಗಿಗಳು) ಭಾರೀ ಧೈರ್ಯದವರಪ್ಪಾ. ಎಷ್ಟು ಆರಾಮವಾಗಿ ಈ ಹುಡುಗಿಯರೊಂದಿಗೆ ಮಾತನಾಡಿದರುʼ ಎಂದು ಛೇಡಿಸಿದ್ದರು.

ಜಾಗೃತಿಯ ಯೋಜನಾ ಪ್ರಸ್ತಾವನೆಗೆ ಇದ್ದುದರಲ್ಲಿ ಸುಲಭವಾಗಿ ಹೆಚ್ಚಿನ ಪ್ರಶ್ನೋತ್ತರಗಳಿಲ್ಲದೆ ಅನುಮೋದನೆ ಸಿಕ್ಕಿತ್ತು.

ಒಡನಾಡಿ ಹಾಗೂ ಹೆಲ್ಪ್‌ಸಂಸ್ಥೆಗಳ ಗುರಿ ಉದ್ದೇಶಗಳೊಡನೆಯ ಯೋಜನೆಯ ಪ್ರಸ್ತಾವನೆಗೆ ಕೆಲವು ವರಿಷ್ಟರು ಪ್ರಶ್ನೆಗಳನ್ನೆತ್ತಿದ್ದರು. ಸೆಕ್ಸ್‌ವರ್ಕ್‌ನಲ್ಲಿರುವವರ ಮಕ್ಕಳನ್ನು ತಂದು ಆಶ್ರಯದಲ್ಲಿಟ್ಟರೆ, ಈ ಮಕ್ಕಳಿಗೆ ಹಗಲು ರಾತ್ರಿ ಆರೈಕೆ ನೀಡುವ ತಂಗುದಾಣವನ್ನು ನಿರ್ಮಿಸಿದರೆ ಆ ಮಹಿಳೆಯರು ಆರಾಮವಾಗುವುದಿಲ್ಲವೆ? ಅವರಿಗೆ ಆ ಅನೈತಿಕ ವೃತ್ತಿಯಲ್ಲಿ ಮುಂದುವರೆಯಲು, ನಿರಾತಂಕವಾಗಿರಲು ಅವಕಾಶ ಮಾಡಿದಂತಾಗುತ್ತದಲ್ಲವೆ? ಅವರು ಯಾರೂ ಈ ವೃತ್ತಿಯಿಂದ ಹೊರಗೆ ಬರುವುದಿಲ್ಲ.

ನಾವೇ ವೇಶ್ಯಾವೃತ್ತಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಪೋಷಕರ ಜವಾಬ್ದಾರಿ ಕಿತ್ತುಕೊಂಡಂತಾಗುತ್ತದೆ. ಈ ಸಂಸ್ಥೆಗಳ ಯೋಜನೆಗಳಿಗೆ ನೆರವು ಏಕೆ ಕೊಡಬೇಕು? ಇತ್ಯಾದಿ.

ಹೆಲ್ಪ್‌ ಮತ್ತು ಒಡನಾಡಿ ಸಂಸ್ಥೆಗಳ ಪ್ರಸ್ತಾವನೆಯನ್ನು ಜಂಟಿಯಾಗಿ ನಾನು ಮತ್ತು ಸಹೋದ್ಯೋಗಿಯಾಗಿದ್ದ ಮಹೇಂದ್ರ ರಾಜನ್‌(ಈಗ ಯುನಿಸೆಫ್‌ನಲ್ಲಿ ವಿಪತ್ತು ನಿರ್ವಹಣಾ ಸಂಯೋಜನಾಧಿಕಾರಿಯಾಗಿದ್ದಾರೆ) ಮತ್ತೆ ಮತ್ತೆ ಯಾವ ದಿಕ್ಕಿನಿಂದ ನೋಡಿದರೂ ಅದರಲ್ಲಿ ನಮಗೇನೂ ತೊಂದರೆ ಕಾಣುತ್ತಿಲ್ಲ.

ಮಕ್ಕಳು ಮತ್ತೆ ಮತ್ತೆ ಶೋಷಣೆಯ ಬಲೆಯಲ್ಲಿ ಬೀಳುವುದನ್ನು ತಪ್ಪಿಸಲು ಈ ಯೋಜನೆ. ಒಡನಾಡಿಯಾಗಲೀ ಹೆಲ್ಪ್‌ಆಗಲೀ ಈ ಮಕ್ಕಳನ್ನು ಶಾಶ್ವತವಾಗಿ ಕುಟುಂಬದಿಂದ ಬೇರೆ ಮಾಡುತ್ತಿಲ್ಲ. ಸೆಕ್ಸ್‌ವರ್ಕ್‌ನಲ್ಲಿರುವ ಮಹಿಳೆಯರು ಸಂಪಾದನೆಯ ಸಮಯದಲ್ಲಿ ಇದ್ದಾಗ ಅವರ ಮಕ್ಕಳಿಗೆ ಆಶ್ರಯ ಕೊಡುವುದರಲ್ಲಿ ಏನೂ ತಪ್ಪಿಲ್ಲ. ಈ ಮಕ್ಕಳನ್ನು ಶೈಕ್ಷಣಿಕ ವಾತಾವರಣದಲ್ಲಿ ಬೆಳೆಸಿದರೆ ಮತ್ತು ಅಂತಹ ಅವಕಾಶಗಳನ್ನು ಸೃಷ್ಟಿಸಿದರೆ ಇವರು ಶೋಷಣೆಯಿಂದ ತಪ್ಪಿಸಿಕೊಳ್ಳುತ್ತಾರೆ.

ಅಷ್ಟೇ ಅಲ್ಲ ಈ ತಾಯಂದಿರು ಅನೇಕರು ತಮ್ಮ ಮಕ್ಕಳು ಶಿಕ್ಷಣದಲ್ಲಿ ತೊಡಗಿಕೊಳ್ಳಲು ಅಷ್ಟಿಷ್ಟು ಹಣವನ್ನೂ ಮೀಸಲಿಡುತ್ತಿದ್ದರು. ಬಹುತೇಕರು ಸ್ಪಷ್ಟವಾಗಿ ಹೇಳುತ್ತಿದ್ದುದು, ಆಗಿದ್ದು ಆಗಿಹೋಯಿತು. ಹಿಂದಿನದು ಈಗಿನದು ಏನೇ ಇರಲಿ, ಮಕ್ಕಳು ಓದು ಬರಹ ಕಲಿಯಲಿ.   

ಈ ಯೋಜನೆಗಳಿಗೆ ಹಿಂಜರಿಕೆಯಿಂದಲೇ ಮೊದಮೊದಲು ಅಲ್ಪಕಾಲದ ಅನುಮೋದನೆ ದೊರೆಯಿತು. ಮುಂದಿನದು ಇತಿಹಾಸ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಒಡನಾಡಿ ಮತ್ತು ಹೆಲ್ಪ್‌ ಈ ಎರಡೂ ಸಂಸ್ಥೆಗಳ ಪ್ರವರ್ತಕರು ಮತ್ತು ಸಿಬ್ಬಂದಿ ಲೈಂಗಿಕ ಶೋಷಣೆಗೆ ಬಲಿಯಾಗಿರಬಹುದಾದ, ಸಾವಿರಾರು ಮಕ್ಕಳನ್ನು ರಕ್ಷಿಸಿದ್ದಾರೆ. ಮಾದರಿ ಪುನರ್ವಸತಿ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.

ಮಕ್ಕಳ ಹಕ್ಕುಗಳನ್ನು ರಕ್ಷಿಸುವ ದಿಶೆಯಲ್ಲಿ ತಮ್ಮೊಡನೆ ಸಾವಿರಾರು ಜನರ ಮನೋಭಾವನೆಗಳನ್ನು ಬದಲಿಸಿದ್ದಾರೆ. ಜೊತೆಗೆ ಸಾಕಷ್ಟು ಅಪಾಯಗಳನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಎಲ್ಲದರ ಮಧ್ಯ ಕರ್ನಾಟಕ ಮತ್ತು ಆಂಧ್ರಪ್ರದೇಶ/ತೆಲಂಗಣಾ ಸರ್ಕಾರ ಮತ್ತು ನೀತಿ ನಿರೂಪಕರ ಚಿಂತನೆಯಲ್ಲಿ ಮಕ್ಕಳ ಪರವಾದ ನಿಲುವುಗಳನ್ನು ಬೆಳೆಸಿದ್ದಾರೆ.

ಪ್ರಮುಖವಾಗಿ ಗೃಹ (ಪೊಲೀಸ್‌) ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳೊಡನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ, ನ್ಯಾಯಾಲಯಗಳಲ್ಲಿ ಬದಲಾವಣೆಯ ಅಲೆಗೂ ಕಾರಣವಾಗಿದ್ದಾರೆ.  

೨೦೦೧ರಲ್ಲಿ ನಾನು ಅಶೋಕ ಇನ್ನೋವೇಟರ್ಸ್ ‌ಫಾರ್‌ದ ಪಬ್ಲಿಕ್‌ ಸಂಸ್ಥೆಯ ಪ್ರತಿನಿಧಿಯಾಗಿ ಸುನೀತಾ ಅವರ ಬೆನ್ನಿಗೆ ಬಿದ್ದಿದ್ದೆ. ಆಕೆಯ ಅಶೋಕಾ ಫೆಲೋಶಿಪ್ಗೆ ಬೇಕಾದ ಮೂಲಮಾಹಿತಿಗಳನ್ನು ಸಂಗ್ರಹಿಸುವ ಕೆಲಸದಲ್ಲಿದ್ದೆ. ಪ್ರಜ್ವಲಾ ಸಂಸ್ಥೆ ಆರಂಭಿಸಿರುವ ಕರ್ನಾಟಕ ಮೂಲದ ವೃತ್ತಿಪರ ಸಮಾಜ ಕಾರ್ಯಕರ್ತೆ ಸುನೀತಾ ಕೃಷ್ಣನ್‌ ಆಂಧ್ರಪ್ರದೇಶ ಸರ್ಕಾರದೊಡನೆ ನಡೆಸಿದ ಹಲವಾರು ವಕೀಲಿ ಕೆಲಸಗಳು ಮತ್ತು ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯ ಪರಿಣಾಮದಿಂದಾಗಿ ಆ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಸಾಗಣೆ ತಡೆಯುವ ದಿಶೆಯಲ್ಲಿ ಕ್ರಿಯಾ ಯೋಜನೆ ಹೊರಡಿಸಬೇಕಾಯಿತು.

ಅಷ್ಟು ಹೊತ್ತಿಗೆ ಸುನೀತಾಳನ್ನು ಕುರಿತು ಮತ್ತು ಆಕೆ ಮಕ್ಕಳನ್ನು ವೇಶ್ಯಾವಾಟಿಕೆಗಳಿಂದ ರಕ್ಷಿಸುವ ಮತ್ತು ಎಚ್.ಐ.ವಿ./ಏಡ್ಸ್‌ಗೆ ತುತ್ತಾಗಿದ್ದ, ಲೈಂಗಿಕ ಶೋಷಣೆಗೆ ಈಡಾಗಿದ್ದ ಮಕ್ಕಳಿಗಾಗಿ ಕೇಂದ್ರ ನಡೆಸುತ್ತಿದ್ದ ವಿಚಾರಗಳನ್ನು ಕುರಿತು ಹತ್ತಾರು ಸಾಹಸಮಯ ಪರಕರಣಗಳು ಜನಜನಿತವಾಗಿತ್ತು.

ಮುಂದೆ? ಇನ್ನೇನಿದೆ ಈ ಲೇಖನ ಮುಂದುವರೆಸಲು. ಎಲ್ಲವೂ ಸುಖಾಂತವೋ?

ʼಚಿಕ್ಕ ಹುಡುಗಿಯರು ಎಲ್ಲಿ ಸಿಗುತ್ತಾರೆʼ ಎಂದು ಈಗಲೂ ಅರಸುವ ಜನರಿದ್ದಾರೆ. ದೈಹಿಕವಾಗಿ ಸಿಗದಿದ್ದರೂ ಬೇಡ ಇಂಟರ್‌ ನೆಟ್‌ನಲ್ಲಿ ಸಿಕ್ಕರೆ ಸಾಕು ಎಂದು ತಡಕಾಡುವವರಿದ್ದಾರೆ. ಅಂತಹವರಿಗೆ ಬೇಕಿದ್ದನ್ನು ಒದಗಿಸುವ ಜನ, ಸಂಸ್ಥೆ, ವ್ಯವಸ್ಥೆ ಈಗ ದುರಾದೃಷ್ಟವಶಾತ್ ‌ಇನ್ನಷ್ಟು ಗಟ್ಟಿಯಾಗಿ ತಳ ಊರಿಕೊಂಡಿದೆ. ಹೀಗಾಗಿಯೇ ಇತ್ತೀಚಿನ ವರದಿಗಳೂ ಹೇಳಿರುವಂತೆ ದೇಶದಲ್ಲಿ ಬಲವಂತದ ಮದುವೆ, ದುಡಿಮೆ ಮತ್ತು ಲೈಂಗಿಕ ಶೋಷಣೆಗಾಗಿ ಮಹಿಳೆಯರು ಮತ್ತು ಮಕ್ಕಳ ಸಾಗಣೆಯಾಗುತ್ತಿದೆ.

ಪ್ರತಿ ಎಂಟು ನಿಮಿಷಗಳಿಗೊಂದು ಮಗು (ಹೆಣ್ಣುಮಕ್ಕಳೇ ಹೆಚ್ಚು) ಕಾಣೆಯಾಗುತ್ತಾರೆ. ಪ್ರತಿ ಗಂಟೆಗೆ ಸುಮಾರು ಏಳರಿಂದ ಎಂಟು ಮಕ್ಕಳು. ದಿನಕ್ಕೆ – ೧೬೦ ರಿಂದ ೧೮೦ ಮಕ್ಕಳು! ಇದು ಹೆಚ್ಚೂ ಕಡಿಮೆ ಇರಬಹುದು. ವಾಸ್ತವವಾಗಿ ಇದು ಇನ್ನೂ ಹೆಚ್ಚಿರಬಹುದು.

ಕಾರಣ ಬಹುತೇಕರು ಪೊಲೀಸ್‌ದೂರು ಕೊಡುವುದಿಲ್ಲ ಅಥವಾ ಪೊಲೀಸರು ದೂರು ದಾಖಲಿಸಿಕೊಳ್ಳುವುದಿಲ್ಲ  ಆದರೆ ಮಕ್ಕಳು ಮಹಿಳೆಯರು ಕಾಣೆಯಾಗುತ್ತಿದ್ದಾರೆ, ಅಪಹರಿಸಲ್ಪಡುತ್ತಿದ್ದಾರೆ ಎಂಬುದಂತೂ ವಾಸ್ತವ. ಪೊಲೀಸ್ ‌ದೂರು ನೀಡಿದ್ದಲ್ಲಿ, ಸಂಬಂಧಿಸಿದವರು ಪ್ರಯತ್ನಿಸಿದ್ದಲ್ಲಿ ಒಂದಷ್ಟು ಜನ ಪತ್ತೆಯಾಗುತ್ತಾರೆ, ಇಲ್ಲವೇ ತಾವೇ ಹಿಂದೆ ಬರುತ್ತಾರೆ. ಆದರೆ ಬಹುತೇಕರು ಜನಾರಣ್ಯಗಳಲ್ಲಿ ಇದ್ದೂ ಇಲ್ಲದಂತಾಗಿ ಬಿಡುತ್ತಾರೆ.

ಹಾಗಾದರೆ ಇದಕ್ಕೆ ಪ್ರತಿರೋಧ? ಕೊನೆ? ಇದೆ. ನೀತಿ, ಕಾನೂನು, ಕಾವಲು, ಮಾನವ ಕಳ್ಳಸಾಗಣೆ ವಿರುದ್ಧ ಪ್ರಚಾರ, ಮಾಹಿತಿ ವಿತರಣೆ, ರಕ್ಷಣೆ ಮತ್ತು ಪೊಲೀಸ್‌ ವ್ಯವಸ್ಥೆ, ಕಾನೂನು ನೆರವು, ನ್ಯಾಯಾಲಯಗಳಲ್ಲಿ ಕಾಳಜಿ, ಅಪರಾಧಿಗಳಿಗೆ ಶಿಕ್ಷೆ, ಸರ್ಕಾರದ ಯೋಜನೆಗಳು, ಸ್ವಯಂ ಸೇವಾ ಸಂಘಟನೆಗಳ ಪ್ರಯತ್ನ, ಪುನರ್ವಸತಿ, ಇತ್ಯಾದಿ ಇದೆ. ಇನ್ನೂ ವಿಕಾಸವಾಗುತ್ತಿದೆ.

ಮಾನವ ಹಕ್ಕುಗಳ ಘೋಷಣೆ (೧೯೪೮)ಯ ಎಲ್ಲ ಪರಿಚ್ಛೇದಗಳು ಸಾಗಣೆಗೊಳಗಾದ ಜನರ ಅದರಲ್ಲೂ ಮಹಿಳೆಯರು ಮತ್ತು ಮಕ್ಕಳ ಎಲ್ಲ ಹಕ್ಕುಗಳು ಉಲ್ಲಂಘನೆಯಾಗುತ್ತದೆ ಪ್ರಮುಖವಾಗಿ ಪರಿಚ್ಛೇದ ೫ (ಯಾರೂ ಜೀತದಂತಹ ಪರಿಸ್ಥಿತಿಗೆ ಬೀಳಬಾರದು) ಸಾಗಣೆಗೊಳಗಾದವರನ್ನ ರಕ್ಷಿಸುವ ಹಕ್ಕಾಗಿದೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕು ೧೯೮೯ ಕೂಡಾ ಈ ವಿಚಾರವನ್ನು ಪರಿಚ್ಛೇದ ೩೫ರಲ್ಲಿ ಪ್ರಸ್ತಾಪಿಸಿದ್ದು, ಯಾವುದೇ ಮಗುವನ್ನು ಎಂತಹದೇ ಪರಿಸ್ಥಿತಿಯಲ್ಲಿ ತಡೆ ಹಿಡಿಯವುದು, ಸಾಗಿಸಿಕೊಂಡು ಹೋಗುವುದು, ಮಾರುವುದನ್ನು ಸರ್ಕಾರಗಳು ಸಮುದಾಯಗಳು ತಡೆಯಬೇಕೆಂದು ಹೇಳಿದೆ. ಇಷ್ಟಾದರೂ ದೇಶದಲ್ಲಿ ವಿವಿಧ ದುರಂತಗಳು ಘಟಿಸಿದಾಗ (ಉದಾ. ಗುಜರಾತ್‌ ಭೂಕಂಪ ೨೦೦೧; ಸುನಾಮಿ ೨೦೦೫) ವಿವಿಧ ರಾಜ್ಯಗಳ ಅನೇಕರು (ಸ್ವಯಂಸೇವಾ ಸಂಘಟನೆಗಳು ಪ್ರಮುಖವಾಗಿ) ಆಯಾ ಸ್ಥಳಕ್ಕೆ ಧಾವಿಸಿ ತೊಂದರೆಯಲ್ಲಿರುವ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಒಯ್ಯುವ ಪರಿಪಾಠವಿತ್ತು.

ಅಂತಹ ಮಕ್ಕಳನ್ನು ಕೇಂದ್ರಗಳಲ್ಲಿಟ್ಟುಕೊಂಡು ದತ್ತು ನೀಡುವುದು, ಕೇಂದ್ರಗಳಲ್ಲೇ ಅನಾಥ ಮಕ್ಕಳಂತೆ ಬೆಳೆಸುವುದು ಕೂಡಾ ಸಾಗಣೆಯ ವ್ಯಾಪ್ತಿಯಲ್ಲಿ ಬರುವುದೆಂದು ಖಾತರಿಯಾದ ಮೇಲೆ ಈಗೀಗ ಅಂತಹ ಸಾಹಸಕ್ಕೆ ಎನ್.ಜಿ.ಓಗಳು ಕೈಹಾಕುತ್ತಿಲ್ಲ ಎನ್ನಬಹುದು. ಆದರೂ ಬಡತನದ ಹೆಸರಿನಲ್ಲಿ ಈಗಲೂ ವಿವಿಧ ರಾಜ್ಯಗಳಿಂದ ಮಕ್ಕಳನ್ನು ಕರೆತರುವ ಕೆಲಸವನ್ನು ವಿವಿಧ ಬಣ್ಣ, ಹೆಸರಿನ ಸಂಘಟನೆಗಳು ನಡೆಸುತ್ತಲೇ ಇವೆ.  

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ವಿವಿಧ ಲಕ್ಷ್ಯಗಳಲ್ಲಿ ಮಾನವ ಕಳ್ಳಸಾಗಣೆ, ಅದರಲ್ಲೂ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ, ಅವರ ಮೇಲೆ ಲೈಂಗಿಕ ಶೋಷಣೆ ತಡೆ ವಿಚಾರಗಳನ್ನು ಅಭಿವೃದ್ಧಿ ಸೂಚಕಗಳೆಂದು ಪರಿಗಣಿಸಲು ನಿರ್ದೇಶಿಸಿದೆ. ಈ ವಿಚಾರಗಳನ್ನು ರಾಷ್ಟ್ರೀಯ ಮಕ್ಕಳ ನೀತಿ ಮತ್ತು ಮಕ್ಕಳಿಗೆ ಸಂಬಂಧಿಸಿದ ಬಹುತೇಕ ಎಲ್ಲ ಕಾಯಿದೆಗಳಲ್ಲಿ ಕಾಣಬಹುದಾಗಿದೆ.

ಹಲವು ಸ್ವಯಂಸೇವಾ ಸಂಘಟನೆಗಳ ಉಮೇದಿನಿಂದ ಮಕ್ಕಳು ಮತ್ತು ಮಹಿಳೆಯರ ಕಳ್ಳಸಾಗಣೆ ವಿರುದ್ಧ ರಾಷ್ಟ್ರವ್ಯಾಪ್ತಿಯ ಆಂದೋಲನ ೧೯೯೬ರಲ್ಲೇ ʼಮಕ್ಕಳ ಕಳ್ಳಸಾಗಾಣಿಕೆ ವಿರೋಧೀ ಆಂದೋಲನʼ (Campaign Agaisnt Child Trafficking-CACT) ಆರಂಭವಾಗಿ ರಾಜ್ಯದಲ್ಲೂ ಒಂದಷ್ಟು ಸಂಚಲನ ಮೂಡಿಸಿದ್ದವು.

ಈ ಆಂದೋಲನ ಮತ್ತು ದೆಹಲಿ ಮೂಲದ ಹಕ್‌ಸಂಸ್ಥೆ, ಬಚಪನ್‌ಬಚಾವ್ ‌ಆಂದೋಲನ, ಐ.ಜೆ.ಎಂ. ಮತ್ತಿತರರು ಹೂಡಿದ್ದ ವಿವಿಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮ್ಮೆಗಳು ವಕೀಲಿ ಕೆಲಸಗಳ ಪ್ರಭಾವದಿಂದಾಗಿ ಭಾರತ ದಂಡ ಸಂಹಿತೆ (ಐ.ಪಿ.ಸಿ)ಯಲ್ಲಿ ತಿದ್ದುಪಡಿಗಳಾಗಿವೆ.

ಪೊಲೀಸರಿಗೆ ಮಹಿಳೆಯರು ಮತ್ತು ಮಕ್ಕಳನ್ನು ಕುರಿತು ಸಂವೇದನೆಗೊಳಿಸುವ ತರಬೇತಿಗಳು ನಡೆದಿವೆ. ಸದ್ಯ ಚಾಲ್ತಿಯಲ್ಲಿರುವ ಮಾನವ ಕಳ್ಳಸಾಗಣೆ ತಡೆ ಕಾಯಿದೆಯನ್ನು ತಿದ್ದುಪಡಿ ಮಾಡಿ ಬದಲಿಸಿ ಎನ್ನುವ ಸಾಕಷ್ಟು ಜನಪರವಾದ ಮಸೂದೆ ೨೦೧೮ ರಿಂದಲೂ ಸಂಸತ್‌ನಲ್ಲಿ ಅನುಮೋದನೆಗೆ ಕಾದು ಕುಳಿತಿದೆ.   

ದೇಶದ ಎಲ್ಲ ಗ್ರಾಮಗಳ ಮಟ್ಟದಲ್ಲೇ ʼಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಸಮಿತಿʼ (Women and Child Protection Committee) ಎಂಬ ಕಾವಲು ವ್ಯವಸ್ಥೆಗಳಿವೆ. ಜಿಲ್ಲಾ ಮಟ್ಟದಲ್ಲಿ ಪೊಲೀಸ್‌ಇಲಾಖೆಯ ʼಮಾನವ ಕಳ್ಳಸಾಗಣೆ ತಡೆ ಘಟಕʼ (Anti Human Trafficking Unit)ಗಳು ಅಸ್ತಿತ್ವದಲ್ಲಿದೆ.

ಯಾವುದಾದರೂ ಮಗು ಕಣ್ಮರೆಯಾಗಿ ಎಫ್‌.ಐ.ಆರ್.‌ದಾಖಲಾಗಿ ನಾಲ್ಕು ತಿಂಗಳಾದರೂ ಸಂಬಂಧಿಸಿದ ಪೊಲೀಸ್‌ಠಾಣೆಯಿಂದ ಪತ್ತೆ ಮಾಡಲಾಗದಿದ್ದಲ್ಲಿ, ಮಗು ಹಿಂದಕ್ಕೆ ಬರದಿದ್ದಲ್ಲಿ, ಅಂತಹ ಪ್ರಕರಣಗಳನ್ನು ಕಡ್ಡಾಯವಾಗಿ ʼಅಕ್ರಮ ಸಾಗಣೆʼ ಅಥವಾ ʼಕಳ್ಳಸಾಗಣೆʼ ಎಂದೇ ಅನುಮಾನಿಸಿ ಅದನ್ನು ಎ.ಎಚ್.ಟಿ.ಯುಗೆ ರವಾನಿಸಲಾಗುತ್ತಿದೆ.

ಇದೂ ತಾನೇತಾನಾಗಿ ಸರ್ಕಾರ ಪೊಲೀಸ್ ‌ವ್ಯವಸ್ಥೆ ಮಾಡಿಕೊಂಡದ್ದಲ್ಲ. ಬಚಪನ್‌ಬಚಾವ್‌ ಆಂದೋಲನ ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮ್ಮೆಗೆ (೨೦೧೨/೨೦೧೩) ನ್ಯಾಯಾಲಯ ನೀಡಿದ ನಿರ್ದೇಶನದಂತೆ ಆಗುತ್ತಿರುವುದು. 

ಇಷ್ಟರ ಮೇಲೆ ಎಲ್ಲರಿಗೂ ತಿಳಿದಿರಲೇಬೇಕಾದ ಇನ್ನೊಂದು ಪ್ರಮುಖ ವಿಚಾರವಿದೆ. ಯಾವುದಾದರೂ ಅಪರಾಧಕ್ಕೆ ಯಾರಾದರೂ ಗುರಿಯಾದಲ್ಲಿ ಆ ಕುರಿತು ಆದಷ್ಟೂ ಬೇಗನೆ ಪೊಲೀಸ್‌ ದೂರು ಕೊಡಬೇಕು. ಅದನ್ನು ಎಫ್‌.ಐ.ಆರ್.‌ಆಗಿ ದಾಖಲಿಸಲೇಬೇಕು. ಸಾಮಾನ್ಯವಾಗಿ ಜನರಿಗಾಗುವ ಅನುಭವ, ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ತಡ ಮಾಡುವುದು ಇಲ್ಲವೇ, ಆಮೇಲೆ ಬನ್ನಿ, ಈಗ ಇನ್ಸ್‌ಪೆಕ್ಟರ್‌ಇಲ್ಲ, ಇತ್ಯಾದಿ. 

ಅಪರಾಧ ಜರುಗಿದ ಪೊಲೀಸ್ ‌ಠಾಣೆಯ ವ್ಯಾಪ್ತಿಯಿಂದ ಹೊರ ಹೋಗುವಂತಾಗಿದ್ದಾಗ ನಿಮಗೆ ಹತ್ತಿರದ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಬಹುದು. ಸಾಮಾನ್ಯವಾಗಿ ಪೊಲೀಸರು ಅದು ಸಾಧ್ಯವಿಲ್ಲ ಎನ್ನುತ್ತಾರೆ. ನಮಗೆ ಸಂಬಂಧಿಸಿಲ್ಲ ಎನ್ನುವುದು ಸುಲಭವಾದ ನೆಪ.

೨೦೧೩ರ ಮೇ ೧೦ರಂದು ಕೇಂದ್ರದ ಗೃಹ ಸಚಿವಾಲಯ ಹೊರಡಿಸಿರುವ ಸುತ್ತೋಲೆಯಂತೆ ಅಪರಾಧಕ್ಕೆ ಗುರಿಯಾದವರು ಅಥವಾ ಅಪರಾಧವಾಗಿರುವ ಕುರಿತು ಮಾಹಿತಿ ಇರುವವರು ಯಾವುದೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬಹುದು. ಅದನ್ನು ಝೀರೋ ಎಫ್‌.ಐ.ಆರ್.‌ಎಂದು ಪರಿಗಣಿಸಿ ಸಂಬಂಧಿತ ಪೊಲೀಸ್ ‌ಠಾಣೆಗೆ ರವಾನಿಸುವುದು ಆಯಾ ಪೊಲೀಸ್ ‌ಠಾಣೆಯ ಜವಾಬ್ದಾರಿ. ಇದೇ ರೀತಿ ಪೊಲೀಸ್‌ ಇಲಾಖೆಯ ವೆಬ್‌ಸೈಟಿನಲ್ಲೂ ಆನ್‌ಲೈನ್ ‌ದೂರು ದಾಖಲಿಸಬಹುದು. 

ಮಕ್ಕಳ ಕಳ್ಳಸಾಗಣೆ ತಡೆಯಲು ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಮಕ್ಕಳು ಕಾಣೆಯಾಗುವ ಅಪಾಯ ಹೊಗೆಯಾಡುತ್ತಲೇ ಇದೆ. ಚೈಲ್ಡ್‌ ಲೈನ್ ‌೧೦೯೮ಕ್ಕೆ ದಿನೇದಿನೇ ದೂರುಗಳು ಬರುತ್ತಲೇ ಇರುತ್ತವೆ. ನಾವು ಪೊಲೀಸ್‌ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಎ.ಎಚ್.ಟಿ.ಯು. ಜೊತೆಗೂಡಿ ಮಕ್ಕಳನ್ನು ಪತ್ತೆ ಹಚ್ಚುವ ಕೆಲಸಕ್ಕೆ ಸದಾ ತೊಡಗಿದ್ದೇವೆ.

ಸಾಗಣೆಗೆ  ಬಾಲ್ಯವಿವಾಹ, ಬಾಲಕಾರ್ಮಿಕರು, ದೇವದಾಸಿ ಸಮರ್ಪಣೆ, ಅನಾಥಾಲಯದಲ್ಲಿ ಇರಿಸಿಕೊಳ್ಳುವುದು, ದತ್ತು, ಇನ್ನೂ ಏನೇನೋ ಹೆಸರಿನ ಬೆಂಕಿಯಿದೆ. ಆದರೆ ಅದೇಕೋ ಏನೋ ಯಾವುದೇ ಸರ್ಕಾರವಿರಲಿ ಸಂಬಂಧಿತ ಇಲಾಖೆಗಳು ಮಕ್ಕಳ ಸಾಗಣೆಯ ಹೊಗೆಯೂ ಇಲ್ಲ ಬೆಂಕಿ ಮೊದಲೇ ಇಲ್ಲ ಎಂದು ಎಗ್ಗಿಲ್ಲದೆ ಹೇಳಿಕೆ ಕೊಟ್ಟೇ ಬಿಡುತ್ತಾರೆ.

‍ಲೇಖಕರು ವಾಸುದೇವ ಶರ್ಮ

October 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಅಂಜಲಿ ರಾಮಣ್ಣ

    ಎಲ್ಲಾ ಕೋನ ಗಳಿಂದ ಗಮನಿಸಿ, ವಿಷದವಾಗಿ ಬರೆದಿರುವ ಒಳ್ಳೆಯ ಲೇಖನ
    ಅಂಜಲಿ ರಾಮಣ್ಣ

    ಪ್ರತಿಕ್ರಿಯೆ
  2. Kamalakar

    Yes, Vasu, I was taken aback. Though I was vaguely aware of such heinousness, I was under the impression it is less frequent. Your column reveals shocking situation.

    ಪ್ರತಿಕ್ರಿಯೆ
  3. ಗೀತಾ ಎನ್ ಸ್ವಾಮಿ

    ವಾಸು ಸರ್ ಮತ್ತೆ ಮತ್ತೆ ಓದುತ್ತೇನೆ ನಿಮ್ಮ ಬರಹಗಳನ್ನು….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: