‘ಎಗ್ಲಾಂಟೈನ್ ಜೆಬ್’ ನೆನಪಲ್ಲಿ…

‘ಬಾಲ ಒಂದಿಲ್ಲ ಅಷ್ಟೇ…’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.

ಮಕ್ಕಳ ಕೇಂದ್ರಿತ ಪುಸ್ತಕಗಳ ಪ್ರತಿಷ್ಠಿತ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ.

‘ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿ’ ಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ.

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ ಎಂದು ಮಾತು ಸೇರಿಸುತ್ತಾರೆ.  ಪ್ರತೀ ಗುರುವಾರ ತಮ್ಮನ್ನು ಕಾಡಿದ ಪುಸ್ತಕಗಳನ್ನು, ಪಾತ್ರಗಳನ್ನು ನಮ್ಮ ಎದುರು ನಿಲ್ಲಿಸಲಿದ್ದಾರೆ.

ಒಳ್ಳೆಯ ಸಂಗತಿಗಳು ಯಾವಯಾವುದೋ ಮೂಲದಿಂದ ಬಂದು ನಮ್ಮ ಬಾಳನ್ನು, ಸಮಾಜವನ್ನು ಬೆಳಗಿಸುತ್ತಲಿರುತ್ತವೆ ಎನ್ನುವುದು ಖಂಡಿತವಾಗಿಯೂ ಜೀವನದಲ್ಲಿ ಕಾಣಬರುವ ಅದ್ಭುತಗಳಲ್ಲಿ ಒಂದು. ಅದೆಷ್ಟೋ ಸಲ ನಮ್ಮ ಹಾದಿಯ ಬೆಳಗಿದ ದೀಪ ಯಾರು ಹಚ್ಚಿದ್ದು ಎನ್ನುವ ಅರಿವು ನಮಗೆ ಆಗುವುದೇ ಇಲ್ಲ, ಆದರೂ ಹಾಗೆ ಒದಗುವ ಅವಕಾಶಗಳೇ ನಮ್ಮನ್ನು ಬೆಳೆಸುತ್ತಲಿರುತ್ತವೆ. ಆಗೀಗ ಯಾರ ಪ್ರಯತ್ನಗಳ ಫಲ ನಮಗೆ ದೊರಕಿದೆ ಎಂಬ ಮಾಹಿತಿ ನಮಗೆ ಸಿಕ್ಕಾಗ ಅವಕ್ಕಾಗುತ್ತೇವೆ. ಒಂದು ಕ್ಷಣಗಲಿಬಿಲಿಯೂ ಆಗುತ್ತದೆ. ಆದರೆ ಅದೇ ಸ್ಫೂರ್ತಿಯ ಸೆಲೆಯೂ ಆಗಬಲ್ಲದು.
-‘ಆಕೆ ಮಕ್ಕಳನ್ನು ರಕ್ಷಿಸಿದಳು..’ ಪುಸ್ತಕದಿಂದ

ನಿಜ ಈ ಬರಹಕ್ಕೆ ಈ ಪುಸ್ತಕವೇ ಸ್ಫೂರ್ತಿ. ಇಲ್ಲಿಯವರೆಗೆ ಎರಡು ಸಲ ಪುಸ್ತಕ ಓದಿದ್ದರೂ, ‘ಎಗ್ಲಾಂಟೈನ್ ಜೆಬ್’ ಹೆಸರಿಗಿಂತ ಹೆಚ್ಚಾಗಿ, ನನಗೆ ನೆನಪಿರುವುದು ‘ಆಕೆ ಮಕ್ಕಳನ್ನು ರಕ್ಷಿಸಿದಳು..’ ಎನ್ನುವುದು. ಇದಕ್ಕೆ ಕಾರಣ; ನಾನು ಮನೆಯ ಮಗುವಿಗಿಂತ ಹೆಚ್ಚಾಗಿ ಒಂದು ಪರಿಸರದ ಮಗುವಾಗಿ ಬೆಳೆದವಳು. ಅಲ್ಲಿ ಮಕ್ಕಳ ರಕ್ಷಣೆಯೇ ಮೊದಲ ಆದ್ಯತೆಯಾಗಿತ್ತು.

ನನ್ನನ್ನು ಪರಿಸರದ ಮಗುವಾಗಿಸಿದವರನ್ನು, ನನ್ನನ್ನು, ನನ್ನ ಭಾವನೆಗಳನ್ನು ರಕ್ಷಿಸಿದವರನ್ನು ‘ಎಗ್ಲಾಂಟೈನ್ ಜೆಬ್’ ನೆನಪಲ್ಲಿ ನೆನೆಯುತ್ತಿದ್ದೇನೆ.

ಸಹಜ ಬದುಕಿನಲ್ಲಿ ನನ್ನ ಕೈ ಹಿಡಿದು ನಡೆಸಿದ್ದು ಅವ್ವ ಕಲಿಸಿದ ನೈತಿಕ ಎಚ್ಚರ. ಅವ್ವನ ಬಸುರಿನಲ್ಲಿ ಅಜ್ಜಿ (ಅಪ್ಪನ ತಾಯಿ) ಹೇಳುತ್ತಿದ್ದಳಂತೆ, ಮನೆ ಸಾರಿಸುವಾಗ ಗೋಡೆಯ ಹುಳುಕುಗಳನ್ನು ಹಾಗೇ ಬಿಟ್ಟರೆ ಕುರುಡು ಮಕ್ಕಳು ಹುಟ್ಟತ್ತವೆ ಎಂದು. ಅತ್ತೆಯ ಮಾತು ಮೀರಬೇಕು ಎನಿಸುತ್ತಿತ್ತು, ನಾನು ಹುಳುಕು ತುಂಬಿದ್ದೇನೋ ಇಲ್ಲವೋ ಎನ್ನುವುದು ವಯಸ್ಸಾದ ಅತ್ತೆಯ ಕಣ್ಣಿಗೆ ಕಾಣುವುದಿಲ್ಲ ಎಂದೂ ಗೊತ್ತಿತ್ತು.

ಆದರೂ, ತನಗೆ ಕಷ್ಟವಾದರೆ ಆಗಲಿ, ಗೊತ್ತಿದ್ದೂ ಮಾಡಿದ ತಪ್ಪಿನಿಂದ ಮುಂದೆ ಬರುವ ಜೀವ ತೊಂದರೆ ಅನುಭವಿಸುವುದು ಬೇಡ; ಅದು ಪ್ರಪಂಚದ ಬೆಳಕು ನೋಡಲಿ ಎಂದು ದಿನತುಂಬಿದ ಬಸುರಿ ಮನೆ ಸಾರಿಸಿ ಬಾಣಂತನಕ್ಕೆ ಹೋಗುತ್ತಿದ್ದಳಂತೆ.

ಮಕ್ಕಳ ವಿಷಯದಲ್ಲಿ ನಮ್ಮನ್ನ ನಾವು ಮೋಸಗೊಳಿಸಿಕೊಳ್ಳದಂತೆ ಅವ್ವ ಕಲಿಸಿದ ಈ ನೈತಿಕ ಎಚ್ಚರವೇ ಇವತ್ತಿಗೂ ನನ್ನ ಕೈ ಹಿಡಿದು ನಡೆಸುತ್ತಿರುವುದು ಮತ್ತು ನನಗೆ ನೆಮ್ಮದಿ ನೀಡಿರುವುದು. 

ಒಳ್ಳೆಯದನ್ನೂ ಗುಮಾನಿಯಿಂದ ನೋಡುವ ‘ಜ್ಞಾನ’ ನೀಡುತ್ತಿದ್ದ ವೃತ್ತಿಯನ್ನು ನಾನು ಏಳೇ ವರ್ಷಕ್ಕೆ ಕೈ ಬಿಟ್ಟಿದ್ದು ‘ಮಕ್ಕಳಿಗಾಗಿ ಒಂದು ಪೇಜ್ ಸಾಕು, ಅದಕ್ಕಿಂತ ಹೆಚ್ಚಿನ ಸ್ಪೇಸ್ ದಂಡ’ ಎನ್ನುತ್ತಾರಲ್ಲ ಎಂದು!

ನಮ್ಮ ಹಳೆಯ ಮನೆಯ ಪಡಸಾಲೆ, ಕೋಣೆಗಳಲ್ಲಿ ಮಕ್ಕಳಿಗೆ ಎಟಕುವಂಥ ಅನೇಕ ಗೂಡುಗಳಿವೆ. ನಾವು ಚಿಕ್ಕವರಿದ್ದಾಗ ಅಲ್ಲಿ ತಿಂಡಿಯ ಡಬ್ಬಗಳಿರುತ್ತಿದ್ದವು. ಮೊನ್ನೆ ಆ ಮನೆಗೆ ಹೋದಾಗ, ಏನೂ ಸಾಮಾನಿಡದೆ ಹೋದರೆ ‘ಇವನ್ನು’ ಮಾಡಿಸಿದ್ದಾದರೂ ಏಕೆ ಎಂದು ಅಪ್ಪ, ಕಾಕಂದಿರನ್ನ ಕೇಳುತ್ತಿದ್ದೆ.

ಕೂಡು ಕುಟುಂಬದ ಕೆಲಸದಲ್ಲಿ ಕೆಲವೊಮ್ಮೆ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ತಿನ್ನಲು ಕೊಡಲು ಸಾಧ್ಯವಾಗುವುದಿಲ್ಲ. ಪುಟಾಣಿ ಕೈಗಳಿಗೆ ನಿಲುಕುವಂತ ಈ ಗೂಡುಗಳನ್ನು ತಿಂಡಿ ಡಬ್ಬಗಳಿಗಾಗಿಯೇ ಮಾಡಿಸಿದ್ದು. ಬೇಕು ಎಂದಾಗ ಮಕ್ಕಳೇ ತಗೊಂಡು ತಿನ್ನಲಿ ಎಂದು ಎಂದರು.

“ಕೈ ಖಾಲಿ ಇಲ್ಲ, ಬಂದೆ ಇರು, ತಿಂಡಿ ಮೇಲಿನ ಡಬ್ಬದಲ್ಲಿದೆ ತಕ್ಕೊಡ್ತೀನಿ!” ತಿಂಡಿ ಕೊಡಬೇಕು ಅಂತ ಕೇಳಬಾರದು. ಅಷ್ಟರ ಮಟ್ಟಿನ ಸ್ವಾತಂತ್ರ್ಯ!

ಇವತ್ತಿಗೂ ಕೂಡ “ನನ್ನ ಪರಿಸರದ” ಮನೆಗಳಲ್ಲಿ ನನಗೆ ಏನಾದರೂ ಇಷ್ಟವಾದರೆ “ತಗೊಳ್ಳಲಿ?” ಎನ್ನುವ ಪ್ರಶ್ನೆಯೇ ಇಲ್ಲ. “ಇದನ್ನ ತಗೊಂಡಿದ್ದೇನೆ ಹುಡುಕಬೇಡ” ಅಂತಲೇ ಹೇಳುವುದು. ವೃತ್ತಿಯಲ್ಲೂ ಅಷ್ಟೇ ರಜೆ ಬೇಕಿತ್ತು ಎನ್ನುವ ಸೀನೇ ಇಲ್ಲ, ಇಂಥ ದಿನ ರಜೆ ತಗೋತಿದೀನಿ… ಇಂಥ ಸ್ವಾತಂತ್ರ್ಯ ಇಲ್ಲದೆ ಬದುಕುವುದು ಎಂದರೆ ಅದು ಗುಲಾಮಗಿರಿಗಿಂತ ಕಡಿಮೆಯಲ್ಲ ಎನ್ನುವ ಯೋಚನೆ ಕೊಟ್ಟಿದ್ದು ನನ್ನ ಪರಿಸರ.

ಪದವಿ ಎರಡನೇ ವರ್ಷ, ಇಂಗ್ಲಿಷ್ ವಿಷಯದಲ್ಲಿ ಫೇಲಾಗಿದ್ದೆ. ಅಕ್ಟೋಬರ್‌ನಲ್ಲಿ ಕಟ್ಟಿ ಕ್ಲಿಯರ್ ಮಾಡಿಕೊ ಎಂದವರಿಗೆ, ‘‘ಎರಡೆರಡು ಸಾರಿ ಎಕ್ಸಾಮ್ ಟೆನ್ಷನ್ ಅನುಭವಿಸಲಾರೆ ಎಪ್ರಿಲ್‌ನಲ್ಲೇ ಕಟ್ಟುತ್ತೇನೆ,’’ ಎಂದು ಫೈನಲ್ ಇಯರ್ ಪರೀಕ್ಷೆ ಜತೆಗೆ ಇದನ್ನೂ ಬರೆದೆ. ಫಲಿತಾಂಶ ಬರುವಷ್ಟರಲ್ಲಿ ಪಜೀತಿಯಾಗಿತ್ತು. ಫೈನಲ್ ಇಯರ್ ರಿಸಲ್ಟ್ ಬೇಗ ಬಂತು. ಸೆಕೆಂಡ್ ಇಯರ್ ರಿಸಲ್ಟ್ ಇನ್ನೂ ಕ್ಲಿಯರ್ ಇಲ್ಲ. ಹಾಗಾಗಿ ರಿಸಲ್ಟ್ ವಿತ್‌ಹೆಲ್ಡ್, ಮಾರ್ಕ್ಸ್ ಕಾರ್ಡಿಗಾಗಿ ಕಾಯಬೇಕು ಎಂದರು.

ಈ ಸಮಸ್ಯೆ ಬಗೆ ಹರಿದು, ಪ್ರವೇಶ ಪರೀಕ್ಷೆ ಇದ್ರೆ ನಾ ಪಿಜಿ ಮಾಡಲು ಒಲ್ಲೆ ಎಂದವಳನ್ನು ಸಂಬಾಳಿಸಿ ನನ್ನನ್ನು ವಿವಿ ಮೆಟ್ಟಿಲು ಹತ್ತಿಸಿದ್ದು ದೊಡ್ಡಕ್ಕ. ಅವಳು ಹೈಸ್ಕೂಲಿನಲ್ಲಿದ್ದಾಗ ಮನೆ ಪರಿಸ್ಥಿತಿ ಸರಿ ಇರಲಿಲ್ಲ ಅಂತ ನನ್ನ ಹಕ್ಕಿನ ಪ್ರಾಥಮಿಕ ಶಿಕ್ಷಣಕ್ಕಾಗಿ ಅವಳು ಒಂದು ವರ್ಷ ಶಾಲೆ ಬಿಟ್ಟಿದ್ದಳು. ಅವಳಿಂದಾಗಿಯೇ ನಾನು ಇಂದು ಇದನ್ನೆಲ್ಲ ನೋಡಲು, ಮಾಡಲು ಸಾಧ್ಯವಾಗಿದ್ದು.

ನಾನು ಈಗ ಮಾಡುತ್ತಿರುವ ಕೆಲಸಕ್ಕೆ ಸೇರಿದ್ದು ಕೂಡ ಮಕ್ಕಳ ಜೊತೆ ಒಡನಾಡಬಹುದಲ್ಲ ಎನ್ನುವ ಕಾರಣಕ್ಕೇ. ಮಕ್ಕಳ ಸಂಬಂಧಿತ ಮಾಹಿತಿಗಳಿಗಾಗಿ ನಾನು ಸದಾ ಹುಡುಕುತ್ತಲೇ ಇರುತ್ತೇನೆ. ಹೀಗೆ ಹುಡುಕುತ್ತಿದ್ದಾಗ ಸಿಕ್ಕಿದು ‘ಆಕೆ ಮಕ್ಕಳನ್ನು ರಕ್ಷಿಸಿದಳು…’ ಪುಸ್ತಕ. ಅದರ ಜೊತೆಗೆ ನೆನೆಪಾದ ಕೆಲವು ಸಂಗತಿಗಳು. ಮಕ್ಕಳಿಗೆ ಸಂಬಂಧಿಸಿದ ವಿಷಯಗಳಿಗೆ ಸದಾ ಮನಸ್ಸನ್ನು ತೆರೆದುಕೊಂಡಿರುವವರಿಗೂ, ಎಷ್ಟೋ ಮಾಹಿತಿ, ಕಾಯ್ದೆಗಳು ಅರ್ಥವಾಗುವ ಹಾಗೆ ಸಿಗುವುದೇ ಇಲ್ಲ ಎನ್ನುವ ನನ್ನ ತಕರಾರಿಗೆ ಉತ್ತರ ಎನ್ನುವಂತೆ ಸಿಕ್ಕ ಪುಸ್ತಕವಿದು.

ಮಕ್ಕಳಿಗಾಗಿ ಬರೆಯುವುದು ತುಂಬಾ ಸುಲಭ, ಇದಿಷ್ಟು ಬರೆದಿದ್ದೇವಲ್ಲ ಇದೇ ಬೇಜಾನ್ ಆಯ್ತು ಎನ್ನುವ ಭಾವ ನೋಡಿ ಸಾಕಾದ ಗಳಿಗೆ: ಇಲ್ಲ, ನಾವಿರುವುದೂ ಮಕ್ಕಳಿಗಾಗಿಯೇ, ಮಾಡುತ್ತಿರುವುದು, ಬರೆಯುತ್ತಿರುವುದೂ ಕೂಡ ಮಕ್ಕಳಿಗಾಗಿಯೇ ಎನ್ನುವ ಈ ಪುಸ್ತಕದಿಂದಾಗಿ ಹಬ್ಬದ ಏಕಾಂತದಲ್ಲೂ ನವರಾತ್ರಿಯ ರಂಗು ನನ್ನ ಕಣ್ಣ ತುಂಬಿತು.

ಈ ಪುಸ್ತಕದಲ್ಲಿ ನನ್ನ ಗಮನ ಸೆಳೆದಿದ್ದು, ಶೀರ್ಷಿಕೆ ಮುಖಪುಟದ ಮೇಲಿರದೇ, ಹಿಂಭಾಗದಲ್ಲಿರುವುದು. ಇಷ್ಟು ವರ್ಷದ ಜೀವನದಲ್ಲಿ ನಾನು ನೋಡಿದ; ಮಕ್ಕಳ ಕುರಿತಾದ ವ್ಯವಸ್ಥೆಯ ಭಾವನೆಯನ್ನು ವಿನ್ಯಾಸದಲ್ಲಿ ಕಟ್ಟಿಕೊಡುವುದಾದರೆ ಇದಕ್ಕಿಂತ ಅತ್ಯುತ್ತಮ ರೂಪಕ ಸಿಗದು. ಮಕ್ಕಳಿಗೇನು ತಿಳಿಯತ್ತೆ, ಹಿಂದೆ ಇದ್ರೂ ನಡೆಯತ್ತೆ ಬಿಡಿ… ಎನ್ನುತ್ತ ನಾವು ಕಾಲವೂ ಮಾಡಿದ್ದು ಇದನ್ನೇ ಅಲ್ವ!

October 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vasudeva Sharma

    ʼಆಕೆ ಮಕ್ಕಳನ್ನು ರಕ್ಷಿಸಿದಳು… ಎಗ್ಲಾಂಟೈನ್‌ ಜೆಬ್‌ʼ ಕುರಿತು ಪುಸ್ತಕ ನಿಮ್ಮಲ್ಲಿ ನೆನಪುಗಳ ಅಲೆ ಎಬ್ಬಿಸಿದ್ದು ಸಂತೋಷ. ಈ ನಿಮ್ಮ ನೆನಪುಗಳು ಅನೇಕರಿಗೆ ತಮ್ಮ ಬಾಲ್ಯದ ಸಿಹಿ, ಕಹಿ ನೆನಪುಗಳನ್ನು ತಡವಿಕೊಳ್ಳಲು ಖಂಡಿತಾ ಇಂಬು ಕೊಟ್ಟಿದೆ. ನಾನೂ ನನ್ನ ಬಾಲ್ಯಕ್ಕೆ ಹೋಗಿದ್ದೆ… ಅತ್ತೆ ಮಾವಗಳು, ಚಿಕ್ಕಪ್ಪ ಚಿಕ್ಕಮ್ಮಗಳು.. ಅಜ್ಜಿ ತಾತಂದಿರ ಸಹವಾಸ ನೆನಪಾಯಿತು. ಅದರಲ್ಲೂ ಮಕ್ಕಳಿಗೆ ಆಗ ಅದೆಷ್ಟು ತಿಂಡಿಗಳು ಪದಾರ್ಥಗಳನ್ನು ಆ ಅತ್ತೆ ಚಿಕ್ಕಮ್ಮಂದಿರು ಕೊಡುತ್ತಿದ್ದರು. ಅವರಿಗೆ ಅದೆಷ್ಟು ತಾಳ್ಮೆ… ಪ್ರೀತಿ… ಸಂಪನ್ಮೂಲಗಳು ಇಲ್ಲದ ದಿನಗಳಲ್ಲೂ ಎಲ್ಲವೂ ಸಿಗುತ್ತಿತ್ತು. ನನಗದು ಸದಾಕಾಲಕ್ಕೂ ಆಶ್ಚರ್ಯ. ಮುಂದೊಂದು ದಿನ ಬರೆಯುವ ತುಡಿತವಿದೆ. ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: