ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. 

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

। ಕಳೆದ ಸಂಚಿಕೆಯಿಂದ ।

ಶುಚಿ-ರುಚಿ, ವೃತ್ತಿಧರ್ಮ, ನೈತಿಕತೆ

‘ಕನ್ನಡ ಪ್ರಭ’ದಿಂದ ಪ್ರಜಾವಾಣಿಗೇನೂ ಬಾಧಕವಾಗಲಿಲ್ಲ. ಅದರ ಪ್ರಸಾರ ಸಂಖ್ಯೆ ಏರುತ್ತಲೇ ಇತ್ತು. ‘ಕಪ್ರ’ ತನ್ನದೇ ಆದ ಓದುಗರನ್ನು ಕಂಡುಕೊಂಡಿತ್ತು. ದೈನಿಕ ಧಾರಾವಾಹಿ ಮತ್ತು ‘ಚಿತ್ರ ಪ್ರಭ’ ಅದರ ಮುಖ್ಯ ಆಕರ್ಷಣೆಯಾಗಿದ್ದು, ಅವು ಅದಕ್ಕೆ ಅದರದೇ ಆದ ಓದುಗರನ್ನು ಗಳಿಸಿಕೊಟ್ಟಿದ್ದವು.

ಎಲ್ಲ ಕ್ಷೇತ್ರಗಳಲ್ಲಿರುವಂತೆ ಸೆಳೆಯದ ಗ್ರಾಹಕ ವರ್ಗವೊಂದಿರುತ್ತದೆ. ಈ ಗ್ರಾಹಕ ವರ್ಗಕ್ಕೆ ಅವರದೇ ಆದ ಅಪೇಕ್ಷೆಗಳಿರುತ್ತವೆ. ಮಾರುಕಟ್ಟೆ ಸಂಶೋಧಕರು ಇಂಥ ವರ್ಗವನ್ನು ಪತ್ತೆಹಚ್ಚಿ ಅವರ ಮನೋಗತ ತಿಳಿಯುವ ಪ್ರಯತ್ನಗಳನ್ನು ನಿರಂತರವಾಗಿ ನಡೆಸಿರುತ್ತಾರೆ.

‘ಕಪ್ರ’ ಪ್ರಕಟಣ ಪೂರ್ವದಲ್ಲಿ ಕನ್ನಡದ ಓದುಗರ ಮನಸ್ಸನ್ನು ಅರಿಯುವ ಇಂಥ ಪ್ರಯತ್ನ ನಡೆಸಿತ್ತೋ ಇಲ್ಲವೋ ತಿಳಿಯದು. ಆದರೆ ದಿನಂಪ್ರತಿ ಕಾದಂಬರಿ ಓದಲಿಚ್ಛಿಸುವ, ಸಿನಿಮಾ ಲೋಕದ ಬಗ್ಗೆ ತಿಳಿಯುವ, ಅಂದರೆ ಸುದ್ದಿಯೇತರ ಮನರಂಜನಾ ವಿಷಯಗಳಲ್ಲಿ ಆಸಕ್ತಿ, ಅಪೇಕ್ಷೆಯುಳ್ಳ ಒಂದು ಓದುಗ ವರ್ಗ ಇತ್ತು (ಈಗಲೂ ಇದೆ).

‘ಕಪ್ರ’ ಈ ವರ್ಗದ ಅಪೇಕ್ಷೆಗಳನ್ನು ತಣಿಸಿ ನಗದು ಮಾಡಿಕೊಂಡಿತು. ಆಗ, ಈಗಿರುವಂತೆ ಮಾರುಕಟ್ಟೆ ಸಮೀಕ್ಷೆ, ಸಂಶೋಧನೆಗಳು ಪತ್ರಿಕಾ ರಂಗದಲ್ಲಿ ಇರಲಿಲ್ಲವಾದ್ದರಿಂದ ಪ್ರಜಾವಾಣಿ ಗಮನಕ್ಕೆ ಈ ವರ್ಗ ಬಂದಿರಲಿಲ್ಲ. ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ವಾರಕ್ಕೊಮ್ಮೆ ಅರ್ಧ ಅಥವಾ ಒಂದು ಪುಟ ಸಿನಿಮಾ ಲೋಕದ ಝಗಮಗ ಸುದ್ದಿಗಳನ್ನು ನೀಡುತ್ತಿತ್ತು.

ಕನ್ನಡ ಪ್ರಭ ಪ್ರತಿ ಶುಕ್ರವಾರ `ಚಿತ್ರ ಪ್ರಭ’ ಸಿನಿಮಾ ಪುರವಣಿ ಕೊಡಲಾರಂಭಿಸಿದ ನಂತರ ‘ಪ್ರವಾ’ದಲ್ಲೂ ಶುಕ್ರವಾರ ಸಿನಿಮಾ ರಂಜನೆ ಪುರವಣಿ ಶುರುವಾಯಿತು. ‘ಕಪ್ರ’ದ ಈ ಎರಡು ಆಕರ್ಷಣೆಗಳ ಜೊತೆಗೆ ಬಣ್ಣದ ಮುದ್ರಣವೂ ಅದರ ರಂಗನ್ನೇರಿಸಿತ್ತು. ಆಗ ‘ಪ್ರಜಾವಾಣಿ’ಗೆ ಇನ್ನೂ ಆಫ್ ಸೆಟ್ ಮುದ್ರಣ ಬಂದಿರಲಿಲ್ಲ. ಹಳೆಯ ರೋಟರಿ ಯಂತ್ರದಲ್ಲೇ ಅಚ್ಚಾಗುತ್ತಿತ್ತು.

ಫೋಟೋಗಳು, ರೇಖಾಚಿತ್ರಗಳು, ಹಾಫ್ಟೋನ್ ಚಿತ್ರಗಳು ಇವೆಲ್ಲವನ್ನೂ ಪಡಿಯಚ್ಚು (ಬ್ಲಾಕ್) ಮಾಡಿಸಿಯೇ ಮುದ್ರಣಕ್ಕೆ ಬಳಸುತ್ತಿದ್ದೆವು. ಎಷ್ಟೋ ಸಲ ಮಸಿ ಈ ಚಿತ್ರಗಳನ್ನು ನುಂಗಿ ಹಾಕಿ ಬಿಡುತ್ತಿತ್ತು.

ಜಾರ್ಜ್ ಅಂತ ಪ್ರೆಸ್ ಸೂಪರಿಂಟೆಂಡೆಂಟ್ ಇದ್ದರು. ಕನ್ನಡ ಕಂಪೋಸಿಂಗ್ ವಿಭಾಗಕ್ಕೆ ವೀರಭದ್ರಪ್ಪ ಅಂತ ಸೂಪರವೈಸರ್, ಇವರಲ್ಲದೆ ಒಂದೊಂದು ಪಾಳಿಗೂ ಒಬ್ಬರು ಉಸ್ತುವಾರಿ ಇರುತ್ತಿದ್ದರು. ಅಕ್ಷರ ಜೋಡಣೆ ವಿಭಾಗದಲ್ಲೂ ಆಗಷ್ಟೆ ಲೈನೋ ಯಂತ್ರಗಳು ಬಂದಿದ್ದವಾದರೂ ಶೀರ್ಷಿಕೆಗಳನ್ನು ಕೈಯ್ಯಲ್ಲಿ ಮೊಳೆ ಜೋಡಿಸುವದರಿಂದಲೇ ಮಾಡಬೇಕಿತ್ತು.

ಲೈನೋ ಯಂತ್ರದಲ್ಲಿ ವಿವಿಧ ಗಾತ್ರಗಳಲ್ಲಿ ಅಕ್ಷರಗಳನ್ನು ಜೋಡಿಸುವ ಸೌಲಭ್ಯವಿರಲಿಲ್ಲ. ಪಠ್ಯವನ್ನು ಮಾತ್ರ 8-10 ಪಾಯಿಂಟ್ ಗಾತ್ರದಲ್ಲಿ ಲೈನೋ ಯಂತ್ರದಲ್ಲಿ ಕಂಪೋಸ್ ಮಾಡಬಹುದಿತ್ತು. ಇವರೆಲ್ಲರೂ ಅಂದವಾದ ಮುದ್ರಣಕ್ಕೆ ಶ್ರಮಿಸುತ್ತಿದ್ದರಾದರೂ ಹಳೆಯ ಮುದ್ರಣ ತಂತ್ರಜ್ಞಾನದಿಂದಾಗಿ ಆಗ ‘ಪ್ರವಾ’ ಅಂದ-ಚೆಂದದ ಮುದ್ರಣದಲ್ಲಿ ಹಿಂದೆಯೇ ಇತ್ತು.

ಎಪ್ಪತ್ತರ ದಶಕದಲ್ಲಿ ಹೊಸ ಮುದ್ರಣ ತಂತ್ರಜ್ಞಾನದೊಂದಿಗೆ ಮೊದಲ ಪೀಳಿಗೆಯ ಆಫ್‍ಸೆಟ್ ಮುದ್ರಣ ಯಂತ್ರವೂ ಬಂದು ‘ಪ್ರವಾ’ ಮುದ್ರಣ ‘ವಾಹ್’ ಎನ್ನುವಂತಾಯಿತು.

ಆಗ, ಅಂದರೆ ಅರವತ್ತರ ದಶಕದ ಕೊನೆಯಲ್ಲಿ ಎಂಟು ಪುಟಗಳ ಸಾಪ್ತಾಹಿಕ ಪುರವಣಿ ಕೊಡಲಾಗುತ್ತಿತ್ತು. ಸಾಪ್ತಾಹಿಕ ಪುರವಣಿಯ ಆಕರ್ಷಣೆಯಿಂದಾಗಿ ಭಾನುವಾರಗಳಂದು ‘ಪ್ರವಾ’ ಪ್ರಸಾರ ಸಂಖ್ಯೆ ಮಿಕ್ಕ ದಿನಗಳಿಗಿಂತ 15-20 ಸಾವಿರಗಳಷ್ಟು ಜಾಸ್ತಿ ಇರುತ್ತಿತ್ತು (ಒಂದು ಘಟ್ಟದಲ್ಲಿ ಅದು ನಲವತ್ತು ಸಾವಿರಕ್ಕೇರಿತ್ತೆಂದು ವೈಕುಂಠರಾಜು ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ).

ದೀಪಾವಳಿ ವಿಶೇಷ ಸಂಚಿಕೆ ತರುವುದೂ ‘ಸಾಪು’ ವಿಭಾಗದ ಕೆಲಸವೇ ಆಗಿತ್ತು. ವಿಶೇಷ ಸಂಚಿಕೆಗೆ ಮೂರುನಾಲ್ಕು ತಿಂಗಳ ಪೂರ್ವಭಾವಿ ಸಿದ್ಧತೆ ಬೇಕಾಗುತ್ತಿತ್ತು. ಜೊತೆಗೆ ಕಂಪೋಸಿಂಗ್ ವಿಭಾಗಕ್ಕೆ ಹೋಗಿ ಗಂಟೆಗಟ್ಟಳೆ ನಿಂತು ಪುಟಗಳನ್ನು ಮಾಡುವ ಶ್ರಮದ ಕೆಲಸವೂ ಇರುತ್ತಿತ್ತು.

ಸಹಜವಾಗಿಯೇ ಈ ಅವಧಿಯಲಿ ‘ಸಾಪು’ ವಿಭಾಗಕ್ಕೆ ಹೆಚ್ಚುವರಿ ಮಾನವ ಸಂಪನ್ಮೂಲದ ಅಗತ್ಯ ಬೀಳುತ್ತಿತ್ತು. ಆಗೊಮ್ಮೆ ಈಗೊಮ್ಮೆ ಸಂಪಾದಕರಿಂದ ಬರುತ್ತಿದ್ದ ಸಲಹೆ, ಸೂಚನೆಗಳು ಹೊರತಾಗಿ ಲೇಖನಗಳ-ಕಥೆಗಳ ಆಯ್ಕೆ, ಪ್ರಚಲಿತ ವಿಷಯಗಳ ಬಗ್ಗೆ ಯಾರಿಂದ ಬರೆಸುವುದು, ಯಾರಿಂದ ಪುಸ್ತಕ ವಿಮರ್ಶೆ ಮಾಡಿಸುವುದು ಇತ್ಯಾದಿಗಳಲ್ಲಿ ‘ಸಾಪು’ ಮುಖ್ಯ ಉಪ ಸಂಪಾದಕರಿಗೆ ಸ್ವಾತಂತ್ರ್ಯವಿತ್ತು.

ದೀಪಾವಳಿ ವಿಶೇಷ ಸಂಚಿಕೆ ಬಗ್ಗೆ ಮಾತ್ರ ಸಂಪಾದಕರೊಂದಿಗೆ ಒಂದೋ ಎರಡೋ ಸಭೆಗಳು ನಡೆಯುತ್ತಿದ್ದವು. ಈ ಸಭೆಯಲ್ಲಿ ವೈಎನ್‍ಕೆ ಮತ್ತು ಸುದ್ದಿ ಸಂಪಾದಕರು ಇರುತ್ತಿದ್ದರು. ಈ ಸಭೆಯಲ್ಲಿ ಅ ವರ್ಷದ ವಿಶೇಷ ಸಂಚಿಕೆಯ ‘ಥೀಮ್’ ಏನಿರಬೇಕು? ಯಾರಿಂದೆಲ್ಲ ಕಥೆ, ಕವನ, ಲೇಖನಗಳನ್ನು ಬರೆಸಬಹುದು ಇತ್ಯಾದಿಗಳು ಚರ್ಚೆಯಾಗಿ ಒಂದು ಸ್ಥೂಲ ನೀಲನಕ್ಷೆ ಸಿದ್ಧವಾಗುತ್ತಿತ್ತು.

ಬಾಕಿಯಂತೆ ಚಿತ್ರಗಳು, ವಿನ್ಯಾಸ, ಲೇಖನಗಳಲ್ಲಿ ಮಾರ್ಪಾಟು, ಕಥಾ ಸ್ಪರ್ಧೆ, ಮಕ್ಕಳ ವರ್ಣಚಿತ್ರ ಸ್ಪರ್ಧೆಗಳಿಗೆ ತೀರ್ಪುಗಾರರರ ಆಯ್ಕೆ ಇತ್ಯಾದಿಗಳಲ್ಲಿ ‘ಸಾಪು’ ವಿಭಾಗದವರಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ಇವೆಲ್ಲವೂ ವೈಕುಂಠರಾಜು ಮತ್ತು ಸದಾಶಿವ ಇಬ್ಬರಿಗೆ ಮೀರಿದ ಸೃಜನಶೀಲ ಹೊಣೆಗಾರಿಕೆಯಾಗಿತ್ತು. ಆದರೆ ಇಬ್ಬರೇ ಸಾಕೆಂದು ಸಂಪಾದಕರು ನಿರ್ಧರಿಸಿದ್ದರು.

ನನಗೆ ಸುದ್ದಿ ಪತ್ರಿಕೋದ್ಯಮಕ್ಕಿಂತ ನಿಯತ ಕಾಲಿಕ ಪತ್ರಿಕೋದ್ಯಮದಲ್ಲಿ (ಮ್ಯಾಗಸೀನ್ ಜರ್ನಲಿಸಂ) ಹೆಚ್ಚು ಆಸಕ್ತಿ ಹುಟ್ಟಿತು. ಇದರಲ್ಲಿ ನನ್ನ ಸೃಜನಶೀಲ ಪ್ರತಿಭೆಯ ವಿಕಾಸಕ್ಕೆ ಹೆಚ್ಚಿನ ಅವಕಾಶಗಳು ದೊರೆಯಬಹುದೆಂಬ ನಿರೀಕ್ಷೆ. ಕಥೆ-ಕಾದಂಬರಿ ರಚನೆಗೆ ಸಹಾಯವಾಗುತ್ತದೆ ಎಂಬ ಭ್ರಮೆಯಿಂದ ಪತ್ರಿಕಾ ವೃತ್ತಿಯನ್ನು ಆರಿಸಿಕೊಂಡಿದ್ದ ನನಗೆ ಬಲು ಬೇಗ ಭ್ರಮನಿರಸನವಾಗಿತ್ತು.

ಆದರೆ ಈ ವೃತ್ತಿಯಿಂದ ನನ್ನ ಬರವಣಿಗೆ, ಭಾಷೆ, ಸಾಹಿತ್ಯಕ/ಸಾಂಸ್ಕೃತಿಕ ಅಭಿರುಚಿ ಸುಧಾರಿಸಿತ್ತು. ಕಥೆ, ಕಾದಂಬರಿ ರಚನೆ ನಿಂತೇ ಹೋಯಿತು. ನನ್ನ ಸೃಜನಶೀಲ ಪ್ರತಿಭೆ ಸಾಮರ್ಥ್ಯಗಳಿಗೆ ‘ಸಾಪು’ ಅಥವಾ ‘ಸುಧಾ’ಗಳಲ್ಲಿ ಹೆಚ್ಚು ಅವಕಾಶಗಳು ಲಭ್ಯವಾದೀತು ಎಂದು ‘ಪ್ರವಾ’ ಸೇರಿದ ಆರೆಂಟು ತಿಂಗಳಲ್ಲೇ ಇದಕ್ಕೆ ಪ್ರಯತ್ನಿಸಿದೆ.

ಆದರೆ ‘ಸಾಪು’ನಲ್ಲಿ ಇಬ್ಬರಿದ್ದಾರಲ್ಲ, ಸಮಯ ಬಿದ್ದಾಗ ಅವರಿಗೆ ಸಹಾಯಕನಾಗು, ಬರಿ ಎಂದು ಸಂಪಾದಕರು ಉಪದೇಶಿಸಿದರು. “ಐ ನೋ ಯು ಆರ್ ಕಟೌಟ್ ಫಾರ್ ಮ್ಯಗಸೀನ್” ಎಂದ ಎಂ ಬಿ ಸಿಂಗ್ ಅವರು ‘ಸುಧಾ’ಕ್ಕೆ ಕರೆದುಕೊಳ್ಳಲಿಲ್ಲ, ಲೇಖನ, ಫೀಚರ್‍ ಗಳನ್ನು ಬರೆಯಲು ಅವಕಾಶ ಕಲ್ಪಿಸಿದರು.

ಬಿಡುವಿದ್ದಾಗಲೆಲ್ಲ ವೈಕುಂಠರಾಜು, ಸದಾಶಿವ ಹೇಳಿದ ‘ಸಾಪು’ ಕೆಲಸಗಳನ್ನು ಮಾಡುತ್ತಿದ್ದೆ. ಆ ವೇಳೆಗಾಗಲೆ ‘ಸಾಕ್ಷಿ’ ‘ಸಂಕ್ರಮಣ’ಗಳಲ್ಲಿ ನನ್ನ ವಿಮರ್ಶಾ ಲೇಖನಗಳು ಪ್ರಕಟವಾಗುತ್ತಿದ್ದವು. ಇದನ್ನು ಗಮನಿಸಿದ್ದ ಹಾಗೂ ಕಲಾಮಂದಿರದ ಚಿತ್ರಕಲಾವಿದರು ನಾಟಕ ತಂಡದಲ್ಲಿ ಐದಾರು ವರ್ಷಗಳ ಕಾಲ ಅಭಿನಯ ಇತ್ಯಾದಿಗಳಲ್ಲಿ ತೊಡಗಿಕೊಂಡಿದ್ದ ನನ್ನ ರಂಗಭೂಮಿ ಹಿನ್ನೆಲೆ ಅರಿತಿದ್ದ ವೈ ಎನ್ ಕೆ ನನ್ನ ಕೈಯ್ಯಲ್ಲಿ ಪುಸ್ತಕ ವಿಮರ್ಶೆ, ನಾಟಕ ವಿಮರ್ಶೆ ಮಾಡಿಸಬಹುದೆಂದು ಸಂಪಾದಕರಿಗೆ ಸೂಚಿಸಿದ್ದರು.

ಸಂಪಾದಕರ ಆದೇಶದಂತೆ ವೈಕುಂಠರಾಜು ನನ್ನ ಕೈಯ್ಯಲ್ಲಿ ಪುಸ್ತಕ ವಿಮರ್ಶೆ, ನಾಟಕ ವಿಮರ್ಶೆ ಬರೆಸಲು ಶುರು ಮಾಡಿದರು. ದೀಪಾವಳಿ ವಿಶೇಷ ಸಂಚಿಕೆ ಕೆಲಸದಲ್ಲಿ ನೆರವಾಗಲು ಮೂರು ತಿಂಗಳ ಕಾಲ ‘ಸಾಪು’ನಲ್ಲಿ ಕೆಲಸ ಮಾಡುವ ಅವಕಾಶ 1968ರಲ್ಲಿ ಸಿಕ್ಕಿತು. ಮುಂದೆ 1984ರಲ್ಲಿ ನಾನು ‘ಸಾಪು’ ಸಂಪಾದಕನಾಗುವವರೆಗೆ ಪ್ರತಿ ದೀಪಾವಳಿ ಸಂಚಿಕೆಯಲ್ಲೂ ನನ್ನ ಪಾತ್ರವಿತ್ತು.

‘ಸಾಪು’ ಸಂಪಾದಕನಾದ ನಂತರ ದೀಪಾವಳಿ ಸಂಚಿಕೆಯ ಪೂರ್ತಿ ಹೊಣೆ ನನ್ನದಾಯಿತು. ನಿವೃತ್ತನಾಗುವವರೆಗೆ ವಿಶೇಷ ಸಂಚಿಕೆ ನೀಲನಕ್ಷೆ ತಯಾರಿಯಿಂದ ಹಿಡಿದು ಅಚ್ಚಾಗುವವರೆಗೆ ಪ್ರತಿ ಹಂತದಲ್ಲೂ ನಾನು ವಿಶೇಷ ಸಂಚಿಕೆಯ ಕೆಲಸದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದು ನನ್ನ ಮುವತ್ಮೂರು ವರ್ಷಗಳ ಪ್ರಜಾವಾಣಿ ಜೀವನದಲ್ಲಿ ಒಂದು ಹೆಗ್ಗುರುತು.

ಸುದ್ದಿ ವಿಭಾಗದಲ್ಲಿ ದಿನಪತ್ರಿಕೆ ಕೆಲಸಕಾರ್ಯಗಳ ಜೊತೆಗೆ ‘ಸಾಪು’ ಮತ್ತು ದೀಪಾವಳಿ ವಿಶೇಷ ಸಂಚಿಕಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ಮ್ಯಾಗಸೀನ್ ಜರ್ನಲಿಸಮ್ ನಲ್ಲಿ ಹೆಚ್ಚಿನ ಅರಿವು, ಅನುಭವಗಳಿಸುವುದು ಸಾಧ್ಯವಾಯಿತು. ಈ ಅರ್ಹತೆಯಿಂದಾಗಿ ವೈಕುಂಠರಾಜು ಅಥವಾ ಸದಾಶಿವ ರಜೆ (ಪಿಎಲ್) ಮೇಲೆ ಹೋದಾಗ ತಿಂಗಳು/ಹದಿನೈದು ದಿನಗಳ ಕಾಲ ಅವರ ಕೆಲಸ ನೋಡಿಕೊಳ್ಳುವ ಜವಾಬ್ದಾರಿಯನ್ನು ಸುದ್ದಿ ಸಂಪಾದಕರು ನನಗೇ ವಹಿಸುತ್ತಿದ್ದರು.

ಒಮ್ಮೆ ವೈಕುಂಠರಾಜು, ಸದಾಶಿವ ಇಬ್ಬರೂ ಏಕಕಾಲದಲ್ಲಿ ರಜೆ ಮೇಲೆ ಹೋದಾಗ ಸುದ್ದಿ ಸಂಪಾದಕರು ‘ಸಾಪು’ ಹೊಣೆಯನ್ನು ನನಗೆ ವಹಿಸಿದರು. ಆ ವಾರದ ಪುರವಣಿಯ ಪೂರ್ವಸಿದ್ಧತೆ ಏನೂ ಆಗಿರಲಿಲ್ಲ. ಎಂಟು ಪುಟಗಳಿಗೂ ಲೇಖನ/ಕಥೆ/ಪುಸ್ತಕ ವಿಮರ್ಶೆ/ಚಿತ್ರಗಳು/ಫೋಟೋಗಳು ಇತ್ಯಾದಿಗಳನ್ನು ಹೊಂದಿಸಬೇಕಾಗಿತ್ತು.

ಮೊದಲ ಪುಟಕ್ಕೆ ಲೇಖನ ತಲಾಶ್ ಮಾಡುವುದರಿಂದಲೇ ನನ್ನ ಕಸರತ್ತು ಶುರುವಾಯಿತು. ಲೇಖನಗಳನ್ನು ಆಯ್ಕೆ ಮಾಡುವ ಪೂರ್ಣ ಸ್ವಾತಂತ್ರ್ಯ ನಮಗಿತ್ತು. ಆಯ್ಕೆ ಮಾಡಿದ ಲೇಖನದ ಗ್ಯಾಲೀ ಪ್ರೂಫನ್ನು ಸುದ್ದಿ ಸಂಪಾದಕರ ಅವಗಾಹನೆಗೆ ಕಳುಹಿಸಿದರೆ ಸಾಕಿತ್ತು.

ಆಗ ಮುಂಬಯಿಯಲ್ಲಿ ಪ್ರಜಾವಾಣಿ ಬಾತ್ಮೀದಾರರಾಗಿದ್ದ ಸಂತೋಷ ಕುಮಾರ್ ಗುಲ್ವಾಡಿಯವರು `ಪ್ಲೇ ಬಾಯ್’ ಮ್ಯಾಗಸೀನ್ ಬಗ್ಗೆ ಒಂದು ಫೋಟೊ ಫೀಚರ್ ಕಳುಹಿಸಿದ್ದರು. ಕನ್ನಡಿಗರು ತಿಳಿಯಬೇಕಾದಂಥ ಮಾಹಿತಿ ಅದರಲ್ಲಿತ್ತು.

ನೋಡಬೇಕಾದಂಥ ದೃಶ್ಯಗಳೂ ಇದ್ದವು. ರಸಿಕರೆದೆಯನ್ನು ಢವಗುಟ್ಟಿಸುವಂಥ ರೂಪದರ್ಶಿಯರ ಮೋಹಕ ಭಂಗಿಯ ನಗ್ನ/ಅರೆನಗ್ನ ಚಿತ್ರಗಳು, ಭರ್ಜರಿ ಚಿತ್ರಗಳು. ಅದನ್ನು ಮೊದಲ ಪುಟಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದೆ. ಲೇಖನದ ಗ್ಯಾಲೀ ಪ್ರೂಫನ್ನು ಸುದ್ದಿ ಸಂಪಾದಕರ ಮೇಜಿಗೆ ಕಳುಹಿಸಿ ಮುಂದುವರಿದೆ.

“ಆಹಾ! ಇಂದೆನೆಗೆ ಆಹಾರ ಸಿಕ್ಕಿತು” ಎಂಬ ಉತ್ಸಾಹದಲ್ಲಿ ಚಿತ್ರಗಳನ್ನು ಬ್ಲೋಅಪ್ ಮಾಡಿ ಬ್ಲಾಕ್ ಮಾಡಿಸಿ ಪುರವಣಿಯ ಮೊದಲ ಪುಟದಲ್ಲಿ ಸುಂದರವಾಗಿ ವಿನ್ಯಾಸಗೊಳಿಸಿದೆ, ಪ್ರಿಂಟ್ ಆದ ಮೇಲೆ ನೋಡಿ ಹಿಗ್ಗಿದೆ.

ಭಾನುವಾರ ಕಳೆಯಿತು. ಸೋಮವಾರ ಆಫೀಸಿಗೆ ಹೋಗುತ್ತಿದ್ದಂತೆಯೇ ಖಾದ್ರಿಯವರಿಂದ ಬುಲಾವ್ ಬಂತು. ಎದುರಿಗೆ ನಿಂತಂತೇ, “ಗುರುಸ್ವಾಮಿಯವರು (ಗೌರ್ನಿಂಗ್ ಡೈರೆಕ್ಟರ್) ನಿಮ್ಮನ್ನ ಕರೀತಿದಾರೆ, ಹೋಗಿ ನೋಡಿ” ಎಂದರು ಖಾದ್ರಿಯವರು.

ನಾನು ಆಡಳಿತ ವಿಭಾಗದಲ್ಲಿದ್ದ ಶ್ರೀ ಗುರುಸ್ವಾಮಿಯವರ ಚೇಂಬರಿಗೆ ಧಾವಿಸಿ ಅವರೆದುರು ಕೈಕಟ್ಟಿ ನಿಂತೆ. ಶ್ರೀ ಗುರುಸ್ವಾಮಿಯವರು ನನ್ನನ್ನು ನಖಶಿಖಾಂತ ನೋಡಿ, ಹಿಂದಿನ ದಿನದ ‘ಸಾಪು’ ಕೈಗೆತ್ತಿಕೊಂಡು ನನ್ನ ಮುಖಕ್ಕೆ ಹಿಡಿದು, “ನೀನೇನಾ ಇದನ್ನ ಮಾಡಿದ್ದು?” ಎಂದು ಕೇಳಿದರು.

“ಹೌದು ಸರ್”
“ಇಂಥ ಫೋಟೋಗಳನ್ನು ಹಾಕಬಹುದೆ?” ಎಂದು ಮೆಲುದನಿಯಲ್ಲೇ ಕೇಳಿದರು.
“ಹೌದು ಸರ್, ಹಾಕಬಹುದು”
“ಹಾಕಬಹುದೆ? ಪ್ರಜಾವಾಣಿ ಓದುಗರು ಇದನ್ನ ಇಷ್ಟಪಡ್ತಾರ?”
“ಸರ್, ಇಷ್ಟ ಪಡ್ತಾರೆ”
“ಇಷ್ಟ ಪಡ್ತಾರೆ ಅಂತ ನಿಂಗೆ ಹೇಗೆ ಗೊತ್ತು? ನಂಗೆ ಓದುಗರು ಫೋನ್ ಮಾಡಿ ಹೇಳ್ತಿದಾರೆ ಇಂಥಾದ್ದನ್ನ ಹಾಕಬೇಡಿ, ನಮಗೆ ಇಷ್ಟ ಆಗಲ್ಲ ಅಂತ”
(ಗುರುಸ್ವಾಮಿಯವರ ಆಪ್ತ ವಲಯದ ಒಬ್ಬಿಬ್ಬರು, ಶೇರುದಾರರು, ಹೀಗೆ ಕೆಲವರು ಫೋನ್ ಮಾಡಿ ಹೀಗೆ ಹೇಳಿದ್ದರೆಂದು ನನಗೆ ಆನಂತರ ತಿಳಿಯಿತು)
ನಾನು ನಿರುತ್ತರನಾಗಿ ನಿಂತಿದ್ದೆ.
“ಇಂಥಾದ್ದನ್ನೆಲ್ಲ ಹಾಕಬಾರದು. ನಮ್ಮ ಓದುಗರ ರುಚಿ ನಿಂಗೆ ಗೊತ್ತಿಲ್ಲ. ಚಿತ್ರಗಳೆನೋ ನೋಡಲು ಪರಮಾಯಿಷಿಯಾಗಿವೆ. ನಾವು ನೋಡಿ ಖುಷಿ ಪಡಬಹುದಷ್ಟೆ” ಎಂದು ಉಪದೇಶಿಸಿದ ಗುರುಸ್ವಾಮಿಯವರು, ತಿರಸ್ಕಾರವೋ ಭರ್ತ್ಸನೆಯೋ ಆಗಬಹುದಾದ ದನಿಯಲ್ಲಿ “ನೀನಿನ್ನು ಹೋಗಬಹುದು” ಎಂದರು.

ನನ್ನ ಜಾಗಕ್ಕೆ ಬಂದು ಕುಳಿತವನೇ “ಹೋಗಬಹುದು” ಎಂದರೆ “ಮನೆಗೆ ಹೋಗು” ಎಂದಿರಬಹುದೇ ಎಂದು ದಿನವೆಲ್ಲ ತೊಳಲಾಡಿದೆ. ಸಂಜೆ ಖಾದ್ರಿಯವರ ಎದುರು ನಿಂತು “ನಾಳೆಯಿಂದ ನನ್ನ ಗತಿ ಏನು?” ಎಂದು ಕೇಳಿದೆ.

ಬೆಳಗ್ಗೆಯೇ ಈ ಬಗ್ಗೆ ಶ್ರೀ ಗುರುಸ್ವಾಮಿಯವರು ಟಿಎಸ್ಸಾರ್ ಅವರಿಗೆ ಫೋನ್ ಮಾಡಿ ಕೇಳಿದಾಗ “ಅದರಲ್ಲಿ ಆಶ್ಲೀಲವಾದ್ದು ಏನೂ ಇಲ್ಲ” ಎಂದು ಟಿಎಸ್ಸಾರ್ ಸಮಜಾಯಿಷಿ ನೀಡಿ ನನ್ನ ಪಾರುಮಾಡಿ ಪ್ರಕರಣ ಮುಗಿಸಿದ್ದರಂತೆ.

ಇದನ್ನು ತಿಳಿಸಿದ ಖಾದ್ರಿಯವರು ಓದುಗರ ಇಷ್ಟ-ಅನಿಷ್ಟ, ಶುಚಿ-ರುಚಿ-ಅಭಿರುಚಿಗಳ ಬಗ್ಗೆ, ಇದನ್ನು ಬೆಳೆಸುವುದರಲ್ಲಿ ಪತ್ರಿಕೆಗಳ ಜವಾಬ್ದಾರಿ, ವೃತ್ತಿ ಧರ್ಮ, ಕರ್ತವ್ಯಗಳ ಬಗ್ಗೆ ಒಂದು ಸಣ್ಣ ಉಪನ್ಯಾಸ ಕೊಟ್ಟರು. ಪತ್ರಿಕೆ-ಓದುಗರು-ಲೇಖಕರು, ಇವರದೊಂದು ಸುವರ್ಣ ಸಂಯೋಗ. ಪತ್ರಿಕೆ ಇಲ್ಲದೆ ಓದುಗರು, ಲೇಖಕರು ಬೆಳೆಯುವುದಿಲ್ಲ.

ಇವರಿಬ್ಬರೂ ಇಲ್ಲದೆ ಪತ್ರಿಕೆ ಬೆಳೆಯುವುದಿಲ್ಲ. ಇವರಿಬ್ಬರನ್ನೂ ಪತ್ರಿಕೆ ಬೆಳೆಸಬೇಕು. ಹೊಸ ಅಭಿರುಚಿ, ಹೊಸ ವಿಷಯ, ಹೊಸ ರೀತಿಯ ಬರವಣಿಗೆ ಇತ್ಯಾದಿ ಹೊಸಹೊಸ ಪ್ರಯೋಗಗಳಿಂದ ಓದುಗರನ್ನು, ಲೇಖಕರನ್ನು ಬೆಳೆಸುತ್ತಾ ತಾನೂ ಬೆಳೆಯಬೇಕು. ಈ ಸುವರ್ಣ ಸಂಯೋಗ ಪರಸ್ಪರ ಪೋಷಿಸಿಕೊಂಡು ಬೆಳೆಯುತ್ತಿರುವುದಕ್ಕೆ ‘ಪ್ರವಾ’ಗಿಂತ ಮಿಗಿಲಾದ ಇನ್ನೊಂದು ನಿದರ್ಶನ ಬೇಕಿಲ್ಲ.

ಓದುಗರ ಮನಸ್ಸನ್ನು ವಿಕಾರಗೊಳಿಸದ ರೀತಿಯಲ್ಲಿ ಹೊಸ ರುಚಿಯನ್ನು, ಅಭಿರುಚಿಯನ್ನು ಬೆಳೆಸುವುದು ಹೇಗೆ, ಹೊಸ ವಿಚಾರ, ವಿಷಯಗಳನ್ನು, ಸಂಶೋಧನೆಗಳನ್ನು, ಮನೋವಿಜ್ಞಾನ, ರತಿ ವಿಜ್ಞಾನ, ಅಂಗ ರಚನಾ ವಿಜ್ಞಾನಗಳಂಥ ಸೂಕ್ಷ್ಮ ಸಂವೇದಿ ವಿಚಾರಗಳನ್ನು ಜನರ ಭಾವನೆಗಳಿಗೆ, ನಂಬಿಕೆಗಳಿಗೆ ತ್ರಾಸು ಉಂಟು ಮಾಡದ ರೀತಿಯಲ್ಲಿ, ಸಾರ್ವಜನಿಕ ಬದುಕಿನ ನೈತಿಕತೆಗೆ ಭಂಗವಾಗದಂತೆ ತಿಳಿಸುವುದು ಹೇಗೆ ಎಂದು ನಾನು ಯೋಚಿಸುವಂತಾಯಿತು ಮೇಲಿನ ಪ್ರಸಂಗದಿಂದ.

ಇಂಗ್ಲಿಷಿನಲ್ಲಿ ‘ಪ್ಲೇಯಿಂಗ್ ಟು ದಿ ಗ್ಯಾಲರಿ’ ಎನ್ನುವ ಮಾತೊಂದಿದೆ. ಈ ಗ್ಯಾಲರಿ ನಯ, ನಾಜೂಕು ಮಡಿ, ಮೈಲಿಗೆಗಳನ್ನು ಅಲಕ್ಷಿಸುವ, ಮುಕ್ತ ಮನರಂಜನೆ ಬಯಸುವ ಪಾಮರರ ರೂಪಕ. ಈ ಪಾಮರ ಪ್ರೇಕ್ಷಕರ ಕಾಮನೆಗಳನ್ನು ತಣಿಸುವ ಕಲೆಯ ಪ್ರಯತ್ನಗಳನ್ನು ಹೀಗೆ ಕರೆಯಲಾಗುತ್ತಿತ್ತು.

ಕನ್ನಡ ರಂಗಭೂಮಿಯ ಪಾರಿಭಾಷಿಕದಲ್ಲಿ ಹೇಳುವುದಾದರೆ, ನಾಲ್ಕಾಣೆ ಟಿಕೆಟು ಪಡೆದ ಪ್ರೇಕ್ಷಕರ ಮನೋಕಾಮನೆಗಳನ್ನು ಈಡೇರಿಸಲೇಬೇಕಾದ ಕಂಪನಿ ನಾಟಕಗಳ ಅನಿವಾರ್ಯತೆ. ದ್ರೌಪದಿ ಸೀರೆ ಸೆಳೆಯುವ ದೃಶ್ಯಕ್ಕೆ ‘ಒನ್ಸ್ ಮೋರ್’ ಬಂದಲ್ಲಿ ಆ ಬೇಡಿಕೆಯನ್ನು ಈಡೇರಿಸಿ ಗಲ್ಲಾಪೆಟ್ಟಿಗೆ ತುಂಬಿಕೊಳ್ಳುವ ಆತುರ.

ನಾನೂ ಕೂಡ ಓದುಗರ ಮನೋಕಾಮನೆಯನ್ನು ತಣಿಸುವ ಮೂಲಕ ನನ್ನ ಹೆಗ್ಗಳಿಕೆ ಛಾಪು ಮೂಡಿಸಲು ಪ್ರಯತ್ನಿಸಿದನೇ ಎಂಬ ಅಪರಾಧ ಪ್ರಜ್ಞೆಯೂ ನನ್ನನ್ನು ಕಾಡದೇ ಇರಲಿಲ್ಲ. ಓದುಗರಲ್ಲಿ ಬಹುತೇಕ ಮಂದಿ ‘ಪ್ಲೇ ಬಾಯ್’ ಲೇಖನ ಮೆಚ್ಚಿಕೊಂಡು ಪತ್ರ ಬರೆದಿದ್ದರು. ಒಬ್ಬಿಬ್ಬರು ಮಡಿವಂತರು ಮೂಗು ಮುರಿದಿದ್ದರು.

ಮುಂದೆ ಸುಮಾರು ಇಪ್ಪತ್ತು ವರ್ಷಗಳ ನಂತರ ನಾನು ‘ಸುಧಾ’ದಲ್ಲಿ ಸಹಾಯಕ ಸಂಪಾದಕನಾಗಿದ್ದಾಗ ನೇರವಾಗಿ ಓದುಗರ ಅಸಮಾಧಾನವನ್ನು ಎದುರಿಸಬೇಕಾಯಿತು. 1992-1993 ಇರಬೇಕು. ಆಗಿನ ‘ಸುಧಾ’ದ ಒಂದು ಸಂಚಿಕೆಯಲ್ಲಿ ಬಾಂಬೆ ಡೈಯಿಂಗ್ ಟವಲ್ ಜಾಹೀರಾತಿನಲ್ಲಿ ರೂಪದರ್ಶಿಯ ಅರೆನಗ್ನ ಚಿತ್ರ ಪ್ರಕಟವಾಗಿತ್ತು.

ಟವಲ್ ಸಮ್ಮೋಹಕ ಚೆಲುವಿನ ರೂಪದರ್ಶಿಯ ‘ಮಾನ’ವನ್ನು ಮಾತ್ರ ಮುಚ್ಚಿ, ಅವಳ ಅರೆನಗ್ನ ದೇಹದ ಮೇಲೆ ಕಂಗೊಳಿಸುತ್ತಿತ್ತು. ಈ ಅರೆನಗ್ನ ಜಾಹೀರಾತು ಕೆಲವರು ಓದುಗರಿಗೆ ರುಚಿಸಿರಲಿಲ್ಲ. 15-20 ಮಂದಿ ನನಗೆ ಫೋನ್ ಮಾಡಿ, “ಮನೆ ಮಂದಿಯೆಲ್ಲಾ ಓದುವ ನಮ್ಮ ‘ಸುಧಾ’ದಲ್ಲಿ ಇಂಥ ಜಾಹೀರಾತನ್ನು ನಿರೀಕ್ಷಿಸಿರಲಿಲ್ಲ. ಈ ವಾರದ ‘ಸುಧಾ’ವನ್ನು ಎಲ್ಲರ ಕೈಗೆ ಸಿಗುವಂತೆ ಟೀಪಾಯ್ ಮೇಲೆ ಇಡುವ ಹಾಗಿಲ್ಲ.

ಇಂಥ ಜಾಹೀರಾತು ಹಾಕಬೇಡಿ. ‘ಸುಧಾ’ ಬಹಿಷ್ಕರಿಸಬೇಕಾಗುತ್ತೆ ಎಂದೆಲ್ಲ ತರಾಟೆಗೆ ತೆಗೆದುಕೊಂಡರು. ಸುಮಾರು ಜನ (100-120) ಈ ಜಾಹೀರಾತು ವಿರೋಧ ವ್ಯಕ್ತಪಡಿಸಿ ಪತ್ರಗಳನ್ನೂ ಬರೆದಿದ್ದರು.

ನನ್ನ ಗಮನಕ್ಕೆ ಬರದೇ ಆ ಜಾಹೀರಾತು ಸಂಚಿಕೆಯೊಳಗೆ ನುಸುಳಿತ್ತು. ಸಂಪಾದಕರ ಗಮನಕ್ಕೆ ತರದೆ ಆ ಜಾಹೀರಾತು ಹಾಕಬಾರದಿತ್ತು ಎಂದು ನಾನು ಜಾಹೀರಾತು ಮ್ಯಾನೇಜರಿಗೆ ಕಟುವಾಗಿಯೇ ಹೇಳಿದೆ.

ಸಂಪಾದಕರ ಗಮನಕ್ಕೆ ತರದೆ ಇಂಥ ಜಾಹೀರಾತು ಹಾಕಬಾರದು ಎನ್ನುವ ದಿನಗಳು ಕನ್ನಡ ಪತ್ರಿಕೋದ್ಯಮದಲ್ಲಿ ಆಗಷ್ಟೆ ಮುಗಿದಿದ್ದವು. ಜಾಹೀರಾತು ಮ್ಯಾನೇಜರನೇ ಸಂಪಾದಕನಿಗಿಂತ ದೊಡ್ಡವನು (ದುಡ್ಡು ತರುವವನೇ ದೊಡ್ಡಪ್ಪ) ಎನ್ನುವ ಕಾರ್ಪೋರೆಟ್ ಆಲೋಚನಾ ಪ್ರವೃತ್ತಿಯ ಆರಂಭದ ದಿನಗಳು ಅವು.

ಆಗ ‘ಸುಧಾ’ದಲ್ಲಿ ಒಂದು ಪೂರ್ಣಪುಟ ಬಣ್ಣದ ಜಾಹೀರಾತಿಗೆ ಸುಮಾರು 18 ಸಾವಿರ ರೂಪಾಯಿ ದರ ಇತ್ತು. ಬಾಂಬೆ ಡೈಯಿಂಗ್ ಜಾಹೀರಾತು ಸತತ ನಾಲ್ಕು ವಾರಗಳ ಪ್ರಕಟಣೆಗೆ ಬುಕ್ ಆಗಿತ್ತು. ಜಾಹೀರಾತು ಮ್ಯಾನೇಜರಿಗೆ ಇದಾಗದು ಎಂದ ನಾನು ಹೇಳಿದೆ.

ಜಾಹೀರಾತು ಮ್ಯಾನೇಜರಿಗೆ ‘ಟಾರ್ಗೆಟ್’ ಮುಟ್ಟುವ ಧಾವಂತ. ಅವರು ನೇರವಾಗಿ ಎಕ್ಸಿಕ್ಯುಟಿವ್ ನಿರ್ದೇಶಕರ ಬಳಿ ಹೋಗಿ ನನ್ನ ನಿರಾಕರಣೆಯನ್ನು ತಿಳಿಸಿ ಆಗಬಹುದಾದ ನಷ್ಟವನ್ನು ವಿವರಿಸಿದರು. ಪತ್ರಿಕೆಯ ವರಮಾನಕ್ಕೆ ಧಕ್ಕೆಯಾಗಬಾರದು. ಜಾಹಿರಾತನ್ನು ನಿಲ್ಲಿಸಲಾಗದು, ತೆಗೆದುಕೊಳ್ಳಲೇಬೇಕು ಎಂದು ಎಕ್ಸಿಕ್ಯುಟಿವ್ ಡೈರೆಕ್ಟರ್ ಆದೇಶಿಸಿದರು.

ಆಗ ವಿಷಯ ಸಂಪಾದಕರೂ ಆಗಿದ್ದ ಮ್ಯಾನೇಜಿಂಗ್ ಡೈರೆಕ್ಟರ್ ಅವರ ಬಳಿ ಹೋಯಿತು. ಅವರು ನನ್ನ ಕರೆಸಿದರು. ಸಂಪಾದಕರಾಗಿ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದರು. ಶ್ರೀ ಗುರುಸ್ವಾಮಿಯವರು ಓದುಗರ ಇಷ್ಟದ ಬಗ್ಗೆ ಕಲಿಸಿದ ಪಾಠ ನನ್ನಲ್ಲಿ ಧೈರ್ಯ, ವಿಶ್ವಾಸಗಳನ್ನು ತುಂಬಿತ್ತು.

“ಓದುಗರು ಇಷ್ಟ ಪಡದ ಈ ಕೀಳು ಅಭಿರುಚಿಯ ಜಾಹೀರಾತನ್ನು ಪ್ರಕಟಿಸಬಾರದು. ಪತ್ರಿಕೆಗಳು ಓದುಗರ ಮೂಲ ಕಾಮನೆಗಳನ್ನು ಕೆರಳಿಸುವಂಥಾದ್ದನ್ನು ಪ್ರಕಟಿಸಬಾರದು ಎಂಬ ವೃತ್ತಿಯ ನೀತಿ-ನಿಯಮಗಳನ್ನು ನಾವು ಪಾಲಿಸ ಬೇಕಾಗುತ್ತದೆ. ಓದುಗರ ಭಾವನೆಗಳನ್ನು ನಾವು ಗೌರವಿಸ ಬೇಕಾಗುತ್ತದೆ. ನಮ್ಮ ಗಮನಕ್ಕೆ ತರದೇ ಈ ಜಾಹೀರಾತನ್ನು ಮ್ಯಾನೇಜರ್ ನೇರವಾಗಿ ಪ್ರಕಟಣೆಗೆ ಕಳುಹಿಸಿದ್ದು ತಪ್ಪು. ಪತ್ರಿಕೆಯಲ್ಲಿ ಜಾಹೀರಾತೂ ಸೇರಿದಂತೆ ಪ್ರಕಟವಾದುದೆಲ್ಲದಕ್ಕೂ ಸಂಪಾದಕ ಹೊಣೆಗಾರನಾಗುತ್ತಾನೆ, ಉತ್ತರದಾಯಿಯಾಗುತ್ತಾನೆ. ನೂರಾರು ಮಂದಿ ಓದುಗರು ಈ ಜಾಹೀರಾತಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ” ಎಂದು ನಾನು ತಿಳಿಸಿದೆ.

ಮ್ಯಾನೇಜಿಂಗ್ ಡೈರೆಕ್ಟರ್ ಅವರಿಗೆ ನನ್ನ ಮಾತು ಒಪ್ಪಿಗೆಯಾಯಿತು. ಆ ಜಾಹೀರಾತನ್ನು ನಿಲ್ಲಿಸಿದರು. ಹಾಗೂ ಇನ್ನು ಮುಂದೆ ಇಂಥ ಜಾಹೀರಾತುಗಳನ್ನು ಸಂಪಾದಕರ ಗಮನಕ್ಕೆ ತರದೆ ಪ್ರಕಟಣೆಗೆ ಕೊಡಬಾರದೆಂದು ಜಾಹೀರಾತು ಮ್ಯಾನೇಜರಿಗೆ ತಾಕೀತು ಮಾಡಿದರು.

ಆ ವರ್ಷ ನಮ್ಮ ಬೋನಸ್ಸೇನೂ ಕಡಿಮೆಯಾಗಲಿಲ್ಲ.

October 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ವಾಸುದೇವ ಶರ್ಮಾ

    ಓದುಗರು, ಪತ್ರಿಕೆಯ ಸಂಪಾದಕರು, ಪತ್ರಿಕೆಯೆಂಬ ಉದ್ದಿಮೆಯ ಮಾಲೀಕರ ನಡುವಿನ ಸೂಕ್ಷ್ಮ ಸಂವೇದನೆ ಸೊಗಸಾಗಿ ಒಡಮೂಡಿದೆ. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಭ್ಯಾಸ ಮಾಡುವಾಗ ಪ್ರೊ ಸೈಯದ್‌ ಇಕ್ಬಾಲ್‌ ಖಾದ್ರಿಯವರು ಒಮ್ಮೆ ಪಾಠದಲ್ಲಿ ಪತ್ರಿಕೆಗಳ ಆಡಳಿತ ನಿರ್ವಹಣೆಯನ್ನೇ ಜಾಹೀರಾತು ವರಮಾನ ಹೇಗೆ ನಿರ್ಧರಿಸುತ್ತದೆ ಎಂದು ಉದಾಹರಣೆಗಳ ಮೂಲಕ ಹೇಳಿದ್ದರು! ಇಂದಿನ ದಿನಗಳಲ್ಲಿ ವರಮಾನವೇ ಮುಖ್ಯವಾಗಿ ಎಷ್ಟೊಂದು ಪತ್ರಿಕೆಗಳು ಮತ್ತು ಚಾನೆಲ್‌ಗಳು ಎಲ್ಲ ರೀತಿಯ ಸಂವೇದನೆಗಳು, ಸೂಕ್ಷ್ಮತೆಯನ್ನು ಮೀರಿ ಓಡುತ್ತಿವೆ.

    ಪ್ರತಿಕ್ರಿಯೆ
  2. ಸಿ. ಎನ್. ರಾಮಚಂದ್ರನ್

    ಪ್ರಿಯ ಜಿ. ಎನ್. ಆರ್. ಅವರಿಗೆ:
    ಯುವ ಪತ್ರಕರ್ತನೊಬ್ಬನು/ಳು ’ಆಕ್ರಾಂತ’ ಸ್ಥಿತಿಯಿಂದ ’ವಿಕ್ರಾಂತ’ ಸ್ಥಿತಿಗೆ ತಲಪುವ ಪ್ರಕ್ರಿಯೆಯನ್ನು, ಆ ಪ್ರಕ್ರಿಯೆಯಲ್ಲಿ ಆಗಾಗ ಬರುವ ಸಮಸ್ಯೆಗಳನ್ನು, ಅವುಗಳನ್ನು ಪರಿಹರಿಸಿಕೊಳ್ಳುವಾಗ ಬೆಳೆಸಿಕೊಳ್ಳಬೇಕಾದ ಪ್ರತಿರೋಧವನ್ನು ಹಾಗೂ ಆತ್ಮವಿಶ್ವಾಸವನ್ನು, ಖಚಿತ, ಮೂರ್ತ ವಿವರಗಳೊಡನೆ ನಿಮ್ಮ ಅಂಕಣ ದಾಖಲಿಸುತ್ತಿದೆ. ತುಂಬಾ ಸ್ವಾರಸ್ಯಕರ ಹಾಗೂ ಉಪಯುಕ್ತ ಬರಹ. ಇಷ್ಟೇ ವಿವರವಾಗಿ ಮುಂದಿನ ಅಂಕಣಗಳೂ ಬರಲಿ. ಅಭಿನಂದನೆಗಳು. ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: